"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ
"ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮೊಗೆದಷ್ಟೂ ಒಸರುವ ಅಗಣಿತ ಗಣಿ. ಒಬ್ಬೊಬ್ಬರಿಗೆ ಒಂದೊಂದು ಪರಿಯಾಗಿ ಅದು ನಿರ್ಮಿಸುವ ಭಾವಸೃಷ್ಟಿ, ಜೀವನ ದರ್ಶನ, ಅನುಭಾವ ರಸಧಾರೆ, ಸೃಷ್ಟಿ ವಿಸ್ಮಯ, ಜೀವ ವೈವಿಧ್ಯತೆ, ಸಂಬಂಧಗಳ ಔಚಿತ್ಯಪೂರ್ಣತೆ ಅಪರಿಮಿತವಾದುದೇ ಸರಿ.
ಅಭ್ಯಾಸ ಬಲ ಮತ್ತು ಅನುಭವದಿಂದ ಒಂದು ವಸ್ತುವಾಗಲಿ, ವಿಷಯವಾಗಲಿ, ವ್ಯಕ್ತಿಯಾಗಲಿ ಅದರ ಬಗ್ಗೆ ಒಂದು conclusionಗೆ ಬರಬಹುದು. ಆದರೆ ನಮ್ಮ ನಡುವೆ ದಿನಂಪ್ರತಿ ನಡೆಯುವ ಕಲಸೋಮೇಗರದ ಒಟ್ಟೂ ಔಪಚಾರಿಕ ಇಲ್ಲವೇ ಅನೌಪಚಾರಿಕ, ಅಸಂಘಟಿತ ಅನೇಕಾನೇಕ ಸಂಗತಿಗಳನ್ನು ಆಧರಿಸಿ ಅದನ್ನು ಒಂದು ಚೌಕಟ್ಟಿಗೆ ಒಳಪಡಿಸುವುದು ಅಸಾಧ್ಯ. ಆ ಕೆಲಸವನ್ನು ಮಹಾಭಾರತ ಮಾಡುತ್ತದೆ. ಈ ಮಹಾಕಾವ್ಯ ಇಂದಿಗೂ ಪ್ರಸ್ತುತವೆಂದರೆ ಬಹುಶಃ ಇದೇ ಕಾರಣಕ್ಕೆ ಇರಬೇಕು. ಅದರಲ್ಲಿ ಏನಿದೆ? ಎಂದರೆ ಏನಿಲ್ಲ? ಎಂದು ಮರುಪ್ರಶ್ನೆ ಹಾಕಬೇಕಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಮಹಾಭಾರತ self centered ಕಥೆಯಲ್ಲ ; ರಾಮಾಯಣದ ರಾಮನ ಹಾಗೆ. ಅದು - ನಮ್ಮ ನಿಮ್ಮೆಲ್ಲರ ಕಥೆ. ದಿನ ನಿತ್ಯದ ಬದುಕು, ಬವಣೆ. ಅಲ್ಲಿರುವ ಪ್ರತಿಯೊಂದು ಪಾತ್ರಗಳು ಸೂಚ್ಯವಾಗಿ ಇಡೀ ಮಾನವ ಕುಲಕ್ಕೆ ಸಂದೇಶ ರವಾನಿಸುವ ಸಾಧನಗಳು. ಮಹಾಭಾರದಲ್ಲಿರುವಷ್ಟು ರಮ್ಯತೆ, ವೈವಿಧ್ಯತೆ, ವಿಸ್ತರತೆ ಪ್ರಪಂಚದ ಇನ್ನಾವ ಗ್ರಂಥಗಳಲ್ಲಿ ಇರಲಾರದು. ಇದೇ ಕಾರಣಕ್ಕೆ ರಾಮಾಯಣವನ್ನೂ ಮೀರಿಸುವ ಪ್ರಸ್ತುತತೆ ಮತ್ತು ವಾಸ್ತವತೆ ಮಹಾಭಾರತಕ್ಕಿರುವುದು.
