Wednesday, February 21, 2018

ಹೆಣ್ಣ್ಮಕ್ಕಳ ನಂಬರ್ ಮಾರಾಟಕ್ಕಿದೆ..!!!
°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°°


ಈ ಮೊಬೈಲ್ ಅನ್ನೋದು ಬಗಲ್ ಕಾ ದುಷ್ಮನ್ ನಂತೆ. ಜಿಂದಗೀ ಹಮೇ ತೇರಾ ಏತ್ ಬಾರ್ ನಾ ರಹಾ ತರಹ ದೋಸ್ತಿಯೂ ಹೌದು. ಯಾವುದೇ ಕುಚೇಷ್ಟೆ ಇಲ್ಲದೆ ಸರಾಗವಾಗಿ ಸಾಗಬೇಕೆಂದರೆ ಮೊಬೈಲಿಗೂ ಬ್ಯಾಲೆನ್ಸ್ ಖಾಲಿಯಾದಾಗಲೆಲ್ಲಾ ರೀಚಾರ್ಜ್ ಮಾಡಿಸುತ್ತಿರಬೇಕು. ಇಲ್ಲದಿದ್ದರೆ ಹೇಳದೆ ಕೇಳದೆ ಓಡಿ ಹೋಗುವ ಪ್ರೇಯಸಿಯಂತೆ, ಕಾರಣವೇ ಇಲ್ಲದೆ ಹೆಂಡತಿ ಮುನಿದು ತೌರಿಗೆ ಹೋದಂತೆ, ಇಂಥ ಜಾಗವೆನ್ನದೆ, ನಾವೆಲ್ಲಿದ್ದೀವಿ ಎಂದು ಕೇಳದೆ, ನಮ್ಮ ಜರೂರತ್ತು ತುರ್ತು ಗಮನಿಸದೆ ತನ್ನ ಕೆಲಸ ಸ್ಥಗಿತಗೊಳಿಸಿಬಿಡುತ್ತದೆ ಈ ಜಂಗಮ ದೂರವಾಣಿ.

ನೀವು ಬಿಡಿ ನಿಮ್ಮ ಮೊಬೈಲಿನಲ್ಲಿ ಇಂಟರ್ನೆಟ್ ಇದೆ, ಅದಕ್ಕಿಂತ ಹೆಚ್ಚಾಗಿ ಅಕೌಂಟ್ನಲ್ಲಿ ಬ್ಯಾಲೆನ್ಸ್ ಇದೆ (ಅದು ವೈಟ್ ಆಗಿದ್ದರೆ ಸಾಕು). ಕುಳಿತಲ್ಲೇ ಚಕಚಕ ಎಷ್ಟು ಬೇಕೋ ಅಷ್ಟು ರೀಚಾರ್ಜ್ ಮಾಡಿಸುತ್ತೀರ. ಆಮೇಲಿನ್ನೇನಿದೆ? ಗಾಡಿ ಚಲಾ ರಹೀ ಹೈ ಸೀಟಿ ಬಜಾ ರಹೀ ಹೈ..

ಆದರೆ ನಿಮ್ಮಂತೆ ರಾಜವೈಭೋಗ ಎಲ್ಲರಿಗೂ ಇರಲು ಸಾಧ್ಯವೇ? ಒಂದು ಪಕ್ಷ ಆ ವೈಭೋಗ ಇದ್ದೀತು ಅಂದುಕೊಳ್ಳಿ, ಆದರೆ ನಿಮ್ಮಂತೆ ಮೊಬೈಲ್ ಆಪರೇಟ್ ಮಾಡಿ ರೀಚಾರ್ಜ್ ಮಾಡಿಸಲು ಎಷ್ಟು ಜನಕ್ಕೆ ಬರುತ್ತದೆ? ಆಗ ಮನೆಯಿಂದ ನೀವು ಹೊರಬೀಳಲೇ ಬೇಕು. ಮಾಹಿತಿ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ನಮ್ಮ ಕೆಲವು ಕೆಲಸಗಳನ್ನು ನಾವೇ ಮಾಡಬೇಕು ಮತ್ತು ಆ ಕೆಲಸಕ್ಕೆ ಮುಂದುವರಿದ ಯಾವುದೇ ಸಾಧನ ಸಮೂಹಗಳು ಕೆಲವು ವಿಷಯ ಮತ್ತು ಸಮಯಗಳಲ್ಲಿ ಉಪಯೋಗಕ್ಕೆ ಬಾರದು ಅಥವಾ ಬಂದರೂ ಬಳಸಲು ಆಗದು.

ನೋಡಿ ಭಾರತದಲ್ಲಿ ನೂರು ಕೋಟಿಗೂ ಅತ್ಯಧಿಕ ಜನ ಮೊಬೈಲ್ ಬಳಸುತ್ತಾರೆ. ನಮಗೆ ಬೇಕಾದ ಮಾಹಿತಿ ಹುಡುಕುವುದೋ, ಬಿಲ್ಲ್ ಪೇ ಮಾಡುವುದೋ, ನಾಗರೀಕ ಸೇವಾ ಕೇಂದ್ರಕ್ಕೆ ಕರೆ ಮಾಡುವುದೋ, ಸಮಸ್ಯೆಗೆ ಪರಿಹಾರವೋ, ದೂರನ್ನು ದಾಖಲಿಸುವುದೋ, ಆಫರ್ಸ್ ವಿಚಾರಣೆ, ನೆಟ್ವರ್ಕ್ ಸಂಬಂಧೀ ಮಾಹಿತಿ, ರೀಚಾರ್ಜ್..ಹೀಗೆ ಹತ್ತು ಹಲವು ಸೇವೆಗಳಿವೆ. ನೂರು ಕೋಟಿಗೂ ಅತ್ಯಧಿಕ ಮೊಬೈಲ್ ಬಳಸುವ ಜನರಲ್ಲಿ ತಮ್ಮ ಮೊಬೈಲ್ ಬಳಸಿ ಇಂಟರ್ನೆಟ್ ಮೂಲಕ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವ ಮಂದಿಯೆಷ್ಟು ಗೊತ್ತಾ? ಕೇವಲ ಮೂವತ್ತು ಕೋಟಿ ಜನ! ಇನ್ನುಳಿದ ಎಪ್ಪತ್ತು ಕೋಟಿ ಜನ..ಓಂ ನಮಃ ಶಿವಾಯ..

ಆಶ್ಚರ್ಯವಾಯಿತೇ? ಆಗಲೇಬೇಕು. ಭಾರತದಂತಹ ಅಭ್ಯವೃದ್ಧಿಶೀಲ ರಾಷ್ಟದಲ್ಲಿ ದಿನ ಬಳಕೆ ವಸ್ತುವಾದ ಮೊಬೈಲ್ ಬಳಸುವರೇನೋ ಹೆಚ್ಚೇ. ಆದರೆ ಅದನ್ನು ಹೇಗೆಲ್ಲಾ ಬಳಸಬಹುದೆಂದು ತಿಳಿದಿರುವುದು, ಮೊಬೈಲಿನ ಹಲವು ಸೇವೆಗಳನ್ನು ಬಳಸುತ್ತಿರುವ ಮೂವತ್ತು ಕೋಟಿಗಿಂತಲೂ ಕಡಿಮೆ ಎಂದರೆ ನಂಬಲೇಬೇಕು. ಏನನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವ ಬೇಸಿಕ್ ತಿಳಿವಳಿಕೆ ಮತ್ತು ಜ್ಞಾನ ಇಲ್ಲದ ಅದೆಷ್ಟೋ ಜನರು ತಾವು ಮಾಡುತ್ತಿರುವ ಒಂದು ಸಣ್ಣ ತಪ್ಪಿನಿಂದ ಪ್ರತಿ ನಿತ್ಯ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅದರಲ್ಲೂ ಯುವತಿಯರು ಮತ್ತು ಮಹಿಳೆಯರು. ಈ ಲೇಖನ ಬರೆಯುತ್ತಿರುವ ಉದ್ದೇಶವೂ ಅದೇ ಆಗಿದೆ. ಬನ್ನಿ ಹಾಗಾದರೆ ಆ ಸಣ್ಣ ತಪ್ಪು ಯಾವುದೆಂದು ತಿಳಿಯುವ.

ಘಟನೆ 1: ಗಿರಿಜಾ ಎಸ್ಸೆಸ್ಸೆಲ್ಸಿ ಮುಗಿಸಿ ಈಗ ತಾನೆ ಕಾಲೇಜ್ ಮೆಟ್ಟಿಲು ಹತ್ತಿದ್ದಾಳೆ (ಕಾಲಿಗೆ ಏಜ್ ಆದದ್ದರಿಂದಲ್ಲ). ಕಾಲೇಜ್ ಇರೋದು ಊರಿಂದ ಇಪ್ಪತ್ತು ಕಿಲೋಮೀಟರ್ ದೂರಕ್ಕೆ(ಎಷ್ಟೋ ಕಡೆ ವಿದ್ಯಾರ್ಥಿಗಳು ಒನ್ ಸೈಡ್ ಐವತ್ತು ಕಿಲೋಮೀಟರ್ ಮಿಕ್ಕು ಹೋಗಿ ಬರಬೇಕು. ನಮ್ಮ ಗಿರಿಜೆಗೆ ಪುಣ್ಯಕ್ಕೆ ಅಷ್ಟೊಂದು ಕಷ್ಟವಿಲ್ಲ). ಬಸ್ಸಲ್ಲಿ ಹೋಗೋದು ಅದರಲ್ಲೇ ಬರೋದು. ಬೆಳೆದಿದ್ದಾಳೆ, ಕಾಲೇಜಿಗೆ ಹೋಗುತ್ತಿದ್ದಾಳೆ ಮತ್ತು ದೂರ ಎನ್ನುವ ಕಾರಣಕ್ಕೆ ಅವಳ ತಂದೆ ಅವಳಿಗೊಂದು ಮೊಬೈಲ್ ಕೊಡಿಸಿದ್ದಾರೆ. ಹೊಸದರಲ್ಲಿ ಎಲ್ಲವೂ ಚೆನ್ನಾಗಿತ್ತು - ಕಾಲೇಜ್ ಮತ್ತು ಮೊಬೈಲ್. ಎರಡರ ಸಾಂಗತ್ಯ ಹಿತವೆನ್ನಿಸುತ್ತಿತ್ತು. ಹೊಸಲೋಕ, ಹೊಸ ಗೆಳೆತನ, ಹೊಸ ಬದುಕು, ಹೊಸ ಮೊಬೈಲ್...

ಆದರೆ ಕಾಲೇಜಿಗೆ ಹೋಗಿ ಒಂದೆರೆಡು ತಿಂಗಳಾಗುವಲ್ಲೇ ಗಿರಿಜೆ ಎಲ್ಲದರಲ್ಲಿ ಉತ್ಸಾಹ ಕಳೆದುಕೊಂಡಳು. ನೀರವ ಮೌನಕ್ಕೆ ಶರಣಾದಳು. ಎಷ್ಟು ವಿಚಾರಿಸಿದರೂ ಯಾಕೆ ಅಂತ ಯಾರಿಗೂ ತಿಳಿಯಲಿಲ್ಲ, ಅವಳು ಬಾಯಿಯೂ ಬಿಡಲಿಲ್ಲ. ಬರುಬರುತ್ತಾ ಆಕೆ ಮನೆಯವರಿಗೆ ವಿಚಿತ್ರ ಸ್ವಭಾವದವಳಾಗಿ ಕಾಣಿಸತೊಡಗಿದಳು. ಮನೆಯವರು ಯಂತ್ರ, ಮಂತ್ರ, ಕಾಯಿ, ವೈದ್ಯ ಅಂತ ಏನೇ ಮಾಡಿಸಿದರೂ ಮೊದಲಿನಂತಾಗಲಿಲ್ಲ. ಒನ್ ಫೈನ್ ಡೇ, ಮನೆಯಲ್ಲಿ ಯಾರೂ ಇಲ್ಲದಾಗ ಬೆಂಕಿ ಇಟ್ಟುಕೊಂಡು ಸತ್ತು ಹೋದಳು. ಅಲ್ಲಿಗೆ ಹೂವಾಗಿ ಚಂದಗೆ ಅರಳಬೇಕಿದ್ದ ಮೊಗ್ಗೊಂದು ಕಮರಿ ಹೋಯಿತು.

ಘಟನೆ 2 : ರೇವತಿಯದು ಗಂಡ ಮತ್ತು ಮಕ್ಕಳ ಜೊತೆ ಅನ್ಯೋನ್ಯ ಸಂಸಾರ. ಪ್ರೀತಿಸಿ ಮದುವೆಯಾದವಳು ಆಕೆ. ಗಂಡನೂ ಅಷ್ಟೇ ಪ್ರೀತಿಸುತ್ತಾನೆ. ಒಳ್ಳೇ ಕೆಲಸದಲ್ಲಿದ್ದಾನೆ. ಕೈ ತುಂಬಾ ಸಂಬಳ. ಮಕ್ಕಳು ಮುತ್ತಿನಂಥವು. ಗಂಡ ಆಫೀಸಿಗೆ, ಮಕ್ಕಳು ಶಾಲೆಗೆ ಹೋದ ಮೇಲೆ ಈಕೆ ಮೊಬೈಲ್ ಮುಂದೆ ಸ್ಥಾಪಿತಳಾಗುತ್ತಿದ್ದಳು. ಟೀವಿ ನೋಡುತ್ತಿದ್ದಳು. ಪಕ್ಕದ ಮನೆಯವರ ಜೊತೆ ಹರಟೆ ಹೊಡೆಯುತ್ತಿದ್ದಳು. ಮನೆಗೆಲಸ ಮಾಡಿಕೊಳ್ಳುತ್ತಿದ್ದಳು. ಸಂಜೆಯಾದರೆ ಸರ್ವಂ ಸುಖಮಯಂ ಎನ್ನುವಂತೆ ಮಕ್ಕಳು ನಂತರ ಗಂಡ ಬರುತ್ತಿದ್ದರು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ ಆಕೆ ಕೂಡ ಒನ್ ಫೈನ್ ಡೇ, ಗ್ಯಾಸ್ ಬಿಟ್ಟು ಸ್ಪೋಟಿಸಿಕೊಂಡು ಸತ್ತಳು.

ಕಾರಣವೇನು ಗೊತ್ತಾ? ಮೊಬೈಲ್ ರೀಚಾರ್ಜ್! ಹೌದು, ಈ ಮೈಬೈಲ್ ರೀಚಾರ್ಜ್ ಕೂಡ ನಮಗೇ ತಿಳಿಯದಂತೆ ನಮ್ಮ ಮನೆಯ ಯುವತಿಯರನ್ನು, ಮಹಿಳೆಯರನ್ನು ಅವರು ಮಾಡುವ ಒಂದು ಸಣ್ಣ ತಪ್ಪಿನಿಂದಾಗಿ ಅವರನ್ನೇ, ಅವರಿಗೇ ತಿಳಿಯದಂತೆಯೇ ಬಲಿ ಪಡೆಯುತ್ತಿದೆ. ಹೇಗೆಂದರೆ, ಗಿರಿಜೆ ಮೊಬೈಲ್ ರೀಚಾರ್ಜ್ ಮಾಡಿಸಲು ಅಂಗಡಿಗೆ ಹೋದಳು. ತನ್ನ ನಂಬರ್ ಅಂಗಡಿಯ ರಿಜಿಸ್ಟರ್ನಲ್ಲಿ ಬರೆದಳು. ರೀಚಾರ್ಜ್ ಮಾಡಿಸಿದಳು. ಬಂದಳು. ಸ್ವಲ್ಪ ದಿನಗಳ ನಂತರ ಸತ್ತಳು! ರೇವತಿಯದೂ ಇದೇ ಪಾಡು.

ಹೀಗ್ಯಾಕೆಂದು ತಲೆ ಕೆಡಿಸಿಕೊಂಡಿರಲ್ಲವೇ? ಮೊಬೈಲ್ ರೀಚಾರ್ಜ್ ಮಾಡಿಸಿದ್ದಕ್ಕೂ ಸಾಯುವುದಕ್ಕೂ ಎತ್ತಣಿಂದೆತ್ತ ಸಂಬಂಧ? ಸಂಬಂಧ ಇದೆ ಗೆಳೆಯರೇ! ಗಿರಿಜೆ ಮತ್ತು ರೇವತಿ ಮೊಬೈಲ್ ರೀಚಾರ್ಜ್ ಮಾಡಿಸುವಾಗ ರಿಜಿಸ್ಟರ್ನಲ್ಲಿ ಅಮಾಯಕವಾಗಿ ತಮ್ಮ ನಂಬರ್ ಬರೆದು ಬಂದಿದ್ದರಲ್ಲ? ಅದೇ ಅವರನ್ನು ಸಾವಿನತ್ತ ಕರೆದೊಯ್ದಿದ್ದು. ಹೇಗೆಂದರೆ, ಅವರು ರೀಚಾರ್ಜ್ ಮಾಡಿಸಿ ಮನೆಗೆ ಬಂದರು. ಆದರೆ ಆ ಅಂಗಡಿಯವನಿದ್ದಾನಲ್ಲ? ಅವನು ಗಿರಿಜೆ ಮತ್ತು ರೇವತಿ ಹೋಗುವ ತನಕ ಸುಮ್ಮನಿದ್ದು, ಹೋದ ಮೇಲೆ ಅವರ ನಂಬರನ್ನು ಮಾರ್ಕ್ ಮಾಡಿಟ್ಟುಕೊಂಡ. ಹಾಗೆ ಮಾರ್ಕ್ ಮಾಡಿಟ್ಟುಕೊಂಡ ನಂಬರನ್ನು ಕೆಲಸವಿಲ್ಲದೆ ಅಲೆಯುತ್ತಿರುವ ಪುಂಡುಪೋಕರಿಗಳಿಗೆ, ಕಾಲೇಜಿನ ಯುವಕರಿಗೆ, ಬೀದಿಬೀದಿಯಲ್ಲಿ ಅಂಡಲೆಯುತ್ತಿರುವ ಕಾಮುಕರಿಗೆ ಮಾರಾಟ ಮಾಡಿದ! ಇದು ನಂಬಲು ಕಷ್ಟವಾದರೂ ನಂಬಲೇ ಬೇಕು. ಇದು ಕೇವಲ ಒಂದೆರೆಡು ಕಡೆ ನಡೆಯುತ್ತಿರುವ ನಂಬರ್ ಗೋಲ್ ಮಾಲ್ ಅಲ್ಲ, ಬಹುತೇಕ ಕಡೆ ಇದೇ ಪರಿಸ್ಥಿತಿ ಇದೆ.

