"ನನ್ನೊಡಲು ಮಾತಿಗಿಳಿದಾಗ.."
ನನ್ನನ್ನು ಮಂದಿ ಬಾ! ಬಾ! ಎಂದು ಕರೆಯುತ್ತಾರೆ. ನಾನು ಹೋಗುತ್ತಿನಿ. ಕೆಲವೊಮ್ಮೆ ಹೋಗದೆಯೂ ಇರಬಹುದು. ನಾನು ಹೋಗುವುದು ಬಿಡುವುದು ನನ್ನ ಕೈಲಿಲ್ಲ, ಕರೆಸಿಕೊಳ್ಳುವರ ಮನಸ್ಸಿನಲ್ಲಿದೆ. ಅವರು ಮಾಡುವ ಪ್ರತಿ ಕೆಲಸದಲ್ಲಿದೆ. ಅವರ ಆಲೋಚನಾ ಧಾಟಿಯಲ್ಲಿದೆ. ಅವರ ಮನಸ್ಸಿನ ಮಾತಿಗು ನಡೆಯುವ ದಾರಿಗು ವ್ಯತ್ಯಾಸ ಇಲ್ಲದಿದ್ದರೆ ನಾನು ಸರಾಗ ಸರಾಗ. ಎಲ್ಲಿ ತನ್ನದನ್ನು ತಾನು ನೋಡಿಕೊಳ್ಳುವ, ತನ್ನವರನ್ನು ಮಾತ್ರ ಸಂರಕ್ಷಿಸಿಕೊಳ್ಳುವ ಸಮೂಹವಿರುತ್ತದೋ ನಾನಲ್ಲಿಗೆ ಮನೆಮಗನಂತೆ ಹೋಗುವುದಿಲ್ಲ, ಬದಲಿಗೆ ಅಪರೂಪದ ಅಥಿತಿಯಾಗುವೆ.
ನನ್ನನ್ನು ಓಲೈಸಲು ನನ್ನ ಕುರಿತು ಜಪತಪ ಪೂಜೆಪುನಸ್ಕಾರ ಹೋಮಹವನಹವಿಸ್ಸು ಮಾಡಿರೆಂದು ನಾನು ಎಲ್ಲೂ ಯಾರಲ್ಲೂ ಹೇಳಿಲ್ಲ. ತನ್ನ ಕೆಡುಕಿನಿಂದ ತಾನು ಮಾಡಿದ ತಪ್ಪನ್ನು ಮುಚ್ಚಲಿಕ್ಕೆ ಮಂದಿ ಈ ಅನ್ಯಮಾರ್ಗ ತುಳಿಯುತ್ತಾರೆ. ಗೊಡ್ಡು ಸಂಪ್ರದಾಯಗಳ ಬೆನ್ನೇರಿ ಮೌಢ್ಯತೆಯ ಪರಮಾವಧಿ ತಲುಪುತ್ತಾರೆ. ತನ್ನೊಳಗಿನ ತಪ್ಪನ್ನು ತಾನು ಮುಚ್ಚಿಡಲಾಗದೆ ಏನೆಲ್ಲಾ ಮಾಡುತ್ತಾರೆ ಈ ಜನ!?
ನನಗಾಗಿ ಪ್ರಾರ್ಥಿಸುವುದೇನು? ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವುದೇನು? ಹವಿಸ್ಸು ಕೊಡುವುದೇನು?.. ಇನ್ನೂ ಹೀಗೆ ಹತ್ತು ಹಲವು ರೀತಿ ನನ್ನನ್ನು ಒಲಿಸಿಕೊಳ್ಳಲು ನೋಡುತ್ತಾರೆ ಈ ಮಂದಿ.
ಆದರೆ ನಿಮಗೊಂದು ಮಾತು ಹೇಳಬೇಕು. ಹಿಂದಿನ ಕಾಲದ ತಿಳಿವಳಿಕೆಯಿದ್ದ ಮಂದಿ ನನಗಾಗಿ ಹೀಗೆಲ್ಲಾ ಕೆಲಸಕ್ಕೆ ಬಾರದ ಪೂಜೆ ಹೋಮಹವನ ಮಣ್ಣುಮಸಿ ಇತ್ಯಾದಿ ಇತ್ಯಾದಿ ಮಾಡುತ್ತಲೇ ಇರಲಿಲ್ಲ. ಅವರದೇನಿದ್ದರೂ ಅವರವರ ಕೆಲಸದಲ್ಲಿ, ಸುತ್ತಮುತ್ತಲ ಕಾಯಕ ಕೈಂಕರ್ಯಗಳಲ್ಲಿ ತೊಡಗಿರುತ್ತಿದ್ದರು. ಮಾಡುವ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತಲಿದ್ದರು. ಯಾವುದಕ್ಕೂ ಅಸೂಯೆ ದ್ವೇಷ ಮತ್ಸರವಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಸುತ್ತಮುತ್ತಲಿನ ಪರಿಸರ, ಪ್ರಾಣಿ, ಪಕ್ಷಿ, ಕುಂಟೆ, ನದಿ, ಜಲಪಾತಗಳ ಬಗ್ಗೆ ತಮ್ಮದೇ ಆದ ರೀತಿರಿವಾಜುಗಳನ್ನಿಟ್ಟುಕೊಂಡು ತಮ್ಮದೇ ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಬದುಕಿ ಬಾಳುತ್ತಿದ್ದರು. ಮಂದಿ ಹೀಗೆ ತಮ್ಮಪಾಡಿಗೆ ತಾವಾಯಿತು, ತಮ್ಮ ಮೂಲೋಕವಾಯಿತು ಎಂದು ಬಾಳುವೆ ಮಾಡುತ್ತಿರಲು ಹಠ ಮಾಡಿದರೆ ಸರಿಹೋಗುವುದಿಲ್ಲವೆಂದು ನಾನು ಸರಿಯಾದ ಸಮಯಕ್ಕೆ ಅಂದರೆ ಮಂದಿ ನನ್ನನ್ನು ಬರುವನು ಎಂದು ಎಣಿಸುವ ಕಾಲಕ್ಕೆ ತಕ್ಕಂತೆ ಹೋಗಿ ಅವರಿಗೆ ಸಾಕಾಗುವಷ್ಟೋ ಸಾಲದಿರುವಷ್ಟೋ ನನ್ನ ಕೈಲಾದ ಸೇವೆ ಮಾಡಿ ಬರುತ್ತಿದ್ದೆ. ನನ್ನ ಸೇವೆಯನ್ನು ಬಳಸಿಕೊಂಡ ಮಂದಿ ನನ್ನಿಂದ ಕೃತಾರ್ಥರಾಗುತ್ತಿದ್ದರು, ಅವರಿಗೆ ನನ್ನ ಕೈಲಾದ ಮಟ್ಟಿಗಿನ ಸೇವೆ ನೀಡಿದ್ದಕ್ಕೆ ನನಗೂ ಧನ್ಯತಾಭಾವವಿರುತ್ತಿತ್ತು.