ಈ ಮಹಾನ್ ಗ್ರಂಥವನ್ನು ಜಗತ್ತಿನ ಹಲವು ಆಡ್ಯರು ಶತಶತಮಾನಗಳಿಂದ ತಮ್ಮ ತಮ್ಮ ಅನುಭವ ಮತ್ತು ಜ್ಞಾನಕ್ಕೆ ತಕ್ಕಂತೆ ಅಭ್ಯಸಿಸಿದ್ದಾರೆ. ಮುಂದೆ ಮಾಡುತ್ತಲೂ ಇರುತ್ತಾರೆ. ಏಕೆಂದರೆ ಮಹಾಭಾರತ ಎಂದರೆ ಅದೊಂದು ಜಿಜ್ಞಾಸೆ. ಇದ್ದೂ ಇಲ್ಲದಿರುವಿಕೆಯ ಮುಂದುವರಿಕೆ. ಕಂಡರೂ ಅರಿಯಲಾಗದ ಜ್ಞಾನ. ಲೌಕಿಕದಲ್ಲಿದ್ದರೂ ಅಲೌಕಿಕದೆಡೆ ಪರಿತಪಿಸುವ ಪ್ರಲಾಪ. ಮತ್ತು ಅದು ನಮ್ಮ ನಡುವೆ ದಿನವೂ ನಡೆಯುವ ಅಸಾಧಾರಣ ಮಹೋತ್ಸವ.
ಇಂತಹ ವ್ಯಾಸ ರಚಿತ ಮಹಾಭಾರತವನ್ನು ನಮ್ಮ ಕನ್ನಡ ಭಾಷೆಯಲ್ಲಿ ಅಬಾಲವೃದ್ಧರಿಗೂ ಅರ್ಥವಾಗುವಂತೆ ಹೇಳುವ ಕೆಲವೇ ಮೌಲ್ವಿಕ ಕೃತಿಗಳಲ್ಲಿ ಎ. ಆರ್. ಕೃಷಶಾಸ್ತ್ರಿಗಳು ರಚಿಸಿರುವ "ವಚನ ಭಾರತ"ವೂ ಒಂದು. ಇದು ಯಥಾವತ್ತ್ ವ್ಯಾಸರ ಮೂಲಭಾರತದ ತದ್ರೂಪು. ಇಂದಿನ ಪ್ರಸ್ತುತತೆಗೆ ತಕ್ಕಂತೆ ಅವಶ್ಯವಿರುವುದನ್ನೆಲ್ಲಾ ಸಂಕ್ಷಿಪ್ತವಾಗಿ ಹೇಳಿ, ಅನಾವಶ್ಯಕವಲ್ಲದ್ದನ್ನು ಬಿಡಲಾಗಿದೆ. ಆದರೆ ಬೇಕಾದ ಕಡೆ ಸಮಾಜದ ಸ್ವಾಸ್ಥ್ಯಕ್ಕೋಸ್ಕರ, ಆದರ್ಶ, ಧರ್ಮ, ಸತ್ಯಪರತೆಯನ್ನು ಎತ್ತಿಹಿಡಿಯಲೋಸುಗ ಹಲವು ಅಧ್ಯಾಯ - ಅದು ಏಕ್ಸ್ಟ್ರಾ ಅನಿಸಿದರೂ - ಸೇರಿಸಲಾಗಿದೆ.