ಈ ರೀತಿ ತಮ್ಮ ಅಂಗಡಿಗೆ ಬರುವ ಯುವತಿಯರು ಮತ್ತು ಮಹಿಳೆಯರ ಮೊಬೈಲ್ ನಂಬರನ್ನು ಕದ್ದು ಮಾರುವ ವ್ಯವಸ್ಥಿತ ಜಾಲವೊಂದು ನಮ್ಮ ಅರಿವಿಗೇ ಬರದೆ ನಮ್ಮ ನಡುವೆಯಿದ್ದುಕೊಂಡು ಕೆಲಸ ಮಾಡುತ್ತಿದೆ. ಈ ರೀತಿಯ ನಂಬರ್ಗಳಿಗೆ ಬಹು ಬೇಡಿಕೆಯಿದೆ. ಒಂದೊಂದು ನಂಬರಿಗೂ ಒಂದೊಂದು ರೇಟು ಕೊಡಲಾಗುತ್ತದೆ. ನಂಬರ್ ಎಷ್ಟು ಫ್ಯಾನ್ಸಿ ಎನ್ನುವ ಆಧಾರದ ಮೇಲಲ್ಲ. ನೋಡಲು ಯುವತಿಯರು ಮತ್ತು ಮಹಿಳೆಯರು ಎಷ್ಟು ಚೆನ್ನಾಗಿದ್ದಾರೆ, ಅವರ ಅಂಗ ಸೌಂದರ್ಯ ಹೇಗಿದೆ, ಎಷ್ಟಿದೆ ಎನ್ನುವುದರ ಮೇಲೆ! ನೋಡಲು ಸುಮಾರಾಗಿದ್ದರೆ ಒಂದು ನಂಬರಿಗೆ ಐವತ್ತು, ಸಾಧಾರಣವಾಗಿದ್ದರೆ ಇನ್ನೂರು, ಸ್ಫುರದ್ರೂಪಿಯಾಗಿದ್ದರೆ ಐನೂರವರೆಗೂ ನಂಬರ್ ಸೇಲ್ ಮಾಡುತ್ತಾರೆ.

ದುಡ್ಡು ಎಣಿಸಿ ನಂಬರ್ ಪಡೆದುಕೊಂಡವರು ಏನು ಮಾಡುತ್ತಾರೆ ಎಂದುಕೊಳ್ಳುವಿರೇನೋ? ಕಾಲ್ ಮಾಡುತ್ತಾರೆ! ನಿಮಗೆ ಕಾಲ್ ಮಾಡುವ ಅವರು ಹೇಳುವ ಮೊದಲ ಮಾತೆಂದರೆ, ನನ್ನ ಜೊತೆ ಸ್ನೇಹ ಮಾಡಿಕೊಳ್ಳಿ ಎನ್ನುತ್ತಾರೆ. ನೀವು ನೋಡಲು ಚೆನ್ನಾಗಿದ್ದೀರ, ಮಾಡೆಲಿಂಗ್ನಲ್ಲಿ ಆಸಕ್ತಿಯಿದೆಯೇ ಎಂದು ಕೇಳುತ್ತಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವ ಆಸೆಯಿದೆಯೇ ಎಂದು ಹಳ್ಳಕ್ಕೆ ಕೆಡವುತ್ತಾರೆ. ಸುಮಾರಾಗಿ ಮತ್ತು ಅಷ್ಟೇನು ಸ್ಫುರದ್ರೂಪಿಗಳಲ್ಲದವರಿಗೆ ಅಶ್ಲೀಲ ಚಿತ್ರ ರವಾನಿಸುತ್ತಾರೆ. ಹೊತ್ತಲ್ಲದ ಹೊತ್ತಲ್ಲಿ, ಅವರಿಗೆ ಬೇಕೆನಿಸಿದಾಗ ಕಾಲ್ ಮಾಡಿ, ಇಲ್ಲಸಲ್ಲದ್ದನ್ನು ಹೇಳುತ್ತಾ ಯುವತಿಯರು ಮತ್ತು ಮಹಿಳೆಯರ ತಲೆಕೆಡಿಸುತ್ತಾರೆ. ಮುಂದುವರಿದು ಬ್ಲಾಕ್ಮೇಯ್ಲ್ ಮಾಡುತ್ತಾರೆ. ಎಂತಹ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಾರೆಂದರೆ, ಪಾಪ! ಯುವತಿಯರು ಮತ್ತು ಮಹಿಳೆಯರು ತಮಗಾಗುತ್ತಿರುವ ಸಂಕಟವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದಷ್ಟು. ಯಾವುದಕ್ಕೂ ಜಗ್ಗದವರಿಗೆ ಇಂಟರ್ನೆಟ್ನಲ್ಲಿ ಅವರ ಅಶ್ಲೀಲ ಚಿತ್ರ ಅಪ್ಲೋಡ್ ಮಾಡಿ ನೋಡು ಎನ್ನುತ್ತಾರೆ. ಟ್ರೂ ಕಾಲರ್ ಬಳಸಿ ನಿಮ್ಮ ನಂಬರ್ ಸಹಾಯದಿಂದ ನಿಮ್ಮ ಫೇಸ್ಬುಕ್ಕ್ ಪ್ರೊಫೈಲ್ ಕಂಡು ಹಿಡಿದು, ನಿಮ್ಮ ಚಿತ್ರಗಳನ್ನು ತಮಗೆ ಬೇಕಾದಂತೆ ಅಶ್ಲೀಲವಾಗಿ ಮಾಡಿ ಇಂಟರ್ನೆಟ್ಟಿಗೆ ಹರಿಬಿಡುತ್ತಾರೆ. ಇದನ್ನೆಲ್ಲಾ ತಿಳಿದ ಹೆಣ್ಣು ಮಕ್ಕಳು ಹೇಗೆ ಉಸಿರಾಡುತ್ತಾರೆ? ಉಹುಂ, ಮುಂದಾಗುವ ಅನಾಹುತವನ್ನು ನೆನೆಸಿಕೊಂಡು, ಮನೆತನದ ಮಾನ ಮರ್ಯಾದೆಗೆ ಅಂಜಿ ತಮ್ಮ ಉಸಿರನ್ನು ಗಿರಿಜೆ, ರೇವತಿಯಂತೆ ಶಾಶ್ವತವಾಗಿ ನಿಲ್ಲಿಸಿಬಿಡುತ್ತಾರೆ.

ಈ ರೀತಿ ಘಟನೆಗಳು ಉತ್ತರ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆದು ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ಸಹಾಯವಾಣಿಗೆ 1090 ಗೆ ಬರೋಬ್ಬರಿ, ಹಿಂದೆಂದೂ ಬಂದಿರದಷ್ಟು, ಆರು ಲಕ್ಷ ಕರೆಗಳು ಹೋಗಿವೆ. ಅದರಲ್ಲಿ ತೊಂಭತ್ತು ಪ್ರತಿಶತಃ ಇದೇ ಸಮಸ್ಯೆಗೆ ಸಂಬಂಧಿಸಿದಂತೆ ಕರೆಗಳು ಹೋದಾಗ, ಪೊಲೀಸರು ತಲೆಗೆರೆದುಕೊಂಡು ಇದ್ಯಾವುದಪ್ಪಾ ಹೊಸ ಸಮಸ್ಯೆಯೆಂದು ಪೇಚಿಗೆ ಸಿಲುಕಿದ್ದಾರೆ. ಆದರೆ ನೆಗ್ಲೆಕ್ಟ್ ಮಾಡದೇ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿದಾಗ ನಂಬರ್ ಮಾರಿ ಯುವತಿಯರು ಮತ್ತು ಮಹಿಳೆಯರನ್ನು ಯಾಮಾರಿಸುವ ಅಂಶ ಬೆಳಕಿಗೆ ಬಂದಿದೆ.

ಘಟನೆ ಸಂಬಂಧೀ ಮೊಹಮ್ಮದ್ ಎನ್ನುವ ಇಪ್ಪತ್ನಾಲ್ಕು ವರ್ಷದ ಯುವಕನನ್ನು ಪ್ರಶ್ನಿಸಿದಾಗ ಅವನು ಹೇಳಿದ್ದು ಇಷ್ಟು : ನನ್ನ ಸ್ನೇಹಿತ ಮೊಬೈಲ್ ಅಂಗಡಿ ಇಟ್ಟಿದ್ದಾನೆ. ಅವನ ತಂದೆಯೂ ಅಂಗಡಿಯಲ್ಲಿ ಸದಾ ಇರುತ್ತಿದ್ದರು. ಅವರು ಇಲ್ಲದ ವೇಳೆ ಅಂಗಡಿಗೆ ಹೋಗಿ ನನ್ನ ಸ್ನೇಹಿತನಿಂದ ನಂಬರ್ ತರುತ್ತಿದ್ದೆ. ಈ ಮೊಹಮ್ಮದ್ ತರದವರು ಅದಿನ್ನೆಷ್ಟು ಮಂದಿಯಿದಾರೋ!?

ಈ ರೀತಿ ಮೊಬೈಲ್ ಅಂಗಡಿಯನು ಮಾಡಿದಾಗ ಬ್ರೀಚ್ ಆಫ್ ಟ್ರಸ್ಟ್ ಆಗುತ್ತದೆ. ಅಂದರೆ ನಂಬಿಕೆಯಿಟ್ಟು ನಿನ್ನ ರಿಜಿಸ್ಟರ್ನಲ್ಲಿ ನಂಬರ್ ಬರೆದರೆ, ನೀನು ಅದನ್ನು ನನಗೇ ಗೊತ್ತಿಲ್ಲದೆ ಇನ್ನೊಬ್ಬನಿಗೆ ಮಾರಿಕೊಂಡರೆ ನಾನು ನಿನ್ನ ಮೇಲಿಟ್ಟ ನಂಬಿಕೆಯ ಉಲ್ಲಂಘನೆಯಾಗುತ್ತದೆ ಎಂದರ್ಥ. ವಿಪರ್ಯಾಸವೆಂದರೆ, ಇದು ಹೊಸ ಥರದ ಅಪರಾಧವಾಗಿರುವುದರಿಂದ, ಕಾನೂನು ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮಗಳನ್ನು ಜಾರಿಗೊಳಿಸದೇ ಇರುವುದರಿಂದ (ಸೈಬರ್ ಸಂಬಂಧೀ ಹಲವು ಕಾಯಿದೆಗಳಿದ್ದಾಗ್ಯೂ) ಯಾರು ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಇದೇ ಕಾರಣಕ್ಕೆ ಸಿಕ್ಕಿ ಬಿದ್ದ ಅನೇಕ ತಲೆಹಿಡುಕರು ಉತ್ತರ ಪ್ರದೇಶದಲ್ಲಿ ಪೊಲೀಸರ ಕೈಯ್ಯಿಂದ ಬಚಾವಾಗಿ, ಸರಿಯಾದ ಸಾಕ್ಷ್ಯಾಧಾರಗಳ ಕೊರತೆಯಿಂದ ಆಚೆ ಬಂದಿದ್ದಾರೆ.

ಈ ರೀತಿ ಅದೆಷ್ಟು ಹೆಣ್ಣು ಮಕ್ಕಳ ನಂಬರ್ ಅದೆಷ್ಟು ಮಂದಿ ಮೊಬೈಲ್ ರೀಚಾರ್ಜ್ ಅಂಗಡಿಯರು ಅದೆಷ್ಟು ಮಂದಿಗೆ ಮಾರಿದ್ದಾರೋ? ಸುಲಭಕ್ಕೆ ಸಿಗುವ ಲೆಕ್ಕವಲ್ಲ ಇದು. ನಗರಗಳಲ್ಲಿ ವಾಸಿಸುತ್ತಿರುವ ಹೆಣ್ಣು ಮಕ್ಕಳಾದರೆ ಇದನ್ನು ಧೈರ್ಯದಿಂದ ಎದುರಿಸುತ್ತಾರೆ ಅನ್ನಬಹುದು. ಆದರೆ ಗ್ರಾಮೀಣ ಭಾಗದ, ಅಭಿವೃದ್ಧಿ ಹೊಂದದ ಪ್ರದೇಶಗಳಲ್ಲಿರುವ ಹೆಣ್ಣು ಮಕ್ಕಳು? ಆ ಹೆಣ್ಣು ಮಕ್ಕಳೇ ಇವರ ಟಾರ್ಗೆಟ್. ಸೋ ಬೀ ಕೇರ್ಫುಲ್ಲ್. ನಿಮ್ಮ ಮೊಬೈಲ್ ನಂಬರ್ ಮಾರಾಟಕ್ಕಿದೆ.

ಇನ್ನು ಮುಂದಾದರೂ ಗಿರಿಜೆಯಂತಹ, ರೇವತಿಯರಂತಹ ಅಮಾಯಕ ಯುವತಿಯರು ಮತ್ತು ಮಹಿಳೆಯರ ಮೇಲೆ ಕಂಡೂ ಕಾಣದೆ ನಡೆಯುತ್ತಿರುವ ಈ ತರಹದ ದೌರ್ಜನ್ಯಗಳು ನಿಲ್ಲಲಿ, ಬಾಳಿ ಬೆಳಗ ಬೇಕಾಗಿದ್ದ ಬಾಳುಗಳು ಕಾಣದ ಕೈಗಳ ಮನೋವಿಕೃತಕ್ಕೆ ಬಲಿಯಾಗದಿರಲಿ, ಈ ನಿಟ್ಟಿನಲ್ಲಿ ಸರಕಾರ ಗಟ್ಟಿಯಾದ ಕಾನೂನು ರಚಿಸಿ, ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುವಂತಾಗಲಿ ಎಂದು ಬಯಸೋಣ.

ಇಲ್ಲಿಂದಲೇ ಮೇಲೆ ನಭೋಮಂಡಲದಲ್ಲಿ ಅತೃಪ್ತ ನಕ್ಷತ್ರವಾಗಿ ಮಿನುಗದೆ ಕಳೆಗುಂದಿರುವ ಗಿರಿಜೆ ಮತ್ತು ರೇವತಿಯರಂತಹ ಅದೆಷ್ಟೋ ಯುವತಿಯರಿಗೆ ಮತ್ತು ಮಹಿಳೆಯರಿಗೆ ಇಲ್ಲಿಂದಲೇ ಆ ಭರವಸೆಯನ್ನು ಕೊಡುತ್ತಾ ಹಾಯ್ ಹೇಳೋಣ.

- ಎಂಕೆ.





