Monday, February 19, 2018

ಅವರ್ನ ಬಿಟ್ಟ್ ಇವರ್ನ ಬಿಟ್ಟ್ ಅವರ್ಯಾರು? ನಂಬರ್ ವನ್
ಒಂದು ದೃಷ್ಟಾಂತ:
ಒಂದು ಮದುವೆ ಮನೆ. ಅಲ್ಲಿ ಊಟಕ್ಕೆ ಕಾದಿದ್ದ ಎ ಅವನ ಪಕ್ಕದಲ್ಲಿ ಬಿ. ತಾಳಿಕಟ್ಟಿದ ಮೇಲೆ ಊಟಕ್ಕೆ ಎದ್ದರು. ಇಬ್ಬರಿಗೂ ತಿನ್ನುವ ಚಪಲ. ಇವರ ಮುಂದೆ ಊಟಕ್ಕೆಂದೇ ಕಾದಿದ್ದ, ಇವರಂತೆಯೇ ಇದ್ದ ಹಲವರು. ಊಟಕ್ಕೆಂದು ನಿಂತಿದ್ದವರು ಆ ಪಾಟಿ ಜನವನ್ನು ನೋಡಿ ನಮಗೆ ಊಟ ಸಿಕ್ಕೀತೇ? ಎಂದು ಅನುಮಾನಗೊಂಡರು. ಎ ಬುದ್ಧಿವಂತ. ಅಲ್ಲಿದ್ದವರ ಬಳಿ, "ನನಗೆ ಸ್ವಲ್ಪ ಸುಸ್ತು. ಬಾಯಾರಿಕೆಯಾಗುತ್ತಿದೆ" ಅಂದ. ಇದನ್ನು ಕೇಳಿದ ಕೆಲವರು ಇವನನ್ನು ಮುಂದೆ ಕಳುಹಿಸಿ ಎಂದರು. ಬಿ ಗೆ ಇದನ್ನು ನೋಡಿ ಉರಿ ಶುರುವಾಯ್ತು. ಅವನಿಗಿಂತ ನಾನೇನೂ ಕಡಿಮೆಯಿಲ್ಲ ಎಂದುಕೊಂಡು, "ಅಯ್ಯೋ! ಬಿದ್ದೆ. ತಲೆ ತಿರುಗುತ್ತಿದೆ. ನೀರು..ನೀರು" ಎಂದ. ಅಲ್ಲಿದ್ದವರು ಕಂಗಾಲಾಗಿ ಇವನನ್ನು ಮುಂದೆ ಬಿಡಿ, ಪಾಪ ತಲೆತಿರುಗುತ್ತಿದೆ ಅಂದರು. ಮುಂದೆ ಮುಂದೆ ಜಾಗ ಮಾಡಿಕೊಂಡು ಹೋಗುತ್ತಿದ್ದ ಎ ನನ್ನೂ ಮೀರಿಸಿ ಬಿ ಮುಂದೆ ಹೋದ. ಇಬ್ಬರಿಗೂ ಎದುರು ಬದುರು ಸಾಲಿನಲ್ಲಿ ಜಾಗ ಸಿಕ್ಕಿತು. ಒಬ್ಬರನ್ನೊಬ್ಬರು ಮುಸಿಮುಸಿ ನೋಡಿದರು. ನೋಡುತ್ತಲೇ ತಿಂದರು. ಇದನ್ನೆಲ್ಲಾ ನೋಡಿದ ಅಲ್ಲಿದ್ದ ಹಿರಿಯರಿಗೆಲ್ಲಾ ಅಸಹ್ಯ ಎನಿಸಿತು. ನಾವು ಮಾಡಿದ್ದು ತಪ್ಪೆನಿಸಿತು. ಆದರೆ ಇದ್ಯಾವುದನ್ನೂ ಗಮನಿಸದ ಎ ಮತ್ತು ಬಿ ತಮಗೆ ಬೇಕಾದ್ದು ಹಾಕಿಸಿಕೊಂಡು ತಿಂದುಂಡು ಹೋದರು.

ಇದನ್ನೇ ಸ್ವಲ್ಪ ಹೀಗೆ ಬದಲಿಸೋಣ. ಒಂದು ದೇಶದ ಆಧಾರಸ್ತಂಭದಲ್ಲಿ ಮಾಧ್ಯಮದವರದು ಬಹುಪಾಲು. ಅದರಲ್ಲೂ ಮಾಹಿತಿ ಮತ್ತು ತಂತ್ರಜ್ಞಾನ ಬೆಳೆದ ಮೇಲಂತೂ ಅವರು ಎಲ್ಲರನ್ನೂ, ಎಲ್ಲವನ್ನೂ ಮೀರಿ ಬೆಳೆದ ಪರಿಯೇ ಅದ್ಭುತ. ಒಂದು ದಿನಪತ್ರಿಕೆ ಓದಿ ತಿಳಿದುಕೊಳ್ಳುವುದಕ್ಕಿಂತಲೂ ಅರ್ಧ ಗಂಟೆ ನ್ಯೂಸ್ ನೋಡಿ ತಿಳಿಯುವುದು ಹೆಚ್ಚು. ಯಾಕೆಂದರೆ ಅದು ದೃಶ್ಯ ಮಾಧ್ಯಮ. ಅಕ್ಷರ ಮಾಧ್ಯಮಕ್ಕಿಂತ ದೃಶ್ಯ ಮಾಧ್ಯಮದ ಪ್ರಭಾವ ಹೆಚ್ಚು. ಒಂದು ವರದಿಯನ್ನು ಬರೆದು ಹೇಳಿ ನಾವದನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕಿಂತಲೂ ಅದೇ ವರದಿಯನ್ನು ದೃಶ್ಯದ ಮುಖಾಂತರ ಈವತ್ತು ಜನರಿಗೆ ಪ್ರಸ್ತುತ ಪಡಿಸುವುದು ಸುಲಭ. ಎಲ್ಲವೂ ಟಿ ಆರ್ ಪಿ ಎನ್ನುವ ಅಗೋಚರ ಭೂತದ ಕುಣಿತಕ್ಕೆ ತಾಳ ಹಾಕುವ ಮಾಧ್ಯಮಗಳು ನಂಬರ್ ವನ್ ಸ್ಥಾನದ ಪ್ರತಿಫಲಾಕಾಂಕ್ಷಿಗಳೇ. ಇಲ್ಲಿ ಎ ಮತ್ತು ಬಿ ಮಾತ್ರ ಇಲ್ಲ. ಅಸಹ್ಯವಾಗಿ ಊಟ ತಿನ್ನುವ ಅಸಂಖ್ಯಾತ ಮಂದಿಯಿದ್ದಾರೆ.

ತಾನು ಬಿತ್ತರಿಸುವ ವರದಿಯ ಕನಿಷ್ಠ ಸತ್ಯಾಸತ್ಯತೆಯನ್ನೂ ಪರೀಕ್ಷಿಸದೇ ಅದೆಷ್ಟೋ ಕಾರ್ಯಕ್ರಮಗಳನ್ನು ನೋಡುವ ದುರ್ಭರ ಸ್ಥಿತಿಯಲ್ಲಿಂದು ನಾವಿದ್ದೀವಿ. ಪ್ರಸಾರ ಆಗುತ್ತಿರುವ ಕಾರ್ಯಕ್ರಮ ಸಾಧುವಲ್ಲ, ಸತ್ಯಾನುಚಿತವಾಗಿಲ್ಲ ಎಂದು ನೋಡುಗರಿಗೆ ತಿಳಿದಿದ್ದರೂ ಮೌನವಾಗಿ ಅದನ್ನು ನೋಡಬೇಕು ಇಲ್ಲವೇ ಅದೇ ರೀತಿ ಇನ್ನೊಂದು ಕಾರ್ಯಕ್ರಮ ಬಿತ್ತರಿಸುವ ಚಾನೆಲ್ಲ್ ಗೆ ಬದಲಾಗಬೇಕಾದ ಕರ್ಮ.
ಹೀಗೇಕಾಗುತ್ತದೆಂದರೆ ನಮ್ಮ ನ್ಯೂಸ್ ಚಾನೆಲ್ಲ್ಗಳಿಗೆ ಕಾರ್ಯಕ್ರಮದ ಸತ್ಯ ನಿಷ್ಟತೆ, ವಾಸ್ತವಾಂಶ ಮತ್ತು ಕ್ವಾಲಿಟಿಗಿಂತ ಸದಾ ಬಿಸಿ ಬಿಸಿಯಾದ ಮತ್ತು ಉದ್ರೇಕಕಾರಿ ವರದಿಗಳೇ ವಾರದ ರೇಸಿನಲ್ಲಿ ಅವರನ್ನು ಹಿಂದಕ್ಕೂ ಮುಂದಕ್ಕೂ ತಳ್ಳುವುದು ಮಾಡುತ್ತಿರುತ್ತದೆ. ರೇಸಿಗೆ ಬಿದ್ದವ ರೇಜಿಗೆಗೆ ಬೀಳುತ್ತಾನೆ. ಕಾರ್ಯಕ್ರಮ ಹಳ್ಳ ಹಿಡಿಯುತ್ತೆ. ಈ ರೀತಿ ಬಿಸಿಬಿಸಿ ಮತ್ತು ಉದ್ರೇಕಯುಕ್ತ ಕಾರ್ಯಕ್ರಮಗಳನ್ನು ನೋಡುವ ಸಮೂಹವೇ ಇದೆ ಎಂದರೆ ನೀವು ನಂಬಲಿಕ್ಕಿಲ್ಲ.

ಎಲ್ಲಿ ಅದೇ ಜಾಗದಲ್ಲಿ ಒಂದು ಸಾಹಿತಿಯನ್ನೋ, ಕವಿಯನ್ನೋ, ಮಕ್ಕಳ ಸಂಬಂಧಿತ ಕಾರ್ಯಕ್ರಮವನ್ನೋ, ಶಿಕ್ಷಣ ಆಧಾರಿತ ಮಾಹಿತಿಯನ್ನೋ, ಸತ್ಯನಿಷ್ಠುರ ವರದಿಗಳನ್ನೋ ಬಿತ್ತರಿಸಲಿ ನೋಡೋಣ? ಮಂಜು ಕರಗಿದಂತೆ ಟಿ ಆರ್ ಪಿ ಇಳಿಯುತ್ತದೆ.

ಇದಕ್ಕೆ ಕಲಶಪ್ರಾಯವಿಟ್ಟಂತೆ ಒಂದು ಚಾನೆಲ್ಲಿಗೂ ಇನ್ನೊಂದಕ್ಕೂ ಪರಸ್ಪರ ಮತ್ತು ವೈಯುಕ್ತಿಕ ಶೀತಲ ಸಮರ ಬೇರೆ ಸದಾ ಜೀವಂತವಾಗಿರುತ್ತದೆ. ನೀನು ಇಂತಿಂಥದ್ದನ್ನು ಪ್ರಸಾರ ಮಾಡಿದೆಯಾ? ತಗೋ ನನ್ನದೂ ಹೀಗ್ಹೀಗೆ ನಿನ್ನ ಕಾರ್ಯಕ್ರಮವನ್ನೂ ಮೀರಿಸುವ ಮಸಾಲೆಯಿದೆ ಎನ್ನುವಂತೆ ಬಿತ್ತರಿಸುತ್ತಾರೆ. ವೀಕ್ಷಕರು ಪುಣ್ಯ ಮಾಡಿರಬೇಕು.

ಚಾನೆಲ್ಲ್ ನಡೆಯಲು ಕಾರ್ಯಕ್ರಮದ ಮಧ್ಯೆ ಬರುವ ಜಾಹೀರಾತು ಮುಖ್ಯ ಪಾತ್ರ ವಹಿಸುತ್ತದೆ. ಇದೇ ಒಂದು ಚಾನೆಲ್ಲಿನ ಬಂಡವಾಳ. ಆ ಜಾಹೀರಾತು ಪಡೆಯಲು ಚಾನೆಲ್ಲಿನವರು ಇನ್ನೊಂದು ಚಾನೆಲ್ಲಿನವರ ಮೇಲೆ ನಡೆಸುವ ವಾಕ್ಕ್ ಗದಾಪ್ರಹಾರ, ಒಳಪಿತೂರಿ ಕೆಲವೊಮ್ಮೆ ಬಹಿರಂಗ ವೇದಿಕೆಗೂ ಬಂದು ನಗೆಪಾಟಲಿಗೆ ಗುರಿಯಾದದ್ದುಂಟು. ಕೆಲವೊಮ್ಮೆ ಅಸಹ್ಯಕ್ಕೂ ಅಸಹ್ಯವಾಗುವಂತೆ ವರ್ತಿಸಿದ್ದೂ ಇದೆ.

ಚಾನೆಲ್ಲ್ ನಡೆಸಲು ಇನ್ನೊಂದು ಪ್ರಮುಖ ಆಧಾರವೆಂದರೆ ರಾಜಕೀಯ ಪಕ್ಷಗಳು. ಒಂದೊಂದು ಚಾನೆಲ್ಲ್ ಒಂದೊಂದು ಪಕ್ಷಕ್ಕೆ ಮಾರಿಕೊಂಡಿವೆಯೇನೋ ಅನ್ನಿಸುವಂತೆ, ಸ್ವಹಿತಾಸಕ್ತಿ ಪ್ರದರ್ಶಿಸುತ್ತಾ ಎದುರಿನ ಪಕ್ಷದವರ ಅಕ್ರಮವನ್ನು ಬಯಲಿಗೆಳೆಯುವುದರಲ್ಲಿ ಸದಾ ನಿರತರಾಗಿರುತ್ತಾರೆ.

ಸತ್ಯನಿಷ್ಠುರ ವರದಿ ಮಾಡುವ ವರದಿಗಾರರನ್ನು ಯಾವುದೇ ಮುಲಾಜಿಲ್ಲದೆ ಪಿಂಕ್ ಸ್ಲಿಪ್ ಕೊಟ್ಟು ಮನೆಗೆ ಕಳುಹಿಸುವ ಮಾಧ್ಯಮ, ಘಟನೆಗಳ ವೈಭವೀಕರಣ ಮಾಡಿ, ರೋಚಕತೆ ಸೃಷ್ಟಿಸುವರಿಗೆ ಮಾತ್ರ ಮಣೆ ಹಾಕುತ್ತಿರುವುದು ದುರಂತ. ಇದಕ್ಕೆ ತಾಜಾ ಉದಾಹರಣೆ 'ಇಂಡಿಯಾ ಟುಡೇ" ಇತ್ತೀಚೆಗೆ ತನ್ನ ಉದ್ಯೋಗಿಯನ್ನು ಹೇಳದೆ ಕೇಳದೆ ಮನೆಗೆ ಕಳುಹಿಸಿದ್ದು. ಆಕೆ ಮಾಡಿದ್ದ ತಪ್ಪಾದರೂ ಏನು? ಆಕೆ ತನ್ನ ಟ್ವಿಟ್ಟರ್ನಲ್ಲಿ "ಸತ್ಯನಿಷ್ಠುರ ವರದಿಯನ್ನು ಪ್ರಕಟಿಸುವ ಜವಾಬ್ದಾರಿ ಮಾಧ್ಯಮಕ್ಕೆ ಹಿಂದೆಂದಿಗಿಂತಲೂ ಈಗ ಹೆಚ್ಚು ಬೇಕಾಗಿದೆ. ಸುಳ್ಳು ವರದಿ ಪ್ರಕಟಿಸಿ ಮುಂದೆಂದೋ ಕ್ಷಮೆ ಯಾಚಿಸುವ ಸಂಪ್ರದಾಯ ಒಳ್ಳೆಯದಲ್ಲ" ಎಂದು ಬರೆದುಕೊಂಡಿದ್ದರು.

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡುವಂತೆ, ಕೇವಲ ಆಕೆಯ ಟ್ವಿಟ್ಟರ್ ಪೋಸ್ಟನ್ನೇ ಆಧಾರವಾಗಿಟ್ಟುಕೊಂಡು ಆಕೆಯನ್ನು ಕೆಲಸದಿಂದ ವಜಾ ಮಾಡಿದರು. ನಮ್ಮ ಸಂಸ್ಥೆ ಈ ರೀತಿ ಟ್ವೀಟ್ ಮಾಡುವುದನ್ನು ಸಹಿಸುವುದಿಲ್ಲ. ನಮಗೆ ನಮ್ಮದೇ ಆದ ಸಾಮಾಜಿಕ ಜವಾಬ್ದಾರಿಗಳಿವೆ. ಕೋಡ್ ಆಫ್ ಕಂಡಕ್ಟ್ ಇದೆ ಎಂದು ಬಾಲಿಶ ಹೇಳಿಕೆ ಕೊಟ್ಟರು. ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳಾದವು.

ಏನೇ ಆದರೂ ಸಮಾಜದ ಸ್ವಾಸ್ಥ್ಯ ಕಾಯಬೇಕಿದ್ದ ಮಾಧ್ಯಮಗಳು ಇಂದು ತಮ್ಮ ಕೊಳಕು ಸಂಸ್ಕೃತಿಯನ್ನು ಪ್ರದರ್ಶಿಸುತ್ತಾ, ರಾಜಕೀಯ ಪ್ರೇರಿತರಾಗಿ ತಮ್ಮನ್ನು ಒತ್ತೆಯಿಟ್ಟುಕೊಂಡು, ಒಬ್ಬರ ಮೇಲೊಬ್ಬರು ಕೇಸರೆರಚಿಕೊಳ್ಳುತ್ತಾ, ಟಿ ಆರ್ ಪಿ ಗಾಗಿ ಪೈಪೋಟಿ ನಡೆಸುತ್ತಾ, ನಂಬರ್ ಒನ್ ಸ್ಥಾನಕ್ಕಾಗಿ ಅಸಹ್ಯವನ್ನು ಸೃಷ್ಟಿಸುತ್ತಾ, ಉಳ್ಳವರನ್ನು ಪೋಷಿಸುತ್ತಲೂ ತಮ್ಮ ಮೂಲ ಆಶಯವನ್ನೇ ಮರೆತಿರುವುದು ನಮ್ಮ ಸಮಾಜದ ದುರಂತವೇ ಸರಿ.


"ವಿಕ್ರಮಾರ್ಜುನ ವಿಜಯ" - ಆದಿಕವಿ ಪಂಪ

ಆದಿಕವಿಯನ್ನು ವಿಶ್ಲೇಷಿಸುವ ಸಾಮರ್ಥ್ಯವಾಗಲಿ, ಆ ಮಟ್ಟದ ಬುದ್ಧಿಮತ್ತೆಯಾಗಲಿ ಅಥವಾ ಪಾಂಡಿತ್ಯ ಪ್ರದರ್ಶನ ಮಾಡುವ ಉದ್ಧಟತನವಾಗಲೀ ಇದಲ್ಲ ಎನ್ನುವ ಭಿನ್ನಹದೊಂದಿಗೆ, ಕೇವಲ ಒಬ್ಬ ಓದುಗನಾಗಿ ನನಗನ್ನಿಸಿದ ಸಂಗತಿಗಳನ್ನಷ್ಟೇ ಅಭಿಪ್ರಾಯ ರೂಪದಲ್ಲಿ ಹಂಚಿಕೊಳ್ಳಬಯಸುವ ಸಣ್ಣ ಕ್ರಿಮಿ ಯತ್ನವಷ್ಟೇ ಇದು. ವಿಷಯ ಮಂಡನೆಯಲ್ಲಿ ಲೋಪದೋಷಗಳಿದ್ದಲ್ಲಿ ಅದು ನನ್ನ ಅಸಮರ್ಥತೆಯಷ್ಟೇ ವಿನಃ ಬೇರೇನಲ್ಲ. ಇಲ್ಲಿ ವ್ಯಕ್ತಪಡಿಸಿರುವ ಅನಿಸಿಕೆಗಳು ಕೇವಲ ನನ್ನವೇ. ತಪ್ಪಿದ್ದಲ್ಲಿ ಹೇಳಿ ಅರಿತುಕೊಳ್ಳುವೆ.

ಹದಿನೆಂಟು ದಿನಗಳ ಕಾಲ ಈ ಪುಣ್ಯ ಭರತ ಭೂಮಿಗಾಗಿ ನಡೆಯುವ ದಾಯಾದಿ ಸಂಗ್ರಹಕ್ಕೆ ಸಂಬಂಧಿಸಿದ್ದು ಇದಾದರೂ, ಈ ಮಹಾನ್ ಗ್ರಂಥಕ್ಕೆ "ವಿಕ್ರಮಾರ್ಜುನ ವಿಜಯ" ಎನ್ನುವ ಹೆಸರು ಹೇಗೆ ಇಟ್ಟಿರಬಹುದೆನ್ನುವುದರ ಕಡೆ ನೋಡೋಣ. ಇದನ್ನು ತಿಳಿಯಬೇಕೆಂದರೆ ಪಂಪನ ಕಾಲಕ್ಕೆ ಹೋಗಬೇಕು. ರಾಷ್ಟ್ರಕೂಟರ ಸಾಮಂತ ರಾಜರುಗಳಲ್ಲಿ ಒಬ್ಬನಾಗಿದ್ದ ಬಾದಾಮಿ ಚಾಲುಕ್ಯ ದೊರೆ ಎರಡನೇ ಅರಿಕೇಸರಿ ಒಬ್ಬ ಅಪ್ರತಿಮ ಶೂರನಾಗಿದ್ದ. ತನ್ನ ಪ್ರಜೆಗಳನ್ನು ಸಕಲ ಸಂಕಷ್ಟದಿಂದಲೂ ಪಾರುಮಾಡಿ ದೇಶವನ್ನು ಸುಸ್ಥಿತಿಯಲ್ಲಿಟ್ಟಿದ್ದ. ಅವನ ಆಸ್ಥಾನದಲ್ಲಿ ಕಲೆ, ಸಾಹಿತ್ಯ, ಸಂಗೀತ, ಶಾಸ್ತ್ರ ಇವೇ ಮುಂತಾದ ಹತ್ತು ಹಲವು ಕಲಾಪ್ರಾಕಾರಗಳು ಉಚ್ಚ್ರಾಯದಲ್ಲಿದ್ದವು. ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸುತ್ತಾ, ತನ್ನ ಅಮೋಘ ರಚನೆಗಳಿಂದ ಎಲ್ಲರ ಗಮನವನ್ನು ಸೆಳೆದು, ಅರಿಕೇಸರಿಯ ಆಸ್ಥಾನದಲ್ಲಿ ಸರಸ್ವತಿಯ ಮಾನಸ ಪುತ್ರರತ್ನದಂತಿದ್ದವನೇ ಆದಿಕವಿ ಪಂಪ. ಗಂಡರಗಂಡ, ಪ್ರಚಂಡ ಪರಾಕ್ರಮಿಯಾದ ಮಹಾಭಾರತದ ಅರ್ಜುನನನ್ನು ತನ್ನ ದೊರೆಯಾದ ಅರಿಕೇಸರಿಗೆ ಹೋಲಿಸಿ ನೋಡುವುದರಿಂದಲೂ, ಇಬ್ಬರಲ್ಲೂ ಒಂದೇ ಶಕ್ತಿಸಾಮರ್ಥ್ಯ, ನಡೆ ನುಡಿ ಆತನಿಗೆ ಭಾಸವಾಗಿರಲು, ತನ್ನ ಅರಸನಾದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸುತ್ತಾ ತಾನು ಬರೆದ ಮಹಾಭಾರತದ ತನ್ನ ಕೃತಿಗೆ 'ವಿಕ್ರಮಾರ್ಜುನ ವಿಜಯ' ಎಂದು ಹೆಸರಿಟ್ಟು ಇದನ್ನು ತನ್ನರಸನಿಗೆ ಸಮರ್ಪಿಸಿದ್ದಾನೆ ಆದಿಕವಿ.

ಹಳೆಗನ್ನಡದಲ್ಲಿ ರಚಿತವಾಗಿದ್ದ "ವಿಕ್ರಮಾರ್ಜುನ ವಿಜಯ"ನನ್ನು ನಮ್ಮ ಇಂದಿನ ಆಡುಭಾಷೆಗೆ ಎಲ್ಲರೂ ಓದಿ ಅರ್ಥಮಾಡಿಕೊಳ್ಳುವಂತೆ ಸರಳೀಕನ್ನಡೀಕರಿಸಿದ್ದಾರೆ ಹೆಚ್. ವಿ. ಶ್ರೀನಿವಾಸ ಶರ್ಮಾ ಅವರು. ಪ್ರತಿ ಪದ್ಯವೂ ಗದ್ಯಕ್ಕೆ ಅನುವಾದಿಸಿರುವ ರೀತಿ ಅನನ್ಯವಾಗಿದೆ.

ಮಹಾಭಾರತದ ಕಥೆಯು ಹೇಗೆ ಅನಂತ ಮತ್ತು ವಿಸ್ತಾರವುಳ್ಳದ್ದೋ ಹಾಗೆ ಅದನ್ನು ಒಂದೆರೆಡು ಪುಟದಲ್ಲಿ ಹಿಡಿದಿಡುವುದು ಅಷ್ಟೇ ಕಷ್ಟ ಮತ್ತು ಅಸಾಧುವೂ ಆಗಿದೆ. ಆದರೆ ಪಂಪ ರಚಿತ ಭಾರತವನ್ನು ಓದಿದ ಮೇಲೆ ನನಗನ್ನಿಸಿದ ಕೆಲವು ಅನಿಸಿಕೆಗಳು ಇಂತಿವೆ (ಆಕ್ಷೇಪಣೆಯೂ ಅನ್ನಬಹುದು)

* ಆರಂಭದ ಮೊದಲ ಪುಟದಿಂದ ತನ್ನ ಸ್ವಾಮಿ (ಅರಿಕೇಸರಿ) ಅರ್ಥಾತ್ತ್ ಅರ್ಜುನನ ಭಕ್ತಿಯನ್ನು ಅತಿಯಾಗಿ ಮೇಳೈಸಿದ್ದಾನೆ ಪಂಪ.

* ಅರ್ಜುನ ಒಬ್ಬ ಮೇಧಾವಿ, ಸಾಹಸಿ, ಪರಾಕ್ರಮಿ ಮತ್ತು ಮಹಾನ್ ಬಿಲ್ವಿದ್ಯೆ ಪಾರಂಗತ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಅರ್ಜುನನನ್ನು ತನ್ನ ಅರಸ ಅರಿಕೇಸರಿಗೆ ಹೋಲಿಸಿ ನೋಡುವ ಪಂಪ ಆತನೆಡೆಗಿದ್ದ ನಿಷ್ಟೆಯಿಂದಲೋ, ಭಕ್ತಿಯಿಂದಲೋ ಅತೀ ರಂಜಕವೆನಿಸುವಷ್ಟು ಅರ್ಜುನನನ್ನು ಮೇಳೈಸಿ ಬಿಂಬಿಸಿದ್ದಾನೆ. ಸುಮರು 528 ಪುಟದಷ್ಟಿರುವ ಈ ಕೃತಿ ಭಾಗಶಃ ಅರ್ಜುನನ ವರ್ಣನೆಗೇ ಮೀಸಲು! ಅಂದಮಾತ್ರಕ್ಕೆ ಬೇರೆಲ್ಲಾ ಸಂಗತಿಗಳು ಮೂಡಿಲ್ಲ ಎಂದರ್ಥವಲ್ಲ. ಆದರೆ ಕೆಲವೊಂದು ಪಾತ್ರಗಳ ಪೋಷಣೆ ಇರಬೇಕಾದ ಮಟ್ಟಿಗೆ ಕಾಣಸಿಗುವುದಿಲ್ಲ.

*ಅರ್ಜುನನನ್ನು ಮೀರಿಸುವ ಸಾಹಸಿಗಳು ಇದ್ದಾಗ್ಯೂ ಆತನ ವರ್ಣನೆ ಕೆಲವೊಮ್ಮೆ ನೀರಸವೆನಿಸುತ್ತದೆ. ಅತಿಯಾದ ಅರ್ಜುನನ ವರ್ಣನೆ ಕೆಲವೊಮ್ಮೆ ಮಹಾಭಾರತದಲ್ಲಿ ಅರ್ಜುನನನ್ನು ಬಿಟ್ಟರೆ ಮಿಕ್ಕವರೆಲ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಗೋಜಲನ್ನು ಹುಟ್ಟುಹಾಕುವುದರಲ್ಲಿ ಸಂದೇಹವಿಲ್ಲ.

*ಕುರುಪುರೋಹಿತರೆಂದು ಹೆಸರು ಪಡೆದಿದ್ದ ಕಲಿ ಭೀಷ್ಮರ ಪಾತ್ರ ಪೋಷಣೆಯೂ, ಸಾಂಧರ್ಭಿಕ ಚಿತ್ರಣವಾಗಿ ಮೂಡಿಬಂದಿದೆಯೇ ಹೊರತು, ಆ ಪಾತ್ರಕ್ಕೆ ಸಿಗಬೇಕಿದ್ದ ತೂಕಕ್ಕೆ ತಕ್ಕಷ್ಟು ಮೂಡಿಬಂದಿಲ್ಲ. ಗಾಂಗೇಯನ ಘನತೆ, ಆತನ ತ್ಯಾಗ, ಮಲತಾಯಿ ಮಕ್ಕಳ ಪೋಷಣೆ, ತಮ್ಮಂದಿರ ಭವಿಷ್ಯಕ್ಕಾಗಿ ಆತ ಪಡುವ ಪಾಡು ಎಲ್ಲವೂ ಅನನ್ಯ. ಆತ ಬ್ರಹ್ಮಚಾರಿ ಪಟ್ಟವನ್ನು ತನ್ನ ತಂದೆಗೋಸ್ಕರ, ಆತನ ಕೈ ಹಿಡಿಯುವ ಸತ್ಯವತಿಗೋಸ್ಕರ ವಿಸರ್ಜಿಸಿದ್ದಲ್ಲಿ, ಎಲ್ಲಿಯ ಪಾಂಡವರು, ಎಲ್ಲಿಯ ಕೌರವರು? ಯಾರೋ ಇರುತ್ತಿರಲಿಲ್ಲ! ಅಸಲಿಗೆ ಮಾಹಾಭಾರತಕ್ಕಾಗಿ ಮಹಾ ಯುದ್ಧವೇ ನಡೆಯುತ್ತಿರಲಿಲ್ಲ. ಮಹಾಭೂಮಂಡಲ ಅಧಿಪತಿಯಾಗಿ ಆತ ಸಾಮ್ರಾಜ್ಯ ನಡೆಸಬಹುದಿತ್ತು. ಮಾತಿಗೆ ತಪ್ಪದ ಮಗನಾಗಿ ನಿಂತು ಬ್ರಹ್ಮಚಾರಿಯಾಗಿ ನಿಂತು ಇಡೀ ಕುರು ವಂಶವನ್ನೇ ಸಾಕಿ ಸಲಹಿದ ಭೀಷ್ಮ ಮಹಾಭಾರತದಲ್ಲಿ ಒಂದು ಅವಿಸ್ಮರಣೀಯ ಪಾತ್ರವಾಗಿದೆ. ಆದರೆ ಅರ್ಜುನನ ಅತೀ ವಿಜೃಂಭಣೆಯಿಂದ ಸೊರಗಿದೆ.

*ಅರ್ಜುನನ ಆ ಮಟ್ಟದ ಬಿಲ್ವಿದ್ಯೆಗೆ ನೀರೆರೆದು ಪೋಷಿಸಿದವರೇ ಪರಶುರಾಮನಿಂದ ವಿದ್ಯೆ ಕಲಿತ ದ್ರೋಣರು. ತನ್ನ ಪ್ರಿಯ ಶಿಷ್ಯನಿಗೆ ತಮ್ಮ ವಿದ್ಯೆಯನ್ನೆಲ್ಲಾ ಧಾರೆಯೆರೆದರು. ಎಷ್ಟರ ಮಟ್ಟಿಗೆ ಅಂದರೆ ಅರ್ಜುನನನ್ನೂ ಮೀರಿಸುವ ಮಹಾನ್ ಬಿಲ್ವಿದ್ಯೆ ಪಾರಂಗತ ಏಕಲವ್ಯನನ್ನೂ ಅರ್ಜುನನಿಗೋಸ್ಕರ ಬಲಿ ಹಾಕುವ ಮಟ್ಟಿಗೆ. ಅವರಿಲ್ಲದಿದ್ದಲ್ಲಿ, ಶ್ರೀಕೃಷ್ಣನ ಕೃಪಾಶ್ರಯ ಅದು ಬೇರೆಯ ಮಾತು, ಅರ್ಜುನ ನುರಿತ ಬಿಲ್ವಿದ್ಯೆಯವರಲ್ಲಿ ಒಬ್ಬನಾಗಿರುತ್ತಿದ್ದನೇ ಹೊರತು ಕೌರವರ ಸೇನೆಯನ್ನು ಬಗ್ಗು ಬಡಿಯುವಷ್ಟು ಸಮರ್ಥನಾಗುತ್ತಿರಲಿಲ್ಲ. ಅಂತಹ ಮಾಹಾನ್ ಗುರು ಪಾತ್ರ ಪೋಷಣೆಯೂ ಅಷ್ಟೇ ನೀರಸವಾಗಿದೆ. ದೃಪದ ಪ್ರಸಂಗದಲ್ಲಷ್ಟೇ ಅವರ ಪಾತ್ರ ವಿಜೃಂಭಿಸುವುದು ಬಿಟ್ಟರೆ ಮಿಕ್ಕೆಲ್ಲ ಕಡೆಯೂ ಹತ್ತರಲ್ಲಿ ಒಂದು ಎನ್ನುವಂತಿದೆ.

*ಅರ್ಜುನ ಎಷ್ಟು ವೀರನೊ ಅವನಷ್ಟೇ ವೀರ, ಬಾಹುಬಲ ಪರಾಕ್ರಮಿಯಾಗಿದ್ದವನು ಭೀಮ. ಆತ ಮನಸ್ಸು ಮಾಡಿದ್ದಿದ್ದರೆ ಅಂದೇ, ದ್ರೌಪದಿಯ ವಸ್ತ್ರಾಪಹರಣ ನಡೆದಂದೇ, ಸುಯೋಧನನನ್ನು, ದುಶ್ಯಾಸನನನ್ನು ತೊಡೆತಟ್ಟಿಯೇ ಬರಿಗೈಯ್ಯಲ್ಲೇ ಬಗಿದು ರಕ್ತ ಹೀರುತ್ತಿದ್ದ ಭೀಮ. ಅಷ್ಟು ಸಾಹಸಿ ಆತ. ಹಿಡಿಂಬ, ಜರಾಸಂಧರಂತಹ ರಾಕ್ಷಸರನ್ನು ಕೊಂದವನು ಭೀಮ. ರಣರಂಗದಲ್ಲಿ ತನ್ನ ಗದಾಸಾಮರ್ಥದಿಂದಲೇ ಹಲವು ಅಕ್ಷೋಹಿಣಿ ಸೇನೆಯನ್ನು ಬಲಿಹಾಕಿದ ಭೀಮ. ಇಷ್ಟೆಲ್ಲಾ ಮಹದ್ ಸಾಹಸಿಯನ್ನೂ ಮೀರಿ ಅರ್ಜುನನನ್ನು ಹೊಗಳಿ ಅಟ್ಟಕ್ಕೇರಿಸಲಾಗಿದೆ. ಅರ್ಧಕ್ಕಿಂತಲೂ ಹೆಚ್ಚು ಕೌರವ ಸೇನೆಯನ್ನು ಮಣ್ಣುಮುಕ್ಕಿಸಬಲ್ಲ ಭೀಮ ಇಲ್ಲಿ ಸಾಂಧರ್ಭಿಕ ಶೂರನಾಗಿ ಚಿತ್ರಿತಗೊಂಡಿರುವುದು ಶೋಚನೀಯ.

*ಆದರೆ ಅತ್ಯಂತ ಹೃದಯವಿದ್ರಾವಕವಾಗಿ ಚಿತ್ರಣಗೊಂಡ ಇನ್ನೊಂದು ಪಾತ್ರವೆಂದರೆ ಸೂತಪುತ್ರ ಕರ್ಣನದು. ಕೇವಲ ಆತನ ಹುಟ್ಟಿನ ಹಿನ್ನೆಲೆ, ಸೂತಪುತ್ರನಾದದ್ದು, ಧುರ್ಯೋಧನನ ಸ್ನೇಹಿತನಾದದ್ದು, ಅಂಗದೇಶದ ಅರಸನಾದದ್ದು ಇಷ್ಟೇನಾ ಕರ್ಣ ಎಂದರೆ? ಆತನ ಸಹನೆ, ತಾಳ್ಮೆ, ಭ್ರಾತೃತ್ವ, ಕರುಣೆ, ಅಂತಃಕರಣ, ಎದೆಯಲ್ಲಿ ಮಡುಗಟ್ಟಿದ ಅಪಾರ ಶೋಕ, ನಿಂದನೆ, ಅವಮಾನ, ಅಪಮಾನ, ಪ್ರೀತಿ, ಸ್ನೇಹ, ತ್ಯಾಗ, ದಾನ..ಇವೆಲ್ಲ ಏನೂ ಅಲ್ಲವೇ? ಬಿಟ್ಟ ಬಾಣ ಮತ್ತೆ ಬಿಡೆನೆಂದು ಕರ್ಣ ಅಂದು ತನ್ನ ತಾಯಿಗೆ ಮಾತು ಕೊಡದಿದ್ದರೆ, ತನ್ನ ವಜ್ರಕರ್ಣಕುಂಡಲವನ್ನು ದಾನ ಮಾಡದೇ ಇರುತ್ತಿದ್ದರೇ, ಯಾವ ಲೆಕ್ಕವಿರುತ್ತಿತ್ತು ಕರ್ಣನಿಗೆ ಪಾಂಡವರನ್ನು ಹೊಡೆದುರುಳಿಸಿ ಬೀಳಿಸಲು? ಆತನ ಸ್ನೇಹ ಮತ್ತು ತ್ಯಾಗಕ್ಕೆ ಸರಿಸಮನಾಗಿ ನಿಲ್ಲಬಲ್ಲ ಒಬ್ಬೇ ಒಬ್ಬನಿದ್ದನೇ ಇಡೀ ಹಸ್ತಿನಾಪುರ ಮತ್ತು ಇಂದ್ರಪ್ರಸ್ಥದಲ್ಲಿ? ಇದ್ಯಾವುದೂ ಬೇಡ ಎಂದು ಬದಿಗಿಟ್ಟರೂ ಕರ್ಣನಿಗಿದ್ದ ಶಕ್ತಿ ಸಾಮರ್ಥ್ಯಕ್ಕೆ, ದಿವ್ಯ ತೇಜಸ್ಸಿಗೆ, ಕ್ಷಾತ್ರ ಹೋರಾಟಕ್ಕೆ, ಯುದ್ಧ ನೈಪುಣ್ಯಕ್ಕೆ ತೊಡೆ ತಟ್ಟಿ ನಿಲ್ಲಬಲ್ಲ ಸಮರ್ಥ ಸಮಬಲ ಯಾರಿದ್ದಾರೆ ಮಹಾಭಾರತದಲ್ಲಿ? ಅರ್ಜುನನನ್ನು ಎದುರಿಸಬಲ್ಲ ಸಮರ್ಥ ಸೇನಾನಿ ಭೀಷ್ಮ ದ್ರೋಣ ಶಲ್ಯ ಅಶ್ವತ್ಥಾಮ ಹೀಗೆ ಹತ್ತು ಹಲವು ಸಮರ್ಥರಿದ್ದರೂ, ಇವರೆಲ್ಲರನ್ನೂ ಒಂದು ಕೈ ಮೀರಿಸುವಂತೆ ಕರ್ಣನಿದ್ದರೂ, ಶ್ರೀಕೃಷ್ಣನ ಕುಟಿಲತೆಗೆ ಬಲಿಯಾದವರು ಧುರ್ಯೋಧನ, ದುಶ್ಯಾಸನ ಶಕುನಿಯಂತಹ ಕ್ಷುದ್ರರಿಗಿಂತ ಅಪ್ರತಿಮ ವೀರರೇ ಹೆಚ್ಚು. ಕರ್ಣನ ಜನ್ಮವೃತ್ತಾಂತದಿಂದ ಆತ ರಣರಂಗದಲ್ಲಿ ಸಾಯುವ ತನಕವೂ ಓದುತ್ತಿದ್ದರೆ ಎದೆಯಲ್ಲಿ ದುಃಖ ಹೆಪ್ಪುಗಟ್ಟಿ ಕಣ್ಣಂಚಲ್ಲಿ ನೀರು ಸ್ಪುರಿಸದಿದ್ದರೆ ಕೇಳಿ? ಅಂತಹ ಮಹಾನ್ ಮಹಿಮನ ವರ್ಣನೆಯೂ ಅರ್ಜುನನ ವಿಜೃಂಭಿಸುವಿಕೆಯಿಂದ ಮಂಕಾಗಿದೆ.

ಇದಿಷ್ಟೇ ನನ್ನ ಆಕ್ಷೇಪಣೆ. ಕೇವಲ ನನ್ನವು. ಇದನ್ನು ಹೊರತುಪಡಿಸಿ ಪಂಪ ರಚಿತ ಭಾರತವನ್ನು ಓದುವುದೇ ಒಂದು ಆನಂದ. ವಿವರಿಸಲಾಗದ, ಅನುಭೂತಿ ಮತ್ತು ಅನುಭವ ನೀಡುವ ಕೃತಿಯಿದು. ಮೊದಲ ಪುಟದಿಂದ ಕೊನೇ ಪುಟದವರೆಗಿನ ಪಂಪನ ಮಹಾಭಾರತದೆಡೆಗಿನ ವರ್ಣನೆಯನ್ನು, ಕಲ್ಪನೆಯನ್ನು ಓದುತ್ತಿದ್ದರೆ ಅದ್ಭುತ ಲೋಕಾನುಭವದ ಜೊತೆ ರಾಸಾನುಭವವೂ ಆಗುತ್ತದೆ. ಅಲಂಕಾರವನ್ನು ಪಂಪ ಬಳಸಿರುವ ರೀತಿ ಹೀಗೂ ಮಾಡಬಹುದೇ? ಎಲ್ಲಾದರೂ ಹೀಗೆ ಇರಲು ಸಾಧ್ಯವೇ? ಎನ್ನಿಸುವಷ್ಟರ ಮಟ್ಟಿಗೆ ಓದುವರನ್ನು ಮೂಕವಿಸ್ಮಿತರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ.

ಸುಮಾರು ಅರ್ಧದಿಂದ ಆರಂಭಗೊಳ್ಳುವ ಯುದ್ಧದ ವಿವರಗಳು ಮತ್ತು ನೀಡಿರುವ ಪರಿಕಲ್ಪನೆಗಳಿಂದ, ಆಹಾ! ಎಂದು ಒಮ್ಮೆ ನಮ್ಮನ್ನು ಹೊಸಲೋಕಕ್ಕೆ ಕೊಂಡೊಯ್ದರೆ, ಮತ್ತೊಮ್ಮೆ ಅಯ್ಯೋ! ಎಂದು ಯುದ್ಧದ ಭೀಕರತೆಯನ್ನು ಕಣ್ಣ್ಮುಂದೆ ತರುತ್ತಾ, ನಡೆದಿದ್ದ ಆ ಕುರುಕ್ಷೇತ್ರದಲ್ಲಿ ನಾವು ಒಬ್ಬ ಕಾಲಾಳೋ, ಕುದುರೆಯವನೋ, ಸೇನಾನಿಯೋ, ಸೈನಿಕನೋ ಅಥವಾ ಯಾವುದಾದರೂ ಒಂದು ಭಾಗವೋ ಎನ್ನುವಂತೆ ಭಾಸವಾಗುವಂತೆ ಮಾಡುತ್ತಾ ಜಿಜ್ಞಾಸೆಯತ್ತ ತಳ್ಳುತ್ತದೆ ಈ ಕೃತಿ.

ಮಹಾಭಾರತವನ್ನು ಸಂಪೂರ್ಣ ಕನ್ನಡದಲ್ಲಿ ಸವಿವರಗಳೊಂದಿಗೆ ಓದಬೇಕೆನ್ನುವ ಆಸಕ್ತರಿಗೆ ಈ ಕೃತಿ ಅತ್ಯಮೂಲ್ಯವಾದುದು.

ಈ ಕೃತಿಯ ಕುರಿತು ಇನ್ನೂ ಹೇಳಲು ಸಾಕಷ್ಟಿದೆ. ಆದರೆ ಅದನ್ನು ಓದಿದ ನನ್ನ ಮನಸ್ಸು ಅದರಿಂದ ಹೊರಬರಲಾಗದೆ ಒಳಗೇ ಗೂಡು ಕಟ್ಟಿಕೊಂಡ ರೇಷ್ಮೆ ಹುಳುವಿನಂತಾಗಿದೆ. ಇಷ್ಟಕ್ಕೆ ಸಾಕು.

ಕೊನೇ ಮಾತು:
ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ ಕೃತಿಯಿದು. ನಾನೂ ಒಬ್ಬ ಕನ್ನಡಿಗ ಎಂದು ಈ ಕೃತಿಯನ್ನು ಓದದೇ ಹೇಳುವುದರಲ್ಲಿ, ಉಹುಂ, ಯಾಕೋ ಅರ್ಥವಿಲ್ಲ ಎಂದೆನಿಸಿದೆ.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ




"ಶಿಕಾರಿ"

ಭಾರತವು ಗ್ಲೋಬಲೀಕರಣಗೊಂಡ ನಂತರ ಹತ್ತು ಹಲವು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಯನ್ನು ಕಂಡಿತು. ಮುಖ್ಯವಾಗಿ ಅದುವರೆಗೂ ಕಂಡು ಕೇಳರಿಯದಿದ್ದ ಔದ್ಯೋಗೀಕರಣಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟ್ ಎಂಬ ಮಹಾದೈತ್ಯ ಬೆಳೆದು ನಿಂತ ಬಗೆ ಎಲ್ಲರಿಗೂ ಅಚ್ಚರಿ ತರುವಂಥದ್ದೇ ಆಗಿತ್ತು. ಹಾಗೆ ನೋಡಿದರೆ ಓದು ಮುಗಿಸಿ ಯಾವುದಾದರೂ ಒಂದು ಸರಕಾರಿ ಕೆಲಸ ಹಿಡಿದು ಜೀವನ ನಿಶ್ಚಯಿಸಿಕೊಂಡರೆ ಸಾಕೆನ್ನುವ ಮಹಾ ಸಂಧಿಕಾಲದಲ್ಲಿ ಕುಂಭದ್ರೋಣ ಮಳೆಯಂತೆ ಉದ್ಯೋಗದ ವರ್ಷಧಾರೆಯನ್ನೇ ಹರಿಸಿದ್ದು ಬೃಹತ್ತ್ ಕಾರ್ಪೊರೇಟ್ ಕಂಪನಿಗಳು ಬಂದ ಮೇಲೆಯೇ. ಒಳ್ಳೆಯದೇ ಆಯ್ತು. ಸರಕಾರಿ ಕೆಲಸ ಸಿಗದೇ ಇದ್ದರೂ ಪರವಾಗಿಲ್ಲ, ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಸಿಕ್ಕರೆ ಸಾಕು ಎಂದು ಹರಕೆ ಹೊತ್ತವರು ಅದೆಷ್ಟು ಲಕ್ಷಲಕ್ಷ ಮಂದಿಯೋ? ತಥಾಸ್ತು! ಎಂದು ಉಲ್ಕೆಯಂತೆ ಉದುರಿಬಿದ್ದದ್ದೇ ಕಾರ್ಪೊರೇಟ್ ವಲಯ.

ಅದು ಅವತರಿಸಿದ್ದೇ, ಬದುಕು ನಿಧಾನವಾಗಿ ಹಸನಾಗತೊಡಗಿತು. ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಲು ಬಲ ಬಂದಂತಾಯ್ತು. ಅರಳದೇ ಸೊಡರಿದ್ದ ಮುಖದಲ್ಲಿ ನಿರಾಳತೆ ಮನೆ ಮಾಡತೊಡಗಿತು. ಕೆಲಸವೆಂದರೆ ಸರಕಾರಿ ಕೆಲಸವೆನ್ನುವ ನಾಣ್ಣುಡಿ ತನ್ನ ಅರ್ಥ ಕಳೆದುಕೊಂಡು, ಖಾಸಗಿ ವಲಯದಲ್ಲೂ ಬದುಕಬಹುದೆನ್ನುವ ಭರವಸೆ ಮೂಡಿಸಿತು. ಹಾಳು ಬಿದ್ದ ಊರಿಗೆ ಉಳಿದವಳೇ ಪದ್ಮಾವತಿ ಎನ್ನುವ ಕಾಲದಲ್ಲಿ ಕಾರ್ಪೊರೇಟ್ ದೈತ್ಯ ಉದಯಿಸಿದ ನಂತರ ಸರಕಾರಿ ಕೆಲಸಕ್ಕೆ ಜೋತು ಬೀಳುವುದು ಇಳಿಮುಖವಾಗತೊಡಗಿತು ಎನ್ನುವುದು ಎಲ್ಲರಿಗೂ ತಿಳಿದುದೇ. ಪ್ರಮುಖವಾಗಿ ಮಂದಿ ಆರ್ಥಿಕವಾಗಿ ಸಧೃಡರಾಗತೊಡಗಿದರು. ಅತಿ ವಿರಳ, ಸಿರಿವಂತರು ಮಾತ್ರ ಉಪಯೋಗಿಸಬಹುದಾಗಿದ್ದ ಹಲವು ಸಾಧನಗಳು ಜನಸಾಮಾನ್ಯರ ಕೈಗೆ ಬರತೊಡಗಿತು. ಬದುಕು ಹುಲುಸಾಗಿ ನವಚೈತನ್ಯದತ್ತ ಟಿಸಿಲೊಡೆಯತೊಡಗಿತು.

ಕಾರ್ಪೋರೇಟ್ ದೈತ್ಯನ ಉದಯ ಬರೀ ಉದ್ಯೋಗ ಮತ್ತು ಆರ್ಥಿಕತೆಯಲ್ಲಿ ಸಧೃಢತೆಯನ್ನಷ್ಟೇ ಹೊತ್ತು ತರಲಿಲ್ಲ. ಮೊಸರಲ್ಲಿ ಕಲ್ಲಿನಂತೆ, ಸ್ವರದಲ್ಲಿ ಅಪಶ್ರುತಿಯಂತೆ ನಾನಾ ನಮೂನೆಯ ಕಷ್ಟಕಾರ್ಪಣ್ಯಗಳ ರಾಶಿ ರಾಶಿಯನ್ನೇ ತನ್ನೊಡನೆ ಹೊತ್ತು ಬಂದಿತು. ದಿನಗಳೆದಂತೆ ಹೊಸ ಹೊಸ ಸಮಸ್ಯೆಗಳು ಉದಯಿಸುತ್ತಲೇ ಹೋದವು. ಅಲ್ಲಿ ಕೆಲಸ ಮಾಡುವವರ ಜೀವನ ನಿರ್ಜೀವವಾಗುತ್ತಾ, ಸಂಬಂಧಗಳು ತನ್ನ ಮೂಲಭೂತ ಸ್ವರೂಪವನ್ನು ಕಳೆದುಕೊಂಡವು. ಉಸಿರುಗಟ್ಟಿಸುವ ಅಲ್ಲಿನ ಒತ್ತಡ, ಮಾನಸಿಕ ಹಿಂಸೆ, ಒಂದು ಕೈ ಜೋರಾಗಿಯೇ ನಡೆಯುವ ರಾಜಕೀಯ, ಸ್ವಹಿತಾಸಕ್ತಿ, ಗುಂಪುಗಾರಿಕೆ, ಪಕ್ಷಪಾತ, ರಾಕ್ಷಸ ಪ್ರವೃತ್ತಿ ಎಲ್ಲವೂ ಸೇರಿ ಆಸೆಯಿಂದ ಆಚೆ ನಿಂತು ನೋಡುವವರ ಕಣ್ಣಿಗೆ ಸೂಜಿಗಲ್ಲಿನಂತೆ ಸೆಳೆದರೂ ಕಾರ್ಪೊರೇಟ್ ಎಂಬ ಮದ್ದಾನೆ ಅಲ್ಲಿರುವರ ಪಾಲಿಗೆ ನರಕ ಸದೃಶವಾಗಿದೆ ಎನ್ನುವುದು ಸರ್ವವಿಧಿತ.

ಹಾಗೆ ಕಾರ್ಪೊರೇಟ್ ದೈತ್ಯನ ಒಡಲಲ್ಲಿ ನಡೆಯುವ ಒಳರಾಜಕೀಯಕ್ಕೆ ಗಾಳವಾಗಿ, ಪಿತೂರಿಗೆ ಬಲಿಪಶುವಾಗಿ, ಮಾಡದ ತಪ್ಪಿಗೆ ಸಮಿಧೆಯಾಗಿ, ಸಹೋದ್ಯೋಗಿಗಳ ಕುತಂತ್ರಕ್ಕೆ "ಶಿಕಾರಿ"ಯಾದವನೇ ನಾಗಪ್ಪ. ಈ ಕಥೆಯ ನಾಯಕ.

ಕೆಮಿಕಲ್ ಕಂಪನಿಯಲ್ಲಿ ಸಣ್ಣ ಹುದ್ದೆಗೆ ಸೇರಿದ ನಾಗಪ್ಪ
ತನ್ನ ಬುದ್ದಿ ಬಲ ಮತ್ತು ಕೌಶಲ್ಯದಿಂದ ಆರ್ ಅಂಡ್ ಡಿ ಮ್ಯಾನೇಜರ್ ಆಗಿರುತ್ತಾನೆ. ಈತನ ಬಾಸ್ ಗೆ ನಾಗಪ್ಪನನ್ನು ಕಂಡರೆ ಉರಿ. ಸುಮಾರು ಆರು ತಿಂಗಳ ಹಿಂದೆ ನಡೆದ ಫ್ಯಾಕ್ಟರಿಯಲ್ಲಿನ ಒಂದು ಅವಘಡಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣವನ್ನು ನೀಡದೆ, ನಾಗಪ್ಪನಿಗೂ ಇಂತಹುದೇ ಕಾರಣ ಎಂದು ತಿಳಿಸದೆ ಆತನನ್ನು ಕೆಲಸದಿಂದ ಅಮಾನತ್ತಿನಲ್ಲಿಡಲಾಗುತ್ತದೆ. ಪಾಪ! ಕಾರಣವೇ ತಿಳಿಯದೆ ಅಮಾನತ್ತಿನ ಶಿಕ್ಷೆಯನ್ನು ಅನುಭವಿಸುವ ಕಾಲದಲ್ಲಿ ನಾಗಪ್ಪನ ಮನಸ್ಸಿನಲ್ಲಾಗುವ ತುಮುಲ ತಲ್ಲಣಗಳು, ಮಿಂಚಿ ಮರೆಯಾಗುವ ಹಳೆಯ ನೆನಪುಗಳು, ಎದೆಯಾಳದಿಂದೆದ್ದು ಬರುವ ನೋವುಗಳು, ತನ್ನ ಸುತ್ತಲ ಪರಿಸರ ತನ್ನನ್ನು ನೋಡುವ ರೀತಿ, ಜೊತೆಗೆ ತನ್ನ ಬಾಲ್ಯದಲ್ಲಾದ ಕಹಿ ನೆನಪುಗಳು, ತನ್ನ ತಂದೆ ನಾಗಪ್ಪನಿಗೆ ಬೆಂಕಿ ಹಚ್ಚಿದ್ದು, ತಂಗಿಯನ್ನು ಸಂತೆಯಲ್ಲೆಲ್ಲೋ ಬೇಕಂತಲೇ ಮರೆತು ಬಿಟ್ಟು ಬಂದದ್ದು, ತನ್ನ ಅಣ್ಣ ಹೇಳದೇ ಕೇಳದೇ ಮನೆ ಬಿಟ್ಟು ಹೋದದ್ದು, ಕೊನೆಗೆ ಏನೂ ಮಾಡಲಾಗದ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು.. ಎಲ್ಲವೂ ಸೇರಿ ಆತನನ್ನು ಶಿಕಾರಿಯಡತೊಡಗುತ್ತವೆ. ಇದೆಲ್ಲ ಒಪ್ಪಓರಣವೇ "ಶಿಕಾರಿ".

ಕೆಲಸವಿಲ್ಲದೆ ಕಾಲ ಕಳೆಯುವಾಗಿನ ನಾಗಪ್ಪನ ಮನಸ್ಥಿತಿ ಕೇವಲ ಅಂತರ್ಗತವಾಗಿರುವ ಹತಾಶೆಯ ಸ್ಥಿತಿಯಲ್ಲ. ಅಲ್ಲಿ ಉಕ್ಕಿ ಬರುವ ಕಡಲ ಅಲೆಯಂತೆ ಶಾಂತವೂ, ಧುಮ್ಮಿಕ್ಕಿ ಕುಣಿಯುವ ಭಾವನೆಗಳ ಮೆಲೋಗರವೂ ಇದೆ. ಆತನ ತುಮುಲ ತಲ್ಲಣಗಳು ಕೇವಲ ಮಾತಿನಲ್ಲಿ ವಿವರಿಸಲಾಗದಷ್ಟು ಆಳಕ್ಕಿವೆ. ಹೂ ಮಾರುವ ಬಡ ಹುಡುಗಿಯನ್ನು ನೋಡಿದಾಗ ವಿನಾಕಾರಣ ಪುಟಿದೆದ್ದು ಬರುವ ಮನಸ್ಸು, ತನ್ನ ಹಳೆಯ ಖಾಸಾ ಗೆಳೆಯರನ್ನು ನೆನೆದಾಗ ಅಷ್ಟೇ ವ್ಯಗ್ರವಾಗುತ್ತದೆ. ಅದು ಅವರ ಮೇಲಿನ ಕೋಪವಲ್ಲ, ಹಾಗಂತ ಕಾರಬೇಕೆಂದುಕೊಂಡಿದ್ದರೂ ಕಾರಲಾಗದ ಹಗೆತನವಲ್ಲ. ತನ್ನಲ್ಲೇ ಹುಟ್ಟಿ ಬಂದಿರುವ ನಿಸ್ತೇಜತೆ. ಎದುರಿಸುವ ಸಾಮರ್ಥ್ಯವಿದ್ದರೂ ಎದುರಿಸಲಾಗದ ತನ್ನ ಅಶಕ್ತತೆ. ಮನಸ್ಸು ಸದಾಕಾಲ ಸ್ವಗತ. ತನ್ನ ಯೋಚನೆಗಳು ತನ್ನನ್ನೇ ಅಮುಕಿ ಉಸಿರುಗಟ್ಟಿಸುವ ಬಿಗಿ ವಾತಾವರಣ. ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯತನವಿದೆ, ಆದರೆ ಅರಿವಿಗೆ ಬರುವ ಮೊದಲೇ ಬಣ್ಣ ಬದಲಾಯಿಸುತ್ತಿದೆ. ಯಾಕೆ ಹೀಗೆ? ಬಹುಶಃ ತಾನು ಇತರರನ್ನು ಅರಿತಿರುವ ರೀತಿಯೇ ಇದಕ್ಕೆ ಕಾರಣವಿರಬಹುದೇ? ಅಥವಾ ನನ್ನಲ್ಲೇ ಏನಾದರೂ ಕೊರೆತೆಯಿದೆಯೇ? ಇರಬಹುದು, ಇಲ್ಲದೆಯೂ ಇರಬಹುದು.

ಕಳೆದು ಹೋದ ಬಾಲ್ಯದ ನನ್ನ ತಂಗಿ ರಂಗುರಂಗಾಗಿ ಸಂಜೆಯಾಗುತ್ತಿದ್ದಂತೆ ನವವಧುವಿನ ರೂಪ ಧರಿಸುವ ಮುಂಬೈನ ಸೂಳೆಗಾರಿಕೆಯಲ್ಲಿ ಸಿಲುಕಿಕೊಂಡು ಯಾವುದೋ ಗಂಡಸಿಗೆ ಈ ಹೊತ್ತಿನಲ್ಲಿ ಸೆರಗು ಹಾಸಿರಬಹುದಾ? ಮನೆ ಬಿಟ್ಟು ಓಡಿ ಹೋದ ಅಣ್ಣ ಇದೇ ಮುಂಬೈನ ಯಾವುದೋ ಮೂಲೆಯ ಯಾವುದೋ ಗಲ್ಲಿಯ ಮುರುಕು ರಸ್ತೆಯಲ್ಲಿ ನಡೆದುಹೋಗುವಾಗ ರಪ್ಪನೆ ಪ್ರತ್ಯಕ್ಷವಾಗಬಹುದಾ? ಇಬ್ಬರೂ ಕೈತಪ್ಪಿ ಹೋದರು. ಕಾರಣ ಅಪ್ಪ. ತಾನು ಏತಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ. ಆತ ಬದುಕಲಿಲ್ಲ, ನಮ್ಮನ್ನು ಬದುಕಲು ಬಿಡಲಿಲ್ಲ. ಎತ್ತಲಿಂದಲೋ ಗಾಳಿಯಲ್ಲಿ ಬೀಸಿ ಬಂದ ತಣ್ಣನೆಯ ಮಾರುತದಲ್ಲಿನ ಹಸಿ ಹವೆಯಿಂದ ಹರಿದು ಬಂದ ಉಪ್ಪು ನೀರಾಗಿ ಈ ಮುಂಬೈನ ಕಡಲಲ್ಲಿ ಸೇರಿಹೋಯಿತು ನನ್ನ ಬಾಳು. ಇಲ್ಲಿ ಮಿತ್ರರೆಂದುಕೊಂಡಿದ್ದವರು ಮಿತ್ರರಲ್ಲ, ಶತ್ರುಗಳೂ ಅಲ್ಲ. ಎಲ್ಲರೂ ಒಂದೇ. ನಾನು ಮಾತ್ರ ಅವರನ್ನು ನೋಡುವ ರೀತಿ ಬೇರೆ. ಅಕಸ್ಮಾತ್ತ್ ಕೆಲಸ ಹೋದರೆ ಗತಿಯೇನು? ಚಿಂತೆಯಿಲ್ಲ. ರದ್ದಿ ಪೇಪರ್ ಅಂಗಡಿಯೋ, ಟೆಲಿಫೋನ್ ಬೂತೋ ದುಖಾನ್ ಇದ್ದೇ ಇದೆಯೆಲ್ಲಾ ಜೀವನ ನಡೆಸಲಿಕ್ಕೆ! ಯಾರ ಹಂಗೂ ನನಗಿಲ್ಲ. ಸಮಾಜ ಏನಂದುಕೊಳ್ಳುವುದೋ ಎನ್ನುವ ಭೀತಿಯಿಲ್ಲ. ಯಾರೂ ನನಗಾಗಿ ಇಲ್ಲಿ ಮಿಡಿಯುವರು ಇಲ್ಲದಿರುವಾಗ ನಾನೇಕೆ ಕರಗಬೇಕು? ಆದರೂ ನೆನೆಸಿಕೊಂಡರೆ ಅವ್ಯಕ್ತ ಭಯವಾಗುತ್ತದೆ.

ನನಗೆ ಸ್ಪಷ್ಟನೆಯೇ ಸಿಗದೆ ಅಮಾನತ್ತಿನಲ್ಲಿಡಲು ಕಾರಣವೇನು? ಎಂದು ಯೋಚಿಸುತ್ತಿದ್ದ ನಾಗಪ್ಪನಿಗೆ ತನ್ನ ಕಚೇರಿಯಿಂದ ಪತ್ರ ಬರುತ್ತದೆ. ಹಿಂದೆ ನಡೆದ ಅವಘಡಕ್ಕೆ ಸಂಬಂಧಿಸಿದಂತೆ ತನ್ನನ್ನು ಅಮಾನತ್ತಿನಲ್ಲಿಡಲಾಗಿದೆ ಎಂದೂ, ವಿಚಾರಣೆ ನಡೆಸಿದ ಮೇಲೆ ಕೆಲಸಕ್ಕೆ ಸೂಕ್ತವೆನಿಸಿದ್ದಲ್ಲಿ ತೆಗೆದುಕೊಳ್ಳಲಾಗುವುದೂ ಎಂದು ಅದರಲ್ಲಿ ವಿವರಿಸಲಾಗಿರುತ್ತದೆ. ಇದೆಲ್ಲಾ ತನ್ನ ಮೇಲಧಿಕಾರಿಯದೇ ಕಿತಾಪತಿಯೆಂದು ನಾಗಪ್ಪನಿಗೆ ಅರಿವು ಬರುವುದರ ಜೊತೆ, ತನ್ನಲ್ಲಿರುವ ಸತ್ಯಪರತೆ ತನ್ನನ್ನು ಕಾಯುವುದು ಎಂದು ಅನಿಸಿದಾಗಲೂ ಮನಸ್ಸು ವಿನಾಕಾರಣ ಆತಂಕಕ್ಕೆ ಬಿದ್ದಾಗಲೂ, ವಿಚಾರಣೆಗೆಂದು ಊರಿಂದೂರಿಗೆ ಸುತ್ತಿಸಿದರೂ, ಇದು ಯಾರೋ ತನ್ನನ್ನು ಕೆಡವಲು ಹೂಡಿರುವ ಶಿಕಾರಿ ತಂತ್ರವೆಂದು ತಿಳಿದ ಮೇಲೂ ಮನಸ್ಸು ಸ್ಥಿಮಿತಕ್ಕೆ ಬರುವುದಿಲ್ಲ. ಯಾರೋ ತನ್ನನ್ನು, ತನ್ನ ಮನಸ್ಸಿನಲ್ಲುಂಟಾಗುತ್ತಿರುವ ಭಾವನೆಗಳನ್ನು ನಿಯಂತ್ರಿಸಿದಂತೆ ಅನಿಸುತ್ತದೆ. ಕೆಲಸ ಬಿಟ್ಟು ನಾನು ಹವ್ಯಾಸವಾಗಿರಿಸಿಕೊಂಡ ನನ್ನ ಓದು, ಬರವಣಿಗೆ, ಸಾಹಿತ್ಯ, ಲೇಖಕ ಎನ್ನುವ ಹಣೆಪಟ್ಟಿ ತನ್ನ ಈಗಿನ ಸ್ಥಿತಿಗೆ ಕಾರಣವಾಗಿದೆಯೇ? ನಾನು ಎಂದೋ ಬರೆದಿದ್ದ ನನ್ನ ಸ್ನೇಹಿತನ ತಾಯಿಯ ಕುರಿತ ಕಥೆಯೇ ಆತನನ್ನು ಕೆರಳಿಸಿರಬಹುದೇ? ಅಥವಾ ನಾನೀಗ ಬರೆಯಹೊರಟಿರುವ ಹೊಸ ಕಾದಂಬರಿ ಆ ಸ್ನೇಹಿತ ತನ್ನ ಹಳೆಯ ಸಂಗಾತಿಯೊಬ್ಬಳಿಗೆ ಮಾಡಿದ ಮೋಸದ ಕುರಿತಾಗಿರಬಹುದೆನ್ನುವ ಅನುಮಾನ ಆತನಿಗೆ ಬಂದು, ಅವನೂ ಈ ಷಡ್ಯಂತ್ರದಲ್ಲಿ ಭಾಗಿಯಾಗಿರಬಹುದೇ? ನನ್ನ ವಿರುದ್ಧ ನಡೆಯುತ್ತಿರುವ ಸಂಚಿನಲ್ಲಿ ನನಗೇ ತಿಳಿಯದ ಹತ್ತು ಹಲವು ಕೈಗಳು ಒಂದಾಗಿ ನನ್ನ ವಿರುದ್ಧ ಶಿಕಾರಿ ಮಾಡುತ್ತಿರಬಹುದೇ? ಯಾರು ಯಾರಿಗೆ ಶಿಕಾರಿ? ಅವರು ಹೆಣೆದ ಬಲೆಯಲ್ಲಿ ನಾನೋ? ನನ್ನ ಮನಃಪಲ್ಲಟದ ಮೇಲೆ ಕ್ಷಣಕ್ಷಣಕ್ಕೂ ಗಲಭೆಯೊಡ್ಡುತ್ತಾ, ರೋಧ ಪ್ರತಿರೋಧವನ್ನು ಲೆಕ್ಕಿಸದೆ ಕೋಲಾಹಲವೆಬ್ಬಿಸುತ್ತಿರುವ ನನ್ನ ಮನಸ್ಸಿಗೆ ನಾನು ಶಿಕಾರಿಯೋ?

.....ಹೀಗೆ ಸಾಗುತ್ತದೆ ನಾಗಪ್ಪನ ಅಂತರಾಳ. ತನ್ನ ವಿರುದ್ಧ ನಡೆದಿರುವ ಆರೋಪದಲ್ಲಿ ತಾನು ನಿರಪರಾಧಿ ಎಂದು ಸಾಬೀತು ಪಡಿಸುವ ಹಲವು ಜನ ನಾಗಪ್ಪನಿಗೆ ಹಲವು ನಿಗೂಡ ರೀತಿಯಲ್ಲಿ ಭೇಟಿಯಾಗಿ, ಮಾಹಿತಿ ನೀಡಿ, ಧೈರ್ಯ ತುಂಬುವ ಕೆಲಸ ಮಾಡಿರುತ್ತಾರೆ. ತನ್ನ ಪರವಾಗಿಯೂ ನಿಲ್ಲುವ ಜೀವವಿದೆ ಎಂದು ನಾಗಪ್ಪನಿಗೆ ಆಶ್ಚರ್ಯ ಬೆರೆತ ಸಂತೋಷವಾಗುತ್ತದೆ. ಕೊನೆಗೆ ವಿಚಾರಣೆ ಆರಂಭವಾಗಲು ತನ್ನ ವಾದವನ್ನು ಮಂಡಿಸಿ ತಾನು ನಿರಪರಾಧಿ ಎಂದು ಸಾಬೀತು ಪಡಿಸಲು ಹೊರಟ ನಾಗಪ್ಪನಿಗೆ ಮುಂದೇನು ಕಾದಿತ್ತು? ತಾನು ಅದರಲ್ಲಿ ಗೆದ್ದನೇ? ಕೆಲಸಕ್ಕೆ ಮರಳಿ ವಾಪಸ್ ಆದನೇ? ಆತನ ನಿಲುವುಗಳೇನಾಗಿತ್ತು? ನಿರ್ಧಾರಗಳೇನಿತ್ತು? ಈಗಿರುವ ಮ್ಯಾನೇಜರ್ ಪೋಸ್ಟ್ ಗಿಂತಲೂ ಉತ್ತಮ ಅವಕಾಶ ಬಂದಾಗ ನಾಗಪ್ಪ ಏನು ಮಾಡಿದ? ತನ್ನೆದೆ ಅಂತರಾಳದಲ್ಲಿ ಪ್ರೀತಿಸುತ್ತಿದ್ದ ಹುಡುಗಿಗೆ ಆತನು ಅದನ್ನು ನಿವೇದಿಸಿಕೊಂಡನೇ? ತನ್ನನ್ನು ಶಿಕಾರಿ ಮಾಡುತ್ತಿದ್ದವರು ಯಾರು? ಅವರನ್ನು ಬಲಿ ಹಾಕಿದನೇ? ಅಥವಾ ತಾನೇ ಅವರಿಗೆ ಶಿಕಾರಿಯಾಗಿಬಿಟ್ಟನೇ? ಯಾರು ಯಾರಿಗೆ ಶಿಕಾರಿ? ಅವರೇ ಎಬ್ಬಿಸಿದ ಕ್ಷೋಭೆಗೋ ಇಲ್ಲವೆ ನನ್ನಲ್ಲೇ ಇರುವ ದ್ವಂಧ್ವಕ್ಕೋ? ಅವರ ಅಸಲಿಯತ್ತು ಏನು? ಅದನ್ನು ಹೊರಗೆಡವಿದನೇ?......ಕ್ಷಮಿಸಿ, ಅದನ್ನು ನೀವು ಕಾದಂಬರಿ ಓದಿಯೇ ತಿಳಿಯಬೇಕು.

ಸುಮಾರು ಇನ್ನೂರು ಚಿಲ್ಲರೆ ಪುಟದವರೆಗೂ ಭಾವನೆಗಳ ಲೋಕದಲ್ಲಿ, ಸ್ವಗತದಲ್ಲಿ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಗುವ ಕಾದಂಬರಿ ಕೊನೆಯ ಐವತ್ತು ಅರವತ್ತು ಪುಟಗಳಲ್ಲಿ ಇದ್ದಕ್ಕಿದ್ದಂತೆ ತನ್ನ ವೇಗ ಹೆಚ್ಚಿಸಿಕೊಳ್ಳುತ್ತದೆ. ಪ್ರತಿ ಪದವೂ, ಸಾಲುಗಳು, ಪುಟಗಳು ನಾಗಪ್ಪನ ಮನಸ್ಸಿನ ಉದ್ವೇಗಕ್ಕಿಂತ ಹೆಚ್ವಿನ ಕುತೂಹಲ ಬೆರೆತ ರಭಸದೊಂದಿಗೆ ಸಾಗುತ್ತದೆ. ಕೊನೆಗೂ ಓದಿ ಮುಗಿಸಿದಾಗ ನಾಗಪ್ಪನಿಗೆ ಹೇಗೆ ಬಿಡುವು ಸಿಕ್ಕೀತೋ ಹಾಗೆ ನಿರುಮ್ಮಳ ಭಾವ ಓದುಗನನ್ನು ಆವರಿಸುತ್ತದೆ. ಎಲ್ಲೋ ಒಂದು ಕಡೆ ನಾಗಪ್ಪನ ನಿಲುವು ತಟಸ್ಥವೆನಿಸಿದರೂ, ಅದನ್ನೂ ಮೀರಿ ತನ್ನ ಬದುಕಿನ ಹಂಬಲವಾಗಿದ್ದ, ತನ್ನೊಳಗೆ ಅಡಗಿ ಕುಳಿತಿದ್ದ ಅತ್ಯಂತ ಮಹತ್ತರ ನಿರ್ಧಾರವನ್ನು ಪ್ರಕಟಿಸಿದಾಗ, ಆತ ಆ ಗಮ್ಯದೆಡೆ ನಡೆಯ ಹೊರಟಾಗ, ನಾಗಪ್ಪನ ಆ ಕ್ಷಣದ ಮನಸ್ಸಿನಂತೆಯೇ ನಮ್ಮ ಮನಸ್ಸೂ ಆತ ತೆಗೆದುಕೊಂಡ ನಿರ್ಧಾರಕ್ಕೆ ಅಷ್ಟೇ ತಟಸ್ಥವಾಗಿ ಸಮ್ಮತಿಸುತ್ತದೆ. ನಿರ್ಲಿಪ್ತತೆ ಹೇಗೆ ನಾಗಪ್ಪನನ್ನು ಕಾಡಿತ್ತೋ ಅದರಿಂದ ಇಬ್ಬರಿಗೂ ಬಿಡುಗಡೆ ಸಿಗುತ್ತದೆ.

ಯಶವಂತ ಚಿತ್ತಾಲರು ತಮ್ಮ ಲೇಖನಿಯನ್ನು ಅರಳಿಸಿರುವ ಬಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಅಭೂತಪೂರ್ವವಾದುದು. ಏಕೆಂದರೆ 1970ರ ದಶಕದಲ್ಲೇ ಇಂತಹ ಕಾದಂಬರಿಯನ್ನು ಸೃಷ್ಟಿಸಿದ್ದಾರೆ. ಈಗಿನಂತೆ ಕಾರ್ಪೋರೇಟ್ ಕಂಪನಿಗಳ ಹಣೆಬರಹ, ಅದರ ತಿಕ್ಕಲುತನ ಅಷ್ಟಾಗಿ ಇಲ್ಲದಿರುವಾಗಲೇ ಚಿತ್ತಾಲರು ಎಲ್ಲವನ್ನೂ ಸಮಗ್ರವಾಗಿಸಿ ಇಂತಹದೊಂದು ಕಾದಂಬರಿ ಬರೆದಿದ್ದಾರೆ ಎಂದರೆ ಅವರ ಸಾಹಿತ್ಯ ದೃಷ್ಟಿಕೋನ ಹೇಗಿತ್ತೆಂಬುದನ್ನು ಊಹಿಸಬಹುದು.

ಇಲ್ಲಿ ಬಳಸಿರುವ ಭಾಷಾಪ್ರಯೋಗ ಸುಲಭವಾಗಿ ಅರ್ಥವಾಗುವಂತೆ ಇದ್ದರೂ, ಇತರೆ ಕಾದಂಬರಿಯಲ್ಲಿರುವಂತೆ ಕಥಾ ವಿಸ್ತೀರ್ಣದಲ್ಲಿ ಹಲವು ಪಾತ್ರಗಳು ಇರದೇ ಇರುವುದರಿಂದ ಮತ್ತು ಭಾಗಶಃ ಪ್ರತಿ ಪುಟದಲ್ಲೂ ನಾಗಪ್ಪನ ಸ್ವಗತವೇ, ಆತನ ಅನಿಸಿಕೆಗಳೇ, ಅಂತರಂಗವೇ ರಾರಾಜಿಸಿರುವುದರಿಂದ, ದಯವಿಟ್ಟು, ಒಂದೇ ಗುಕ್ಕಿನಲ್ಲಿ ಇದನ್ನು ಓದ ಬೇಡಿ. ಒಂದು ಏಟಿಗೆ, ಪಟ್ಟಿಗೆ ಸಿಗುವ ಕಾದಂಬರಿಯಲ್ಲ ಇದು. ಅನುಕೂಲಕ್ಕೆ ತಕ್ಕಂತೆ ವಿರಾಮವಾಗಿ ಓದಿದರೆ ಕಾದಂಬರಿಯನ್ನು ಅಸ್ವಾದಿಸುತ್ತಾ ಓದಬಹುದು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ.




Tuesday, January 23, 2018

"ಕಾಡಿನ ಬೆಂಕಿ"

ತನ್ನೊಳಗಿನ ಬೆಂಕಿ ತನ್ನನ್ನು ಸುಟ್ಟೀತೆ ಪರರನ್ನಲ್ಲ. ಹಾಗೆ ಹೊರಗಿನಿಂದ ಬೆಂಕಿ ಬೀಳದ ಹೊರತು ಒಳಗೆ ಕಿಡಿ ಹತ್ತುವುದಿಲ್ಲ. ನಮ್ಮಲ್ಲಿರುವ ಅಜ್ಞಾನದ ಕೊರತೆ ಮತ್ತು ಪರರ ಅಜ್ಞಾನವೂ ಜೊತೆಗೂಡಿ ನಮ್ಮನ್ನು ಕತ್ತಲೆಡೆ ಕರೆದೊಯ್ಯಬಹುದು. ಅಂದರೆ ಅಜ್ಞಾನವೇ ನೋವಿನ ಮೂಲ ಎಂದಾಯ್ತು. ಹಾಗಾದರೆ ಅಜ್ಞಾನ ಎಂದರೇನು? ಅದನ್ನು ಹಲವು ಮಜಲುಗಳಲ್ಲಿ ಹೇಳಬಹುದು ದಾರ್ಶನಿಕವಾಗಿ, ಮಾರ್ಮಿಕವಾಗಿ. ಅರಿವಿಗೆ ಬಂದಷ್ಟು ಜ್ಞಾನ, ಬರದಿರುವುದೆಲ್ಲವೂ ಅಜ್ಞಾನ. ಯಾರಿಗೆ ಯಾವುದರ ಎಷ್ಟು ಪ್ರಾಪ್ತಿಯೋ ಅಷ್ಟು. ಕತ್ತಲು ಬೆಳಕಿಗಿರುವ ರೂಪುರೇಷೆಯಂತೆ ಜ್ಞಾನಕ್ಕೂ ಅಜ್ಞಾನಕ್ಕೂ ತನ್ನದೇ ಆದ ಹಲವು ಒಳ ಕವಲುಗಳಿವೆ, ಓರೆಕೋರೆಗಳಿವೆ.

ಈ ಕಾದಂಬರಿಯ ಚೌಕಟ್ಟಿನೊಳಗೆ ಹೇಳಬೇಕಾದರೆ, ಅಜ್ಞಾನ ಎಂದರೆ ಅದು ಲೈಂಗಿಕತೆ. ಇದರ ಕುರಿತು ಬೆಳಕು ಚೆಲ್ಲಲು ಯತ್ನಿಸಿದಷ್ಟೂ ಮುಚ್ಚಿಕೊಳ್ಳುತ್ತದೆ. ಸಭ್ಯತೆಯ ಪರಿಧಿಯಲ್ಲಿ ಇರಿಸಿದಷ್ಟೂ ಹರಡಿಕೊಳ್ಳುತ್ತದೆ. ಬೆಳಕಿನೆಡೆಗೆ ತರಲೆತ್ನಿಸಿದಷ್ಟೂ ಕರೆಗಟ್ಟುತ್ತದೆ. ಲೋಕೋ ಭಿನ್ನ ರುಚಿಃ. ಒಬ್ಬೊಬ್ಬರಿಗೆ ಒಂದೊಂದು ಅಜ್ಞಾನದಂತೆ ಪರಿಭಾಸವಾಗಬಹುದು. ಲೈಂಗಿಕತೆಯ ಬಗ್ಗೆ ನಮಗಿರುವ ಅಂಧತೆಯೇ ಅಜ್ಞಾನವಾಗಬಾರದೇಕೆ?

ನಮ್ಮೊಳಗೆ ಲೈಂಗಿಕ ಅಜ್ಞಾನ ಇರುವುದರಿಂದಲೇ ನಾವು ನೋಡುವ ಪರಿಸರ, ವ್ಯಕ್ತಿ ಮತ್ತು ಅನುಭವ ಬೇರೆ ಬೇರೆಯಾಗಿ ಮನಸ್ಸಿನ ಮೇಲೆ, ಸ್ವಾಸ್ಥ್ಯ ಸಮಾಜದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಸಂಬಂಧಗಳನ್ನು ನೋಡುವ, ಎದುರಿಸುವ ಮತ್ತು ಸಂಭಾಳಿಸಿಕೊಂಡು ಹೋಗುವ ಮೂಲಭೂತ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ. ಇದಕ್ಕೆ ಅಸಂಬದ್ಧ ಕಲ್ಪನೆಗಳು, ಜೊತೆಗೆ ವಿಕಾರ ಮನಸ್ಥಿತಿಯೂ ಸೇರಿಕೊಂಡಾಗ ಆಗುವುದು ನಾ. ಡಿಸೋಜಾ ವಿರಚಿತ "ಕಾಡಿನ ಬೆಂಕಿ".

ಕಾದಂಬರಿಯ ನಾಯಕ ಕಾಡಿನ ಕಾವಲುಗಾರ. ಹೊಸದಾಗಿ ಕೆಲಸಕ್ಕೆ ಸೇರಿರುತ್ತಾನೆ. ಸುತ್ತ ಇರುವ ಸುಂದರ ಕಾಡಿನ ರಮ್ಯ ವನಸಿರಿ ಇರುವಷ್ಟು ಜನಸಂದಣಿ ಇರದ ಪ್ರದೇಶವದು. ಅಲ್ಲೊಬ್ಬ ಮೇಟಿ. ವಯಸ್ಸಾದವ. ಆತನಿಗೆ ಎರಡನೇ ಹೆಂಡತಿ ಇರುತ್ತಾಳೆ, ಸಣ್ಣ ಪ್ರಾಯದವಳು. ಆಕೆಗೆ ವಯೋಸಹಜ ಕಾಮನೆಗಳು, ಮಕ್ಕಳಿಲ್ಲದ ಕೊರಗು, ಜೊತೆಗೆ ಮೇಟಿಯ ಅಸಮರ್ಥತೆ. ನಾಯಕನಿಗೆ ಮೊದಮೊದಲು ಕುತೂಹಲ ಬೆರೆತ ಮುಜುಗರ, ನಾಚಿಕೆ. ಬೆಂಕಿಯಿದ್ದೆಡೆ ಬೆಣ್ಣೆ ಕರಗದಿರುತ್ತದೆಯೇ? ಯಾರು ಬೆಂಕಿ? ಯಾರು ಬೆಣ್ಣೆ? ಅದಿಲ್ಲಿ ಅಪ್ರಸ್ತುತ. ಆಕೆ ಗಂಡನನ್ನು ಉದ್ರೇಕಿಸುತ್ತಾಳೆ. ಆತ ಸೋಲುತ್ತಾನೆ. ಆದರೆ ಇದನ್ನು ನೋಡಿದ ನಾಯಕ ವಿಕೃತನಾಗುತ್ತಾನೆ. ಅದೇ ಸಮಯದಲ್ಲಿ ಕಾಡಿನ ಮೂಲದಾಳದಲ್ಲೆಲ್ಲೋ ಬೆಂಕಿ ಬಿದ್ದಿರುತ್ತದೆ. ಇಲ್ಲಿ ಇಬ್ಬರ ಸಮಾಗಮವಾಗುತ್ತದೆ.

ಕೆಲವು ದಿನಗಳೆದ ಬಳಿಕ ನಾಯಕನಿಗೆ ಮದುವೆಯಾಗಿ ಹೆಂಡತಿಯನ್ನು ಕರೆತರುತ್ತಾನೆ. ಆಕೆಯನ್ನು ಬಹಳ ಪ್ರೀತಿಸುತ್ತಾನೆ. ಆದರೆ ಅವರಿಬ್ಬರ ಸಮಾಗಮ ನಡೆದಿರುವುದಿಲ್ಲ. ಮೊದಲಿಗೆ ತನ್ನ ಗಂಡನ ಈ ವಿಚಿತ್ರ ನಡವಳಿಕೆಯನ್ನು ಪ್ರೀತಿಯೆಂದೇ ತಿಳಿದಿರುತ್ತಾಳೆ. ಆಕೆಯೂ ಉಪ್ಪು ಹುಳಿ ತಿಂದುಂಡವಳಲ್ಲವೇ? ಬಯಕೆ ಅವಳಿಗೂ ಕೆರಳುತ್ತದೆ. ಉಹುಂ, ನಾಯಕ ಸಹಕರಿಸಲ್ಲ. ಪ್ರೀತಿಯ ಮಾತಾಡಿ ಆಕೆಯನ್ನು ಸುಮ್ಮನಿರಿಸುತ್ತಾನೆ. ಸಮಯ ಸರಿದಂತೆ ಮೇಟಿಯ ಹೆಂಡತಿ ತನ್ನಾಸೆ ಫಲಿಸಿತೆಂಬಂತೆ ಗರ್ಭವತಿಯಾಗಿ ಹೆರಿಗೆಗೆ ತವರಿಗೆ ಹೋಗುತ್ತಾಳೆ.

ಇಲ್ಲಿಯವರೆಗೂ ಕಥೆಯ ಧಾಟಿಯನ್ನು ಊಹಿಸಬಹುದು. ಊಹಿಸಲಾಗದ್ದು ನಾಯಕನ ವಿಕೃತ. ಇತ್ತ ನಾಯಕ ತನ್ನ ಪ್ರೇಯಸಿ ತವರಿಗೆ ಹೋದ ಮೇಲೆ ಹುಚ್ಚನಾಗುತ್ತಾನೆ. ಬಯಕೆಯ ಬೆಂಕಿ ಸುಡುತ್ತಿರುತ್ತದೆ. ಪಕ್ಕ ಹೆಂಡತಿಯಿದ್ದೂ ನಿಷ್ಕ್ರಿಯ ಮತ್ತು ಅಸಮರ್ಥನಾಗಿರುತ್ತಾನೆ. ಕಾರಣ ಅವನನ್ನು ಉದ್ರೇಕಗೊಳಿಸುವರೇ ಇರುವುದಿಲ್ಲ! ಗಂಡು ಹೆಣ್ಣನ್ನು ಬಲಾತ್ಕರಿಸ ಬೇಕು, ಹೆಣ್ಣು ತಡೆಯೊಡ್ಡಬೇಕು, ಅದನ್ನು ಈತ ನೋಡಬೇಕು ಆಗ ಈತ ಸಿದ್ಧಗೊಳ್ಳುತ್ತಾನೆ! ಆಕೆ ಬಂದು ಅಲ್ಲಿ ನಡೆದುದ್ದನ್ನು ರೋಚಕವಾಗಿ ಈತನಿಗೆ ವಿವರಿಸಬೇಕು, ಆಗ ಉದ್ರೇಕಗೊಳ್ಳುತ್ತಾನೆ! ಇದನ್ನು ಕೇಳಿದ ಆಕೆ ಮರ್ಮಾಘಾತಕ್ಕೊಳಗಾಗುತ್ತಾಳೆ. ಅವನನ್ನು ಈ ವಿಕೃತದಿಂದ ಹೊರತರಬೇಕೆಂದು ಪ್ರಯತ್ನಿಸುತ್ತಾಳೆ. ಆದರೆ ಕಾಡಿನಲ್ಲಿ ಅವನಿಗೆ ಅಂಟಿಕೊಂಡಿದ್ದ ವಿಕೃತ ಬೆಂಕಿ ಆಕೆಯ ಪ್ರಯತ್ನಕ್ಕೆ ಫಲಕೊಡುವುದಿಲ್ಲ.

ನಡುವೆ ಇದ್ದ ಮೇಟಿಗೆ ವಯಸ್ಸಾಗಿ ರಿಟೈರ್ ಆಗುತ್ತಾನೆ. ಆ ಜಾಗಕ್ಕೆ ಹೊಸಬ ಬರುತ್ತಾನೆ. ನಾಯಕನ ಹೆಂಡತಿಯ ಬಗ್ಗೆ ಅಕ್ಕ ಎನ್ನುವ ಭಾವನೆ ಅವನಲ್ಲಿ ಇದ್ದರೂ ಸ್ವತಃ ನಾಯಕನೇ ಅವನ ಜೊತೆ ಇದ್ದು ಬಾ, ಅವನು ಏನೆಲ್ಲಾ ಮಾಡಿದ ಎಂದು ಹೇಳು, ನಂತರ ಸಮರ್ಥನಾಗುವೆ ಎಂದು ಕೈ ಹಿಡಿದ ಗಂಡನೇ ಆಕೆಯನ್ನು ವಿಕೃತ ಕೂಪಕ್ಕೆ ದಬ್ಬಿದಾಗ, ಅಪಾರ ನೋವಾದರೂ ಗಂಡನ ಸಲುವಾಗಿ ಆಕೆ ಅವನಲ್ಲಿಗೆ ಹೋಗುತ್ತಾಳೆ. ಹೊಸ ಮೇಟಿಗೆ ಸಂಗತಿ ಅರಿವಿಗೆ ಬರುತ್ತದೆ. ಅಲ್ಲಿ ಏನೂ ಘಟಿಸುವುದಿಲ್ಲ. ಇಲ್ಲಿ ಅವಳಿದ್ದು ಬಂದದ್ದನ್ನು ನೋಡಿ ನಾಯಕ ಸಿಂಹಪುರುಷನಾಗುತ್ತಾನೆ. ಅವನಲ್ಲಿದ್ದ ವಿಕೃತ ವಿರಹಾಗ್ನಿ ಆವತ್ತಿನ ಮಟ್ಟಿಗೆ ಧಮನವಾಗುತ್ತದೆ. ಆದರೆ ಎಷ್ಟು ದಿನ ಅಂತ ಗಂಡನ ವಿಕೃತ ತಣಿಯಲು ಪರಪುರುಷಣ ಬಳಿ ಹೋಗಿ ಬರೋ ನಾಟಕ ಆಡೋದು? ವೈಪರೀತ್ಯವೆಂದರೆ ಬರುಬರುತ್ತಾ ಇಬ್ಬರಲ್ಲೂ ಸಂಬಂಧ ಏರ್ಪಡುತ್ತದೆ. ನಾಯಕನಿಗೆ ಇದರ ಅರಿವು ಬರುತ್ತದೆ. ಆದರೆ ಕಾಲ ಮಿಂಚಿರುತ್ತದೆ. ಆಕೆಗೆ ಅದು ತಪ್ಪು ಎಂದು ತಿಳಿದು ಆತ್ಮಹತ್ಯೆಗೆ ಯತ್ನಿಸುತ್ತಾಳೆ.

ಕಾರಣ ಬೇರೆ ಇರಬೇಕೆಂದು ತಿಳಿದ ಆಕೆಯ ಮನೆಯವರು ಎಲ್ಲಾ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಅದು ಪರಿಣಾಮಕಾರಿಯಾಗದೆ ಕೊನೆಗೆ ಮನೋವೈದ್ಯರಲ್ಲಿಗೆ ಕರೆತರುತ್ತಾರೆ. ಇಷ್ಟವಿಲ್ಲದಿದ್ದರೂ ಜೊತೆಗೆ ನಾಯಕನೂ ಬರುತ್ತಾನೆ. ಬಿಡಿಬಿಡಿಯಾಗಿ ಇಬ್ಬರ ಜೊತೆ ಮಾತಾಡಿದಾಗ ಸಮಸ್ಯೆಯ ಆಳಅಗಲ ತಿಳಿಯುತ್ತದೆ. ನಾಯಕ ಎಲ್ಲ ಗೊತ್ತಿದ್ದೂ ಗುಮ್ಮನ ಗುಸಕನ ಥರ ಇರುತ್ತಾನೆ. ಅರಗಿಸಿಕೊಳ್ಳಲಾಗದ, ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲಾಗದ ವೇದನೆಯೊಂದಿಗೆ, ತಾನು ಮಾಡದ ತಪ್ಪಿಗೆ, ತನ್ನ ಗಂಡನ ವಿಕೃತ ಮನಸ್ಸಿನ ಪರಿಣಾಮವಾಗಿ ಆಕೆ ಕೊನೆಯುಸಿರೆಳೆಯುತ್ತಾಳೆ.

ಇದು ಕಪೋಲಕಲ್ಪಿತ ಕಥೆಯಾಗಿದ್ದರೂ ನಮ್ಮ ನಮ್ಮಗಳ ನಡುವೆ ನಮ್ಮ ಅರಿವಿಗೇ ಬರದೆ ಅದೆಷ್ಟು ಮನೆಗಳಲ್ಲಿ ಈ ರೀತಿ ನಡೆಯುತ್ತಿಲ್ಲ? ಮೂಕವೇದನೆಯನ್ನು, ಅರಣ್ಯರೋಧನವನ್ನು ಅದೆಷ್ಟು ಹೆಣ್ಣುಮಕ್ಕಳು ಉಸಿರೆತ್ತದೆ ಅನುಭವಿಸುತ್ತಿಲ್ಲ? ಇದಕ್ಕೆಲ್ಲ ಕಾರಣ ಲೈಂಗಿಕತೆಯ ಬಗ್ಗೆ ನಮಗಿರುವ ಅಜ್ಞಾನವೇ ಹೊರತು ಮತ್ತೇನಲ್ಲ. ಈ ಕಥೆಯಲ್ಲಿ ಯಾರ ತಪ್ಪಿದೆ ಎಂದು ಹುಡುಕ ಹೊರಟರೆ ಮೇಲುನೋಟಕ್ಕೆ ನಾಯಕನದೇ ಎಂದು ಅನಿಸಿದರೂ, ಆತನು ಬೆಳೆದ ಹಿನ್ನೆಲೆ, ಇದ್ದ ಪರಿಸರ, ಮನೆಯಲ್ಲಿ ಆತನ ತಂದೆ ತನ್ನ ತಾಯಿಯ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆ, ಲೈಂಗಿಕ ದೌರ್ಜನ್ಯ, ಬಡತನ, ಮನೆ ತುಂಬಾ ಮಕ್ಕಳು, ಪರಸ್ತ್ರೀ ಸಂಬಂಧ..ಎಲ್ಲವೂ ಪೂರಕವಾಗಿ ನಿಲ್ಲುತ್ತವೆ. ನಾಯಕನನ್ನು ಸಮರ್ಥಿಸುತ್ತಿಲ್ಲ. ಇದು ಕೇವಲ ದೃಷ್ಟಾಂತವಷ್ಟೇ.

ಈ ಸಮಸ್ಯೆಯ ಸುಳಿಯಿಂದ ಹೊರಬರಲು ನಾವು ನಾವು ಲೈಂಗಿಕತೆಯ ಬಗ್ಗೆ ಕಟ್ಟಿಕೊಂಡ ನಮ್ಮ ಕಣ್ಕಾಪುಗಳೇ ಕಾರಣ. ಅದರ ಬಗ್ಗೆ ಇರುವ ಅಸ್ಪೃಶ್ಯತೆಯೇ ಕಾರಣ. ಮಡಿವಂತಿಕೆಯೇ ಕಾರಣ. ಇರಬೇಕಾದಷ್ಟು ಇಲ್ಲದ ತಿಳುವಳಿಕೆಯೇ ಕಾರಣ. ಅಂದ ಮಾತ್ರಕ್ಕೆ ಎಲ್ಲವನ್ನೂ ಎಲ್ಲರೆದುರು ವಯಸ್ಸಿನ ಅಂತರವಿಲ್ಲದೆ ತೆರೆದಿಡಿ, ಬಿಚ್ಚಿಡಿ ಎಂದರ್ಥವಲ್ಲ. ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ನಮ್ಮ ಮಾಡಿವಂತಿಕೆಯನ್ನೂ ಸಾಣೆ ಹಿಡಿಯಬೇಕಿದೆ. ದೃಷ್ಟಿಯನ್ನು ವಿಶಾಲಗೊಳಿಸ ಬೇಕಿದೆ. ಡಾಂಭಿಕತೆಯನ್ನು ಪಕ್ಕಕ್ಕೆ ಕಟ್ಟಿಟ್ಟು, ಸೋಗಲಾಡಿತನಕ್ಕೆ ಬೀಗ ಹಾಕಬೇಕಿದೆ. ಇಲ್ಲದಿದ್ದಲ್ಲಿ, ಕಥಾ ನಾಯಕನ ವಿಕೃತ ಮನಸ್ಸುಗಳು, ಕಥಾ ನಾಯಕಿಯ ನೋವಿನ ನಿಟ್ಟುಸಿರು ನಮ್ಮ ಸಮಾಜದಲ್ಲಿ ಶರವೇಗದಲ್ಲಿ ಬೆಳೆಯುತ್ತಲೇ ಇರುತ್ತವೆ.

ಕೊನೆ ಮಾತು : ಈ ಕಾದಂಬರಿ ಚಲನಚಿತ್ರವಾಗಿ ರಾಷ್ಟ್ರ ಮಟ್ಟದ ರಜತ ಪದಕ ಪಡೆದಿದೆ. ನಾಯಕನಾಗಿ ಸುರೇಶ್ ಹೆಬ್ಳೀಕರ್, ಪ್ರೇಯಸಿಯಾಗಿ ವನಿತವಾಸು ಮತ್ತು ನಾಯಕನ ಹೆಂಡತಿಯಾಗಿ ಮಮತಾ ಶೆಣೈ ಅಭಿನಯಿಸಿದ್ದಾರೆ. ಕಾದಂಬರಿ ಓದಲಾಗದವರು ಚಿತ್ರವನ್ನು ನೋಡಬಹುದು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ.


"ಕುಂಜಾಲು ಕಣಿವೆಯ ಕೆಂಪು ಹೂವು" 

ನಮ್ಮ ದುಡಿವ ಇಂದಿನ ಏಕಾತನತೆ ನಮ್ಮನ್ನು ಎಲ್ಲಿಗೆ ತಂದು ನಿಲಿಸುತ್ತದೆ ಎಂದು ಹೇಳುವುದು ಕಷ್ಟ. ಒಬ್ಬೊಬ್ಬರಿಗೆ ಒಂದೊಂದು ವೇದ್ಯವಾಗುವುದು. ಎಲ್ಲವೂ ಬದುಕನ್ನು ನೋಡುವ ರೀತಿ ಮತ್ತು ನಮಗಿರುವ ಅಭಿರುಚಿಯ ಮೇಲೆ ಅವಲಂಬಿಸಿರುತ್ತದೆ. ನಮ್ಮ ಅಭಿರುಚಿ ಕುತೂಹಲಕಾರಿಯಾಗಿಯೂ, ಹೊಸದನ್ನು ಅನ್ವೇಷಿಸುವ ಮನಸ್ಸುಳ್ಳದ್ದಾಗಿಯೂ ಇದ್ದರೆ ನಮಗೆ ಪ್ರಾಪ್ತವಾಗುವ ಹೊಸ ಅನುಭವಗಳೂ ಅಷ್ಟೇ ಮನೋಹರ ಮತ್ತು ವಿದ್ವತ್ತ್ಪೂರ್ಣವಾಗಿರುತ್ತದೆ. ಕೇವಲ ಯಾಂತ್ರಿಕ ಬದುಕಿಗೆ ಒಗ್ಗಿದ ಜೀವಕ್ಕೆ ರಂಜನೀಯವಾದ ಅನುಭವವಾಗಲಿ, ರಸಪೂರ್ಣ ಬದುಕನ್ನು ಸವಿಯುವ ಅವಕಾಶವಾಗಲಿ, ಉಹುಂ, ಸಿಗುವುದಿಲ್ಲ. ಬದುಕಿನ ಜಂಜಡಗಳಿಗೆ ತತ್ತರಿಸಿದ ನಮ್ಮ ಅಸಮರ್ಥ ಜೀವನ ನಗರೀಕರಣವೆಂಬ ನಾಗಾಲೋಟಕ್ಕೆ ಸಿಕ್ಕಿ ಮನಸ್ಸನ್ನು ಮಬ್ಬುಗೊಳಿಸುವುದು ವಿಪರ್ಯಾಸವೇ ಸರಿ.

ಆದರೆ ಆದ ಎಲ್ಲ ಅನುಭವ ಸಾಕ್ಷಾತ್ಕಾರವಾಗುತ್ತದೆಯೇ? ಹಿಂದೆ ನಡೆದದ್ದಕ್ಕೂ ಈಗ ನಡೆವುದಕ್ಕೂ ವ್ಯತ್ಯಾಸವಿಲ್ಲವೇ? ನಡೆದ ಹೆಜ್ಜೆಯ ಗುರುತು ಈಗಲೂ ಹಾಗೇ ಇರಬಹುದೇ? ಹಾಗೆ ಇರುವುದು ಸಾಧ್ಯವಾ? ಬದಲಾವಣೆ ಜಗದ ನಿಯಮ ಎಂದು ಹೇಳುವುದಾದರೆ ಈ ಪ್ರಶ್ನೆಗಳಿಗಿಲ್ಲಿ ಅರ್ಥವೇ ಇರುವುದಿಲ್ಲ. ಇದರ ಸೂಕ್ಷ್ಮ ಸಂಬಂಧ ತಿಳಿಯಬೇಕಾದರೆ ಈ ಕೃತಿಯನ್ನು ಓದಲೇ ಬೇಕು.

ಕಥಾನಾಯಕ ತನ್ನ ಕಛೇರಿಯ ಪೀಕಲಾಟದಿಂದ ರೋಸತ್ತು ತನ್ನ ಸಹೋದ್ಯೋಗಿಯೊಬ್ಬ ಕೊಡುವ ಸಲಹೆಯನ್ನು ಸ್ವೀಕರಿಸಿ, ಒಂದು ತಿಂಗಳ ಮಟ್ಟಿಗೆ ರಜೆ ಪಡೆದು, ಹೆಂಡತಿ ಮಕ್ಕಳನ್ನು ಒಪ್ಪಿಸಿ ತನ್ನ ಹುಟ್ಟೂರಿಗೆ ಬರುತ್ತಾನೆ. ಬಹಳ ದಿನದ ಮೇಲೆ ಊರಿಗೆ ಬಂದು ತಾಯಿಯನ್ನು ಕಾಣುತ್ತಾನೆ. ತಾನು ಆಡಿ ಬೆಳೆದ ಪರಿಸರವನ್ನು ಕಣ್ತುಂಬಿಕೊಳ್ಳುತ್ತಾನೆ. ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾನೆ. ಆದರೆ ಎಷ್ಟು ದಿನ ಅಂತ ನೆನೆದದ್ದನ್ನೇ ನೆನೆಯುವುದು? ತಾಯಿಯೊಡನೆ ಕಾಲ ಕಳೆಯುವುದು? ನೋಡಿದ ಜಾಗೆಗಳನ್ನೇ ಮತ್ತೆ ಮತ್ತೆ ನೋಡುವುದು? ನಾಯಕನ ಮನಸ್ಸು ಕುತೂಹಲಭರಿತವಾದದ್ದು. ಊರಿಗೆ ಬಂದ ಮೇಲೆ ಏನನ್ನು ಮಾಡಬೇಕೆಂದು ಪೂರ್ವನಿಯೋಜಿತನಾಗಿ ಬಂದಿರುತ್ತಾನೋ ಅದನ್ನು ಸಾಧಿಸಲು ಅತ್ತ ತೊಡಗುತ್ತಾನೆ. ಅದೆಂದರೆ ಕುಂಜಾಲು ಕಣಿವೆಯ ಕೆಂಪು ಹೂವನ್ನು ನೋಡುವುದು.

ಅದು ಬರೀ ಹೂವೆಂದರೆ ಹೂವಲ್ಲ. ಹತ್ತು ವರ್ಷಕ್ಕೊಮ್ಮೆ ಚುಮುಚುಮು ಚಳಿಯುಕ್ಕಿಸುವ ಡಿಸೆಂಬರ್ ಮಾಹೆಯ ಅಮಾವಾಸ್ಯೆಯ ನಂತರ ಅರಳುವ ಕೆಂಪು ಹೂವು, ಕುಂಜಾಲು ಕಣಿವೆಯಲ್ಲಿ. ಅದರ ಆಯುಷ್ಯ ಕೇವಲ ಹತ್ತುಹನ್ನೆರೆಡು ದಿನಗಳು ಮಾತ್ರ. ಅದನ್ನು ನೋಡಿದವರು ಬೆರಳೆಣಿಕೆ ಮಂದಿ ಮಾತ್ರ. ಅದರಲ್ಲಿ ನಾಯಕನ ತಂದೆಯೂ ಒಬ್ಬರು. ಕುಂಜಾಲು ಕಣಿವೆಯೆಂದರೆ ಅದು ಸಾಮಾನ್ಯದ ಮಾತಲ್ಲ, ಇಲ್ಲೇ ಎಲ್ಲೋ ಪಕ್ಕದಲ್ಲಿರುವುದಲ್ಲ. ಕೇರಳಕ್ಕೆ ಹೊಂದಿಕೊಂಡ ಕುಂಜಾಲು ದಟ್ಟಾರಣ್ಯದಲ್ಲಿದೆ.

ಕಥಾನಾಯಕ ಅಲ್ಲಿಗೆ ಹೊರಡಲು ಅನುವಾಗುತ್ತಾನೆ. ತನ್ನ ತಂದೆ ಬರೆದಿಟ್ಟಿದ್ದ ಕುಂಜಾಲು ಕಣಿವೆಗೆ ಹಿಂದೆ ಹೋಗಿ ಬಂದದ್ದರ ಅನುಭವ ವಿವರಿಸಿದ್ದ ಡೈರಿಯನ್ನು ತನ್ನ ತಾಯಿಯಿಂದ ಪಡೆದ ನಂತರ ಅವನ ಯಾತ್ರೆ ಆರಂಭಗೊಳ್ಳುತ್ತದೆ.

ಆ ಡೈರಿಯಲ್ಲಿ ಆತನ ತಂದೆ ಪ್ರತಿಯೊಂದು ಹಂತವನ್ನು, ವಿಷಯವನ್ನು ಆಮುಲಾಗ್ರವಾಗಿ ಬರೆದಿಟ್ಟಿರುತ್ತಾರೆ. ಅದನ್ನೇ ದೀವಟಿಗೆ ಮಾಡಿಕೊಂಡು ಮುನ್ನಡೆಯುತ್ತಾನೆ. ನಾಯಕ ಎಷ್ಟೇ ಆದರೂ ಸಾಹಸ ಪ್ರವೃತ್ತಿಯುಳ್ಳವನು, ಹೊಸದನ್ನು ನೋಡಿ ಅನುಭವಿಸಬೇಕೆಂದ ಗಟ್ಟೆದೆಯುಳ್ಳವನು. ಕುಂಜಾಲು ಕಣಿವೆಯ ತೀರ ಸಮೀಪಕ್ಕೆ ಹೋಗಿ ತಲುಪುವ ಬಸ್ಸಿನ ವ್ಯವಸ್ಥೆಯಿದ್ದರೂ ಕಾಲ್ನಡಿಗೆಯಲ್ಲೇ ತನ್ನ ತಂದೆ ಹೋಗಿಬಂದಂತೆಯೇ, ತೀರ ಅವಶ್ಯವಿದ್ದೆಡೆ ಮಾತ್ರ ಬಸ್ಸನ್ನು ಅವಲಂಬಿಸುವುದಾಗಿಯೂ, ಹಾಗೆ ಬಸ್ಸಿನಲ್ಲಿ ಹೋದರೆ ಪ್ರಕೃತಿಯನ್ನು ಹೆಚ್ಚು ಸವಿಯಲು ಆಗುವುದಿಲ್ಲ ಎಂದು ನಿರ್ಧರಿಸಿ ನಡೆದೇ ಹೊರಡಲು ವಿದ್ಯುಕ್ತನಾಗುತ್ತಾನೆ. ಸರಿ. ಯಾತ್ರೆ ಆರಂಭವಾಗುತ್ತದೆ.

ಒಂದೊಂದೇ ಹಳ್ಳಕೊಳ್ಳ ದಾಟಿ ಸುತ್ತಮುತ್ತಲಿನ ಹಸಿರನ್ನು ನೋಡುತ್ತಾ, ಪ್ರಕೃತಿಯೊಳಗೆ ತಾನು ಒಂದು ಭಾಗವಾಗುತ್ತಾ, ಸಿಕ್ಕ ಹಳ್ಳಿಗಳಲ್ಲಿ ಸಿಕ್ಕದ್ದು ತಿನ್ನುತ್ತಾ ಗಮ್ಯದೆಡೆ ನಡೆಯುತ್ತಾನೆ. ತನ್ನ ತಂದೆ ಬರೆದಿಟ್ಟಿದ್ದ ಡೈರಿಯನ್ನೇ ಆಧಾರವಾಗಿಟ್ಟುಕೊಂಡು ಮುನ್ನಡೆಯುವಾತನಿಗೆ ನಿಧಾನವಾಗಿ ಒಂದೊಂದೇ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸಲು ಆರಂಭವಾಗುತ್ತದೆ. ಅದು ತಾನು ನಡೆಯುತ್ತಿರುವ ರಸ್ತೆಯಾಗಬಹುದು ಹಿಂದೆ ಇದ್ದ ಕಾಲು ದಾರಿಯಾಗಿರಬಹುದು. ಹಿಂದೆ ತನ್ನ ತಂದೆ ಇದೇ ಹಳ್ಳಿಗೆ ಬಂದಾಗಿನ ಚಿತ್ರಣಕ್ಕೂ ಆತನೀಗ ನೋಡುತ್ತಿರುವ ಚಿತ್ರಣಕ್ಕೂ ಅಜಗಜಾಂತರ ವ್ಯತ್ಯಾಸ. ಅವು ಹೆಸರಿಗಷ್ಟೇ ಹಳ್ಳಿಗಳು. ನಗರ ಸಂಸ್ಕೃತಿ ಅಲ್ಲಿಗೆ ಕಾಲಿಟ್ಟು ಅದೆಷ್ಟೋ ದಿನಗಳಾಗಿರುತ್ತದೆ. ತನ್ನ ತಂದೆ ಸಂಧಿಸಿದ ವ್ಯಕ್ತಿಗಳು ಆಗ ಇದ್ದದ್ದಕ್ಕೂ, ಈಗ ಅದೇ ವ್ತಕ್ತಿಯನ್ನು ತಾನು ಸಂಧಿಸಿದಾಗ ವ್ಯಕ್ತಿಯಲ್ಲಾದ ಬದಲಾವಣೆ ಕಂಡು ನಂಬುವುದು ಕಷ್ಟವಾಗುತ್ತದೆ. ಅವರಲ್ಲಿ ಕೆಲವರು ಕಾಲವಾಗಿರುತ್ತಾರೆ, ಇನ್ನುಳಿದವರು ಆಧುನಿಕತೆಯ ಪರದೆ ತಮ್ಮ ಮೈಮೇಲೆಳೆದುಕೊಂಡು "ನಾಗರೀಕ"ರಂತೆ ಭಾಸವಾಗುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಸುತ್ತಲ ಪರಿಸರದಲ್ಲಾದ ಬದಲಾವಣೆ ಆತನನ್ನು ಚಕಿತಗೊಳಿಸುತ್ತದೆ. ಮಾನವನ ನಗರ ಸಂಸ್ಕೃತಿ, ಆಧುನಿಕ ಜೀವನ, ತನ್ನ ಸುಖಕ್ಕಾಗಿ ಏನನ್ನೂ ಮಾಡಲು ಸಿದ್ಧವಾಗಿ ನಿಂತ ಸ್ವಾರ್ಥಪರತೆ ಕೇವಲ ಆತ ನೋಡುತ್ತಿರುವ ಜನಜೀವನವನ್ನಷ್ಟೇ ಅಲ್ಲದೇ ಸುತ್ತಲ ಕಾಡು ಮೇಡು, ನದಿ ತೊರೆ, ಹಳ್ಳ ಗುಡ್ಡ, ಬೆಟ್ಟ ಬಯಲು, ಕ್ರಿಮಿಕೀಟಪ್ರಾಣಿಪಕ್ಷಿ ಎಲ್ಲವನ್ನೂ ಬುಡಮೇಲು ಮಾಡಿ ಬರಿದು ಮಾಡಿರುತ್ತದೆ. ಇದರಿಂದ ಕ್ಷೋಭೆಗೆ ಒಳಗಾದ ಆತನ ಮನಸ್ಸು ಮುಮ್ಮಲ ಮರುಗುತ್ತದೆ. ಎಲ್ಲಿ ಹಚ್ಚ ಹಸಿರು ಕಂಗೊಳಿಸಿ, ನದಿ ತೊರೆ ಹಳ್ಳಗಳು ತುಂಬಿ ಹರಿದು, ಹೆಮ್ಮರಗಳು ಸೂರ್ಯನ ಕಿರಣವೇ ನೆಲದ ಮೇಲೆ ಬೀಳದೆ ಇರುತ್ತಿರಲು, ಯಾವುದೋ ಮರದ ರೆಂಬೆಯಲ್ಲಿ ಕೂತ ಹಕ್ಕಿಯ ಕಲರವ ಕೇಳಿ ಮನಸ್ಸು ಮುದಗೊಳ್ಳುತ್ತಿತ್ತೋ, ಮುಗಿಲೆತ್ತರ ಬೆಳೆದು ನಿಂತ ದಟ್ಟ ಬೆಟ್ಟಗಳು ಆಕಾಶವೇ ಕಾಣದಂತೆ ಮುಗಿಲನ್ನು ಮರೆ ಮಾಡಿ ನಿಂತಿತ್ತೋ, ಈಗ ಅಲ್ಲೆಲ್ಲಾ ಬರೀ ಬೋಳು ಬೋಳು. ಎಲ್ಲಿ ನೋಡಿದರಲ್ಲಿ ಮಾನವನ ಹೆಜ್ಜೆ ಗುರುತುಗಳು ಆತನು ಅಲ್ಲೆಲ್ಲಾ ಮಾಡಿದ ಘನಂದಾರಿ ಕೆಲಸಕ್ಕೆ ಗುರುತು ಹೇಳುತ್ತಿತ್ತು.

