Monday, February 19, 2018

"ಶಿಕಾರಿ"

ಭಾರತವು ಗ್ಲೋಬಲೀಕರಣಗೊಂಡ ನಂತರ ಹತ್ತು ಹಲವು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಯನ್ನು ಕಂಡಿತು. ಮುಖ್ಯವಾಗಿ ಅದುವರೆಗೂ ಕಂಡು ಕೇಳರಿಯದಿದ್ದ ಔದ್ಯೋಗೀಕರಣಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟ್ ಎಂಬ ಮಹಾದೈತ್ಯ ಬೆಳೆದು ನಿಂತ ಬಗೆ ಎಲ್ಲರಿಗೂ ಅಚ್ಚರಿ ತರುವಂಥದ್ದೇ ಆಗಿತ್ತು. ಹಾಗೆ ನೋಡಿದರೆ ಓದು ಮುಗಿಸಿ ಯಾವುದಾದರೂ ಒಂದು ಸರಕಾರಿ ಕೆಲಸ ಹಿಡಿದು ಜೀವನ ನಿಶ್ಚಯಿಸಿಕೊಂಡರೆ ಸಾಕೆನ್ನುವ ಮಹಾ ಸಂಧಿಕಾಲದಲ್ಲಿ ಕುಂಭದ್ರೋಣ ಮಳೆಯಂತೆ ಉದ್ಯೋಗದ ವರ್ಷಧಾರೆಯನ್ನೇ ಹರಿಸಿದ್ದು ಬೃಹತ್ತ್ ಕಾರ್ಪೊರೇಟ್ ಕಂಪನಿಗಳು ಬಂದ ಮೇಲೆಯೇ. ಒಳ್ಳೆಯದೇ ಆಯ್ತು. ಸರಕಾರಿ ಕೆಲಸ ಸಿಗದೇ ಇದ್ದರೂ ಪರವಾಗಿಲ್ಲ, ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಸಿಕ್ಕರೆ ಸಾಕು ಎಂದು ಹರಕೆ ಹೊತ್ತವರು ಅದೆಷ್ಟು ಲಕ್ಷಲಕ್ಷ ಮಂದಿಯೋ? ತಥಾಸ್ತು! ಎಂದು ಉಲ್ಕೆಯಂತೆ ಉದುರಿಬಿದ್ದದ್ದೇ ಕಾರ್ಪೊರೇಟ್ ವಲಯ.

ಅದು ಅವತರಿಸಿದ್ದೇ, ಬದುಕು ನಿಧಾನವಾಗಿ ಹಸನಾಗತೊಡಗಿತು. ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಲು ಬಲ ಬಂದಂತಾಯ್ತು. ಅರಳದೇ ಸೊಡರಿದ್ದ ಮುಖದಲ್ಲಿ ನಿರಾಳತೆ ಮನೆ ಮಾಡತೊಡಗಿತು. ಕೆಲಸವೆಂದರೆ ಸರಕಾರಿ ಕೆಲಸವೆನ್ನುವ ನಾಣ್ಣುಡಿ ತನ್ನ ಅರ್ಥ ಕಳೆದುಕೊಂಡು, ಖಾಸಗಿ ವಲಯದಲ್ಲೂ ಬದುಕಬಹುದೆನ್ನುವ ಭರವಸೆ ಮೂಡಿಸಿತು. ಹಾಳು ಬಿದ್ದ ಊರಿಗೆ ಉಳಿದವಳೇ ಪದ್ಮಾವತಿ ಎನ್ನುವ ಕಾಲದಲ್ಲಿ ಕಾರ್ಪೊರೇಟ್ ದೈತ್ಯ ಉದಯಿಸಿದ ನಂತರ ಸರಕಾರಿ ಕೆಲಸಕ್ಕೆ ಜೋತು ಬೀಳುವುದು ಇಳಿಮುಖವಾಗತೊಡಗಿತು ಎನ್ನುವುದು ಎಲ್ಲರಿಗೂ ತಿಳಿದುದೇ. ಪ್ರಮುಖವಾಗಿ ಮಂದಿ ಆರ್ಥಿಕವಾಗಿ ಸಧೃಡರಾಗತೊಡಗಿದರು. ಅತಿ ವಿರಳ, ಸಿರಿವಂತರು ಮಾತ್ರ ಉಪಯೋಗಿಸಬಹುದಾಗಿದ್ದ ಹಲವು ಸಾಧನಗಳು ಜನಸಾಮಾನ್ಯರ ಕೈಗೆ ಬರತೊಡಗಿತು. ಬದುಕು ಹುಲುಸಾಗಿ ನವಚೈತನ್ಯದತ್ತ ಟಿಸಿಲೊಡೆಯತೊಡಗಿತು.