Monday, February 19, 2018

ಲಕ್ಷಕ್ಕೆ ನೂರೆಂಬತ್ತು ಚಿಲ್ಲರೆ..
~~~~~~~~~~~~~~~~~~~~~~~~~~~~~~~~
ಸಂಖ್ಯೆಗಳ ಬಗ್ಗೆ ಸ್ವಲ್ಪ ಮಾತಾಡೋಣ..

ಸುಮಾರು ಹದಿನೈದಿಪ್ಪತ್ತು ವರ್ಷಗಳ ಹಿಂದಿನ ಮಾತು. ಅದು ಬಹಳಷ್ಟು ಜನರಿಗೆ ಈಗಲೂ ನೆನಪಿರಬಹುದು. ಅದು ಬಂದದ್ದೇ ಬಂದದ್ದು ಎಲ್ಲರೂ ಅಬಾಲವೃದ್ಧರಾಗಿ ಅದರೆಡೆ ಆಕರ್ಷಿತರಾದರು. ಕಾಲೇಜ್ ಹುಡುಗನ ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ ತಾನು ಇಷ್ಟಪಡುತ್ತಿದ್ದ ಹುಡುಗಿಯ ಹೆಸರೋ, ತನ್ನ ಫೇವರಿಟ್ ಹೀರೋ/ಹೀರೋಯಿನ್ ಹೆಸರೋ ಇರುತ್ತಿದ್ದಲ್ಲಿ ಇದ್ದಕ್ಕಿದ್ದಂತೆ ಅಲ್ಲೆಲ್ಲಾ ಬಂದು ಸ್ಥಾಪಿತವಾದದ್ದು 10/10 ಇಲ್ಲವೇ 12/12 ಚೌಕಾಕಾರವುಳ್ಳ ಮನೆಗಳು. ಅದರಲ್ಲಿ ತಮ್ಮ ಇಚ್ಚಾನುಸಾರ ಬರೆದಿದ್ದ ಅಂಕಿಗಳು. ಈಗ ಗಂಟೆಗೆ ಮೊದಲು ಆ ನಂಬರ್ ಹೊಡೆದಿತ್ತು, ಈ ಕಾಂಬಿನೇಷನ್ ನಂಬರ್ ಬಂದಿತ್ತು, ನಾವು ಮುಂದೆ ಇನ್ನೊಂದು ರೀತಿ ಸಂಖ್ಯೆ ಟ್ರೈ ಮಾಡೋಣ, ನೋಡು ಈಗಿರೋದು ಮೂರು ದಿನಗಳ ರಿಸಲ್ಟ್, ನೆಕ್ಸ್ಟ್ ಇದೇ ನಂಬರ್ ಆಡಿದರೆ ಪಕ್ಕಾ ದುಡ್ಡು ಮಗಾ!!... ಈಗ ನೆನಪಿಗೆ ಬಂತಾ? ಬರಲಿಲ್ಲವೆಂದರೆ ಬಿಡಿ, ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಅದು ಮತ್ತೇನು ಅಲ್ಲ.. ಪ್ಲೇವಿನ್!

ಗಂಟೆಗೊಮ್ಮೆ ಆಡಬಹುದಾಗಿದ್ದ ಆ ಆಟ (ಅದು ಜೂಜು) ಅದೆಷ್ಟು ಸನ್ಮಾನ್ಯರನ್ನು, ಸಾಮಾನ್ಯರನ್ನೂ ಆವರಿಸಿತ್ತೆಂದರೆ, ನೆಚ್ಚಿನ ನಟ ಬೀದಿಗೆ ಬಂದರೆ ಅಭಿಮಾನಿಗಳು ಆತನನ್ನು ಎಷ್ಟು ಆವರಿಸುತ್ತಾರೋ, ಅಷ್ಟು. ಪಾನಿಪುರಿ ಮಾಡೋನು ಕೋಟ್ಯಾಧಿಪತಿಯಾದ, ದನಕಾಯೋನು (ದುನಿಯಾ ವಿಜಿ ಅಲ್ಲ) ಕುಬೇರನಾದ ಎನ್ನುವ ಹಲವು ರೋಚಕತೆಗೆ ಒಳಗಾಗಿ ಯುವ ಸಮೂಹವೇ ಸಂಮೋಹನಾಸ್ತ್ರಕ್ಕೆ ಒಳಗಾದಂತೆ ಪ್ಲೇವಿನ್ ಆಟ ಆಡಿತು. ಅದನ್ನು ಆಡಿ ಗೆದ್ದವರೆಷ್ಟೋ ಕಳಕೊಂಡವರೂ ಅದಕ್ಕೆ ನಾಲ್ಕು ಪಟ್ಟು ಹೆಚ್ಚು. ಇದ್ಯಾಕೋ ಸರಿ ಬರಲ್ಲ ರೀ..ಮತ್ತೇನಾದರೂ ಹೇಳಿ ಅಂತೀರೇನೋ?

ಇದಕ್ಕೂ ಮುನ್ನ ಇಡೀ ಭಾರತಾದ್ಯಂತ ತನ್ನ ಅಖಂಡತ್ವವನ್ನು ಆವರಿಸಿ ತನ್ನ ಬಾಹುಭುಜಬಲ ಪರಾಕ್ರಮವನ್ನು ಸಾರಿದ್ದ ಇನ್ನೊಂದು ಸಂಖ್ಯೆಗಳ ಆಟವೆಂದರೆ ಅದು ಲಾಟರಿ. ಅದನ್ನು ಆಡದಿದ್ದವನೇ ನಾಲಾಯಕ್ಕ್ ಎನ್ನುವ ಮನೋಭಾವ ಇತ್ತು, ಆಡಿದರೆ ಕೆಟ್ಟವನಾಗುವೆನೇನೋ ಎನ್ನುವ ಆತಂಕವೂ ಇತ್ತು. ತನ್ನ ತನುಮನಧನಕನಕಾಧಿಯನ್ನು ಸರ್ವಥಃ ಧಾರೆಯೆರೆದವರಿದ್ದರು ಈ ಲಾಟರಿಗೆ. ಮನೆ, ಮಠ, ಆಸ್ತಿ, ಪಾಸ್ತಿ ಇದೆಲ್ಲದರ ಜೊತೆ ಬಡತನ, ನಿರ್ಗತಿಕತೆ, ಅವಮಾನ, ಹೆಂಗಳೆಯರ ಕಣ್ಣೀರು ಯಥೇಚ್ಛವಾಗಿ ಲಾಟರಿಯಿಂದ ಬಂದ ಕೊಡುಗೆಗಳು. ಕೊನೆಗೊಮ್ಮೆ ಬರುಬರುತ್ತಾ ಒಂದೊಂದೇ ಸರ್ಕಾರಗಳು ಅದನ್ನು ನಿಷೇಧಿಸುತ್ತಾ ಬಂದು ಕೆಲವೇ ರಾಜ್ಯಗಳಲ್ಲಿ ಅದೀಗ ಉಸಿರಾಡುತ್ತಿದೆ. ನಮಗೆ ಗೊತ್ತಿಲ್ಲದ ಹಲವು ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ತ್ರಿಪುರಾ, ಮಣಿಪುರ, ಮೇಘಾಲಯ ಮುಂತಾದ ಹೆಸರಿಗಳೂ ಪರಿಚಿತವಾದದ್ದೇ ಈ ಸಂಖ್ಯೆ ಆಟವಾದ ಲಾಟರಿಯಲ್ಲಿ! (ಅದಕ್ಕೋಸ್ಕರ ಈ ಆಟಕ್ಕೆ ನಾನು ಕೃತಜ್ಞ).

ಚುನಾವಣೆಯಲ್ಲಿ ಸಂಖ್ಯೆಗಳು ವಹಿಸುವ ಪಾತ್ರವಂತೂ ಎಲ್ಲರಿಗೂ ತಿಳಿದದ್ದೇ. ಹೆಚ್ಚು ಬಹುಮತದಿಂದ ಚುನಾವಣೆ ಗೆದ್ದೇ ಎನ್ನುವುದಕ್ಕಿಂತಲೂ ಒಂದೋ ಎರಡೋ ಮತಗಳಿಂದ ಸೋತೆ ಎಂದಾಗ ಅಂಕಿಗಳ ಮಹತ್ವ ಹೆಚ್ಚು ತಿಳಿಯುತ್ತದೆ.

ಭವಿಷ್ಯ ನುಡಿಯುವ ನ್ಯೂಮರಾಲಜಿಸ್ಟ್ಗಳು ನಂಬಿರುವುದು ಅಂಕಿಗಳನ್ನು. ಅಂಕಿಗಳೊಂದಿಗೇ ಅವರ ಜೀವನ ಯಾನ ಪ್ರಯಾಣ. ಅಂಕಿಗಳೇ ಅವರ ಜೀವನ ನಿರ್ವಹಿಸುವುದಕ್ಕೆ ಆಧಾರ.

ಇಸ್ಪೀಟಾಕ್ಕೆ, ಮಟ್ಕಾಕ್ಕೆ ಮೂಲ ಅಂಕಿಗಳೇ. ಬ್ಯಾಕಿಂಗ್, ಅಕೌಂಟಿಂಗ್, ಐಟಿ ಬಿಟಿ, ಸೈನ್ಸ್, ಸ್ಪೇಸ್, ಫಾರಿನ್ ಎಕ್ಸ್ಚೇಂಜ್, ಸ್ಟಾಕ್ ಎಕ್ಸ್ಚೇಂಜ್, ಬ್ಯಾಟಿಂಗ್, ರನ್ನಿಂಗ್, ವಿನ್ನಿಂಗ್, ಮ್ಯಾತ್ಸ್, ಸೌರಮಂಡಲ...ಹೀಗೆ ಅಡಿಯಿಂದ ಮುಡಿವರೆಗು, ಮೇಲಿಂದ ಕೆಳಗಿನವರೆಗು, ಪೂರ್ವದಿಂದ ಪಶ್ಚಿಮ ಉತ್ತರದಿಂದ ದಕ್ಷಿಣದವರೆಗೂ ಪ್ರತಿಯೊಬ್ಬನ ಜೀವನದಲ್ಲಿ ಹಾಸುಹೊಕ್ಕಾಗಿರೋದು ಸಂಖ್ಯೆಗಳು. ಸಂಖ್ಯೆಗಳು ಇಲ್ಲದೇ ಜೀವನವುಂಟೆ? ಸಂಖ್ಯೆಗಳು ನಮ್ಮ ನರನಾಡಿಯಲ್ಲಿ ಬೆರೆತಿರುವ ಪರಿ ಹೇಗೆಂದರೆ, ರಾಜ್-ಭಾರತಿ, ವಿಷ್ಣು-ಸುಹಾಸಿನಿ ಜೋಡಿಯಂತೆ. ಆ ಜೋಡಿಯನ್ನು ಬೇರ್ಪಡಿಸಿ ನೋಡಲು ಹೇಗೆ ಕಷ್ಟವೋ ಹಾಗೆ ಸಂಖ್ಯೆಯಿಲ್ಲದ ನಮ್ಮ ಜೀವನವನ್ನು ಊಹಿಸಿಕೊಳ್ಳಲೂ ಅಸಾಧ್ಯ. ಹೀಗೆ ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ, ಏಳಿಗೂ ಬೀಳಿಗೂ, ಉದ್ಧಾರಕ್ಕೂ ಹಾಳಾಗಲಿಕ್ಕೂ ಬೇಕಾಗೋರೋ ಈ ಸಂಖ್ಯೆ ಕುರಿತು ಒಂದು ಇಂಟರೆಸ್ಟಿಂಗ್ ವಿಷಯ ಹೇಳೋಣ ಅಂತ. ಇಷ್ಟುದ್ದ ಪೀಠಿಕೆ ಹಾಕಿದ್ದೇ ಇದನ್ನ ಹೇಳೋಣ ಅಂತ ರೀ..

ನಮಗೆ ಗೊತ್ತಿಲ್ಲದೇ ನಮ್ಮ ಜೀವನದಲ್ಲಿ ಈ ಸಂಖ್ಯೆಗಳು ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ. ಆದರೆ ಅದು ನಮ್ಮ ಅರಿವಿಗೆ ಬರುವುದಿಲ್ಲ. ಅದು ಸಮಸ್ಯೆಯ ರೂಪತಾಳಿ ನಮ್ಮ ಮನೆ ಬಾಗಿಲಿಗೆ ಬರೋವರೆಗೂ ಸಂಖ್ಯೆ ನಮ್ಮ ಜೀವನದಲ್ಲಿ ವಹಿಸುವ ಪ್ರಾಮುಖ್ಯತೆ ತಿಳಿಯುವುದಿಲ್ಲ. ಅದ್ಕಕೊಂಡು ಉದಾಹರಣೆ ಕೆಳಗಿದೆ ನೋಡಿ.

ಅನುಪಾತ ಎಲ್ಲ ವಿಷಯಗಳಿಗೂ ಸಮತೋಲಿತವಾಗಿರಬೇಕೆನ್ನುವುದು ನಿರ್ವಿಧಿತ. ಅದು ಪ್ರೀತಿ ಪ್ರೇಮ, ಕಾಮ ವಿರಹ, ನೋವು ನಲುವು, ಏಳು ಬೀಳು, ಕಷ್ಟ ಸುಖ, ಬಿಕ್ಕಳಿಕೆ ತೇಕಳಿಕೆ ಎಲ್ಲಕ್ಕೂ ಅನ್ವಯಿಸುತ್ತದೆ. ನಾವು ದಿನ ನಿತ್ಯ ಬಳಸುವ ಸಂಖ್ಯೆಗೂ ಒಂದು ಸಮತೋಲಿತ ಅನುಪಾತ ಇದೆಯೆಂದರೆ ನಂಬುತ್ತೀರಾ? ಅದನ್ನೇ ಈಗ ನಾನು ಹೇಳಹೊರಟಿರೋದು. ಯಾವ ಸಂಗತಿಗಳಲ್ಲಿ ಸಮಾನಾಂತರ ಅಂಶಗಳಿಲ್ಲವೋ ಅದು ಕೆಲಸಕ್ಕೆ ಬರುವುದಿಲ್ಲ. ಇದರಿಂದಾಗಿ ಹಲವು ತೊಂದರೆಗಳು ಉದ್ಭವಿಸುತ್ತವೆ. ಊಟಕ್ಕೆ ಉಪ್ಪು, ಕಾಫಿಗೆ ಡಿಕಾಕ್ಷನ್, ಟೀಗೆ ಸಕ್ಕರೆ, ಸಾಹಿತ್ಯಕ್ಕೆ ಸಂಗೀತ, ಕಥೆಗೆ ಡೈರೆಕ್ಟರ್, ನಟನೆಗೆ ನಟ ಹೇಗೋ ಪೊಲೀಸ್ ಮತ್ತು ನಾಗರೀಕರಿಗೂ ಹಾಗೆ! ಇದೇನಪ್ಪಾ ಎಲ್ಲಿಯ ಬಾದರಾಯಣ ಸಂಬಂಧ ಪೊಲೀಸ್ ಮತ್ತು ನಾಗರೀಕರ ಸಮತೋಲಿತ ಅನುಪಾತಕ್ಕೆ ಅನ್ನುತ್ತೀರೇನೋ?

ಸುಮ್ಮನೆ ಕೆಳಗಿನ ಫ್ಯಾಕ್ಟ್ಸ್ ಮತ್ತು ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿ. ನೂರಾಮುವತ್ತು ಕೋಟಿ ಜನರಿರುವ ಭಾರತದಲ್ಲಿ ಹದಿನೈದುವರೆ ಸಾವಿರ ಪೊಲೀಸ್ ಠಾಣೆಗಳಿವೆ. ಹೆಚ್ಚುತ್ತಿರುವ ಕ್ರೈಮ್ ರೇಟಿಗೆ ಹೋಲಿಸಿದರೆ ಕನಿಷ್ಠ ಒಂದು ಲಕ್ಷ ಠಾಣೆಗಳಿರಬೇಕಿತ್ತು. ಸೋ ಇಲ್ಲಿ ಇಂಬ್ಯಾಲೆನ್ಸ್. ಯಾವುದೇ ದೇಶವಾದರೂ ಅಲ್ಲಿನ ಸರ್ಕಾರ ಅಲ್ಲಿರುವ ತನ್ನ ನಾಗರೀಕ ಅನುಪಾತದ ಮೇಲೆ ಪೋಲೀಸ್ ಠಾಣೆ ಇಷ್ಟೇ ಇರಬೇಕು, ಸಿಬ್ಬಂದಿಗಳು ಇಷ್ಟಿರಬೇಕು, ಅವರಿಗೆ ಇಂತಿಂಥ ಸೌಲಭಗಳಿರಬೇಕು, ಶಸ್ತ್ರಾಸ್ತ್ರಗಳಿರಬೇಕು ಎಂದು ತೀರ್ಮಾನಿಸುತ್ತದೆ. ಆದರೆ ನಮ್ಮಲ್ಲಿ ಹೇಗಿದೆ ಎಂದರೆ, ಬ್ಯುರೋ ಆಫ್ ಪೊಲೀಸ್ ರೀಸರ್ಚ್ ಅಂಡ್ ರೆಕಾರ್ಡ್ಸ್ ತಿಳಿಸಿರುವ ಪ್ರಕಾರ ಒಂದು ಲಕ್ಷಕ್ಕೆ ನೂರಾ ಎಂಭತ್ತು ಜನ ಪೊಲೀಸರಿದ್ದಾರೆ. This leeds to big imbalance. ಇರುವ ಹದಿನೈದುವರೆ ಸಾವಿರ ಚಿಲ್ಲರೆ ಠಾಣೆಗಳಲ್ಲಿ ಐನೂರು ಚಿಲ್ಲರೆ ಮಹಿಳಾ ಠಾಣೆಗಳಿವೆ. ಅದರಲ್ಲಿ ಸಮರ್ಪಕ ಸಿಬ್ಬಂದಿಗಳ ಕೊರತೆಯಿದೆ. ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯಕ್ಕೆ ಹೋಲಿಸಿದ್ದಲ್ಲಿ ಈ ಮಹಿಳಾ ಠಾಣೆ, ಉಹುಂ, ಏನೂ ಸಾಲದು. ಇದು imbalance ಅಲ್ಲದೆ ಇನ್ನೇನು?
ಕುತೂಹಲಕಾರಿ ಸಂಗತಿಯೇನೆಂದರೆ ಹಲವು ಠಾಣೆಗಳಲ್ಲಿ ವಾಹನಗಳೇ ಇಲ್ಲ, ವಯರ್ ಲೆಸ್ಸ್ ಲಭ್ಯತೆಯಿಲ್ಲ, ಹೆಸರಿಗಷ್ಟೇ ಠಾಣೆ, ಆದರೆ ಇರಬೇಕಾದ ಶಾಸ್ತ್ರಾಸ್ತ್ರಗಳೂ ಇಲ್ಲ, ಕನಿಷ್ಟ ಪಕ್ಷ ಸಿಂಗಲ್ ಲೋಡೆಡ್ ಗನ್ ಕೂಡ ಇಲ್ಲ ಎಂದರೆ ನಂಬಲೇಬೇಕು. ಅದೆಷ್ಟೋ ಠಾಣೆಗಳಲ್ಲಿ ಇರಬೇಕಾದ ಮೂಲಭೂತ ಸೌಲಭ್ಯಗಳಾದ ಶೌಚಾಲಯವೇ ಇಲ್ಲ! ಪರಸ್ಪರ ಸಂವಹನೆ ನಡೆಸಲು at least ಟೆಲಿಫೋನ್ ಕೂಡ ಇಲ್ಲ. ಇನ್ನು ಪೋಲೀಸ್ ಸಿಬ್ಬಂದಿಗಳಿಗೆ ವಸತಿ ಕೊಡುವ ಸರ್ಕಾರ ಪೋಲೀಸ್ ಕ್ವಾಟ್ರಸನ್ನೇ ಅಗತ್ಯವಿರುವಷ್ಟು ನಿರ್ಮಿಸಿಲ್ಲ. ಇಲ್ಲ ಇಲ್ಲ ಎನ್ನುವ ಹಲವು ಇಲ್ಲವುಗಳು ಈ ಅಸಮತೋಲಿತ ಅನುಪಾತಕ್ಕೆ ಕಾರಣ.

