Wednesday, October 4, 2017

"ಧಾತು" 


ಅನಾದಿಕಾಲದಿಂದ ಈಗಿನ ಮುಂದುವರೆದ ದಿನಗಳ ತನಕ ತನ್ನ ಮಡಿವಂತಿಕೆಯನ್ನು ಉಳಿಸಿಕೊಂಡು ಬಂದಿರುವ ಕೆಲವೇ ಕೆಲವು ಅಂಶಗಳಲ್ಲಿ ಈ ಲೈಂಗಿಕತೆಯೂ ಒಂದು. ಎಲ್ಲ ಕ್ಷೇತ್ರದಲ್ಲಿ ಬದಲಾವಣೆಯ ಪೂರವೇ ಹರಿದು ಬಂದು ಅದನ್ನು ಬದಲಾದ ಕಾಲಮಾನದೊಳಗೆ ಒಪ್ಪಿಕೊಂಡಿರುವಾಗ್ಯೂ, ತನ್ನ ಅಗೋಚರ ಕಬಂಧಬಾಹುವಿನ ಕಪಿಮುಷ್ಟಿಯಿಂದ ಹೊರಬರದೆ, ತನ್ನನ್ನು ತಾನು ನಿಯಂತ್ರಿಸಿಕೊಂಡು ಅಸಂಕುಚಿತ ಸಂಕೋಲೆಯಲ್ಲಿ ಹೆಣೆಯಲ್ಪಟ್ಟಿರುವ ನಮ್ಮನಿಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾದ ಲೈಂಗಿಕತೆಯೆಂದರೆ ಸಂಪ್ರದಾಯವಾದಿಗಳಲ್ಲದೇ ವಿದ್ಯಾವ...ಂತರೂ ಸೇರಿ ಮೂಗುಮುರಿಯುವುದೇ ಹೆಚ್ಚು. ಇಂತಹ ಸಂಕುಚಿತ ಮಡಿವಂತಿಕೆಯ ಲೈಂಗಿಕತೆ ಕುರಿತು ಕನ್ನಡದಲ್ಲಿ ಹಲವು ಬರವಣಿಗೆ ಮೂಡಿ ಬಂದಿವೆ. ಆ ಸಾಲಿನಲ್ಲಿ ನಿಲ್ಲುವ ಇನ್ನೊಂಡು ಕೃತಿಯೇ ನಾ. ಮೊಗಸಾಲೆಯವರು ಬರೆದಿರುವ "ಧಾತು".

ಇದರಲ್ಲಿ ದಾಂಪತ್ಯ ಹಲವು ಮಜಲುಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವುದರ ಜೊತೆಗೆ, ಲೈಂಗಿಕ ವಿಜ್ಞಾನವನ್ನೂ ಅತ್ಯಂತ ತಾರ್ಕಿಕ ನೆಲೆಯಲ್ಲಿ ನೋಡಲಾಗಿದೆ. ಗಂಡಹೆಂಡತಿಯ ನಡುವೆ ನಡೆಯುವ ಈ ನೈಸರ್ಗಿಕ ಕ್ರಿಯೆಯ ಆಳಅಂತರಾಳದ ಪರಿಚಯವಿಲ್ಲದ ವಿದ್ಯಾವಂತರೂ, ಸಮಾಜದಲ್ಲಿ ಉನ್ನತ ಮಟ್ಟದಲ್ಲಿರುವ ಗಣ್ಯರೂ ಮೊದಲುಗೊಂಡು ಓದಲುಬರೆಯಲು ಬಾರದ ನಿರಕ್ಷರರು ಹೇಗೆ ಒಂದು ಅತ್ಯಂತ ಮಧುರ ಭಾವನೆಯುಂಟಾಗಬಹುದಾದ ಇದನ್ನು ತನ್ನ ಅಜ್ಞಾನದಿಂದ ಹೊಸಕಿ ಒನ್ ಸೈಡ್ ದಬ್ಬಾಳಿಕೆ ನಡೆಸುತ್ತಿರುವರು ಎಂಬುದರ ಚಿತ್ರಣ ಇಲ್ಲಿದೆ. ದಾಂಪತ್ಯದ ಹೊರಗಿನ ಸಂಬಂಧವನ್ನು ಎಳೆಎಳೆಯಾಗಿ ಬಿಡಿಸಿಡುವ ಜೊತೆಗೆ ಅದು ಮಾನ್ಯವೋ ಅಮಾನ್ಯವೋ ಎನ್ನುವುದು ವ್ಯಕ್ತಿಗತವಾಗಿ ಅಲ್ಲದೆ ಸಾಮಾಜಿಕವಾಗಿ ಉಂಟುಮಾಡುವ ಪರಿಣಾಮವನ್ನು ಸರಳವಾದ ಪಾತ್ರಗಳಿಂದ ವಿವರವಾಗಿ ಹೇಳಲ್ಪಟ್ಟಿದೆ.