ಒಂದೊಂದು ಸಲ ಏನಾಗುತ್ತಿತ್ತೆಂದರೆ, ಜನರ ಆಗಿನ ಪರಿಸ್ಥಿತಿ, ಮನೋಭಾವನೆ, ಅವರು ನನ್ನ ಮೇಲೆ ತೋರಿಸುತ್ತಿದ್ದ ಆದರ ತಾತ್ಸಾರ, ಆದರೀಯಣೆ ನಿರಾಕರಣೆ, ಎದುರು ನೋಡುವಿಕೆ ನೋಡದಿಲ್ಲದಿರುವಿಕೆ, ಕಾತರ ಬೇಸರ ಇತ್ಯಾದಿ ವಿಷಯಗಳಿಗನುಗುಣವಾಗಿ ನಾನು ನನ್ನ ಸೇವೆ ನೀಡುತಲಿದ್ದೆ. ಹೇಗೆಂದರೆ, ಮಂದಿ ನನ್ನನ್ನು ಚೆನ್ನಾಗಿ ಭಾವಿಸುವ ಮನಸ್ಸು ಹೊಂದಿ ತಮ್ಮ ಸುತ್ತಮುತ್ತಲಿನ ಪರಿಸರದ ಜೊತೆ ಅನ್ಯೋನ್ಯತೆ ಬೆಳೆಸಿಕೊಂಡಿದ್ದರೆ ನಾನು ಹೋದಾಗ ಎಲ್ಲರೂ ಮೆಚ್ಚಿವಂತಹ ಸೇವೆ ಕೊಡುತ್ತಿದ್ದೆ, ಇಲ್ಲದಿದ್ದರೆ ವ್ಯತಿರಿಕ್ತವಾದ ಸೇವೆ ನನ್ನಿಂದ ಬರುತ್ತಿತ್ತು. ಏನೇ ಆದರೂ ಮಂದಿ ಮೆಚ್ಚುವ ಸೇವೆ ಸದಾ ಮಾಡಬೇಕೆಂಬುದೇ ನನ್ನ ಪರಮೋಧ್ಯೇಯವಾಗಿತ್ತು, ಮತ್ತು ಈಗಲೂ ಅದು ಹಾಗೇ ಇದೆ.
ಮಂದಿಗೆ ಒಳ್ಳೆಯದನ್ನು ಮಾಡಿ ಹೆಸರು ಸಂಪಾದಿಸುವ ಉಮೇದು ಯಾರಿಗೆ ಇರಲ್ಲ ನೀವೇ ಹೇಳಿ? ಅದು ಎಲ್ಲರಲ್ಲೂ ವಯಸ್ಸಿನ ತಾರತಮ್ಯವಿಲ್ಲದೆ, ಜಾತಿಮತಗಳ ಭೇಧವಿಲ್ಲದೆ, ಬಡವ ಬಲ್ಲಿದನೆಂಬ ವಿಂಗಡಣೆಯಿಲ್ಲದೆ ಎಲ್ಲರನ್ನೂ ಆವರಿಸಿಕೊಳ್ಳುವ ಕಾಯಿಲೆ ತಾನೇ? ಅಲ್ಲವಾ ಮತ್ತೆ? ಈ ಕಾಯಿಲೆ ಹೇಗೆಂದರೆ, ನಿನ್ನ ಪಾತ್ರ ಇಂಥದೇ ಮಗಾ ಎಂದು ಹೇಳಿ ಯಾರದೋ ಗರ್ಭವನ್ನು ಸೀಳಿಕೊಂಡು ಹೊರಬರುವಂತೆ ಮಾಡುವ ಆ ಭಗವಾನು ದೇವಾನುದೇವತೆಗಳನ್ನೂ ಬಿಟ್ಟಿಲ್ಲ ಎಂದರೆ ನೀವು ನಂಬಲೇಬೇಕು. ಅಷ್ಟಿಲ್ಲದಿದ್ದರೆ ದೇವರು ಅಷ್ಟೊಂದು ಅವತಾರಗಳನ್ನು ಎತ್ತುತ್ತಿದ್ದರಾ? ತನ್ನ ಪವಾಡ ತೋರಿಸಿ ದುಷ್ಟ ಸಂಹಾರ ಮಾಡುತ್ತಿದ್ದರಾ? ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಎಂಬ ಬಿರುದನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದ್ದರಾ? ಆ ದೇವರೂ ಕೂಡ ತನ್ನ ಇರುವಿಕೆಯನ್ನು ತೋರ್ಪಡಿಸಲು, ಅವತಾರಗಳನ್ನೆತ್ತಿದ್ದು ಅವತಾರವಲ್ಲದೇ, ಈ ಗುರಿತಿಸಿಕೊಳ್ಳಬೇಕು ಎನ್ನುವ ಕಾಯಿಲೆಯಲ್ಲದೇ ಮತ್ತಿನ್ನೇನು? ನೀವೇನಂತೀರಿ?
