ತನ್ನೊಳಗಿರುವ ತನತೋಫೋಬಿಯ..
ಯಾಕೆಂದರೆ ತಾನು ಕಂಡ ಕನಸು ನನ್ನ ಮುದ್ದು ಮಗಳ ಮುಖಾಂತರ ನೆರವೇರಿಸಿಕೊಂಡರಾಯ್ತು ಬಿಡು ಎಂಬುದು ಅಪ್ಪನ ಲೆಕ್ಕಾಚಾರ! ನಾನೇ ಆತನ ಮುದ್ದಿನ ಮಗಳು, ಹೆಸರು ಪೂರ್ವಿಕ. ನಾನು ನಾಲ್ಕನೆ ಈಯತ್ತೆಯಲ್ಲಿ ಓದುತ್ತಿದ್ದೇನೆ. ನಮ್ಮ ಮನೆಯಲ್ಲಿ ಅಜ್ಜ ಅಪ್ಪ ಅಮ್ಮ ಮತ್ತು ಎಲ್ಲರ ಮುದ್ದಿನ ಕೂಸಾದ ನಾನು ಬಹಳ ಸಂತೋಷದಿಂದ ಇದ್ದೀವಿ.
ಸುಂದರ ಮಲೆನಾಡಿನ ಮಡಿಲೊಳಗಿರುವುದೇ ನನ್ನ ಈ - ಬಾಳೇಬೀಡು. ಹೆಸರಿಗೆ ತಕ್ಕಂತೆ ಹಳ್ಳಿಯ ರೈತರೆಲ್ಲ ಹೆಚ್ಚಾಗಿ ಬಾಳೇತೋಟ ಹೊಂದಿರುವುದರಿಂದ ಮತ್ತು ನಮ್ಮ ಹಳ್ಳಿಯಲ್ಲಿ ಸಿಗುವಂಥ ಬಾಳೇಹಣ್ಣು ಪ್ರಸಿಧ್ಧಿಯಾಗಿರುವುದರಿಂದ ಹಳ್ಳಿಗೆ ಬಾಳೇಬೀಡು ಎಂಬ ಹೆರಸು ಬಂದಿತು.
ಎಲ್ಲರಂತೆ ನನ್ನ ತಂದೆ ಕೂಡ ಕೃಷಿಕರು. ಬಾಳೇ ತೋಟ, ಜೊತೆಗೊಂದಿಷ್ಟು ಅಡಿಕೆ ಮರ, ಮನೆಗೆ ಸಾಕು ಬೇಕಾಗುವಷ್ಟು ಬೆಳೆಯುವ ತರಕಾರಿ ಕೈದೋಟ ಇದೆ. ಹಿಂದಿನಿಂದಲೂ ಬಂದ ಸಂಪ್ರದಾಯದಂತೆ, ಮನೆಗೆ ದೊಡ್ಡ ಮಗನಾದ ನನ್ನಪ್ಪನು ತಾತನ ಆಣತಿಯಂತೆ ಡಿಗ್ರಿ ಮುಗಿದಿದ್ದರು ಕೆಲಸಕ್ಕೆ ಹೋಗದಂತೆ ವ್ಯವಸಾಯದಲ್ಲಿ ತೊಡಗಿಸಿಕೊಂಡು ತನ್ನ ತಮ್ಮಂದಿರನ್ನು ಅವರಿಷ್ಟದಂತೆ ಓದಿಸಿ ಕೆಲಸಕ್ಕೆ ಸೇರಿಸಿದ್ದರು. ನನ್ನ ಇಬ್ಬರು ಚಿಕ್ಕಪ್ಪಂದಿರು ಒಳ್ಳೊಳ್ಳೆ ಹುದ್ದೆಗಳಲ್ಲಿದ್ದಾರೆ. ನನ್ನಪ್ಪನೇ ಅವರಂತೆ ಕೆಲಸಕ್ಕೆ ಹೋಗದೆ ಹೀಗೆ ತಾತ ನೆಟ್ಟ ಮರಕ್ಕೆ ಜೋತುಬಿದ್ದಿರುವುದು. ಹೀಗಂತ ಅಪ್ಪನಿಗೂ ಬಹಳಷ್ಟು ಸಲ ಅನಿಸಿದ್ದಿದೆ, ಆದರೆ ಯಾರ ಬಳಿಯೂ ಬಾಯಿ ಬಿಟ್ಟು ಹೇಳುವುದಿಲ್ಲ, ಎಂದಿಗೂ ಬೇಜಾರು ಮಾಡಿಕೊಂಡಿಲ್ಲ.
