Wednesday, September 23, 2015

ತನ್ನೊಳಗಿರುವ ತನತೋಫೋಬಿಯ..

ಸುಂದರ ಮಲೆನಾಡಿನ ಮಡಿಲೊಳಗಿರುವುದೇ ನನ್ನ ಈ  - ಬಾಳೇಬೀಡು. ಹೆಸರಿಗೆ ತಕ್ಕಂತೆ ಹಳ್ಳಿಯ ರೈತರೆಲ್ಲ ಹೆಚ್ಚಾಗಿ ಬಾಳೇತೋಟ ಹೊಂದಿರುವುದರಿಂದ ಮತ್ತು ನಮ್ಮ ಹಳ್ಳಿಯಲ್ಲಿ ಸಿಗುವಂಥ ಬಾಳೇಹಣ್ಣು ಪ್ರಸಿಧ್ಧಿಯಾಗಿರುವುದರಿಂದ ಹಳ್ಳಿಗೆ ಬಾಳೇಬೀಡು ಎಂಬ ಹೆರಸು ಬಂದಿತು.
ಎಲ್ಲರಂತೆ ನನ್ನ ತಂದೆ ಕೂಡ ಕೃಷಿಕರು. ಬಾಳೇ ತೋಟ, ಜೊತೆಗೊಂದಿಷ್ಟು ಅಡಿಕೆ ಮರ, ಮನೆಗೆ ಸಾಕು ಬೇಕಾಗುವಷ್ಟು ಬೆಳೆಯುವ ತರಕಾರಿ ಕೈದೋಟ ಇದೆ. ಹಿಂದಿನಿಂದಲೂ ಬಂದ ಸಂಪ್ರದಾಯದಂತೆ, ಮನೆಗೆ ದೊಡ್ಡ ಮಗನಾದ ನನ್ನಪ್ಪನು ತಾತನ ಆಣತಿಯಂತೆ ಡಿಗ್ರಿ ಮುಗಿದಿದ್ದರು ಕೆಲಸಕ್ಕೆ ಹೋಗದಂತೆ ವ್ಯವಸಾಯದಲ್ಲಿ ತೊಡಗಿಸಿಕೊಂಡು ತನ್ನ ತಮ್ಮಂದಿರನ್ನು ಅವರಿಷ್ಟದಂತೆ ಓದಿಸಿ ಕೆಲಸಕ್ಕೆ ಸೇರಿಸಿದ್ದರು. ನನ್ನ ಇಬ್ಬರು ಚಿಕ್ಕಪ್ಪಂದಿರು ಒಳ್ಳೊಳ್ಳೆ ಹುದ್ದೆಗಳಲ್ಲಿದ್ದಾರೆ. ನನ್ನಪ್ಪನೇ ಅವರಂತೆ ಕೆಲಸಕ್ಕೆ ಹೋಗದೆ ಹೀಗೆ ತಾತ ನೆಟ್ಟ ಮರಕ್ಕೆ ಜೋತುಬಿದ್ದಿರುವುದು. ಹೀಗಂತ ಅಪ್ಪನಿಗೂ ಬಹಳಷ್ಟು ಸಲ ಅನಿಸಿದ್ದಿದೆ, ಆದರೆ ಯಾರ ಬಳಿಯೂ ಬಾಯಿ ಬಿಟ್ಟು ಹೇಳುವುದಿಲ್ಲ, ಎಂದಿಗೂ ಬೇಜಾರು ಮಾಡಿಕೊಂಡಿಲ್ಲ. 

ಯಾಕೆಂದರೆ ತಾನು ಕಂಡ ಕನಸು ನನ್ನ  ಮುದ್ದು ಮಗಳ ಮುಖಾಂತರ ನೆರವೇರಿಸಿಕೊಂಡರಾಯ್ತು ಬಿಡು ಎಂಬುದು ಅಪ್ಪನ ಲೆಕ್ಕಾಚಾರ! ನಾನೇ ಆತನ ಮುದ್ದಿನ ಮಗಳು, ಹೆಸರು ಪೂರ್ವಿಕ. ನಾನು ನಾಲ್ಕನೆ ಈಯತ್ತೆಯಲ್ಲಿ ಓದುತ್ತಿದ್ದೇನೆ. ನಮ್ಮ ಮನೆಯಲ್ಲಿ ಅಜ್ಜ ಅಪ್ಪ ಅಮ್ಮ ಮತ್ತು ಎಲ್ಲರ ಮುದ್ದಿನ ಕೂಸಾದ ನಾನು ಬಹಳ ಸಂತೋಷದಿಂದ ಇದ್ದೀವಿ.

ನನ್ನ ಕೆಲಸವೇನೆಂದರೆ ಅಲ್ಲಲ್ಲ! ಆದ್ಯ ಕರ್ತವ್ಯ ಏನೆಂದರೆ ಅಪ್ಪ ಹೇಳಿದಂತೆ ಒಂದು ದಿನವೂ ತಪ್ಪಿಸದೆ ಶಾಲೆಗೆ ಹೋಗುವುದು, ಅಲ್ಲಿ ಹೇಳಿಕೊಟ್ಟಿದ್ದನ್ನ ಚಾಚೂತಪ್ಪದೆ ಕಲಿತು, ಪರೀಕ್ಷೆಯಲ್ಲಿ ಪಾಸಾಗುವುದು. ಹಾಗೆ ಮುಂದೆ ಓದಿ ದೊಡ್ಡವಳಾಗಿ ಒಂದೊಳ್ಳೆ ಕೆಲಸಕ್ಕೆ ಸೇರಿ ನನ್ನ ಕಾಲ ಮೇಲೆ ನಿಂತ ನಂತರದ ಒಂದೆರಡು ವರ್ಷದಲ್ಲಿ ಮದುವೆ, ಆಮೇಲೆ ಸಂಸಾರ, ಮಕ್ಕಳು.....ಅಪ್ಪನ ಆಸೆ ಒಂದೆರಡಲ್ಲ !! ಎಲ್ಲ ಸರಿ, ಆದರೆ ಶಾಲೆಗೆ ಹೋಗುವುದೇ ತಲೆನೋವು. ಪ್ರತಿ ದಿನ ಹಾಯಿ ದೋಣಿಯಲ್ಲಿ ಕುಳಿತು ನದಿ ದಾಟಿ, ಅಲ್ಲಿಂದ ಮುಕ್ಕಾಲು ಘಂಟೆ ಕಾಡಿನ ಥರ ಆದರೆ ಕಾಡಲ್ಲದ ರಸ್ತೆಯಲ್ಲಿ ಹಾದಿ ಸವೆಸಿದರೆ ಒಕ್ಕೋಡಿಯಲ್ಲಿರುವುದೆ ನಮ್ಮ ಶಾಲೆ.

ಶಾಲೆಗೆ ಹೋಗುವ  ಹಾದಿಯಲ್ಲಿ ಸಿಗುವ ಮಾವಿನ ಮರಕ್ಕೆ ಕಲ್ಲು ಹೊಡೆಯೋದು, ಹುಣಸೇಹಣ್ಣು ಉದುರಿಸೋದು,  ಒಬ್ಬರಿಗೊಬ್ಬರು ಹೊಡೆಯುತ್ತಾ, ಹಾಡುತ್ತಾ, ನಗಾಡುತ್ತಾ,  ಕುಂಟೆ ಬಿಲ್ಲೆ ಆಡುತ್ತಾ,  ಅಜ್ಜ ಹೇಳಿದ ಕಥೆ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ ಹೋಗುತ್ತಿದ್ದರೆ ದಾರಿ ಸವೆದದ್ದೇ ಗೊತ್ತಾಗುತ್ತಿರಲಿಲ್ಲ. ಶಾಲೆಗೆ ಖುಷಿ ಖುಷಿಯಾಗಿ ಹೋಗಲು ನಮಗಿದ್ದ ಏಕೈಕ ಕಾರಣವೆಂದರೆ ಇದೇ. ಶಾಲೆ ಮುಗಿಸಿ ಬರುವಾಗಲು ನಮ್ಮ ತುಂಟಾಟ ನಡೆಯದೆ ಇರುತ್ತಿರಲಿಲ್ಲ.

ಸಂಜೆಯಾದರೆ ಅಪ್ಪ  ತೋಟದಿಂದ ಬರುತ್ತಿದ್ದರು. ಬರುವಾಗ ವರ್ಕಿ, ಆಮ್ ಚೂರು, ಬಾಯಿ ಬಣ್ಣ , ನಿಂಬೇಹುಳಿ, ಈಚಲಣ್ಣು, ಎಲಚಿ, ನೇರಳೆ, ಗೇರಣ್ಣು,  ಮೂಗಣ್ಣು ಮುಂತಾದವು ತರುತ್ತಿದ್ದರು. ಇವತ್ತು ಏನು ತರುವರೋ ಎಂಬ ಕುತೂಹಲವೇ ಅಪ್ಪನ ಬರುವಿಕೆ ಎದುರು ನೋಡುವಂತೆ ಮಾಡುತ್ತಿತ್ತು. ಅಮ್ಮ ಬಯಸಿದರೆ, ಅಪ್ಪ ನಮ್ಮನ್ನು ಪಕ್ಕದೂರಿನಲ್ಲಿ ನಡೆಯುತ್ತಿದ್ದ ಪೆರ್ಡೂರು ಮೇಳಕ್ಕೆ ಕರೆದುಕೊಂಡು ಹೋಗಿ ಜಾವದ ತನಕ ಯಕ್ಷಗಾನ ತೋರಿಸುತ್ತಿದ್ದರು. ನಮ್ಮ ನೆಮ್ಮದಿಗೆ ಕೊರತೆಯೇ ಇರಲಿಲ್ಲ.

ಆದರೆ ಇದ್ದಕ್ಕಿದ್ದಂತೆ ಒಂದು ದಿನ ನಡೆಯಬಾರದ್ದು ನಡೆದು ಹೋಯ್ತು !

ನನ್ನ ಮಲೆನಾಡು ನನ್ನ ಜೀವ. ಬಿಟ್ಟರೆ ಇಲ್ಲಿಯೇ ಪ್ರಾಣ ಬಿಟ್ಟೇನು ಬೇರೆಲ್ಲೂ ಮಣ್ಣಿಗೆ ಮರಳಲು ಇಷ್ಟವಿಲ್ಲ ಎನ್ನುತ್ತಿದ್ದ ಅಪ್ಪ, ಬೆಂಗಳೂರಿನಲ್ಲಿರುವ ಸಂಭಂಧಿಯೊಬ್ಬರ ಮದುವೆಗೆ ಹೋಗಿದ್ದಾಗ ಮದುವೆ ಮನೆಯಲ್ಲಿ  ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅಲ್ಲಿದ್ದ ಎಲ್ಲರೂ ಗಾಬರಿಯಾಗಿ ಅಪ್ಪನತ್ತ ಬರುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಅಪ್ಪ  ಸಾವನ್ನಪ್ಪಿದ್ದರು !!! ಮದುವೆಮನೆ ಸಾವಿನಮನೆಯಾಗಿತ್ತು.