ಅದನ್ನು ನೀವು ಚಟವೆನ್ನಿ, ಕಾಯಿಲೆಯೆನ್ನಿ. ಅದು ನನ್ನನ್ನೂ ಬಿಟ್ಟಿಲ್ಲ ಮತ್ತೆ! ನನಗೂ ಮಂದಿಗೆ ನಾಲ್ಕಾಸು ಒಳ್ಳೆಯದನ್ನು ಮಾಡಿ ಶಬ್ಬಾಸ್ಗಿರಿ ಗಿಟ್ಟಿಸಿಕೊಳ್ಳಬೇಕೆನ್ನುವುದು ಮೊದಲಿನಿಂದಲೂ ಇದೆ. ಅದಕ್ಕಾಗಿ ನಾನು ಪಟ್ಟ ಪಾಡಿಗಳು ಒಂದಾ ಎರಡಾ? ನಾನು ನೀಡುವ ಸೇವೆಯಿಂದ ಒಳ್ಳೆಯದಾಗುತ್ತದೆ ಎಂದು ಮಂದಿಗೆ ಯಾವಾಗ ತಿಳಿಯಿತೋ, ಅಂದಿನಿಂದ ಇಂದಿನ ತನಕ ಅವರು ಕರೆದಲ್ಲಿಗೆ ನಾನು ಹೋಗಬೇಕು, ಕರೆವ ಸಮಯಕ್ಕೆ ಸರಿಯಾಗಿ ಹೋಗಬೇಕು, ಅವರು ಎಷ್ಟು ಬಯಸುತ್ತಾರೋ ಅಷ್ಟು ಸೇವೆ ನೀಡಬೇಕು. ಸ್ವಲ್ಪ ಜಾಸ್ತಿಯಾದರೂ ಕಷ್ಟ, ತುಸುವೇ ಹೆಚ್ಚಾದರೂ ಕಷ್ಟ. ಯಾಕಾದರೂ ಇವನು ಬಂದು ಹೀಗೆ ಮಾಡಿದ ಎಂದು ನನ್ನನ್ನೇ ಮೂದಲಿಸುತ್ತಾರೆ. ನನ್ನ ಕಷ್ಟ ಯಾರಿಗೆ ಹೇಳಿಕೊಳ್ಳಲಿ? ನನ್ನ ಮನಸನ್ನು ಅರ್ಥ ಮಾಡಿಕೊಂಡವರು ಯಾರಿದ್ದಾರೆ? ಒಳ್ಳೆಯದನ್ನು ಮಾಡಿದವನಿಗೆ ಈ ಮಂದಿ ಗುಡಿಗೋಪುರಗಳನ್ನು ಕಟ್ಟುತ್ತಾರೆ, ಹಾಲುತುಪ್ಪಗಳಿಂದ ಅಭಿಷೇಕ ಮಾಡುತ್ತಾರೆ, ಮೂರ್ತಿ ನಿಲ್ಲಿಸುತ್ತಾರೆ, ಸುತ್ತಲೂ ನೆರೆದು ಭಜನೆ ಮಾಡುತ್ತಾರೆ, ಏರಿದವನ್ನು ಮತ್ತಷ್ಟು ಅಟ್ಟಕ್ಕೆ ಏರಿಸುತ್ತಾರೆ, ಸುತ್ತಲೂ ವಂದಿಮಾಗದಿರ ಗುಂಪು ಹುಟ್ಟಿಕೊಳ್ಳುತ್ತದೆ. ಈ ಮಂದಿಗೆ ಒಳ್ಳೆಯದನ್ನು ಮಾಡಿದವ ಸಾಕ್ಷಾತ್ತ್ ದೇವರೇ ಆಗಿಬಿಡುತ್ತಾನೆ. ಒಳ್ಳೆಯದನ್ನು ಮಾಡಿ ಒಳ್ಳೆಯವನು ಎನಿಸಿಕೊಳ್ಳುವುದು ತಪ್ಪಲ್ಲ ಬಿಡಿ. ಆದರೆ ಅವರು ಒಳ್ಳೆಯತನಕ್ಕೆ ವ್ಯಯಿಸುವ ದ್ರವ್ಯ ಮಾತ್ರ ಒಳ್ಳೆಯ ಮೂಲದ್ದಾಗಿದ್ದರೆ ಸಾಕು. ಆದರೆ ಈ ರೀತಿ ಒಳ್ಳೆಯ ಮಾರ್ಗದಲ್ಲಿ ದುಡಿದು, ಯಾರಿಗೂ ಅನ್ಯಾಯವಾಗದಂತೆ ಗಳಿಸಿದ ಸಂಪತ್ತನ್ನು ಹೆಸರು ಮಾಡಲಿಕ್ಕೆ ಎಷ್ಟು ಮಂದಿ ಬಳಸುತ್ತಾರೆ ಹೇಳಿ ನೋಡುವ? ಕೇವಲ ಬೆರಳೆಣಿಕೆ ಮಂದಿ ಮಾತ್ರ ಸಿಕ್ಕಾರು. ಎಲ್ಲಾದರೂ ಹುಡುಕಿ ನೋಡಿ, ನಾನು ನನ್ನನ್ನು ಅಟ್ಟಕ್ಕೇಸಿರಿ ಎಂದು ಮಂದಿಯನ್ನು ಕೇಳಿದ್ದುಂಟಾ ಎಂದು? ಒಂದೇ ಒಂದು ಸಾಕ್ಷ್ಯ ತೋರಿಸಿ ನನ್ನನ್ನು ಹೊತ್ತುಕೊಂಡು ಅಡ್ಡಪಲ್ಲಕ್ಕಿಯಲ್ಲಿ ಅಡ್ಡಾಡಿಸಿ ಎಂದು ಹೇಳಿದ್ದು? ನನ್ನ ಪುತ್ಥಳಿ ನಿರ್ಮಿಸಿ ಪೂಜೆ ಹೋಮಹವನ ಮಾಡಿ ಎಂದು ಕೇಳಿದ್ದು? ಉಹುಂ! ನಾನು ಇದ್ಯಾವುದನ್ನೂ ಕೇಳಿಲ್ಲ, ಕೇಳುವುದೂ ಇಲ್ಲ. ಏನೋ ನನ್ನಿಂದಾದ ಸೇವೆ ಮಾಡಿ ಗುರುತಿಸಿಕೊಳ್ಳುವ ಚಿಕ್ಕ ಹಪಹಪಿ ನನ್ನಲ್ಲಿದೆ ಎಂಬುದು ಬಿಟ್ಟರೆ ನನಗ್ಯಾವ ಮಹತ್ತರ ಆಸೆಯೂ ಇಲ್ಲ. ಮಂದಿಯ ನಿಷ್ಕಲ್ಮಶ ಸೇವೆ ಮಾಡಿ ಈಗಿರುವ ಮತ್ತು ಮುಂದಿನ ಜನಾಂಗವನ್ನೂ ಸೇರಿಸಿ ಅವರನ್ನು ಸದಾ ಕಾಲ ತಣ್ಣಗೆ ಕಾಯುವ ಹಂಬಲ ನನ್ನದು.