ನಮ್ಮ ನಡುವೆ ನಡೆಯುವ ಕ್ರೈಮ್ ಪ್ರಮಾಣ ಲೆಕ್ಕಕ್ಕೇ ಸಿಗುವುದಿಲ್ಲ. ಇನ್ನು ಮನೆ ಹೊರಗಡೆ ಏರಿಯಾಗಳಲ್ಲಿ, ಊರಿನಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ನಡೆಯುವ ಕ್ರೈಮ್ ಪ್ರಮಾಣ ಹೇಗೆ ಲೆಕ್ಕಕ್ಕೆ ಸಿಗಬೇಕು? ಅದನ್ನು ನಿಭಾಯಿಸುವ ಬಗೆ ಹೇಗೆ?

ಈ ಅಸಮತೋಲನದಿಂದ ಉಂಟಾಗುವ ಸಮಸ್ಯೆಗಳೆಂದರೆ, ಅಪರಾಧಗಳಾದಾಗ ಅದನ್ನು ಸಮರ್ಪಕವಾಗಿ ನಿರ್ವಹಿಸಲು ಆಗುವುದಿಲ್ಲ (ಅಣ್ಣಾ ಹಜಾರೆ ಸತ್ಯಾಗ್ರಹ ನೆನಪಿಸಿಕೊಳ್ಳಿ), ಒಬ್ಬನಿಗೇ ಅಂತ ಎಷ್ಟು ರಕ್ಷಣೆ ಕೊಡಲಾಗುತ್ತದೆ? ರಕ್ಷಣೆ ನಿಜವಾಗಿಯೂ ಬೇಕಾಗಿರುವನಿಗೆ ಸಮಯಕ್ಕೆ ಅದು ಸರಿಯಾಗಿ ಸಿಗದೇ ಹೋಗಬಹುದು (all most all ಎಲ್ಲಾ angry young man ಚಿತ್ರಗಳ ನಾಯಕರು ಪೋಲೀಸ್ ಠಾಣೆ ಮೆಟ್ಟಿಲೇರುವ ದೃಶ್ಯ ನೆನಪಿಸಿಕೊಳ್ಳಿ), ನ್ಯಾಯ ವಿಚಾರಣೆ ಮತ್ತು ನಿರ್ವಹಣೆ ತಡವಾಗುತ್ತದೆ. ನಿಷ್ಪಾಪಿಗಳು ತಾವು ಮಾಡದ ತಪ್ಪು ಹೊತ್ತು ಅವಮಾನದಿಂದ ದಿನಗಳೆಯಬೇಕು (ಅಣ್ಣಾವ್ರ ಅದ್ಭುತ ಚಿತ್ರ ಬಿಡುಗಡೆ), ಅತೀ ದೊಡ್ಡ ಗುಂಪುಗಾರಿಕೆ, ಕೋಮುವಾದಿ ಗಲಭೆಗಳಾದಾಗ ಜನರನ್ನು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಅಸಾಧ್ಯ. ಅಂತಹ ಸಮಯದಲ್ಲಿ ಜನರ ಪ್ರಾಣ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹರಣವಾಗುತ್ತದೆ (ಡೈನಾಮಿಕ್ ದೇವರಾಜ್ ಅಭಿನಯದ ಗೋಲೀಬಾರ್ ಚಿತ್ರ). ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರೆ ಹಲವು ಪೊಲೀಸ್ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳ ಮನೆಗೆಲಸ ಮಾಡಲೆಂದೋ, ರಾಜಕಾರಣಿಗಳ ಸಭೆಗೆ ಭದ್ರತೆ ಕೊಡಲೆಂದೋ ಹೋಗಿರುತ್ತಾರೆ. ಹೀಗಾದಾಗ ಯಾವುದೋ ಕಾರಣಗಳಿಗಾಗಿ (ಇಂಥದ್ದೇ ಎಂದು ಹೇಳಲು ಬರುವುದಿಲ್ಲ) ಸಾವುಗಳಾಗಿ ಗಲಾಟೆಗಳಾದರೆ ಶಾಂತಿ ಕಾಯುವುದು ಅಸಾಧ್ಯ (ಅಣ್ಣಾವ್ರು ಸತ್ತಾಗ ಪೊಲೀಸ್ ಅಧಿಕಾರಿಗಳು ಯಾವುದೋ ದೂರದೂರಿನಲ್ಲಿದ್ದರು, ಶಶಿಕುಮಾರನ ಪೋಲೀಸನ ಹೆಂಡ್ತಿ ಚಿತ್ರ ನೆನಪಿಸಿಕೊಳ್ಳಿ).

ಇದು ಮೇಲುನೋಟಕ್ಕೆ ಕಾಣಸಿಗುವ ತೊಂದರೆಗಳು. ಕಣ್ಣಿಗೆ ಕಾಣದ ಹಲವು ಸಮಸ್ಯೆಗಳು ನಮ್ಮ ಅರಿವಿಗೆ ಬರುವುದಿಲ್ಲ, ನಮ್ಮ ಬುಡಕ್ಕೆ ಕಾವು ಹತ್ತುವವರೆಗೂ ನಾವು ಪ್ರತಿಕ್ರಿಯಿಸುವುದಿಲ್ಲ. ಅವೆಂದರೆ, ಪೋಲೀಸರಿಗೂ ನಾಗರೀಕರಿಗೂ ಪರಸ್ಪರ ಸೌಹಾರ್ದತೆ ತಪ್ಪುವುದು. ಅಧಿಕಾರಿ ವರ್ಗಕ್ಕೂ ಪೊಲೀಸ್ ನವರಿಗೂ ವೃತ್ತಿ ವೈಷಮ್ಯ ತಲೆದೋರುತ್ತದೆ. ರಜೆಯೇ ಸಿಗದಷ್ಟು ಕೆಲಸದೊತ್ತಡ ಇರುವುದರಿಂದ ಪೋಲೀಸರು ಮಾನಸಿಕ ಹಿಂಸೆಗೆ ಗುರಿಯಾಗುತ್ತಾರೆ. ಆತ್ಮಹತ್ಯೆಗೂ ಪ್ರಯತ್ನಿಸಬಹುದು (ಬೆಂಗಳೂರಿನ ರಾಜಾನುಕುಂಟೆಯಲ್ಲಿ ಇದೇ ಕಾರಣಕ್ಕೆ ಒಬ್ಬ ಮೇಲಧಿಕಾರಿಯ ಕೊಲೆಯಾಯಿತು). ವಯ್ಯುಕ್ತಿಕ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ತಾವು ಮಾಡಬೇಕಾದ ಕೆಲಸಕ್ಕೂ ಮಾಡುವ ಕೆಲಸಕ್ಕೂ ಸಂಬಂಧ ಇರುವುದಿಲ್ಲ. ಇದೆಲ್ಲಾ ನೇರಾನೇರ ಪರಿಣಾಮ ಅನುಭವಿಸುವುದು ನಾವೇ - ನಾಗರೀಕರು.

ಇದಕ್ಕೆ ಕಾರಣವೆಂದರೆ ಸಂಖ್ಯೆಯಾಧಾರಿತದಲ್ಲಿ ನಾಗರೀಕರಿಗೂ ಮತ್ತು ಪೊಲೀಸಿನವರಿಗೂ ಇರುವ ಲಭ್ಯ ಅಸಮತೋಲಿತದಿಂದ. ಇಷ್ಟನ್ನು ಓದಿಯೂ ನಿಮಗೆ ಹಾಗನ್ನಿಸುವುದಿಲ್ಲವೇ? ಅದಕ್ಕೇ ಹೇಳಿದ್ದು, ಸಂಖ್ಯೆಗಳು ನಮಗೆ ಗೊತ್ತಿದ್ದೂ ಹೇಗೆ ನಮ್ಮ ನಿತ್ಯ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೋ ಹಾಗೆ ಗೊತ್ತಿಲ್ಲದೆಯೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು. ಅದು ಅಗೋಚರವಾಗಿಯಾದರೂ ಇರಬಹುದು, ಇಷ್ಟು ನಾಗರೀಕರಿಗೆ ಇಷ್ಟು ಪೋಲೀಸ್ ನವರು ಇರಬೇಕೆನ್ನುವ ಅಸಮತೋಲಿತ ಸಂಖ್ಯೆಯಿಂದಾದರೂ ಇರಬಹುದು.
ಅದೇನೇಯಿರಲಿ, ಸಂಖ್ಯೆ ಈ ರೀತಿಯೂ ನಮ್ಮ ಜೀವನದಲ್ಲಿ ಪ್ರಭಾವ ಬೀರುತ್ತದೆ ಎನ್ನುವುದಂತೂ ಸತ್ಯ.

ಮತ್ತೊಮ್ಮೆ ಓದಿಕೊಳ್ಳಿ, ಒಂದು ಲಕ್ಷಕ್ಕೆ ನೂರಾ ಎಂಭತ್ತು ಅಂತ ಏಕೆ ಲೇಖನಕ್ಕೆ ಶೀರ್ಷಿಕೆ ಇಟ್ಟೆ ಅಂತ. ಅರ್ಥವಾದೀತು
.
[ಇಲ್ಲಿ ಇರುವ ನಾಗರೀಕರಿಗೂ ಮತ್ತು ಲಭ್ಯವಿರುವ ಪೋಲೀಸ್ ನವರಿಗೂ ಇರುವ ಅಸಮತೋಲನ ಮತ್ತು ಅಲಭ್ಯತೆಯ ಬಗ್ಗೆ ಫೋಕಸ್ ಮಾಡಲಾಗಿದೆಯೇ ಹೊರತು ಇದಕ್ಕೆ ಕಾರಣವೇನಿರಬಹುದು ಅಂತಲ್ಲ. ಸಂಖ್ಯೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ತಮ್ಮ ಬರಹಕ್ಕೆ ಸ್ಪೂರ್ತಿಯಾಗಬಹುದು. ನನಗೆ ಈ ರೀತಿಯಾಗಿದೆ, ಅಷ್ಟೇ]

- ಎಂಕೆ.


ಬೆಂಗ್ಳೂರಲ್ಲಿ ಬಾಡ್ಗೇ ಮನೆ.. ಯಪ್ಪಾ! ಉಸ್ಸಪ್ಪಾ!!
================================
ಅಮಿತ್ ತನ್ನ ಎಂಜನಿಯರಿಂಗ್ ಓದುತ್ತಿರುವಾಗಲೇ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಕೆಲಸ ಗಿಟ್ಟಿಸಿಕೊಂಡ. ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ವೇರ್ ಕಂಪನಿಯಲ್ಲಿ ತಿಂಗಳಿಗೆ ಮೂವತ್ತು ಸಾವಿರ ಸಂಬಳ. ಆದರೆ ಒಂದೇ ಕಂಡೀಷನ್ ಅಂದರೆ ಎರಡು ವರ್ಷ ಕಂಪನಿ ಜೊತೆ ಅಗ್ರಿಮೆಂಟ್. ಮನೆಯಲ್ಲಿ ಅಪ್ಪಅಮ್ಮ ಎಲ್ಲರಿಗೂ ಸಿಹಿ ಹಂಚಿದರು. ಸ್ನೇಹಿತರೆಲ್ಲರೂ ಅಭಿನಂದಿಸಿದರು. ಅಮಿತ್ ನ ಖುಷಿ ಅಮಿತವಾಗಿತ್ತು. ತನ್ನ ಗೆಳತಿಯನ್ನು ಕಾಫೀ ಡೇ ಗೆ ಕರೆದುಕೊಂಡು ಹೋಗಿ ಕೋಲ್ಡ್ ಕಾಫಿ ಕುಡಿದು ಅವಳ ಕರಗುವ ಕಣ್ಣಲ್ಲಿ ಚಿತ್ರವಾಗುತ್ತಾ, ಕೆನ್ನೆಯ ಮೇಲೆ ಹರಿದ ಭಾಷ್ಪಕ್ಕೆ ಬಾಯ್ ಹೇಳಿ ಬೆಂಗಳೂರಿಗೆ ಗಂಟುಮೂಟೆ ಕಟ್ಟಿದ್ದ.

ಲಕ್ನೋದಿಂದ ರಾತ್ರಿ ರೈಲು ಹತ್ತಿ ತನ್ನ ಹೊಸ ಲೋಕದ ಬಗ್ಗೆ ಕನಸು ಕಾಣುತ್ತಾ ನಿದ್ರೆಗೆ ಜಾರಿದ. ಬೆಳಗು ಹರಿಯುವ ಹೊತ್ತಿಗೆ ಸಿಟಿ ರೈಲ್ವೇ ನಿಲ್ದಾಣದಲ್ಲಿ ರೈಲು ತನ್ನ ಕೊನೆಯ ಸೀಳಿಡುತ್ತಿತ್ತು. ಥಟ್ಟನೆ ಎಚ್ಚರಗೊಂಡವನು ಕೈಯ್ಯಲ್ಲಿ ಕಣ್ಣೊರೆಸುತ್ತಾ ರೈಲಿಳಿದ. ಅಲ್ಲಿದ್ದ ಡಾರ್ಮೆಂಟರಿಯಲ್ಲಿ ಬೆಳಗಿನ ಕಾರ್ಯ ಮುಗಿಸಿ ಆಟೋ ನಿಲ್ದಾಣಕ್ಕೆ ಬಂದು ತನ್ನ ಕಂಪೆನಿಯತ್ತ ಹೊರಟ. ಕಂಪನಿಯಲ್ಲಿ ಆ ದಿನ ರಿಪೋರ್ಟಿಂಗ್ ಆಗಿ, ಇಂಡಕ್ಷನ್ ಮುಗಿಸಿ, ತಾನು ಕೆಲಸ ಮಾಡುವ ವಿಭಾಗದ ಇತರರ ಪರಿಚಯವಾಗಿ ಸಂಜೆಯಾಗಿ ದಿನಗಳೆದು ಕಂಪನಿಯಿಂದ ಹೊರಗೆ ಹೆಜ್ಜೆ ಇಟ್ಟವನಿಗೆ ಧುತ್ತೆಂದು ಎದುರಾದದ್ದು ನಿರ್ಗತಿಕ ಭಾವನೆ! ಎಲ್ಲಿಗೆ ಹೋಗಬೇಕು? ಯಾವ ಮನೆಯಲ್ಲಿ ಇರಬೇಕು? ಬಾಡಿಗೆ ಎಷ್ಟು? ಯಾವ ಏರಿಯಾ? ಇಲ್ಲಿನ ಊಟ ತಿಂಡಿ, ಭಾಷೆ, ರೀತಿ ರಿವಾಜು.. ಮುಂತಾದವು ಭೂತಾಕಾರ ತಾಳಿದವು.

****************************************************
ಬೆಂಗಳೂರಿನಂತಹ ಹಲವು ಮಹಾನಗರಗಳಲ್ಲಿ ಬಾಡಿಗೆಗೆ ಮನೆ ಹಿಡಿಯುವುದು ದುಸ್ಸಾಹಸವೇ ಸರಿ. ಉದ್ಯೋಗಕ್ಕೆಂದೋ, ಓದಲಿಕ್ಕೆಂದೋ ನಾನಾ ಭಾಗಗಳಿಂದ ಬರುವರು ಪಡುವ ಯಾತನೆ, ಅವರನ್ನು ಕಾಡುವ ಒಂಟಿತನ ಮತ್ತು ಅಪರಾಧೀ ಭಾವನೆಗಳಿಗೆ ಎಣೆಯಿಲ್ಲ. ಸಂತೆಯಲ್ಲಿ ಕೈತಪ್ಪಿ ಹೋದ ಮಗು ಸುತ್ತಲೂ ನೋಡಿ ತನ್ನಪ್ಪನನ್ನೋ, ಅಮ್ಮನನ್ನೋ ನೆನೆ ನೆನೆದು ದುಃಖಿಸುವ ಸ್ಥಾಯೀ ಭಾವ ಇರುತ್ತದಲ್ಲ? ವಲಸೆ ಬಂದವರ ಪಾಡು ಭಿನ್ನವೇನಲ್ಲ.

ಕಷ್ಟಪಟ್ಟು ಓದಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಕೆಲಸ ಅರಸುತ್ತಾ, ಭವಿಷ್ಯದ ಬಗ್ಗೆ ಹಲವು ಕನಸು ಕಾಣುತ್ತಾ ಮಹಾನಗರಕ್ಕೆ ವಲಸೆ ಬರುವ ವಿದ್ಯಾರ್ಥಿಗಳು, ಉದ್ಯೋಕಾಂಕ್ಷಿಗಳು ಇಂದು ಸಹಜವಾಗಿ ಎಲ್ಲೆಡೆ ಇರುತ್ತಾರೆ. ತಾವು ಹುಟ್ಟಿ ಬೆಳೆದ ಊರು, ತಂದೆ ತಾಯಿ, ಬಂಧುಬಳಗ, ಸ್ನೇಹಿತರು ಎಲ್ಲರನ್ನೂ ಬಿಟ್ಟು ಮಹಾನಗರವೆಂಬ ಕಿಷ್ಕಿಂಧೆಗೆ ಬಂದು ಬೀಳುವ ಅವರು ಒಂದೂರಿನವರಲ್ಲ, ಜಾತಿಯವರಲ್ಲ, ಹಳೆ ನೆಂಟಸ್ಥರಲ್ಲ.

ಈ ವಲಸಿಗರನ್ನು ಕಾಡುವ ಸಮಸ್ಯೆಗಳು ಒಂದೆರಡಲ್ಲ. ಮೊಟ್ಟಮೊದಲಿಗೆ ಅವರು ಎದುರಿಸುವ ಸಮಸ್ಯೆ ಮನೆ ಬಾಡಿಗೆಗೆ ಹಿಡಿವುದು. ಒಂದು ಕಾಲವಿತ್ತು, ಮನೆಯನ್ನು ಯಾರು ಯಾರಿಗೆ ಬೇಕಾದರೂ ಸುಲಭವಾಗಿ ಬಾಡಿಗೆಗೆ ಕೊಡುತ್ತಿದ್ದರು. ಮಾಹಿತಿ ಮತ್ತು ತಂತ್ರಜ್ಞಾನ ಮುಂದುವರಿದಂತೆ, ಕೈಗಾರಿಕಾ ಕ್ರಾಂತಿಯ ಹೊಸ ಹೊಸ ಆಯಾಮಗಳು, ವಿದೇಶಿ ಕಂಪನಿಗಳು ಕೊಡುವ ಯಥೇಚ್ಚ ಅವಕಾಶಗಳು ಇದೆಲ್ಲವೂ ಸೇರಿ ಬಾಡಿಗೆ ಮನೆ ಹಿಡಿಯುವುದನ್ನು ಇನ್ನಷ್ಟು ಜಟಿಲಗೊಳಿಸುತ್ತಿವೆ. ಸಂಕೀರ್ಣವಾದ ಹೊಸಹೊಸ ಸಮಸ್ಯೆಗಳು ಬಾಡಿಗೆದಾರರನ್ನಲ್ಲದೇ ಮನೆಯ ಮಾಲೀಕರನ್ನೂ ಮತ್ತಷ್ಟು ಅಸಂಕೀರ್ಣದೆಡೆ ಕರೆದೊಯ್ಯುತ್ತಿವೆ. ಈಗ ಮನೆ ಬಾಡಿಗೆ ಹಿಡಿಯುವುದು ಅಂದುಕೊಂಡಷ್ಟು ಸುಲಭವಲ್ಲ.

ಬಾದಿಗೆದಾರರು ತಾವು ವಾಸಿಸುವ ಮನೆಯ ಬಗ್ಗೆ ಹೀಗೇ ಇರಬೇಕು, ಇರಬಾರದು ಎಂದು ಎಷ್ಟು ಪರ್ಟಿಕ್ಯುಲರ್ ಆಗಿರುತ್ತಾರೋ ಅಷ್ಟೇ ನಿಖರವಾಗಿ ಮನೆ ಮಾಲೀಕರೂ ಬಾಡಿಗೆದಾರನ ಹಿನ್ನೆಲೆ, ಎಲ್ಲಿಂದ ಬಂದಿದ್ದಾನೆ, ಮನೆ ಬಾಡಿಗೆ ಪಡೆಯುವ ಉದ್ದೇಶ, ಬಂದವರು ವಿದ್ಯಾರ್ಥಿಯೋ, ಉದ್ಯೋಗಾರ್ಥಿಯೋ, ಒಬ್ಬಂಟಿಗನೋ ಸಂಸಾರಸ್ಥನೋ, ಗಂಡಸೋ ಹೆಂಗಸೋ, ಬಾಡಿಗೆ, ಅಡ್ವಾನ್ಸ್, ಅಗ್ರಿಮೆಂಟ್ ಹೀಗೆ ಹಲವು ಸಂಗತಿಗಳಲ್ಲಿ ಅಷ್ಟೇ ನಿಖರವಾಗಿದ್ದಾರೆ.

ಹಳ್ಳಿ ಮತ್ತು ಪಟ್ಟಣಗಳಿಂದ ಬರುವ ಹಲವು ಜನರಿಗಿರುವ ಮೂಲಭೂತ ಕಲ್ಪನೆಯೆಂದರೆ, ಮಹಾನಗರದಲ್ಲೂ ಬಾಡಿಗೆ ಮನೆ ನಮ್ಮಲ್ಲಿ ಸಿಗುವಷ್ಟೇ ಸುಲಭ ಎನ್ನುವುದು. ಆದರೆ ಮಹಾನಗರದಲ್ಲಿ ಈವತ್ತಿನ ಪರಿಸ್ಥಿತಿಯಲ್ಲಿ ಬಾಡಿಗೆ ಮನೆ ಹಿಡಿಯುವುದೆಂದರೆ ಬರಿಗೈಯ್ಯಲ್ಲಿ ಬೆಟ್ಟಗುಟ್ಟಿ ಪುಡಿ ಮಾಡಿದಂತೆ. Basically, ಇಲ್ಲಿನವರ್ಯಾರದೂ ಪರಿಚಯ ಇವರಿಗೆ ಇರುವುದಿಲ್ಲವಾದ್ದರಿಂದ ನಿರ್ವಾಹವಿಲ್ಲದೇ ಬ್ರೋಕರ್ ಬಳಿ ಹೋಗುತ್ತಾರೆ. ಅವನಿಗೆ ಕೊಡುವ ಕಮೀಷನ್ ಹಣವೇ ದುಪ್ಪಟ್ಟು. ಅಷ್ಟು ಹಣ ತೆತ್ತು ಹೇಗೋ ಮಾಡಿ ಕೊನೆಗೊಂದು ಬಾಡಿಗೆ ಮನೆ ಹಿಡಿದರೆನ್ನಿ, ಹತ್ತು ಹಲವು ಸಮಸ್ಯೆಗಳು ಇವರಿಗೆ ಹೊಸದಾಗಿ ತಲೆದೋರುತ್ತವೆ. ಪುರುಷರದೇ ಒಂಥರ ಸಮಸ್ಯೆಯಾದರೆ ಮಹಿಳೆಯರದೇ ಇನ್ನೊಂಥರ ಸಮಸ್ಯೆಗಳಿರುತ್ತವೆ.

ನೆಸ್ಟ್ ಅವೇ ಕಂಪನಿ ನಡೆಸಿದ ಸರ್ವೆಯ ಪ್ರಕಾರ, ಹೊಸದಾಗಿ ಮಹಾನಗರಕ್ಕೆ ಹಲವು ಕಾರಣಾಂತರಗಳಿಂದ ವಲಸೆ ಬಂದವರು ಎದುರಿಸುವ ಮೊದಲ ತೊಂದರೆ ಬಾಡಿಗೆ ಮನೆಯದ್ದಾದರೆ ಎರಡನೆಯದ್ದು ಊಟೋಪಚಾರದ್ದು. ಇಲ್ಲಿನ ಊಟ, ರುಚಿ ಅವರಿಗೆ ಹೊಸದು. ಅದಕ್ಕೆ ಅಡ್ಜಸ್ಟ್ ಆಗಬೇಕು. ಬೆಂಗಳೂರಿಲ್ಲಿ ಮಾಂಸಹಾರಿಗಳಿಗೆ ಮನೆ ಬಾಡಿಗೆ ಹಿಡಿಯುವುದು ಕಷ್ಟವಾದರೆ ಮುಂಬೈ ಮತ್ತು ಹೈದರಾಬಾದ್ ನಗರದಲ್ಲಿ ಬ್ಯಾಚುಲರ್ಸ್ಗಳಿಗೆ ಮನೆ ಸಿಗೋದು ಅಷ್ಟೇ ಕಷ್ಟವಂತೆ.

ಆ ಸಂಸ್ಥೆಯ ಪ್ರಕಾರ 25 ವರ್ಷದೊಳಗಿನ ಯುವಕ ಯುವತಿಯರು ಎಷ್ಟು ಕಡಿಮೆ ಬಾಡಿಗೆಗೆ ಮನೆ ಸಿಗುವುದೋ ಎನ್ನುವ ಮನಸ್ಥಿತಿಯಲ್ಲಿದ್ದರೆ, ಅದರ ಮೇಲ್ಪಟ್ಟವರು ತಾವು ಕೆಲಸ ಮಾಡುವ ಕಂಪೆನಿಗೂ ಮತ್ತು ಮನೆಗೂ ಇರುವ ಅಂತರವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಪುರುಷರಾದರೆ ಎಷ್ಟು ದೂರವಾದರೂ ಪರವಾಗಿಲ್ಲ ಮನೆ ಬಾಡಿಗೆ ಕಡಿಮೆಯಿರಲಿ ಎಂದು ಬಯಸಿದರೆ, ಮಹಿಳೆಯರು ಬಾಡಿಗೆ ಜಾಸ್ತಿಯಿದ್ದರೂ ಸರಿ ಕಾರ್ಯಕ್ಷೇತ್ರ ಮತ್ತು ಮನೆ ಸನಿಹದಲ್ಲಿರಬೇಕೆಂದುಕೊಳ್ಳುತ್ತಾರೆ. ಇದು ಅವರು ಆದಷ್ಟು ಸುರಕ್ಷಿತವಾಗಿರಬೇಕೆಂಬುದನ್ನು ಸೂಚಿಸುತ್ತದೆ. ಯುವಕರು ಬ್ರೋಕರ್ಗಳಿಂದ ತೊಂದರೆ ಅನುಭವಿಸಿದರೆ, ಯುವತಿಯರು ಮನೆ ಮಾಲೀಕರಿಂದ ತೊಂದರೆಗೊಳಗಾಗುತ್ತಾರೆ. ಎಲ್ಲಾ ಮಹಾನಗರಗಳಿಗೆ ಹೋಲಿಸಿದರೆ ಪುಣೆಯಲ್ಲಿ ಮನೆ ಬಾಡಿಗೆ ಹಿಡಿಯುವುದು ಆದಷ್ಟು ಸುಲಭವಾಗಿದ್ದರೆ, ಹೈದರಾಬಾದ್ ನಗರ ಮಹಿಳೆಯರಿಗೆ ಸೆಫೇಸ್ಟ್ ಸಿಟಿ ಎಂದು ಹೆಸರಾಗಿದೆ.

ಸಮೀಕ್ಷೆ ಏನೇ ತಿಳಿಸಿದರೂ, ಬಾಡಿಗೆದಾರರು ಪುರುಷರಾಗಲಿ ಮಹಿಳೆಯರಾಗಲಿ ನಾನಾ ಸಂಕಷ್ಟಗಳನ್ನು ಎದುರಿಸಲೇಬೇಕು. ಅದು ಭಾಷೆಗೆ ಸಂಬಂಧಿಸಿದ್ದಿರಬಹುದು, ಇಲ್ಲಿನ ಪ್ರಾಂತೀಯ ಆಚಾರ ವಿಚಾರಕ್ಕೆ ಸಂಬಂಧಿಸಿದ್ದಿರಬಹುದು, ಜಾತಿ ಬಣ್ಣ ನಿಂಧನೆಗಳಂತಹ ಹೀನ ಕೃತ್ಯವಿರಬಹುದು, ಇಲ್ಲಿನವರು ನಡೆಸುವ ದಬ್ಬಾಳಿಕೆ, ಹೊರಗಿನವರೆಂದು ಮಾಡುವ ಆಕ್ರಮಣ, ಅತ್ಯಾಚಾರವಿರಬಹುದು, ತಾವು ಒಬ್ಬಂಟಿಗರೆನ್ನುವ ನೋವು, ಸದಾ ಕಾಡುವ ಅನಾಥಪ್ರಜ್ಞೆ, ಕಾಡುವ ಮನೆಯವರ ನೆನಪುಗಳು, ಬಂಧುಬಳಗದವರ ಅಗಲಿಕೆ ಎಲ್ಲವೂ ಸೇರಿ ಅವರನ್ನು ಹೈರಾಣು ಮಾಡುವುದಂತೂ ಶತಃಸಿದ್ಧ.

ಯಾರೋ ಕೆಲವರಿರುತ್ತಾರೆ - ಎಲ್ಲವನ್ನೂ ಮೀರಿ ನಿಂತ ದುಷ್ಟರು. ಅಂತಹವರು ಮಾಡುವ ಕೆಲವು ಹೀನ ಕೃತ್ಯಗಳಿಂದ ಮುಂಬರುವ ಎಲ್ಲ ಬಾಡಿಗೆದಾರರನ್ನೂ ಮನೆಮಾಲೀಕರು ಹಸಿರುಗಣ್ಣಿಂದ ನೋಡುವಂತಾಗಿದೆ.

ಅಮಿತ್ ನಂತಹ ಹಲವು ಸಭ್ಯಸ್ಥ ಯುವಕ ಯುವತಿಯರು ಮಹಾನಗರಗಳಿಗೆ ಅಪರಿಮಿತವಾಗಿ ಹೊತ್ತು ತರುವ ಕನಸುಗಳು ಇಲ್ಲಿ ಬಾಡಿಗೆ ಮನೆ ಹಿಡಿದು, ಕೆಲಸದಲ್ಲಿ ಸೆಟ್ಲ್ ಆಗುವಷ್ಟರಲ್ಲಿ ಕಾಣದ ಹಲವು ಸಮಸ್ಯೆಗಳಿಗೆ ತುತ್ತಾಗಿ ಹಳ್ಳ ಹಿಡಿದಿರುತ್ತವೆ.

ಅಮಿತ್ ಗೆ ಇಲ್ಲಿ ಮನೆ ಬಾಡಿಗೆಗೆ ಸಿಕ್ಕು ತನ್ನ ಕನಸುಗಳಿಗೆ ರೆಕ್ಕೆಪುಕ್ಕ ಸಿಕ್ಕು ಹಾರಾಡಿದನೇ? ಅದು ನಿಮ್ಮ ಕಲ್ಪನೆ ಮತ್ತು ವಿವೇಚನೆಗೆ ಬಿಟ್ಟದ್ದು.

- ಎಂಕೆ.


"ನಮ್ಮ ಮನೆಯಂಗಳದಿ ಬೆಳೆದ ಸುಂದರ ಹೂವೊಂದು"

ಒಂದು ಹೂವು ಅರಳಿದೆ. ನೋಡಲು ಸುಂದರವಾಗಿದೆ. ಅದರ ಪರಿಮಳ ಎಲ್ಲೆಡೆ ಹರಡಿ ತೋಟದಲ್ಲಿ ಕಂಪನ್ನು ಬೀರಿದೆ. ಅದರ ಪಾಡಿಗೆ ಅದನ್ನು ಬಿಡಬೇಕು. ಹಾಗೇ ಬಿಡಬೇಕು. ಅದು ಅರಳಿ ಕಂಪ ಸೂಸಿ ದೇವರಮುಡಿ ಏರುವವರೆಗೂ ಬಿಡಬೇಕು. ಆದರೆ ನಾವೇನು ಮಾಡುತ್ತೀವಿ? ನೋಡಿದೊಡನೆ ಮುಟ್ಟುತ್ತೀವಿ, ಪಕಳೆ ಉದುರಿಸುತ್ತೀವಿ, ಅಲುಗಾಡಿಸುತ್ತೀವಿ, ಅಂದಗೆಡವುತ್ತೀವಿ. ಪ್ರಕೃತಿದತ್ತವಾಗಿ ಎಲ್ಲಿಗೋ ಸೇರಬೇಕಿದ್ದ ಹೂ ನಮ್ಮ ಅಸಹಜ ವರ್ತನೆಯಿಂದ ತನ್ನ ಸೌಂದರ್ಯವನ್ನು ಕಳೆದುಕೊಂಡು ನೆಲದ ಕಸ ಮಾಡುತ್ತೇವೆ.

ಹೂವೆಂದರೆ ಹೆಣ್ಣು, ಆಕೆಯ ಮೇಲೆ ನಡೆಯುವ ಅತ್ಯಾಚಾರ ಮತ್ತು ದೌರ್ಜನ್ಯ ಹೂವಿಗೆ ಕೊಡುವ ಕಾಟ ಎಂದು ಪರಿಭಾವಿಸಿ ಕೆಳಗಿನ ಅಂಕಿಅಂಶಗಳನ್ನು ಒಮ್ಮೆ ನೋಡಿ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ (ಎನ್ ಸಿ ಆರ್ ಬಿ) ಪ್ರಕಾರ 2016ರಲ್ಲಿ18 ವರ್ಷದೊಳಗಿನ ಹೆಣ್ಣುಮಕ್ಕಳ ಮೇಲೆ 16863 ಅತ್ಯಾಚಾರಗಳು ನಡೆದಿದೆ. ಎಲ್ಲಾ ವಯೋಮಾನದ ಒಟ್ಟು 22205 ಅತ್ಯಾಚಾರ ರಿಪೋರ್ಟ್ ಆಗಿದೆ. ಇದು ಕೇವಲ ಗಣನೆಗೆ ಸಿಕ್ಕ, ದಾಖಲಾದ ಅಂಕಿ ಅಂಶಗಳು. ಬೆಳಕಿಗೆ ಬಾರದ್ದು ಅದೆಷ್ಟಿವೆಯೋ? ಇದರಲ್ಲಿ ಶೇಕಡ 94.6 ಪ್ರತಿಶತಃ ಅತ್ಯಾಚಾರಕ್ಕೊಳಗಾದವರು ಅತ್ಯಾಚಾರಿಯನ್ನು ಗುರುತು ಹಿಡಿದಿದ್ದಾರೆ. ಅತ್ಯಾಚಾರಿಗಳು ಬೇರ್ಯಾರೋ ಹೊರಗಿನವರಲ್ಲ. ಸ್ನೇಹಿತರು, ಸಂಬಂಧಿಗಳು, ಅಕ್ಕಪಕ್ಕದ ಮನೆಯವರು, ಪರಿಚಯಸ್ಥರೇ ಆಗಿರುತ್ತಾರೆ. ಇದೇ ಆತಂಕ ಪಡುವ ವಿಷಯವಾಗಿದೆ. ಹೀಗಿರುವಾಗ ಹೆಣ್ಣು ಮಕ್ಕಳು ಕೇವಲ ತಮ್ಮ ಅಸಹಾಯಕತೆ ಮತ್ತು ಅಸಾಮರ್ಥ್ಯ ಹೊರತು ಇನ್ನೇನು ಮಾಡುವಂತಿದೆ? ನಡೆದ ದುರಂತಕ್ಕೆ ಸಾಮಾಜಿಕ ನ್ಯಾಯ ಕೊಡುವರು ಯಾರು? ನಮ್ಮ ಮನೆಯಂಗಳದಲ್ಲಿ ಬೆಳೆದ ಸುಂದರ ಹೂವು ಹೀಗೆ ನಮ್ಮ ಪರಿಚಯಸ್ಥರೇ ಹೊಸಕಿ ಹಾಕಿದಾಗ ಏನು ಮಾಡಬೇಕು? ಆದ ಅನಾಹುತಕ್ಕೆ ಆ ಮನೆಯ ಸದಸ್ಯರು ಅನುಭವಿಸೋ ಸಾಮಾಜಿಕ ಮತ್ತು ಮಾನಸಿಕ ಹಿಂಸೆಗೆ ಪರಿಹಾರ ಸೂಚಿಸುವರು ಯಾರು? ಮತ್ತೆ ಈ ವಿಕೃತಿ ನಡೆಯದಂತೆ ತಡೆಗಟ್ಟುವುದು ಹೇಗೆ?

ಎತ್ತ ಸಾಗುತ್ತಿದೆ ಸಮಾಜ? ಸಮಾಜದಲ್ಲಿ ಇರುವ ವಿಕೃತ ಮನಸ್ಸನ್ನು ಇವತ್ತು ನೆನೆದರೆ ಮನಸ್ಸು ಭೀತಿಗೊಳಗಾಗುತ್ತದೆ. ಸಣ್ಣ ಸಣ್ಣ ಕಂದಮ್ಮಗಳನ್ನೂ ಬಿಡದೆ ತಮ್ಮ ತೃಷೆ ತೀರಿಸಿಕೊಳ್ಳುವ ಪರಿ ಕಂಡರೆ, ಅದೆಷ್ಟು ಕಲುಷಿತ ಮನಸ್ಸುಗಳ ಮಧ್ಯೆ ನಾವಿದ್ದೀವಿ ಎಂದು ಕಂಗಾಲಾಗುತ್ತದೆ. ಯಾರನ್ನು ನಂಬಬೇಕು? ಯಾರನ್ನು ನಂಬಬಾರದು? ಎಂದು ನಾವು ಪ್ರತಿಯೊಬ್ಬರನ್ನೂ ಅನುಮಾನದ ನೆಲೆಯಲ್ಲಿ ನೋಡುವಂತಾಗಿದೆ.

ಸಮಸ್ಯೆ ಗಂಭೀರವಾಗಿದೆ. ಮೇಲ್ಮಟ್ಟದಲ್ಲಿ ನಿರ್ಮೂಲನೆ ಮಾಡುವುದು ಸಮಸ್ಯೆಗೆ ಪರಿಹಾರವಲ್ಲ. ಬುಡ ಸಮೇತ ಕಿತ್ತು ಒಗೆಯದ ಹೊರತು ಯಾರು ಎಷ್ಟೇ ಹೋರಾಡಿದರು, ಪ್ರತಿಭಟನೆ, ಸತ್ಯಾಗ್ರಹ ನಡೆಸಿದರೂ ಉಪಯೋಗವಿಲ್ಲ. ಪ್ರತಿಭಟನೆಯ ಬಿಸಿ ಇರುವ ತನಕ ಸಮಸ್ಯೆ ಜೀವಂತವಿರುತ್ತದೆ. ಕಾಲಾನಂತರ ಮಾಯವಾಗುತ್ತದೆ. ಮತ್ತೊಂದು ಹೂವು ಬಾಡುವ ತನಕ, ಉಹುಂ, ಯಾರಿಗೂ ಸಮಸ್ಯೆಯ ನೆನಪು ಬೇಕೆಂದರೂ ಬರುವುದಿಲ್ಲ. ನೆನಪಾದಾಗ ಮತ್ತೆ ಹೋರಾಟ, ಪ್ರತಿಭಟನೆ ಎಟ್ಸೆಟ್ರಾ ಎಟ್ಸೆಟ್ರಾ..

ಹಾಗಾದರೆ ಸಮಸ್ಯೆಯನ್ನು ಬಗೆಹರಿಸುವ ದಾರಿ ಯಾವುದು? ಇದು ಒಬ್ಬರಿಂದಾದಲಿ, ಒಂದೆರೆಡು ಸಂಘಟನೆಗಳಿಂದಾಗಲಿ, ನಾಲ್ಕೈದು ದಿನದ ಪ್ರತಿಭಟನೆ ಹೋರಾಟದಿಂದಾಗಲಿ ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲಾಗದು. ಸಮಸ್ಯೆಯ ಆಳಕ್ಕಿಳಿದು, ಮೂಲ ಹುಡುಕಿ, ಸಮಾಜದಲ್ಲಿ ಸದಾ ಆರದ ಜಾಗೃತಿಯನ್ನುಂಟು ಮಾಡಬೇಕಾಗುತ್ತದೆ. ಇದು ಬರೀ ಮಾತಾಯಿತು. ಹೇಳಲಿಕ್ಕೆ, ಹೇಳಿದ್ದು ಕೇಳಲಿಕ್ಕೆ, ಸಭೆಯಲ್ಲಿ ನಿಂತು ಭಾಷಣ ಮಾಡುವುದಕ್ಕೆ ಸರಿಯಾಯ್ತು. ಆದರೆ ನಿಜವಾಗ್ಯು ಸಮಸ್ಯೆ ನಿರ್ಮೂಲನೆ ಮಾಡುವುದು ಹೇಗೆ? ಆರದ, ಮರೆಯದ, ಸದಾ ನೆನೆಪಿನಲ್ಲಿ ಉಳಿಯುವ ಹಾಗೆ ಹಸಿ ಜಾಗೃತಿಯುಂಟು ಮಾಡುವುದು ಹೇಗೆ?
ಮೈಲಿಗೆ ಎನ್ನುವ ಕೆಲವು ವಿಷಯಗಳನ್ನು ಜನಮಾನಸದಲ್ಲಿ ಬಿತ್ತರಿಸುವ ಕೆಲಸ ಹಿಂದೆಂದಿಗಿಂತಲೂ ಹೆಚ್ಚಿಗೆ ಈಗಾಗಬೇಕಿದೆ. ಸಮಸ್ಯೆಗೆ ಪರಿಹಾರ ಮಾಡಿವಂತಿಕೆಯನ್ನು ಪ್ರಶ್ನೆ ಮಾಡುವುದಲ್ಲ. ಅದು ಇನ್ನೊಂದು ಸಮಸ್ಯೆಯನ್ನು ಬೆಳೆಸಿದಂತೆ. ಮತ್ತೇನು ಮಾಡಬೇಕು? ಮೈಲಿಗೆಯನ್ನು ನೋಡುವ ಬಗೆ ಬದಲಿಸಿಕೊಳ್ಳಬೇಕು. ಅದನ್ನು ಇನ್ನೊಂದು ಆಯಾಮದಲ್ಲಿ ನೋಡುವುದಕ್ಕೆ ಸಾಧ್ಯವಾ? ಪುನರ್ಪರಿಶೀಲಿಸಬೇಕು. ಅದರಲ್ಲಿ ಇರುವ ಸಾಧ್ಯತೆ ಭಾಧ್ಯತೆಗಳನ್ನು ವಿಂಗಡಿಸಿ ಹುಳುಕಿದ್ದರೆ ಬೇರ್ಪಡಿಸಿ ನೋಡುವ ದೃಷ್ಟಿಕೋನ ಮತ್ತು ಅದನ್ನು ಒಪ್ಪುವ ಮನಸ್ಸು ಬೇಕು. ಆ ಮಟ್ಟಿಗಿನ ಬುದ್ಧಿ ಮತ್ತು ಬದ್ಧತೆ ಸಮಾಜದಲ್ಲಿ ನೆಲೆಯೂರಬೇಕು.

ಇಲ್ಲಿ ಮೈಲಿಗೆಯೆಂದರೆ ಕೇವಲ ಲೈಂಗಿಕತೆ ಒಂದೇ ಅಲ್ಲ. ಬದಲಾದ ಕಾಲಮಾನಕ್ಕೆ ತಕ್ಕಂತೆ ನಮ್ಮ ಮನಸ್ಸು ಮತ್ತು ಚಿಂತನೆಗಳನ್ನು ಬದಲಿಸಿಕೊಂಡು ಅದರ ಪ್ರಕಾರ ನಡೆಯದಿರುವುದೂ ಒಂದು ರೀತಿ ಮೈಲಿಗೆಯೇ. ಬದಲಾವಣೆ ಎನ್ನುವುದು ಅಪ್ಡೇಟ್ ಆಗಿದ್ದೀಯೋ ಇಲ್ಲವೋ? ನಿನ್ನ ಆಲೋಚನೆ, ಪ್ರತಿಕ್ರಿಯೆ ಮತ್ತು ನಡತೆ ಅದಕ್ಕೆ ತಕ್ಕಂತೆ ಇದೆಯೋ ಇಲ್ಲವೋ ಎನ್ನುವುದರ ಮೇಲೆ ನಿಂತಿದೆ. ಬದಲಾದ ಸ್ವಾಸ್ಥ್ಯ ಮನಸ್ಸುಗಳು ಒಗ್ಗೂಡಿದರೆ ಅತ್ಯಾಚಾರ ಎನ್ನುವ ಪೆಡಂಭೂತವನ್ನು, ವಿಕೃತ ಕಾರ್ಯವೆಸಗುವ ಅನಾಚಾರಿಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಇಲ್ಲವಾದಲ್ಲಿ ತೋಟಕ್ಕೆ ಎಷ್ಟು ಬೇಲಿ ಕಟ್ಟಿದರೂ ನಮ್ಮ ಪುಟ್ಟ ಮತ್ತು ಸುಂದರ ತೋಟ ದಾಳಿಗೊಳಗಾದೀತು, ಹೂವು ಮುದುಡಿ ಕಸವಾದೀತು.
ಈ ಸಮಸ್ಯೆಯನ್ನು ಪರಿಹರಿಸಲು ಹಲವಾರು ಸಂಘ ಸಂಸ್ಥೆಗಳು ಅವಿರತ ಪ್ರಯತ್ನಿಸುತ್ತಿದ್ದರೂ ಪರಿಣಾಮ ಮಾತ್ರ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಈ ನಿಟ್ಟಿನಲ್ಲಿ ಕೆಲವೇ ಸಂಘ ಸಂಸ್ಥೆಗಳು ಪ್ರಯತ್ನ ಮೀರಿ ಕೆಲಸ ಮಾಡುತ್ತಿವೆಯಾದರೂ, ಬಹುಸಂಖ್ಯಾತ ಸಂಸ್ಥೆಗಳು ಕೇವಲ ಬಿಡುಗಡೆಯಾಗುವ ಅನುದಾನದ ಹಣದ ಕಡೆಗೇ ಹೆಚ್ಚು ಪ್ರಾಶಸ್ತ್ಯ ನೀಡಿವೆ.

ಅತ್ಯಾಚಾರ ಮತ್ತು ದೌರ್ಜನ್ಯದಂತಹ ಹೀನ ಕೃತ್ಯಗಳು ನಡೆಯುವ ಮುನ್ನವೇ ತಡೆಯುವ ಮಾರ್ಗಗಳಿಲ್ಲವೇ? ಇದೆ. ಮೊದಲನೆಯದಾಗಿ, ಈ ನಿಟ್ಟಿನಲ್ಲಿ ಸಮಾಜವನ್ನು ಎಜುಕೇಟ್ ಮಾಡುವುದು. ಶಾಲೆಗಳಲ್ಲಿ ಆರಂಭಿಕ ಹಂತದಿಂದಲೇ ಲೈಂಗಿಕ ಶಿಕ್ಷಣವನ್ನು ವಯೋಮಾನ ಆಧಾರಿತವಾಗಿ ಕಡ್ಡಾಯ ಮಾಡಬೇಕು. ಮುಚ್ಚು ಎಂದಷ್ಟು ಬಿಚ್ಚಿಕೊಳ್ಳುತ್ತದೆ. ಆ ಬಿಚ್ಚಿಕೊಳ್ಳುವ ಸತ್ಯಗಳು ಮನಸ್ಸನ್ನು ತನ್ನದೇ ಕಲ್ಪನಾ ಲೋಕದಲ್ಲಿ ಅತಿ ಅಸಹ್ಯವಾಗಿ ಬಹು ದೂರ ಎತ್ತೆತ್ತಲೋ ಕೊಂಡೊಯ್ಯುತ್ತದೆ. ಮನಸ್ಸುಗಳಲ್ಲಿ ಹದ ತಪ್ಪಿದ ವಿಷ ಚಿಂತನೆಗಳು ಚಿಗುರಿಡುತ್ತವೆ. ಆ ಮಲಿನ ಮನಸ್ಸುಗಳು ಆಗ ಸಮಾಜವನ್ನು ವಿಕೃತವಾಗಿಯೇ ನೋಡಲು ಆರಂಭಿಸುತ್ತವೆ. ಇದಾಗಬಾರದೆಂದರೆ ಲೈಂಗಿಕ ಶಿಕ್ಷಣ ಮಕ್ಕಳಿಗೆ ಕೊಡಬೇಕು. ಆ ಮುಕ್ತ ವಾತಾವರಣ ಸೃಷ್ಟಿಯಾಗಲಿಲ್ಲವೆಂದರೆ ಸಮಸ್ಯೆ ತನ್ನ ನಾಗಾಲೋಟ ಮುಂದುವರಿಸುತ್ತದೆ. ಸ್ವಾಸ್ಥ್ಯ ಮನಸ್ಸುಗಳು ಎಷ್ಟು ಕ್ರಿಯಾಶೀಲವಾಗಿ ಈ ಕೆಲಸ ಮಾಡುತ್ತವೆ ಎನ್ನುವುದು ಎಷ್ಟರ ಮಟ್ಟಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಲ್ಲೆವು ಎನ್ನುವುದನ್ನು ನಿರ್ಧರಿಸುತ್ತದೆ.

ಎರಡನೆಯದಾಗಿ, ಬೀದಿ ಬೀದಿಗಳಲ್ಲಿ, ಜನ ಸೇರುವ ಜಾಗದಲ್ಲಿ, ಸಭೆಯಲ್ಲಿ, ನಾಟಕ ಸಮಾರಂಭದಲ್ಲಿ, ಬಸ್ಸು ರೈಲ್ವೇ ನಿಲ್ದಾಣದಲ್ಲಿ, ಆಫೀಸುಗಳಲ್ಲಿ, ಸಿನಿಮಾ ಥಿಯೇಟರಿನಲ್ಲಿ, ತೇರು ಜಾತ್ರೆಗಳಲ್ಲಿ, ಎಷ್ಟು ಸಾಧ್ಯವೋ ಅಷ್ಟು ಅತ್ಯಾಚಾರದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು. ಹೆಣ್ಣು ಭೋಗದ ವಸ್ತುವಲ್ಲ, ತೃಷೆ ತೀರಿಸುವ ಆಟಿಕೆಯಲ್ಲ ಎನ್ನುವುದನ್ನು ನಾಟಕಗಳ ಮೂಲಕ, ಹಾಡು ಹಸೆಗಳ ಮೂಲಕ ಜನರ ಜೊತೆಯಲ್ಲಿ ಬೆರೆತು ಮುಕ್ತವಾಗಿ ಇದರ ಬಗ್ಗೆ ಮಾತನಾಡಿ ಸಮಸ್ಯೆಯನ್ನು ಅವರ ಮನದಲ್ಲಿ ನೆಡುವ ಮೂಲಕ ಅವರ ಮನಸನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಬೇಕು.
ಮೂರನೆಯದಾಗಿ, ಸಂತ್ರಸ್ಥೆಯರನ್ನು ಸಮಾಜದ ಮತ್ತು ನಮ್ಮದೇ ಮನೆಯ ಒಬ್ಬ ಸದಸ್ಯನಂತೆ ಕಾಣುವ ಅತೀ ದೊಡ್ಡ ಜರೂರತ್ತಿದೆ. ಅವರಿಗೆ ನಮ್ಮ ಕರುಣೆ ಬೇಕಾಗಿಲ್ಲ. ಬೇಕಾಗಿರುವುದು ಅವರಲ್ಲಿ ಧೈರ್ಯ ತುಂಬುವ, ಪರಾವಲಂಬಗಳಾಗಿ ಬದುಕುವ, ಸ್ವತಂತ್ರವಾಗಿ ಯೋಚಿಸುವ ಮತ್ತು ಪರ್ಯಾಯ ಬದುಕನ್ನು ತಮಗಿಷ್ಟ ಬಂದಂತೆ ಕಟ್ಟಿಕೊಳ್ಳುವ ಅವಕಾಶವನ್ನು ಎಲ್ಲರೂ ಸೇರಿ ಸೃಷ್ಟಿಸುವುದು ಬೇಕಾಗಿದೆ. ಕಳೆದುಕೊಂಡಿದ್ದರ ಬಗ್ಗೆ ಚಿಂತಿಸಿ, ಹಿಂಸಿಸಿ, ಅವಮಾನಪಡಿಸೋ ಬದಲು ಮುಂದೆ ಪಡೆದುಕೊಳ್ಳಬಹುದಾದ, ಸುಂದರವಾಗಿ ಅವರೂ ಬದುಕು ಕಟ್ಟಿಕೊಳ್ಳಬಹುದಾದ ಅಂಶ ಅವರಿಗೆ ಮನಗಾಣಿಸಬೇಕಿದೆ.

ನಾಲ್ಕನೆಯದಾಗಿ, ಹೆಣ್ಣು ಅಬಲೆಯಲ್ಲ. ಆಕೆಗೂ ಎಲ್ಲರಂತೆ ಬದುಕುವ, ನಮ್ಮ ತಾಯಿಯಾಗಿಯೋ, ಅಕ್ಕತಂಗಿಯಾಗಿಯೋ, ಹೆಂಡತಿಯಾಗಿಯೋ, ಮಗಳಾಗಿಯೋ, ಗೆಳತಿಯಾಗಿಯೋ ಬಾಳಿ ಬದುಕುವ ಅವಕಾಶವನ್ನು ಅವರಿಗೆ ನಾವು ಮುಕ್ತವಾಗಿ ಮಾಡಿಕೊಡಬೇಕು.

ಸರಕಾರ ಅತ್ಯಾಚಾರದಂತಹ ಮಾರಕ ಖಾಯಿಲೆಯನ್ನು ನಿರ್ಮೂಲನೆ ಮಾಡಲು ಹಲವು ಕಾಯಿದೆಯನ್ನು, ಹಲವು ಭಾಗ್ಯಗಳನ್ನು, ಇಪ್ಪತ್ನಾಲ್ಕು ಗಂಟೆ ಅಬಲೆಯರ ಕಾಲ್ ಸೆಂಟರುಗಳನ್ನು ತೆರೆದು ನಮ್ಮ ಸರಕಾರ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಿದೆ ಎಂದು ಬೀಗಿ ಚಪ್ಪಾಳೆ ಹೊಡೆದರೆ ಪ್ರಯೋಜನವಿಲ್ಲಷ್ಟೇ. ಇದೆಲ್ಲವನ್ನು ಮೀರಿದ ಸರ್ವಪ್ರಯತ್ನಗಳು ಸಾಮಾನ್ಯ ಜನರನ್ನು ಈ ನಿಟ್ಟಿನಲ್ಲಿ ಬದಲಾಯಿಸುವ, ಸಮಾಜದ ಸ್ವಾಸ್ಥ್ಯ ಉಳಿಸುವ ಕೆಲಸ ಸದಾ ಜಾರಿಯಲ್ಲಿರುವಂತೆ ನೋಡಿಕೊಳ್ಳಬೇಕು. ಅತ್ಯಾಚಾರದ ಆರೋಪ ಸಾಬೀತಾದರೆ ತ್ವರಿತವಾಗಿ ಅತ್ಯುಗ್ರ ಶಿಕ್ಷೆ ನೀಡುವ ಕಾನೂನು ಬರಬೇಕು. ಈ ತರಹದ ವಿಕೃತ ಕೃತ್ಯ ಮಾಡುವ ಮುನ್ನ ವಿಕೃತ ಅದನ್ನು ಕುರಿತು ಯೋಚಿಸಲೂ ಭಯಪಡುವಂತಹ ಕಾನೂನು ನಮ್ಮಲ್ಲಿರಬೇಕು. ಆಗಲೇ ನಮ್ಮ ಮನೆಯ ಹೆಣ್ಣು ಮಕ್ಕಳು ಮೊಗ್ಗಾಗಿ ಬೆಳೆದು, ಹೂವಾಗಿ ಅರಳಿ ನಮ್ಮೊಳಗಿರುವ ಧುರ್ಗಂಧವನ್ನು ಒರೆಸುತ್ತಾ, ಇನ್ನೊಂದು ಮನೆಯ ಬೆಳಕಾಗಿ ನಂದಾದೀಪವನ್ನು ಹಚ್ಚಬಲ್ಲಳು. ಹಾಗಾಗಲೆಂದು ನಾವೆಲ್ಲರೂ ಸೇರಿ, ಆಶಿಸುವುದಕ್ಕಿಂತಲೂ, ಪ್ರಯತ್ನವನ್ನು ಮಾಡೋಣವೇ?

ಕೊನೆಯ ಮಾತು. ಹೂವನ್ನು ಬಲಿಹಾಕುವ ಹೀನ ಕೃತ್ಯಕ್ಕೆ ಕೈ ಇಡುವ ಮುನ್ನ ನಮ್ಮ ನಮ್ಮ ಮನೆಗಳಲ್ಲಿರುವ ತಾಯಿಯನ್ನೋ, ಹೆಂಡತಿ, ಅಕ್ಕತಂಗಿಯರನ್ನೋ ನೆನೆಸಿಕೊಂಡರೆ ಸಾಕು. ನಾನೂ ಕೈ ಹಾಕಿದಂತೆ ಇತರರೂ ನಮ್ಮ ಅಂಗಳಕ್ಕೆ ದಾಳಿಯಿಡುವರು ಎನ್ನುವ ಯೋಚನೆ ಮನಸ್ಸಿಗೆ ಬಂದರೂ ಸಾಕು.. ಅತ್ಯಾಚಾರಕ್ಕೆ ಬಿಡುಗಡೆ ದೊರೆಯುತ್ತದೆ.

- ಎಂಕೆ.


ಅವರ್ನ ಬಿಟ್ಟ್ ಇವರ್ನ ಬಿಟ್ಟ್ ಅವರ್ಯಾರು? ನಂಬರ್ ವನ್
ಒಂದು ದೃಷ್ಟಾಂತ:
ಒಂದು ಮದುವೆ ಮನೆ. ಅಲ್ಲಿ ಊಟಕ್ಕೆ ಕಾದಿದ್ದ ಎ ಅವನ ಪಕ್ಕದಲ್ಲಿ ಬಿ. ತಾಳಿಕಟ್ಟಿದ ಮೇಲೆ ಊಟಕ್ಕೆ ಎದ್ದರು. ಇಬ್ಬರಿಗೂ ತಿನ್ನುವ ಚಪಲ. ಇವರ ಮುಂದೆ ಊಟಕ್ಕೆಂದೇ ಕಾದಿದ್ದ, ಇವರಂತೆಯೇ ಇದ್ದ ಹಲವರು. ಊಟಕ್ಕೆಂದು ನಿಂತಿದ್ದವರು ಆ ಪಾಟಿ ಜನವನ್ನು ನೋಡಿ ನಮಗೆ ಊಟ ಸಿಕ್ಕೀತೇ? ಎಂದು ಅನುಮಾನಗೊಂಡರು. ಎ ಬುದ್ಧಿವಂತ. ಅಲ್ಲಿದ್ದವರ ಬಳಿ, "ನನಗೆ ಸ್ವಲ್ಪ ಸುಸ್ತು. ಬಾಯಾರಿಕೆಯಾಗುತ್ತಿದೆ" ಅಂದ. ಇದನ್ನು ಕೇಳಿದ ಕೆಲವರು ಇವನನ್ನು ಮುಂದೆ ಕಳುಹಿಸಿ ಎಂದರು. ಬಿ ಗೆ ಇದನ್ನು ನೋಡಿ ಉರಿ ಶುರುವಾಯ್ತು. ಅವನಿಗಿಂತ ನಾನೇನೂ ಕಡಿಮೆಯಿಲ್ಲ ಎಂದುಕೊಂಡು, "ಅಯ್ಯೋ! ಬಿದ್ದೆ. ತಲೆ ತಿರುಗುತ್ತಿದೆ. ನೀರು..ನೀರು" ಎಂದ. ಅಲ್ಲಿದ್ದವರು ಕಂಗಾಲಾಗಿ ಇವನನ್ನು ಮುಂದೆ ಬಿಡಿ, ಪಾಪ ತಲೆತಿರುಗುತ್ತಿದೆ ಅಂದರು. ಮುಂದೆ ಮುಂದೆ ಜಾಗ ಮಾಡಿಕೊಂಡು ಹೋಗುತ್ತಿದ್ದ ಎ ನನ್ನೂ ಮೀರಿಸಿ ಬಿ ಮುಂದೆ ಹೋದ. ಇಬ್ಬರಿಗೂ ಎದುರು ಬದುರು ಸಾಲಿನಲ್ಲಿ ಜಾಗ ಸಿಕ್ಕಿತು. ಒಬ್ಬರನ್ನೊಬ್ಬರು ಮುಸಿಮುಸಿ ನೋಡಿದರು. ನೋಡುತ್ತಲೇ ತಿಂದರು. ಇದನ್ನೆಲ್ಲಾ ನೋಡಿದ ಅಲ್ಲಿದ್ದ ಹಿರಿಯರಿಗೆಲ್ಲಾ ಅಸಹ್ಯ ಎನಿಸಿತು. ನಾವು ಮಾಡಿದ್ದು ತಪ್ಪೆನಿಸಿತು. ಆದರೆ ಇದ್ಯಾವುದನ್ನೂ ಗಮನಿಸದ ಎ ಮತ್ತು ಬಿ ತಮಗೆ ಬೇಕಾದ್ದು ಹಾಕಿಸಿಕೊಂಡು ತಿಂದುಂಡು ಹೋದರು.

ಇದನ್ನೇ ಸ್ವಲ್ಪ ಹೀಗೆ ಬದಲಿಸೋಣ. ಒಂದು ದೇಶದ ಆಧಾರಸ್ತಂಭದಲ್ಲಿ ಮಾಧ್ಯಮದವರದು ಬಹುಪಾಲು. ಅದರಲ್ಲೂ ಮಾಹಿತಿ ಮತ್ತು ತಂತ್ರಜ್ಞಾನ ಬೆಳೆದ ಮೇಲಂತೂ ಅವರು ಎಲ್ಲರನ್ನೂ, ಎಲ್ಲವನ್ನೂ ಮೀರಿ ಬೆಳೆದ ಪರಿಯೇ ಅದ್ಭುತ. ಒಂದು ದಿನಪತ್ರಿಕೆ ಓದಿ ತಿಳಿದುಕೊಳ್ಳುವುದಕ್ಕಿಂತಲೂ ಅರ್ಧ ಗಂಟೆ ನ್ಯೂಸ್ ನೋಡಿ ತಿಳಿಯುವುದು ಹೆಚ್ಚು. ಯಾಕೆಂದರೆ ಅದು ದೃಶ್ಯ ಮಾಧ್ಯಮ. ಅಕ್ಷರ ಮಾಧ್ಯಮಕ್ಕಿಂತ ದೃಶ್ಯ ಮಾಧ್ಯಮದ ಪ್ರಭಾವ ಹೆಚ್ಚು. ಒಂದು ವರದಿಯನ್ನು ಬರೆದು ಹೇಳಿ ನಾವದನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕಿಂತಲೂ ಅದೇ ವರದಿಯನ್ನು ದೃಶ್ಯದ ಮುಖಾಂತರ ಈವತ್ತು ಜನರಿಗೆ ಪ್ರಸ್ತುತ ಪಡಿಸುವುದು ಸುಲಭ. ಎಲ್ಲವೂ ಟಿ ಆರ್ ಪಿ ಎನ್ನುವ ಅಗೋಚರ ಭೂತದ ಕುಣಿತಕ್ಕೆ ತಾಳ ಹಾಕುವ ಮಾಧ್ಯಮಗಳು ನಂಬರ್ ವನ್ ಸ್ಥಾನದ ಪ್ರತಿಫಲಾಕಾಂಕ್ಷಿಗಳೇ. ಇಲ್ಲಿ ಎ ಮತ್ತು ಬಿ ಮಾತ್ರ ಇಲ್ಲ. ಅಸಹ್ಯವಾಗಿ ಊಟ ತಿನ್ನುವ ಅಸಂಖ್ಯಾತ ಮಂದಿಯಿದ್ದಾರೆ.

ತಾನು ಬಿತ್ತರಿಸುವ ವರದಿಯ ಕನಿಷ್ಠ ಸತ್ಯಾಸತ್ಯತೆಯನ್ನೂ ಪರೀಕ್ಷಿಸದೇ ಅದೆಷ್ಟೋ ಕಾರ್ಯಕ್ರಮಗಳನ್ನು ನೋಡುವ ದುರ್ಭರ ಸ್ಥಿತಿಯಲ್ಲಿಂದು ನಾವಿದ್ದೀವಿ. ಪ್ರಸಾರ ಆಗುತ್ತಿರುವ ಕಾರ್ಯಕ್ರಮ ಸಾಧುವಲ್ಲ, ಸತ್ಯಾನುಚಿತವಾಗಿಲ್ಲ ಎಂದು ನೋಡುಗರಿಗೆ ತಿಳಿದಿದ್ದರೂ ಮೌನವಾಗಿ ಅದನ್ನು ನೋಡಬೇಕು ಇಲ್ಲವೇ ಅದೇ ರೀತಿ ಇನ್ನೊಂದು ಕಾರ್ಯಕ್ರಮ ಬಿತ್ತರಿಸುವ ಚಾನೆಲ್ಲ್ ಗೆ ಬದಲಾಗಬೇಕಾದ ಕರ್ಮ.
ಹೀಗೇಕಾಗುತ್ತದೆಂದರೆ ನಮ್ಮ ನ್ಯೂಸ್ ಚಾನೆಲ್ಲ್ಗಳಿಗೆ ಕಾರ್ಯಕ್ರಮದ ಸತ್ಯ ನಿಷ್ಟತೆ, ವಾಸ್ತವಾಂಶ ಮತ್ತು ಕ್ವಾಲಿಟಿಗಿಂತ ಸದಾ ಬಿಸಿ ಬಿಸಿಯಾದ ಮತ್ತು ಉದ್ರೇಕಕಾರಿ ವರದಿಗಳೇ ವಾರದ ರೇಸಿನಲ್ಲಿ ಅವರನ್ನು ಹಿಂದಕ್ಕೂ ಮುಂದಕ್ಕೂ ತಳ್ಳುವುದು ಮಾಡುತ್ತಿರುತ್ತದೆ. ರೇಸಿಗೆ ಬಿದ್ದವ ರೇಜಿಗೆಗೆ ಬೀಳುತ್ತಾನೆ. ಕಾರ್ಯಕ್ರಮ ಹಳ್ಳ ಹಿಡಿಯುತ್ತೆ. ಈ ರೀತಿ ಬಿಸಿಬಿಸಿ ಮತ್ತು ಉದ್ರೇಕಯುಕ್ತ ಕಾರ್ಯಕ್ರಮಗಳನ್ನು ನೋಡುವ ಸಮೂಹವೇ ಇದೆ ಎಂದರೆ ನೀವು ನಂಬಲಿಕ್ಕಿಲ್ಲ.

ಎಲ್ಲಿ ಅದೇ ಜಾಗದಲ್ಲಿ ಒಂದು ಸಾಹಿತಿಯನ್ನೋ, ಕವಿಯನ್ನೋ, ಮಕ್ಕಳ ಸಂಬಂಧಿತ ಕಾರ್ಯಕ್ರಮವನ್ನೋ, ಶಿಕ್ಷಣ ಆಧಾರಿತ ಮಾಹಿತಿಯನ್ನೋ, ಸತ್ಯನಿಷ್ಠುರ ವರದಿಗಳನ್ನೋ ಬಿತ್ತರಿಸಲಿ ನೋಡೋಣ? ಮಂಜು ಕರಗಿದಂತೆ ಟಿ ಆರ್ ಪಿ ಇಳಿಯುತ್ತದೆ.

ಇದಕ್ಕೆ ಕಲಶಪ್ರಾಯವಿಟ್ಟಂತೆ ಒಂದು ಚಾನೆಲ್ಲಿಗೂ ಇನ್ನೊಂದಕ್ಕೂ ಪರಸ್ಪರ ಮತ್ತು ವೈಯುಕ್ತಿಕ ಶೀತಲ ಸಮರ ಬೇರೆ ಸದಾ ಜೀವಂತವಾಗಿರುತ್ತದೆ. ನೀನು ಇಂತಿಂಥದ್ದನ್ನು ಪ್ರಸಾರ ಮಾಡಿದೆಯಾ? ತಗೋ ನನ್ನದೂ ಹೀಗ್ಹೀಗೆ ನಿನ್ನ ಕಾರ್ಯಕ್ರಮವನ್ನೂ ಮೀರಿಸುವ ಮಸಾಲೆಯಿದೆ ಎನ್ನುವಂತೆ ಬಿತ್ತರಿಸುತ್ತಾರೆ. ವೀಕ್ಷಕರು ಪುಣ್ಯ ಮಾಡಿರಬೇಕು.

ಚಾನೆಲ್ಲ್ ನಡೆಯಲು ಕಾರ್ಯಕ್ರಮದ ಮಧ್ಯೆ ಬರುವ ಜಾಹೀರಾತು ಮುಖ್ಯ ಪಾತ್ರ ವಹಿಸುತ್ತದೆ. ಇದೇ ಒಂದು ಚಾನೆಲ್ಲಿನ ಬಂಡವಾಳ. ಆ ಜಾಹೀರಾತು ಪಡೆಯಲು ಚಾನೆಲ್ಲಿನವರು ಇನ್ನೊಂದು ಚಾನೆಲ್ಲಿನವರ ಮೇಲೆ ನಡೆಸುವ ವಾಕ್ಕ್ ಗದಾಪ್ರಹಾರ, ಒಳಪಿತೂರಿ ಕೆಲವೊಮ್ಮೆ ಬಹಿರಂಗ ವೇದಿಕೆಗೂ ಬಂದು ನಗೆಪಾಟಲಿಗೆ ಗುರಿಯಾದದ್ದುಂಟು. ಕೆಲವೊಮ್ಮೆ ಅಸಹ್ಯಕ್ಕೂ ಅಸಹ್ಯವಾಗುವಂತೆ ವರ್ತಿಸಿದ್ದೂ ಇದೆ.

ಚಾನೆಲ್ಲ್ ನಡೆಸಲು ಇನ್ನೊಂದು ಪ್ರಮುಖ ಆಧಾರವೆಂದರೆ ರಾಜಕೀಯ ಪಕ್ಷಗಳು. ಒಂದೊಂದು ಚಾನೆಲ್ಲ್ ಒಂದೊಂದು ಪಕ್ಷಕ್ಕೆ ಮಾರಿಕೊಂಡಿವೆಯೇನೋ ಅನ್ನಿಸುವಂತೆ, ಸ್ವಹಿತಾಸಕ್ತಿ ಪ್ರದರ್ಶಿಸುತ್ತಾ ಎದುರಿನ ಪಕ್ಷದವರ ಅಕ್ರಮವನ್ನು ಬಯಲಿಗೆಳೆಯುವುದರಲ್ಲಿ ಸದಾ ನಿರತರಾಗಿರುತ್ತಾರೆ.

ಸತ್ಯನಿಷ್ಠುರ ವರದಿ ಮಾಡುವ ವರದಿಗಾರರನ್ನು ಯಾವುದೇ ಮುಲಾಜಿಲ್ಲದೆ ಪಿಂಕ್ ಸ್ಲಿಪ್ ಕೊಟ್ಟು ಮನೆಗೆ ಕಳುಹಿಸುವ ಮಾಧ್ಯಮ, ಘಟನೆಗಳ ವೈಭವೀಕರಣ ಮಾಡಿ, ರೋಚಕತೆ ಸೃಷ್ಟಿಸುವರಿಗೆ ಮಾತ್ರ ಮಣೆ ಹಾಕುತ್ತಿರುವುದು ದುರಂತ. ಇದಕ್ಕೆ ತಾಜಾ ಉದಾಹರಣೆ 'ಇಂಡಿಯಾ ಟುಡೇ" ಇತ್ತೀಚೆಗೆ ತನ್ನ ಉದ್ಯೋಗಿಯನ್ನು ಹೇಳದೆ ಕೇಳದೆ ಮನೆಗೆ ಕಳುಹಿಸಿದ್ದು. ಆಕೆ ಮಾಡಿದ್ದ ತಪ್ಪಾದರೂ ಏನು? ಆಕೆ ತನ್ನ ಟ್ವಿಟ್ಟರ್ನಲ್ಲಿ "ಸತ್ಯನಿಷ್ಠುರ ವರದಿಯನ್ನು ಪ್ರಕಟಿಸುವ ಜವಾಬ್ದಾರಿ ಮಾಧ್ಯಮಕ್ಕೆ ಹಿಂದೆಂದಿಗಿಂತಲೂ ಈಗ ಹೆಚ್ಚು ಬೇಕಾಗಿದೆ. ಸುಳ್ಳು ವರದಿ ಪ್ರಕಟಿಸಿ ಮುಂದೆಂದೋ ಕ್ಷಮೆ ಯಾಚಿಸುವ ಸಂಪ್ರದಾಯ ಒಳ್ಳೆಯದಲ್ಲ" ಎಂದು ಬರೆದುಕೊಂಡಿದ್ದರು.

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡುವಂತೆ, ಕೇವಲ ಆಕೆಯ ಟ್ವಿಟ್ಟರ್ ಪೋಸ್ಟನ್ನೇ ಆಧಾರವಾಗಿಟ್ಟುಕೊಂಡು ಆಕೆಯನ್ನು ಕೆಲಸದಿಂದ ವಜಾ ಮಾಡಿದರು. ನಮ್ಮ ಸಂಸ್ಥೆ ಈ ರೀತಿ ಟ್ವೀಟ್ ಮಾಡುವುದನ್ನು ಸಹಿಸುವುದಿಲ್ಲ. ನಮಗೆ ನಮ್ಮದೇ ಆದ ಸಾಮಾಜಿಕ ಜವಾಬ್ದಾರಿಗಳಿವೆ. ಕೋಡ್ ಆಫ್ ಕಂಡಕ್ಟ್ ಇದೆ ಎಂದು ಬಾಲಿಶ ಹೇಳಿಕೆ ಕೊಟ್ಟರು. ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳಾದವು.

ಏನೇ ಆದರೂ ಸಮಾಜದ ಸ್ವಾಸ್ಥ್ಯ ಕಾಯಬೇಕಿದ್ದ ಮಾಧ್ಯಮಗಳು ಇಂದು ತಮ್ಮ ಕೊಳಕು ಸಂಸ್ಕೃತಿಯನ್ನು ಪ್ರದರ್ಶಿಸುತ್ತಾ, ರಾಜಕೀಯ ಪ್ರೇರಿತರಾಗಿ ತಮ್ಮನ್ನು ಒತ್ತೆಯಿಟ್ಟುಕೊಂಡು, ಒಬ್ಬರ ಮೇಲೊಬ್ಬರು ಕೇಸರೆರಚಿಕೊಳ್ಳುತ್ತಾ, ಟಿ ಆರ್ ಪಿ ಗಾಗಿ ಪೈಪೋಟಿ ನಡೆಸುತ್ತಾ, ನಂಬರ್ ಒನ್ ಸ್ಥಾನಕ್ಕಾಗಿ ಅಸಹ್ಯವನ್ನು ಸೃಷ್ಟಿಸುತ್ತಾ, ಉಳ್ಳವರನ್ನು ಪೋಷಿಸುತ್ತಲೂ ತಮ್ಮ ಮೂಲ ಆಶಯವನ್ನೇ ಮರೆತಿರುವುದು ನಮ್ಮ ಸಮಾಜದ ದುರಂತವೇ ಸರಿ.


"ವಿಕ್ರಮಾರ್ಜುನ ವಿಜಯ" - ಆದಿಕವಿ ಪಂಪ

ಆದಿಕವಿಯನ್ನು ವಿಶ್ಲೇಷಿಸುವ ಸಾಮರ್ಥ್ಯವಾಗಲಿ, ಆ ಮಟ್ಟದ ಬುದ್ಧಿಮತ್ತೆಯಾಗಲಿ ಅಥವಾ ಪಾಂಡಿತ್ಯ ಪ್ರದರ್ಶನ ಮಾಡುವ ಉದ್ಧಟತನವಾಗಲೀ ಇದಲ್ಲ ಎನ್ನುವ ಭಿನ್ನಹದೊಂದಿಗೆ, ಕೇವಲ ಒಬ್ಬ ಓದುಗನಾಗಿ ನನಗನ್ನಿಸಿದ ಸಂಗತಿಗಳನ್ನಷ್ಟೇ ಅಭಿಪ್ರಾಯ ರೂಪದಲ್ಲಿ ಹಂಚಿಕೊಳ್ಳಬಯಸುವ ಸಣ್ಣ ಕ್ರಿಮಿ ಯತ್ನವಷ್ಟೇ ಇದು. ವಿಷಯ ಮಂಡನೆಯಲ್ಲಿ ಲೋಪದೋಷಗಳಿದ್ದಲ್ಲಿ ಅದು ನನ್ನ ಅಸಮರ್ಥತೆಯಷ್ಟೇ ವಿನಃ ಬೇರೇನಲ್ಲ. ಇಲ್ಲಿ ವ್ಯಕ್ತಪಡಿಸಿರುವ ಅನಿಸಿಕೆಗಳು ಕೇವಲ ನನ್ನವೇ. ತಪ್ಪಿದ್ದಲ್ಲಿ ಹೇಳಿ ಅರಿತುಕೊಳ್ಳುವೆ.

ಹದಿನೆಂಟು ದಿನಗಳ ಕಾಲ ಈ ಪುಣ್ಯ ಭರತ ಭೂಮಿಗಾಗಿ ನಡೆಯುವ ದಾಯಾದಿ ಸಂಗ್ರಹಕ್ಕೆ ಸಂಬಂಧಿಸಿದ್ದು ಇದಾದರೂ, ಈ ಮಹಾನ್ ಗ್ರಂಥಕ್ಕೆ "ವಿಕ್ರಮಾರ್ಜುನ ವಿಜಯ" ಎನ್ನುವ ಹೆಸರು ಹೇಗೆ ಇಟ್ಟಿರಬಹುದೆನ್ನುವುದರ ಕಡೆ ನೋಡೋಣ. ಇದನ್ನು ತಿಳಿಯಬೇಕೆಂದರೆ ಪಂಪನ ಕಾಲಕ್ಕೆ ಹೋಗಬೇಕು. ರಾಷ್ಟ್ರಕೂಟರ ಸಾಮಂತ ರಾಜರುಗಳಲ್ಲಿ ಒಬ್ಬನಾಗಿದ್ದ ಬಾದಾಮಿ ಚಾಲುಕ್ಯ ದೊರೆ ಎರಡನೇ ಅರಿಕೇಸರಿ ಒಬ್ಬ ಅಪ್ರತಿಮ ಶೂರನಾಗಿದ್ದ. ತನ್ನ ಪ್ರಜೆಗಳನ್ನು ಸಕಲ ಸಂಕಷ್ಟದಿಂದಲೂ ಪಾರುಮಾಡಿ ದೇಶವನ್ನು ಸುಸ್ಥಿತಿಯಲ್ಲಿಟ್ಟಿದ್ದ. ಅವನ ಆಸ್ಥಾನದಲ್ಲಿ ಕಲೆ, ಸಾಹಿತ್ಯ, ಸಂಗೀತ, ಶಾಸ್ತ್ರ ಇವೇ ಮುಂತಾದ ಹತ್ತು ಹಲವು ಕಲಾಪ್ರಾಕಾರಗಳು ಉಚ್ಚ್ರಾಯದಲ್ಲಿದ್ದವು. ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸುತ್ತಾ, ತನ್ನ ಅಮೋಘ ರಚನೆಗಳಿಂದ ಎಲ್ಲರ ಗಮನವನ್ನು ಸೆಳೆದು, ಅರಿಕೇಸರಿಯ ಆಸ್ಥಾನದಲ್ಲಿ ಸರಸ್ವತಿಯ ಮಾನಸ ಪುತ್ರರತ್ನದಂತಿದ್ದವನೇ ಆದಿಕವಿ ಪಂಪ. ಗಂಡರಗಂಡ, ಪ್ರಚಂಡ ಪರಾಕ್ರಮಿಯಾದ ಮಹಾಭಾರತದ ಅರ್ಜುನನನ್ನು ತನ್ನ ದೊರೆಯಾದ ಅರಿಕೇಸರಿಗೆ ಹೋಲಿಸಿ ನೋಡುವುದರಿಂದಲೂ, ಇಬ್ಬರಲ್ಲೂ ಒಂದೇ ಶಕ್ತಿಸಾಮರ್ಥ್ಯ, ನಡೆ ನುಡಿ ಆತನಿಗೆ ಭಾಸವಾಗಿರಲು, ತನ್ನ ಅರಸನಾದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸುತ್ತಾ ತಾನು ಬರೆದ ಮಹಾಭಾರತದ ತನ್ನ ಕೃತಿಗೆ 'ವಿಕ್ರಮಾರ್ಜುನ ವಿಜಯ' ಎಂದು ಹೆಸರಿಟ್ಟು ಇದನ್ನು ತನ್ನರಸನಿಗೆ ಸಮರ್ಪಿಸಿದ್ದಾನೆ ಆದಿಕವಿ.

ಹಳೆಗನ್ನಡದಲ್ಲಿ ರಚಿತವಾಗಿದ್ದ "ವಿಕ್ರಮಾರ್ಜುನ ವಿಜಯ"ನನ್ನು ನಮ್ಮ ಇಂದಿನ ಆಡುಭಾಷೆಗೆ ಎಲ್ಲರೂ ಓದಿ ಅರ್ಥಮಾಡಿಕೊಳ್ಳುವಂತೆ ಸರಳೀಕನ್ನಡೀಕರಿಸಿದ್ದಾರೆ ಹೆಚ್. ವಿ. ಶ್ರೀನಿವಾಸ ಶರ್ಮಾ ಅವರು. ಪ್ರತಿ ಪದ್ಯವೂ ಗದ್ಯಕ್ಕೆ ಅನುವಾದಿಸಿರುವ ರೀತಿ ಅನನ್ಯವಾಗಿದೆ.

ಮಹಾಭಾರತದ ಕಥೆಯು ಹೇಗೆ ಅನಂತ ಮತ್ತು ವಿಸ್ತಾರವುಳ್ಳದ್ದೋ ಹಾಗೆ ಅದನ್ನು ಒಂದೆರೆಡು ಪುಟದಲ್ಲಿ ಹಿಡಿದಿಡುವುದು ಅಷ್ಟೇ ಕಷ್ಟ ಮತ್ತು ಅಸಾಧುವೂ ಆಗಿದೆ. ಆದರೆ ಪಂಪ ರಚಿತ ಭಾರತವನ್ನು ಓದಿದ ಮೇಲೆ ನನಗನ್ನಿಸಿದ ಕೆಲವು ಅನಿಸಿಕೆಗಳು ಇಂತಿವೆ (ಆಕ್ಷೇಪಣೆಯೂ ಅನ್ನಬಹುದು)

* ಆರಂಭದ ಮೊದಲ ಪುಟದಿಂದ ತನ್ನ ಸ್ವಾಮಿ (ಅರಿಕೇಸರಿ) ಅರ್ಥಾತ್ತ್ ಅರ್ಜುನನ ಭಕ್ತಿಯನ್ನು ಅತಿಯಾಗಿ ಮೇಳೈಸಿದ್ದಾನೆ ಪಂಪ.

* ಅರ್ಜುನ ಒಬ್ಬ ಮೇಧಾವಿ, ಸಾಹಸಿ, ಪರಾಕ್ರಮಿ ಮತ್ತು ಮಹಾನ್ ಬಿಲ್ವಿದ್ಯೆ ಪಾರಂಗತ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಅರ್ಜುನನನ್ನು ತನ್ನ ಅರಸ ಅರಿಕೇಸರಿಗೆ ಹೋಲಿಸಿ ನೋಡುವ ಪಂಪ ಆತನೆಡೆಗಿದ್ದ ನಿಷ್ಟೆಯಿಂದಲೋ, ಭಕ್ತಿಯಿಂದಲೋ ಅತೀ ರಂಜಕವೆನಿಸುವಷ್ಟು ಅರ್ಜುನನನ್ನು ಮೇಳೈಸಿ ಬಿಂಬಿಸಿದ್ದಾನೆ. ಸುಮರು 528 ಪುಟದಷ್ಟಿರುವ ಈ ಕೃತಿ ಭಾಗಶಃ ಅರ್ಜುನನ ವರ್ಣನೆಗೇ ಮೀಸಲು! ಅಂದಮಾತ್ರಕ್ಕೆ ಬೇರೆಲ್ಲಾ ಸಂಗತಿಗಳು ಮೂಡಿಲ್ಲ ಎಂದರ್ಥವಲ್ಲ. ಆದರೆ ಕೆಲವೊಂದು ಪಾತ್ರಗಳ ಪೋಷಣೆ ಇರಬೇಕಾದ ಮಟ್ಟಿಗೆ ಕಾಣಸಿಗುವುದಿಲ್ಲ.

*ಅರ್ಜುನನನ್ನು ಮೀರಿಸುವ ಸಾಹಸಿಗಳು ಇದ್ದಾಗ್ಯೂ ಆತನ ವರ್ಣನೆ ಕೆಲವೊಮ್ಮೆ ನೀರಸವೆನಿಸುತ್ತದೆ. ಅತಿಯಾದ ಅರ್ಜುನನ ವರ್ಣನೆ ಕೆಲವೊಮ್ಮೆ ಮಹಾಭಾರತದಲ್ಲಿ ಅರ್ಜುನನನ್ನು ಬಿಟ್ಟರೆ ಮಿಕ್ಕವರೆಲ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಗೋಜಲನ್ನು ಹುಟ್ಟುಹಾಕುವುದರಲ್ಲಿ ಸಂದೇಹವಿಲ್ಲ.

*ಕುರುಪುರೋಹಿತರೆಂದು ಹೆಸರು ಪಡೆದಿದ್ದ ಕಲಿ ಭೀಷ್ಮರ ಪಾತ್ರ ಪೋಷಣೆಯೂ, ಸಾಂಧರ್ಭಿಕ ಚಿತ್ರಣವಾಗಿ ಮೂಡಿಬಂದಿದೆಯೇ ಹೊರತು, ಆ ಪಾತ್ರಕ್ಕೆ ಸಿಗಬೇಕಿದ್ದ ತೂಕಕ್ಕೆ ತಕ್ಕಷ್ಟು ಮೂಡಿಬಂದಿಲ್ಲ. ಗಾಂಗೇಯನ ಘನತೆ, ಆತನ ತ್ಯಾಗ, ಮಲತಾಯಿ ಮಕ್ಕಳ ಪೋಷಣೆ, ತಮ್ಮಂದಿರ ಭವಿಷ್ಯಕ್ಕಾಗಿ ಆತ ಪಡುವ ಪಾಡು ಎಲ್ಲವೂ ಅನನ್ಯ. ಆತ ಬ್ರಹ್ಮಚಾರಿ ಪಟ್ಟವನ್ನು ತನ್ನ ತಂದೆಗೋಸ್ಕರ, ಆತನ ಕೈ ಹಿಡಿಯುವ ಸತ್ಯವತಿಗೋಸ್ಕರ ವಿಸರ್ಜಿಸಿದ್ದಲ್ಲಿ, ಎಲ್ಲಿಯ ಪಾಂಡವರು, ಎಲ್ಲಿಯ ಕೌರವರು? ಯಾರೋ ಇರುತ್ತಿರಲಿಲ್ಲ! ಅಸಲಿಗೆ ಮಾಹಾಭಾರತಕ್ಕಾಗಿ ಮಹಾ ಯುದ್ಧವೇ ನಡೆಯುತ್ತಿರಲಿಲ್ಲ. ಮಹಾಭೂಮಂಡಲ ಅಧಿಪತಿಯಾಗಿ ಆತ ಸಾಮ್ರಾಜ್ಯ ನಡೆಸಬಹುದಿತ್ತು. ಮಾತಿಗೆ ತಪ್ಪದ ಮಗನಾಗಿ ನಿಂತು ಬ್ರಹ್ಮಚಾರಿಯಾಗಿ ನಿಂತು ಇಡೀ ಕುರು ವಂಶವನ್ನೇ ಸಾಕಿ ಸಲಹಿದ ಭೀಷ್ಮ ಮಹಾಭಾರತದಲ್ಲಿ ಒಂದು ಅವಿಸ್ಮರಣೀಯ ಪಾತ್ರವಾಗಿದೆ. ಆದರೆ ಅರ್ಜುನನ ಅತೀ ವಿಜೃಂಭಣೆಯಿಂದ ಸೊರಗಿದೆ.

*ಅರ್ಜುನನ ಆ ಮಟ್ಟದ ಬಿಲ್ವಿದ್ಯೆಗೆ ನೀರೆರೆದು ಪೋಷಿಸಿದವರೇ ಪರಶುರಾಮನಿಂದ ವಿದ್ಯೆ ಕಲಿತ ದ್ರೋಣರು. ತನ್ನ ಪ್ರಿಯ ಶಿಷ್ಯನಿಗೆ ತಮ್ಮ ವಿದ್ಯೆಯನ್ನೆಲ್ಲಾ ಧಾರೆಯೆರೆದರು. ಎಷ್ಟರ ಮಟ್ಟಿಗೆ ಅಂದರೆ ಅರ್ಜುನನನ್ನೂ ಮೀರಿಸುವ ಮಹಾನ್ ಬಿಲ್ವಿದ್ಯೆ ಪಾರಂಗತ ಏಕಲವ್ಯನನ್ನೂ ಅರ್ಜುನನಿಗೋಸ್ಕರ ಬಲಿ ಹಾಕುವ ಮಟ್ಟಿಗೆ. ಅವರಿಲ್ಲದಿದ್ದಲ್ಲಿ, ಶ್ರೀಕೃಷ್ಣನ ಕೃಪಾಶ್ರಯ ಅದು ಬೇರೆಯ ಮಾತು, ಅರ್ಜುನ ನುರಿತ ಬಿಲ್ವಿದ್ಯೆಯವರಲ್ಲಿ ಒಬ್ಬನಾಗಿರುತ್ತಿದ್ದನೇ ಹೊರತು ಕೌರವರ ಸೇನೆಯನ್ನು ಬಗ್ಗು ಬಡಿಯುವಷ್ಟು ಸಮರ್ಥನಾಗುತ್ತಿರಲಿಲ್ಲ. ಅಂತಹ ಮಾಹಾನ್ ಗುರು ಪಾತ್ರ ಪೋಷಣೆಯೂ ಅಷ್ಟೇ ನೀರಸವಾಗಿದೆ. ದೃಪದ ಪ್ರಸಂಗದಲ್ಲಷ್ಟೇ ಅವರ ಪಾತ್ರ ವಿಜೃಂಭಿಸುವುದು ಬಿಟ್ಟರೆ ಮಿಕ್ಕೆಲ್ಲ ಕಡೆಯೂ ಹತ್ತರಲ್ಲಿ ಒಂದು ಎನ್ನುವಂತಿದೆ.

*ಅರ್ಜುನ ಎಷ್ಟು ವೀರನೊ ಅವನಷ್ಟೇ ವೀರ, ಬಾಹುಬಲ ಪರಾಕ್ರಮಿಯಾಗಿದ್ದವನು ಭೀಮ. ಆತ ಮನಸ್ಸು ಮಾಡಿದ್ದಿದ್ದರೆ ಅಂದೇ, ದ್ರೌಪದಿಯ ವಸ್ತ್ರಾಪಹರಣ ನಡೆದಂದೇ, ಸುಯೋಧನನನ್ನು, ದುಶ್ಯಾಸನನನ್ನು ತೊಡೆತಟ್ಟಿಯೇ ಬರಿಗೈಯ್ಯಲ್ಲೇ ಬಗಿದು ರಕ್ತ ಹೀರುತ್ತಿದ್ದ ಭೀಮ. ಅಷ್ಟು ಸಾಹಸಿ ಆತ. ಹಿಡಿಂಬ, ಜರಾಸಂಧರಂತಹ ರಾಕ್ಷಸರನ್ನು ಕೊಂದವನು ಭೀಮ. ರಣರಂಗದಲ್ಲಿ ತನ್ನ ಗದಾಸಾಮರ್ಥದಿಂದಲೇ ಹಲವು ಅಕ್ಷೋಹಿಣಿ ಸೇನೆಯನ್ನು ಬಲಿಹಾಕಿದ ಭೀಮ. ಇಷ್ಟೆಲ್ಲಾ ಮಹದ್ ಸಾಹಸಿಯನ್ನೂ ಮೀರಿ ಅರ್ಜುನನನ್ನು ಹೊಗಳಿ ಅಟ್ಟಕ್ಕೇರಿಸಲಾಗಿದೆ. ಅರ್ಧಕ್ಕಿಂತಲೂ ಹೆಚ್ಚು ಕೌರವ ಸೇನೆಯನ್ನು ಮಣ್ಣುಮುಕ್ಕಿಸಬಲ್ಲ ಭೀಮ ಇಲ್ಲಿ ಸಾಂಧರ್ಭಿಕ ಶೂರನಾಗಿ ಚಿತ್ರಿತಗೊಂಡಿರುವುದು ಶೋಚನೀಯ.

*ಆದರೆ ಅತ್ಯಂತ ಹೃದಯವಿದ್ರಾವಕವಾಗಿ ಚಿತ್ರಣಗೊಂಡ ಇನ್ನೊಂದು ಪಾತ್ರವೆಂದರೆ ಸೂತಪುತ್ರ ಕರ್ಣನದು. ಕೇವಲ ಆತನ ಹುಟ್ಟಿನ ಹಿನ್ನೆಲೆ, ಸೂತಪುತ್ರನಾದದ್ದು, ಧುರ್ಯೋಧನನ ಸ್ನೇಹಿತನಾದದ್ದು, ಅಂಗದೇಶದ ಅರಸನಾದದ್ದು ಇಷ್ಟೇನಾ ಕರ್ಣ ಎಂದರೆ? ಆತನ ಸಹನೆ, ತಾಳ್ಮೆ, ಭ್ರಾತೃತ್ವ, ಕರುಣೆ, ಅಂತಃಕರಣ, ಎದೆಯಲ್ಲಿ ಮಡುಗಟ್ಟಿದ ಅಪಾರ ಶೋಕ, ನಿಂದನೆ, ಅವಮಾನ, ಅಪಮಾನ, ಪ್ರೀತಿ, ಸ್ನೇಹ, ತ್ಯಾಗ, ದಾನ..ಇವೆಲ್ಲ ಏನೂ ಅಲ್ಲವೇ? ಬಿಟ್ಟ ಬಾಣ ಮತ್ತೆ ಬಿಡೆನೆಂದು ಕರ್ಣ ಅಂದು ತನ್ನ ತಾಯಿಗೆ ಮಾತು ಕೊಡದಿದ್ದರೆ, ತನ್ನ ವಜ್ರಕರ್ಣಕುಂಡಲವನ್ನು ದಾನ ಮಾಡದೇ ಇರುತ್ತಿದ್ದರೇ, ಯಾವ ಲೆಕ್ಕವಿರುತ್ತಿತ್ತು ಕರ್ಣನಿಗೆ ಪಾಂಡವರನ್ನು ಹೊಡೆದುರುಳಿಸಿ ಬೀಳಿಸಲು? ಆತನ ಸ್ನೇಹ ಮತ್ತು ತ್ಯಾಗಕ್ಕೆ ಸರಿಸಮನಾಗಿ ನಿಲ್ಲಬಲ್ಲ ಒಬ್ಬೇ ಒಬ್ಬನಿದ್ದನೇ ಇಡೀ ಹಸ್ತಿನಾಪುರ ಮತ್ತು ಇಂದ್ರಪ್ರಸ್ಥದಲ್ಲಿ? ಇದ್ಯಾವುದೂ ಬೇಡ ಎಂದು ಬದಿಗಿಟ್ಟರೂ ಕರ್ಣನಿಗಿದ್ದ ಶಕ್ತಿ ಸಾಮರ್ಥ್ಯಕ್ಕೆ, ದಿವ್ಯ ತೇಜಸ್ಸಿಗೆ, ಕ್ಷಾತ್ರ ಹೋರಾಟಕ್ಕೆ, ಯುದ್ಧ ನೈಪುಣ್ಯಕ್ಕೆ ತೊಡೆ ತಟ್ಟಿ ನಿಲ್ಲಬಲ್ಲ ಸಮರ್ಥ ಸಮಬಲ ಯಾರಿದ್ದಾರೆ ಮಹಾಭಾರತದಲ್ಲಿ? ಅರ್ಜುನನನ್ನು ಎದುರಿಸಬಲ್ಲ ಸಮರ್ಥ ಸೇನಾನಿ ಭೀಷ್ಮ ದ್ರೋಣ ಶಲ್ಯ ಅಶ್ವತ್ಥಾಮ ಹೀಗೆ ಹತ್ತು ಹಲವು ಸಮರ್ಥರಿದ್ದರೂ, ಇವರೆಲ್ಲರನ್ನೂ ಒಂದು ಕೈ ಮೀರಿಸುವಂತೆ ಕರ್ಣನಿದ್ದರೂ, ಶ್ರೀಕೃಷ್ಣನ ಕುಟಿಲತೆಗೆ ಬಲಿಯಾದವರು ಧುರ್ಯೋಧನ, ದುಶ್ಯಾಸನ ಶಕುನಿಯಂತಹ ಕ್ಷುದ್ರರಿಗಿಂತ ಅಪ್ರತಿಮ ವೀರರೇ ಹೆಚ್ಚು. ಕರ್ಣನ ಜನ್ಮವೃತ್ತಾಂತದಿಂದ ಆತ ರಣರಂಗದಲ್ಲಿ ಸಾಯುವ ತನಕವೂ ಓದುತ್ತಿದ್ದರೆ ಎದೆಯಲ್ಲಿ ದುಃಖ ಹೆಪ್ಪುಗಟ್ಟಿ ಕಣ್ಣಂಚಲ್ಲಿ ನೀರು ಸ್ಪುರಿಸದಿದ್ದರೆ ಕೇಳಿ? ಅಂತಹ ಮಹಾನ್ ಮಹಿಮನ ವರ್ಣನೆಯೂ ಅರ್ಜುನನ ವಿಜೃಂಭಿಸುವಿಕೆಯಿಂದ ಮಂಕಾಗಿದೆ.

ಇದಿಷ್ಟೇ ನನ್ನ ಆಕ್ಷೇಪಣೆ. ಕೇವಲ ನನ್ನವು. ಇದನ್ನು ಹೊರತುಪಡಿಸಿ ಪಂಪ ರಚಿತ ಭಾರತವನ್ನು ಓದುವುದೇ ಒಂದು ಆನಂದ. ವಿವರಿಸಲಾಗದ, ಅನುಭೂತಿ ಮತ್ತು ಅನುಭವ ನೀಡುವ ಕೃತಿಯಿದು. ಮೊದಲ ಪುಟದಿಂದ ಕೊನೇ ಪುಟದವರೆಗಿನ ಪಂಪನ ಮಹಾಭಾರತದೆಡೆಗಿನ ವರ್ಣನೆಯನ್ನು, ಕಲ್ಪನೆಯನ್ನು ಓದುತ್ತಿದ್ದರೆ ಅದ್ಭುತ ಲೋಕಾನುಭವದ ಜೊತೆ ರಾಸಾನುಭವವೂ ಆಗುತ್ತದೆ. ಅಲಂಕಾರವನ್ನು ಪಂಪ ಬಳಸಿರುವ ರೀತಿ ಹೀಗೂ ಮಾಡಬಹುದೇ? ಎಲ್ಲಾದರೂ ಹೀಗೆ ಇರಲು ಸಾಧ್ಯವೇ? ಎನ್ನಿಸುವಷ್ಟರ ಮಟ್ಟಿಗೆ ಓದುವರನ್ನು ಮೂಕವಿಸ್ಮಿತರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ.

ಸುಮಾರು ಅರ್ಧದಿಂದ ಆರಂಭಗೊಳ್ಳುವ ಯುದ್ಧದ ವಿವರಗಳು ಮತ್ತು ನೀಡಿರುವ ಪರಿಕಲ್ಪನೆಗಳಿಂದ, ಆಹಾ! ಎಂದು ಒಮ್ಮೆ ನಮ್ಮನ್ನು ಹೊಸಲೋಕಕ್ಕೆ ಕೊಂಡೊಯ್ದರೆ, ಮತ್ತೊಮ್ಮೆ ಅಯ್ಯೋ! ಎಂದು ಯುದ್ಧದ ಭೀಕರತೆಯನ್ನು ಕಣ್ಣ್ಮುಂದೆ ತರುತ್ತಾ, ನಡೆದಿದ್ದ ಆ ಕುರುಕ್ಷೇತ್ರದಲ್ಲಿ ನಾವು ಒಬ್ಬ ಕಾಲಾಳೋ, ಕುದುರೆಯವನೋ, ಸೇನಾನಿಯೋ, ಸೈನಿಕನೋ ಅಥವಾ ಯಾವುದಾದರೂ ಒಂದು ಭಾಗವೋ ಎನ್ನುವಂತೆ ಭಾಸವಾಗುವಂತೆ ಮಾಡುತ್ತಾ ಜಿಜ್ಞಾಸೆಯತ್ತ ತಳ್ಳುತ್ತದೆ ಈ ಕೃತಿ.

ಮಹಾಭಾರತವನ್ನು ಸಂಪೂರ್ಣ ಕನ್ನಡದಲ್ಲಿ ಸವಿವರಗಳೊಂದಿಗೆ ಓದಬೇಕೆನ್ನುವ ಆಸಕ್ತರಿಗೆ ಈ ಕೃತಿ ಅತ್ಯಮೂಲ್ಯವಾದುದು.

ಈ ಕೃತಿಯ ಕುರಿತು ಇನ್ನೂ ಹೇಳಲು ಸಾಕಷ್ಟಿದೆ. ಆದರೆ ಅದನ್ನು ಓದಿದ ನನ್ನ ಮನಸ್ಸು ಅದರಿಂದ ಹೊರಬರಲಾಗದೆ ಒಳಗೇ ಗೂಡು ಕಟ್ಟಿಕೊಂಡ ರೇಷ್ಮೆ ಹುಳುವಿನಂತಾಗಿದೆ. ಇಷ್ಟಕ್ಕೆ ಸಾಕು.

ಕೊನೇ ಮಾತು:
ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ ಕೃತಿಯಿದು. ನಾನೂ ಒಬ್ಬ ಕನ್ನಡಿಗ ಎಂದು ಈ ಕೃತಿಯನ್ನು ಓದದೇ ಹೇಳುವುದರಲ್ಲಿ, ಉಹುಂ, ಯಾಕೋ ಅರ್ಥವಿಲ್ಲ ಎಂದೆನಿಸಿದೆ.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ




"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...