ಇಷ್ಟಕ್ಕೂ ಒಂದಾಗುವುದು ಎಂದರೇನು? ಅದು ದೈಹಿಕವಾಗಿ ದೇಹಗಳೆರಡರ ಕೂಡುವಿಕೆಯೋ ಅಥವಾ ಮಾನಸಿಕವಾಗಿ ಮನಸುಗಳ ಸಂಮ್ಮಿಶ್ರಣವೋ? ಇನ್ನೊಂದು ಅರ್ಥದಲ್ಲಿ ದೇಹಮನುಸಗಳೆರಡರ ಆವಿರ್ಭವಿಸುವಿಕೆಯೋ? ಮೇಲುನೋಟಕ್ಕೆ ಇದರಲ್ಲಿ ಅಂಥದ್ದೇನಿಲ್ಲ ಎಲ್ಲಾ ಒಂದೇ ಎನಿಸಿದರೂ ನಮ್ಮ ಭಾವಕೋಶಕ್ಕೆ ತಾಗಿಯೂ ತಾಗದಂತೆ, ಅರಿವಿಗೆ ಬಂದರೂ ಬಾರದಂತೆ, ಸುಪ್ತಿಗೆ ಎಟುಕಿದರೂ ಬುದ್ದಿಗೆ ತಿಳಿಯದಂತಹ ಸೂಕ್ಷ್ಮಸಂವೇದನೆಯುಳ್ಳ ತೆಳು ಅಂತರ ಒಂದಕ್ಕೊಂದಿದೆ. ಈ ಅಂತರವನ್ನು ನಮ್ಮಲ್ಲಿ ಅದೆಷ್ಟು ಜನ ಅರ್ಥಮಾಡಿಕೊಂಡಿದ್ಡಾರೆ? ಹೆಣ್ಣಿರುವುದು ಬರೀ ಭೋಗಿಸಲಿಕ್ಕೆ ಮಾತ್ರ, ತನಗೆ ಬೇಕಾದಾಗ ಸುಖ ನೀಡಲಿಕ್ಕೆ ಮಾತ್ರ ಎಂದು ತಿಳಿದವರ ನಡುವೆ ಪ್ರಕೃತಿನಿರ್ಮಿತ ಕ್ರಿಯೆಯನ್ನು ಹೆಣ್ಣಿನ ಬಹಿರಂಗದೊಡನೆಯಲ್ಲದೆ ಆಕೆಯ ಅಂತರಂಗಕ್ಕೂ ಒಪ್ಪುವ ಹಾಗೆ ನಡೆಯುವ ಮನಸ್ಸು ಯಾರಿಗಿದೆ? ತಾನು ಮಾತ್ರ ಉತ್ತುಂಗಕ್ಕೇರಿ ಹೆಣ್ಣನ್ನು ನಿರ್ಲಕ್ಷಿಸುವ, ಹೆಸರಿಗೆ ಗಂಡನಂತಿದ್ದರೂ ವಿಟಪುರುಷನಂತಾಡುವ ಗಂಡನಿಗೆ ತನ್ನ ಹೆಂಡತಿಗೂ ಆಕೆಯ ಅಂತರಂಗದ ಭಾವನೆಗಳಿಗೂ ಜೊತೆಗೆ ದೈಹಿಕ ಸ್ಥಿತಿಗತಿಯನ್ನರಿತು ಮುನ್ನಡೆಯುವ ವಿವೇಚನೆ ಇರಬೇಡವೇ? ಪಾತಿವ್ರತ್ಯ ಎನ್ನುವುದು ಕೇವಲ ಹೆಂಡತಿಯಾದವಳು ಮಾತ್ರ ಅನುಸರಿಸಬೇಕಾದುದೇ? ಗಂಡ ಇದರಿಂದ ಹೊರತೇ? ಎನ್ನುವುದನ್ನು ವಸ್ತುಸ್ಥಿತಿಯಲ್ಲಿ ಚರ್ಚಿಸಲಾಗಿದೆ.

ಕಥಾನಾಯಕ ತನ್ನ ಹೆಂಡತಿ ತೀರಿಕೊಂಡ ಬಳಿಕ ಎಲ್ಲರ ಸಲಹೆಯಂತೆ ಇನ್ನೊಂದು ಮದುವೆಯಾಗ ಬಯಸುತ್ತಾನೆ. ಆತನಿಗೆ ಬೇಕಿರುವುದು ದೈಹಿಕ ಸಾಂಗತ್ಯಕ್ಕಿಂತ ಮನೋಸಾಂಗತ್ಯ. ಮನಃಶಾಸ್ತ್ರಜ್ಞ ವೈದ್ಯನೂ ಆದ ಗೆಳೆಯನನ್ನೂ ಭೇಟಿಯಾಗಿ ಈ ಕುರಿತು ಚರ್ಚಿಸುತ್ತಾನೆ. ತನ್ನ ಮಗಸೊಸೆ ಮತ್ತು ಸಮಾಜ ಏನೆಂದುಕೊಳ್ಳುವುದೋ ಎನ್ನುವ ಭಯದಿಂದ ಸುಪ್ತವಾಗಿದ್ದ ತನ್ನೊಡಲ ಬಯಕೆಯನ್ನು ಜೀವಂತವಾಗಿರಿಸಿ, ವೈದ್ಯಮಿತ್ರ ಹೇಳಿದ ಸಣ್ಣಸಣ್ಣ, ಆದರೆ, ಕಣ್ಣುತೆರೆಸುವ ಜೀವನಪಾಠ ನಾಯಕನ ಕಣ್ಣು ತೆರೆಸಲು ಆತನಿಗೆ ಜ್ಞಾನೋದಯವಾಗಿ ತಾನು ತನ್ನ ಹೆಂಡತಿಯ ಜೊತೆ ಅದೆಷ್ಟೇ ಚೆನ್ನಾಗಿ ಸಂಸಾರ ನಡೆಸುತ್ತಿದ್ದರೂ ತಾನು ನಡೆಸಿದ ದಾಂಪತ್ಯದ ಏಕಪ್ರವೃತ್ತಿ ಧೋರಣೆಯನ್ನು ನೆನೆದು ಪಶ್ಚಾತ್ತಾಪ ಪಡುತ್ತಾನೆ. ಇದಕ್ಕೂ ಮುಂಚೆ ತಾನು ಖ್ಯಾತ ಸಾಹಿತಿಯಾಗಿದ್ದು ಇತ್ತೀಚೆಗೆ ಬರೆದ ಕಥೆಯೊಂದು ಪತ್ರಿಕೆಯ ಸಾಪ್ತಾಹಿಕದಲ್ಲಿ ಪ್ರಕಟವಾಗಲು ಅದನ್ನೋದಿದ ಮಹಿಳೆಯೊಬ್ಬಳು ನಾಯಕನ ಅಭಿಮಾನಿಯಾಗುತ್ತಾಳೆ. ಪರಿಚಯ ಮುಂದುವರೆದು ಆಪ್ತರಾಗುವ ಇಬ್ಬರೂ ಮಿಂಚಂಚೆ ಮುಕಾಂತರ ತಮ್ಮತಮ್ಮ ಅನಿಸಿಕೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಾರೆ. ಆಕೆ ತನ್ನ ಹಿಂದಿನ ಪೂರ್ವಾಪರವನ್ನು ನಾಯಕನಿಗೆ ತಿಳಿಸುತ್ತಾಳೆ. ಈ ತನಕ ಮದುವೆಯಾಗಿ ಗಂಡಸಿನ ಸಂಪರ್ಕಕ್ಕೆ ಬಂದಿರದ ಆಕೆಯೂ, ಜೀವನದಲ್ಲಿ ಎಲ್ಲವನ್ನೂ ಅನುಭವಿಸಿ ಇಳಿಗಾಲದ ಸಂಜೆಯಕಡೆ ಮುಖಮಾಡಿ ನಿಂತಿರುವ ನಾಯಕನೂ ತಮ್ಮ ತಮ್ಮ ನಡುವೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತೆ ಅವಿನಾಭವ ಸೆಳೆತವಾಗಲು ಒಂದಿನ ಇಬ್ಬರೂ ನಿಶ್ಚಯಿಸಿ ಒಂದೆಡೆ ಭೇಟಿಯಾಗುವುದೆಂದು ಮಾತಾಗುತ್ತದೆ. ಇಬ್ಬರೂ ಅಲ್ಲಿಗೆ ಬರುತ್ತಾರೆ, ಭೇಟಿಯಾಗುತ್ತಾರೆ. ಅದು ದೈಹಿಕವಾಗಿಯೋ ಇಲ್ಲ ಮಾನಸಿಕವಾಗಿಯೋ? ನಾಯಕನಿಗೆ ತನ್ನ ಬಯಕೆ ಈ ಮುಂಚೆ ಏನಿತ್ತು ಮತ್ತು ಈ ಭೇಟಿಯಲ್ಲಿ ಆಕೆಯನ್ನು ನೋಡಿದ ಮೇಲೆ ಏನಾಯ್ತು? ನಾಯಕಿ ತಾನು ನಾಯಕನ ಮನಸ್ಸನ್ನು ಅರಿತಳೇ? ಆತನನ್ನು ಪಡೆಯುವುದರಲ್ಲಿ ಸಫಲಳಾದಳೇ? ಆಕೆಯ ನಿಲುವೇನಿತ್ತು? ನಾಯಕನನ್ನು ಅದು ಬದಲಿಸಿತೇ? 

ನಾಯಕನ ವಯಸ್ಸು ಎಪ್ಪತ್ತೊಂದು, ನಾಯಕಿಯದು ಅರವತ್ತು. ಈ ಹಿನ್ನೆಲೆಯನ್ನಿಟ್ಟುಕೊಂಡು ಸಮಾಜದ ಹತ್ತುಹಲವು ಹುಳುಕುಗಳ ಕಟ್ಟಿಕೊಡುವುದರ ಜೊತೆ ದಾಂಪತ್ಯದ ಮಹತ್ವಪೂರ್ಣ ಮಾಹಿತಿಯನ್ನು ,ಹೆಣ್ಣಿನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ಮತ್ತದರ ಒಳಸುಳಿಯಿಂದ ಪಾರಾಗುವ ದಾರಿಯನ್ನು, ಅತ್ಯಂತ ಸಹಜವಾಗಿ ವಿವರಿಸಿದ್ದಾರೆ. ಇಲ್ಲಿ ಮೌಕಿಕ ಹಿನ್ನೆಲೆಯುಳ್ಳ ದಾಂಪತ್ಯ ಆದರ್ಶಗಳು ಹೇಗೆ ಹೆಣ್ಣಿಗೆ ಅನ್ವಯಿಸುವುದೋ ಹಾಗೇ ಗಂಡಿಗೂ ಅನ್ವಯಿಸುವುದೆನ್ನುವುದನ್ನು ಮನಗಾಣುವ ಹಾಗೆ ಸಂಧರ್ಭವನ್ನು, ಪಾತ್ರಗಳನ್ನು, ಕಥೆಯನ್ನು ನಿರೂಪಿಸಲಾಗಿದೆ. "ಧಾತು" ಎನ್ನುವುದು ಇಬ್ಬರಲ್ಲೂ ಇರಬೇಕಾದ ಸಮಾನತೆಯನ್ನು, ಸ್ಥಿರತೆಯನ್ನು, ದೇಹವೇ ಮನಾಸಾಗಿರುವುದನ್ನು, ಮನಸೇ ದೇಹವಾಗಿರುವುದನ್ನು, "ಅಹಂ ಬ್ರಹ್ಮಾಸ್ಮಿ" ಎನ್ನುವುದು ಇಬ್ಬರಲ್ಲಿನ ಸಹಭಾಗಿತ್ವವನ್ನು ಮೇಳೈಸುವ ಕೊಂಡಿಯಾಗಿದೆ ಎಂದು ಪರಿಭಾವಿಸಬೇಕು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್