ಆದರೆ ಬಿಡುತ್ತಾರೆ ಅಂದುಕೊಂಡಿರಾ ಈ ಮಂದಿ ನನ್ನ ಪಾಲಿನ ಕೆಲಸ ನನ್ನ ಪಾಡಿಗೆ ನಾನು ಮಾಡಲು? ಉಹುಂ ಬಿಡುವುದಿಲ್ಲ! ನನ್ನ ಪಾಲಿನ ಕೆಲಸವನ್ನು ಮಾಡಲು ನನಗೆ ಅವರಾಗಿಯೇ ಅಡ್ಡಿ ಆತಂಕ ತರುತ್ತಾರೆ. ಸಂಪದ್ಭರಿತ ಅರಣ್ಯ ಮಟ್ಟಸವಾಗಿ ಕಡಿದು ಮೊದಲು ಅಲ್ಲಿರುವ ಅರಣ್ಯ ವಾಸಿಗಳಾದ ಪ್ರಾಣಿ ಪಕ್ಷಿ ಕ್ರಿಮಿ ಕೀಟ ಹುಳು ಹುಪ್ಪಟೆಯನ್ನು ನಾಶ ಮಾಡುವುದರ ಜೊತೆಗೆ ಅಮೂಲ್ಯವಾದ ಸಂಪತ್ತಿನ ಕೊಳ್ಳೆ ಹೊಡೆಯುತ್ತಾರೆ. ಉಳ್ಳವರ ಪಾಲಿನ ಮತ್ತಷ್ಟು ಆಸೆ ಆಕಾಂಕ್ಷೆ ಪೂರೈಸುತ್ತಾರೆ ಅಷ್ಟೇ. ಪಾಪ! ಇರಲು ನೆತ್ತಿ ಮೇಲೆ ಸೂರಿಲ್ಲದ, ಒಂದೊತ್ತು ತಿನ್ನಲು ಅನ್ನವಿಲ್ಲದ ಜನ ಇವರಿಗೆ ಕಾಣಿಸುವುದೇ ಇಲ್ಲ. ತಾಯಿ ಪ್ರಕೃತಿಯೇ ನಾಶವಾದರೆ ನನ್ನ ಪಾಲಿಗೆ ಅದು ಮರಣಶಾಸನವೇ ಸರಿ. ಪ್ರಕೃತಿಯನ್ನು ವಿನಾಶದಂಚಿಗೆ ತಳ್ಳುವ ಮೂಲಕ ಮಂದಿ ತಮ್ಮ ಮೇಲೆ ತಾವೇ ಕಲ್ಲುಚಪ್ಪಡಿ ಎಳೆದುಕೊಳ್ಳುತ್ತಾರೆ. ಮುಂದುವರಿದು, ಉಳಿದ ನದಿ ಕೆರೆ ಕುಂಟೆಗಳ ಜಾಗವನ್ನು ಒತ್ತುವರಿ ಮಾಡಿ ಕತ್ತೆತ್ತಿ ನೋಡಿದರೂ ಕಾಣದಷ್ಟೆತ್ತರದ ಮುಗಿಲು ಮಹಲುಗಳನ್ನು ನಿರ್ಮಿಸುತ್ತಾರೆ. ಮತ್ತೂ ಮುಂದುವರಿದು ಉಳಿದ ಸಂಪನ್ಮೂಲಗಳಾದ ಬೆಟ್ಟ ಬಂಡೆಯನ್ನು ಐಷಾರಾಮಿ ಕಾರುಗಳಲ್ಲಿ ಓಡಾಡುವ ದೊರೆಗಳಿಗೆ ತೊಂದರೆಯಾಗದಿರಲೆಂದು ರಸ್ತೆ ನಿರ್ಮಿಸುವುದಕ್ಕಾಗಿಯೋ, ತಮ್ಮ ತಮ್ಮ ಮನೆಗಳ ಒಪ್ಪ ಒರಣ ಮಾಡಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶನಕ್ಕಿಡುವ ಸಲುವಾಗಿ ತಾವು ಕಟ್ಟುವ ಹೊಸ ಮನೆಗೆ ನೆಲ ಹಾಸಲೆಂದೋ ಬಲಿ ಹಾಕುತ್ತಾ ಇನ್ನುಳಿದ್ಯಾವುದಿದೆ ಹಾಳು ಮಾಡಲು ಎಂದು ಹೊಸ ಪಂಥ ಯೋಚಿಸುತ್ತಾರೆ. ಎಲ್ಲೆಲ್ಲಿ ನೋಡಿದರೂ ಉಕ್ಕಿ ಹರಿದು ಚಿಮ್ಮುತ್ತಿದ್ದ ನೀರಿನ ಸೆಲೆಗೇ ಕಂದರ ಕೊರೆದು ಅದರ ನೆಲೆಯನ್ನೇ ಆರಿಹೋಗುವಂತೆ ಮಾಡುತ್ತಾರೆ. ಕೇವಲ ಹತ್ತಾರು ಅಡಿಗೆ ಸಿಗುತ್ತಿದ್ದ ಅಂತರ್ಜಲ ಈಗ ಸಾವಿರಾರು ಅಡಿ ಕೊರೆದರೂ ಸಿಗುತ್ತಿಲ್ಲವೆಂದರೆ ಈ ಮಂದಿಯ ಹಕೀಕತ್ತು ಎಂಥದ್ದಿರಬಹುದು ನೀವೇ ಯೋಚಿಸಿ.