ಇಡೀ ಹಳ್ಳಿಗೆ ಹಳ್ಳಿಯೇ ಬೆಚ್ಚಿಬಿದ್ದಿತ್ತು ಅಪ್ಪನ ಸಾವಿಗೆ . ಶೋಕಸಾಗರದಲ್ಲಿ ಮುಳುಗಿದ ನಮ್ಮನ್ನು ಅವರೆಲ್ಲರೂ ಸಂತೈಸುತ್ತಿದ್ದರು. ಅಮ್ಮ ಅಂತೂ ಸಾವಿನ ಸುದ್ದಿ ಕೇಳಿ ಮೂರ್ಚೆ ಹೋಗಿದ್ದಳು. ಅಜ್ಜನ ನೋವು ಹೇಳತೀರದು. ನನಗೆ ಅಪ್ಪ ಸತ್ತಿದ್ದಾರೆ ಎಂದನಿಸುತ್ತಲೇ ಇಲ್ಲ ; ಪ್ರಶಾಂತವಾಗಿ ವರಾಂಡದಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದಾರೆನಿಸಿತು. ಊರಿಂದ ಬಂದ ಚಿಕ್ಕಪ್ಪಂದಿರು ಮುಂದೆ ನಿಂತು ನಡೆಯಬೇಕಾದ ಕೆಲಸಕಾರ್ಯ ಮುಗಿಸಿದರು. ಎಷ್ಟು ದಿನ ಬಂಧುಗಳು, ಸ್ನೇಹಿತರು ಕೊನೆಗೆ ಚಿಕ್ಕಪ್ಪಂದಿರು ಸಾಂತ್ವಾನ ಹೇಳುತ್ತಾ ಜೊತೆಯಲ್ಲಿರುತ್ತಾರೆ? ಎಲ್ಲರು ಒಂದಲ್ಲ ಒಂದು ದಿನ ಮರಳಿ ಅವರವರ ಗೂಡಿಗೆ, ಕೆಲಸಕ್ಕೆ ಹಿಂದಿರುಗಲೇ ಬೇಕಲ್ಲ? ಎಲ್ಲರು ಹೋದ ನಂತರ ಕೊನೆಗೆ ಚಿಕ್ಕಪ್ಪಂದಿರೂ ಹೊರಡಲು ಅನುವಾದರು. ಹೊರಡುವ ಮುನ್ನಾ ವಿಷಣ್ಣ ಸ್ಥಿತಿಯಲ್ಲಿದ್ದ ಅಮ್ಮನ ಬಳಿ ಬಂದು,  " ಅತ್ತಿಗೆ ಹೋದ ಸಲ ಉಗಾದಿ ಹಬ್ಬಕ್ಕೆ ಬಂದಾಗ ಅಣ್ಣ ನಮ್ಮನ್ನು ಕರೆದು ಒಂದು ಪತ್ರ ಕೊಟ್ಟಿದ್ದ. ಏನಿದು ಪತ್ರ ಎಂದರೆ, ಸಮಯ ಬರೋವರೆಗು ಇದನ್ನ ಓದಬೇಡಿ  ಮತ್ತು ಯಾರಲ್ಲೂ ಚರ್ಚಿಸಬೇಡಿ ಅಂತ ಹೇಳಿದ್ದ. ಆತ ಹೇಳಿದ್ದ ಸಮಯವಂತೂ ಬರಲಿಲ್ಲ, ಅದಕ್ಕೆ ಈ ಪತ್ರವನ್ನೇನು ಮಾಡಬೇಕೊ ತೋಚುತ್ತಿಲ್ಲ , ನಿಮಗೆ ಕೊಡುತ್ತಿದ್ದೇವೆ " ಎಂದರು. ಪತ್ರ ತೆಗೆದುಕೊಂಡ ಅಮ್ಮ ಓದತೊಡಗಿದಳು. ಅದರಲ್ಲಿ ಹೀಗೆ ಬರೆದಿತ್ತು :

" ನನ್ನ ಪ್ರೀತಿಯ ಮುದ್ದಿನ ಪುಟಾಣಿ ಮಗಳೇ ನೀನು ನೂರು ವರ್ಷ ಸುಖವಾಗಿ ಬಾಳಬೇಕು, ಬಹಳ ನೆಮ್ಮದಿಯಿಂದ ಜೀವನ ನಡೆಸಬೇಕು. ಅದೇ ನನ್ನ ಆಸೆ. ಆದರೆ ನನಗೊಂದು ಖಾಯಿಲೆಯಿದೆ ಮಗಳೇ. ತನತೋಫೋಬಿಯ ಅಂತ. ಅಂದರೆ ತನ್ನ ಪ್ರೀತಿ ಪಾತ್ರರನ್ನು ಬಿಟ್ಟು ಎಲ್ಲಿ ಸಾಯುವೆನೋ ಎಂಬ ಭಯ, ಸಾವಿನ ಬಗ್ಗೆ ಅತೀ ಯೋಚಿಸಿದಾಗ ಉದ್ವೇಗಕ್ಕೊಳಗಾಗಿ ನಾನು ಸಾಯುತ್ತಿದ್ದೀನಿ ಇನ್ನೇನು ಸತ್ತೇ ಎನ್ನುವ ಮನಸ್ಥಿತಿ.  ನಿನ್ನನ್ನು ನೋಡಿದಾಗೆಲ್ಲ ನನ್ನ ಖುಷಿ ಇಮ್ಮಡಿಯಾಗುತ್ತಿತ್ತು, ಆಗ ನನ್ನ ಸಾವು ನನ್ನ ಕಣ್ಣೆದುರು ನಿಂತಿರುತ್ತಿತ್ತು. ಯಾರ ಬಳಿಯೂ ಇದನ್ನ ನಾನು ಹೇಳಿಕೊಂಡಿಲ್ಲ, ಹೇಳುತ್ತಲೂ ಇರಲಿಲ್ಲ. ಆದರೆ ಕಾರಣ ತಿಳಿಸದೆ ಸಾಯೋದು ನಂಗಿಷ್ಟವಿಲ್ಲ. ಎದುರು ನಿಂತು ಹೇಳಲಾಗದ್ದಕ್ಕೇ ಈ ಪತ್ರ. ನನ್ನ ಮುದ್ದಿನ ಅರಗಿಣಿ ನನ್ನನ್ನು ಕ್ಷಮಿಸು. ಪ್ರೀತಿಯ ಮಡದಿ ಅಮ್ಮು ನಿನಗಿದು ಅರ್ಥವಾದೀತೆಂದುಕೊಂಡಿದ್ದೇನೆ. ಅಪ್ಪನನ್ನು ಚೆನ್ನಾಗಿ ನೋಡಿಕೊ. ಮುಂದಿನ ಜನ್ಮದಲ್ಲಿ .... ..... ಬೇಡ ಬಿಡು. ಈ ಪತ್ರವನ್ನಿಲ್ಲಿಗೆ ಮುಗಿಸುತ್ತಿದ್ದೇನೆ. ನಾನು ಈ ಭೂಮಿ ಮೇಲೆ ಇಲ್ಲವಾದ ನಂತರವಷ್ಟೇ ಈ ಪತ್ರ ಓದತಕ್ಕದ್ದು "

ಯಾಕಾದರು ಪತ್ರ ಬರೆದಿಟ್ಟು ಹೋದರೊ ಅಪ್ಪ ! ಪತ್ರ ಓದಿ ಮುಗಿಸುತ್ತಿದ್ದಂತೆ ಅಲ್ಲಿದ್ದ ಐದಾರು ಜನ ಸಂಬಂಧಿಕರು ಸೇರಿದಂತೆ ಎಲ್ಲರ ಕಣ್ಣು ನನ್ನ ಮೇಲೇ !! ಇವಳೇ ಇವರಪ್ಪನನ್ನು ಬಲಿ ತೆಗೆದುಕೊಂಡಿದ್ದು ಎಂದು ಹೇಳುವ ಹಾಗಿತ್ತು ಅವರೆಲ್ಲರ ನೋಟ ! ಅಪ್ಪ ಯಾಕಾದರು ಪತ್ರ ಬರೆದಿದ್ದರೋ ? ಅಪ್ಪನ ಸಾವಿಗೆ ನಾನು ಕಾರಣವಾದೆನಾ? ಹಾಗಂತ ನನಗೇ ಅನ್ನಿಸತೊಡಗಿತು.

   ಹೌದು, ಹಾಗೆ ಅನ್ನಿಸಲು ಶುರುವಾಗಿ ಇಂದಿಗೆ ಹದಿನೆಂಟು ವರ್ಷಗಳೇ ಕಳೆದಿವೆ ! ಕಾಲಾನಂತರ ಎಲ್ಲರೂ ಇದನ್ನ ಮರೆತರು, ಮೊದಲಿನ ಸಾಮಾನ್ಯ ಸ್ಥಿತಿಗೆ ಮರಳಿದರು. ಆದರೆ ನನ್ನಿಂದ ಮಾತ್ರ ಮರೆಯಲಾಗಿಲಲ್ಲ , ಅಪ್ಪನ ಆಸೆಯಂತೆ ಓದಿ ಕೆಲಸಕ್ಕೆ ಸೇರಿ ಮದುವೆಯಾಗಿ ಮಕ್ಕಳಾಗಿ ಗಂಡ ಮಕ್ಕಳ ಜೊತೆ ನೆಮ್ಮದಿಯಿಂದಿದ್ದರೂ !

ಈಗಲೂ ನನ್ನಪ್ಪ ನನ್ನ ಜೊತೆ ಸದಾಕಾಲ ಇದ್ದಾರೆನಿಸುತ್ತದೆ ಮತ್ತು ಈಗೀಗ ಈ ಭಾವನೆ ತೀವ್ರವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ, ಮೊನ್ನೆ ನನ್ನ ಮಕ್ಕಳು ಅಂಗಳದಲ್ಲಿ ಆಡುತ್ತಿದ್ದರೆ ಎದುರಿಗೆ ಅಪ್ಪ ಪ್ರತ್ಯಕ್ಷವಾಗಿ ಬಂದು ಎದುರು ನಿಂತತಾಯ್ತು ಮತ್ತು ಅಪ್ಪನ ಕಂಡ ನನ್ನ ಕಣ್ಣುಗಳು ಅತೀವ ಸಂತಸದಿಂದ ರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ಅಪ್ಪ ನಿಂತಿದ್ದ ಜಾಗದಲ್ಲಿ ನನ್ನ ಮಕ್ಕಳು ಮರು ಸ್ಥಾಪಿತರಾಗಿ ಆಡುತ್ತಿದ್ದರು , ಅಪ್ಪ ಅಲ್ಲಿಂದ ಮಾಯವಾಗಿದ್ದ ! ನಿಜವೊ ಸುಳ್ಳೊ, ಕನಸೊ ನನಸೊ ? ತರ್ಕ ಬೇಕಿಲ್ಲ. ಆದರೆ ಅಪ್ಪ ನಿಂತಿದ್ದು , ನನ್ನ ನೋಡಿ ನಕ್ಕಿದ್ದು ಮಾತ್ರ ಸುಳ್ಳಲ್ಲ.
ಅಪ್ಪ ನನ್ನನ್ನು ಮೊದಲಿಗಿಂತಲೂ ಹೆಚ್ಚಾಗಿ ಆವರಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ನನ್ನ ಮಕ್ಕಳನ್ನು ಕಂಡರೆ ನನ್ನಪ್ಪನಿಗಾಗುತ್ತಿದ್ದಂತೆ ನನಗೂ ಖುಷಿ ಇಮ್ಮಡಿಯಾಗಿ ಮನಸ್ಸು ಉದ್ವೇಗಕ್ಕೆ ಬೀಳುತ್ತಿದೆ ! ಮತ್ತು ಅದೇನದು ಅಪ್ಪ ಹೇಳಿದ್ದ ಖಾಯಿಲೆ  ತನತೋಫೋಬಿಯ ಅಲ್ವಾ ? ಅದೀಗ ನನಗೆ ಸ್ವಲ್ಪ ಸ್ವಲ್ಪವೇ ಅರ್ಥವಾಗತೊಡಗಿದೆ. ಹೆಚ್ಚಾಗಿ ಮಲೆನಾಡ ಮಣ್ಣಿನ ವಾಸನೆ ಮೂಗಿಗೆಡರತೊಡಗಿದೆ. 

ನನ್ನ ಕೈ ಹಾಗು ಮನಸ್ಸು ಎಷ್ಟು ಬೇಡವೆಂದುಕೊಂಡರೂ ಹತೋಟಿಗೆ ಬರುತ್ತಿಲ್ಲ ; ಸದಾ ಕಾಲ ಪೆನ್ನು ಮತ್ತು ಬಿಳೀ ಹಾಳೆಗಾಗಿ ಹುಡುಕುತ್ತಿರುತ್ತದೆ - ನನ್ನ ಮಕ್ಕಳಿಗೆ ಪತ್ರ ಬರೆಯಲು...

ಪತ್ರ ಬರೆಯುವೆನಾ ???

.................................................
ಮೋಹನ್ ಕುಮಾರ್ ಡಿ ಎನ್ 
ನಿರೀಕ್ಷಣೆ.. 

ಕಾವೇರಿಯಮ್ಮನವರು ಉತ್ತರಿ ಹಬ್ಬದ ಮಾರನೆ ದಿನ ನಡೆಯುವ ಶ್ರೀ ಭಗಂಡೇಶ್ವರ ದೇವಸ್ಥಾನದಲ್ಲಿ ಯಜಮಾನರಾದ ಸುಬೇದಾರ್ ಉತ್ತಯ್ಯರ ಜೊತೆ ಅವರ ಜೀವದ ಗೆಳೆಯ ಬೆಳ್ಳಿಯಪ್ಪ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮ್ಮಕ್ಕೆ ಒಲ್ಲದ ಮನಸ್ಸಿನಿಂದ ಹೊರಟರು. ನಿಜ ಹೇಳಬೇಕೆಂದರೆ ಇಬ್ಬರಿಗು ಕಾರ್ಯಕ್ರಮಕ್ಕೆ ಹೋಗುವುದು ಇಷ್ಟವಿರಲಿಲ್ಲ. ಸ್ನೇಹಕ್ಕೆ ಕಟ್ಟುಬಿದ್ದು ಹೊರಡಲೇ ಬೇಕಾಯ್ತು. 


ದಂಪತಿಗಳಿಬ್ಬರು ಬಹುಶಃ ನೆಮ್ಮದಿಯಾಗೇ ಹೋಗುತ್ತಿದ್ದರೇನೋ? ಆದರೆ ನೆಮ್ಮದಿಯಾಗಿ ಹೋಗದ ಹಾಗೆ ಮಾಡಿದ್ದು ಒಂದು ಫೋನ್ ಕಾಲ್!


"ಗಡಿಯಲ್ಲಿ ಇಂಡೋ - ಸೈನಾ ಯುಧ್ಧ ಶುರುವಾಗಿದೆ ಮತ್ತು ನಿಮ್ಮ ಮಗನಿಗೆ ಮಂಜೂರಾಗಿದ್ದ ರಜಾ ರದ್ದಾಗಿ ಆತ ಯುಧ್ಧದಲ್ಲಿ ಪಾಲ್ಗೊಳ್ಳುತ್ತಿದ್ದಾನೆ"
ಇದೇ ಯೋಚನೆಯಲ್ಲಿ ದೇವಸ್ಥಾನಕ್ಕೆ ಹೊಗುವಾಗ ಇಬ್ಬರೂ ಯೋಚಿಸುತ್ತಿದ್ದುದು : "ಮಗ ಕ್ಯಾವಲ್ಲರಿ ವಿಭಾಗದ ಹಿರಿಯ ಅಧಿಕಾರಿ. ಅವನ ಕೈ ಕೆಳಗೆ 30 - 40 ಜನ ಕಿರಿಯ ಸಿಪಾಯಿಗಳು ಕೆಲಸ ಮಾಡುತ್ತಾರೆ. ಜೊತೆಗೆ ಹಿರಿಯ ಅಧಿಕಾರಿಯಾದ್ದರಿಂದ, ಹೊಸದಾಗಿ ಸೇನೆಗೆ ಸೇರುವರಿಗೆ ಅಡೀಷನಲ್ ಟ್ರೈನಿಂಗ್ ಬೇರೆ ಕೊಡಬೇಕು. ಹೀಗಾಗಿ ಬೇರೆಯವರಿಗೆ ಸಿಗುವಷ್ಟು ಸುಲಭವಲ್ಲ ಮಗನಿಗೆ ರಜೆ ಸಿಗೋದು. ಆದರೂ ಹರಸಾಹಸ ಮಾಡಿ ಒಂದು ತಿಂಗಳ ಮಟ್ಟಿಗೆ ರಜೆ ಮಂಜೂರು ಮಾಡಿಸಿಕೊಂಡು ಊರಿಗೆ ಬರುತ್ತಿದ್ದಾನೆ. ಈ ಸಲ ಬಂದರೆ ಮದುವೆ ಮಾಡಿ ಕಳಿಸಬೇಕೆಂದು ತೀರ್ಮಾನಿಸಿ ಹೆಣ್ಣು ನೋಡಿ, ಎಲ್ಲಾ ಮಾತುಕಥೆಯಾಗಿ, ಅವನೂ ಒಪ್ಪಿ,  ಈಗಾಗಲೆ ಮದುವೆ ಕಾರ್ಯಗಳು ಶುರುವಾಗಿವೆ. ಅಷ್ಟರಲ್ಲಿ ಇದೆಲ್ಲಿಂದ ಬಂತು ಈ ಯುಧ್ಧವೆಂಬ ಮಹಾಮಾರಿ" ??


ಒಬ್ಬ ಸೈನಿಕನ ತಂದೆತಾಯಿಯ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ. ಸದಾಕಾಲ ಮಗನ ಚಿಂತೆಯಲ್ಲಿರುತ್ತಾರೆ, ಆತನ ಒಂದು ಪತ್ರಕ್ಕೆ ವರ್ಷ ವರ್ಷ ಕಾಯುತ್ತಾರೆ, ಫೋನ್ ಬಂದರೆ ಅವರಿಗವತ್ತೇ ಹಬ್ಬ. ಅನುಭವಿಸಿದವರಿಗೇನೆ ಗೊತ್ತು ಅದರ ವೇದನೆ. ಮಕ್ಕಳನ್ನು ಭದ್ರವಾಗಿ ಮನೆಯಲ್ಲಿಟ್ಟು ಸಾಕಿ ಜೋಪಾನ ಮಾಡುವರಿಗೆ ಉಹುಂ ಖಂಡಿತ ಇದೆಲ್ಲ ಅರ್ಥವಾಗಲ್ಲ. ಸತ್ತರೆ ವೀರ ಸ್ವರ್ಗ, ದೇಶಕ್ಕೆ ಅರ್ಪಿಸಿದೆವೆಂಬ ನೆಮ್ಮದಿ - ಎರಡೇ ಆ ಸೈನಿಕರ ತಂದೆತಾಯಿಯರಲ್ಲಿ ಉಳಿಯೋದು.


ದೇವಸ್ಥಾನದಲ್ಲಿ ಪೂಜೆ ಶುರುವಾಯಿತು. ಇಬ್ಬರಿಗೂ ಮನಃಪೂರ್ತಿ ಭಾಗವಹಿಸಲಾಗುತ್ತಿಲ್ಲ. ಭಗಂಡೇಶ್ವರನ ಮುಂದೆ ನಿಂತ ಅವರಿಬ್ಬರದು ಒಂದೇ ಪ್ರಾರ್ಥನೆ : " ಮಗ ಯುಧ್ಧದಲ್ಲಿ ಗೆದ್ದು ಬರಲಿ. ಒಂದು ಪಕ್ಷ ಬರಲಾಗದಿದ್ದರೆ,  ಕೊನೆಪಕ್ಷ ತಾಯಿ ಭಾರತಿ ಸೋಲದಿರಲಿ"
ಎಷ್ಟು ತಂದೆತಾಯಿಗಿರುತ್ತದೆ ಈ ಮನೋಸ್ಥೈರ್ಯ!!!


ಆದರೆ ಅಲ್ಲಿ ಯುಧ್ಧಭೂಮಿಯಲ್ಲಿ ಒಂದೂವರೆ ತಿಂಗಳಾಗುತ್ತ ಬಂದಿದ್ದರು, ದಿಟ್ಟ ನಿರ್ಧಾರ, ಮುಂಜಾಗ್ರತ ಕ್ರಮ ಕೈಗೊಳ್ಳದ ನಾಲಾಯಕ್ ನೆಹರು ಸರ್ಕಾರದಿಂದ ಮತ್ತು ಚೀನಿಯರ ಕುತಂತ್ರ ಬುದ್ದಿಯಿಂದ ಗಡಿಯಲ್ಲಿ ನಮ್ಮ ಸೈನಿಕರ ಸಾಲು ಸಾಲು ಹೆಣ ಬೀಳುತ್ತಿದ್ದವು. ಸತ್ತವರಿಗೆ ಲೆಕ್ಕವಿಟ್ಟವರು ಯಾರು? ಅದರಲ್ಲಿ  ನಮ್ಮ ಕಾವೇರಿಯಮ್ಮ ಉತ್ತಯ್ಯನವರ ಮಗನೂ ಇರಬಹುದು!!


ಇತ್ತಕಡೆ ಕಾಲ ಸ್ತಂಭಿಸುತ್ತಿಲ್ಲ.  ಈ ತಂದೆತಾಯಿ ಕ್ಷಣವನ್ನು ಯುಗದಂತೆ ಕಳೆಯುತ್ತಿದ್ದಾರೆ. ಯುಧ್ಧ ಶುರುವಾಗಿ ಎರಡು ಎರಡೂವರೆ ತಿಂಗಳಾಗುತ್ತಾ ಬಂದಿದೆ. ಆದರೆ ಈಗ ಯುಧ್ಧದ ಮಾತಿಲ್ಲ. ಎಲ್ಲಾ ಮೊದಲಿನಂತೆ  ಪರಿಸ್ಥಿತಿ ತಣ್ಣಗಿದೆ. ಇನ್ನೊಂದೆರಡು ತಿಂಗಳು ಕಳೆದರೆ ಜನ ಯುಧ್ಧವನ್ನೆ ಮರೆತುಬಿಡಬಹುದು. ಆದರೆ ನಾವು ಮಗನನ್ನು ಮರೆಯಲಾದೀತೆ? ಹೇಗೆ ಸಾಧ್ಯ! ಯುಧ್ಧ ಶುರುವಿಗು ಮುಂಚೆ ಮಗನ ಬಗ್ಗೆ ಸೇನೆಯಿಂದ ಮಾಹಿತಿ ಬಂದದ್ದಷ್ಟೆ, ಇವತ್ತಿಗು ಈ ಕ್ಷಣಕ್ಕೂ ಬದುಕಿದ್ದಾನೊ ಸತ್ತಿದ್ದಾನೊ ಗೊತ್ತಿಲ್ಲ. ಸೇನೆಯಿಂದಲು ಯಾವುದೇ ಮಾಹಿತಿಯಿಲ್ಲ. ಇದ್ದೊಬ್ಬ ಮಗನನ್ನ ದೇಶಕ್ಕೆ ಅರ್ಪಿಸಿದೆವು, ಮಗ ಮರಳಿ ಬರುವುದಿಲ್ಲ ಎಂದು ಇಬ್ಬರು ಕಣ್ಣೀರಿಡಲಾರಂಬಿಸಿದ ಎರಡು ಮೂರು ದಿನಕ್ಕೆ ಸರಿಯಾಗಿ ಯಾರೋ ಬಾಗಿಲಲ್ಲಿ ನಿಂತು ಕೂಗಿದಂತಾಯ್ತು,


" ಅಮ್ಮಾ!!!"


ತಾಯಿ ಭಾರತಿ ಕೊನೆಗೂ ಗೆದ್ದಿದ್ದಳು.


...........................................................
ಮೋಹನ್ ಕುಮಾರ್ ಡಿ ಎನ್
ಅಪ್ಪ ಚುಕ್ಕಿಯಾಗಿದ್ದಾನೆ..

ನನಗೆ ಚಿತ್ರವಿಚಿತ್ರದ ಪ್ರಾಣಿಗಳು ಕಾಣಿಸುತ್ತಿದ್ದವು, ಬಗೆ ಬಗೆಯ ರಾಕ್ಷಸ ಬರುತ್ತಿದ್ದ, ನೋಡನೋಡುತ್ತಲೇ ಅವನ ಆಕಾರ ಬದಲಾಗಿ ಬೇರೆ ರೂಪಾಂತರ ಪಡೆಯುತ್ತಿದ್ದ. ವಯಸ್ಸಾದ  ಹೆಸರೇ ಇಲ್ಲದ ದೊಡ್ಡ ಮರದಂತೆ,  ಮರದ ರೆಂಬೆಕೊಂಬೆಗಳಂತೆ,  ಯಾರೋ ಬರೆದಿಟ್ಟ ಕ್ಯಾನ್ವಾಸಿನಂತೆ, ವೃತ್ತಗಳು ಹಲವು ವೃತ್ತಗಳಾಗಿ ವಿಂಗಡಣೆಗಳಾಗಿ, ಆ ವೃತ್ತಗಳೇ ತಮ್ಮ ಇನ್ನೊಂದು ವೃತ್ತ ಗೆಳೆಯರೊಡಗೂಡಿ ಕರಗಿದಂತೆ, ಆಕಾಶದಲ್ಲಿನ ತರತರದ ಚಿತ್ರದಂತೆ, ಕನಸಲ್ಲಿ ಕಂಡ ಅಸ್ಪಷ್ಟ ವರ್ತುಲದಂತೆ, ಅರ್ಥವೇ ಆಗದ ಭೂಪಟದಂತೆ,  ಮಗುವನ್ನೆತ್ತಿ ತಾಯಿ ಆಡಿಸಿದಂತೆ, ಚಿರತೆ ಜಿಂಕೇನ ಬೇಟೆಯಾಡುವಂತೆ, ಒಬ್ಬರನ್ನೊಬ್ಬರು ಹಿಂಬಾಲಿಸುವಂತೆ, ಉದುರಿ ಬೀಳುತ್ತಿರೊ ಎಲೆ ರಾಶಿಯಂತೆ, ಚಿಟ್ಟೆಗಳ ಕಲರವದಂತೆ, ಜೇನ್ನೊಣಗಳ ಗೂಡಿನಂತೆ, ಸಂತೆಗೆ ಜನ ನಿಂತಂತೆ, ನಿಂತವರು ನಮ್ಮವರಲ್ಲದವರಂತೆ.....

ಹೀಗೆ ನನ್ನ ಕಲ್ಪನಾ ಲೋಕಕ್ಕೆ ಎಲ್ಲಾ ಕಾಣುಸುತ್ತಿದ್ದುದು, ನನ್ನಪ್ಪ ತನ್ನ ತೊಡೆಯ ಮೇಲೆ ನನ್ನ ಕೂಡಿಸುಕೋಡು ಸೇದಿ ಬಿಡುತ್ತಿದ್ದ ಸಲಾಮತ್ ಬೀಡಿಯ ಹೊಗೆಯಲ್ಲಿ!

ಹೀಗೆ ಒಂದು ದಿನ ಅಪ್ಪ  ಸೇದಿ ಬಿಡುತ್ತಿದ್ದ ಹೊಗೆಯನ್ನೇ ನೋಡುತ್ತಾ ಅಪ್ಪ ಹೇಳುತ್ತಿದ್ದ ಕಥೆಯಲ್ಲಿ ವಿಹರಿಸಿ ನನ್ನ ಕಲ್ಪನಾ ಲೋಕದೊಳಗೆ ಮುಳುಗಿದ್ದ ನನ್ನನ್ನು ಎಬ್ಬಿಸುವಂತೆ ಮಾಡಿದ್ದು ಒಂದು ಸುಪರಿಚಿತ ಧ್ವನಿ, ಅದು ನನ್ನಮ್ಮನದು!

"ಅಯ್ಯಯ್ಯೋ! ಮಳೆ ಬಂದು ಮನೆಯೆಲ್ಲಾ ಸೋರುತ್ತಿದೆ, ಸೋರುತ್ತಿರೊ ಜಾಗದಲ್ಲಿ ಪಾತ್ರೆ ಬಿಂದಿಗೆ ಇಡೋದು ಬಿಟ್ಟು ಅಲ್ಲೇನು ಮಾಡ್ತಿದ್ದೀರ ಅಪ್ಪ ಮಕ್ಳು?"

ಎಂಥಾ ರಸಭಂಗ!!

ಅಮ್ಮನ ದುಗುಡಕ್ಕೆ ಓಗೊಡದೆ ನಮಗೆ ಗತ್ಯಂತರವೇ ಇರಲಿಲ್ಲ.      ನಾನು ಅಪ್ಪ ಇಬ್ಬರು ಅಲ್ಲಿಂದ ಎದ್ದು ಅಮ್ಮ ಹೇಳಿದ ಹಾಗೆ ಮಾಡುತ್ತಾ ಇರಬೇಕಾದರೆ, ಅಪ್ಪ ಮನೆ ಕಥೆ ಶುರುವಿಟ್ಟುಕೊಂಡರು. ಅಪ್ಪನೇ ಹಾಗೆ : ಪ್ರಾಪಂಚಿಕ, ವ್ಯಾವಹಾರಿಕ ವಿಚಾರಕ್ಕಿಂತ ಮಾನಸಿಕ ನೆಮ್ಮದಿ ಆರೋಗ್ಯಕ್ಕೇ ಹೆಚ್ಚು ಒತ್ತುಕೊಡೋದು. ಅಪ್ಪ ಎಲ್ಲರಂತೆ ಹೆಚ್ಚಾಗಿ ಕೆಲಸ ಮಾಡುತ್ತಿರಲಿಲ್ಲ, ಅಮ್ಮ ಯಾವಾಗಲು ಇದೇ ವಿಷಯಕ್ಕೆ ಬೈಯ್ಯುತ್ತಿದ್ದಳು. ಅದೆಲ್ಲಾ ಅರ್ಥ ಆಗದ ನನಗೆ ಹೆಚ್ಚು ಹೆಚ್ಚು ಕೆಲಸ ಯಾಕೆ ಮಾಡಬೇಕು? ಎಷ್ಟು ಬೇಕೊ ಅಷ್ಟು ಮಾಡಿ ಮಿಕ್ಕ ಸಮಯ ಮನೆಯವರ ಜೊತೆ ಕಾಲಕಳೆಯಬಾರದೇಕೆ ಅಂತ ಅನ್ನಿಸಿದ್ದಿದೆ.

ಅಪ್ಪ ನನಗೆ ರಾತ್ರಿ ಹೊತ್ತು ಎದೆ ಮೇಲೆ ಮಲಗಿಸಿಕೊಂಡು ನಕ್ಷತ್ರ ತೋರಿಸುತ್ತಿದ್ದರು. ಎಣಿಸೋಕಾಗ್ತದ ನೋಡು ಮಗು ಎಂದಾಗ ಪ್ರತೀ ಸಲ ಎಣಿಸೋಕಾಗದೆ ನಾನು ಸೋಲುತ್ತಿದ್ದೆ. ಅದೆಲ್ಲಾ ಏನು, ಯಾಕೆ ಪ್ರತಿ ರಾತ್ರಿ ಮಾತ್ರ ಬರ್ತವೆ ಅಂತ ಕೇಳಿದರೆ ಅದಕ್ಕೆ ಅಪ್ಪ, "ಮಗು ಎಲ್ಲರಿಗೂ ನಿನಗೆ ಕಂಡಂತೆ ನಕ್ಷತ್ರಗಳು ಕಾಣಿಸುವುದಿಲ್ಲ, ಅದಕ್ಕೆ ಪುಣ್ಯ ಮಾಡಿರಬೇಕು, ಒಳ್ಳೇ ಗುಣ ನಡತೆ , ಗುಣ  ಹೊಂದಿರಬೇಕು, ಸುಳ್ಳು ಹೇಳಬಾರದು, ಕೆಟ್ಟ ಕೆಲಸ ಮಾಡಬಾರದು,ಆದರೆ ಒಳ್ಳೇದನ್ನ ಮಾತ್ರ ಮಾಡಬೇಕು ಕೆಟ್ಟದ್ದಲ್ಲ, ದೊಡ್ಡವರಿಗೆ, ಗುರುಹಿರಿಯರಿಗೆ ಗೌರವ ಕೊಡಬೇಕು. ಆಗ ಮಾತ್ರ ನಮಗೆ ನಕ್ಷತ್ರಗಳು ಕಾಣೋದು. ನಿನಗೀಗ ಅದು ಕಾಣುತ್ತಿದೆಯೆಂದರೆ ನೀನು ಪುಣ್ಯ ಮಾಡಿದ್ದೀಯ ನೀನಿರೋವರೆಗು ಅದನ್ನ ಉಳಿಸಿಕೊಂಡು ಹೋಗು" ಅಂತ ಅನ್ನುತ್ತಿದ್ದರು. "ಹಾಗಾದರೆ ನನಗೆ ಮಾತ್ರ ನಕ್ಷತ್ರ ಕಾಣುತ್ತೆ, ನಿನಗೆ ಕಾಣಲ್ವಾ ಅಪ್ಪ" ಅಂದರೆ, "ಮಗು ನಿನಗೆ ಕಂಡಂತೆ ಪ್ರತಿ ದಿನ ನನಗೆ ಕಾಣಲ್ಲ, ಯಾಕಂದ್ರೆ ನಾನು ನಿನಗೆ ಹೇಳಿದ ಒಳ್ಳೇ ಕೆಲಸದಲ್ಲಿ ಅರ್ಧ ಮಾತ್ರ ಮಾಡಿ ಇನ್ನರ್ಧ ಮಾಡಿಲ್ಲ" ಎನ್ನುತ್ತಿದ್ದರು. ಇದನ್ನು ಕೇಳಿದ ನನಗೆ ಒಳಗೊಳಗೆ ಖುಷಿಯೋ ಖುಷಿ. ಅಪ್ಪ ಹೇಳಿದ ಹಾಗೆ ಒಳ್ಲೆಯವನಾಗಿರ ಬೇಕು ಅಂತ ಮನಸ್ಸಲ್ಲೇ ನನಗೆ ನಾನೆ ಹೇಳುಕೊಳ್ಳುತ್ತಿದ್ದೆ.

ಒಳ್ಲೆಯವನಾಗಿದ್ದೀನಾ?

ಅಪ್ಪನ ಎದೆ ಮೇಲೆ ಮಲಗಿ ನಾನಂದು ನನ್ನಪ್ಪನನ್ನು ಕೇಳಿದ ಪ್ರಶ್ನೆಯನ್ನೇ ನನ್ನ ಮಗಳಿಂದು ನನ್ನ ಎದೆ ಮೇಲೆ ಮಲಗಿ ಕೇಳುತ್ತಿದ್ದಾಳೆ : ನನಗೆ ಮಾತ್ರ ನಕ್ಷತ್ರ ಕಾಣುತ್ತಾ ಅಪ್ಪಾ" ಅಂತ.

ಏನಂತ ಉತ್ತರ ಕೊಡಲಿ??

ಅಪ್ಪನನ್ನು ಕೇಳಿಹೇಳೋಣವೆಂದರೆ ಆತ ನಕ್ಷತ್ರವಾಗಿ ಸದಾಕಾಲ ಎದೆಯಲ್ಲಿ ಮಿನುಗುತ್ತಿದ್ದಾರೆ.

ನನ್ನ ಮಗಳು "ಅಪ್ಪಾ ನನಗೆ ಮಾತ್ರವೆ ನಕ್ಷತ್ರ ಕಾಣಿಸೋದು" ಅಂತ ಬೀಗುತ್ತಿದ್ದಾಳೆ.

 .......... 

ಮೋಹನ್ ಕುಮಾರ್ ಡಿ ಎನ್ 
ಛತ್ರಿ ಬಾಯ್!

ಬೆಳಗ್ಗಿನಿಂದ ವಿಪರೀತ ಕೆಲಸ, ಎಷ್ಟು ಮಾಡಿದರು ಮುಗಿಯಲೊಲ್ಲದು.   ಬಾಸ್ ಬೇರೆ ಯಾಕೊ ಗರಂ ಆಗಿದ್ದರು. ಕೆಲಸದಲ್ಲಿ ಮುಳುಗಿದ್ದ ನಾನು ಕತ್ತೆತ್ತಿ ನೋಡಿದೆ , ಘಂಟೆ ಐದೂವರೆ ಆಗುತ್ತಾ ಬಂದಿತ್ತು ; ಮನೆಗೆ ಹೊರಡುವ ಸಮಯ ಅದು. ಆಗಲೆ ಸಹೋದ್ಯೊಗಿಗಳು ಒಬ್ಬೊಬ್ಬರಾಗಿ ಹೊರಡಲು ಅನುವಾಗಿತ್ತಿದ್ದರು, ಆದರೆ ನಾನು ಮಾತ್ರ ಬಾಸ್ ಹೇಳಿದ್ದ ರಿಪೋರ್ಟ್ ರೆಡಿ ಮಾಡಿಯೇ ಹೋಗಬೇಕಾಗಿತ್ತು. ಸರಿ ಇನ್ನೇನು ಮಾಡೋಕಾಗುತ್ತೆ , ಕೆಲಸ ಮಾಡುತ್ತಾ ಕುಳಿತೆ. ಆರು ಘಂಟೆಯ ನಂತರ ಇಡೀ ಆಫೀಸ್ ಖಾಲಿ ಖಾಲಿ . ಆಚೆಕಡೆ ಸೆಕ್ಯೂರಿಟಿ ಬಿಟ್ಟರೆ ಬೇರೆ ಯಾರು ಇರಲಿಲ್ಲ . ಕಂಪ್ಯೂಟರಿನ ಕೀ ಬೋರ್ಡಿನ ಸದ್ದು ಇಡೀ ಆಫೀಸಿನ ಮೂಲೆ ಮೂಲೆಗು ಕೇಳಿಸುವಷ್ಟು ಜೋರಾಗಿತ್ತು , ಅಷ್ಟು ವೇಗವಾಗಿ ಕೆಲಸ ಮಾಡುತ್ತಿದ್ದೆ . ಅಂತೂ ಘಂಟೆ ಎಂಟಾಗುವಷ್ಟರಲ್ಲಿ ಕೆಲಸ ಮುಗಿದಿತ್ತು . ಇನ್ನೇನು ರಿಪೋರ್ಟ್ ಕಳಿಸಿ, ಸಿಸ್ಟಮ್ ಆಫ್ ಮಾಡುವುದರಲ್ಲಿದ್ದೆ , ಅದೆಲ್ಲಿತ್ತೋ ಗೊತ್ತಿಲ್ಲ ಮಳೆ ! ಬಂತು ಬಂತು ಬಂತು, ಕುಂಭದ್ರೋಣ ಮಳೆಯಂತೆ ಬಂತು. ಮೊದಲೇ ಇದು ಮುಂಬೈನ ಮಳೆ, ಬಂದರೆ ದಿನಗಟ್ಟಲೆ ಬಂದು ಅವಾಂತರ ಸೃಷ್ಟಿಸದೆ ಹೋಗುವುದಿಲ್ಲ . ಇದೆಲ್ಲಿಂದ ವಕ್ಕರಿಸಿತು ಈ ಮಳೆಯೆಂದು ಶಪಿಸುತ್ತಾ ಮಳೆ ನಿಲ್ಲುವವರೆಗು ಕಾಯೋದು ಬಿಟ್ಟರೆ ನನಗೆ ಬೇರೆ ಗತ್ಯಂತರವಿರಲಿಲ್ಲ. ಎಂಟೂ ಮುಕ್ಕಾಲಾಗಿತ್ತು , ಅಲ್ಲಿವರೆಗೂ ಜೋರಾಗಿ ನಿಲ್ಲದೇ ಬರುತ್ತಿದ್ದ ಮಳೆ ಇದ್ದಕ್ಕಿದ್ದಂತೆ ನಿಂತು ಹೋಯ್ತು . ಸದ್ಯ ಬಚಾವಾದೆ ಎಂದುಕೊಂಡು ಆಫೀಸಿನಿಂದ ಹೊರಬಿದ್ದೆ .

ಬಸ್ ನಿಲ್ದಾಣಕ್ಕೆ ಬಂದು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ , ನಾನು ದಿನಾ ಹೋಗುತ್ತಿದ್ದ ಟ್ರೈನ್ ಅದಾಗಲೆ ಹೊರಟುಹೋಗಿತ್ತು . ಎಷ್ಟೊತ್ತಾದರು ಒಂದು ಬಸ್ಸು ಬರಲಿಲ್ಲ , ಬಿದ್ದ ಮಳೆಗೆ ಆಟೋ ಕೂಡ ಬರುವ ಸುಳಿವಿರಲಿಲ್ಲ. ಸುಮ್ಮನೆ ಹಾಗೆ ಕಾಯುತ್ತಾ ನಿಂತಿದ್ದವಳು ಎದುರುಗಡೆಯಿದ್ದ ರೈಲ್ವೇ ಟ್ರ್ಯಾಕಿನ ಪಕ್ಕದಲ್ಲಿದ್ದ ಗುಡಿಸಿಲ ಕಡೆ ಕಣ್ಣಾಡಿಸಿದೆ. ಅಲ್ಲಿ ನಿರಾಶ್ರಿತರು, ನಿರ್ಗತಿಕರು, ಮುಖ್ಯವಾಹಿನಿಯಿಂದ ದೂರ ಉಳಿದವರು ಹೀಗೆ ನಾನ ನಮೂನೆಯ ವರ್ಗದವರು ಇರುವುದು ಕಂಡು ಬಂತು. ಅತ್ತಕಡೆಯಿಂದ ನನ್ನ ನೋಟ ಗುಡಿಸಲಿಗೆ ಅಂಟುಕೊಂಡಂತಿದ್ದ  ಪಕ್ಕದಲ್ಲಿದ್ದ ಬ್ರಿಡ್ಜ್ ಮೇಲೆ ಬಿತ್ತು , ಆ ಬ್ರಿಡ್ಜಿನ ಕೆಳಗಡೆಯೇ ಗುಡಿಸಲುಗಳಿದ್ದಿದು . ಇನ್ನೇನು ಅಲ್ಲಿಂದ ನೋಟ ಬೇರೆ ಕಡೆ ತಿರುಗುವುದರಲ್ಲಿತ್ತು , ಛಕ್ಕನೆ ಅಲ್ಲೇ ನಿಂತಂತಾಗಿ ನೋಡಿದೆ : ಬ್ರಿಡ್ಜಿನ ಕಂಬಕ್ಕೆ ಗುಡಿಸಲಿನ ಕೊನೇ ಸಾಲಿನ ಪಕ್ಕದಲ್ಲಿ ಒಂದು ಕಲ್ಲಿಗೊರಗಿ ಒಬ್ಬ ಚಿಕ್ಕ ಹುಡುಗ ಕೊಡೆ ಹಿಡಿದುಕೊಂಡು ನಿಂತಿದ್ದ . ಆ ಕೊಡೆ ಅವನಿಗಿಂತಲೂ ದೊಡ್ಡದಾಗಿತ್ತು , ಸುಮಾರು ಐದಾರು ಜನ ಒಟ್ಟಿಗೇ ನಿಲ್ಲಬಹುದಿತ್ತು. ಬೇಡವೆಂದುಕೊಂಡರು ತಾನಾಗೇ ನನ್ನ ಕಾಲುಗಳು ಹೆಜ್ಜೆ ಹಾಕತೊಡಗಿತು.
ಹುಡುಗ ಸುಮಾರು ಎಂಟರಿಂದ ಹತ್ತು ವರ್ಷದವನಿರಬಹುದು. ಅವನು ಧರಿಸಿದ್ದ ಬಟ್ಟೆ ಅಲ್ಲಲ್ಲಿ ಹರಿಸಿತ್ತು , ಕಾಲಲ್ಲಿ ಚಪ್ಪಲಿಯಿರಲಿಲ್ಲ . ನಾನು ಅವನ ಬಳಿ ಹೋಗುವುದನ್ನು ಗಮನಿಸಿ , " ಅಕ್ಕಾ ಬನ್ನಿ " ಎಂದು ನನ್ನತ್ತ ಕೊಡೆ ಹಿಡಿದ. ಕುತೂಹಲಕ್ಕೆ ಅವನ ಬಗ್ಗೆ ವಿಚಾರಿಸಿದೆ. ಅವನು ನಗುನಗುತ್ತಲೇ ತನ್ನ ಬಗ್ಗೆ ಹೇಳತೊಡಗಿದ.

" ಅಕ್ಕ ನನ್ನ ಹೆಸರು ಮೋಟು ಅಂತ. ನನಗೆ ಅಪ್ಪ ಇಲ್ಲ , ಅಮ್ಮ  ದಿನಗೂಲಿ ಕೆಲಸಕ್ಕೆ ಹೋಗುತ್ತಾಳೆ ; ಕನ್ಸ್ಟ್ರಕ್ಶನ್ ಕಂಪನಿಯಲ್ಲಿ. ಅಲ್ಲಿ ಮಳೆ ಬಂದಾಗ ಕೆಲಸದವರಿಗೆಂದು ಒಂದೊಂದು ದೊಡ್ಡ ದೊಡ್ಡ ಕೊಡೆ ಕೊಡುತ್ತಾರೆ , ಅದೇ  ಕೊಡೆ  ಈಗ ನನ್ನ ಬಳಿಯಿರುವುದು. ಹೀಗೆ ಪ್ರತಿ ಬಾರಿ ಮಳೆ ಬಂದಾಗ ನಾನಿಲ್ಲಿ ಅಮ್ಮನ ಮನವೊಲಿಸಿ ಕೊಡೆ ತೆಗೆದುಕೊಂಡು ಇಲ್ಲಿ ಬಂದು ನಿಲ್ಲುತ್ತೇನೆ . ಯಾಕೆಂದರೆ ಮಳೆ ಯಾವಾಗ ಬರುವುದೋ ಗೊತ್ತಿಲ್ಲ , ಹೀಗಾಗಿ ಎಲ್ಲರು ಕೊಡೆ ತಂದಿರುವುದಿಲ್ಲ. ನಾನಾಗ ಅವರ ಬಳಿ ಹೋಗಿ , ಅವರೆಲ್ಲಿವರೆಗು ಬಯಸುತಾರೋ ಅಲ್ಲಿವರೆಗು ಕೊಡೆ ಹಿಡಿದುಕೊಂಡು ಹೋಗಿ ಬಿಟ್ಟು ಬರುತ್ತೇನೆ. ಆಗ ಅವರೆಷ್ಟು ಕೊಡುತ್ತಾರೋ ಅಷ್ಟೇ ಹಣವನ್ನು ತೆಗೆದುಕೊಳ್ಳುವೆ . ಕೊಟ್ಟರೆ ಉಂಟು , ಇಲ್ಲದಿದ್ದರೆ ಇಲ್ಲ . ನಾನಾಗಿಯೇ ಯಾರನ್ನು ಇಷ್ಟೇ ಕೊಡಿ ಅಂತ ಕೇಳಿಲ್ಲ , ಕೇಳುವುದೂ ಇಲ್ಲ . ಅವರು ಖುಷಿಯಾಗಿ ಹೋದರೆ ಸಾಕು "

ಅವನು ಮಾತು ಮುಗಿಸಿದ , ಆದರೆ ಆ ನಗು ಮಾತ್ರ ಹಾಗೆ ಇತ್ತು.

ಅವನು ಹೇಳಿದ್ದು ಕೇಳಿ ನನ್ನ ಹೃದಯ ತುಂಬಿ ಬಂದು ಮನಸ್ಸು ಭಾರವಾಗಿ ಕಣ್ಣಾಲಿಗಳು ಬಯಸದೇ ಬಂದಿತ್ತು . ಈಗಿನ ಕಾಲದಲ್ಲಿ ಇನ್ನೊಬ್ಬರ ಹಿತ ಬಯಸುತ್ತಾ , ಏನನ್ನು ಅಪೇಕ್ಷೆಯಿಲ್ಲದೆ ಬದುಕುವವರಿದ್ದಾರಾ? ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ? ಅವನನ್ನು ಅಕ್ಕರೆಯಿಂದ ಬಾಚಿ ತಬ್ಬಿಕೊಂಡೆ , ಹುಡುಗ ಮುಗುಳುನಗುತ್ತಿದ್ದ . ಅವನ ಆ ನಗು,  ಅಮಾಯಕತೆ , ನಿಷ್ಕಲ್ಮಷ ಮನಸ್ಸು ನನ್ನಲ್ಲಿ ಅಚ್ಚಳಿಯದ ಗುರುತು ಮೂಡುವಂತೆ ಮಾಡುತ್ತಿದ್ದವು . ಅವನಿಗೆ ಪ್ರೀತಿಯಿಂದ ನನ್ನಲ್ಲಿದ್ದ ಅಲ್ಪ ಮೊತ್ತ ಕೊಡಲು ಆತ , " ಅಕ್ಕಾ ಬೇಡ ! ನಾನು ಕೊಡೆ ಹಿಡಿದು ಬಿಟ್ಟು ಬಂದರೆ ಮಾತ್ರ ಕೊಟ್ಟಷ್ಟು ತೆಗೆದುಕೊಳ್ಳುತ್ತೀನಿ, ಸುಮ್ಮಸುಮ್ಮನೆ ಅಲ್ಲ " ಅಂದ. ಅಷ್ಟೊತ್ತು ಮಳೆ ನಿಲ್ಲಲ್ಲಿ ಎಂದುಕೊಂಡಿದ್ದವಳಿಗೆ ಮಳೆ ಮತ್ತೆ ಬರಬಾರದೇಕೆ ಅನಿಸತೊಡಗಿತು. ಎಷ್ಟು ಬಲವಂತ ಮಾಡಿದರೂ ಅವನು ಕೊನೆಗೂ ನನ್ನಿಂದ ಬಿಡಿಗಾಸೂ ಮುಟ್ಟಲಿಲ್ಲ . 

ಅವನನ್ನು ಮತ್ತೊಮ್ಮೆ ಅಕ್ಕರೆಯ ಕಂಗಳಲ್ಲಿ ನೋಡುತ್ತಾ ಹಣೆಗೆ ಪ್ರೀತಿಯಿಂದ ಒಂದು ಮುತ್ತನಿಟ್ಟೆ. " ಅಕ್ಕಾ ! ನನಗೆ ಬರಬೇಕಾದ ಸಂಭಾವನೆ ಬಂದಾಯ್ತು " ಅಂದ .

ಇದೇ ಅಲ್ಲವೆ ಮನುಷ್ಯನು ಮನುಷ್ಯನಿಗೆ ತೋರಬೇಕಾದ ಮಾನವತೆ ? 

ಏನಾದರು ಆಗು ಮೊದಲು ಮಾನವನಾಗು ಎಂಬ ಕವಿವಾಣಿ ನೆನಪಾಗಿ ಒಲ್ಲದ ಮನಸ್ಸಿನಿಂದ ಆ  ದಿನ ಮನೆ ಸೇರಿದೆ.

ವಿ.ಸೂ. ಇದು ನಮ್ಮ ನಡುವೆ ನಡೆದ ಸತ್ಯಕಥೆ : ಪಕ್ಕದ ಮುಂಬೈನಲ್ಲಿ . ಯಾರೋ ತಮ್ಮ ಈ ಅನುಭವ ಬಹಳ ಯಾಂತ್ರಿಕವಾಗಿ ಹಂಚಿಕೊಂಡಿದ್ದರು . ನನ್ನಿಂದ ಇದನ್ನು ಚಿಕ್ಕ ಕಥೆ ರೂಪ ಕೊಟ್ಟು ಬರೆಯಲಾಗದೆ ಇರಲಿಲ್ಲ .

ಮೋಹನ್ ಕುಮಾರ್ ಡಿ ಎನ್.
ಒಡಲಾಳ ..

ಅದೊಂದು ಸುವಿಶಾಲ ರೈಲ್ವೇ ನಿಲ್ದಾಣ. ಅಲ್ಲಿ ನೂರಾರು ರೈಲು ಬರುತ್ತವೆ ಹೊಗೊತ್ತವೆ. ಇಳಿಯಬೇಕಾದವರು ಇಳಿಯುತ್ತಾರೆ, ಹತ್ತಬೇಕಾದವರು ಹತ್ತುತ್ತಾರೆ. ಹತ್ತುವವರಿಗೂ  ಇಳಿಯುವವರಿಗೂ ಲೆಕ್ಕ ಇಟ್ಟವರಿಲ್ಲ. ಒಬ್ಬರಿಗೊಬ್ಬರು ಪರಿಚಯವಿಲ್ಲ, ಇರಬೇಕಾದ ಅವಶ್ಯಕತೆ ಏನಿಲ್ಲ. ಪರಿಚಯದವರು ಸಿಕ್ಕಾರೆ ಮಾತಾಡಿಸುವಂತೆ ಯಾರನ್ನು ಮಾತಾಡಿಸುವ ಪ್ರಮೇಯವಿಲ್ಲ. ಎಲ್ಲೆಲ್ಲಿಂದಲೊ ಜನ ಬರುತ್ತಾರೆ ಹೋಗುತ್ತಾರೆ, ನಿಲ್ದಾಣ ಯಾರನ್ನು ಬರಬೇಡ ಅನ್ನುವುದಿಲ್ಲ, ಬಂದರೆ ಹೋಗೆನ್ನುವುದಿಲ್ಲ. ಹಾಗೆ ತಟಸ್ಥವಾಗಿ ಯಾರು ಬಂದರೂ ಬರಬೇಡ ಎನ್ನುವ ಜಾಗದಲ್ಲಿ ಇದೂ ಒಂದು. ರಾತ್ರಿಯಾದರೆ ಇಲ್ಲಿ ಇನ್ನೊಂದು ಲೋಕ ತೆರೆದುಕೊಳ್ಳುತ್ತದೆ. ವಿಟ ಪುರುಷರು ಸ್ತ್ರೀಯರು ಇಲ್ಲಿ ಹಬ್ಬಿರುವ ವಿಶಾಲವಾದ ಕತ್ತಲ ಸಾಮ್ರ್ಯಾಜ್ಯದೊಳಗೆ ಜಮಾವಣೆಯಾಗುತ್ತರೆ. ಕತ್ತಲಸಾಮ್ರಾಜ್ಯಿಪತಿಗಳು!! ಅದರ ಇನ್ನೊಂದು ಮಗ್ಗುಲಲ್ಲಿ ಕುಂಟರು, ಕುರುಡರು, ಆಶ್ರಯವಿಲ್ಲದೆ ಬರಗೆಟ್ಟವರು, ಸಮಾಜ ವಿಮುಖಿಗಳು, ಮಂಗಳಮುಖಿಯರು, ನೈಟ್ ಬೀಟ್ ಹೊಡೆಯೋ ಪೋಲೀಸ್, ಕಳ್ಳರು ಖದೀಮರು, ಭಿಕ್ಷುಕರು, ನಿರುದ್ಯೋಗಿಗಳು,  ಮಕ್ಕಳಿಂದ ಹೊರದೂಡಲ್ಪಟ್ಟ ತಂದೆತಾಯಿಯರು.... ಪಟ್ಟಿ ಸಾಗುತ್ತಾ ಹೋಗುತ್ತದೆ. ಇವರೆಲ್ಲ ಸೇರಿದರೆ ಅದೇ ಒಂದು ಲೋಕ. ನಮ್ಮ ನಾಗರೀಕ ಸಮಾಜಕ್ಕಿಂತ ವಿಭಿನ್ನವೇನಲ್ಲ ಅವರ ಈ ಜಗತ್ತು. ಎಲ್ಲಾರು ಮಾಡುವುದು ಹೊಟ್ಟೆಗಾಗಿ. ಎಲ್ಲರನ್ನು ನಿಯಂತ್ರಿಸೋರು ಯಾರು? ಅವರವರ ಸಮಯ ಸಂಧರ್ಭ ಅಷ್ಟೆ. ಇದನ್ನೆಲ್ಲ ಹೇಳುತ್ತಿರುವ ನಾನು ಯಾರು ಎಂದು ಯೋಚಿಸಿದಿರಾ?

ಆಮೇಲೆ ಹೇಳುತ್ತೇನೆ.

ಮೊನ್ನೆ ದಿನ ಹೀಗಾಯ್ತು :

ವಯಸ್ಸಾದ ಹಿರಿಯ ದಂಪತಿಗಳು ಒಂದು ಫ್ಲಾಟ್ಪಾರಂನಲ್ಲಿ ಬಂದು ಕುಳಿತರು. ಕೈಯಲ್ಲೊಂದು ಚೀಲವಿತ್ತಷ್ಟೆ. ಅವರು ಕುಳಿತ ನಂತರ ಅದೆಷ್ಟೋ ರೈಲುಗಳು ಬಂದವು, ಹೋದವು. ಇವರು ಯಾವುದಕ್ಕೂ ಹತ್ತಲಿಲ್ಲ.   ಸುಮ್ಮನೇ ಕುಳಿತಿದ್ದರು. ಮೊದಮೊದಲು ಇವರನ್ನು ನೋಡಿದವರು, ಯಾರೊ ಯಾತ್ರಿಕರಿರಬೇಕೆಂದುಕೊಂಡಿದ್ದರು. ಬೆಳಿಗ್ಗೆ ಬಂದ ಇವರು ರಾತ್ರಿಹೊತ್ತಿನವರೆಗೂ ಅಲ್ಲೇ ಕುಳಿತಿದ್ದರು.  ಇವರನ್ನೇ ಗಮನಿಸುತ್ತಿದ್ದ ಒಬ್ಬ ಟೀ ಮಾರೊ ಹುಡುಗ ಕಡೆಗೆ ಕುತೂಹಲ ತಡೆಯಲಾಗದೆ ಅವರ ಬಳಿ ಹೋಗಿ, " ಅಜ್ಜೀ ನೀವೆಲ್ಲಿಗೆ ಹೋಗಬೇಕೆಂದು " ಕೇಳಿದನು. ಅಜ್ಜಿ ಉತ್ತರಿಸಲಿಲ್ಲ. ಅಜ್ಜನ ಕಡೆ ತಿರುಗಿ ಮತ್ತದೇ ಪ್ರಶ್ನೆಯನ್ನು ಕೇಳಿದನು. ಆಗ ಅಜ್ಜ ನಿಧಾನವಾಗಿ ತನ್ನ ಜೇಬಿಗೆ ಕೈ ಹಾಕಿ ಕಾಗದದ ತುಂಡೊಂದನ್ನು ತೆಗೆದು ಟೀ ಮಾರೊ ಹುಡುಗನ ಕೈಗಿತ್ತನು. ಅದನ್ನು ತೆಗೆದು ಓದಿದ ಹುಡುಗನ ಕಣ್ಣಲ್ಲಿ ನೀರು ಬೇಡವಂದರೂ ಬರತೊಡಗಿತು. ಆ ಚೀಟಿಯಲ್ಲಿ ಹೀಗೆ ಬರೆದಿತ್ತು :

" ಇವರು ನಮ್ಮ ತಂದೆತಾಯಿ. ಇವರನ್ನು ಯಾರಾದರು ನೋಡಿದರೆ ದಯಮಾಡಿ ಅನಾಥಾಶ್ರಮಕ್ಕೆ ಸೇರಿಸಿಬಿಡಿ "

ಓದಿ ಕಣ್ಣಲ್ಲಿ ನೀರು ತುಂಬಿಕೊಂಡ ಟೀ ಮಾರೊ ಹುಡುಗ "ಇದರಲ್ಲೇನು ಬರೆದಿದೆ ಗೊತ್ತಾ" ಎಂದು ಕೇಳುತ್ತಾನೆ. ಆಗ ಅಜ್ಜ "ನೋಡಪ್ಪ ನನ್ನ ದೊಡ್ಡ ಮಗನ ಮನೆಯಲ್ಲಿ ನಾನಿದ್ದೆ, ಚಿಕ್ಕ ಮಗನ ಮನೆಯಲ್ಲಿ ಇವಳಿದ್ದಳು. ಚಿಕ್ಕವನು ಬಂದು ನನ್ನನ್ನು ಹಾಗು ದೊಡ್ಡವನು ಬಂದು ಇವಳನ್ನ ತಮ್ಮ ತಮ್ಮ ಮನೆಗೆ ಕರಕೊಂಡು ಹೋಗೋದಾಗಿ ಹೇಳಿ ರೈಲ್ವೇ ಸ್ಟೇಷನ್ನಿಗೆ ಬರುವಂತೆ ನನಗೆ ಚಿಕ್ಕವ, ಇವಳಿಗೆ ದೊಡ್ಡವ ಹೇಳಿದ್ದರು. ಇಲ್ಲಿ ಬಂದು ನೋಡಿದರೆ ಯಾರು ಬಂದಿಲ್ಲ ನಮ್ಮನ್ನ ಕರೆದೊಯ್ಯಲು" ಅಂತ ಅಜ್ಜ ಮಾತು ಮುಗಿಸಿದ.

ಹುಡುಗನಿಗೆ ಅವರ ಕಥೆ ಕೇಳಿ ಏನುತ್ತರಿಸಬೇಕೋ ತಿಳಿಯಲಿಲ್ಲ. ಒಂದು ನಿರ್ಧಾರಕ್ಕೆ ಬಂದವನೆ ಅವರನ್ನ ತನ್ನ ಜೊತೆಯಲ್ಲಿ ಕರೆದುಕೊಂಡು ಹೊರಟುಹೋದನು, ಅನಾಥನಾಗಿರುವ ತನ್ನ ಪಾಲಿಗೆ ದೇವರು ಕೊಟ್ಟ ತಂದೆತಾಯಿಯೆಂದು ತಿಳಿದು.

ಇದೇ ನಡೆದದ್ದು ಮೊನ್ನೆ.

ಈಗ ಆ ಅಜ್ಜಅಜ್ಜಿ, ಟೀ ಮಾರೋ ಹುಡುಗ ಎಲ್ಲಿದ್ದಾರೋ ಗೊತ್ತಿಲ್ಲ. ಹುಡುಗ ಮುಂಚೆ ಬಂದಂತೆ ಟೀ ಮಾರಲು ಇಲ್ಲಿಗೆ ಬರುತ್ತಿಲ್ಲ. ಅವರೆಲ್ಲೇ ಇದ್ದರು ಸುಖವಾಗಿರಲಿ, ಅಷ್ಟೇ ನನ್ನ ಆಸೆ.

ಓಹ್! ನಾನ್ಯಾರೆಂದು ನಿಮಗೆ ಹೇಳುತ್ತೇನೆ ಎಂದಿದ್ದನಲ್ಲವೇ?

ಅದು ನಾನೇ ಕಣ್ರೀ, ನಿಮ್ಮಂತ ನೂರಾರು ಸಾವಿರಾರು ಲಕ್ಷಾಂತರ ಪ್ರಯಾಣಿಕನನ್ನು ಹೊತ್ತು ಹತ್ತಾರು ವರ್ಷದಿಂದ ಬಂದಿರುವ ನಿಲ್ದಾಣ...!!! ನಿಮ್ಮ ಪ್ರೀತಿಯ ನಿಲ್ದಾಣ!!!

ನನ್ನ ಒಡಲೊಳಗೆ ಇಂಥ ಕಥೆಗಳು ಅದಿನ್ನೆಷ್ಟಿವೆಯೋ!!!
..................................
ಮೋಹನ್ ಕುಮಾರ್ ಡಿ ಎನ್
ಹೈವೇ ... 

ನಮ್ಮ ಹೊಲದಲ್ಲಿ ಎತ್ತ ನೋಡಿದರೂ ಹಸಿರಸಿರಿ ತುಂಬಿ ತುಳುಕುತ್ತಿತ್ತು. ಸದಾಕಾಲ ಅಲ್ಲಿ ಕೂಲಿಯಾಳುಗಳು ಕೆಲಸ ಮಾಡಿತ್ತಿದ್ದರು. ಆ ಕೆಲಸದ ಹೊತ್ತಿನಲ್ಲಿ  ಆಳುಗಳು ನೂರಾರು ಹಾಡು ಹಾಡಿಕೊಳ್ಳುತ್ತಾ, ಹಾಡಿಗೆ ಹಾಡು ಕಟ್ಟುತ್ತಾ, ಮಾತಿಗೊಂದು ಮಾತಿನ ಮುತ್ತು ಸುರಿಸುತ್ತಾ ಕೆಲಸ ಮಾಡುತ್ತಿದ್ದರು. ಆಗ ಕೇಳಿದ ಹಾಡುಗಳು ನನ್ನ ಸ್ಮ್ರುತಿಪಲ್ಲಟದಲ್ಲಿದೆ, ಅವರ ಅನುಭವದ ಮಾತುಗಳೇ ನನಗೆಷ್ಟೋ ಬಾರಿ ಎದುರಿನವನ ಮಾತಿನ ದೊಣ್ಣೆಯಿಂದ ತಪ್ಪಿಸಿದೆ. ಅಪ್ಪ ಆಳುಗಳನ್ನು ಆಳಿನಂತಾಗಲಿ, ಕೆಲಸಗಾರರಂತಾಗಲಿ ನೋಡಿದ್ದೇ ಇಲ್ಲ ; ಸ್ವಂತ ಬಂಧುಗಳಂತೆ ನೋಡಿಕೊಳ್ಲುತ್ತಿದ್ದರು. ಅವರಾದರೂ ಸರಿ ಹಾಗೇ ಇರುತ್ತಿದ್ದರು.
ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಅಲ್ಲೊಂದು ದೇವಸ್ಥಾನವಿತ್ತು ; ತಾಯಿ ಚೌಡೇಶ್ವರಿಯದು. ಆಕೆ ನಮ್ಮ ಕುಲ ಹಾಗು ಊರದೇವತೆ. ಪ್ರತಿ ಸಾಯಂಕಾಲ ಅಲ್ಲಿ ಭಜನೆ, ಹರಿಕಥೆ, ಪೂಜೆ, ಪ್ರಸಾದ ವಿನಿಯೋಗವಿರುತ್ತಿತ್ತು. ಊರ ಜನರೆಲ್ಲಾ ಅಲ್ಲಿ ಸೇರಿದರೆ ಭಕ್ತಿ ಮೈನವಿರೇಳಿಸುತ್ತಿತ್ತು.
ಲೋಕಸೇವಾನಿರತರೊಬ್ಬರು ಕಟ್ಟಿಬೆಳೆಸಿದ ಶಾಲೆಯಲ್ಲೇ ನನ್ನ ವಿದ್ಯಾಭ್ಯಾಸ ನಡೆದಿದ್ದು,, ಶಾಲೆ ದೇವಸ್ಥಾನದ ಎದುರಿನಲ್ಲೇ ಇದೆ. ಆ ಶಾಲೆಯಲ್ಲಿ ನಾವು ಕಲಿತ ಅಕ್ಷರಗಳೇ ಇಂದು ನನ್ನನ್ನು ರೂಪಿಸಿರುವುದು. ಅಲ್ಲಿಂದ ಮುಂದೆ ನಡೆದರೆ ಸಿಗುವುದೇ ನಮ್ಮ ಹಳ್ಳಿಯ ಜೀವನದಿ ನಾಗರಕೆರೆ. ಒಂದು ಕಾಲಕ್ಕೆ ವರ್ಷ ವರ್ಷ ಭರ್ತಿ ಕೋಡಿ ಬೀಳುತ್ತಿತ್ತು, ನಮಗದನ್ನು ನೀಡುವುದೇ ಒಂದು ಸಂಭ್ರಮ.  ನಾವಲ್ಲಿ ಒಂದಷ್ಟು ಹುಡುಗರು ಗುಂಪು ಸೇರಿ ಈಜುತ್ತಿದ್ದೆವು, ಸಾಲದ್ದಕ್ಕೆ ಪಕ್ಕದಲ್ಲೆ ತೋಟದ ಮನೆಯಲ್ಲಿದ್ದ ಭಾವಿ ಬೇರೆ ನಮ್ಮ ಈಜಿಗೆ ಸಾಥ್ ಕೊಡುತ್ತಿತ್ತು. ನೀರಿಗೆ ಬಿದ್ದರೆ ಮೇಲೇಳುವುದು ಅದೆಷ್ಟೋ ಹೊತ್ತಾದ ಮೇಲೇ.
ಇಂತಿಪ್ಪ ಹಳ್ಳಿಗೆ ಹರಳೀಕಟ್ಟೆ ಇಲ್ಲದಿದ್ದರೆ ಆದೀತೇ?  ದೇವಸ್ಥಾನದಿಂದ ನಾಲ್ಕೆಜ್ಜೆ ಹಾಕಿದರೆ ಸಿಗುವುದೇ ನ್ಯಾಯಸ್ಥಾನ ; ತಪ್ಪು ಮಾಡಿದವರಿಗೆ, ಕಾಲಹರಣ ಜಾಗ; ಹಳ್ಳಿಯ ಹಿರಿಯರಿಗೆ, ಚಿಕ್ಕಮಕ್ಕಳಿಗೆ ಆಟದ ಸ್ಥಾನ...ಹೀಗೆ ಅಲ್ಲಿ ಒಂದಾನೊಂದು ಚಟುವಟಿಕೆ ನಡೆಯುತ್ತಲೇ ಇರುತ್ತಿತ್ತು.
ಹೀಗೆ ಹೇಳುತ್ತಾ ಹೋದರೆ  ನಮ್ಮ ಹಳ್ಳಿಯ ಬಗ್ಗೆ ನೂರುಪುಟ ಹೇಳಬಹುದು. ಎಲ್ಲಾ ಸರಿ, ನಮ್ಮ ಮನೆಯ ಬಗ್ಗೆಯೇ ಹೇಳಲಿಲ್ಲವಲ್ಲಾ? ಅದೋ ನೋಡಿ ಹರಳೀಕಟ್ಟೆ ದಾಟಿ ಮುಂದಕ್ಕೆ ನಡೆದರೆ ಎದುರಿಗೆ ಕಾಣುವ ಜಾಗ ಇದೆಯಲ್ಲಾ? ಅಲ್ಲಿದೆ ನಮ್ಮನೆ!! ನಮ್ಮ ಹಿರಿಯರು ಬಾಳಿಬದುಕಿ ನಮಗಾಗಿ ಬಿಟ್ಟು ಹೋದ ಮನೆ!! ನಮ್ಮ ಪಾಲಿಗೆ ದೇವಸ್ಥಾನ!! ಲಕ್ಷ ಲಕ್ಷ ನೆನಪುಗಳ ಖಣಜ!! ಅದೋ ನೋಡಿ ಅಲ್ಲಿ ಕಾಣುತ್ತಿದೆಯಲ್ಲಾ? ಅದೇ ನಮ್ಮನೆ!!
ಹೀಗೆ ಸಾವಿರ ಸಾವಿರ ಘಟನೆಗಳು ಚಿತ್ರಪಟದಂತೆ ಬರುತಿರಲು ನಾನು ಮಾತ್ರ ನನ್ನ ನೆನಪುಗಳಾಚೆಯಿಂದ ಬರುವುದಿಲ್ಲ. ನಮ್ಮ ತೋಟ, ಶಾಲೆ, ದೇವಸ್ಥಾನ, ಹರಳೀಕಟ್ಟೆ, ಮೈದುಂಬಿ ಹರಿಯಿತ್ತಿದ್ದ ಕೆರೆ, ಸಂತೆ ಬೀದಿ, ಗರಡೀಮನೆ, ನೇಯ್ಗೆ ಬೀದೀ, ಅಲ್ಲಿನ ಕೈಮಗ್ಗಗಳ ಶಬ್ದ, ಸಾಬರ ವಟಾರ, ಒಕ್ಕಲಿಗರ ಓಣಿ, ಬ್ರಾಹ್ಮಣರ ಮಂತ್ರಘೋಷ, ಕುಂಚಿಟಿಗರು, ಕುರುಬರು..ಒಬ್ಬರೇ ಇಬ್ಬರೇ? ಸಾವಿರಾರು ಜನ, ಅವರ ಜೀವನ ಒಟ್ಟಿಗೇ ಹೋಯ್ತಲ್ಲಾ ಈ ಹೆದ್ದಾರಿ ಎಂಬ ಮಹಾಮಾರಿಗೆ!!!?? ಹೌದು ಹೆದ್ದಾರಿ ಅಗಲೀಕರಣಕ್ಕೆ ನನ್ನ ಇಡೀ ಹಳ್ಳಿಯೇ ನಿರ್ನಾಮವಾಗಿ ಹೊಯ್ತು! ಇಲ್ಲೀಗ ಮಹಾ ಚತುಷ್ಪತ ರಸ್ತೆಯೆದ್ದು ನಿಂತಿದೆ ನಮ್ಮೆಲ್ಲರ ಜೀವಂತ ಹೆಣಗಳ ಮೇಲೆ. ಶ್ರೀಮಂತರು ಇಲ್ಲಿ ಜೀವಿಸ ತೊಡಗಿದ್ದಾರೆ ಕಾರು ಮುಂತಾದ ವಾಹನದಲ್ಲಿ ಓಡಾಡುವ ಮೂಲಕ, ನಾವಿಲ್ಲಿ ಸತ್ತಿದ್ದೇವೆ ನಮ್ಮದೇ ಜಾಗದಲ್ಲಿ ನಮಗೇ ನಮ್ಮ ಮಣ್ಣು ಸಿಗದ ಮೂಲಕ!
ನನ್ನದೊಬ್ಬನದೇ ವ್ಯಥೆಯಲ್ಲ ಇದು, ನಮ್ಮೆಲ್ಲರದು. 'ಕಾರು ' 'ಭಾರು ' ಮಾಡುವರು ಯಾವಾಗ ಬಂದು ನಮ್ಮ ಜೀವನಕ್ಕೆ ಕೊಡಲಿಯಿಡುತ್ತಾರೋ ಗೊತ್ತಿಲ್ಲ. ಹುಷಾರು!
ಅದೋ ನೋಡಿ ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವಂತೆ ನನ್ನ ಮನೆ ನನ್ನ ಕೈಬೀಸಿ ಕರೆಯುತ್ತಿದೆ, ನಾನೀಗ ಅದರ ಮಡಿಲಿಗೆ ಹೋಗಿ ಸೇರುತ್ತಿದ್ದೇನೆ. ನನ್ನನ್ನು ಯಾರೂ ತಡೆಯಲಾಗದು.
..........................
ಮೋಹನ್ ಕುಮಾರ್ ಡಿ ಎನ್
ಶಿವಾಜಿನಗರಲ್ಲೊಂದು ದಿನ... 
ತಪ್ಪು ನಂದಿದೆಯೋ ಅಥವಾ ಬಸ್ಸಿನದಿದೆಯೋ ತಿಳಿಯುತ್ತಿಲ್ಲ.
ಆವತ್ತು ಶಿವಾಜಿನಗರದಲ್ಲಿ ಇಳಿದು ಎಂ ಜಿ ರೋಡಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದೆ. ಆಫೀಸಿಗೆ ಹೋಗುವ ಧಾವಂತದಲ್ಲಿದ್ದ ನನ್ನ ಮುಂದೆ ಒಬ್ಬ ಹುಡುಗ ಬಂದು ನಿಂತ. ಅವನನ್ನೇ ದಿಟ್ಟಿಸಿ ನೋಡಿದೆ ; ಧರಿಸಿದ್ದ ಬಟ್ಟೆ ಕೊಳೆಯಾಗಿತ್ತು, ಅಲ್ಲಲ್ಲಿ ಹರಿದಿತ್ತು, ಷರ್ಟಿನ ಗುಂಡಿಗಳು ಅದಲು ಬದಲಾಗಿತ್ತು, ನಿಕ್ಕರ್ ಹಾಕಿದ್ದರೂ ಒಂದೆ ಹಾಕದಿದ್ದರೂ ಒಂದೆ ಹಾಗಿತ್ತು ಅದು. ಅದಲ್ಲ ನನ್ನ ಸೆಳೆದಿದ್ದು, ಅವನ ನೋಟ! ಬಿಟ್ಟ ಕಣ್ಣು ಬಿಟ್ಟಂತೆ ನನ್ನನ್ನೇ ನೋಡುತ್ತಿದ್ದ. ನೋಟದಲ್ಲಿ ಬದಲಾವಣೆಯಿಲ್ಲ. ಎಲಾ ಇವನ!! ಹಿಂಗ್ಯಾಕ್ ನೋಡ್ತ್ಯೋ ತಮ್ಮ ಅಂತ ಕೇಳುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತ. ಎಲ್ಲಿಗೆ ಹೋದ ಇವನು ಅಂತ ನೋಡಿದರೆ, ಅಲ್ಲೇ ಪಕ್ಕದಲ್ಲಿದ್ದ ತನ್ನ ಬಳಗಕ್ಕೆ ಓಡಿ ಹೋಗಿ ಸೇರಿದ. ಅಲ್ಲಿ ಅವನಿಗಿಂತಲೂ ಚಿಕ್ಕವರಿದ್ದ ಅವನ ತಮ್ಮ , ತಂಗಿಯಿದ್ದರು ಜೊತೆಯಲ್ಲಿ ಕಾಲು ಊನವಾಗಿದ್ದ ಅವನ ತಾಯಿಯಿದ್ದಳು.
ಹಾಗೆ ಅವನ್ಯಾಕೆ ನನ್ನನೇ ನೋಡುತ್ತಿದ್ದ ಎಂದು ಯೋಚಿಸುತ್ತಿರುವಾಗಲೆ, ಅವನ ತಾಯಿ ಬಳಿಯಿದ್ದ ಚೀಲದಿಂದ ಹಾಲಿನ ಬಾಟಲೊಂದನ್ನು ತೆರೆದು ಮೂರು ಪ್ಲಾಸ್ಟಿಕ್ ಗ್ಲಾಸ್ಗೆ ಇಷ್ಟಿಷ್ಟೇ ತನ್ನ ಮಕ್ಕಳಿಗೆ  ಹಾಕಿಕೊಡ ತೊಡಗಿದಳು. ಬಡತನಕ್ಕೆ ಬಾಯಿ ದೊಡ್ದದಲ್ವೇ? ಆ ಮಕ್ಕಳು ಹಾಲನ್ನು ಕ್ಷಣ ಮಾತ್ರದಲ್ಲಿ ಕುಡಿದು ಗ್ಲಾಸನ್ನು ಆಕೆಯ ಮುಂದಿಟ್ಟು, "ಇನ್ನೊಂಚೂರು" ಎಂಬಂತೆ ನೋಡುತ್ತಿದ್ದವು.ಆಕೆ "ಏಯ್! ಬಾಯ್ಮುಚ್ಚ್ ಇಷ್ಟೆ" ಅನ್ನುತಿದ್ದರೂ ಕೇಳಿಸಿಕೊಳ್ಳದ ಅವು ಒಂದೇ ಸಮನೆ ಅಳಲು ಶುರುವಿಟ್ಟುಕೊಂಡವು.
ತನ್ನ ಮಕ್ಕಳ ಹಸಿವಿನ ಆಕ್ರಂದನ ಆ ತಾಯಿಗೆ ಕೇಳಿಸಲಿರದೇ ಸಾಧ್ಯವೇ? ಖಂಡಿತ ಕೇಳಿಸಿರುತ್ತದೆ. ಪಾಪ ಆಕೆ ತಾನೆ ಏನು ಮಾಡಿಯಾಳು? ತನ್ನ ಅಸಹಾಯಕತೆ ತನ್ನ ಮಕ್ಕಳ ಹಸಿವಿಗೆ ಸ್ಪಂದಿಸಲಿಲ್ಲ,   ದುಡಿದು ತಿನ್ನೋಣವೆಂದರೆ ಅಂಗವಿಕಲತೆ,   ಕೈ ಹಿಡಿದ ಗಂಡ ಮೂರು ಮಕ್ಕಳ ಕರುಣಿಸಿ ಅದೆಲ್ಲಿದ್ದಾನೋ? ಭಿಕ್ಷೆಯೊಂದೆ ನಂಬಿಕೊಂಡಿದ್ದಾಳೆ ಮೂರು ಮಕ್ಕಳ ಹೊಟ್ಟೆ ತುಂಬಿಸಲು. ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ನನಗೆ  ಜೇಬಿಗೆ ಕೈಹಾಕಿ ನನ್ನ ಕೈಲಾದಷ್ಟು ಕೊಡೋಣ ಅಂದು ಮುಂದಾದೆ. ಅಷ್ಟರಲ್ಲಿ ನನ್ನ ಮುಂದೆ ನನಗೇ ಗೊತ್ತಗದ ಹಾಗೆ ನಾನು ಹತ್ತ ಬೇಕಿದ್ದ ಬಸ್ಸು ಬಂದು ನಿಂತಿತ್ತು! ಅಯ್ಯೋ ಪಾಪಿ ಬಸ್ಸೇ!
ಹೇಳಿದೆನೆಲ್ಲ ಆಫೀಸಿನ ಧಾವಂತದಲ್ಲಿದ್ದ ನನಗೆ ತಕ್ಷಣ ಮನಸ್ಸು ಅತ್ತ ಕಡೆ ಹೊರಳಿದಂತಾಗಿ ಬಸ್ಸಿನೆಡೆ ಧಾವಿಸಿದೆ. ಬಸ್ಸು ಹತ್ತಿ ನಿಂತವನ ಮನಸು ಮರಳಿ ಆ ತಾಯಿ ಮಕ್ಕಳ ಬಗ್ಗೆಯೇ ಯೋಚಿಸುತ್ತಿತ್ತು. ಸರಿ ಬಿಡು ಪರ್ವಾಗಿಲ್ಲ ಹೇಗಿದ್ದರು ಅಲ್ಲೇ ಇರುತ್ತಾರೆ, ನಾಳೆ ಕೊಟ್ಟರಾಯ್ತು ಅಂದುಕೊಂಡು ಸುಮ್ಮನಾದೆ.
ಅದಕ್ಕೇ ನಾನು ಮೊದಲೇ ಹೇಳಿದ್ದು : ತಪ್ಪು ನಂದೋ ಬಸ್ಸಿನದೋ ತಿಳಿಯುತ್ತಿಲ್ಲ ಅಂತ, ಯಾಕೆಂದರೆ ಮರು ದಿನ ಮರೆಯದೆ ಹೋಗಿ ಅವರನ್ನು ಹುಡುಕಿದ್ದೇ ಹುಡುಕಿದ್ದು ಅವರು ಮಾತ್ರ ಎಲ್ಲೂ ಪತ್ತೆಯಿಲ್ಲ!
ಬೇಕೂ ಬೇಡವೆಂದರೂ ನೆನ್ನೆ ನನ್ನನ್ನೇ ನೊಡುತ್ತಿದ್ದ ಆ ಹುಡುಗ ನೆನಪಾದ. ಈಗಲು ನನ್ನನ್ನು ನೋಡುತ್ತಿದ್ದಾನೆನಿಸಿತು, ಆ ತಾಯಿ ಮಕ್ಕಳ ಆಕ್ರಂದನ ಕಣ್ಣ್ ಮುಂದೆ ಬಂದಂತಾಗಿ ಅಲ್ಲಿಂದ ಜಾಗ ಬದಲಿಸಿ ಮುಂದೆ ಹೋದೆ.
ಪಾಪಿ ಬಸ್ಸು ಅವತ್ತು ಎಷ್ಟೊತಾದರೂ ಬರಲಿಲ್ಲ.
…..…...........…
ಮೋಹನ್ ಕುಮಾರ್ ಡಿ ಎನ್

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...