ಯಾಕೆಂದರೆ ತಾನು ಕಂಡ ಕನಸು ನನ್ನ ಮುದ್ದು ಮಗಳ ಮುಖಾಂತರ ನೆರವೇರಿಸಿಕೊಂಡರಾಯ್ತು ಬಿಡು ಎಂಬುದು ಅಪ್ಪನ ಲೆಕ್ಕಾಚಾರ! ನಾನೇ ಆತನ ಮುದ್ದಿನ ಮಗಳು, ಹೆಸರು ಪೂರ್ವಿಕ. ನಾನು ನಾಲ್ಕನೆ ಈಯತ್ತೆಯಲ್ಲಿ ಓದುತ್ತಿದ್ದೇನೆ. ನಮ್ಮ ಮನೆಯಲ್ಲಿ ಅಜ್ಜ ಅಪ್ಪ ಅಮ್ಮ ಮತ್ತು ಎಲ್ಲರ ಮುದ್ದಿನ ಕೂಸಾದ ನಾನು ಬಹಳ ಸಂತೋಷದಿಂದ ಇದ್ದೀವಿ.
ನನ್ನ ಕೆಲಸವೇನೆಂದರೆ ಅಲ್ಲಲ್ಲ! ಆದ್ಯ ಕರ್ತವ್ಯ ಏನೆಂದರೆ ಅಪ್ಪ ಹೇಳಿದಂತೆ ಒಂದು ದಿನವೂ ತಪ್ಪಿಸದೆ ಶಾಲೆಗೆ ಹೋಗುವುದು, ಅಲ್ಲಿ ಹೇಳಿಕೊಟ್ಟಿದ್ದನ್ನ ಚಾಚೂತಪ್ಪದೆ ಕಲಿತು, ಪರೀಕ್ಷೆಯಲ್ಲಿ ಪಾಸಾಗುವುದು. ಹಾಗೆ ಮುಂದೆ ಓದಿ ದೊಡ್ಡವಳಾಗಿ ಒಂದೊಳ್ಳೆ ಕೆಲಸಕ್ಕೆ ಸೇರಿ ನನ್ನ ಕಾಲ ಮೇಲೆ ನಿಂತ ನಂತರದ ಒಂದೆರಡು ವರ್ಷದಲ್ಲಿ ಮದುವೆ, ಆಮೇಲೆ ಸಂಸಾರ, ಮಕ್ಕಳು.....ಅಪ್ಪನ ಆಸೆ ಒಂದೆರಡಲ್ಲ !! ಎಲ್ಲ ಸರಿ, ಆದರೆ ಶಾಲೆಗೆ ಹೋಗುವುದೇ ತಲೆನೋವು. ಪ್ರತಿ ದಿನ ಹಾಯಿ ದೋಣಿಯಲ್ಲಿ ಕುಳಿತು ನದಿ ದಾಟಿ, ಅಲ್ಲಿಂದ ಮುಕ್ಕಾಲು ಘಂಟೆ ಕಾಡಿನ ಥರ ಆದರೆ ಕಾಡಲ್ಲದ ರಸ್ತೆಯಲ್ಲಿ ಹಾದಿ ಸವೆಸಿದರೆ ಒಕ್ಕೋಡಿಯಲ್ಲಿರುವುದೆ ನಮ್ಮ ಶಾಲೆ.
ಶಾಲೆಗೆ ಹೋಗುವ ಹಾದಿಯಲ್ಲಿ ಸಿಗುವ ಮಾವಿನ ಮರಕ್ಕೆ ಕಲ್ಲು ಹೊಡೆಯೋದು, ಹುಣಸೇಹಣ್ಣು ಉದುರಿಸೋದು, ಒಬ್ಬರಿಗೊಬ್ಬರು ಹೊಡೆಯುತ್ತಾ, ಹಾಡುತ್ತಾ, ನಗಾಡುತ್ತಾ, ಕುಂಟೆ ಬಿಲ್ಲೆ ಆಡುತ್ತಾ, ಅಜ್ಜ ಹೇಳಿದ ಕಥೆ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ ಹೋಗುತ್ತಿದ್ದರೆ ದಾರಿ ಸವೆದದ್ದೇ ಗೊತ್ತಾಗುತ್ತಿರಲಿಲ್ಲ. ಶಾಲೆಗೆ ಖುಷಿ ಖುಷಿಯಾಗಿ ಹೋಗಲು ನಮಗಿದ್ದ ಏಕೈಕ ಕಾರಣವೆಂದರೆ ಇದೇ. ಶಾಲೆ ಮುಗಿಸಿ ಬರುವಾಗಲು ನಮ್ಮ ತುಂಟಾಟ ನಡೆಯದೆ ಇರುತ್ತಿರಲಿಲ್ಲ.
ಸಂಜೆಯಾದರೆ ಅಪ್ಪ ತೋಟದಿಂದ ಬರುತ್ತಿದ್ದರು. ಬರುವಾಗ ವರ್ಕಿ, ಆಮ್ ಚೂರು, ಬಾಯಿ ಬಣ್ಣ , ನಿಂಬೇಹುಳಿ, ಈಚಲಣ್ಣು, ಎಲಚಿ, ನೇರಳೆ, ಗೇರಣ್ಣು, ಮೂಗಣ್ಣು ಮುಂತಾದವು ತರುತ್ತಿದ್ದರು. ಇವತ್ತು ಏನು ತರುವರೋ ಎಂಬ ಕುತೂಹಲವೇ ಅಪ್ಪನ ಬರುವಿಕೆ ಎದುರು ನೋಡುವಂತೆ ಮಾಡುತ್ತಿತ್ತು. ಅಮ್ಮ ಬಯಸಿದರೆ, ಅಪ್ಪ ನಮ್ಮನ್ನು ಪಕ್ಕದೂರಿನಲ್ಲಿ ನಡೆಯುತ್ತಿದ್ದ ಪೆರ್ಡೂರು ಮೇಳಕ್ಕೆ ಕರೆದುಕೊಂಡು ಹೋಗಿ ಜಾವದ ತನಕ ಯಕ್ಷಗಾನ ತೋರಿಸುತ್ತಿದ್ದರು. ನಮ್ಮ ನೆಮ್ಮದಿಗೆ ಕೊರತೆಯೇ ಇರಲಿಲ್ಲ.
ಆದರೆ ಇದ್ದಕ್ಕಿದ್ದಂತೆ ಒಂದು ದಿನ ನಡೆಯಬಾರದ್ದು ನಡೆದು ಹೋಯ್ತು !
ನನ್ನ ಮಲೆನಾಡು ನನ್ನ ಜೀವ. ಬಿಟ್ಟರೆ ಇಲ್ಲಿಯೇ ಪ್ರಾಣ ಬಿಟ್ಟೇನು ಬೇರೆಲ್ಲೂ ಮಣ್ಣಿಗೆ ಮರಳಲು ಇಷ್ಟವಿಲ್ಲ ಎನ್ನುತ್ತಿದ್ದ ಅಪ್ಪ, ಬೆಂಗಳೂರಿನಲ್ಲಿರುವ ಸಂಭಂಧಿಯೊಬ್ಬರ ಮದುವೆಗೆ ಹೋಗಿದ್ದಾಗ ಮದುವೆ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅಲ್ಲಿದ್ದ ಎಲ್ಲರೂ ಗಾಬರಿಯಾಗಿ ಅಪ್ಪನತ್ತ ಬರುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಅಪ್ಪ ಸಾವನ್ನಪ್ಪಿದ್ದರು !!! ಮದುವೆಮನೆ ಸಾವಿನಮನೆಯಾಗಿತ್ತು.
ಇಡೀ ಹಳ್ಳಿಗೆ ಹಳ್ಳಿಯೇ ಬೆಚ್ಚಿಬಿದ್ದಿತ್ತು ಅಪ್ಪನ ಸಾವಿಗೆ . ಶೋಕಸಾಗರದಲ್ಲಿ ಮುಳುಗಿದ ನಮ್ಮನ್ನು ಅವರೆಲ್ಲರೂ ಸಂತೈಸುತ್ತಿದ್ದರು. ಅಮ್ಮ ಅಂತೂ ಸಾವಿನ ಸುದ್ದಿ ಕೇಳಿ ಮೂರ್ಚೆ ಹೋಗಿದ್ದಳು. ಅಜ್ಜನ ನೋವು ಹೇಳತೀರದು. ನನಗೆ ಅಪ್ಪ ಸತ್ತಿದ್ದಾರೆ ಎಂದನಿಸುತ್ತಲೇ ಇಲ್ಲ ; ಪ್ರಶಾಂತವಾಗಿ ವರಾಂಡದಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದಾರೆನಿಸಿತು. ಊರಿಂದ ಬಂದ ಚಿಕ್ಕಪ್ಪಂದಿರು ಮುಂದೆ ನಿಂತು ನಡೆಯಬೇಕಾದ ಕೆಲಸಕಾರ್ಯ ಮುಗಿಸಿದರು. ಎಷ್ಟು ದಿನ ಬಂಧುಗಳು, ಸ್ನೇಹಿತರು ಕೊನೆಗೆ ಚಿಕ್ಕಪ್ಪಂದಿರು ಸಾಂತ್ವಾನ ಹೇಳುತ್ತಾ ಜೊತೆಯಲ್ಲಿರುತ್ತಾರೆ? ಎಲ್ಲರು ಒಂದಲ್ಲ ಒಂದು ದಿನ ಮರಳಿ ಅವರವರ ಗೂಡಿಗೆ, ಕೆಲಸಕ್ಕೆ ಹಿಂದಿರುಗಲೇ ಬೇಕಲ್ಲ? ಎಲ್ಲರು ಹೋದ ನಂತರ ಕೊನೆಗೆ ಚಿಕ್ಕಪ್ಪಂದಿರೂ ಹೊರಡಲು ಅನುವಾದರು. ಹೊರಡುವ ಮುನ್ನಾ ವಿಷಣ್ಣ ಸ್ಥಿತಿಯಲ್ಲಿದ್ದ ಅಮ್ಮನ ಬಳಿ ಬಂದು, " ಅತ್ತಿಗೆ ಹೋದ ಸಲ ಉಗಾದಿ ಹಬ್ಬಕ್ಕೆ ಬಂದಾಗ ಅಣ್ಣ ನಮ್ಮನ್ನು ಕರೆದು ಒಂದು ಪತ್ರ ಕೊಟ್ಟಿದ್ದ. ಏನಿದು ಪತ್ರ ಎಂದರೆ, ಸಮಯ ಬರೋವರೆಗು ಇದನ್ನ ಓದಬೇಡಿ ಮತ್ತು ಯಾರಲ್ಲೂ ಚರ್ಚಿಸಬೇಡಿ ಅಂತ ಹೇಳಿದ್ದ. ಆತ ಹೇಳಿದ್ದ ಸಮಯವಂತೂ ಬರಲಿಲ್ಲ, ಅದಕ್ಕೆ ಈ ಪತ್ರವನ್ನೇನು ಮಾಡಬೇಕೊ ತೋಚುತ್ತಿಲ್ಲ , ನಿಮಗೆ ಕೊಡುತ್ತಿದ್ದೇವೆ " ಎಂದರು. ಪತ್ರ ತೆಗೆದುಕೊಂಡ ಅಮ್ಮ ಓದತೊಡಗಿದಳು. ಅದರಲ್ಲಿ ಹೀಗೆ ಬರೆದಿತ್ತು :
" ನನ್ನ ಪ್ರೀತಿಯ ಮುದ್ದಿನ ಪುಟಾಣಿ ಮಗಳೇ ನೀನು ನೂರು ವರ್ಷ ಸುಖವಾಗಿ ಬಾಳಬೇಕು, ಬಹಳ ನೆಮ್ಮದಿಯಿಂದ ಜೀವನ ನಡೆಸಬೇಕು. ಅದೇ ನನ್ನ ಆಸೆ. ಆದರೆ ನನಗೊಂದು ಖಾಯಿಲೆಯಿದೆ ಮಗಳೇ. ತನತೋಫೋಬಿಯ ಅಂತ. ಅಂದರೆ ತನ್ನ ಪ್ರೀತಿ ಪಾತ್ರರನ್ನು ಬಿಟ್ಟು ಎಲ್ಲಿ ಸಾಯುವೆನೋ ಎಂಬ ಭಯ, ಸಾವಿನ ಬಗ್ಗೆ ಅತೀ ಯೋಚಿಸಿದಾಗ ಉದ್ವೇಗಕ್ಕೊಳಗಾಗಿ ನಾನು ಸಾಯುತ್ತಿದ್ದೀನಿ ಇನ್ನೇನು ಸತ್ತೇ ಎನ್ನುವ ಮನಸ್ಥಿತಿ. ನಿನ್ನನ್ನು ನೋಡಿದಾಗೆಲ್ಲ ನನ್ನ ಖುಷಿ ಇಮ್ಮಡಿಯಾಗುತ್ತಿತ್ತು, ಆಗ ನನ್ನ ಸಾವು ನನ್ನ ಕಣ್ಣೆದುರು ನಿಂತಿರುತ್ತಿತ್ತು. ಯಾರ ಬಳಿಯೂ ಇದನ್ನ ನಾನು ಹೇಳಿಕೊಂಡಿಲ್ಲ, ಹೇಳುತ್ತಲೂ ಇರಲಿಲ್ಲ. ಆದರೆ ಕಾರಣ ತಿಳಿಸದೆ ಸಾಯೋದು ನಂಗಿಷ್ಟವಿಲ್ಲ. ಎದುರು ನಿಂತು ಹೇಳಲಾಗದ್ದಕ್ಕೇ ಈ ಪತ್ರ. ನನ್ನ ಮುದ್ದಿನ ಅರಗಿಣಿ ನನ್ನನ್ನು ಕ್ಷಮಿಸು. ಪ್ರೀತಿಯ ಮಡದಿ ಅಮ್ಮು ನಿನಗಿದು ಅರ್ಥವಾದೀತೆಂದುಕೊಂಡಿದ್ದೇನೆ. ಅಪ್ಪನನ್ನು ಚೆನ್ನಾಗಿ ನೋಡಿಕೊ. ಮುಂದಿನ ಜನ್ಮದಲ್ಲಿ .... ..... ಬೇಡ ಬಿಡು. ಈ ಪತ್ರವನ್ನಿಲ್ಲಿಗೆ ಮುಗಿಸುತ್ತಿದ್ದೇನೆ. ನಾನು ಈ ಭೂಮಿ ಮೇಲೆ ಇಲ್ಲವಾದ ನಂತರವಷ್ಟೇ ಈ ಪತ್ರ ಓದತಕ್ಕದ್ದು "
ಯಾಕಾದರು ಪತ್ರ ಬರೆದಿಟ್ಟು ಹೋದರೊ ಅಪ್ಪ ! ಪತ್ರ ಓದಿ ಮುಗಿಸುತ್ತಿದ್ದಂತೆ ಅಲ್ಲಿದ್ದ ಐದಾರು ಜನ ಸಂಬಂಧಿಕರು ಸೇರಿದಂತೆ ಎಲ್ಲರ ಕಣ್ಣು ನನ್ನ ಮೇಲೇ !! ಇವಳೇ ಇವರಪ್ಪನನ್ನು ಬಲಿ ತೆಗೆದುಕೊಂಡಿದ್ದು ಎಂದು ಹೇಳುವ ಹಾಗಿತ್ತು ಅವರೆಲ್ಲರ ನೋಟ ! ಅಪ್ಪ ಯಾಕಾದರು ಪತ್ರ ಬರೆದಿದ್ದರೋ ? ಅಪ್ಪನ ಸಾವಿಗೆ ನಾನು ಕಾರಣವಾದೆನಾ? ಹಾಗಂತ ನನಗೇ ಅನ್ನಿಸತೊಡಗಿತು.
ಹೌದು, ಹಾಗೆ ಅನ್ನಿಸಲು ಶುರುವಾಗಿ ಇಂದಿಗೆ ಹದಿನೆಂಟು ವರ್ಷಗಳೇ ಕಳೆದಿವೆ ! ಕಾಲಾನಂತರ ಎಲ್ಲರೂ ಇದನ್ನ ಮರೆತರು, ಮೊದಲಿನ ಸಾಮಾನ್ಯ ಸ್ಥಿತಿಗೆ ಮರಳಿದರು. ಆದರೆ ನನ್ನಿಂದ ಮಾತ್ರ ಮರೆಯಲಾಗಿಲಲ್ಲ , ಅಪ್ಪನ ಆಸೆಯಂತೆ ಓದಿ ಕೆಲಸಕ್ಕೆ ಸೇರಿ ಮದುವೆಯಾಗಿ ಮಕ್ಕಳಾಗಿ ಗಂಡ ಮಕ್ಕಳ ಜೊತೆ ನೆಮ್ಮದಿಯಿಂದಿದ್ದರೂ !