ಇಷ್ಟಕ್ಕೇ ಸುಮ್ಮನಿದ್ದರಾ ಮಂದಿ? ಉಹುಂ! ನಾನು ಇರುವ ಜಾಗದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕಾದವರು, ಶ್ರೀಕೃಷ್ಣ ಕಟ್ಟಿಸಿದ ಗೋಮಾಳದಲ್ಲಿರಬೇಕಾದ ಜಾನುವಾರುಗಳನ್ನು ತಂದು ಅದು ತೃಪ್ತಿಪಟ್ಟು ಇವರಿಗೆ ನಾಲ್ಕು ಮಣ ಹೆಚ್ಚಿಗೆ ಹಾಲು ಕೊಡುವ ತನಕ, ಒಂದೇ ದಿನದಲ್ಲಿ ಗದ್ದೆಯ ಕೆಲಸವನ್ನು ಸಂಪೂರ್ಣವಾಗಿ ಮಾಡಿ ಮುಗಿಸುವ ಶಕ್ತಿ ಬರುವ ತನಕ ಅದಕ್ಕೆ ಸ್ನಾನ ಮಾಡಿಸಿ ನಾನಿರುವ ಜಾಗವನ್ನು ಕೊಳಕು ಮಾಡುತ್ತಾರೆ. ತಮ್ಮ ಕೊಳಕು ಬಟ್ಟೆಯನ್ನಲ್ಲದೆ, ಶೌಕವನ್ನೂ ನನ್ನಲ್ಲಿ ವಿಲೀನಗೊಳಿಸಿ ಕಲ್ಮಶ ಮತ್ತಷ್ಟು ಹೆಚ್ಚುವಂತೆ ಮಾಡುತ್ತಾರೆ. ತಮ್ಮ ಮನೆ ಪೂಜೆಹೋಮಗಳಲ್ಲಾದ, ದೇವರ ಪೂಜೆಯ ನಂತರ ಬಳಸಿ ಬಿಸಾಡುವ ಹೂ ಕಸ ಕಡ್ಡಿಯನ್ನು, ಬಾಳೆಲೆಯನ್ನು ತಂದು ನನ್ನ ಜಾಗದಲ್ಲಿ ಹಾಕಿ ಅದರಲ್ಲಿರುವ ಜಲಾಚರಗಳಿಗೆ ತೊಂದರೆ ತಂದೊಡ್ಡುತ್ತಾ, ಕಾರ್ಕಾನೆಗಳ ವಿಷಯುಕ್ತ ಮಾಲಿನವನ್ನು ನನ್ನೊಳಗೆ ಹರಿದುಬಿಡುತ್ತಾರೆ. ಇನ್ನು ನಾನೆಲ್ಲಿ ಉಳಿಯಬೇಕು? ನನಗೆ ಉಳಿಗಾಲವೆಲ್ಲಿ? ಈ ಮಂದಿ ಮಾಡುವ ಅನಾಚಾರಗಳೆಲ್ಲವನ್ನೂ ಸಹಿಸಿಕೊಂಡು ನನಗೂ ಸಾಕಾಗಿ ಹೋಗಿದೆ. ಆದರೂ ಅವರ ಮೇಲಿರುವ ಸೇವೆ ಮಾಡುವ ಮನೋವೃತ್ತಿ ನನ್ನಲ್ಲಿ ಒಂಚೂರೂ ಕಡಿಮೆಯಾಗಿಲ್ಲವೆಂದರೆ ನೀವು ನಂಬಲೇಬೇಕು!