"ಹೊನ್ನ ಕಣಜ"

ನೀವು ಹಿಂದಿನ ಶತಮಾನದ ಮಧ್ಯಂತರ ಕಾಲದಿಂದ ಇಂದಿನವರೆಗೂ ಮೂಡಿಬಂದ ಅಪರೂಪದ ಸಣ್ಣಸಣ್ಣ ಕಥೆಯನ್ನು ಓದಬೇಕಿದ್ದರೆ ಅದಕ್ಕಾಗಿ ಎಲ್ಲಿಯೂ ತಡಕಾಡಬೇಕಿಲ್ಲ, "ಪ್ರಜಾವಾಣಿ" ಹೊರತಂದಿರುವ "ಹೊನ್ನ ಕಣಜ" ಎನ್ನುವ ಬೃಹತ್ಕಥಾ ಮಾಲಿಕೆಯನ್ನು ಓದಿದರಾಯಿತು. ಹೆಸರಿಗೆ ತಕ್ಕಂತೆ ಇದೊಂದು ಹೊನ್ನ..ಹೊನ್ನಿಗಿಂತಲೂ ಮಿಗಿಲಾದ ಕಣಜವೇ ಸರಿ. ಅರ್ಧಶತಮಾನಕ್ಕೂ ಮಿಕ್ಕಿದ ಹಿಂದಿನ ಕಥೆಗಳನ್ನು ಓದುತ್ತಾ ಸವಿಯುಣುವುದರ ಜೊತೆಜೊತೆಗೆ ಆಗಿನ ಕಾಲಮಾನದ ಕಥೆಗರರ ಮನಸ್ಥಿತಿ, ಕಥಾವಸ್ತು, ಸುತ್ತಮುತ್ತಲ ಪರಿಸರ, ನಿರೂಪಣಾ ಶೈಲಿ..ಈ ಎಲ್ಲದರ ಸ್ಥೂಲ ಪರಿಚಯ ದೊರಕುತ್ತದೆ.

"ಪ್ರಜಾವಾಣಿ" ತನ್ನ ಆರಂಭಿಕ ದಿನಗಳಿಂದಲೂ ಪ್ರತಿವರ್ಷ ...ಸಣ್ಣ ಕಥಾ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬರುವುದರ ಜೊತೆಗೆ ಹಲವು ಪ್ರತಿಭಾ ಬರಹಗಾರರನ್ನು ಪ್ರೋತ್ಸಾಹಿಸುತ್ತಲೂ, ಯುವ ಬರಹಗಾರರ, ಅದರಲ್ಲೂ ಮುಖ್ಯವಾಗಿ ಎಲೆಮರೆ ಕಾಯಿಯಂತಿದ್ದು ತನ್ನ ಬರವಣಿಗೆಗೆ ವೇದಿಕೆ ಸಿಗದವರ ಪಾಲಿನ ಆಶಾಕಿರಣದಂತೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟು ಅವರನ್ನು ಸಾಹಿತ್ಯಿಕ ವಲಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತಲೂ, ಹೊಸಹೊಸ ಸಾಹಿತ್ಯದ ರಚನೆಯಲ್ಲಿ ತನ್ನ ಪಾಲಿನ ಅನೂಹ್ಯ ಕಾಣಿಕೆಯನ್ನು ಸಲ್ಲಿಸುತ್ತಲೂ ಬಂದಿರುವುದು ಶ್ಲಾಘನೀಯ ಮತ್ತು ಗಮನಾರ್ಹ. ವಿಶೇಷವೆಂದರೆ ಮೊದಮೊದಲು ಸ್ಪರ್ಧಿಗಳಾಗಿ ತಮ್ಮ ಕಥೆಯನ್ನು ಬರೆದವರು ಕಾಲಾನಂತರ ಅದೇ ಕಥಾತೀರ್ಪುಗಾರರಾಗಿದ್ದು. ಅಷ್ಟರ ಮಟ್ಟಿಗೆ "ಪ್ರಜಾವಾಣಿ" ತನ್ನ ಕೊಡುಗೆಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದೆ.

ಇದರಲ್ಲಿ ಒಟ್ಟೂ ಐವತ್ತು ಸಣ್ಣ ಕಥೆಗಳಿವೆ. ಐವತ್ತು ಕಥೆಗಾರರು ತಮ್ಮ ಕಲ್ಪನೆಯನ್ನಿಲ್ಲಿ ಸುಂದರ ಕಲಾಕೃತಿಗಳನ್ನಾಗಿಸಿದ್ದಾರೆ. ಈ ಕಥೆಗಳ ಹರವು ದೊಡ್ಡದು, ಎಲ್ಲವನ್ನು ಒಂದೇ ಪುಸ್ತಕದಲ್ಲಿ ಮುದ್ರಿಸದೆ ಮೂರು ಸಂಪುಟಗಳಲ್ಲಿ ತರುವ ಯೋಜನೆ "ಪ್ರಜಾವಾಣಿ"ಯದು. ಅದರ ಮೊದಲ ಸಂಪುಟವೇ ಈ "ಹೊನ್ನ ಕಣಜ". ಸಣ್ಣ ಕಥೆಗಳನ್ನು ಇಷ್ಟಪಡುವರು ಓದಲೇ ಬೇಕಾದ ಅಪರೂಪದ ಸಂಗ್ರಹಯೋಗ್ಯ ಕೃತಿ. ಇಲ್ಲಿರುವ ಒಂದೊಂದು ಕಥೆಗಳು ಸುಧೀರ್ಘ ಯೋಚನೆಯನ್ನು, ಭಾವಪರವಶತೆಯನ್ನು ಓದುಗನ ಮನದಲ್ಲಿ ಮೂಡಿಸುವುದಂತೂ ನಿಜ. ಹೆಚ್ಚಿಗೆ ಇದರ ಬಗ್ಗೆ ಹೇಳುವುದಕ್ಕಿಂತ ಓದಿ ನೋಡಿದಾಗ ಹೆಚ್ಚುಹೊಳಪು ನಮ್ಮಲ್ಲಿ ತರಿಸುತ್ತದೆ ಎನ್ನುವುದಷ್ಟೇ ಸತ್ಯ. ಮೇಲಾಗಿ ಐವತ್ತು ಕಥೆಗಳನ್ನು ಒಂದೇ ಚೌಕಟ್ಟಿನಲ್ಲಿ ಹಿಡಿದು ಕೂಡಿಸುವುದು ಸಾಧ್ಯವಾಗದ ಮಾತು. ಸುಮ್ಮನೇ ಓದುತ್ತಾ ಕಥೆಗಳಲ್ಲಿ ನಾವು ಲೀನವಾಗಬೇಕಷ್ಟೇ.

ಈ ಕೆಳಕಾಣಿಸಿದ ಮಹಾನುಭಾವರ ಅಪೂರ್ವ ಕಥೆಯನ್ನು ಓದಬಹುದು.

1. ಬಿ ಸಿ ರಾಮಚಂದ್ರ ಶರ್ಮ
2. ಸಮೇತನಹಳ್ಳಿ ರಾಮರಾಯ
3. ಪೂರ್ಣಚಂದ್ರ ತೇಜಸ್ವಿ
4. ಭಾರತೀಸುತ
5. ಸುಮತೀಂದ್ರ ನಾಡಿಗ
6. ವೀರಭದ್ರ
7. ಜಿ ಕೆ ಗೋವಿಂದರಾವ್
8. ಸುಧಾಕರ
9. ಪಿ ವಿ ನಂಜರಾಜ ಅರಸು
10. ಬೆಸಗರಗಳ್ಳಿ ರಾಮಣ್ಣ
11. ಪಿ ಲಂಕೇಶ್
12. ಟಿ ಎನ್ ಕೃಷ್ಣರಾಜು
13. ಶ್ರೀಕೃಷ್ಣ ಆಲನಹಳ್ಳಿ
14. ಗೋಪಾಲಕೃಷ್ಣ ಮಧ್ಯಸ್ಥ
15. ಶ್ರೀಕಾಂತ
16.ಕಮಲಾ ಸುಬ್ರಮಣ್ಯಂ
17. ಎಸ್ ದಿವಾಕರ್
18. ವೈದೇಹಿ
19. ಜಯಂತ ಕಾಯ್ಕಿಣಿ
20. ಕಾಳೇಗೌಡ ನಾಗವಾರ
21. ಬೋಳುವಾರು ಮಹಮದ್ ಕುಂಯಿ
22. ಕೆ ಟಿ ಗಟ್ಟಿ
23. ವಿವೇಕ ಶಾನಭಾಗ
24. ದೇಶಪಾಂಡೆ ಸುಬ್ಬರಾಯ
25. ಅಬ್ದುಲ್ ರಶೀದ್
26. ಅಶೋಕ ಹೆಗಡೆ
27. ಎಂ ಎಸ್ ಶ್ರೀರಾಮ್
28. ಮೊಗಳ್ಳಿ ಗಣೇಶ್
29. ಅಮರೇಶ ನುಗಡೋಣಿ
30. ರಾಜೇಂದ್ರ ಚಿನ್ನಿ
31. ಸಿ ಬಸವಲಿಂಗಯ್ಯ
32. ರಾಮಚಂದ್ರದೇವ
33. ಕಲಿಗಣನಾಥ ಗುಡದೂರು
34. ಜಯಶ್ರೀ ದೇಶಪಾಂಡೆ
35. ನಾಗವೇಣಿ ಹೊನ್ನಕಟ್ಟಿ
36. ಡಾ. ನಾ ಮೊಗಸಾಲೆ
37. ಬಿ ಎಲ್ ವೇಣು
38. ಮಂಜುನಾಥ್ ಲತಾ
39. ಅಲಕ ತೀರ್ಥಹಳ್ಳಿ
40. ಡಾ. ವಿನಯಾ
41. ಕಸ್ತೂರಿ ಎಸ್ ಬಾಯಿರಿ
42. ನಾಗಮಂಗಲ ಕೃಷ್ಣಮೂರ್ತಿ
43. ಕವಿತಾ ರೈ
44. ಟಿ ಕೆ ದಯಾನಂದ
45. ಅಲಕಾ ಕೆ
46. ಮಹಾಂತೇಶ ನವಲಕಲ್
47. ರಶ್ಮಿ ಕೆ ಎಂ
48. ಕೆ ಎ ಶಾಂತಿ
49. ಪಜ್ಞಾ ಮತ್ತಿಹಳ್ಳಿ
50. ರಾಜು ಹೆಗಡೆ

ನಮಸ್ಕಾರ

ಮೋಹನ್ ಕುಮಾರ್ ಡಿ ಎನ್


https://www.facebook.com/photo.php?fbid=1467976779957169&set=gm.1536931986374253&type=3&theater&ifg=1

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...