ಇದರಲ್ಲಿ ಆದಿಪರ್ವ, ಸಭಾಪರ್ವ, ಅರಣ್ಯಪರ್ವ, ವಿರಾಟಪರ್ವ, ಉದ್ಯೋಗಪರ್ವ, ಭೀಷ್ಮಪರ್ವ, ದ್ರೋಣಪರ್ವ, ಕರ್ಣಪರ್ವ, ಶಲ್ಯಪರ್ವ, ಸೌಪ್ತಿಕಪರ್ವ, ಸ್ತ್ರೀಪರ್ವ, ಶಾಂತಿಪರ್ವ, ಅನುಶಾಸನಪರ್ವ, ಅಶ್ವಮೇಧಿಕಪರ್ವ, ಆಶ್ರಮಾಸಿಕಪರ್ವ, ಮೌಸಲಪರ್ವ, ಮಹಾಪ್ರಾಸ್ಥಾನಿಕಪರ್ವ, ಸ್ವರ್ಗಾರೋಹಣಪರ್ವ ಸೇರಿದಂತೆ ಒಟ್ಟು ಹದಿನೆಂಟು ಪರ್ವಗಳಿವೆ. ಶಕುಂತಲೆ, ಯಯಾತಿ, ರಾಮೋಪಾಖ್ಯಾನ ಸೇರಿದಂತೆ ಒಟ್ಟು ಮೂರು ಅನುಬಂಧ (ಉಪಖ್ಯಾನ) ಇವೆ.
ಒಂದೊಂದು ಪರ್ವವನ್ನು ಓದಿ ಮುಗಿಸುತ್ತಾ ಬಂದಂತೆ ನಮ್ಮೆದುರು ನಾವೇ ಬೆತ್ತಲಾಗುತ್ತಾ ಬರುತ್ತೇವೆ. ಹಾಗೆ ಬೆತ್ತಲಾಗದ ಹೊರತು ಮಹಾಭಾರತ - ಕೇವಲ ಪುರಾಣವೆಂದುಕೊಂಡರೆ - ಸುಮ್ಮನೆ ಓದಿದಂತೆಯೇ ಸರಿ. ಶಕ್ತಿ, ಬುದ್ಧಿ ಮತ್ತು ಸಮಯ ವ್ಯರ್ಥವಾದಂತೆ. ನಮ್ಮಲ್ಲಿರುವ ಅಳುಕು, ಆಸೆ, ಆಕಾಂಕ್ಷೆ, ಹಿಂಸೆ, ಕ್ರೌರ್ಯ, ಮೋಸ, ವಂಚನೆ, ಬಲಹೀನತೆ, ಲೋಭ, ಮದ, ಮಾತ್ಸರ್ಯ, ದೌರ್ಬಲ್ಯ ತೀಕ್ಷ್ಣವಾಗಿ ಕರಗಬೇಕು. ಸತ್ಯದರ್ಶನ, ಬೆಳೆಕಿನೆಡೆ ಸಾಗುವ ದಾರಿ ನಮ್ಮೆದುರು ತೆರೆಯುತ್ತಾ ಹೋಗಿ, ಜ್ಞಾನ ಮಾರ್ಗ, ಮುಕ್ತಿ ಮಾರ್ಗ ನಮಗೂ ಇದೆ ಎಂದೆನಿಸಬೇಕು. ಮಹಾಭಾರತವು ಬಗೆದು ಕೊಡುವ ಬಿಡುಗಡೆ ನಮ್ಮನ್ನು ಬೆಳಕಿನೆಡೆ ಕೊಂಡೊಯ್ದು ಜೀವನದಲ್ಲಿ ನಮಗೆ ನಂಬಿಕೆ ಬರುವಂತಾಗಬೇಕು. ನಶ್ವರತೆಯಿಂದ ಈಶ್ವರನೆಡೆ ಮನಸ್ಸು ಸ್ಥಾಯಿಕಠೋರತೆಯಂತಾಗಿಸಬೇಕು. ಇದೇನೂ ಆಗದಿದ್ದರೂ at least, ಒಂಚೂರು ಸ್ವಾಸ್ಥ್ಯ ಬದಲಾವಣೆ ನಮ್ಮಲ್ಲಿ ಆಗಲೇಬೇಕು. ಆಗ ಬರೆದಿದ್ದಕ್ಕೂ, ಓದಿದ್ದಕ್ಕೂ ಸಾರ್ಥಕತೆ.
ನಮ್ಮಲ್ಲಿರುವ ಋಣಾತ್ಮಕ ಅಂಶವನ್ನು ಕರಗಿಸಬಲ್ಲ ತಾಕತ್ತು, ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯಬಲ್ಲ ಶಕ್ತಿ, ಅಜ್ಞಾನದ ಕೂಪದಿಂದ ಮೇಲೆತ್ತಬಲ್ಲ ತೇಜಸ್ಸು ಮಹಾಭಾರತಕ್ಕಿದೆ.
ಇಂತಹ ಮಹಾನ್ ಸೃಷ್ಟಿಯನ್ನು ಅವರವರಿಗೆ ಲಭ್ಯವಿರುವ ಜ್ಞಾನ ಮತ್ತು ಅನುಭವ ಪ್ರಮಾಣಕ್ಕೆ ತಕ್ಕಂತೆ ಕಂಡುಕೊಳ್ಳಬಹುದು. ಆದರೆ ಅದನ್ನು ಸಂಪೂರ್ಣ ಅರ್ಥಮಾಡಿಕೊಂಡೆ ಎನ್ನುವುದು - ಆಗದ ಮಾತು. ಹೀಗಿರುವಾಗ ಅದನ್ನು ವಿಮರ್ಶಿಸುವ ಕ್ಷಾತ್ರವಾಗಲಿ, ಬುದ್ಧಿಯಾಗಲಿ ನನಗೆಲ್ಲಿಯದು? ಇದು ಕೇವಲ ಕ್ರಿಮಿಗಾತ್ರದ ಅಭಿಪ್ರಾಯವಷ್ಟೇ. ನನಗೆ ಎಲ್ಲ ತಿಳಿದಿದೆ ಎನ್ನುವುದಕ್ಕಿಂತ ನನಗೇನೂ ನನಗೇನೂ ತಿಳಿದಿಲ್ಲ ಅನ್ನುವುದು ಹೆಚ್ಚು ಸೂಕ್ತ. ಈ ಭಾವನೆಯನ್ನು ಮಹಾಭಾರತ ಮೂಡಿಸದೇ ಇರದು. ಅನಂತತೆಯನ್ನು ಅರಗಿಸಿಕೊಂಡೆ ಎನ್ನಬಾರದು, ಅದರಲ್ಲಿ ಲೀನವಾಗುವ ಪ್ರಯತ್ನವಷ್ಟೇ ಮಾಡಬೇಕು.
ಸುಮಾರು 396ದಷ್ಟು ಪುಟಗಳಿರುವ ಈ ಬೃಹತ್ತ್ ಗ್ರಂಥವನ್ನು ಪ್ರಕಟಿಸಿದರು ಕನ್ನಡ ಪುಸ್ತಕ ಪ್ರಾಧಿಕಾರ.
ಪುಸ್ತಕದ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿ.
* ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾದ ಎ. ಆರ್. ಕೃಷ್ಣಶಾಸ್ತಿಗಳು ಇದನ್ನು ರಚಿಸಿದುದು 1950 ರಲ್ಲಿ. ಆಗಿನ ಸಾಧಾರಣ ಪ್ರತಿ ಬೆಲೆ ಐದು ರೂಪಾಯಿ, ಉತ್ತಮ ಪ್ರತಿ ಆರು ರೂಪಾಯಿ ಆಗಿತ್ತು.
* ಇದು ಹನ್ನೊಂದು ಬಾರಿ ಮರುಮುದ್ರಣಗೊಂಡಿದೆ.
* ಮೊದಲ ಕೆಲವು ಆವೃತ್ತಿಯಲ್ಲಿ ಸುಮಾರು ಇದು ಐನೂರು ಪುಟಗಳಷ್ಟಿತ್ತು, ಅಕ್ಷರ ಚಿಕ್ಕದು ಮಾಡಿ 396 ಪುಟಕ್ಕೆ ಇಳಿಸಲಾಯಿತು.