ಬರುಬರುತ್ತಾ ಪರಿಸ್ಥಿತಿ ಹೇಗಾಗಿದೆ ಎಂದರೆ ನಾನುಳಿದುಕೊಳ್ಳುವ ಜಾಗ ಕೆರೆಕುಂಟೆ ಬರಿದಾಗಿದ್ದರೆ ಅದನ್ನೂ ಬಿಡದ ಈ ಮಂದಿ, ಅದನ್ನು ಅಕ್ರಮವಾಗಿ ಅಭಿವೃದ್ಧಿಯ ಹೆಸರಿನಲ್ಲಿ ಭೂಪರಿವರ್ತನೆ ಮಾಡಲು ಮುಂದಾಗಿರುವುದು! ನಾನು ಬಂದಾಗ ಉಳಿಯಲು ಜಾಗವೇ ಇರದಿದ್ದರೆ ನಾನು ಇಲ್ಲಿಗೆ ಬಂದು ಮಂದಿಗೆ ಅನಂತ ಸೇವೆ ಮಾಡುವುದಾರೂ ಹೇಗೆ? ಹೋಗಲಿ ನಾನು ಬರುವುದಾದರೂ ಸಾಧ್ಯವಾದೀತೆ? ಚಿಂತೆ ಮಾಡಬೇಕಾದ ಮಂದಿ ನಿದ್ದೆಯಲ್ಲಿ ತೂಕಡಿಸುತ್ತಾ ಒಬ್ಬರ ಕಾಲನೊಬ್ಬರು ಎಳೆಯುತ್ತಾ ಕಾಲಹರಣ ಮಾಡುತಲಿದ್ದಾರೆ. ಯಾವುದು ಸ್ವಾಮಿ ಅಭಿವೃದ್ಧಿ? ತಾನಾಗೇ ಹುಟ್ಟಿ ಬೆಳೆದು ಹಲವು ದಶಕಗಳಿಂದ ತಂಪಾದ ಗಾಳಿ ನೆರಳು ನೀಡುವ ಮರಗಳನ್ನು ಕಡಿಯುವುದಾ? ಕಣ್ಣಿಗೆ ಕಾಣದಂತೆ ಒಳಗೊಳಗೇ ಅರಣ್ಯ ಕಡಿದು ನಾಶ ಮಾಡುವುದಾ? ಅದರಲ್ಲಿರುವ ಅಗಣಿತ ಸಂಪತ್ತನ್ನು ತನ್ನ ಉಳಿವಿಗೋಸ್ಕರ ಬಲಿ ಕೊಡುವುದಾ? ವನ್ಯ ಮೃಗಗಳನ್ನು ಪ್ರಾಣಿಪಕ್ಷಿಗಳನ್ನು ತನ್ನ ಬೇಟೆಯ ತೆವಲು ತೀರಿಸಿಕೊಳ್ಳಲು, ನಾಲಗೆಯ ಚಪಾಲವಾರಿಸಿಕೊಳ್ಳಲು ಕೊಲ್ಲುವುದಾ? ಹಿರಿಯರು ಮಾಡಿಟ್ಟ ಬಂಗಾರ ಬೆಳೆವ ಭೂತಾಯಿಯನ್ನು ಅನ್ಯರಿಗೆ ಮೂರು ಕಾಸಿಗೆ ಮಾರಿ ಪಟ್ಟಣ ಸೇರುವುದಾ? ನದಿಮೂಲವನ್ನು, ನದಿ ಪಾತ್ರವನ್ನು ಸವರುತ್ತಾ ತಾನು ತನ್ನ ಹೆಂಡಿರು ಮಕ್ಕಳಿರಲು ಬೆಚ್ಚಗಿನ ಮನೆ ಕಟ್ಟಿಸುವುದಾ? ಅನೈರ್ಮಲ್ಯೀಕಾರಣವಾಗುವ ವಿಷಯುಕ್ತ ರಾಸಾಯನಿಕವನ್ನು ಜಲದೊಡಲಿಗೆ ಹರಿದು ಬಿಡುವುದಾ? ಯಾವುದು ಸ್ವಾಮಿ ಅಭಿವೃದ್ಧಿ ಹಾಂ? ಒಂದು ತಿಳಿದುಕೊಳ್ಳಿ, ತಾನು ಯಾವುದನ್ನು ಮನುಷ್ಯ ಸೃಷ್ಟಿಸಲು ಸಾಧ್ಯವಿಲ್ಲವೋ ಅದನ್ನು ನಾಶ ಮಾಡಲು ಆತನಿಗೆ ಯಾವುದೇ ಹಕ್ಕಿಲ್ಲ!
ಹೋಗಲಿ ಬಿಡಿ. ಈಗ ಅವರ ಬಗ್ಗೆ, ಮಂದಿ ಮಾಡುವ ಅನಾಚಾರದ ಬಗ್ಗೆ ಎಷ್ಟು ಹೇಳಿದರೂ ತಾವು ಮಾಡುವ ಕೆಲಸವನ್ನೇ ಮಾಡುತ್ತಿರುತ್ತಾರೆ.
ಆದರೆ ನಾನೀಗ ಹೇಳಹೊರಟಿರುವುದು ಈ ಮೇಲ್ಕಾಣಿಸಿದ ಯಾವ ವಿಷಯವನ್ನೂ ಅಲ್ಲ. ನನ್ನ ಮನದಾಳದ ಮಾತುಗಳು, ನನ್ನ ಅಂತರಾಳದಲ್ಲಿ ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳು ಮತ್ತು ಅದಕ್ಕೆ ಯಾರಿಂದಲಾದರೂ ಉತ್ತರ ಸಿಗಬಹುದೇನೋ ಎನ್ನುವ ಕಾತರವಷ್ಟೇ.
ಮೊದಲೇ ಹೇಳಿದೆನ್ನೆಲ್ಲಾ ನಾನು ಮಂದಿಗೆ ಮಾಡುವ ಸೇವೆ ಅವರವರ ಭಾವಧರ್ಮಕ್ಕನುಗುಣವಾಗಿರುತ್ತದೆ ಎಂದು? ನೋಡಿ ಏನಾಗುತ್ತದೆ ಎಂದರೆ, ಈ ಮಂದಿ ನನ್ನನ್ನು ಸುಖಾಸುಮ್ಮನೆ ಮೂದಲಿಸುತ್ತಾರೆ. ವಿನಾಕಾರಣ ದ್ವೇಷಿಸುತ್ತಾರೆ. ನಾನು ಕಾರಣನಲ್ಲದ ಅವರ ಪರಿಸ್ಥಿಗೆ ನನ್ನನ್ನು ಹೊಣೆಗಾರನನ್ನಾಗಿ ಮಾಡುತ್ತಾರೆ. ಎಲ್ಲ ಘೋರವನ್ನೂ ನಾನೇ ಮಾಡಿದೆ, ನನ್ನಿಂದಲೇ ಆಯಿತು ಎಂದು ತಿಳಿಯುತ್ತಾರೆ. ಎಲ್ಲ ಅವರ ಕಷ್ಟಕ್ಕೂ ನನ್ನನ್ನು ಭಾದ್ಯೆತೆದಾರನನ್ನಾಗಿಸುತ್ತಾರೆ. ನನ್ನ ಸೇವೆಯಿಂದ ಕೆಲವೊಮ್ಮೆ ಸಂತೃಪ್ತಿಪಡುವ ಅದೇ ಜನ, ನನ್ನನ್ನು ಅಪರಾಧೀ ಕಟಕಟೆಯಲ್ಲಿ ನಿಲ್ಲಿಸುತ್ತಾರೆ. ನೀನು ಮಾಡಿರುವುದು ಸರಿಯಾ? ಎಂದು ನನ್ನನ್ನೇ ನ್ಯಾಯ ಕೇಳುತ್ತಾರೆ. ಅಲ್ಲಾ ಸ್ವಾಮಿ ನನಗೂ ಒಂದು ಮನಸ್ಸಿದೆ, ಅದರಲ್ಲಿ ಮಂದಿಗೆ ಒಳ್ಳೆಯದು ಮಾಡುವ ಆಲೋಚನೆಯಿದೆ, ನನ್ನ ಮಸ್ತಕಕ್ಕೂ ಭಾವನೆಗಳಿವೆ, ಒಳ್ಳೆಯದ್ಯಾವುದೂ ಕೆಟ್ಟದ್ಯಾವುದೂ ಎಂದು ನಿರ್ಧರಿಸುವ ಗುಣವಿದೆ ಎಂದಾಗಲೀ ಮಂದಿ ನನ್ನ ಕುರಿತು ಏಕೆ ಆಲೋಚಿಸುವುದಿಲ್ಲ? ಏನೋ ಕೆಲವೇ ಕೆಲವು ಮಂದಿ ಯೋಚಿಸಿದರಾಯಿತೇ? ಎಲ್ಲರೂ ಇದರ ಬಗ್ಗೆ ಗಂಭೀರವಾಗಿ ಅವಲೋಕಿಸಿ ನಿರ್ಧಾರ ಕೈಗೊಳ್ಳಬಾರದೇಕೆ? ಯಾರೋ ಕೆಲವೇ ಕೆಲವು ಮಂದಿಗಿರುವ ಭವಿಷ್ಯದ ಚಿಂತೆ, ಮುಂದಿನ ಪೀಳಿಗೆಗಾಗಿ ಮಿಕ್ಕುಳಿದ ಕಾಲ ಕಸದಂತಷ್ಟೇ ಇರುವ ಪರಿಸರ, ನದಿ, ಕಾಡು, ಗುಡ್ಡ, ಮೇಡು, ಪ್ರಾಣಿಪಕ್ಷಿ, ಹುಳುಹುಪ್ಪಟೆಗಳನ್ನು ಸಂರಕ್ಷಿಸಿ ಕಾಪಾಡಿ ಪೊರೆಯುವ ಮುಂದಾಲೋಚನೆಯೇಕಿಲ್ಲ? ಮೇಲೆ ಹೇಳಿದ ಹಾಗೆ ಮಂದಿ ಮಾಡಬಾರದ ಅನಾಚಾರಗಳನ್ನೆಲ್ಲಾ ಮಾಡಿದಾಗ ಆಗಾಗ್ಗೆ ನಾನು ಅವರ ಮೇಲೆ ಸ್ವಲ್ಪ ಮುನಿಯುವುದುಂಟು. ಹಾಗೆ ನಾನು ಮುನಿದು ನನ್ನ ಸೇವೆಯನ್ನು ವ್ಯತಿರಿಕ್ತವಾಗಿ ಕೊಡುವುದೂ ಉಂಟು. ಹಾಗಾದಾಗ, ಕೆರೆಕುಂಟೆ ನದಿ ಶರಧಿಯಲ್ಲಿ ಪ್ರವಾಹ ಉಂಟಾಗುತ್ತದೆ. ಜಲ ಪ್ರಳಯ ಜನ್ಮ ತಾಳುತ್ತದೆ. ನದಿ ಝರಿಗಳು ಭೋರ್ಗರೆದು ಧುಮ್ಮಿಕ್ಕುತ್ತವೆ. ಸಾಗರದಲೆಗಳು ತೀರಕೆ ಬಡಿದಪ್ಪಳಿಸುತ್ತವೆ. ಎಂದೂ ಶಾಂತವಾಗಿದ್ದ ಇವುಗಳನ್ನು ನೋಡಿದ್ದ ಮಂದಿ ಈ ಪರಿ ಮತಿಗೆಟ್ಟಂತಾಡುವ ಜಲಮೂಲಗಳನ್ನು ನೋಡಿ ನನ್ನನ್ನು ದೂಷಿಸತೊಡಗುತ್ತಾರೆ. ಇದರಲ್ಲಿ ನನ್ನ ತಪ್ಪೇನು? ಮಂದಿ ಮಾಡಿದ ಅನಾಚಾರ ಅಕ್ರಮಗಳನ್ನೆಲ್ಲಾ ಸಹಿಸಿಕೊಂಡು ಅವರವರು ಮಾಡಿದ ಕೆಲಸಕ್ಕೆ ತಕ್ಕಂತೆ ನನ್ನ ಸೇವೆ ಮಾಡುತ್ತಿರುವೆನೆಲ್ಲಾ ಅದು ತಪ್ಪೇನು? ಪ್ರಕೃತಿ ವಿಕೋಪಗಳಾದಾಗ ಮಂದಿ ದಿಕ್ಕಾಪಾಲಾಗುತ್ತಾರೆ. ಅದನ್ನು ನೋಡುವ ನನಗೆ ಎಷ್ಟು ಸಂಕಟವಾಗುತ್ತದೆ ಎಂದು ಯಾರಾದರೂ ಯೋಚಿಸಿದ್ದೀರೇನು? ಆಗುವ ನೋವು, ಆಸ್ತಿಪಾಸ್ತಿ ಮನೆಮಠ ನಾಶದ ಬಗ್ಗೆ ಮಂದಿ ಯೋಚಿಸುವರೇ ವಿನಃ, ಇದು ಏಕಾಯಿತು? ಇದರಲ್ಲಿ ನನ್ನ ಪಾತ್ರವೇನು? ಎಂದು ಮಾತ್ರ ಯೋಚಿಸುವುದಿಲ್ಲ. ಇದಕ್ಕೆ ಕಾರಣವೇನೆಂದು ಹುಡುಕುವ ಗೋಜಿಗೇ ಹೋಗುವುದಿಲ್ಲ. ಪುನಃ ಹೀಗೆ ಮತ್ತೆ ಆಗದಂತೆ ಮಾಡಬೇಕಾಗಿರುವುದೇನು? ಎಂದು ಚಿಂತಿಸುವುದೇ ಇಲ್ಲ. ಆಗುವ ಎಲ್ಲಾ ಅನಾಹುತಗಳಿಗೆ ನನ್ನನ್ನು ಕಾರಣೀಭೂತನನ್ನಾಗಿಸಿ ತಾವು ಮಾತ್ರ ಮುಗುಮ್ಮಾಗಿ ಉಳಿದುಬಿಡುತ್ತಾರೆ. ಮಂದಿಗೆ ತಾವು ಯಾವ ಕೆಲಸ ಮಾಡಬೇಕು? ಯಾವುದು ಮಾಡಬಾರದು? ಎನ್ನುವ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ತಿಳುವಳಿಕೆಯಿದೆ. ತಿಳಿದೂ ತಿಳಿದೂ ಹೀಗೆ ಮಾಡಬಾರದ್ದನ್ನೆಲ್ಲಾ ಮಾಡಿ ಕೊನೆಗೆ ನನ್ನ ವಿರುದ್ಧವೇ ತಿರುಗಿಬೀಳುತ್ತಾರಲ್ಲ ನನಗೆಷ್ಟು ಮರ್ಮಾಘಾತವಾಗಿರಬೇಡ? ನನ್ನಲ್ಲೂ ಇರುವ ಹೃದಯ ಅದೆಷ್ಟು ನೊಂದಿರಬೇಡ? ಸಹಿಸಿ ಸಹಿಸಿ ಕೊನೆಗೆ ಈ ಅನಾಚಾರ ಅಕ್ರಮವನ್ನು ತಡೆಯಲಾಗದೆ ಮಂದಿಗೆ ಸ್ವಲ್ಪ ಚುರುಕು ಮುಟ್ಟಿಸಲು ಹೋದರೆ ನನಗೇ ಈ ಪರಿ ಪರಿಭ್ರಮಣೆಗೊಳಪಡಿಸುವ ಇವರ ಕುತಂತ್ರಕ್ಕೆ ನಾನೇನನ್ನಬೇಕು ನೀವೇ ಹೇಳಿ?
ಬಿಡಿ ನನ್ನ ಕಥೆಯನ್ನು ಹಂಚಿಕೊಳ್ಳಲು, ನನ್ನ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು, ಯಾರಿಗೂ ಪುರುಸೊತ್ತಿಲ್ಲ. ಮಂದಿ ತಾವು ಸಮಯದ ಹಿಂದೆ ಬಿದ್ದಿದ್ದಾರೆ. ಕಾಲನ ಕುದುರೆಯ ಸ್ಪರ್ಧೆಗೆ ಇಳಿದು ದುಡ್ಡು ಮಾಡುವುದೊಂದನ್ನೇ ತಮ್ಮ ಧ್ಯೇಯವನ್ನಾಗಿ ಪರಿಗಣಿಸಿ, ತಾವು ಚಿಕ್ಕಚಿಕ್ಕ ಸಂತೋಷಗಳನ್ನನುಭವಿಸದೇ, ಜೊತೆಯಲ್ಲಿರುವರಿಗೂ ಅದರ ಸವಿಯನ್ನುಣಬಡಿಸದೆ ಓಡುತ್ತಲೇ ಇದ್ದಾರೆ. ಅವರು ಓಡಲಿ ಬಿಡಿ. ಅವರಿಗೆ ನಾನು ಮತ್ತು ನನ್ನ ಅಸ್ತಿತ್ವದ ಬಗ್ಗೆ ಪರಿವೆಯೇ ಇಲ್ಲ. ಇನ್ನು ಮಿಕ್ಕುಳಿದವರಲ್ಲಿ ನನ್ನ ಬಗ್ಗೆ ಚಿಂತಿಸಿ ಯೋಚಿಸುವವರಿಗೆ ಅಂದುಕೊಂಡಿದ್ದನ್ನು ಕಾರ್ಯಗತಕ್ಕೆ ತರಲು ಈ ಅನಾಗರೀಕ ಆರಾಜಕತೆಯಿಂದ ಕೂಡಿದ ಈ ಸಮಾಜ ಬಿಡುವುದಿಲ್ಲ. ಯಾವುದೋ ದೇವರದಯೆ, ನೀವಾದರೂ ಸಿಕ್ಕಿದಿರೆಲ್ಲಾ ನನ್ನ ಮಾತುಗಳನ್ನು, ನಾನು ಒಳಗೊಳಗೇ ಮನುಷ್ಯ ಭೂಮಿ ಮೇಲೆ ಜನುಮ ತಾಳಿದಾಗಿನಿಂದಲೂ ಅನುಭವಿಸಿಕೊಂಡು ಬರುತ್ತಿರುವ ವೇದನೆಯನ್ನು ಕೇಳಲು? ನನಗೆ ಅಷ್ಟು ಸಾಕು.
ಹಾಂ! ನಾನ್ಯಾರೆಂದು ನಿಮಗೆ ಹೇಳಲೇ ಇಲ್ಲವಲ್ಲವೇ? ನನ್ನನ್ನು "ಮಳೆ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನಮಸ್ಕಾರ.
ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
೧೮ ೦೮ ೨೦೧೭