ಏನು ಕಾಣಲಿ ಬಿಡಲಿ, ನಾಯಕನ ಯಾತ್ರೆ ಮಾತ್ರ ಮುಂದುವರೆಯಬೇಕಲ್ಲ? ಮುಂದುವರೆಯುತ್ತದೆ. ಕುಂಜಾಲು ಕಣಿವೆಯ ತನಕ ನಡೆಯಬೇಕಾದಾಗ ನಡೆದು, ಬಸ್ಸನ್ನು ಗಾಡಿಯನ್ನು ಹತ್ತಬೇಕಾದಾಗ ಹತ್ತಿ, ಉಳಿಯಬೇಕಾಗಿ ಬಂದಾಗ ಗತ್ಯಂತರವಿಲ್ಲದೆ ಪರರ ಮನೆಯಲ್ಲಿ ಉಳಿದು, ಕಣ್ಣಿಗೆ ಕಂಡಷ್ಟೇ ಪ್ರಕೃತಿ - ವನಸಿರಿ - ಕಾಡು - ಪ್ರಾಣಿಗಳನ್ನು ಕಂಡು, ತನ್ನ ಮನೋಧ್ಯೇಯವನ್ನು ಗುರಿಯಾಗಿಸಿಕೊಂಡು ಮುನ್ನಡೆದಾಗ ಅಂತೂ ಕೊನೆಗೊಮ್ಮೆ ಕಣಿವೆಗೆ ಬಂದು ತಲುಪುತ್ತಾನೆ. ಅಲ್ಲಾದರೂ ಆತನಿಗೆ ನಿರಾಸೆಯಾಗುತ್ತದೆ. ಯಾವ ಎರಡು ಬೆಟ್ಟಗಳ ಬುಡದಿಂದ ಕಣಿವೆ ಶುರುವಾಗಲಿತ್ತೋ ಅಲ್ಲಿ ಗಣಿ ಕೆಲಸ, ನದಿಗೆ ಸೇತುವೆ ಕಟ್ಟಿ ನೀರನ್ನು ಸಂಗ್ರಹಿಸಿ ವಿದ್ಯುತ್ತ್ ತೆಗೆಯುವ ಕಾಮಗಾರಿ ನಡೆಯುತ್ತಿರುತ್ತದೆ. ತನ್ನ ತಂದೆ ತಮ್ಮ ಡೈರಿಯಲ್ಲಿ ಪ್ರಸ್ತಾವಿಸಿದ್ದ ಆದಿಜನಾಂಗವೊಂದು ಈಗಲೂ ಅಲ್ಲಿರಬೇಕಿತ್ತು. ಈಗಲೂ ಇದ್ದರು, ಗಣಿ ಕೆಲಸದ ಕಾರ್ಮಿಕರಾಗಿ, ಸೇತುವೆ ಕಟ್ಟುವ ಕೂಲಿಯಾಳಾಗಿ!

ಅವರ ಸಹಾಯವನ್ನು ಪಡೆದು ಕೊನೆಗೂ ನಾಯಕ ತನ್ನ ಗಮ್ಯವನ್ನು ಮುಟ್ಟುತ್ತಾನೆ. ತನ್ನ ಯಾನ ಆರಂಭವಾದ ಘಳಿಗೆಯಿಂದಲೂ ಕೇವಲ ನಿರಾಸೆಯನ್ನೇ ಕಾಣುತ್ತಿದ್ದ ನಾಯಕ ಕೊನೆಗೂ ಅಷ್ಟೆಲ್ಲಾ ಸಾಹಸ ಮಾಡಿ, ಕಷ್ಟಪಟ್ಟು ಆ ಕುಂಜಾಲು ಕಣಿವೆಯ ಕೆಂಪು ಹೂವು ಅರಳಿ ನಿಂತಿರುತ್ತಿದ್ದ ಆ ದೊಡ್ಡ ಕಂದಕದೊಳಗೆ ಇಣುಕಿ ನೋಡಿದಾಗ ಆತನಿಗೆ ಕಂಡದ್ದೇನು? ಆ ಕೆಂಪು ಹೂವಿಗೂ ಪರಮಾತ್ಮ ಶ್ರೀಕೃಷ್ಣನಿಗೂ ಇರಬಹುದಾದ ಸಂಬಂಧವೇನು? ಆದಿಜನಾಂಗ ಆ ಹೂವನ್ನು ಅಷ್ಟು ಹತ್ತಿರವಿದ್ದೂ ನೋಡದಿರುವುದಕ್ಕೆ ಕಾರಣವೇನು?

ನಾ ಡಿಸೊಜಾ ಕೊನೆಯನ್ನು ಮುಗಿಸಿರುವ ರೀತಿ ಇದೆಯೆಲ್ಲಾ? ಕ್ಲೈಮ್ಯಾಕ್ಸ್ ಎಂದರೆ ಹೀಗಿರಬೇಕು ಎನ್ನಿಸುವಂತಿದೆ. ಹೇಳಿದರೆ ಬರುವುದಿಲ್ಲ, ಈ ಸಣ್ಣಗಾದಂಬರಿಯನ್ನು ಓದಬೇಕು. ಒಂದೆರೆಡು ಮೂರು ಸಿಟ್ಟಿಂಗ್ ಅಲ್ಲಿ ಓದಬಹುದಾದ ಈ ಕೃತಿ ನಮ್ಮ ಇಂದಿನ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ



ಈ ವರ್ಷ (೨೦೧೭) ರಲ್ಲಿ ನಾನು ಓದಿದ ಪುಸ್ತಕಗಳು :
ದಾರಿ ತಪ್ಪಿದ್ದ ಓದು ಮತ್ತೆ ಲಯ ಕಂಡುಕೊಂಡಿದ್ದು ಈ ವರ್ಷ ಏಪ್ರಿಲ್ ಮೇ ನಂತರ. ಈ ವರ್ಷ ನಾನು ನನಗೆಂದು ಅತೀ ಹೆಚ್ಚು ವ್ಯಯಿಸಿದ್ದು ಪುಸ್ತಕಗಳಿಗಾಗಿ. ಅದರ ಬಗ್ಗೆ ನನಗೆ ಅತೀ ಖುಷಿಯಿದೆ.

1) "ಹಿಮಾಗ್ನಿ"
ಲೇಖಕರು : ರವಿ ಬೆಳಗೆರೆ
ಸಮಯ : 3 ವಾರಗಳು.
ಪುಟಗಳು : 500 +

2) "ಔಷಧಿಯಿಲ್ಲದೆ ಬದುಕಲು ಕಲಿಯಿರಿ"
ಲೇಖಕರು : "ಜೀವಿ" ಕುಲಕರ್ಣಿ
ಸಮಯ : ಒಂದು ವಾರ
ಪುಟಗಳು : 200+

3) "ದೊಡ್ಡಬಳ್ಳಾಪುರ - ಒಂದು ಚಾರಿತ್ರಿಕ ಅಧ್ಯಯನ"
ಲೇಖಕರು : ಡಾ|| ವೆಂಕಟೇಶ್
ಸಮಯ : 15.07.17 ರಿಂದ 21.07.17
ಪುಟಗಳು : 400 +

4) "ಲೈಫ್ ಈಸ್ ಬ್ಯೂಟಿಫುಲ್"
ಲೇಖಕರು : ಜೋಗಿ
ಪುಟಗಳು : 200 +
ಸಮಯ : 21.07.17 ರಿಂದ 22.07.17

5) "ಕಾಡು"
ಲೇಖಕರು : ಶ್ರೀಕೃಷ್ಣ ಆಲನಹಳ್ಳಿ
ಪುಟಗಳು : 104
ಸಮಯ : 24.07.17 ರಿಂದ 25.07.17

6) "ನಮ್ಮ ಊರಿನ ರಸಿಕರು"
ಲೇಖಕರು : ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪುಟಗಳು : 108
ಸಮಯ : 26.07.17 ರಿಂದ 31.07.17

7) "ನಕ್ಷತ್ರ ಜಾರಿದಾಗ"
ಮೂಲ ಲೇಖಕರು (ತೆಲುಗು) ' ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ : ರವಿ ಬೆಳಗೆರೆ
ಪುಟಗಳು :
ಸಮಯ : 31.07.17 ರಿಂದ 01.08.2017

8) "ನಾಕುತಂತಿ"
ಲೇಖಕರು : ದ. ರಾ. ಬೆಂದ್ರೆ
ಪುಟಗಳು : 110
ಸಮಯ : 02.08.17 ರಿಂದ 03.08.17

9) "ಏಗ್ದಾಗೆಲ್ಲಾ ಐತೆ"
ಲೇಖಕರು : ಬೆಳಗೆರೆ ಕೃಷ್ಣಶಾಸ್ತ್ರಿಗಳು
ಪುಟಗಳು : 105
ಸಮಯ : 03.08.17 ರಿಂದ 05.08.17

10) "ಮಲೆನಾಡಿನ ರೋಚಕ ಕಥೆಗಳು - ಭಾಗ 1"
ಲೇಖಕರು : ಗಿರಿಮನೆ ಶ್ಯಾಮರಾವ್
ಪುಟಗಳು : 184
ಸಮಯ : 05.08.17 ರಿಂದ 08.08.17

11) "ಅರಮನೆ ಗುಡ್ಡದ ಕರಾಳ ರಾತ್ರಿಗಳು"
ಲೇಖಕರು : ಗಿರಿಮನೆ ಶ್ಯಾಮರಾವ್
ಪುಟಗಳು : 184
ಸಮಯ : 09.08.17 ರಿಂದ 11.08.17

12) "ಪಶ್ಚಿಮ ಘಟ್ಟದ ತಪ್ಪಲಿನಲ್ಲಿ"
ಲೇಖಕರು : ಗಿರಿಮನೆ ಶ್ಯಾಮರಾವ್
ಪುಟಗಳು : 160
ಸಮಯ : 12.08.17 ರಿಂದ ರಿಂದ 14.08.17

13) "ಜೇನು ಕಲ್ಲಿನ ರಹಸ್ಯ ಕಣಿವೆ"
ಲೇಖಕರು : ಗಿರಿಮನೆ ಶ್ಯಾಮರಾವ್
ಪುಟಗಳು : 165
ಸಮಯ : 14.08.17 ರಿಂದ 17.08.17

14) "ತೆಂಕನಿಡಿಯೂರಿನ ಕುಳುವಾರಿಗಳು"
ಲೇಖಕರು : ವ್ಯಾಸರಾವ್ ನಿಂಜೂರ್
ಪುಟಗಳು : 265
ಸಮಯ : 17.08.17 ರಿಂದ 19.08.17

15) "ಅರಮನೆ"
ಲೇಖಕರು : ಕುಂ. ವೀರಭದ್ರಪ್ಪ
ಪುಟಗಳು : 567
ಸಮಯ : 21.08.17 ರಿಂದ 6.09.17

16) "ಬದುಕು"
ಲೇಖಕರು : ಗೀತಾ ನಾಗಭೂಷಣ
ಪುಟಗಳು : 568
ಸಮಯ : 07.09.17 ರಿಂದ ಅಪೂರ್ಣ.

17) " ಹೊನ್ನ ಕಣಜ"
ಲೇಖಕರು : ಪ್ರಜಾವಾಣಿ
ಪುಟಗಳು : 467
ಸಮಯ : 08.09.17 ರಿಂದ 26.09.17

18) "ಧಾತು"
ಲೇಖಕರು : ಡಾ. ನಾ ಮೊಗಸಲೆ
ಪುಟಗಳು : 169
ಸಮಯ : 27.09.17 ರಿಂದ 28.09.17

19) "ಮಹಾಕ್ಷತ್ರಿಯ"
ಲೇಖಕರು : ದೇವುಡು ನರಸಿಂಹ ಶಾಸ್ತ್ರಿ
ಪುಟಗಳು : 244
ಸಮಯ : 28.09.17 ರಿಂದ 05.10.17

20) "ಜೀಕೆ ಮಾಸ್ತರರ ಪ್ರಣಯ ಪ್ರಸಂಗ"
ಲೇಖಕರು : ಚಂದ್ರಶೇಖರ ಕಂಬಾರ
ಪುಟಗಳು : 64
ಸಮಯ : 05.10.17 ರಿಂದ 06.10.17

21) "ಕರಿಮಾಯಿ"
ಲೇಖಕರು : ಚಂದ್ರಶೇಖರ ಕಂಬಾರ
ಪುಟಗಳು : 216
ಸಮಯ : 06.10.17 ರಿಂದ 10.10.17

22) "ಚದುರಂಗರ ಸಮಗ್ರ ಕಥೆಗಳು"
ಲೇಖಕರು : ಚದುರಂಗ
ಪುಟಗಳು : 575
ಸಮಯ : 10.10.17 ರಿಂದ 02.11.2017

23) "ತಾಯಿ"
ಲೇಖಕರು : ಮ್ಯಾಕ್ಸಿಂ ಗೋರ್ಕಿ, ಅನುವಾದ ನಿರಂಜನ
ಪುಟಗಳು : 360
ಸಮಯ : 02.11.17 ರಿಂದ 20.11.17

24) "ಟ್ರೈನ್ ಟು ಪಾಕಿಸ್ತಾನ್"
ಲೇಖಕರು : ಖುಶ್ವಂತ್ ಸಿಂಗ್
ಪುಟಗಳು : 187
ಸಮಯ : 21.11.17 ರಿಂದ 23.11.2017

25) "ಸುಣ್ಣ ಬಳಿದ ಸಮಾಧಿಗಳು"
ಲೇಖಕರು : ನಾ ಡಿಸೋಜಾ
ಪುಟಗಳು : 192
ಸಮಯ : 24.11.2017 ರಿಂದ 28.11.2017

26) "ತಂತ್ರಯೋನಿ"
ಲೇಖಕರು : ಸತ್ಯಕಾಮ
ಪುಟಗಳು : 304
ಸಮಯ : 30.11.2017 ರಿಂದ 21.12.2017

27) "ನಾನು ಪಾರ್ವತಿ"
ಲೇಖಕರು : ಜೋಗಿ
ಪುಟಗಳು : 120+
ಸಮಯ : 22.12.17 ರಿಂದ 23.12.17

28) "ಮೂರ್ಖನ ಮಾತುಗಳು"
ಲೇಖಕರು : ಅಹೋರಾತ್ರ
ಪುಟಗಳು : 190
ಸಮಯ : 24.12.2017 ರಿಂದ ಪ್ರಗತಿಯಲ್ಲಿದೆ

ನಮಸ್ಕಾರ. 

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 
ಸತ್ಯಕಾಮರ "ತಂತ್ರಯೋನಿ" - ಬರಹ ೩


ಸತ್ಯಕಾಮರ "ತಂತ್ರಯೋನಿ" ಕೇವಲ ತಂತ್ರ, ತಾಂತ್ರಿಕರ ಲೋಕದ ವಿಧಿವಿಧಾನವನ್ನು ಆಡ್ಯವಾಗಿ ತಿಳಿಸುವ ಕೃತಿಯಾದರೂ ಓದುವವರು ಗಮನಿಸಿದರೆ ಪ್ರತಿ ಪುಟದಲ್ಲೂ ಇಡೀ ಜೀವನ ದೃಷ್ಟಿಕೋನವನ್ನು ಬದಲಾಯಿಸುವ ಸಂಗತಿಗಳಿವೆ. ಒಬ್ಬ ವ್ಯಕ್ತಿಯ ಉಗಮಕ್ಕೆ ಕಾರಣವಾಗಬಲ್ಲ ಹಲವು ಸಾಲುಗಳಿವೆ. ಇದನ್ನು ನೀವು ವ್ಯಕ್ತಿತ್ವ ವಿಕಸನದ ಪಾಠಗಳೆನ್ನಿ, ಜ್ಞಾನದ ಇನ್ನೊಂದು ರೂಪವೆನ್ನಿ, ಅಂತರ್ದರ್ಶನವೀಯ್ವ ಬೆಳಕೆನ್ನಿ - ಎಲ್ಲವೂ ಆಗುತ್ತದೆ. ಒಮ್ಮೆ ಓದಲು ಶುರು ಮಾಡಿದರೆ ಸತ್ಯಕಾಮರು ಹೇಳಿರುವ ಪ್ರತಿಯೊಂದು ಮಾತುಗಳು ಜೀವನದ ಸತ್ಯಗಳನ್ನು ಬಹು ಸರಳವಾಗಿ ಹೇಳಿರುವುದು ಓದುಗರ ಅನುಭವಕ್ಕೆ ಬರುತ್ತದೆ. ನನಗೆ ಹಿಡಿಸಿದ ಕೆಲವು ಸಾಲುಗಳನ್ನಿಲ್ಲಿ ಪ್ರಸ್ತಾವಿಸಿದ್ದೇನೆ. ಒಮ್ಮೆ ಓದಿ ನೋಡಿ, ಯಾವ ಮಹಾನ್ ಗುರುವಿಗಿಂತಲೂ, ಭೋಧಕನಿಗಿಂತಲೂ, ತತ್ವಜ್ಞಾನಿಗಿಂತಲೂ ಸರಳವಾಗಿ ಜ್ಞಾನ ಮತ್ತು ಸತ್ಯದ ದರ್ಶನ ಮಾಡಿಸಿದ್ದಾರೆ ಸತ್ಯಕಾಮರು.

ನಮ್ಮ ಮೇಲೆ ಬಳಿದುಕೊಳ್ಳುವ ಕತ್ತಲೆಯನ್ನೇ ಬೆಳಕಿನ ಹಬ್ಬ ಎನ್ನುತ್ತೀವಿ. ಅಜ್ಞಾನದಿಂದ ಅಜ್ಞಾನವನ್ನು ಕಳೆದುಕೊಳ್ಳಲಾಗುವುದಿಲ್ಲ. ಜ್ಞಾನದೀಪ ಬೇಕು.

ತಮ್ಮ ಮನೆ ದೊಡ್ಡದೆನ್ನುವರು ಅ‌ದು ಹೊರ ಬಯಲಿಗಿಂತ ಚಿಕ್ಕದೆನ್ನುವುದನ್ನು ಮರೆತಿರುತ್ತಾನೆ.

ನಾವು ದೊಡ್ಡವರಾಗದೇ ನಮ್ಮದಾವುದೂ ದೊಡ್ಡದಾಗುವುದಿಲ್ಲ.

ಯಾವುದು ದೊಡ್ಡದು? ಯಾವುದು ತಾನು ಚಿಕ್ಕದು ಆಗಿದೆಯೋ, ಇತರು ಯಾವುದನ್ನು ಚಿಕ್ಕದು ಮಾಡಲಾರರೋ ಅದು ದೊಡ್ಡದು.


ಎಲ್ಲದರಲ್ಲಿ ನೀನು ಬೆರಿ. ನಿನ್ನಲ್ಲಿ ಎಲ್ಲವನ್ನು ಬೆರೆಸಿಕೊ.

ಜೀವವಿಲ್ಲದ್ದು ಬೆಳೆಯಲಾರದು. ಬೆಳೆಯುವುದೆಲ್ಲಾ ಜೀವದಿಂದ ಇರುವುದೇ. ಇಲ್ಲಿ ಇರುವುದೆಲ್ಲಾ ಬೆಳೆಯಲೆಂದೇ.
ಬೇರೆ ಎಂದು ಕಾಣುವುದರಲ್ಲಿ ಇರುವಿಕೆ ಒಂದೇ.

ದಾರಿ ಎಲ್ಲಿದೆ? ನಡೆದಾಟ ಇದ್ದಲ್ಲಿ ಅಲ್ಲವೇ? ಹಾದಿಗಿಂತ ಮೊದಲು ಹಾಯ್ದಾಟ; ಇದ್ದ ಕಾಲು ಕಿತ್ತು ಇನ್ನೆಲ್ಲಿಯೋ ಇಟ್ಟರೆ ಹಾದಿಯಾಗದು. ತಲುಪುವ ದಿಕ್ಕಿನತ್ತ ಕಾಲಿಡಬೇಕು. ಹೋಗುವುದು ಮೊದಲು ಗೊತ್ತಾಗಬೇಕು. ಗೊತ್ತಾಗದೆ ಹೋಗುವವ ಬರೀ ಕಾಲಿದ್ದವ. ತಲೆ ಇಲ್ಲದವನ ಕಾಲು 'ಕೆಳಗಿನ' ಕೆಲಸ ಮಾಡುತ್ತದೆ.

ಕೈಗೆತ್ತಿಕೊಂಡಿದ್ದನ್ನು, ಕಾಲಿಟ್ಟು ಸಾಗುವುದನ್ನು ದೊಡ್ಡದಾಗಿ ಕಾಣುತ್ತೇವೆ. ಹೊರಗೆ ಇರುವುದೆಲ್ಲಾ ಒಳಗಿದೆ. ತುಂಬ ದೊಡ್ಡವರಾದವರಿಗೆ ಒಳ ಹೊರಗು ಎಂಬ ಎರಡು ಇರುವುದಿಲ್ಲ.

ನಮ್ಮದು ನಮ್ಮೊಳಗಿದೆ. ಅದು ಎಂದೂ ಚಿಕ್ಕದಲ್ಲ. ತುಂಬ ದೊಡ್ಡದೇ ಸರಿ. ಅದನ್ನು ಚಿಕ್ಕದು ಮಾಡಿದ್ದು ಹೊರಗಿನದನ್ನು ಒಳಗಿರಿಸಿಕೊಂಡಿದ್ದಕ್ಕಲ್ಲ. ಅದು ಒಳಗಿರಲಿ ಎಂದು ಕಟ್ಟಿದ ಗೋಡೆಗಳು ಅದನ್ನು ಚಿಕ್ಕದು ಮಾಡಿವೆ.

ನಮ್ಮ ತಲೆಗೆ ಮೂಡಿದ ಕೋಡು ಇತರರನ್ನು ಇರಿಯಲು ಅಲ್ಲ. ಅರಿಯಲು. ಇರವಿಗೆ ಇಂಬು ಕಲ್ಪಿಸಲು. ಅರಿವನ್ನು ಆಹಾರ ಮಾಡಿಕೊಂಡು ತಾನು ಬೆಳೆಯಲು.

ಸಿದ್ಧತೆ ಇಲ್ಲದೆ ಏರಿದರೆ ಉಸಿರು ಸಾಲದು. ಮುಂದುವರಿದರೆ ಅದು ನಿಂತು ಬಿಡುತ್ತದೆ. ತಿಳುವಳಿಕೆ ಇಲ್ಲದ ಏರಿಕೆ ಮರಣಕ್ಕೆ ಕಾರಣ.

ನಡೆಯುವನಿಗೆ ತಡೆ ಒಂದು ನೋವು. ಮುನ್ನಡೆಯುವ ಬಯಕೆಯಿಂದ ಅದನ್ನು ತಡೆದುಕೊಳ್ಳುತ್ತಾನೆ. ನೋವಿನಿಂದ ಸೋರಿದ್ದನ್ನು ಮತ್ತೆ ತುಂಬಿಕೊಂಡು ಹುರಿಗೊಳ್ಳುತ್ತಾನೆ. ಮುಂದೆ ನಡೆಯುತ್ತಾನೆ. ನಿಲ್ಲುವುದಿಲ್ಲ. ಹಿಂದಂತೂ ಸರಿಯುವುದೇ ಇಲ್ಲ.

ಕಡಲ ಹನಿಗೆ ಕಡಲಿನ ಕಸುವಿದೆ. ಅದು ಕಡಲಿನಲ್ಲಿದೆ. ಹೊರಗಿದ್ದ ಒಂಟಿ ಹನಿಗೆ ಚಿಕ್ಕತನದ ಭಯವಿದೆ. ಭಯ ಬೆಳೆದರೆ ವಿನಾಶ. ವಿನಾಶ ನೀಗಬೇಕಾದರೆ ದೊಡ್ಡದರಲ್ಲಿ ಇರಬೇಕು. ಇಲ್ಲವೆ ದೊಡ್ಡದೇ ಆಗಿರಬೇಕು.

ಲೋಕದ ಅಶಕ್ತತೆಗೆ ತಾಯಿಯೇ ಚುಂಬಕ ಶಕ್ತಿ.

ನಮ್ಮನ್ನು ಹೆತ್ತವರ ಹಾಗೆ ಜಗತ್ತಿನ ತಂದೆತಾಯಿಗಳು ಎರಡು ವ್ಯಕ್ತಿಗಳಲ್ಲ. ತಂದೆ ಸ್ವತಂತ್ರವಾದ ಒಂದು ಪದಾರ್ಥವಲ್ಲ, ತಾಯಿಯೂ ಅಷ್ಟೇನೆ. ಒಬ್ಬರಿಲ್ಲದೆ ಇನ್ನೊಬ್ಬರಿಗೆ ಅರ್ಥವಿಲ್ಲ. ಪೂರ್ಣತೆಯಿಲ್ಲ. ಒಂದು ಪೂರ್ಣವಲ್ಲ. ಎರಡು ಅರ್ಥಗಳ ಕೂಡಿಕೆ. ಒಂದರಿಂದ ಏನೂ ಆಗುವುದಿಲ್ಲ. ಎರಡು ಸುಮ್ಮನಿರುವುದಿಲ್ಲ.

ನಮಗೆ ಕತ್ತಲಾದಾಗ ದೊಡ್ಡವರ ಮಾತು ಬೆಳಕಾಗುತ್ತದೆ. ಬೆಳಕು ತಂದ ಮಾತು ಕೊಳೆ ಕಳೆದುಕೊಂಡಿರುತ್ತದೆ.

ಮನಸ್ಸಿಗೆ ಬೆಳಕಿಗಿಂತ ಹೆಚ್ಚು ವೇಗವಿರುವುದನ್ನು ಮನಸ್ಸಿನ ಆಚೆ ಹೋದವರು ಹೇಳುತ್ತಾರೆ. ಅರಿತಿದ್ದಾರೆ.

ತಾಯಿ ತನ್ನನ್ನು ಹೊರಗೆ ನೋಡಬೇಕೆಂಬುದರ ಫಲವೇ ಮಗು. ಮಗುವನ್ನುಳಿದು ತಾಯಿ ಒಂದು ಚಣ ಇರಲಾರಳು. ಇದು ಒಂದು ಚಕ್ರನೇಮಿ ಕ್ರಮ.

ಅರಳಬೇಕು; ಮರುಳು ಸಾಕು. ಇದು ಬದುಕಿನ ತುಡಿತ. ದೊಡ್ಡದನ್ನು ಬದುಕು. ಸಣ್ಣದನ್ನು ಎತ್ತಿ ಕರೆದುಕೋ. ಚಿಕ್ಕದು ಯಾರಲ್ಲಿದ್ದರೂ ಅದನ್ನು ತೊಡೆ.

ಆಡಿದ್ದನ್ನು ನಾವು ಏಕೆ ಮಾಡುವುದಿಲ್ಲ? ಒಪ್ಪಿದ್ದನ್ನು ನಡೆಯುವುದಿಲ್ಲ? ಯಾಕೆ? ಕಾರಣ ಅತ್ಯಂತ ಸ್ಪಷ್ಟವಿದೆ. ನಮ್ಮಲ್ಲಿ ಅನೇಕ ನಿಟ್ಟುಗಳಿವೆ, ಮೈಗಳಿವೆ, ವಿಭಾಗಗಳಿವೆ. ಅವುಗಳಿಗೆ ಅದರದೇ ಆದ ಸ್ವತಂತ್ರ ವ್ಯವಸ್ಥೆ ಇದೆ. ಆದರೆ ಅದರ ಹೊಣೆ ನಮ್ಮ ಕೇಂದ್ರಕ್ಕಿಲ್ಲ.

ನಮ್ಮನ್ನು ನಮ್ಮಷ್ಟು ಯಾರೂ ತಿಳಿದಿಲ್ಲ. ತಿಳಿಯುವುದೂ ಇಲ್ಲ. ಈ ಮಾತು ಅರ್ಧೆ ಸತ್ಯ. ನಮ್ಮಲ್ಲಿ ನಾವು ತಿಳಿಯದೆ ಇದ್ದದ್ದೂ ಸಾಕಷ್ಟಿದೆ. ನಮ್ಮಲ್ಲಿಯದು ಹಲವು ಸಲ ತಪ್ಪು ತಿಳಿದಿದೆ.

ಮನಸ್ಸಿನ ಪ್ರತಿಯೊಂದು ಭಾಗವನ್ನು ತೊಡಗಿಸುವುದಕ್ಕೊಂದು ಅಳತೆ, ತೂಕ ಇದೆ. ಹೀಗೆ ಹೇಳಿದರೆ ಅಚ್ಚರಿಯಾಗುತ್ತದೆ. ನಮ್ಮನ್ನು ನಾವು ಒಮ್ಮೆಯೂ ತೂಗಿಲ್ಲ. ಅಳೆದಿಲ್ಲ.

ನಾವೆಷ್ಟು ದೊಡ್ಡವರು? ನಮ್ಮೊಳಗಿರುವುದು ಎಷ್ಟು ದೊಡ್ಡದಿದೆ? ತಂತ್ರ ಸ್ವಾತಂತ್ರವನ್ನು ಬಯಸುತ್ತದೆ. ನಿರ್ಭಯತೆಯನ್ನು ಪ್ರತಿಪಾದಿಸುತ್ತದೆ. ಸ್ವಾತಂತ್ರ ಇನ್ನೊಬ್ಬರದನ್ನು ಕಸಿಯುವುದಲ್ಲ. ನಿರ್ಭಯ ಇನ್ನೊಬ್ಬರನ್ನು ಹೆದರಿಸಲಿಕ್ಕಲ್ಲ.

ನೀರು ಮಧುರ ನಿಜ. ಎಲ್ಲ ಔಷಧಿಗಳು ಅದರಲ್ಲಿರೋದು ನಿಜ. ಆದರೆ ನೀರನ್ನು ನಾವು ಮಲಿನ ಮಾಡಿದ್ದೀವಿ. ನಮ್ಮ ಅಜ್ಞಾನ, ಆಲಸ್ಯ, ಆಸೆಬುರುಕತನ ಅದನ್ನು ಮಲಿನಗೊಳಿಸಿದೆ. ನಾವು ಅಮಲಿನದಿಂದಿದ್ದರೆ, ಶುದ್ಧ ಮಾಡಿದರೆ, ವ್ಯವಸ್ಥೆ ಕಾಯ್ದುಕೊಂಡರೆ ಎಲ್ಲವೂ ಶುದ್ಧವೇ.

ಅನರ್ಹತೆ ಒಂದು ಅಪರಾಧ. ಅನರ್ಹತೆಯನ್ನು ಮುಚ್ಚಿ, ಅದನ್ನು ಅರ್ಹತೆ ಎಂದು ಮುದ್ರೆಯೊತ್ತಿ ನಡೆಯುವುದು ಮಹಾಪರಾಧ. ಅಪರಾಧಿಯನ್ನು ಕ್ಷಮಿಸಬಹುದು. ಆದರೆ ನಿರಪರಾಧಿಗಳಿಗೆ ತೊಂದರೆಯಾಗಬಾರದು.

ಬರೆದವರೆಲ್ಲಾ ಎತ್ತರಕ್ಕೇರಿದವರು ಇರಲಿಕ್ಕಿಲ್ಲ. ಎಲ್ಲ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತಿಕೊಳ್ಳುವುದೂ ಕುಸಿಯುವ ಕೆಲಸವೇ. ಪುಸ್ತಕ ಬದುಕಿದವನ ಬೆಳಕು. ಮುಂದಿನವರಿಗೆ ಆಸರೆ. ಕತ್ತಲೆಯಿಂದ ತೊಳಲುವವನಿಗೆ ಅದು ಬೇಕು.

ಇಲ್ಲಿ ಒಳ್ಳೆಯದು ಬೀಡು ಬಿಟ್ಟಂತೆ ಕೆಟ್ಟದ್ದೂ ಬೀಡು ಬಿಟ್ಟಿದೆ. ಪ್ರಾಮಾಣಿಕತೆ ಇದೆ. ವಂಚನೆಯೂ ಇದೆ. ನನಗೆ ಇದು ತಿಳಿದಿದೆ ಎಂದು ಹೇಳುವನಿಗೆ ಅದು ತಿಳಿದಿರಲಿಕ್ಕಿಲ್ಲ. ಹೇಳದೇ ಇರುವನಿಗೆ ತಿಳಿದಿರಬಹುದು. ಎಂದಿನಿಂದಲೂ ಇದರ ಬಗ್ಗೆ ದೊಡ್ಡವರು ತಮ್ಮ ಅನುಭವವನ್ನು ಹೇಳಿಯೇ ಇದ್ದಾರೆ. ಇದು ನಿಜ. ಯಾವ ಕಾಲಕ್ಕೂ ಅಷ್ಟೇ. ಅದು ಕಾಲದ ವಶವಲ್ಲ. ಕಾಲವೇ ಅದರ ಅಧೀನ.

ನೀನು ಚೆನ್ನಾಗಿ ತಿಳಿದಿದ್ದೀ ಎಂದಾದರೆ ಕೊಂಚವೇ ತಿಳಿದಿರುವೆ. ಏಕೆಂದರೆ ತಿಳಿದುಕೊಳ್ಳಬೇಕಾಗಿರುವುದು ನೀನು ತಿಳಿದಿರುವುದಕಿಂತ ದೊಡ್ಡದಿದೆ.

ಹಕ್ಕು ಅಪೇಕ್ಷಣೀಯವಾದರೆ, ಹೊಣೆ ಅನಿವಾರ್ಯ. ಬರೀ ಹಕ್ಕುದಾರನೆಂದವ ದಿಕ್ಕುಗೆಡುತ್ತಾನೆ. ಹೊಣೆಯೊಂದನ್ನೇ ಅರಿತವ ಪ್ರಾಣಿಗೆ ಸಮ. ಅಂತರಂಗ ಬಹಿರಂಗ ಶುದ್ಧ ಇಲ್ಲದವನು ಎಂದೂ ಬೆಳಕನ್ನು ಪಡೆಯಲಾರ. ಬೆಳಕಿಲ್ಲದೆ ಒಳಗಿನ ಕತ್ತಲೆ ಹೋಗದು.

ಪ್ರಾಮಾಣಿಕತೆ ಎಲ್ಲರಿಗೂ ಬೇಕಾಗಿದ್ದರೂ ಅದನ್ನು ಹಾಸಿ ಹೊದ್ದ ಯಾರೂ ಸುಖಿಗಳಾಗಿಲ್ಲ. ಸುಖವು ದುಃಖದ ವಿರೋಧಿ ಎಂಬ ತಿಳುವಳಿಕೆಯೇ ಇದಕ್ಕೆ ಮೂಲ ಕಾರಣ.

ದುಃಖವನ್ನು ತರದ ಸುಖವನ್ನು ದುರ್ಬಲರು ಎಂದಿಗೂ ಪಡೆಯಲಾರರು.

ನಮಗೆ ಎಲ್ಲವೂ ಸಿಗಬೇಕು, ದಕ್ಕಬೇಕು ಎಂಬ ಗರ್ವದ ಕುದಿ ಇದೆ. ಹಾಗೆಯೇ ನಾವು ಧರ್ಮವನ್ನು ತೆಕ್ಕೆ ಹಿಡಿದು ಹಿಂದೆ ಎಳೆಯುತ್ತಿದ್ದೀವಿ. ಸಿಕ್ಕಿದಾಗ ಕೈ ಚಿಕ್ಕವು ಎಂಬ ತಿಳಿವು ಬರದು. ಧರ್ಮ ಸಿಕ್ಕುವುದಿಲ್ಲ ಎಂದು ಮಾತ್ರ ತಿಳಿಯುತ್ತೇವೆ. ತನ್ನ ಚಿಕ್ಕತನ ತಿಳಿಯದೆ ಯಾರೂ ದೊಡ್ಡವರಾಗುವುದಿಲ್ಲ.

ಇಲ್ಲಿ ವಿವೇಕ ಬೇಕು. ಬಳಸುವ ಭರದಲ್ಲಿ ಹಳಸಿದ್ದನ್ನು ತಿನ್ನುತ್ತೇವೆ. ಹಳಸಿದ್ದು ಉಪಯುಕ್ತ ನಿಜ. ಆದರೆ ಎಸೆಯಲಿಕ್ಕೆ ಹೊರತು ಬಳಸಲಿಕ್ಕಲ್ಲ. ಬದುಕಿನಲ್ಲಿ ಎಸೆಯುವುದೂ ಎತ್ತಿಕೊಳ್ಳುವ ಒಂದು ನಿಷೇಧಾತ್ಮಕ ಅಗತ್ಯವೇ.

ಬದುಕು ಬೆಳೆಯುತ್ತಿದ್ದರೆ ಮಾತ್ರ ಬಳಸುವ ವಸ್ತು ಧರ್ಮವಾಗಿರುತ್ತದೆ. ಇಲ್ಲದಿದ್ದರೆ ಕಸ.

ಮನುಷ್ಯ ತನ್ನ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಇನ್ನಾವ ವಸ್ತು ತಲೆ ಕೆಡಿಸಿಕೊಂಡಿದೆ? ಇದೆ ಎಂದರೆ ಮುಗಿಯಲಿಲ್ಲ. ತಿಳಿಯುವುದು ಇಲ್ಲ ಎಂದರೆ ತುಡಿತ ತೀರುವುದಿಲ್ಲ. ಇರುವುದರ ಸುತ್ತಲೂ ಇರುವಿಕೆಯೊಳಗೇ ಒಂದು ರಹಸ್ಯವಿದೆ. ಈ ಬದುಕಿನ ರಹಸ್ಯ ಉಸಿರಾಗಿದೆ. ಹಸಿವೂ ಆಗಿದೆ.

ಬದುಕು ಬರಿದಾಗಿಲ್ಲ. ಇದು ರಹಸ್ಯವಾಗಿ ಉಳಿದಿಲ್ಲ. ಏನು ತುಂಬಿದೆ ಎಂಬುದೇ ರಹಸ್ಯ. ತಿಳಿದಿದೆ ಎಂಬ ಅನುಭವದಲ್ಲಿ ತಿಳಿದಿಲ್ಲ ಎನ್ನುವುದೇ ರಹಸ್ಯ. ರಹಸ್ಯ ಬೆಳೆದಾಗ ಬದುಕು ತನ್ನಿಂದ ತಾನೇ ದೂರಾಗುತ್ತದೆ. ರಹಸ್ಯ ಹೆಚ್ಚಾದರೆ ಅದು ಆಸಕ್ತಿಯ ಕೇಂದ್ರವಾಗುತ್ತದೆ. ರಹಸ್ಯದ ಒಂದು ಬಿಂದು ಅಜ್ಞಾನವಾದರೆ ಇನ್ನೊಂದು ತಿಳುವಳಿಕೆ.

ಮನುಷ್ಯ ನಡೆಯಬೇಕು. ನಡೆಯುವುದಕ್ಕೆ ದಾರಿ ಅಗತ್ಯ. ದಾರಿಗಿಂತ ಕಾಲು ಅಗತ್ಯ. ದಾರಿ ಇಲ್ಲದಿದ್ದರೂ ನಡೆ ನಿಲ್ಲುವುದಿಲ್ಲ. ಎಲ್ಲ ನಡೆಗೂ ಗುರಿಯೇ ಅಂತ್ಯವಲ್ಲ. ನಡೆಯುವವರಿಗಾಗಿ ದಾರಿ ನಿರ್ಮಿಸುವುದೂ ಒಂದು ಬಗೆಯ ನಡೆಯೇ. ಗುರಿ ಮುಟ್ಟಿದವ ಏನು ಪಡೆಯುತ್ತಾನೋ ದಾರಿ ನಿರ್ಮಿಸಿದವನೂ ಅದನ್ನೇ ಹೊಂದುತ್ತಾನೆ. ರಹಸ್ಯ ಗುರಿಯೂ ಅಲ್ಲ, ದಾರಿಯೂ ಅಲ್ಲ. ಅದು ನಡೆ.

ಮನುಷ್ಯ ಬೆಳಕನ್ನು ಆಶ್ಚರ್ಯಕರವಾಗಿ ಕಾಣುತ್ತಾನೆ. ಇದರ ಕಾರಣ ಅವನ ಮನದ ಮೂಲೆಯಲ್ಲಿ ತುಂಬಿದ ಕತ್ತಲು.

ಬದುಕಿನಲ್ಲಿ ಜ್ಞಾನ ಕಾಲೂರಿ, ನೆಲೆಯೂರಿ ನಿಲ್ಲಬೇಕಾದರೆ ಪುಸ್ತಕದ ಇರುಬೆಯಿಂದ ತಲೆ ಹೊರಗೆ ತರಬೇಕು. ವಿಶ್ವದ ಯಾವ ಭಾಷೆಯಲ್ಲೂ ಬದುಕಿನಷ್ಟು ವಿಸ್ತಾರವಾದ ಪುಸ್ತಕ ಇನ್ನೂ ಅಚ್ಚಾಗಿಲ್ಲ.

ಉಪದೇಶವನ್ನು ತಲೆಯಲ್ಲಿ ಹೊತ್ತು ಕುಸಿಯದಿರಬೇಕು. ಮುಳ್ಳುದಾರಿಯಲ್ಲಿ ಅದನ್ನು ಪಾದರಕ್ಷೆ ಮಾಡಿಕೊಂಡು ಮುಂದುವರೆಯಬೇಕು.

ತಲೆಯಲ್ಲಿ ಹೊತ್ತ ಮಾತು ಕಾಲಿಗೆ ಬಂದು ಬದುಕಿನ ದಾರಿ ಸಮೆಯದಿದ್ದರೆ ಏನು ಪ್ರಯೋಜನ?

ಅಂಗವನ್ನು ಮರೆತಾಗ ಲಿಂಗ ಉಳಿಯುತ್ತದೆ.

ಕೊಡುವುದನ್ನು ಉಳಿಸಿಕೊಂಡವನು ಪಡೆಯುವುದೂ ಅಲ್ಪವೇ. ಎಲ್ಲವನ್ನು ಕೊಟ್ಟ ಬಳಿಕ ಪಡೆಯುವುದೇ ಉಳಿಯುವುದಿಲ್ಲ.

ಒಬ್ಬನನ್ನು, ಎಲ್ಲರನ್ನು ಪ್ರೀತಿಸಲು ನಿಮಗೆ ಬರದಿದ್ದರೆ ನಿಮ್ಮನ್ನಾದರೂ ಪ್ರೀತಿಸಿ. ಅದೂ ಬರದಿದ್ದರೆ ನಿಮಗೆ ಬದುಕುವ ಅರ್ಹತೆ ಇಲ್ಲ. ಯಾವ ದಾರಿಯಿಂದಾದರೂ ಯಾರನ್ನಾದರೂ ಪ್ರೀತಿಸಿ, ಸಾಧ್ಯವಿದ್ದರೆ ಎಲ್ಲರನ್ನೂ ಪ್ರೀತಿಸಿ. ತನಗೆ ತಿಳಿದ ಹಾಗೆ ಯಾರಿಗೆ ಇರಲು ಬರುವುದಿಲ್ಲವೋ ಇತರರಿಗೆ ತಿಳಿಯುವ ಹಾಗೆ ಅವನಿಗೆ ಇರಲೂ ಬರುವುದಿಲ್ಲ.

ವಿಚಾರವನ್ನು ಹೆರದೆ ಇರುವ ಒಪ್ಪಿಗೆ ನಂಬಿಕೆಯಾಗುವುದಿಲ್ಲ.

ಕಣ್ಣನ್ನೇ ತೆರೆಯದಿದ್ದವನಿಗೆ ಬೆಳಕಿದ್ದರೇನು, ಇರದಿದ್ದರೇನು? ತೆರೆದಾಗಲೇ ಹೊರಗಿನದು ಒಳಗೆ ಸೇರುತ್ತದೆ. ಹೊರಗೆ ಹೋಗಬೇಕಾದರೆ ಒಳಗಿನದೂ ಹೋಗುತ್ತದೆ. ನೀನು ಇನ್ನೊಂದರೊಳಗೆ ಪ್ರವೇಶ ಮಾಡದಿದ್ದರೆ ಇನ್ನೊಂದು ನಿನ್ನೊಳಗೆ ಸೇರುವುದಿಲ್ಲ. ಬದುಕು ರಿಕ್ತವಾಗಬಾರದು, ತುಂಬಿರಬೇಕು.

ಪುಸ್ತಕದಲ್ಲಿ ಬದುಕನ್ನು ತುರುಕುವವನು ಪಾಪ ಮಾಡುತ್ತಾನೆ. ತನ್ನ ಶಿಷ್ಯರನ್ನು ತನಗಿಂತ ದೊಡ್ಡವರನ್ನಾಗಿ ಮಾಡದೇ ಇರುವವನು ಗುರುವಾಗಲಾರ. ಸೃಷ್ಟಿಯಾದ ತಾನು ಸೃಷ್ಟಿಕರ್ತನೂ ಹೌದು.

ಶರಣರು ಪುಸ್ತಕ ನೀಡಲಿಲ್ಲ. ತಾವೇ ಪುಸ್ತಕಗಳಾದರು. ದಾಸರೂ ಆದರು. ಇವರಿಗೆ ಪುಸ್ತಕದ ಆಲಂಬನವಿಲ್ಲದ ನಿರಾಲಂಬತೆ ಇರಲಿಲ್ಲ. ನಾಲಗೆ ಹಾಗು ಹೃದಯಕ್ಕೆ ಭೌಗೋಲಿಕ ಅಂತರ ಇದ್ದದ್ದು ಸ್ಪಷ್ಟ.

ಕಣ್ಣು ಅಗಲಿಸಿರಿ. ಇಂದ್ರಿಯಗಳನ್ನು ವಿಸ್ತರಿಸಿರಿ. ಒಂದರಲ್ಲಿ ಎಲ್ಲವೂ ಇದೆ. ಎಲ್ಲದರಲ್ಲಿ ಒಂದೇ ಇದೆ. ಎಡ ಬಲ ನೋಡದಿರಿ. ಬಲದ ಬೇರು ಬದುಕಿನಲ್ಲಿ ಬಲವಾಗಿ ಇಳಿಯಲಿ. ಚಕಿತರಾಗಬೇಡಿ. ನೀವು ಬೆಳಕಾದರೆ ನಿಮ್ಮ ನೆರೆಗಿರುವರೂ ಬೆಳಗಿಯಾರು.

ತಿಳಿದರೆ ಸಾಕು. ಹೇಳುವ ತವಕ ಬೇಡ. ಹೇಳುವುದರಿಂದ ನಾಲಗೆ ಉದ್ದವಾಗುತ್ತದೆ. ಎದೆ ಸಂಕುಚಿತವಾಗುತ್ತದೆ. ಅರಿತವನ ನಾಲಗೆ ತುಟಿಯೊಳಗೆ ಇರುತ್ತದೆ. ಅರಿವು ಹರವಾದರೂ ಎದೆಯ ಗವಿಯೊಳಗೆ ಅವಿತಿರುತ್ತದೆ. ಜ್ಞಾನ ಉಂಡು ಸುಖಿಸುವ ಪದಾರ್ಥ. ಗಾಜಿನ ಪೆಟ್ಟಿಗೆಯ ಪ್ರದರ್ಶನ ಅದಕ್ಕೆ ಬೇಡ.

ದೊಡ್ಡದನ್ನು ನಾವು ಹುಡುಕಬೇಕು. ಅದೂ ನಮ್ಮನ್ನು ಅರಸಿ ಬರುತ್ತಿದೆ. ತಲೆ ಬಾಗಲು ಬರದವನಿಗೆ ಅದನ್ನು ಎತ್ತಲು ಬರುವುದಿಲ್ಲ.

ಸಾಮಾನ್ಯವಾಗಿ ಎಲ್ಲರ ಮನಸ್ಸೂ ತೂತು ಬಿದ್ದ ಪಾತ್ರೆಯೇ. ತುಂಬಿದ್ದು ಕಣ್ಣು ತೆಗೆಯುವುದರೊಳಗೆ ಸೋರಿ ಹೋಗುವುದೇ ಹೆಚ್ಚು.

ತನ್ನ ಮನಸ್ಸು ಗಟ್ಟಿಗೊಳ್ಳಬೇಕೆಂಬ ಬಯಕೆ ಮೊದಲು ನೆಲೆಯೂರಬೇಕು. ಮನಸ್ಸು ಗಟ್ಟಿಗೊಂಡರೆ ಮುಂದಿನ ದಾರಿ ಸುಗಮ. ಹೀಗೆ ಹೇಳಿದವರು ಸಾವಿರ ಜನ. ಆದರೆ ಇದನ್ನು ಸಾಧಿಸಿದವರು ಕೆಲವರು. ದೊಡ್ಡವರೆಂದು ಹಲವರು ಕಾಣುತ್ತಾರೆ. ಕೆಲವೇ ಜನ ಮಾತ್ರ ದೊಡ್ಡವರಿರುತ್ತಾರೆ. ದೊಡ್ಡವರು ಹುಟ್ಟುವುದಿಲ್ಲ. ಬೆಳೆಯುತ್ತಾರೆ. ಅವರು ಬೆಳೆಯಬೇಕಾದವರನ್ನು ಹುಡುಕುತ್ತಾರೆ.

ಹೃದಯದಲ್ಲಿ ದೇವನನ್ನು ನಂಬಿದ ಹಾಗೆಯೇ ಗುರುವನ್ನು ಪ್ರೀತಿಸಿದರೆ ಮಾತೆಅ ಜ್ಞಾನದ ಬೆಳಕು ಬೆಳಗುತ್ತದೆ.

ಚಿಕ್ಕ ಮನಸ್ಸು, ಕ್ಷುದ್ರ ಚೇತನ ಗುರುವನ್ನು ಶಂಕಿಸುತ್ತದೆ. ಅದರ ಪರಿಣಾಮ ಸಂಶಯಾತ್ಮಾ ವಿನಶ್ಯತಿ. ಈ ಲೋಕದಲ್ಲಿ ಎಲ್ಲಕ್ಕಿಂತ ದೊಡ್ಡದಿರುವ ವಸ್ತುವಿಗೆ ಗುರು ಎಂದು ಹೆಸರು.

ಗುರುವಿಲ್ಲದೆ ಅಜ್ಞಾನ ಕಳೆಯದು. ಜ್ಞಾನದ ಬಾಗಿಲು ತೆರೆಯದು. ಗುರುವಿನ ತಲೆ ಬೆಳ್ಳಗಾಗಬೇಕೆಂಬ ನಿಯಮವಿಲ್ಲ.

ಅವಸರ ಎನ್ನುವುದು ಅಜ್ಞಾನದ ಕೆಲಸ. ಜ್ಞಾನಕ್ಕೆ ವೇಗವೇ ನಡತೆ. ಗುರುವು ಜ್ಞಾನಿ ವೇಗವಂತ.

ಗುರುವಿನಿಂದ ಪಶ್ಚಾತ್ತಾಪವಿಲ್ಲ. ತಪ್ಪು ಮಾಡುವವ, ತಪ್ಪಿಗೆಳೆಯುವವ ಗುರುವೇ ಅಲ್ಲ. ಎತ್ತರವಾಗಿ ಬೆಳೆದುದೇ ಬೆಟ್ಟ.

ಬೆಳೆಯುವವ ತಲೆ ಎತ್ತಿ ಗುರುವಿನ ಕಾಲು ಮುಟ್ಟುತ್ತಾನೆ. ದೊಡ್ಡವರು ಎಲ್ಲರೊಡನೆ ಉಣ್ಣುತ್ತಾರೆ. ಹಸಿದವರನ್ನು ಮುಂದೆ ಕರೆದು ತಾನು ಉಂಡದ್ದನ್ನು ಹಂಚುತ್ತಾರೆ. ಅನ್ನ, ಅದು ಬೆಳೆಯುವವನಿಗೆ ಇದೆ. ಕೊಬ್ಬಿದವನಿಗಲ್ಲ. ಬೆಳೆಯುವವ ಅನ್ನ ಪಡೆಯಿತ್ತಾನೆ. ಕೊಬ್ಬುವವ ಅದನ್ನು ಕದಿಯಿತ್ತಾನೆ. ಅನ್ನ ಜ್ಞಾನವೂ ಹೌದು.

ಬೆಟ್ಟ ಏರುವವ ಅದು ತನ್ನದೆನ್ನಿಸಿ ಹಿಗ್ಗುತ್ತಾನೆ. ತನ್ನನ್ನು ಹತ್ತಿ ಬರುವವನನ್ನೂ ಬೆಟ್ಟ ಕರೆದು ಬರಿಸುತ್ತದೆ. ಮತ್ತೊಬ್ಬ ಹತ್ತಿ ಬಂದರೆ ಬೆಟ್ಟಕ್ಕೂ ಹಿಗ್ಗು.

ದಾರಿ ತಪ್ಪಿದವ, ತಪ್ಪಿಸುವವ ಗುರುವಲ್ಲ. ತಪ್ಪಿನಿಂದ, ಜಾಡ್ಯದಿಂದ ನಾವು ಮುಂದೆ ನಡೆಯದೆ ಇರಬಹುದು. ನಮ್ಮನ್ನು ನಡೆಸುವ ಹೊಣೆ ಮುಂದೆ ನಡೆದ ಗುರುವಿನದು. ಹಿಂದುಳಿದವರನ್ನು, ಅಶಕ್ತರನ್ನು, ಬಲಹೀನರನ್ನು ನಡೆಸುವಾತನೇ ನಿಜವಾದ ಗುರು.

ಮೃತ್ಯುವನ್ನು ದಾಟಿದ, ಅಶಕ್ತತೆಯನ್ನು ಅರಿಯದ ತನ್ನನ್ನು ಅರಸುಕೊಂಡು ಬಂದವನಿಗೆ ತನ್ನಲ್ಲಿರುವುದೆಲ್ಲವನ್ನು ಕೊಡುವವ, ಎಂದೂ ಚಿಕ್ಕವನಾಗಿರದವನೇ ಗುರುವಾಗಿರುತ್ತಾನೆ. ದೊಡ್ಡದು ಎಂಬ ಕಲ್ಪನೆ ನಮ್ಮಲ್ಲಿ ಎಷ್ಟಿರುತ್ತದೆಯೋ ಅಷ್ಟರ ಮಟ್ಟಿಗೆ ಗುರುದರ್ಶನ.

ಗುರುವು ನಮಗೆ ದೊರೆತಿರಲಿಕ್ಕಿಲ್ಲ. ಆದರೆ ನಮ್ಮನ್ನು ಗಮನಿಸುತ್ತಲೇ ಇರುತ್ತಾನೆ. ನಮ್ಮ ಅನರ್ಹತೆ ಅವನ ದೂರಕ್ಕೆ ದೊಡ್ಡ ಕಾರಣ. ತಲೆ ಇದ್ದವರು ಗುರುವಿನ ಬಗ್ಗೆ ಗುಡ್ಡದೆತ್ತರ ಬರೆದಿದ್ದಾರೆ. ಕಂಡದ್ದು ಕಣ್ಣೊಳಗೆ. ಉಂಡದ್ದು ಮೈಯೊಳಗೆ ಹರಿಯುವುದು.

ಒಂದು ವಸ್ತು ಯಾವಾಗ ದೊಡ್ಡದಾಗುತ್ತದೆ? ಇತರರೊಡನೆ ಬೆರೆತಾಗ. ತನ್ನಂತೆ ಇರುವ ಇತರರನ್ನು ಮಾಡುವ ಶಕ್ತಿ ಇದ್ದ ವಸ್ತುವನ್ನು ನಾವು ಈ ಲೋಕದಲ್ಲಿ ದೊಡ್ಡದು ಎನ್ನುತ್ತೇವೆ. ಗುರುವು ಇಂಥವನು.
ಸಿಕ್ಕವರನ್ನು ತಲೆಯ ಮೇಲೆ ಹೇರಿಕೊಳ್ಳಲು ತನ್ನ ತಲೆ ಚಿಕ್ಕದು ಎಂದು ತಿಳಿದಿರಬೇಕು. ದೊಡ್ಡವರ ಕಾಲಿಗೆ ತಲೆ ಹಚ್ಚುವ ಮೃದುತನ ತನಗಿರಬೇಕು. ನಂಬಿಕೆ ಬೇಕು. ತನ್ನ ನಂಬಿಕೆ ತನ್ನನ್ನು ತಿಳಿ ಮಾಡುತ್ತಿರುವುದನ್ನು ತಿಳಿಯಬೇಕು.

ಎಲ್ಲವೂ ಎಲ್ಲರಿಗೆ ಬೇಡ ಎನ್ನುವುದು ಎಷ್ಟು ಕ್ರೂರವೋ, ತಾನು ಎಲ್ಲರಿಗೆ ಅಲ್ಲ, ಎಲ್ಲರಿಗೆ ಇಲ್ಲ ಎನ್ನುವನಿಗೆ ಎಲ್ಲ ದೊರೆಯುವುದೂ ಅಷ್ಟೇ ಅನ್ಯಾಯ , ಅಧರ್ಮ.

ನೋಡಿದರೆ ಕಂಡಂತಲ್ಲ. ನಡೆದರೂ ದಾರಿ ಸಾಗುವುದಿಲ್ಲ. ಕಣ್ಣು ಮುಚ್ಚಿದರೂ ತೋರುತ್ತದೆ. ನಿಂತರೂ ಸನಿಹವಾಗುತ್ತದೆ.

ನಡೆಯುವನಿಗೆ ಬಲವಿದ್ದಷ್ಟು ದಾರಿ. ಬೆಳೆವವನಿಗೆ ನೆಲವೆಲ್ಲಾ ಹೊಲವಿದ್ದಂತೆ.

ನಿಮ್ಮನ್ನು ನೀವು ಅಳೆದುಕೊಳ್ಳುವಾಗ ಬಹಳಷ್ಟು ಕಳೆದುಕೊಳ್ಳಬೇಕು. ಹೆಚ್ಚು ಕೆಳೆದುಕೊಂಡಾಗಲೇ ಮತ್ತಷ್ಟು ಕೂಡುತ್ತದೆ.


ದೃಷ್ಟಿ ಇರುವಷ್ಟು ಸೃಷ್ಟಿ.

ತನಗಿಂತ ದೊಡ್ಡದಿದ್ದುದಕ್ಕೆ ತನ್ನನ್ನು ಒಪ್ಪಿಸುವುದೇ ಇನ್ನೂ ದೊಡ್ಡದಾಗುವ ಒಳ್ಳೆಯ ದಾರಿ.

ನಿಮ್ಮ ಮನಸ್ಸು ವ್ಯಗ್ರವಾಗಿದ್ದರೆ ಅದು ಏಕಾಗ್ರವಾಗುವುದಿಲ್ಲ. ಮನಸ್ಸಿನ ಮೇಲೆ ಅಪ್ರಿಯವಾಗುವ ಘಟನೆಗಳನ್ನು ಹೇರಿ ಅದನ್ನು ದಣಿಸಿದರೆ, ಅದು ಏಕಾಗ್ರವಾಗಲು ಸಾಧ್ಯವೇ ಇಲ್ಲ.

ಕುರುಡುತನ, ಅಜ್ಞಾನಗಳು ಮನಸ್ಸನ್ನು ಬೆಳೆಸುವುದಿಲ್ಲ. ಬೆಳೆಯಲಾರದೆ ಮನಸ್ಸಿಗೆ ಏಕಾಗ್ರತೆ ಬರುವುದಿಲ್ಲ. ಆದ್ದರಿಂದ ಏನೇ ಮಾಡಿ ಮನಸ್ಸನ್ನು ಬೆಳೆಸಿರಿ. ದೊಡ್ಡದು ಮಾಡಿ. ಮನಸ್ಸು ಬೆಳೆಯಬೇಕಾದರೆ ಇನ್ನೊಬ್ಬರನ್ನು ಇನ್ನೊಂದನ್ನು ಪ್ರೀತಿಸಿರಿ. ಸಾಯುವರನ್ನು ಪ್ರೀತಿಸಿ ನೀವು ನಿತ್ಯ ಸಾವು ತಂದುಕೊಳ್ಳುತ್ತಿರಿ. ನೀವು ಪ್ರೀತಿಸುವರು ಸಾಯುವುದಿಲ್ಲ ಎಂಬ ಖಚಿತತೆ ನಿಮಗಿಲ್ಲದಿದ್ದರೆ ನೀವು ಮಾಡುವ ಪ್ರೀತಿಯೇ ಮರಣಾಧೀನವಾಗುತ್ತದೆ.

ಬೇಡಿದರೆ ಬೇಡಿಕೆಯ ಅಭ್ಯಾಸವಾಗುತ್ತದೆ. ಮನಸ್ಸಿನ ಹಲವು ಬಾಗಿಲು ತೆರೆದಿಡಿ. ಬರುವುದನ್ನು ಗಮನಿಸಿ. ಹೋಗುವುದಕ್ಕೆ ಲೆಕ್ಕವಿರಲಿ. ಕುದಿ ಎಸರು ಬರಬೇಕು, ಪರಿಪಾಕಕ್ಕೆ ಸಿದ್ಧರಾದರೆ ಸಾಕು.

ನಮ್ಮ ಮುಂದಿರುವ ದೊಡ್ಡ ಸಮಸ್ಯೆಯೆಂದರೆ ಮನಸ್ಸಿಗೆ ಏಕಾಗ್ರತೆ ಇಲ್ಲ ಎನ್ನುವುದು. 'ಏಕಾಗ್ರತೆ' ನಿಮಗೆ ಬೇಕಾಗಿದ್ದೇ ಬೇರೆ, ಸಿವುವುದೇ ಬೇರೆ.

ಆಡಂಬರ ಎನ್ನುವುದು ಬರಿ ಸಾಮಾಜಿಕ ಪ್ರದರ್ಶನದ ಯೋಗ್ಯತೆಯ ಮಾತು ಹೊರತು ಇನ್ನೇನೂ ಹೆಚ್ಚಿನ ಮಹತ್ವ, ಸತ್ವಗಳನ್ನು ಹೊಂದಿಲ್ಲ. ಅನೇಕ ಸಲ ನೀವು ಬಹಿರಂಗವಾಗಿ ಅಸಭ್ಯವಾಗಿ ನಡೆದುಕೊಳ್ಳುವುದಕ್ಕಿಂತ ಹೆಚ್ಚು ಅಸಭ್ಯತೆಯನ್ನು ಅಂತರಂಗದಲ್ಲಿ ಏಕಾಂತದಲ್ಲಿಯೇ ತೋರಿಸುತ್ತೀರಿ.

ನಿಮಗೆ ಇಂದ್ರಿಯಗಳಿವೆ. ಅವುಗಳಿಗೆ ಅವುಗಳದೇ ಆದ ಪ್ರಧಾನ ಉಂಟು. ನೀವು ಅವುಗಳ ಮೇಲೆ ಒತ್ತಾಯದಿಂದ ಸವಾರಿ ಮಾಡಿದರೆ ಅವು ಕೊಸರಿಕೊಂಡು ತಮ್ಮದೇ ದಾರಿ ಹಿಡಿಯುತ್ತವೆ. ಯಾವುದನ್ನೂ ನೀವು ನಿಮ್ಮನ್ನು ಕೊಟ್ಟುಕೊಳ್ಳದೆ ಪಡೆದು ಕೊಳ್ಳಲಾರಿರಿ.

ಧ್ಯಾನ ಸುಗಮವಾಗಿ ನಡೆಯದೇ ಇರಲಿಕ್ಕೆ ದೊಡ್ಡ ಪ್ರತಿಬಂಧ ನಾವು ಧ್ಯಾನ ಮಾಡಲೆಂದೇ ಕೂಡುವುದಾಗಿದೆ. ಧ್ಯಾನವೆಂದರೆ ಏನಾದರೂ ಮಾಡುವುದಲ್ಲ. ಏನೂ ಮಾಡದೇ ಇರುವುದು. ಬಿಟ್ಟು ಬಿಡಲು ಅಭ್ಯಾಸ ಮಾಡಬೇಕು.
ಧ್ಯಾನ ಎಂದರೆ ಶಾಂತಿ ಎಂದಾದರೆ, ಅದರಲ್ಲಿ ಮಾಡಬೇಕಾದದ್ದು ಏನೂ ಇರುವುದಿಲ್ಲ. ಏನಾದರೂ ಇದ್ದರೆ ಮಾಡುವುದನ್ನು ಬಿಟ್ಟುಕೊಡುವುದಿದೆ.

ಮೂಲಭೂತವಾಗಿ ನೀವು ಮರೆತದ್ದು ಧ್ಯಾನದ ಅಗತ್ಯತೆಯನ್ನು. ಧ್ಯಾನ ಹೊರಗಿನಿಂದ ಹೇರಿದ್ದಾಗಿದೆ. ನಿಮ್ಮ ಸ್ವಂತದ ಅಗತ್ಯವಾಗಿಲ್ಲ. ಅದಾಗದ ಹೊರತು ಧ್ಯಾನ ಧ್ಯಾನವಲ್ಲ, ಅದು ನಿಮಗೆ ನೀವು ನೀಡುವ ಶಿಕ್ಷೆ. ತನ್ನನ್ನು ತಾನು ಬರಿದು ಮಾಡಿಕೊಳ್ಲಲು ಬಾರದವನಿಗೆ ಧ್ಯಾನ ಬರುವುದೇ ಇಲ್ಲ.

ಸಾಧಕ ಯಾವಾಗಲೂ ತೇಲಬಾರದು, ಸೆಳೆತಕ್ಕೆ ಸಿಕ್ಕಬೇಕು. ಧ್ಯಾನದಲ್ಲಿ ತೇಲುವಿಕೆ ಅಷ್ಟೇ ಇದ್ದರೆ ಅದು ಅಸುಖ. ಧ್ಯಾನ ಸೆಳೆತವಾಗಬೇಕು. ನಾನು ದೊಡ್ಡದರಿಂದ ಸೆಳೆಯುವೆನು. ಇಲ್ಲವೆ ದೊಡ್ಡದರ ಗಮನ ಸೆಳೆಯುವ ಅಲ್ಪತೆಯುಳ್ಳವನು. ಇದು ನಿಮ್ಮ ಅನುಭವದಲ್ಲಿ ಬಂದಿದೆಯೋ, ಧ್ಯಾನಕ್ಕಾಗಿ ನಿಮಗೆ ಅರ್ಹತೆ ಇದೆ ಎಂಬುದು ಅರಿಯಿರಿ.

ಹೀಗೆ ಹತ್ತುಹಲವು ಸಾಲುಗಳನ್ನು ತಮ್ಮ ಕೃತಿಯಲ್ಲಿ ಪ್ರಸ್ತಾವಿಸಿ ಓದುಗನನ್ನು ತಮ್ಮ ಕೃತಿಯ ಜೊತೆಗೆ ಮನೋವಿಕಸನವನ್ನೂ ಮಾಡಿರುವ ಸತ್ಯಕಾಮರು ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ ಎಂದರೆ ಅತಿಶಯೋಕ್ತಿಯಾಗಲಾರದೇನೋ. ಇಲ್ಲಿ ಹಾಕಿರುವುದು ಕೇವಲ ಸ್ಯಾಂಪಲ್, ಇಡೀ ಪುಸ್ತಕವನ್ನೊಮ್ಮೆ ಓದಿ ನೋಡಿ. ಜೀವನವನ್ನು ನೋಡುವ ನಿಮ್ಮ ದೃಷ್ಟಿಕೋನವೇ ಬದಲಾದೀತು.

ಈ ಪುಸ್ತಕಕ್ಕೆ ಸಂಬಂಧಿಸಿದಂತೆ ನನ್ನ ಹಿಂದಿನ ಇನ್ನೆರೆಡು ಪೋಸ್ಟ್ಗಳ ಲಿಂಕ್ ಕೆಳಗೆ 👇 ಇದೆ. ಆಸಕ್ತರು ಓದಬಹುದು.

ಮುಗಿಯಿತು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ


"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...