ಈಗಲೂ ನನ್ನಪ್ಪ ನನ್ನ ಜೊತೆ ಸದಾಕಾಲ ಇದ್ದಾರೆನಿಸುತ್ತದೆ ಮತ್ತು ಈಗೀಗ ಈ ಭಾವನೆ ತೀವ್ರವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ, ಮೊನ್ನೆ ನನ್ನ ಮಕ್ಕಳು ಅಂಗಳದಲ್ಲಿ ಆಡುತ್ತಿದ್ದರೆ ಎದುರಿಗೆ ಅಪ್ಪ ಪ್ರತ್ಯಕ್ಷವಾಗಿ ಬಂದು ಎದುರು ನಿಂತತಾಯ್ತು ಮತ್ತು ಅಪ್ಪನ ಕಂಡ ನನ್ನ ಕಣ್ಣುಗಳು ಅತೀವ ಸಂತಸದಿಂದ ರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ಅಪ್ಪ ನಿಂತಿದ್ದ ಜಾಗದಲ್ಲಿ ನನ್ನ ಮಕ್ಕಳು ಮರು ಸ್ಥಾಪಿತರಾಗಿ ಆಡುತ್ತಿದ್ದರು , ಅಪ್ಪ ಅಲ್ಲಿಂದ ಮಾಯವಾಗಿದ್ದ ! ನಿಜವೊ ಸುಳ್ಳೊ, ಕನಸೊ ನನಸೊ ? ತರ್ಕ ಬೇಕಿಲ್ಲ. ಆದರೆ ಅಪ್ಪ ನಿಂತಿದ್ದು , ನನ್ನ ನೋಡಿ ನಕ್ಕಿದ್ದು ಮಾತ್ರ ಸುಳ್ಳಲ್ಲ.
ಅಪ್ಪ ನನ್ನನ್ನು ಮೊದಲಿಗಿಂತಲೂ ಹೆಚ್ಚಾಗಿ ಆವರಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ನನ್ನ ಮಕ್ಕಳನ್ನು ಕಂಡರೆ ನನ್ನಪ್ಪನಿಗಾಗುತ್ತಿದ್ದಂತೆ ನನಗೂ ಖುಷಿ ಇಮ್ಮಡಿಯಾಗಿ ಮನಸ್ಸು ಉದ್ವೇಗಕ್ಕೆ ಬೀಳುತ್ತಿದೆ ! ಮತ್ತು ಅದೇನದು ಅಪ್ಪ ಹೇಳಿದ್ದ ಖಾಯಿಲೆ ತನತೋಫೋಬಿಯ ಅಲ್ವಾ ? ಅದೀಗ ನನಗೆ ಸ್ವಲ್ಪ ಸ್ವಲ್ಪವೇ ಅರ್ಥವಾಗತೊಡಗಿದೆ. ಹೆಚ್ಚಾಗಿ ಮಲೆನಾಡ ಮಣ್ಣಿನ ವಾಸನೆ ಮೂಗಿಗೆಡರತೊಡಗಿದೆ.
ನನ್ನ ಕೈ ಹಾಗು ಮನಸ್ಸು ಎಷ್ಟು ಬೇಡವೆಂದುಕೊಂಡರೂ ಹತೋಟಿಗೆ ಬರುತ್ತಿಲ್ಲ ; ಸದಾ ಕಾಲ ಪೆನ್ನು ಮತ್ತು ಬಿಳೀ ಹಾಳೆಗಾಗಿ ಹುಡುಕುತ್ತಿರುತ್ತದೆ - ನನ್ನ ಮಕ್ಕಳಿಗೆ ಪತ್ರ ಬರೆಯಲು...
ಪತ್ರ ಬರೆಯುವೆನಾ ???
.............................. ...................
ಮೋಹನ್ ಕುಮಾರ್ ಡಿ ಎನ್