* ಈ ಗ್ರಂಥ ರಚನೆಯ ಉದ್ದೇಶ ಮಹಾಭಾರತದ ಸಮಗ್ರ ಕಥೆ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗಬೇಕು ಮತ್ತು ಬೆಲೆ ಕೈಗೆಟುವಂತಿರಬೇಕು ಎಂದು.
* 1946ರಲ್ಲಿ ಅಧ್ಯಾಪಕ ವೃತ್ತಿಯಿಂದ ನಿವೃತ್ತರಾದ ಮೇಲೆ, ಮುಖ್ಯವಾಗಿ ತಮ್ಮ ಮೂರನೇ ಮಗಳ ಸಾವಿನ ನೋವಿನಿಂದ ಹೊರಬರಲು ಕೃಷ್ಣಶಾಸ್ತ್ರಿಗಳು ಈ ಗ್ರಂಥ ರಚನೆಯಲ್ಲಿ ತೊಡಗಿದರು.
* ಅವರು ದಿನಕ್ಕೆ ಹದಿನಾರು ಪುಟದಷ್ಟು ವಚನ ಭಾರತವನ್ನು ಬರೆದು ಮುಗಿಸುತ್ತಿದ್ದರು. ಬರೆದ ನಂತರ ತಮ್ಮ ಮಕ್ಕಳಿಗೆ ಅದನ್ನು ಕೊಟ್ಟು ಅವರಿಂದಲೇ ಓದಿಸಿ, ಅವರಿಗೆ ಅರ್ಥವಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುತ್ತಿದ್ದರು. ಏಕೆಂದರೆ ತಮ್ಮ ಮಕ್ಕಳಿಗೇ ಅರ್ಥವಾಗದ್ದು ಜನ ಸಾಮಾನ್ಯರಿಗೆ ಹೇಗೆ ಅರ್ಥವಾದೀತು ಎನ್ನುವ ಎಚ್ಚರದಿಂದ.
* ಪ್ರತಿಯೊಂದು ಪರ್ವ ಬರೆದು ಮುಗಿಸಿದಾಗಲೂ ತಮ್ಮ ಮನೆಯಲ್ಲಿ ಪೂಜೆ ಏರ್ಪಡಿಸಿ ಭಗವಂತನಿಗೆ ನಮಿಸುತ್ತಿದ್ದರು.
* ಇದನ್ನು ಬರೆಯಲು ಅವರು ತೆಗೆದುಕೊಂಡ ಸಮಯಾವಕಾಶ ಸತತ ಆರು ತಿಂಗಳು.
* ಒಂದೇ ಸಲಕ್ಕೆ ಬರೆಯುತ್ತಿದ್ದರು. ನೀಟ್ ಕಾಪಿ, ರಫ್ ಕಾಪಿ ಎನ್ನುವುದೇ ಇರುತ್ತಿರಲಿಲ್ಲ. ಏನು ಬರೆದರೂ ಒಂದು ಚಿತ್ತಿಲ್ಲ, ಕಾಟಿಲ್ಲ, ಹಾಗೆ ಬರೆಯುತ್ತಿದ್ದರು.
* ಕೃಷ್ಣಶಾಸ್ತ್ರಿಗಳ ಅರವತ್ತನೆಯ ವರ್ಧಂತಿಗೆ ಪುಸ್ತಕ ಸಿದ್ಧವಾಯಿತು. ಅಚ್ಚಾಗಿ ಬಂದ 108 ಪ್ರತಿಗಳನ್ನು ಮೊದಲು ಪೂಜಿಸಿ, 108 ಜನಕ್ಕೆ ಚಿರೋಟಿ ಊಟ ಹಾಕಿಸಿ, 108 ಪ್ರತಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದು ಅವರು ಮಾಡಿಕೊಂಡ ಷಷ್ಠಿ ಪೂರ್ತಿ ಶಾಂತಿ.
ನಮಸ್ಕಾರ.
ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ

