Monday, November 27, 2017

"ಟ್ರೈನ್ ಟು ಪಾಕಿಸ್ತಾನ್"

ನಮಗೆ ಕೇವಲ ಪಠ್ಯ ಪುಸ್ತಕದಲ್ಲಿ, ಟೀವಿ ಕಾರ್ಯಕ್ರಮದಲ್ಲಿ ಅಥವಾ ಯೂ ಟ್ಯೂಬಿನ ಡಾಕ್ಯುಮೆಂಟರಿಯಲ್ಲಿ ದೇಶ ವಿಭಜನೆ ಬಗ್ಗೆ ನೋಡಿ ಗೊತ್ತಿದೆಯಷ್ಟೇ. ಒಂದು ಸಲ ಈ ಕಾದಂಬರಿಯನ್ನು ಓದಿ ನೋಡಿ! ವಿಭಜನೆ ಎನ್ನುವ ಬೃಹತ್ತ್ ಕದನವು ಅದೆಷ್ಟು ಭೀಕರವಾಗಿತ್ತು, ಅದೆಷ್ಟು ಅಮಾಯಕರ ಜೀವ ಬಲಿ ಪಡೆದಿತ್ತು, ಹೆಂಗಸರ ಮಕ್ಕಳ ಮಾರಣಹೋಮ ನಡೆದಿತ್ತು ಎನ್ನುವುದು ಅರಿವಿಗೆ ಬರುತ್ತದೆ. ಎರಡೂ ಕಡೆ ಪ್ರಾಣ ಮಾನ ಆಸ್ತಿ ಹರಣವಾಗಿತ್ತು. ಆದರೆ ದೆಹಲಿಯ ಏಸಿ ರೂಮಿನಲ್ಲಿ ಕುಳಿತು ಕಾನೂನು ರೂಪಿಸುವ ಜನರಿಗೆ ಗಡಿಯಲ್ಲಿ ಕೋಮುದಳ್ಳುರಿಯ ತಾಪಕ್ಕೆ ಸಿಲುಕಿ ಎದುರಿನ ಅನ್ಯ ಕೋಮಿನವವನ್ನು ಸದೆ ಬಡಿಯಲು ಹೊರಟವನ ಮನಸ್ಥಿತಿ ತಿಳಿದೀತೇ? ಹೆಂಗಸರನ್ನು ಯಾವನೋ ಒಬ್ಬ ತಮ್ಮ ಕಣ್ಣೆದುರೇ ಹೊಸಕಿ ತಿನ್ನುವಾಗ ಪೌರುಷ ಎಂಥಹವನನ್ನೂ ಕೆಣಕದೆ ಸುಮ್ಮನೆ ಬಿಟ್ಟೀತೇ? ಮಕ್ಕಳ ಎದೆಗೆ ಬಕ್ಕೆ ಬರುವಂತೆ ಚೂರಿಯಿಟ್ಟು ಪ್ರಾಣಹರಣ ಮಾಡುವುದನ್ನು ಸುಮ್ಮನೇ ಸಹಿಸಿ ನೋಡಲಾದೀತೇ? ಕೊಲ್ಲಲು ಬಂದವನ ಮುಂದೆ ಭಾಯಿ ಭಾಯಿ ಎನ್ನುವ ಮಂತ್ರ ಕೆಲಸ ಮಾಡುವುದೇ? ಇದ್ಯಾವುದೂ ದೆಹಲಿಯ ದೊರೆಗಳಿಗಾಗಲಿ, ಲಾಹೋರದ ಮೌಲ್ವಿಗಳಿಗಾಗಲಿ ತಿಳಿಯುವುದಿಲ್ಲ. ನಮ್ಮ ಮಂದಿ ಸತ್ತಿದ್ದಾರೆ, ಅನ್ಯ ಕೋಮಿನ ಹತ್ತು ಪಟ್ಟು ಮಂದಿಯನ್ನು ಕೊಲ್ಲಬೇಕು ಎನ್ನುವುದೇ ಅವರಿಗೆ ಮುಖ್ಯವಾಗಿ ಕಾಣಿಸುತ್ತದೆ. ಕೊಲ್ಲಲು ಬಂದವನಿಗೆ ಯಾವ ವೇದಾಂತಗಳು ಸಿದ್ಧಾಂತಗಳು ವೇದ್ಯವಾಗುವುದಿಲ್ಲ. ಅವನಿಗೆ ಬೇಕಿರುವುದು ಎದುರಿರುವನ ಪ್ರಾಣ ಅಷ್ಟೇ, ಅದು ಯಾರಾದಾಗಿದ್ದರೂ ಪರವಾಗಿಲ್ಲ.

ಹೀಗಿದ್ದ ಜನರ ಮನಃಪರಿವರ್ತನೆ ಮಾಡುವ ದಿಟ್ಟ ಕ್ರಮಗಳನ್ನು ಅಂದಿನ ಉಭಯ ಸರಕಾರಗಳು ಏಕೆ ತೆಗೆದುಕೊಳ್ಳಲಿಲ್ಲ ಎನ್ನುವ ರಾಜಕೀಯ ಚಾಣಾಕ್ಷ್ಯ ಸಂಬಂಧಿ ಸೂಕ್ಷ್ಮ ವಿಚಾರವನ್ನು ಕಾದಂಬರಿಯಲ್ಲಿ ಸೂಕ್ಷ್ಮವಾಗಿ ಹೆಣೆಯಲಾಗಿದೆ. ರಾಜಕೀಯ ನೀತಿ ರೂಪಿಸಲು ಬೇಕಾಗಿದ್ದ ಕುಶಲತೆಗೆ, ಅಂದಿನ ನಾಯಕರು ಪರಿಸ್ಥಿತಿಯನ್ನ ಸಮರ್ಥವಾಗಿ ನಿರ್ವಹಿಸದ ವೈಫಲ್ಯತೆಗೆ, ದೇಶ ವಿಭಜನೆ ಎನ್ನುವುದೊಂದು ಬೃಹತ್ತ್ ನಾಟಕವೇ ಸಾಕ್ಷಿ.

ಅದೊಂದು ಸುಂದರ ಹಳ್ಳಿ. ಭಾಗಶಃ ಗಡಿಗೆ ಹೊಂದಿಕೊಂಡಂತೆ ಇತ್ತು, ಹೆಸರು ಮನೋ ಮಜ್ರಾ ಎಂದು. ದೇಶ ಒಡೆದು ಇಬ್ಬಾಗವಾದಾಗ ಇಲ್ಲಿನ ಜನರು ನೆಮ್ಮದಿಯಿಂದಲೇ ಇದ್ದರು, ಮುಖ್ಯವಾಗಿ ಸಿಖ್ಖ್ ಮತ್ತು ಮುಸ್ಲಿಂ ಜನಾಂಗ. ಪಂಜಾಬ್ ಪ್ರಾಂತ್ಯವಾದ್ದರಿಂದ ಹಿಂದುಗಳು ಇದ್ದರೂ, ಹಿಂದುಗಳಿಗಿಂತ ಸಿಖ್ಖರು ಜನಸಂಖ್ಯೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಾಗಲಿ, ಸ್ವಾತಂತ್ರ್ಯಕ್ಕೋಸ್ಕರ ತನ್ನ ಜೀವನವನ್ನು ಮುಡಿಪಿಟ್ಟ ಗಾಂಧಿಯಾಗಲಿ, ಪ್ರಧಾನಿ ನೆಹರು ಬಗ್ಗೆಯಾಗಲಿ ಇಲ್ಲಿನ ಮಂದಿಗೆ ಹೆಚ್ವು ತಿಳಿದಿಲ್ಲ. ಎಲ್ಲಿಂದಲೋ ತೇಲಿ ಬಂದ ಸುದ್ದಿಯನ್ನು ನಂಬಿ ಬದುಕುವ, ತಾವು ಕೇಳಿದ್ದನ್ನೇ ಒಪ್ಪಿಕೊಳ್ಳುವ ಜನ ಇಲ್ಲಿನವರು.

ದೇಶದಲ್ಲಿ ಕೋಮುದಳ್ಳುರಿ ತನ್ನ ರುದ್ರ ಪ್ರತಾಪವನ್ನು ತೋರುತ್ತಾ ಸಹಸ್ರಾರು ಜನರನ್ನು ಬಲಿ ತೆಗೆದುಕೊಳ್ಳುವಾಗಲೂ ಈ ಹಳ್ಳಿ ಬಾಹ್ಯ ಪ್ರಪಂಚದ ಕ್ಷೋಭೆಗೆ ಒಳಗಾಗಿರುವುದಿಲ್ಲ. ಅತ್ತ ಕಡೆ ಪಾಕಿಸ್ತಾನದಿಂದ ಹಿಂದುಗಳ ಮಾರಣ ಹೋಮ ನಡೆಸಿ ಹೆಣಗಳನ್ನು ಅತ್ಯಂತ ಕರಣಾಜನಕವಾಗಿ, ಊಹಿಸಲೂ ಆಗದ ದಾರುಣ ಸ್ಥಿತಿಯಲ್ಲಿ ರೈಲಿನಲ್ಲಿ ಹೇರಿ ಕಳುಹಿಸಿದಾಗಲೂ ಇಲ್ಲಿ ಧರ್ಮ ಭೇಧ ತೆಲೆದೋರುವುದಿಲ್ಲ. ಇಲ್ಲಿನವರ ಸೌಹಾರ್ದತೆ ಹೇಗಿರುತ್ತದೆಂದರೆ ಬೆಳಗಾಗುವುದನ್ನು ತಿಳಿಯಬೇಕೆಂದರೆ ಗುರುದ್ವಾರದ ಸಂತ ಮೀತ್ ಸಿಂಗ್ ಪ್ರಾರ್ಥನೆ ಸಲ್ಲಿಸಲೆಂದು ಮಸೀದಿಯ ಮೌಲ್ವಿ ಅಲ್ಲಾ ಭಕ್ಷ್ ಕಾಯುತ್ತಾನೆ ಮತ್ತು ಅಲ್ಲಾ ಭಕ್ಷ್ ಪ್ರಾರ್ಥನೆ ಸಲ್ಲಿಸಿ ಊರನ್ನು ಎಬ್ಬಿಸಲೆಂದು ಗುರು ಮೀತ್ ಕಾಯುತ್ತಾನೆ. ಆ ಮಟ್ಟಿಗಿನ ಭಾಂಧವ್ಯ ಎರಡೂ ಕಡೆ ಇರುತ್ತದೆ.

ದಿನ ನಿತ್ಯದ ಬದುಕಲ್ಲಿ ಒಬ್ಬರಿಗೊಬ್ಬರು ಸಹಕಾರವೀಯುತ್ತಾ ಅನ್ಯೋನ್ಯತೆಯೊಂದಿಗೆ ಸಹಬಾಳ್ವೆಯನ್ನು ನಡೆಸುತ್ತಾ ಬಂದಿರುವ ಈ ಮಂದಿಗೆ, ಹೊರ ಪ್ರಪಂಚದ ಮಾಹಿತಿಯೇನಾದರೂ ಸಿಗಬೇಕಿದ್ದಲ್ಲಿ ಅವರ ಬದುಕಿನ ಮತ್ತೊಂದು ಅವಿಭಾಜ್ಯ ಅಂಗವಾಗಿದ್ದ ರೈಲ್ವೇ ನಿಲ್ದಾಣದ ಮೂಲಕವೇ ಸಿಗಬೇಕಿತ್ತು. ಯಾಕೆಂದರೆ ದೆಹಲಿಯಿಂದ ಲಾಹೋರಿಗೆ, ಅಲ್ಲಿಂದ ಇಲ್ಲಿಗೆ ಬರಬೇಕಾದರೆ ಇವರ ಹಳ್ಳಿಯನ್ನು ಬಳಸಿಯೇ ರೈಲು ಬರಬೇಕಿತ್ತು.

ಹೀಗಿರುವಾಗ ಹುಕುಂ ಚಂದ್ ಎನ್ನುವ ಕಲೆಕ್ಟರನ ಪ್ರವೇಶವಾಗುತ್ತದೆ. ಆತ ಹಳ್ಳಿಯಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಸುರಕ್ಷಿತವಾಗಿ ಯಾವುದೇ ಅವಗಡಗಳಾಗದಂತೆ ತಲುಪಿಸಲು ಆಜ್ಞೆ ಹೊರಡಿಸಿ ಪಾಕಿಸ್ತಾನಿ ಸೈನಿಕ ನೆಲೆಗೆ ವಿಷಯ ರವಾನಿಸುತ್ತಾನೆ. ಅವರು ಬಂದು ಇಲ್ಲಿನ ಮುಸ್ಲಿಮರನ್ನು ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕರೆದುಕೊಂಡು ಹೋಗುತ್ತಾರೆ. ಹೋಗುವಾಗ ಉಭಯರಿಗೂ ಬಹು ವೇದನೆಯಾಗುತ್ತದೆ.

ಈ ಮಧ್ಯೆ ಪಾಕಿಸ್ತಾನದಿಂದ ಬಂದ ಸಿಖ್ಖ್ ನಿರಾಶ್ರಿತರು ಸೌಹಾರ್ದತೆಯಿಂದಿದ್ದ ಹಳ್ಳಿಯ ಜನರನ್ನು ಪ್ರಚೋದಿಸಿ, ಪಾಕಿಸ್ತಾನಕ್ಕೆ ಹೊರಟಿರುವ ಮುಸ್ಲಿಂ ಮಂದಿಯನ್ನು (ಆ ಗುಂಪಿನಲ್ಲಿ ತಮ್ಮದೇ ಹಳ್ಳಿಯ ಜನರೂ ಇರುತ್ತಾರೆ) ಹತ್ಯೆಗೈಯ್ಯಲು ಪ್ರೇರೇಪಿಸುತ್ತಾರೆ. ಕೋಮುದಳ್ಳುರಿಗೆ ಸಿಲುಕಿ ತಲೆತಲಾಂತರದಿಂದ ಒಟ್ಟಿಗೇ ಬಾಳಿ ಬದುಕಿ ಭ್ರಾತೃತ್ವಕ್ಕೆ ಹೆಸರಾಗಿದ್ದ ಹಳ್ಳಿಯ ಜನರು, ತಮ್ಮದೇ ಅನ್ಯ ಕೋಮಿನ ಮುಸ್ಲಿಮರನ್ನು ಪಾಕಿಸ್ತಾನದಲ್ಲಿ ಹಿಂದುಗಳ ಹತ್ಯೆಗಿಂತಲೂ ಭರ್ಭರವಾಗಿ ಹತ್ಯೆಗೈಯ್ಯುಲು ನಿರ್ಧರಿಸುತ್ತಾರೆ.

ತಾವು ಹುಟ್ಟಿ ಬೆಳೆದಂದಿನಿಂದ ನೋಡಿಕೊಂಡು ಬೆಳೆದು ಬದುಕಿರುವ, ತಮ್ಮ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿರುವ ಅದೇ ರೈಲು ನಿಲ್ದಾಣದಲ್ಲಿ ರೈಲನ್ನು ಪಾಕಿಸ್ತಾನಕ್ಕೆ ಹೋಗದಂತೆ ತಡೆದು ಮುಸ್ಲಿಮರನ್ನು ಕೊಲ್ಲುವ ಯೋಜನೆ ಸಿದ್ಧವಾಗುತ್ತದೆ ಮತ್ತು ಆ ಸಮಯವೂ ಬರುತ್ತದೆ. ಕಾರ್ಯಸೂಚಿಯಂತೆ ಎಲ್ಲರೂ ಶಸ್ತ್ರಾಸ್ತ್ರದೊಂದಿಗೆ ಸಜ್ಜಾಗಿರುತ್ತಾರೆ. ತಾವಂದುಕೊಂಡಂತೆ ರೈಲನ್ನು ತಡೆದು ಮುಸ್ಲಿಮರನ್ನು ಹತ್ಯೆಗೈದರೇ? ಪಾಕಿಸ್ತಾನಕ್ಕೆ ಹೆಣದ ರಾಶಿ ತುಂಬಿದ ರೈಲನ್ನು ಕಳುಹಿಸಿದರೇ? ತಮ್ಮೊಳಗೆ ಹೊತ್ತಿ ಉರಿಯುತ್ತಿದ್ದ ದ್ವೇಷ ಪ್ರತೀಕಾರದ ಜ್ವಾಲೆ ತಣ್ಣಗಾಯಿತೇ?
ಒಮ್ಮೆ ಕಾದಂಬರಿಯನ್ನು ಓದಿ ನೋಡಿ. ಊಹಿಸಿರದ ತಿರುವೊಂದು ಅಚಾನಕ್ಕಾಗಿ ಬರುತ್ತದೆ ಮತ್ತು ಓದುವನು ಕೊನೆಗೆ ಭಾರವಾದ ನಿಟ್ಟುಸಿರು ಬಿಡುವಂತಾಗುತ್ತದೆ.

ಇದಲ್ಲದೇ ಸ್ವಾತಂತ್ರ್ಯ ದೊರಕಿದ ಆರಂಭಿಕ ದಿನಗಳ ಬಗ್ಗೆ, ಬ್ರಿಟೀಷರಿಂದ ತೆರವಾದ ಸರಕಾರಿ ಉದ್ಯೋಗದಲ್ಲಿ ಭಾರತೀಯರು ನಡೆಸಿದ ಅನಾಚಾರ ದಬ್ಬಾಳಿಕೆ ದೌರ್ಜನ್ಯ ಲಂಚತನ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ವಿಸ್ತೃತವಾಗಿ ಹೇಳಲಾಗಿದೆ. ಜೊತೆಗೆ ಜಗ್ಗತ್ ಸಿಂಗ್ ಎನ್ನುವ ಸಿಖ್ಖ್ ಗೂಂಡಾ ಮತ್ತು ನೂರ್ ಎನ್ನುವ ಮುಸ್ಲಿಂ ಯುವತಿಯ ಪ್ರೇಮ್ ಕಹಾನಿಯೂ ಇದೆ. ಕಾಮದ ಬಗ್ಗೆ ಯಥೇಚ್ಛವಾದ ಸನ್ನಿವೇಶಗಳಿದ್ದರೂ ಎಲ್ಲೂ ಅಸಹ್ಯವಾಗದಂತೆ ಬರೆದಿರುವುದು ಕಾದಂಬರಿಯು ಎಲ್ಲರನ್ನೂ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ.

ಇಂತಹ ಮಹಾನ್ ಕಾದಂಬರಿಯನ್ನು ಬರೆದವರು ಯಾರೆಂದು ಹೇಳುವ ಅವಶ್ಯಕತೆಯಿಲ್ಲ. ಅವರು ನಮ್ಮ ದೇಶ ಕಂಡ ಅಪ್ರತಿಮ ಪತ್ರಕರ್ತ, ಲೇಖಕ ಸರ್ದಾರ್ ಖುಷವಂತ್ ಸಿಂಗ್. ಇದು ಅವರ ಮೊದಲ ಕಾದಂಬರಿಯೂ ಹೌದು. ಇದನ್ನು ಕನ್ನಡಕ್ಕೇ ಮೂಲದಷ್ಟೇ ಸುಂದರವಾಗಿ ಅನುವಾದ ಮಾಡಿದವರು ಡಾ. ಎಂ. ಬಿ. ರಾಮಮೂರ್ತಿ ಅವರು. ಇಬ್ಬರಿಗೂ ಅನಂತಾನಂತ ವಂದನೆಗಳು.

ಇದು ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಕಾದಂಬರಿ, ನಾವು ಭಾರತೀಯರು ಗ್ರೇಟ್ ಅನ್ನುವ ಕಾರಣಕ್ಕಾಗಿ ಅಲ್ಲ. ನಮ್ಮನ್ನು ನಾವು ಜಾಗೃತಗೊಳಿಸಿಕೊಳ್ಳುವುದಕ್ಕಾಗಿ, ಕಂಡು ಕೇಳರಿಯದ ಅನುಭೂತಿ ಹೊಂದದ ದೇಶ ಕಂಡ ಮಹಾನ್ ದುರಂತ ಈಗಿರುವ ನಮ್ಮ ನಮ್ಮಲ್ಲಿ ಮತ್ತೆ ಮರುಕಳಿಸದೆ ಇರುವುದಕ್ಕಾಗಿ, ಇತಿಹಾಸದ ಮರೆತ ಪುಟಗಳಲ್ಲಿ ವಿನಾಕಾರಣ ಬಲಿಯಾದ ಮುಗ್ದ ಅಮಾಯಕ ಜೀವಗಳ ಸವಿ ನೆನಪಿಗಾಗಿ..

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ


https://www.facebook.com/groups/nanobbapustakapremi/permalink/1590313027702815/
"ತಾಯಿ"

ಕಾದಂಬರಿಯ ಕೆಲವು ಸಾಲುಗಳು ಹೀಗಿವೆ:

"ಬಡತನ, ಹಸಿವು ಮತ್ತು ರೋಗ - ಇದೇ ಈಗ ತಮ್ಮ ಕೆಲಸಕ್ಕೆ ನಮ್ಮ ಜನರಿಗೆ ಸಿಗೋ ಪ್ರತಿಫಲ. ಪ್ರತಿಯೊಂದು ನಮಗೆ ಇದಿರಾಗಿದೆ. ಜೀವಮಾನವೆಲ್ಲವೂ ನಾವು ಪ್ರತಿನಿತ್ಯವೂ ನಮ್ಮ ಶಕ್ತಿಯ ಕೊನೇ ಗುಲಗಂಜಿ ತೂಕವನ್ನೂ ಉಪಯೋಗಿಸಿ ದುಡಿಯುತ್ತೀವಿ. ಯಾವಾಗಲೂ ಹೊಲಸಾಗಿರುತ್ತೀವಿ. ಯಾವಾಗಲೂ ಮೋಸ ಹೋಗುತ್ತೀವಿ. ಬೇರೆಯವರು ಸಂಕೋಲೆಯಲ್ಲಿ ಕಟ್ಟಿದ ನಾಯಿಯ ಹಾಗೆ ನಮ್ಮನ್ನು ಅಜ್ಞಾನದಲ್ಲಿ ಇರಿಸಿ, ತಾವು ನಮ್ಮ ದುಡಿಮೆಯಿಂದ ಎಲ್ಲ ಸುಖವನ್ನು ಸೌಖರ್ಯವನ್ನು ಪಡೆಯುತ್ತಾರೆ. ನಮಗೆ ಏನೂ ಗೊತ್ತಿರುವುದಿಲ್ಲ. ನಾವು ದಿಗಿಲು ಬೀಳ್ತೀವಿ. ಪ್ರತಿಯೊಂದಕ್ಕೂ ಹೆದರುತ್ತೀವಿ! ನಮ್ಮ ಬದುಕು, ಬೆಳಕೇ ಹರಿಯದಂಥ ಉದ್ಧನೆಯ ಕತ್ತಲಿನ ರಾತ್ರಿಯ ಹಾಗೆ".
ಇದು ಇಡೀ ಕಾದಂಬರಿಯ ಒಟ್ಟೂ ಆಶಯ. ಇದರ ಹೊರತಾಗಿ ಕಾರ್ಮಿಕ ಸಮೂಹದಲ್ಲಿನ ದಾರಿದ್ರ್ಯ, ಬಡತನ, ಅಜ್ಞಾನ, ಅಮಾಯಕತೆ, ಉಳ್ಳವರ ಪುರೋಹಿತಶಾಹಿತ್ವ ಮತ್ತವರ ಗುಲಾಮಗಿರಿ, ಬಡವರ ಮೇಲಿನ ದಬ್ಬಾಳಿಕೆ, ಕಾರ್ಮಿಕರಿಗಾಗುವ ಮೋಸ ವಂಚನೆ, ನ್ಯಾಯವನ್ನು ಸದೆಬಡಿಯುವಿಕೆ.. ಹೀಗೆ ಅನೇಕ ಸಂಗತಿಗಳ ನಡುವೆ ನಡೆಯುವ ತಿಕ್ಕಾಟ ಘರ್ಷಣೆಗಳ ಕಲಸುಮೇಲೋಗರ.

ಇಲ್ಲಿ ಒಂದು ಕಾರ್ಖಾನೆಯಿರುತ್ತದೆ. ಅಲ್ಲಿ ಕೆಲಸ ಮಾಡುವವರು ತಮ್ಮದೆನ್ನುವ ಎಲ್ಲವನ್ನೂ, ಕೊನೆಗೆ ತಾವಾಡುವ ಉಸಿರನ್ನೂ, ಮರೆತು ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಸ್ವತಂತ್ರ ವಿಚಾರವಾಗಲಿ, ಧೋರಣೆ ಅಭಿಪ್ರಾಯವಾಗಲಿ ಇರುವುದಿಲ್ಲ. ಕಾರ್ಮಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಗಗನ ಕುಸುಮವಾಗಿರುತ್ತದೆ. ಹೊಲಸು ಕೇರಿಗಳೊಳಗೆ ದಟ್ಟ ಬಡತನದಲ್ಲಿ ಸಿಕ್ಕಿದ್ದಷ್ಟನ್ನೇ ತಿಂದುಕುಡಿಯುತ್ತಾ, ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಾ, ಕಣ್ಣಿಗೆ ಮತ್ತು ಮನಸ್ಸಿಗೆ ಕಾಪು ಕಟ್ಟಿಕೊಂಡು ಜೀವಿಸುವುದಷ್ಟೇ ಅವರ ಜೀವನ. ಅವರಿಗೆ ಇದಕ್ಕಿಂತ ಹೆಚ್ಚಿಗೇನು ಗೊತ್ತಿಲ್ಲ ಅಥವಾ ತಿಳಿದುಕೊಳ್ಳಲು ಮೇಲ್ವರ್ಗ ಇವರಿಗೆ ಅನುವು ಮಾಡಿಕೊಟ್ಟಿರುವುದಿಲ್ಲ.

ಬದಲಾವಣೆ ಜಗದ ನಿಯಮ ತಾನೇ? ಹೀಗಿರಲು ದೇಶದೊಳಗೆ ಕಂಡೂ ಕಾಣದ ಹಾಗೆ ಮಂದಿಗೆ ಒಳಗೊಳಗೇ ಕುದಿ ಏಳುತ್ತದೆ. ತಮ್ಮ ಮೇಲಾಗುತ್ತಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಹೋರಾಟ ಮಾಡಲು ಉತ್ಸುಕರಾಗುತ್ತಾರೆ. ಸಂಘಟಿತರಾಗಿ, ಶೋಷಣೆಗೆ ಶೋಷಣೆಗೊಳಗಾದವರೆಲ್ಲರ ಪರವಾಗಿ ತಾವು ಮೇಲ್ವರ್ಗದ ವಿರುದ್ಧ ತೊಡೆ ತಟ್ಟಿ ನಿಲ್ಲುಲು ಮುಂದಾಗುತ್ತಾರೆ.

ಆ ಗುಂಪಿನ ನಾಯಕತ್ವ ವಹಿಸುವುದು ಕಥಾ ನಾಯಕಿ "ತಾಯಿ"ಯ ಮಗನಾದ ಪಾವೆಲ್ ಮತ್ತು ಆತನ ಸ್ನೇಹಿತ ಆಂದ್ರೇಯ್. ಮೊದಮೊದಲು ತನ್ನ ಮನೆಯಲ್ಲಿ ಹಲವು ಕ್ರಾಂತಿಕಾರಿಗಳೊಂದಿಗೆ ಗುಪ್ತವಾಗಿ ಸಭೆ ನಡೆಯುತ್ತಿದ್ದಾಗ ಅವರಾಡುತ್ತಿದ್ದ ಮಾತುಗಳಿಂದ ಏನನ್ನೂ ತಿಳಿಯದೆ ಮರೆಯಲ್ಲಿರುತ್ತಿದ್ದ ತಾಯಿ, ತನ್ನ ಗಂಡನೊಂದಿಗೆ ಇಪ್ಪತ್ತು ವರ್ಷಗಳ ಕಾಲ ಸತತವಾಗಿ ದೌರ್ಜನ್ಯ ದಬ್ಬಾಳಿಕೆಗೆ ಒಳಗಾಗಿ ತನ್ನ ಹಳೆಯ ನೆನಪು, ಬಾಲ್ಯ, ಯೌವ್ವನವನ್ನೇ ಮರೆತಿದ್ದ ತಾಯಿ, ಅಕ್ಷರ ಓದಲು ಬರೆಯಲು ಬಾರದ ಅವಿದ್ಯಾವಂತ ತಾಯಿ, ಬರುಬರುತ್ತಾ ನಿಧಾನವಾಗಿಯಾದರೂ ಒಂದೊಂದನ್ನೇ ಅರ್ಥೈಸಿಕೊಳ್ಳುತ್ತಾಳೆ. ಈ ಸಭೆ ಏನು? ಏತಕ್ಕಾಗಿ ನಡೆಯುತ್ತಿದೆ? ಇವರೆಲ್ಲಾ ರಹಸ್ಯವಾಗಿ ಏಕೆ ನನ್ನ ಮನೆಯಲ್ಲಿ ಸೇರುತ್ತಿದ್ದಾರೆ? ಇದರ ಉದ್ದೇಶವೇನು ಎಂಬುದು ಆಕೆಗೆ ಅರ್ಥವಾಗತೊಡಗುತ್ತದೆ.

ಮೇ ದಿನದಂದು ಎಲ್ಲಾ ಶೋಷಿತರ ಪರವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಪಾವೆಲ್ಲ್, ಆಂದ್ರೇಯ್ ಮತ್ತಿತರರು ಮಾಡಿ ಪೋಲೀಸರ ಕೆಂಗಣ್ಣಿಗೆ ಗುರಿಯಾಗಿ ಜೈಲು ಪಾಲಾಗುತ್ತಾರೆ. ತಾಯಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗುತ್ತದೆ. ಮುಂದೇನು ಎನ್ನುವ ಚಿಂತೆಯೊಂದಿಗೆ ತನ್ನನ್ನು ತಾನು ಮಗ ಮಾಡಿ ಬಿಟ್ಟಿದ್ದ ಸಕ್ರಿಯ ಕ್ರಾಂತಿ ಹೋರಾಟದಲ್ಲಿ ತೊಡಗಿಕೊಳ್ಳುತ್ತಾಳೆ, ನಿಷಿದ್ಧ ಸಾಹಿತ್ಯವನ್ನು ಸ್ಥಾವರದಿಂದ ಸ್ಥಾವರಕ್ಕೆ ತಲುಪಿಸುತ್ತಾ ಜನರಲ್ಲಿ ಜಾಗೃತಿಯನ್ನು ಉಂಟು ಮಾಡುವ ಕೆಲಸ ಮಾಡುತ್ತಾಳೆ. ತನ್ನ ಮಗ ಮತ್ತವನ ಸ್ನೇಹಿತರ ಆಶಯವನ್ನು ತನ್ನ ಹೆಗಲ ಮೇಲೆ ಹೊತ್ತು ಊರಿಂದೂರಿಗೆ, ಮನೆಯಿಂದ ಇನ್ನೊಂದು ಮನೆಗೆ, ಜನರಿಂದ ಹತ್ತು ಹಲವು ಜನರ ಬಳಿಗೆ ಒಯ್ದು ಕ್ರಾಂತಿಯ ಕಿಚ್ಚು ಆರದಂತೆ ನೋಡಿಕೊಳ್ಳುತ್ತಾಳೆ. ಬರುಬರುತ್ತಾ ತಾಯಿ ಕೂಡ ಯಾವ ಸಕ್ರಿಯ ಕ್ರಾಂತಿಕಾರಿಗೂ ಕಮ್ಮಿ ಇಲ್ಲದಂತೆ ಬೆಳೆದು ನಿಲ್ಲುವಂತಾಗುತ್ತಾಳೆ. ತನ್ನ ಮಗ ಪಾವೆಲ್ಲ್ ನ ಸ್ಥಾನವನ್ನು ತಾಯಿ ತುಂಬುತ್ತಾಳೆ. ಜನರು, ರೈತರು ಮತ್ತು ದುಡಿಯುವ ವರ್ಗದ ಕಾರ್ಮಿಕರ ಪಾಲಿನ ಇನ್ನೊಬ್ಬ ಪಾವೆಲ್ ಆಗುತ್ತಾಳೆ. ಈ ಕಾರ್ಯದಲ್ಲಿ ತಾಯಿಗೆ ಹತ್ತು ಹಲವು ಹೊಸ ಹೊಸ ಜನರ ಪರಿಚಯವಾಗುತ್ತ‌ದೆ.

ಇತ್ತ ಬಂಧಿತನಾದ ಮಗನ ವಿಚಾರಣೆ ನಡೆದು ಆತನನ್ನು ಸೈಬೀರಿಯಾಕ್ಕೆ ಗಡೀಪಾರು ಮಾಡಲಾಗುತ್ತದೆ. ತೀರ್ಪು ಹೊರಬೀಳುವ ಮುನ್ನ ಕೋರ್ಟಿನ ಕಟಕಟೆಯಲ್ಲಿ ತನ್ನ ಮಗ ಹೇಳಿಕೆ ನೀಡುತ್ತಾನೆ. ಆ ಹೇಳಿಕೆ ಹೇಗಿರುತ್ತದೆಂದರೆ ಸತ್ತು ಮಲಗಿದಂತಿರುವ ಸಮಾಜದ ಎಲ್ಲಾ ಬಡವರ ನೊಂದವರ ಶೋಷಿತರನ್ನು ಬಡಿದೆಬ್ಬಿಸುವಂತಿರುತ್ತದೆ. ಐತಿಹಾಸಿಕವಾದ ಆತನ ಹೇಳಿಕೆಯನ್ನು ಅಚ್ಚು ಹಾಕಿಸಿ ಜನರಿಗೆ ತಲುಪಿಸುವ ಕಾರ್ಯವನ್ನು ತಾಯಿ ಕೈಗೊಳ್ಳುತ್ತಾಳೆ. ಮತ್ತು ಈ ಕೆಲಸದಲ್ಲಿ ಗೂಡಾಚಾರರು ಮತ್ತು ಪೋಲೀಸರ ಕೈಗೆ ಸಿಕ್ಕಿ ಬೀಳುತ್ತಾಳೆ. ಇವರು ತಾಯಿಯ ಮೇಲೆ ದರ್ಪ ತೋರಿಸಿದಾಗ್ಯೂ ತಾಯಿ ಹೆದರದೆ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾಳೆ. ಆದರೆ ಕಣ್ಣಿಲ್ಲದ ಕುರುಡು ಸಮಾಜದಲ್ಲಿ ನ್ಯಾಯದ ಮಾತಿಗೆಲ್ಲಿ ಬೆಲೆ? ತಾಯಿಯನ್ನು ಹೊಡೆದು ಸರಳುಗಳ ಹಿಂದೆ ಹಾಕುತ್ತಾರೆ. ಆದರೆ ಆಕೆಯೊಳಗಿದ್ದ ಸ್ವಾತಂತ್ರ್ಯದ ಬಯಕೆಗಳು, ಜಗತ್ತಿನ ಎಲ್ಲಾ ದುಡಿಯುವ ಕಾರ್ಮಿಕ ವರ್ಗ ಇಂದಲ್ಲ ನಾಳೆ ಒಗ್ಗೂಡಿಯೇ ತೀರುತ್ತದೆ ಎನ್ನುವ ಆಕೆಯ ಕನಸು, ನಮ್ಮ ಪಾಲಿನ ಸೂರ್ಯನು ಉದಯಿಸಲೇ ಬೇಕು ಎಂದು ಬಯಸುವ ಆಕೆಯ ನಂಬಿಕೆ ಆಕೆಯಲ್ಲಿ ಜಾಗೃತವಾಗೇ ಇರುತ್ತವೆ ಮತ್ತು ಅದನ್ನು ಬಂಧಿಸಲು ಸಾಧ್ಯವಿಲ್ಲ ಎನ್ನುವ ಆಶಯದೊಂದಿಗೆ ಕಾದಂಬರಿ ಮುಗಿಯುತ್ತದೆ.

ಇದು ನಾವು ನೀವು ಅಂದುಕೊಂಡಂತೆ ನಮ್ಮ ಸುತ್ತಮುತ್ತ ನಾವು ಕಾಣುವ ಸಾಮಾನ್ಯ ತಾಯಿಯೊಬ್ಬಳ ಕಥೆಯಲ್ಲ. ಅದೆಲ್ಲವನ್ನು ಮೀರಿ ನಿಲ್ಲುವ, ಮಾನವತೆಯ ಮೂರ್ತರೂಪವೆತ್ತ, ಅಜ್ಞಾನಿ ಅವಿದ್ಯಾವಂತೆ ತಾಯಿಯೊಬ್ಬಳು ಎಲ್ಲಾ ಅಸಾಧ್ಯತೆಯನ್ನೂ ಮೀರಿ ಬೆಳೆದು ನಿಲ್ಲುವ ಅಸಾಮಾನ್ಯ ಕಥೆ, ಕ್ರಾಂತಿಕಾರಿಣಿಯಾಗಿ ತನ್ನನ್ನು ತಾನು ಮೇಳೈಸಿಕೊಳ್ಳುವ ಕಥೆ, ಜಗತ್ತಿನ ಎಲ್ಲ ಹಿಂದುಳಿದ ವರ್ಗದ ಪ್ರತಿಧ್ವನಿಯಾಗಿ ಮಾರ್ಪಾಡಾಗುವ ಕಥೆ, ಉಳ್ಳವರ ಅರಸೊತ್ತಿಗೆಯನ್ನು ಧಿಕ್ಕರಿಸಿ ಮೆಟ್ಟಿ ನಿಲ್ಲುವ ಕಥೆ, ಕ್ರಾಂತಿಯ ಹಣತೆಯನ್ನು ಎದೆಯಲ್ಲಿ ಉರಿಯುಟ್ಟುಕೊಂಡು ನೊಂದವರ ಬಡವರ ದೀನದಲಿತರ ಹಕ್ಕುಗಳಿಗಾಗಿ ಹೋರಾಡುವ ಕಥೆ, ಆಳುವ ಮೇಲ್ವರ್ಗದವರು ಸಾಮಾನ್ಯ ಜನತೆಗೆ ಮಾಡುತ್ತಿರುವ ಅನ್ಯಾಯ ಅಕ್ರಮ ದಬ್ಬಾಳಿಕೆಯ ಬಗ್ಗೆ ಕಣ್ಣಿಕೆ ಕಾಣುವಂತೆ ಕಟ್ಟಿಕೊಡಬಲ್ಲ ತಾಯಿಯ ಕಥೆ..

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ, ಮುಖ್ಯವಾಗಿ ತಾಯಿಯದೂ ಸೇರಿದಂತೆ ಬಹಳ ಲೌಕಿಕವಾದ ಧಾಟಿಯಲ್ಲಿ ಚಿತ್ರಿಸಲಾಗಿದೆ. ಭಾವನೆಗಳಿಗಿಲ್ಲಿ ಅವಕಾಶ ಕಡಿಮೆ. ಸುತ್ತಮುತ್ತಲ ಸನ್ನಿವೇಶ ಮತ್ತು ಪರಿಸರದ ಬಗೆಗಿರುವಷ್ಟು ವಿವರಣಿ ಪಾತ್ರಗಳಲ್ಲಿಲ್ಲ.

1906 ರಲ್ಲಿ ಮಾಕ್ಸಿಂ ಗೋರ್ಕಿ ಬರೆದಿದ್ದ ಈ ಕಾದಂಬರಿ ಈತನಕವೂ ಜಗತ್ತಿನ ಬೆಸ್ಟ್ ಸೆಲ್ಲರ್ ಗಳಲ್ಲಿ ಒಂದು. ಪ್ರಪಂಚದ ಅನೇಕಾನೇಕ ಭಾಷೆಯಲ್ಲಿ ಅನುವಾದಗೊಂಡಿದೆ, ನಾಟಕವಾಗಿದೆ, ಸಿನಿಮಾ ಆಗಿದೆ. ಕನ್ನಡಕ್ಕೆ ನಿರಂಜನ ಅವರು ಭಾಷಾಂತರ ಮಾಡಿದ್ದಾರೆ.

ಹಾಂ! ಇದು ಕಾಲ್ಪನಿಕೆ ಕಥೆಯಲ್ಲ. ಮಾಕ್ಸಿಂ ಗೋರ್ಕಿ ಜೀವನದಲ್ಲಿ ನಡೆದ ನೋಡಿದ ಜೀವಂತ ಪಾತ್ರಗಳನ್ನು ಇಟ್ಟುಕೊಂಡು, ಆಗಿನ (ಈಗಿನದೂ ಆಗಿದೆ) ಓರೆಕೋರೆಗಳನ್ನು ತಮ್ಮದೇ ಆದ ಲಯದಲ್ಲಿ ತಿದ್ದುವ ಪ್ರಯತ್ನದ ಕಥೆ. ಓದಲೇಬೇಕಾದ ಕೃತಿಯಿದು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ


https://www.facebook.com/groups/nanobbapustakapremi/permalink/1588119367922181/

Wednesday, November 8, 2017


"ಚದುರಂಗರ ಸಮಗ್ರ ಕಥೆಗಳು.."


ಹೆಸರೇ ಹೇಳುವಂತೆ ಇದು ಚದುರಂಗರ ಸಮಗ್ರ ಕಥೆಗಳ ಬೃಹತ್ತ್ ಸಂಕಲನ. ಸುಮಾರು ಆರುನೂರು ಪುಟಗಳಷ್ಟಿದೆ. 1948 ರಿಂದ ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ ಚದುರಂಗರು ತಾವು ಕಾಲವಾಗುವ ಹಿಂದಿನ ವರ್ಷದ ತನಕವೂ ಬಹಳ ಅತ್ಯುತ್ತಮವಾದುದ್ದನ್ನೇ ಬರೆದರು. ಈ ಸಂಕಲನದಲ್ಲಿ ಅವರು ಬರೆದಿರುವ ಅರವತ್ತು ಸಣ್ಣ ಕಥೆಗಳಿವೆ. ಪ್ರತಿಯೊಂದು ಕಥೆಯೂ ಒಂದೊಂದು ಕಾಲಘಟ್ಟದಲ್ಲಿ ಬರೆದಿದ್ದರೂ, ಎಲ್ಲಾ ಕಥೆಗಳ ಆಶಯ ಮಾತ್ರ ಒಂದೇ ಆಗಿದೆ - ಮಾನವತೆ. ಅವರ ಕಥೆಗಳಲ್ಲಿನ ಬಹುತೇಕ ಪಾತ್ರಗಳು ಹುಟ್ಟಿ... ಬಂದಿರುವುದು ಜನಸಾಮಾನ್ಯರ ದಿನಚರಿಯಿಂದಲೇ. ಒಂದು ರಸ್ತೆಯನ್ನು ಕಥೆಯ ಮುಖ್ಯ ಪಾತ್ರಧಾರಿಯನ್ನಾಗಿಸಿ, ಅದಕ್ಕೂ ಭಾವವನ್ನು ತುಂಬಿ ಕಥೆ ಹೆಣೆದಿರುವ ಪರಿ ನಿಜಕ್ಕೂ ಬೆರಗು ಮೂಡಿಸುವಂಥದ್ದೇ. ಈ ರೀತಿ ಬೆರಗುಗಳು ಪುಸ್ತಕದುದ್ದಕ್ಕೂ ಕಾಣಸಿಗುತ್ತವೆ.


ಕೆಲವು ಕಥೆಗಳು ನಿಜಕ್ಕೂ ರೋಚಕವಾಗಿದ್ದರೆ, ಇನ್ನು ಕೆಲವು ಓದಿದ ನಂತರ ಚಿಂತನೆ ಹಚ್ಚುವಂಥವು. ಸಮಾಜದ ಅಂಕುಡೊಂಕಿನ ಬಗ್ಗೆ ಅತಿ ಹೆಚ್ಚು ಗಮನ ಹರಿಸಿರುವ ಚದುರಂಗರು, ಅಲ್ಲಿರುವ ಹುಳುಕನ್ನು ಹೆಚ್ಚು ಕೇಂದ್ರೀಕರಿಸಿ ವಿಜೃಂಭಿಸದೆ ಅದನ್ನು ಮಾನವತೆ ಪ್ರೀತಿ ಕರುಣೆ ಸ್ನೇಹ ಆಧಾರದ ನೆಲೆಯಲ್ಲಿ ಎತ್ತಿ ಹಿಡಿದು ಕಥೆಗೆ ತಾರ್ಕಿಕ ಅಂತ್ಯ ನೀಡುತ್ತಾರೆ. ಮತ್ತೆ ಕೆಲವು ಕಥೆಗಳ ಅಂತ್ಯವನ್ನು ಓದುಗರಿಗೇ ಬಿಡುತ್ತಾರೆ. ಇದು ಹೀಗೂ ಬದಲಾಗಬಹುದೇ? ಅಥವಾ ಈ ನೆಲೆಗಟ್ಟಿನಲ್ಲಿಯೂ ನೋಡಬಹುದೇ? ಎನ್ನುವ ಹಲವು ಕ್ರಮ ಚಿಂತನೆ ಮಾಡುವ ಕಥೆಗಳಿವೆ. ಇದು ಅವರ ಹೆಚ್ಚುಗಾರಿಕೆಯೂ ಹೌದು, ಕಥೆ ಹೇಳುವ ತಂತ್ರಗಾರಿಕೆಯೂ ಹೌದು. 


ಚದುರಂಗರು ಸಣ್ಣಕಥೆಯನ್ನು ಬರೆಯಲು ಆರಂಭಿಸಿದ್ದು ಸ್ವಾತಂತ್ರ್ಯ ಬಂದ ಹೊಸದರಲ್ಲಿ. ಈಗಿನ ನಮಗೆ ಆ ಕಾಲದ ಜನಜೀವನ, ಸಂಪ್ರದಾಯ, ಆಚರಣೆ, ಸಂಸ್ಕೃತಿ, ಶಿಕ್ಷಣ, ಉದ್ಯೋಗ, ಸ್ವಾತಂತ್ರ್ಯಕ್ಕೂ ಸ್ವೇಚ್ಚಾಚಾರಕ್ಕೂ ಇರುವ ಅಂತರ.. ಮುಂತಾದ ಹಲವು ವಿಷಯಗಳ ಬಗ್ಗೆ ಸ್ಥೂಲ ಪರಿಚಯ ಮಾಡಿಕೊಡಬಲ್ಲ ಅಧ್ಯಯನ ಶೀಲ ಮತ್ತು ಸಂಗ್ರಹಯೋಗ್ಯ ಕೃತಿ ಎಂದರೆ ತಪ್ಪಾಗಲಾರದು. 


ಕಥೆಗಳ ಭಾಷೆ ಮತ್ತದರ ಪ್ರಯೋಗ ಸರಳವಾಗಿ ನಾವೂ ನೀವು ಮಾತಾಡುವ ಮೈಸೂರು ಶೈಲಿಯಲ್ಲಿದೆ. ಕೆಲವು ಕಡೆ ಗ್ರಾಮ್ಯವಾಗಿದ್ದರು ಸಲೀಸಾಗಿ ಓದಬಹುದು. ಎಲ್ಲೂ ಗೊಂದಲವಾಗದೆ ಸಹಜವಾದ ನಿರೂಪಣಾ ಶೈಲಿ ಈ ಕೃತಿಯ ಹೆಗ್ಗಳಿಕೆ. 


ಇಲ್ಲಿ ಅರವತ್ತು ಸಣ್ಣ ಕಥೆಗಳಿರುವುದರಿಂದ ಯಾವುದರ ಬಗ್ಗೆಯೂ ವಿವರವಾಗಿ ಬರೆಯಲು ಆಗುವುದಿಲ್ಲ. ಈ ಕೃತಿಯ ಗಾತ್ರ ಮತ್ತು ವಿಸ್ತರಣೆ ದೊಡ್ಡದು ಎಂದು ಮಾತ್ರ ಹೇಳಲಾಗುವುದಿಲ್ಲ ಬದಲಿಗೆ ಒಳಗಿರುವ ಹೂರಣವೂ ಬಹು ವೈವಿಧ್ಯವೂ ಸಮಗ್ರವೂ ಅತ್ಯಂತ ವಿಭಿನ್ನವೂ ಆಗಿದೆ ಎನ್ನಬಹುದಷ್ಟೇ. 

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್





"ಮಹಾಕ್ಷತ್ರಿಯ.."


ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವಂತೆ ದೇವರು ವರವನ್ನು ಕೊಟ್ಟು ವರಪಡೆದವವನ್ನು ಉದ್ದರಿಸುವ ಸಂಗತಿ ನಮಗೆಲ್ಲರಿಗೂ ತಿಳಿದುದೇ. ಆದರೆ ಮನುಷ್ಯನಾದವನು ದೇವರಿಗೇ ವರವನ್ನು ಕೊಟ್ಟು ಆಚಂದ್ರಾರ್ಕವಾಗಿ ಉದ್ದರಿಸಿದ್ದನ್ನು ಕಂಡಿದ್ದೀರ? ಕೇಳಿದ್ದೀರ? ಹಾಗಿಲ್ಲವಾದರೆ ದೇವುಡು ನರಸಿಂಹಶಾಸ್ತ್ರಿಗಳು ಬರೆದಿರುವ "ಮಹಾಕ್ಷತ್ರಿಯ" ಓದಿದರೆ ದೇವರನ್ನೇ ತನ್ನ ಧರ್ಮಶ್ರದ್ಧೆಯಿಂದ ಉದ್ದರಿಸಿದ ಕಥೆ ತಿಳಿಯುತ್ತದೆ. ಆ ಮಹಾನುಭಾವನಾದರೂ ಯಾರು ಎಂದರೆ ನಹುಷ ಚಕ್ರವರ್ತಿ ಮತ್ತು ಉದ್ದಾರಗೊಂಡವರು ಇಂದ್ರ ಮತ್ತು ಆ...ತನ ಪತ್ನಿ ಶಚಿದೇವಿ.


ಹೇಗೆಂದರೆ..


ಒಮ್ಮೆ ಇಂದ್ರಸಭೆಗೆ ಮಹರ್ಷಿ ಗಣವೊಂದು ಸಪ್ತರ್ಷಿಗಳ ಸೂಚನೆಯಂತೆ ಆಗಮಿಸುತ್ತದೆ. ಅವರು ಬಂದಿರುವ ಕಾರಣ ತಮ್ಮ ಪ್ರಶ್ನೆಗೆ ಉತ್ತರ ತಿಳಿಯಲು. ಬಂದ ಋಷಿಗಣವನ್ನು ದೇವೇಂದ್ರನು ಆದರಾತಿಥ್ಯಗಳಿಂದ ಸತ್ಕರಿಸಿ ಬಂದ ಕಾರಣ ಕೇಳಲು, ಅವರ ಸಮಸ್ಯೆಗೆ ಉತ್ತರಾರ್ಥಿಗಳಾಗಿ ಬಂದುದು ತಿಳಿಯುತ್ತದೆ. ದೇವೇಂದ್ರನು ಉತ್ತರ ಹೇಳಲು ಸಮರ್ಥನಿದ್ದರು ಪೇಚಿಗೆ ಸಿಲುಕಿಕೊಳ್ಳುತ್ತಾನೆ. ಆತ ಋಷಿಗಣ ಬರುವುದಕ್ಕಿಂತ ಮೊದಲಿಂದಲೂ ದೇವಗುರು ಬೃಹಸ್ಪತಿ ಬರುವುದನ್ನು ಎದುರು ನೋಡುತ್ತಿರುತ್ತಾನೆ. ಆದರೆ ಬೃಹಸ್ಪತಿಯು ಸಭೆಯ ಸಮಯಕ್ಕೆ ಸರಿಯಾಗಿ ಆಗಮಿಸಿರುವುದಿಲ್ಲ. ಇದನ್ನೇ ಚಿಂತಿಸುತ್ತಾ ಕುಳಿತಿದ್ದ ಇಂದ್ರನ ಬಳಿ ಈಗ ಋಷಿಗಣ ಬಂದಿದೆ. ಬಂದವರಿಗೆ ಸಬೂಬು ಹೇಳಲು ಆಗದ ಕಾರಣ ಇಂದ್ರ ಪೇಚಿಗೆ ಸಿಲುಕಿದ್ದರೂ ಬಂದವರನ್ನು ಅನುಚಿತವಾಗಿ ನಡೆಸಿಕೊಳ್ಳಬಾರದೆಂದು ಪ್ರಶ್ನೆಗೆ ಉತ್ತರ ಹೇಳಲು ತನ್ನನ್ನು ತಾನು ಮರೆತು ತನ್ಮಯನಾಗಿ ಕಣ್ಣ್ಮುಚ್ಚಿ ಉತ್ತರವನ್ನು ಹೇಳುತ್ತಿರಲು, ಆಗ ಸಭೆಗೆ ಬೃಹಸ್ಪತಿಯ ಆಗಮನವಾಗುತ್ತದೆ. ಎಂದು ಬಂದರೂ ಆದರಣೀಯವಾಗಿ ಸ್ವಾಗತಿಸುವ ಇಂದ್ರ, ಇಂದು ತಾನು ಬಂದರೂ ಎದ್ದು ಬಂದು ನನ್ನನ್ನು ಸ್ವಾಗತಿಸದೆ ಅಪಮಾನಗೊಳಿಸುತ್ತಿದ್ದಾನೆ, ಕಣ್ಣ್ಮುಚ್ಚಿ ಕುಳಿತು ಏನನ್ನೋ ಧೇನಿಸುತ್ತಿದ್ದಾನೆ ಎಂದು ಅನುಮಾನಿಸಿ ಅಪಮಾನಗೊಂಡವರಂತೆ ಬಂದದ್ದು ಬಂದವರಂತೆಯೇ ಅಲ್ಲಿಂದ ಹಿಂದಿರುಗುತ್ತಾನೆ ಬೃಹಸ್ಪತಿ. ಉತ್ತರವಿಟ್ಟು ಋಷಿಗಣ ಹಿಂದಿರುಗಿದ ಮೇಲೆ ಇದನ್ನು ತಿಳಿದ ಇಂದ್ರನು ಚಿಂತಾಕ್ರಾಂತನಾಗುತ್ತಾನೆ. ಸ್ವರ್ಗಲೋಕ ದೇವಗುರುವಿಲ್ಲದೆ ಮುನ್ನಡೆಸಿ ದಾರಿ ತೋರಿಸುವರಿಲ್ಲದಂತಾಗುತ್ತದೆ.


ಇಂತಹ ಸುಸಮಯಕ್ಕಾಗಿ ಕಾದಿದ್ದ ಅಸುರರು ಇದೇ ಸರಿಯಾದ ಸಮಯವೆಂದು ತಿಳಿದು ದೇವಲೋಕದ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಳ್ಳುತ್ತಾರೆ. ಇದನ್ನರಿತ ಇಂದ್ರನು ಹೋಗಿ ಬ್ರಹ್ಮನನ್ನು ಕಾಣಲು, ಹೊಸ ದೇವಗುರುವಾಗಿ ವಿಶ್ವರೂಪಾಚಾರ್ಯನನ್ನು ನೇಮಿಸಿಕೊಳ್ಳುವಂತೆ ಬ್ರಹ್ಮ ಸಲಹೆ ನೀಡುತ್ತಾನೆ. ಆತ ದೇವದಾನವ ಗಣ ಎರಡಕ್ಕೂ ಸಲ್ಲುವನು, ಅವನನ್ನು ನೇಮಿಸಿಕೋ. ಅವನು ನಮ್ಮಂತೆ ಸೋಮರಸ ಸೇವಿಸಲಾರ, ಆದರೆ ಅವನಿಗೆ ಸುರಾಪಾನವೆಂದರೆ ಅಚ್ಚುಮೆಚ್ಚು ಅದನ್ನು ಕೆಣಕಿ ಇಲ್ಲಸಲ್ಲದ್ದನ್ನು ಕೇಳಬೇಡ. ಒಂದುಪಕ್ಷ ಕೇಳಿಕೆಣಕಿಕೊಂಡರೆ ಆತ ಸುಮ್ಮನಿರುವುದಿಲ್ಲ ಹುಷಾರ್! ಎಂದು ಹೇಳುತ್ತಾನೆ ಬ್ರಹ್ಮ. 


ಬ್ರಹ್ಮನ ಆಣತಿಯಂತೆ ವಿಶ್ವರೂಪಾಚಾರ್ಯನು ದೇವಲೋಕದ ಹೊಸ ದೇವಗುರುವಾಗಿ ಬರುತ್ತಾನೆ. ದಿನಗಳೆದಂತೆ ವಿಶ್ವರೂಪನ ಸುರಪಾನದ ಬಗ್ಗೆ ದೇವಗಣದಿಂದ ಅಸಮಾಧಾನ ಬರಲು ಇಂದ್ರನು, ವಿಶ್ವರೂಪನನ್ನು ಕಂಡು ಅದರ ಬದಲು ಸೋಮರಸ ಸೇವಿಸಿ ಎಂದು ಬಂದು ಹೇಳಿದಾಗ ಇಬ್ಬರ ಮಧ್ಯೆಯೂ ಬಿರುಸು ಮಾತುಕತೆಯಾಗಿ ಕೋಪೋದ್ವಿಗ್ನಗೊಂಡ ಇಂದ್ರನು ವಿಶ್ವರೂಪನನ್ನು ಹತ್ಯೆಗೈಯ್ಯುತ್ತಾನೆ. ಬ್ರಹ್ಮಹತ್ಯಾ ಪಾಪ ಆತನನ್ನು ಆವರಿಸುತ್ತದೆ.


ಈ ವಿಷಯ ತಿಳಿದ ವಿಶ್ವರೂಪಾಚಾರ್ಯನ ತಂದೆ ತ್ವಷ್ಟುಬ್ರಹ್ಮನು ಅತೀಕೋಪೋದ್ರಿಕ್ತನಾಗಿ ತನ್ನ ಮಗನನ್ನು ಕೊಂದ ಇಂದ್ರನ ಮೇಲೆ ಸೇಡು ತೀರಿಸಿಕೊಳ್ಳಲು ಒಂದು ಯಾಗವನ್ನು ಮಾಡಿ ಇತರ ಅಸುರಗಣದ ಶಕ್ತಿಯನ್ನೆಲ್ಲಾ ಧಾರೆಯೆರೆದು ವೃತ್ರನೆನ್ನುವ ದೈತ್ಯಾಸುರನನ್ನು ಸೃಷ್ಠಿಸುತ್ತಾನೆ. ಆತ ಎಷ್ಟು ಪರಾಕ್ರಮಿ ಮತ್ತು ಬಲಶಾಲಿಯೆಂದರೆ ಸ್ವತಃ ಇಂದ್ರನೇ ಅಳುಕುವಷ್ಟು. 


ಅಸುರಗುರು ಶುಕ್ರಾಚಾರ್ಯರ ಅಶುಭ ಶಕುನವಿದ್ದರೂ ತಾನು ಈಗಾಗಲೇ ಧಾರಣೆ ಮಾಡಿದ್ದರಿಂದ ವೃತ್ರನು ಇಂದ್ರಲೋಕದ ಮೇಲೆ ದಾಳಿ ಮಾಡಿದಾಗ ಅದನ್ನೆದುರಿಸಲಾಗದೆ ಇಂದ್ರ ಸೋತು ಮಿತ್ರನಾಗಿ ನಾನು ನನ್ನ ಪರಿವಾರವೂ ಇರುವೆವು ಎಂದು ಒಪ್ಪಂದ ಮಾಡಿಕೊಂಡು ತನ್ನ ಇಂದ್ರ ಪದವಿಯನ್ನು ಬಿಟ್ಟುಕೊಡುತ್ತಾನೆ. ಇದನ್ನು ವೃತ್ರನು ಒಪ್ಪುತ್ತಾನೆ. 


ದಾಸ್ಯದಲ್ಲಿ ಎಷ್ಟು ದಿನ ಅಂತ ಬದುಕುವುದು? ಚಿಂತಿತನಾದ ಇಂದ್ರನು ಹೇಗಾದರೂ ಮಾಡಿ ವೃತ್ರನನ್ನು ದಹಿಸಿ ತಾನು ಮತ್ತೆ ಇಂದ್ರಪದವಿಯೇರುವ ತವಕ ಆತನನ್ನು ಅನುದಿನವು ಕಾಡುತ್ತಿರುತ್ತದೆ. ಅದೇ ಸಮಯಕ್ಕೆ ಸರಿಯಾಗಿ ವೃತ್ರನ ಇಂದ್ರಪದವಿಯ ವಾರ್ಷಿಕ ಸಮರಂಭವಿರುತ್ತದೆ. ಆ ಸಮಾರಂಭದಲ್ಲಿ ವೃತ್ರನು ಮನಸೋ ಇಚ್ಚೆ ಪಾನಮತ್ತನಾಗಿ ಉನ್ಮತ್ತನಾಗಿರುವಾಗ ಇಂದ್ರನಿಗಾದ ದೈವಪ್ರೇರಣೆಯಿಂದ ತನ್ನ ವಜ್ರಾಯುಧದಿಂದ ವೃತ್ರನನ್ನು ಸಂಹರಿಸುತ್ತಾನೆ. ಅಲ್ಲಿಯೇ ವೃತ್ರನು ಅಸುನೀಗಿದರೂ ಆತನ ಆತ್ಮ ಮಾತ್ರ ಸಾಯದೆ ಭೂತವಾಗಿ ಇಂದ್ರನಿಗೆ ಗೋಚರಿಸಲು, ಅದನ್ನೆದುರಿಸಲಾಗದ ಇಂದ್ರನು ಮೊದಲು ಮಾಡಿದ್ದ ಹತ್ಯೆಯ ಪಾಪವನ್ನು, ಜೊತೆಗೆ ಈಗ ಮಾಡಿರುವ ಹತ್ಯೆಯ ಘೋರತೆಯನ್ನು ಎದುರಿಸಲಾಗದೆ ಯಾರಿಗೂ ಹೇಳದಂತೆ ಕಾಣದಂತೆ ಕಣ್ಮರೆಯಾಗಿಬಿಡುತ್ತಾನೆ. 


ಆಗ ದೇವಗಣವೆಲ್ಲವೂ ಸಭೆ ಸೇರಿ ನಾಪತ್ತೆಯಾಗಿರುವ ಇಂದ್ರನು ಮತ್ತೆ ಮರಳುವವರೆಗೂ ಇಂದ್ರಲೋಕ ಮಾಧ್ಯಮಲೋಕ ಪಾತಾಳಲೋಕವೂ ಸೇರಿ ತ್ರೈಲೋಕ್ಯವೂ ಆಡಳಿತವಿಲ್ಲದೆ ಸೊರಗುವುದು ಬೇಡ ಎಂದು ನಿರ್ಧರಿಸಿ ಎಲ್ಲರೂ ಒಪ್ಪಿ ಇಂದ್ರ ಪದವಿಗೇರುವಂತವನು ಯಾರಾದರೂ ಇರುವನೇ ಎಂದು ನೋಡಲು ಆಗ ಸಿಗುವನೇ ನಹುಷನು.


ನಹುಷನನ್ನು ಒಪ್ಪಿಸಿ ಕಾಣೆಯಾದ ಇಂದ್ರ ಮರಳಿ ಬರುವವರೆಗು ಆತನನ್ನು ಇಂದ್ರನನ್ನಾಗಿ ಆಡಳಿತ ನಡೆಸುವಂತೆ ಕರೆತರಲಾಗುತ್ತದೆ. ನಹುಷನು ಧರ್ಮಿಷ್ಟ, ದಾನಶೌಂಡವ, ನಿತ್ಯಾಗ್ನಿಹೋತ್ರಿ, ಅಸಮಾನ್ಯ ಆಡಳಿತಗಾರ ಎಲ್ಲವೂ ಆಗಿದ್ದನು. ದೇವೇಂದ್ರನಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ತಾನು ಕೇವಲ ಮನುಷ್ಯಗಣದವನು, ಇಂದ್ರಪದವಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎನ್ನುತ್ತಾನೆ. ಆದರೆ ದೇವಗಣ ಆತನನ್ನು ಒಪ್ಪಿಸಿಕರೆತರುವಲ್ಲಿ ಯಶಸ್ವಿಯಾಗುತ್ತಾರೆ. 


ಅಧಿಕಾರ ಎನ್ನುವುದು ನೀರಿನ ಮೇಲಣ ಗುಳ್ಳೆಯೆಂದರಿತ ನಹುಷನು ಅದರಿಂದ ಮುಕ್ತಿಹೊಂದುವ ಬಗೆ ಚಿಂತಿಸುತ್ತಾನೆ. ಸ್ವತಃ ಇಂದ್ರನ ಪತ್ನಿ ಶಚಿದೇವಿಯ ಮುಖಾಂತರ ಸಪ್ತರ್ಷಿಗಳ ಸಾನಿಧ್ಯದಲ್ಲಿ ಯಾಗ ನಡೆಸಿದರೆ ಮೋಹ ಮತ್ತು ಅಧಿಕಾರದ ಮಾಯೆ ಬಿಟ್ಟುಹೋಗುವುದೆಂದರಿತ ನಹುಷನು ಅದರಂತೆ ಯಾಗ ನಡೆಸುತ್ತಾನೆ. ಈ ಯಾಗವನ್ನು ಮಾಡಿ ವಾನಪ್ರಸ್ಥಮಕ್ಕೆ ಹೋಗುವ ಇರಾದೆ ಆತನದು. ಅದಕ್ಕೂ ಮುನ್ನ ಕಾಣೆಯಾದ ಇಂದ್ರನನ್ನು ಹುಡುಕಿ ಕರೆತಂದು ಆತನಿಗೆ ಇಂದ್ರಪದವಿಯನ್ನು ಮರಳಿಸಬೇಕು ಮತ್ತು ಆತನಿಂದ ಬ್ರಹ್ಮವಿದ್ಯೆಯನ್ನು ಪಡೆಯಬೇಕು ಎಂದು ಬಯಸಿ, ಅಗ್ನಿ ಮತ್ತು ವಾಯುವನ್ನು ಕರೆದು ಅದುವರೆಗು ಯಾರೂ ನೀಡದಂಥಹ ಧೀರೋಧಾತ್ತವಾದ ಆಜ್ಞೆಯನ್ನು ನೀಡಿ ಇಂದ್ರನಿಗೊದಗಿರುವ ವಿಷಮ ಸ್ಥಿತಿಯಿಂದ ಆತನನ್ನು ಹೊರತನ್ನಿ ಎಂದು ಆದೇಶವೀಯಿತ್ತಾನೆ. ಅಗ್ನಿವಾಯುಗಳು ನಹುಷನನ ಮಾತಿಂದ ಉತ್ತೇಜನಗೊಂಡು ಇಂದ್ರನಿಗೊದಗಿದ್ದ ವಿಪತ್ತನ್ನು ನಿವಾರಿಸಿ ದೇವಲೋಕಕ್ಕೆ ಇಂದ್ರನನ್ನು ಕರೆತರುತ್ತಾರೆ. ಆಗ ನಹುಷನು ಅತಿ ವಿನಯ ಮತ್ತು ಸಂಭ್ರಮದಿಂದ ಸ್ವಾಗತಿಸಿ ತನ್ನಿಚ್ಚೆಯನ್ನು ತಿಳಿಸಿ ಮರಳಿ ನೀನೇ ಸ್ವರ್ಗಾಧಿಪತಿಯಾಗು ಎಂದು ಹೇಳುವನು. ನಹುಷನ ವಿನಯವಂತಿಕೆಗೆ ಮನಸೋತ ಇಂದ್ರನು ತಾನು ಮತ್ತೆ ಇಂದ್ರನ ಪಟ್ಟಕ್ಕೆ ಮರಳುವುದಿಲ್ಲ ಎನ್ನುತ್ತಾನೆ. ಆದರೆ ನಹುಷನು ತಾನು ಹಲವು ದಿನಗಳಿಂದ ಪಡೆಯಬೇಕೆಂದುಕೊಂಡಿದ್ದ ಬ್ರಹ್ಮವಿದ್ಯೆಯನ್ನು ವಾಯು, ಯಮ ಮತ್ತು ಇಂದ್ರನಿಂದ ಪಡೆದು ಪುನೀತನಾಗಿ ತರುವಾಯ ಇಂದ್ರನನ್ನು ಯಾಗದ ನಂತರ ತನ್ನ ಸ್ವಸ್ಥಾನಕ್ಕೆ ಮರಳಲು ಒಪ್ಪಿಸಲು ಯಶಸ್ವಿಯಾಗುತ್ತಾನೆ.


ಇತ್ತಕಡೆ ಯಾಗದ ಏಳನೇ ದಿನದ ಮಧ್ಯೆ ನಹುಷನು ಲೋಕವನ್ನು ಸಮಸ್ಥಿಯಲ್ಲಿಡುವ ಗುರುತರ ಜವಾಬ್ದಾರಿಯಿಂದ ಮತ್ತು ಲೋಕಕಲ್ಯಾಣಕ್ಕೋಸ್ಕರ ಬೇಕಂತಲೇ ಗೊತ್ತಿದ್ದೂ ಲೋಪವೆಸಗುತ್ತಾನೆ. ಇದರಿಂದ ಯಾಗ ಅಪೂರ್ಣವಾಗಿ ಆತ ತನಗೆ ತಾನೇ ಶಿಕ್ಷೆಯನ್ನು ವಿಧಿಸಿಕೊಳ್ಳುತ್ತಾನೆ. ತನ್ನ ಅಧಿಕಾರವನ್ನು ಇಂದ್ರನಿಗೊಪ್ಪಿಸಿ ಪತ್ನೀಸಮೇತ ವಾನಪ್ರಸ್ಥಕ್ಕೆ ಹೋಗುವ ಯತ್ನದಲ್ಲಿದ್ದ ನಹುಷನು ಅದು ಈಡೇರದಂತೆ ನೋಡಿಕೊಂಡು ಅಲ್ಲೂ ಸರ್ವಲೋಕ ಹಿತವನ್ನೇ ಬಯಸುತ್ತಾನೆ. ಇದನ್ನೆಲ್ಲಾ ನೋಡಿದ ತ್ರೈಲೋಕ್ಯವು ನಹುಷನು ಕೇವಲ ಕ್ಷತ್ರಿಯನಲ್ಲ, ಎಲ್ಲವನ್ನೂ ತನ್ನ ಸಮಚಿತ್ತದಲ್ಲಿ ಧರ್ಮಬೇಧ ಬರದೆ, ಸಮತೋಲಿಸಿ ಬೇಕಾದರೆ ದೇವತೆಗಳನ್ನೂ ಆಳಬಲ್ಲ ಕ್ಷತ್ರಿಯರಲ್ಲಿ ಕ್ಷತ್ರಿಯ "ಮಹಾಕ್ಷತ್ರಿಯ"ನೆನ್ನುತ್ತದೆ.


ಇದಿಷ್ಟು ಕಥಾಹಂದರ. ಈ ಕಥೆಯಲ್ಲಿ ಹಲವು ಉಪಕಥೆಗಳು, ಪಾತ್ರಗಳು, ಸನ್ನಿವೇಶಗಳು, ಹಿನ್ನೆಲೆ, ವರ್ಣನೆ ಬರುತ್ತವೆ. ಎಲ್ಲವನ್ನೂ ಸರಳ ಶೈಲಿಯಲ್ಲಿ ಅರ್ಥವಾಗುವಂತೆ ಹೇಳಿರುವ ದೇವುಡು ಅವರ ಶೈಲಿ ಅಪ್ರತಿಮವಾಗಿದೆ. ಎಲ್ಲರಿಗೂ ನಮ್ಮ ಪ್ರಾಚೀನ ಸಂಹಿತೆ, ಇತಿಹಾಸ, ಪುರಾಣಪುಣ್ಯ ಕಥೆಗಳು, ಪ್ರಸಂಗಗಳು ಸುಲಭವಾಗಿ ತಲುಪಬೇಕು ಎನ್ನುವುದು ದೇವುಡು ಅವರ ಆಶಯ. ಅವರ ಆಶಯಕ್ಕೆ ತಕ್ಕಂತೆ ಈ ಕಾದಂಬರಿಯನ್ನು ರಚಿಸಿದ್ದಾರೆ. ಈ ಕೃತಿಗಾಗಿ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ನಿಜಕ್ಕೂ ಬೆರಗು ಮೂಡಿಸುವುದೆಂದರೆ ದೇವುಡು ಅವರು ಕಥನವನ್ನು ಹೇಳುವ ಶೈಲಿ. ಎಲ್ಲೂ ಯಾವುದಕ್ಕೂ ಅಗತ್ಯಕ್ಕಿಂತ ಹೆಚ್ವಿನ ಪ್ರಾಶಸ್ತ್ಯವನ್ನು ಕೊಟ್ಟಿಲ್ಲ. ಹೇಳಬೇಕೆನ್ನುವ ಸಂಗತಿಯನ್ನು ಸ್ವಲ್ಪ ಜಾಸ್ತಿಯಾದರು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಯಾವುದನ್ನೂ ವೈಭವಿಕರಿಸಿಲ್ಲ. ಎಲ್ಲವನ್ನೂ ಸಮತೋಲಿಸಿ ಹೇಳಿದ್ದಾರೆ. ಇಂತಹ ಅಪರೂಪದ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿರುವ ದೇವುಡು ಅವರು ಆಕಾಲ ಅಭಿನಂದನಾರ್ಹರು. 


ಮನುಷ್ಯ ಎಲ್ಲಿಂದ ಬಂದನೋ ಅಲ್ಲಿಗೇ ಹಿಂದಿರುಗಬೇಕು ಎನ್ನುವ ಅತಿ ಸೂಕ್ಷ್ಮ ಅಂಶವನ್ನು ತೀವ್ರತರವಾಗಿ ಇದರಲ್ಲಿ ಬಿಂಬಿಸಲಾಗಿದೆ. ಅಧಿಕಾರ ಲಾಲಸೆ ಎನ್ನುವುದು ಯಾರನ್ನು ಎಲ್ಲಿಯೂ ನೆಮ್ಮದಿಯಿಂದ ಇರಲು ಬಿಟ್ಟಿಲ್ಲ ಎಂಬ ಅಂಶವನ್ನು ಎಲ್ಲವನ್ನೂ ಅನುಭವಿಸಿ ಅಧಿಕಾರ ಅಹಂಕಾರಗಳಿಂದ ಮೆರೆಯುತ್ತಿದ್ದ ಇಂದ್ರನನ್ನೂ ಮತ್ತು ಎಲ್ಲವೂ ಇದ್ದು ತನ್ನ ಧಾನಧರ್ಮಗಳಿಂದ ಹೆಸರು ಗಳಿಸಿ ಅಸಮಾನ್ಯ ಎಂದು ಹೆಸರು ಗಳಿಸಿದ್ದ ನಹುಷನನ್ನು ಇಲ್ಲಿ ಸಾಂಕೇತಿಕವಾಗಿಟ್ಟುಕೊಂಡು ಜೀವನದ ಪಾಠ ವೇದಪುರಾಣದಿಂದ ಹೇಳುವ ಕೆಲಸವನ್ನು ದೇವುಡು ಸಂವೇದನಾಶೀಲವಾಗಿ ಮಾಡಿದ್ದಾರೆ. ಅಸಲು, ವೇದಪುರಾಣಗಳಿರುವುದೇ ನಮ್ಮನ್ನು ಸರಿದಾರಿಯಲ್ಲಿ ನಡೆಸಲು ಅಲ್ಲವೇ?


ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್






ಕಂಬಾರರು ತಮ್ಮ ಗಂಭೀರ ಸಾಹಿತ್ಯ, ಜಾನಪದ ರಚನೆಗಳು, ಚಾರಿತ್ರಿಕ ನಾಟಕ ಮತ್ತು ಕಾವ್ಯಗಳ ನಡುವೆ ರಚಿಸಿರುವ ಪ್ರಸಂಗದಂತಿರುವ ಆದರೆ ಪ್ರಸಂಗದಲ್ಲೂ ವಿವಿಧ ಆಯಾಮಗಳಿರುವ ಸಣ್ಣ ಕಥೆಯೇನೆಂದರು ಸರಿಯೇ ಅಥವಾ ಕಿರುಗಾದಂಬರಿ ಎಂದರೂ ಸರಿಯೇ ಎನ್ನಬಹುದಾದ ರಚನೆಯೇ "ಜೀಕೆ ಮಾಸ್ತರರ ಪ್ರಣಯ ಪ್ರಸಂಗ".


ಜೀವನದಲ್ಲಿ ಬದಲಾವಣೆ ಎನ್ನುವುದು ಯಾವಾಗ ಬೇಕಾದರೂ ಹೇಗೆ ಬೇಕಾದರೂ ಯಾವ ರೂಪದಲ್ಲಾದರೂ ಯಾರ ಮುಖಾಂತರದಲ್ಲಾದರೂ ಬಯಸಿದರೂ ಬಯಸದೇ ಇದ್ದರೂ ಇಷ್ಟವಿದ್ದರೂ ಇಲ್ಲದಿದ್ದರೂ ಒಪ್ಪಿಗೆಯಿದ್ದರು ಇಲ್ಲದಿದ್ದರೂ ಬಂದೇ ಬರುತ್ತದೆ ಮತ್ತು ನಾವದನ್ನು ನೋಡುವ ಬಗೆಯಿಂದ ಬಂದ ಬದಲಾವಣೆ ನಮಗೆ ಒಗ್ಗುವಂಥದ್ದೋ ಅಲ್ಲವೋ ಎಂಬುದನ್ನು ನಿರ್ದೇಶಿಸಬಹುದಾಗಿದೆ. ಬದಲಾವಣೆ ತರುವ ಆಯಾಮಗಳು ಆಯಾ ವ್ಯಕ್ತಿಯ ಅಭಿರುಚಿಗನುಗುಣವಾಗಿ ಬದಲಾಗುತ್ತಾ ಹೋಗುತ್ತದೆ. ಒಬ್ಬನು ಅದನ್ನು ಸ್ವೀಕರಿಸುವ ಬಗೆಗೂ ಇನ್ನೊಬ್ಬನು ಅದನ್ನು ಕಾಣುವ ಬಗೆಗೂ ಅಜಗಜಾಂತರ ವ್ಯತ್ಯಾಸ ಕಾಣುವುದು ಆಯಾ ಮನುಶ್ಯನಲ್ಲಿ ಇರುವ ಮನೋಭೇಧ ಕಾರಣವೇ ಹೊರತು ಬದಲಾವಣೆಯದಲ್ಲ. ಅತಿವೃಷ್ಟಿಯಾಗಲಿ ಅನಾವೃಷ್ಟಿಯಾಗಲಿ ಒಂದೇ ಸಮ ಬರುತ್ತದೆ ಒಬ್ಬನಿಗೆ ಹೀಗೆ ಇನ್ನೊಬ್ಬನಿಗೆ ಹಾಗೆ ಎಂದಲ್ಲ. ಬಂದ ಬದಲಾವಣೆಯನ್ನು ಸ್ವಾಭಾವಿಕವಾಗಿ ಸ್ವೀಕರಿಸಿ ನಮ್ಮನ್ನು ಜ್ಞಾನದೆಡೆ ಮುನ್ನಡೆಯುವ ಹಾಗೆ ಸಾಣೆ ಹಿಡಿಯುತ್ತಿರಲೇ ಬೇಕು ; ಬದಲಾವಣೆ ನಮಗಿಷ್ಟವಿರಲಿ ಇಲ್ಲದಿರಲಿ. ಹಾಗೆ ಬದಲಾವಣೆಗೆ ಒಗ್ಗಿಕೊಂಡವನು ದಡ ಸೇರುತ್ತಾನೆ, ಒಗ್ಗಿಕೊಳ್ಳದವನು ಇದ್ದಲ್ಲೇ ಮಡುಗಟ್ಟಿ ಕೊಳೆಯುತ್ತಾನೆ.


ಹಾಗೆ ಬಂದ ಬದಲಾವಣೆಯನ್ನು ತನ್ನ ನಂಬಿಕೆಗೆ ಕಾರ್ಯವೈಖರಿಗೆ ತಾನು ಪ್ರತಿಪಾದಿಸುವ ಸಿದ್ದಾಂತಕ್ಕೆ ಬಲಿಕೊಡಲಾಗದೆ ಕೆಟ್ಟು ಕೊನೆಯಲ್ಲಾದರೂ ಪುಣ್ಯವೆಂಬಂತೆ ದಡ ಸೇರುವ ಮಾಸ್ತರನ ಪ್ರಸಂಗವೇ ಇದು.


ಜೀಕೆ ಮಾಸ್ತರರು ತಮ್ಮ ಕಟ್ಟುನಿಟ್ಟಿಗೆ ಶಿಸ್ತಿಗೆ ಹಿಂದಿನಿಂದ ಬಂದ ಆಚರಣೆಗೆ ಸಂಪ್ರದಾಯಕ್ಕೆ ಎಂದೂ ರಾಜಿ ಮಾಡಿಕೊಂಡವರಲ್ಲ. ಎಷ್ಟೆಂದರೆ ಅವರು ಸಣ್ಣ ಶಾಲೆಯನ್ನು ಕಾಲೇಜಾಗಿ ಪರಿವರ್ತಿಸುವ ಹಂತದ ಪ್ರಕ್ರಿಯೆಯಿಂದ ಹಿಡಿದು ಅದರ ಪ್ರಿನ್ಸಿಪಾಲರಾಗಿ ಆಡಳಿತ ನಡೆಸುವ ತನಕ, ಮನೆಯಲ್ಲಿ ತಪ್ಪದೇ ಪಾಲಿಸುವ ವ್ರತದ ಆಚರಣೆಗಾಗಿ ಅನಾರೋಗ್ಯಪೀಡಿತನಾದ ತಮ್ಮ ಒಬ್ಬೇ ಮಗನನ್ನು ಲಕ್ಷಿಸದೆ ಆತ ಮೃತಪಟ್ಟರೂ ತಿಳಿಯಲಾಗದ ತನಕ, ಶಾಲಾ ಮಾಸ್ತರರಾಗಿದ್ದಾಗಿನಿಂದಲೂ ಈಗ ಪ್ರಿನ್ಸಿಪಾಲರಾದರೂ ತಮ್ಮ ಉಡುಗೆಯನ್ನು ಬದಲಿಸದೇ ಒಂದೇ ರೀತಿ ಉಡುವ ತನಕ, ತಮ್ಮ ಹೆಂಡತಿಗೆ ಸ್ವಲ್ಪವಾದರೂ ಮಿತಿಮೀರದ ವಿನಾಯಿತಿ ಕೊಟ್ಟಿದ್ದಲ್ಲಿ ಆಕೆಯೂ ಎಲ್ಲ ಸಾಮಾನ್ಯ ಗೃಹಿಣಿಯಂತೆ ಜೀವನ ನಡೆಸಲು ಆಗದ್ದನ್ನು ತಮ್ಮ ಠಾಕುಠೀವಿಯಿಂದ ತಡೆಹಾಕುವ ತನಕ, ಕಾಲೇಜಿನಲ್ಲಿ ಹೊಸಪೀಳಿಗೆಯ ಯುವಕಯುವತಿಯರ ಸಾಮಾನ್ಯ ನಡೆನುಡಿಯನ್ನು ವೇಷಭೂಷಣವನ್ನು ಕಾಲಕೆಟ್ಟಿತು ಎಂದು ತಮ್ಮ ವಕ್ರದೃಷ್ಟಿಯಲ್ಲಿ ನೋಡುವ ತನಕ...ಹೀಗೆ ಹೇಳುತ್ತಾಹೋದರೆ ಅದೇ ಒಂದು ದೊಡ್ಡ ಪಟ್ಟಿಯಾದೀತು. 


ಜೀಕೆ ಮಾಸ್ತರರಿಗೆ ಊರಲ್ಲಿ ಮರ್ಯಾದೆಗೇನೂ ಕಡಿಮೆಯಿರಲಿಲ್ಲ. ಅವರ ಸ್ವಭಾವವೇನೇ ಇರಲಿ. ಅವರು ಮಾಡಿದ ಕೆಲಸಗಳೇ ಅವರನ್ನು ಒಬ್ಬ ಗಣ್ಯವ್ಯಕ್ತಿಯನ್ನಾಗಿ ರೂಪಿಸಿತ್ತು. ಇಂತಿಪ್ಪ ನಮ್ಮ ಮಾಸ್ತರರ ಜೀವನದಲ್ಲಿ ತಾನು ಊಹಿಸಲಾಗದ ಬದಲಾವಣೆಯ ಗಾಳಿಯೊಂದು ರೋಜಾ ಎನ್ನುವ ವಿದ್ಯಾರ್ಥಿನಿಯ ಮೂಲಕ ಬೀಸತೊಡಗುತ್ತದೆ. ಮೊದಮೊದಲು ಅವರದನ್ನು ಒಪ್ಪುವುದಿಲ್ಲ. ಆದರೆ ಬರುಬರುತ್ತಾ ಅವರಲ್ಲಿ ಬದಲಾವಣೆಯಾಗಿ ರೋಜಾಳನ್ನು ಬಿಟ್ಟರೆ ಇನ್ನಿಲ್ಲವೆಂಬಂತಾಗುತ್ತಾರೆ. ಕಾಲೇಜಿನ ಯೂನಿಯನ್ ನಾಯಕ ಗಿರ್ರೆಪ್ಪ ಮತ್ತು ರೋಜಾ ಮಾಡುವ ಮೋಜಿನ ಸಂಗತಿ ಇದೆಂದು ಮಾಸ್ತರಿಗೆ ಆಗ್ಗೆ ತಿಳಿಯುವುದಿಲ್ಲ. ತಿಳಿದಾಗ ಅವರಲ್ಲಿನ ರೋಜಾ ಮೇಲಿನ ಪೊರೆ ಕಳಚಿ, ತಾವು ಮಾಡಿದ ತಪ್ಪಿನ ಅರಿವಾಗಿ ಜೀವನದ ಭವ್ಯ ಸಾರ್ಥಕತೆಯೆಡೆ ತಮ್ಮ ಗುರುತು ಕಾಣದಂತೆ ಅಸ್ತಿತ್ವವನ್ನೇ ಅಳಿಸಿಕೊಂಡು ಹೆಜ್ಜೆ ಹಾಕುತ್ತಾರೆ. 


ಇದು ಕಾದಂಬರಿಯ ಒಟ್ಟೂ ವಿಷಯ. ಪ್ರಪಂಚದಲ್ಲಿ ಬದಲಾವಣೆಯೊಂದೇ ಶಾಶ್ವತ ಎನ್ನುವ ಸಂದೇಶವನ್ನು ಮಾರ್ಮಿಕವಾಗಿ ಸಾರುವ ಈ ಕೃತಿ, ಒಂದೇ ಗುಕ್ಕಿನಲ್ಲಿ ಓದಿಮುಗಿಸಬಹುದು.


ನಮಸ್ಕಾರ.


ಮೋಹನ್ ಕುಮಾರ್ ಡಿ ಎನ್





"ಕರಿಮಾಯಿ"


ದೃಶ್ಯ 1..

ಹಳೇ ಬೇರು ಹೊಸ ಚಿಗುರು ಎನ್ನುವ ಮಾತಿದೆ. ಈ ಮಾತು ಎಲ್ಲಿ ಏರಿಳಿತವಾಗದೆ ವೇದ್ಯವಾಗುವುದೋ ಅಲ್ಲಿ ಸುಖ ಶಾಂತಿ ನೆಮ್ಮದಿ ಸಂತೃಪ್ತಿ ಮನೆ ಮಾಡುತ್ತದೆ. ಸುಖಾಸುಮ್ಮನೆ ಜಗಳವಿರುವುದಿಲ್ಲ, ವೈಷಮ್ಯದ ದುರ್ಗಂಧ ಬೀಸುವುದಿಲ್ಲ, ಒಬ್ಬರ ಮೇಲೊಬ್ಬರು ಹಗೆ ದ್ವೇಷ ಸಾಧಿಸುವ ಪರಿಪಾಠವಿರುವುದಿಲ್ಲ, ಒಬ್ಬನನ್ನು ತುಳಿದು ತಾನು ಬದುಕುವ ನೀಚತನವಿರುವುದಿಲ್ಲ, ಇಬ್ಬರ ನಡುವೆ ವಿರೋಧಾಭಾಸ ಇಲ್ಲದಿರುವುದರಿಂದ ಎರಡರ, ಹೊಸದು ಮತ್ತು ಹಳೆಯದು, ನಡುವೆ ಸಮತೋಲನವಿರುತ್ತದೆ. ಅದು ಅಲ್ಲಿನ ಜನರನ್ನು, ಜನರ... ಬದುಕನ್ನು ಸಹನೀಯ ಮಾಡಿಕೊಟ್ಟು, ಆಚಾರ ವಿಚಾರ ಸಂಪ್ರದಾಯವನ್ನು ಮೂದಲಿಸದೆ ಅನುಸರಿಸುತ್ತಾ, ಒಂದಾಗಿ ಬಾಳುತ್ತಾ ಸಮುದಾಯ ಉನ್ನತಿಯೆಡೆ ನಡೆಯುತ್ತದೆ.


ದೃಶ್ಯ 2..

ಬಡತನ, ಅನಕ್ಷರತೆ, ಮುಗ್ದತೆ, ಅಮಾಯಕತೆ, ಅಜ್ಞಾನ..ಇವೆಲ್ಲ ಏನೂ ಕೀಳಲ್ಲ, ಒಬ್ಬನಲ್ಲಿ ಇರಬಾರದೂ ಎಂದೇನಿಲ್ಲ. ಇದೆಲ್ಲವೂ ಇದ್ದು ಸಾಮರಸ್ಯತೆ, ಅನ್ಯೋನ್ಯತೆ, ಸಹಕಾರತೆ, ಒಬ್ಬರನ್ನೊಬ್ಬರು ಅರಿತು ಬಾಳುವಿಕೆ, ಸಹಭಾಗಿತ್ವ ಇದ್ದರೆ ಎಷ್ಟು ಕೀಳುಗುಣಗಳಿದ್ದರೇನು? ಇರಲಿ ಬಿಡಿ. ಇದಕ್ಕಿಂತ ಉತ್ತಮ ಗುಣಗಳು ಇನ್ನ್ಯಾವುವು ಇದ್ದಾವು? ಸಾಕು. ಒಂದು ಸಮುದಾಯದ ಬದುಕನ್ನು ಸಹಜವಾಗಿ ಬರುವ ಕಷ್ಟಗಳು ಅಧೀರರನ್ನಾಗಿಸಿದರೂ ತಮ್ಮಲ್ಲಿರುವ ಉತ್ತಮೋತ್ತಮ ಗುಣದಿಂದ ಬಂದದ್ದನ್ನೆಲ್ಲ ಸಹನೀಯವಾಗಿಸುತ್ತಾರೆ. ಅದು ಕುರುಡು ನಂಬಿಕೆಯಾದರು ಸರಿ. ಸಮಾಜಕದ ಸ್ವಾಸ್ಥ್ಯ ಕೆಡದಂತೆ ತಮ್ಮ ಆಚರಣೆಯನ್ನು, ಸಂಪ್ರದಾಯವನ್ನು, ನಂಬಿಕೆಯನ್ನು ಮೆರೆಸುವುದು ತಪ್ಪಲ್ಲ. ಅದು ತಪ್ಪಾಗಿ ಕಂಡರೆ ನೋಡುವವನ ತಿಳುವಳಿಕೆಯ ಕೊರತೆ ಮತ್ತು ದೋಷವೇ ಹೊರತು ಮತ್ತೇನಲ್ಲ. ಸಂಕೀರ್ಣವಾಗಬೇಕಾದದ್ದು ಕುರುಡು ನಂಬಿಕೆಯನ್ನು ಆರಾಧಿಸುವನದಲ್ಲ, ಅದನ್ನು ನೋಡುವ ವಕ್ರದೃಷ್ಟಿ ಇಟ್ಟು ಅಸಂಕೀರ್ಣತೆಯಿಂದ ಇರುವನು.


ದೃಶ್ಯ 3..

ವಿದ್ಯೆ ಎನ್ನುವುದು ಪ್ರಗತಿಯನ್ನು ಸಾಧಿಸುವ ಸಾಧನ. ವಿದ್ಯೆಯನ್ನು ಪಡೆದು ಅದನ್ನು ಸರಿಯಾದ ದಾರಿಯಲ್ಲಿ ನಡೆದು ಅನುಸರಿಸಿ, ತಾನು ಕಲಿತ ವಿದ್ಯೆಯನ್ನು ಸನ್ಮಾರ್ಗದಲ್ಲಿ ಬಳಸಿಕೊಂಡರೆ ಸ್ವಅಭಿವೃದ್ದಿ ಜೊತೆಗೆ ತನ್ನ ಸುತ್ತಮುತ್ತಲ ಪರಿಸರವೂ ಆರೋಗ್ಯವಾಗಿರುತ್ತದೆ. ಇದಕ್ಕೆ ನಮಗೆ ಹತ್ತುಹಲವು ಉದಾಹರಣೆಗಳು ಸಿಗುತ್ತವೆ. ವಿದ್ಯೆಯನ್ನು ಸರಿಯಾದ ದಾರಿಯಲ್ಲಿ ಬಳಸಿಕೊಂಡು ಉನ್ನತ ಶಿಖರವೇರಿದ ಅನೇಕರು ಇಂದಿಗೂ ನಮ್ಮ ನಡುವೆಯೇ ಇದ್ದಾರೆ. ಕತ್ತಲಿನಿಂದ ಬೆಳಕಿನೆಡೆ, ಅಜ್ಞಾನದಿಂದ ಜ್ಞಾನದೆಡೆ ನಡೆಸುವುದೇ ವಿದ್ಯೆಯ ಲಕ್ಷಣ. ಕಲಿತವರೆಲ್ಲರೂ ಸನ್ಮಾರ್ಗದಲ್ಲಿ ನಡೆಯಲೇಬೇಕೆಂದಿದ್ದರೂ ನಡೆಯಲಾಗುವುದಿಲ್ಲ. ಕಾರಣ ಅನೇಕವಿರಬಹುದು. ಆದರೆ ವಿದ್ಯೆಯು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದಿಲ್ಲ. ವಿದ್ಯೆಯಿಂದ ಆಧುನಿಕತೆ ಮತ್ತು ನಾಗರೀಕತೆ ಬರುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅಕಸ್ಮಾತ್ತ್ ವಿದ್ಯೆ ಕಲಿತ ಪ್ರಜ್ಞಾವಂತನೊಬ್ಬ ಮೋಹಕ್ಕೆ ಬಿದ್ದರೆ, ಅಜ್ಞಾನವು ಆತನ ಕಣ್ಣನ್ನು ಮುಚ್ಚಿದ್ದರೆ, ಹಿರಿಕಿರಿಯರೆನ್ನುವ ಭೇಧ ಆತನಿಗಿರದಿದ್ದರೆ, ಕುಹಕ ಕುತಂತ್ರ ತನ್ನ ಎಡಬಲಗಳಾದರೆ ಏನಾಗಬಹುದು? ಆಧುನಿಕತೆ ಮತ್ತು ನಾಗರೀಕತೆ ಹೆಸರಲ್ಲಿ ಕಂಡದ್ದೆಲ್ಲಾ ಹಳಸಿರುವುದೆಂದರೆ ಸರಿಯೇ? 



ದೃಶ್ಯ 4..

ಈಗ ಮೇಲೆ ಹೇಳಿದ ಮೂರೂ ದೃಶ್ಯಗಳು ಸಮ್ಮಿಲನವಾಯಿತೆಂದುಕೊಳ್ಳಿ. ಏನಾಗುತ್ತದೆ? ಎಲ್ಲಾ ಸೇರಿ "ಕರಿಮಾಯಿ" ಕಾದಂಬರಿಯಾಗುತ್ತದೆ.! ಹೌದು. ಈ ಮೂರರ ಸಮ್ಮಿಲನವೇ "ಕರಿಮಾಯಿ" ಕಾದಂಬರಿಯ ಕಥಾವಸ್ತು. 


ಆ ಹಳ್ಳಿಯಲ್ಲಿ (ಶಿವಾಪುರ) ಅನಾದಿಕಾಲದಿಂದ ಹಿರಿಯರು ಹಾಕಿಕೊಟ್ಟು ನೆಟ್ಟು ಬೆಳೆಸಿದ ಆಚರಣೆಯನ್ನು, ಸಂಪ್ರದಾಯವನ್ನು, ಹಬ್ಬಹರಿದಿನಗಳನ್ನು, ವ್ರತಾಚರಣೆಯನ್ನು ನಂಬುತ್ತಾ, ಊರ ಮಂದಿ ಅದರಲ್ಲೇ ಜೀವಿಸುತ್ತಾ, ಅದನ್ನೇ ತಮ್ಮ ಉಸಿರನ್ನಾಗಿಸಿಕೊಂಡ, ಅದನ್ನೇ ಬದುಕಾಗಿಸಿಕೊಂಡ ಸಮುದಾಯವಿರುತ್ತದೆ. ಹಿಂದಿನ ತಲೆಮಾರಿನವರು ಹಾಕಿಕೊಟ್ಟ ಜೀವನವನ್ನು ಸಾಗಿಸಲು ಬೇಕಾದ ದಿವ್ಯಮಂತ್ರಗಳಾದ ಅನ್ಯೋನ್ಯತೆ ಸಹಕಾರತೆ ಒಬ್ಬರಿಗೊಬ್ಬರು ಸ್ಪಂದಿಸುವಿಕೆಯೆನ್ನುವ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ಸಮುದಾಯದೊಳಗೆ ಅದೇ ಊರಿನಲ್ಲಿ ಹುಟ್ಟಿಬೆಳೆದು ವಿದ್ಯೆ ಕಲಿತವನ ಪ್ರವೇಶವಾಗಿ ಆತ ತನ್ನ ಧೋರಣೆಯನ್ನು ಇವರ ಮೇಲೆ ಏರಿ ಆಧುನಿಕತೆಯ ಮಂತ್ರ ಪಠಿಸಿದಾಗ ಇವರ ಮೇಲೆ ಅದು ಎಂತಹ ಪರಿಣಾಮ ಬೀರಬಹುದು? ನಾಗರೀಕತೆಯ ಹೆಸರಲ್ಲಿ ಅಮಾಯಕರನ್ನು ದಾರಿ ತಪ್ಪಿಸಿದರೆ ಅದನ್ನು ಮಂದಿ ಹೇಗೆ ತಡೆದುಕೊಂಡಾರು? ಅಧಿಕಾರದ ಅಮಲಿನಲ್ಲಿ ಇಡೀ ಸಮುದಾಯವೇ ಸರಿಯಿಲ್ಲ ಎಂದು ಧೋರಣೆ ಮಾಡಿ, ಅನಾವಶ್ಯಕವಾಗಿ ಸುತ್ತ ಪರಿಸರವನ್ನು ಹಾಳುಗೆಡವಿದರೆ ಅದರ ಪರಿಣಾಮ ಮತ್ತು ಪರಿಸ್ಥಿತಿ ಏನಿರಬಹುದು? ಕುತಂತ್ರ ಅರಿಯದ ಮುಗ್ದರ ನಡುವೆ ಕಲಿತವನ ಚೇಲಾವೊಬ್ಬ, ಆ ಚೇಲನ ಸಖಿಯೊಬ್ಬಳು ಸೇರಿಕೊಂಡು ಮಂದಿಯ ಅಮಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಹೇಗೆ ತಮಗೆ ಬೇಕುಬೇಕಾದ ಹಾಗೆ ಅನುಕೂಲಸಿಂಧುತ್ವ ಸೃಷ್ಠಿಸಿಕೊಂಡು, ಅನ್ಯಾಯ ಅಕ್ರಮವನ್ನೇ ತಮ್ಮ ಉಸಿರನ್ನಾಗಿಸಿ ಸುರಿದು ಹೇಗೆ ತಮಗೆ ಬೇಕಾದ ಹಾಗೆ ಪರಿಸ್ಥಿತಿಯನ್ನು ನಿಯಂತ್ರಿಸಿ ಊರನ್ನು ಆಳುತ್ತಾ ಜನರ ಕಣ್ಣಿಗೆ ಮಣ್ಣೆರೆಚುತ್ತಾರೆ ಎಂದರೆ, ಎಲ್ಲವನ್ನು ತಿಳಿದ ಊರ ಹಿರಿಯರು ಕೂಡ ಏನೂ ಮಾಡಲಾಗದ ಆಸಹಾಯಕತೆಯಿಂದಲೇ ಇರುತ್ತಾರೆ. ತಮ್ಮನ್ನು ಕಟ್ಟಿಹಾಕಿರುವುದು, ಏನೂ ಮಾಡಲಾಗದೆ ಸುಮ್ಮನಿರುವುದು ತಮ್ಮ ಕೈಲಾಗದತನದಿಂದಲ್ಲ, ಬದಲಿಗೆ ಊರಿನ ಸ್ವಾಸ್ಥ್ಯ ಹಾಳಾಗದಿರಲಿ ಎನ್ನುವ ಉದ್ದೇಶದಿಂದ, ಹೇಗಾದರೂ ಮಾಡಿ ಹೊಸಚಿಗುರಿನೊಂದಿಗೆ ಸಹಕಾರ ಸ್ಥಾಪಿಸಿ ಸಮುದಾಯವನ್ನು ಮುಂದಿನ ಜನಾಂಗವನ್ನು ಸಮತೋಲಿಸಿ, ಭವಿಷ್ಯವನ್ನು ಮಂದಿಯ ಜೀವನವನ್ನು ಸಮಪ್ರಮಾಣದಲ್ಲಿ ಸಮೀಕರಿಸಬೇಕಿರುವುದರಿಂದ..ಎಂದು ಊರಿನ ಹಿರಿಯರು ಸುಮ್ಮನಿರುತ್ತಾರೆ. 


ಮೇಲಾಗಿ ಇಲ್ಲಿ ಎಲ್ಲದಕ್ಕೂ ಎಲ್ಲರಿಗು ಹೊನ್ನಕಳಶವಿಟ್ಟಂತೆ "ಕರಿಮಾಯಿ" ತಾಯಿಯ ಕೃಪಾಶೀರ್ವಾದವಿದೆ. ಆಕೆಯ ನಝರಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಆಕೆ ಈ ಹಳ್ಳಿಯ ಊರ ‌ದೇವತೆ, ಬದುಕಿನ ಭಾಗ್ಯಧಾತೆ. ತಪ್ಪು ಮಾಡಿದವರನ್ನು ಆಕೆ ಬಿಡುವುದಿಲ್ಲ. ಒಳಿತಾಗಲಿ ಕೆಡುಕಾಗಲಿ ಆಕೆಯ ಸಮ್ಮತಿಯಂತೆಯೇ ನಡೆಯುವುದು. ಅತಿವೃಷ್ಟಿಯಾಗಲಿ ಅನಾವೃಷ್ಟಿಯಾಗಲಿ ಆಕೆಯ ಅಣತಿಯ ಮೇರೆಗೇ ಬರುವುದು. ಎಲ್ಲವನ್ನೂ ಎಲ್ಲರನ್ನೂ ಇಡೀ ಸಮಸ್ತವನ್ನು ನಿಭಾಯಿಸಿ ನಿರ್ವಹಿಸುವಳು "ಕರಿಮಾಯಿ" ತಾಯಿ...ಎಂದು ಹೀಗೆ ನಂಬಿಕೊಂಡ ಹಳ್ಳಿ ಮಂದಿಯ ನಡುವೆ ಆಧುನಿಕತೆ, ನಾಗರೀಕತೆ, ನಗರದ ಆಕರ್ಷಣೆ ನಡೆಯುವ ಘರ್ಷಣೆಯೇ "ಕರಿಮಾಯಿ".


ಇದನ್ನು ಕಂಬಾರರು ಕಲ್ಪಿಸಿ ಬರೆದಿದ್ದಾರೆ, ಯಾವುದೋ ಕಾಲ್ಪನಿಕ ಕಥೆಯಿರಬಹುದು ಎನ್ನುವುದಕ್ಕಿಂತ ಇದು ಅವರ ಕಥೆ, ಅವರ ಊರಿನ ಕಥೆ ಎಂದರೆ ಹೆಚ್ಚು ಸೂಕ್ತವಾಗುತ್ತದೆ. ತಾನು ಹುಟ್ಟಿಬೆಳೆದ ಪರಿಸರದ ನಡುವೆ ನಡೆದ, ತನ್ನ ಕಣ್ಣಮುಂದೆ ತಾನು ನೋಡಿದ ಎಲ್ಲದರ ಚಿತ್ರಣವೇ ಈ "ಕರಿಮಾಯಿ". ಇಲ್ಲಿ ಅವರು ಇದ್ದೂ ಇಲ್ಲದಂತೆ, ಇಲ್ಲದಿದ್ದರೂ ಇರುವಂತೆ ನಿರ್ವಾಹಕನ ಪಾತ್ರ ವಹಿಸುತ್ತಾ ಇಡಿ ಕಥೆಯನ್ನು ಹೇಳಿಕೊಂಡು ಹೋಗುತ್ತಾರೆ, ಕಥೆಗಿರುವ ಉಪಕಥೆ ಹೇಳುತ್ತಾರೆ..ಎಲ್ಲವೂ ನಮ್ಮ ಕಣ್ಣ್ಮುಂದೆ ನಡೆಯುವಂತೆ, ಓದುವರು ಬೆರಗಾಗುವಂತೆ, ಹೊಸಲೋಕಕ್ಕೆ ಯಾನ ಕೈಗೊಂಡಂತೆ, ಉತ್ತರ ಕರ್ನಾಟಕದ ಬಿಸಿಲಿನ ಝಳಕ್ಕೆ ತಕ್ಕಂತೆ, ಅಲ್ಲಿನ ಮಣ್ಣಿನ ಗುಣಕ್ಕೆ ಒಪ್ಪುವಂತೆ, ಅಲ್ಲಿನ ಅನೇಕಾನೇಕ ಆಚರಣೆ ಪದ್ದತಿಗೆ ಅಭಾಸವಾಗದಂತೆ, ಅಲ್ಲಿನ ರೊಟ್ಟಿಯ ಮೇಲಿರುವ ಬೆಣ್ಣೆಯಂತೆ, ಕಪ್ಪುಮಣ್ಣಿನಲ್ಲಿ ಬೆಳೆಯುವ ಹಚ್ಚಬಿಳಿ ಹತ್ತಿಯಂತೆ, ಗುಂಪುಗುಂಪಾಗಿ ಸುಳಿದಾಡಿರುವ ಮಲ್ಲಿಗೆ ಬಳ್ಳಿಯಂತೆ "ಕರಿಮಾಯಿ" ಓದುಗನನ್ನು ಮಂತ್ರಮುಗ್ದನನ್ನಾಗಿಸಬಲ್ಲಳು..


ಕಾದಂಬರಿಯಲ್ಲಿ ಹುಳುಕು ಇಲ್ಲವೆಂದಲ್ಲ. ಆದರೆ ಅದು ನಗಣ್ಯ. ಪ್ರತಿ ಕಥೆಕಾದಂಬರಿ ಅಥವಾ ಇನ್ಯಾವುದೇ ರಚನೆಯಿರಲಿ, ಅದರಲ್ಲೊಂದು ಕೊರತೆ ಬರೆದ ಪ್ರತಿಯೊಬ್ಬ ಲೇಖಕನಿಗೂ ಇದೆ ಎಂದು ಅನ್ನಿಸುವುದು ಸಹಜ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಪೂರ್ಣತೆ ಜಡವಾಗುತ್ತದೆ, ಅಪೂರ್ಣತೆ ಪರಿಪೂರ್ಣವಾಗುತ್ತದೆ. ಆದಕಾರಣ ಹುಳುಕನ್ನು ಹೆಕ್ಕಿ ತೋರಿಸುವುದು ನನಗಾಗದ ಕೆಲಸ. 


ಇದು ಚಲನಚಿತ್ರವಾಗಿ ಮೂಡಿದ್ದರೂ ರಿಲೀಸ್ ಆಗುವ ಭಾಗ್ಯವಿಲ್ಲ ಎಂದು ಕಂಬಾರರು ಆರಂಭದಲ್ಲಿ ಹೇಳಿದ್ದಾರೆ. 


ನಮಸ್ಕಾರ.


ಮೋಹನ್ ಕುಮಾರ್ ಡಿ ಎನ್



"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...