ಕಾರ್ಪೋರೇಟ್ ದೈತ್ಯನ ಉದಯ ಬರೀ ಉದ್ಯೋಗ ಮತ್ತು ಆರ್ಥಿಕತೆಯಲ್ಲಿ ಸಧೃಢತೆಯನ್ನಷ್ಟೇ ಹೊತ್ತು ತರಲಿಲ್ಲ. ಮೊಸರಲ್ಲಿ ಕಲ್ಲಿನಂತೆ, ಸ್ವರದಲ್ಲಿ ಅಪಶ್ರುತಿಯಂತೆ ನಾನಾ ನಮೂನೆಯ ಕಷ್ಟಕಾರ್ಪಣ್ಯಗಳ ರಾಶಿ ರಾಶಿಯನ್ನೇ ತನ್ನೊಡನೆ ಹೊತ್ತು ಬಂದಿತು. ದಿನಗಳೆದಂತೆ ಹೊಸ ಹೊಸ ಸಮಸ್ಯೆಗಳು ಉದಯಿಸುತ್ತಲೇ ಹೋದವು. ಅಲ್ಲಿ ಕೆಲಸ ಮಾಡುವವರ ಜೀವನ ನಿರ್ಜೀವವಾಗುತ್ತಾ, ಸಂಬಂಧಗಳು ತನ್ನ ಮೂಲಭೂತ ಸ್ವರೂಪವನ್ನು ಕಳೆದುಕೊಂಡವು. ಉಸಿರುಗಟ್ಟಿಸುವ ಅಲ್ಲಿನ ಒತ್ತಡ, ಮಾನಸಿಕ ಹಿಂಸೆ, ಒಂದು ಕೈ ಜೋರಾಗಿಯೇ ನಡೆಯುವ ರಾಜಕೀಯ, ಸ್ವಹಿತಾಸಕ್ತಿ, ಗುಂಪುಗಾರಿಕೆ, ಪಕ್ಷಪಾತ, ರಾಕ್ಷಸ ಪ್ರವೃತ್ತಿ ಎಲ್ಲವೂ ಸೇರಿ ಆಸೆಯಿಂದ ಆಚೆ ನಿಂತು ನೋಡುವವರ ಕಣ್ಣಿಗೆ ಸೂಜಿಗಲ್ಲಿನಂತೆ ಸೆಳೆದರೂ ಕಾರ್ಪೊರೇಟ್ ಎಂಬ ಮದ್ದಾನೆ ಅಲ್ಲಿರುವರ ಪಾಲಿಗೆ ನರಕ ಸದೃಶವಾಗಿದೆ ಎನ್ನುವುದು ಸರ್ವವಿಧಿತ.

ಹಾಗೆ ಕಾರ್ಪೊರೇಟ್ ದೈತ್ಯನ ಒಡಲಲ್ಲಿ ನಡೆಯುವ ಒಳರಾಜಕೀಯಕ್ಕೆ ಗಾಳವಾಗಿ, ಪಿತೂರಿಗೆ ಬಲಿಪಶುವಾಗಿ, ಮಾಡದ ತಪ್ಪಿಗೆ ಸಮಿಧೆಯಾಗಿ, ಸಹೋದ್ಯೋಗಿಗಳ ಕುತಂತ್ರಕ್ಕೆ "ಶಿಕಾರಿ"ಯಾದವನೇ ನಾಗಪ್ಪ. ಈ ಕಥೆಯ ನಾಯಕ.

ಕೆಮಿಕಲ್ ಕಂಪನಿಯಲ್ಲಿ ಸಣ್ಣ ಹುದ್ದೆಗೆ ಸೇರಿದ ನಾಗಪ್ಪ
ತನ್ನ ಬುದ್ದಿ ಬಲ ಮತ್ತು ಕೌಶಲ್ಯದಿಂದ ಆರ್ ಅಂಡ್ ಡಿ ಮ್ಯಾನೇಜರ್ ಆಗಿರುತ್ತಾನೆ. ಈತನ ಬಾಸ್ ಗೆ ನಾಗಪ್ಪನನ್ನು ಕಂಡರೆ ಉರಿ. ಸುಮಾರು ಆರು ತಿಂಗಳ ಹಿಂದೆ ನಡೆದ ಫ್ಯಾಕ್ಟರಿಯಲ್ಲಿನ ಒಂದು ಅವಘಡಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣವನ್ನು ನೀಡದೆ, ನಾಗಪ್ಪನಿಗೂ ಇಂತಹುದೇ ಕಾರಣ ಎಂದು ತಿಳಿಸದೆ ಆತನನ್ನು ಕೆಲಸದಿಂದ ಅಮಾನತ್ತಿನಲ್ಲಿಡಲಾಗುತ್ತದೆ. ಪಾಪ! ಕಾರಣವೇ ತಿಳಿಯದೆ ಅಮಾನತ್ತಿನ ಶಿಕ್ಷೆಯನ್ನು ಅನುಭವಿಸುವ ಕಾಲದಲ್ಲಿ ನಾಗಪ್ಪನ ಮನಸ್ಸಿನಲ್ಲಾಗುವ ತುಮುಲ ತಲ್ಲಣಗಳು, ಮಿಂಚಿ ಮರೆಯಾಗುವ ಹಳೆಯ ನೆನಪುಗಳು, ಎದೆಯಾಳದಿಂದೆದ್ದು ಬರುವ ನೋವುಗಳು, ತನ್ನ ಸುತ್ತಲ ಪರಿಸರ ತನ್ನನ್ನು ನೋಡುವ ರೀತಿ, ಜೊತೆಗೆ ತನ್ನ ಬಾಲ್ಯದಲ್ಲಾದ ಕಹಿ ನೆನಪುಗಳು, ತನ್ನ ತಂದೆ ನಾಗಪ್ಪನಿಗೆ ಬೆಂಕಿ ಹಚ್ಚಿದ್ದು, ತಂಗಿಯನ್ನು ಸಂತೆಯಲ್ಲೆಲ್ಲೋ ಬೇಕಂತಲೇ ಮರೆತು ಬಿಟ್ಟು ಬಂದದ್ದು, ತನ್ನ ಅಣ್ಣ ಹೇಳದೇ ಕೇಳದೇ ಮನೆ ಬಿಟ್ಟು ಹೋದದ್ದು, ಕೊನೆಗೆ ಏನೂ ಮಾಡಲಾಗದ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು.. ಎಲ್ಲವೂ ಸೇರಿ ಆತನನ್ನು ಶಿಕಾರಿಯಡತೊಡಗುತ್ತವೆ. ಇದೆಲ್ಲ ಒಪ್ಪಓರಣವೇ "ಶಿಕಾರಿ".

ಕೆಲಸವಿಲ್ಲದೆ ಕಾಲ ಕಳೆಯುವಾಗಿನ ನಾಗಪ್ಪನ ಮನಸ್ಥಿತಿ ಕೇವಲ ಅಂತರ್ಗತವಾಗಿರುವ ಹತಾಶೆಯ ಸ್ಥಿತಿಯಲ್ಲ. ಅಲ್ಲಿ ಉಕ್ಕಿ ಬರುವ ಕಡಲ ಅಲೆಯಂತೆ ಶಾಂತವೂ, ಧುಮ್ಮಿಕ್ಕಿ ಕುಣಿಯುವ ಭಾವನೆಗಳ ಮೆಲೋಗರವೂ ಇದೆ. ಆತನ ತುಮುಲ ತಲ್ಲಣಗಳು ಕೇವಲ ಮಾತಿನಲ್ಲಿ ವಿವರಿಸಲಾಗದಷ್ಟು ಆಳಕ್ಕಿವೆ. ಹೂ ಮಾರುವ ಬಡ ಹುಡುಗಿಯನ್ನು ನೋಡಿದಾಗ ವಿನಾಕಾರಣ ಪುಟಿದೆದ್ದು ಬರುವ ಮನಸ್ಸು, ತನ್ನ ಹಳೆಯ ಖಾಸಾ ಗೆಳೆಯರನ್ನು ನೆನೆದಾಗ ಅಷ್ಟೇ ವ್ಯಗ್ರವಾಗುತ್ತದೆ. ಅದು ಅವರ ಮೇಲಿನ ಕೋಪವಲ್ಲ, ಹಾಗಂತ ಕಾರಬೇಕೆಂದುಕೊಂಡಿದ್ದರೂ ಕಾರಲಾಗದ ಹಗೆತನವಲ್ಲ. ತನ್ನಲ್ಲೇ ಹುಟ್ಟಿ ಬಂದಿರುವ ನಿಸ್ತೇಜತೆ. ಎದುರಿಸುವ ಸಾಮರ್ಥ್ಯವಿದ್ದರೂ ಎದುರಿಸಲಾಗದ ತನ್ನ ಅಶಕ್ತತೆ. ಮನಸ್ಸು ಸದಾಕಾಲ ಸ್ವಗತ. ತನ್ನ ಯೋಚನೆಗಳು ತನ್ನನ್ನೇ ಅಮುಕಿ ಉಸಿರುಗಟ್ಟಿಸುವ ಬಿಗಿ ವಾತಾವರಣ. ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯತನವಿದೆ, ಆದರೆ ಅರಿವಿಗೆ ಬರುವ ಮೊದಲೇ ಬಣ್ಣ ಬದಲಾಯಿಸುತ್ತಿದೆ. ಯಾಕೆ ಹೀಗೆ? ಬಹುಶಃ ತಾನು ಇತರರನ್ನು ಅರಿತಿರುವ ರೀತಿಯೇ ಇದಕ್ಕೆ ಕಾರಣವಿರಬಹುದೇ? ಅಥವಾ ನನ್ನಲ್ಲೇ ಏನಾದರೂ ಕೊರೆತೆಯಿದೆಯೇ? ಇರಬಹುದು, ಇಲ್ಲದೆಯೂ ಇರಬಹುದು.

ಕಳೆದು ಹೋದ ಬಾಲ್ಯದ ನನ್ನ ತಂಗಿ ರಂಗುರಂಗಾಗಿ ಸಂಜೆಯಾಗುತ್ತಿದ್ದಂತೆ ನವವಧುವಿನ ರೂಪ ಧರಿಸುವ ಮುಂಬೈನ ಸೂಳೆಗಾರಿಕೆಯಲ್ಲಿ ಸಿಲುಕಿಕೊಂಡು ಯಾವುದೋ ಗಂಡಸಿಗೆ ಈ ಹೊತ್ತಿನಲ್ಲಿ ಸೆರಗು ಹಾಸಿರಬಹುದಾ? ಮನೆ ಬಿಟ್ಟು ಓಡಿ ಹೋದ ಅಣ್ಣ ಇದೇ ಮುಂಬೈನ ಯಾವುದೋ ಮೂಲೆಯ ಯಾವುದೋ ಗಲ್ಲಿಯ ಮುರುಕು ರಸ್ತೆಯಲ್ಲಿ ನಡೆದುಹೋಗುವಾಗ ರಪ್ಪನೆ ಪ್ರತ್ಯಕ್ಷವಾಗಬಹುದಾ? ಇಬ್ಬರೂ ಕೈತಪ್ಪಿ ಹೋದರು. ಕಾರಣ ಅಪ್ಪ. ತಾನು ಏತಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ. ಆತ ಬದುಕಲಿಲ್ಲ, ನಮ್ಮನ್ನು ಬದುಕಲು ಬಿಡಲಿಲ್ಲ. ಎತ್ತಲಿಂದಲೋ ಗಾಳಿಯಲ್ಲಿ ಬೀಸಿ ಬಂದ ತಣ್ಣನೆಯ ಮಾರುತದಲ್ಲಿನ ಹಸಿ ಹವೆಯಿಂದ ಹರಿದು ಬಂದ ಉಪ್ಪು ನೀರಾಗಿ ಈ ಮುಂಬೈನ ಕಡಲಲ್ಲಿ ಸೇರಿಹೋಯಿತು ನನ್ನ ಬಾಳು. ಇಲ್ಲಿ ಮಿತ್ರರೆಂದುಕೊಂಡಿದ್ದವರು ಮಿತ್ರರಲ್ಲ, ಶತ್ರುಗಳೂ ಅಲ್ಲ. ಎಲ್ಲರೂ ಒಂದೇ. ನಾನು ಮಾತ್ರ ಅವರನ್ನು ನೋಡುವ ರೀತಿ ಬೇರೆ. ಅಕಸ್ಮಾತ್ತ್ ಕೆಲಸ ಹೋದರೆ ಗತಿಯೇನು? ಚಿಂತೆಯಿಲ್ಲ. ರದ್ದಿ ಪೇಪರ್ ಅಂಗಡಿಯೋ, ಟೆಲಿಫೋನ್ ಬೂತೋ ದುಖಾನ್ ಇದ್ದೇ ಇದೆಯೆಲ್ಲಾ ಜೀವನ ನಡೆಸಲಿಕ್ಕೆ! ಯಾರ ಹಂಗೂ ನನಗಿಲ್ಲ. ಸಮಾಜ ಏನಂದುಕೊಳ್ಳುವುದೋ ಎನ್ನುವ ಭೀತಿಯಿಲ್ಲ. ಯಾರೂ ನನಗಾಗಿ ಇಲ್ಲಿ ಮಿಡಿಯುವರು ಇಲ್ಲದಿರುವಾಗ ನಾನೇಕೆ ಕರಗಬೇಕು? ಆದರೂ ನೆನೆಸಿಕೊಂಡರೆ ಅವ್ಯಕ್ತ ಭಯವಾಗುತ್ತದೆ.

ನನಗೆ ಸ್ಪಷ್ಟನೆಯೇ ಸಿಗದೆ ಅಮಾನತ್ತಿನಲ್ಲಿಡಲು ಕಾರಣವೇನು? ಎಂದು ಯೋಚಿಸುತ್ತಿದ್ದ ನಾಗಪ್ಪನಿಗೆ ತನ್ನ ಕಚೇರಿಯಿಂದ ಪತ್ರ ಬರುತ್ತದೆ. ಹಿಂದೆ ನಡೆದ ಅವಘಡಕ್ಕೆ ಸಂಬಂಧಿಸಿದಂತೆ ತನ್ನನ್ನು ಅಮಾನತ್ತಿನಲ್ಲಿಡಲಾಗಿದೆ ಎಂದೂ, ವಿಚಾರಣೆ ನಡೆಸಿದ ಮೇಲೆ ಕೆಲಸಕ್ಕೆ ಸೂಕ್ತವೆನಿಸಿದ್ದಲ್ಲಿ ತೆಗೆದುಕೊಳ್ಳಲಾಗುವುದೂ ಎಂದು ಅದರಲ್ಲಿ ವಿವರಿಸಲಾಗಿರುತ್ತದೆ. ಇದೆಲ್ಲಾ ತನ್ನ ಮೇಲಧಿಕಾರಿಯದೇ ಕಿತಾಪತಿಯೆಂದು ನಾಗಪ್ಪನಿಗೆ ಅರಿವು ಬರುವುದರ ಜೊತೆ, ತನ್ನಲ್ಲಿರುವ ಸತ್ಯಪರತೆ ತನ್ನನ್ನು ಕಾಯುವುದು ಎಂದು ಅನಿಸಿದಾಗಲೂ ಮನಸ್ಸು ವಿನಾಕಾರಣ ಆತಂಕಕ್ಕೆ ಬಿದ್ದಾಗಲೂ, ವಿಚಾರಣೆಗೆಂದು ಊರಿಂದೂರಿಗೆ ಸುತ್ತಿಸಿದರೂ, ಇದು ಯಾರೋ ತನ್ನನ್ನು ಕೆಡವಲು ಹೂಡಿರುವ ಶಿಕಾರಿ ತಂತ್ರವೆಂದು ತಿಳಿದ ಮೇಲೂ ಮನಸ್ಸು ಸ್ಥಿಮಿತಕ್ಕೆ ಬರುವುದಿಲ್ಲ. ಯಾರೋ ತನ್ನನ್ನು, ತನ್ನ ಮನಸ್ಸಿನಲ್ಲುಂಟಾಗುತ್ತಿರುವ ಭಾವನೆಗಳನ್ನು ನಿಯಂತ್ರಿಸಿದಂತೆ ಅನಿಸುತ್ತದೆ. ಕೆಲಸ ಬಿಟ್ಟು ನಾನು ಹವ್ಯಾಸವಾಗಿರಿಸಿಕೊಂಡ ನನ್ನ ಓದು, ಬರವಣಿಗೆ, ಸಾಹಿತ್ಯ, ಲೇಖಕ ಎನ್ನುವ ಹಣೆಪಟ್ಟಿ ತನ್ನ ಈಗಿನ ಸ್ಥಿತಿಗೆ ಕಾರಣವಾಗಿದೆಯೇ? ನಾನು ಎಂದೋ ಬರೆದಿದ್ದ ನನ್ನ ಸ್ನೇಹಿತನ ತಾಯಿಯ ಕುರಿತ ಕಥೆಯೇ ಆತನನ್ನು ಕೆರಳಿಸಿರಬಹುದೇ? ಅಥವಾ ನಾನೀಗ ಬರೆಯಹೊರಟಿರುವ ಹೊಸ ಕಾದಂಬರಿ ಆ ಸ್ನೇಹಿತ ತನ್ನ ಹಳೆಯ ಸಂಗಾತಿಯೊಬ್ಬಳಿಗೆ ಮಾಡಿದ ಮೋಸದ ಕುರಿತಾಗಿರಬಹುದೆನ್ನುವ ಅನುಮಾನ ಆತನಿಗೆ ಬಂದು, ಅವನೂ ಈ ಷಡ್ಯಂತ್ರದಲ್ಲಿ ಭಾಗಿಯಾಗಿರಬಹುದೇ? ನನ್ನ ವಿರುದ್ಧ ನಡೆಯುತ್ತಿರುವ ಸಂಚಿನಲ್ಲಿ ನನಗೇ ತಿಳಿಯದ ಹತ್ತು ಹಲವು ಕೈಗಳು ಒಂದಾಗಿ ನನ್ನ ವಿರುದ್ಧ ಶಿಕಾರಿ ಮಾಡುತ್ತಿರಬಹುದೇ? ಯಾರು ಯಾರಿಗೆ ಶಿಕಾರಿ? ಅವರು ಹೆಣೆದ ಬಲೆಯಲ್ಲಿ ನಾನೋ? ನನ್ನ ಮನಃಪಲ್ಲಟದ ಮೇಲೆ ಕ್ಷಣಕ್ಷಣಕ್ಕೂ ಗಲಭೆಯೊಡ್ಡುತ್ತಾ, ರೋಧ ಪ್ರತಿರೋಧವನ್ನು ಲೆಕ್ಕಿಸದೆ ಕೋಲಾಹಲವೆಬ್ಬಿಸುತ್ತಿರುವ ನನ್ನ ಮನಸ್ಸಿಗೆ ನಾನು ಶಿಕಾರಿಯೋ?

.....ಹೀಗೆ ಸಾಗುತ್ತದೆ ನಾಗಪ್ಪನ ಅಂತರಾಳ. ತನ್ನ ವಿರುದ್ಧ ನಡೆದಿರುವ ಆರೋಪದಲ್ಲಿ ತಾನು ನಿರಪರಾಧಿ ಎಂದು ಸಾಬೀತು ಪಡಿಸುವ ಹಲವು ಜನ ನಾಗಪ್ಪನಿಗೆ ಹಲವು ನಿಗೂಡ ರೀತಿಯಲ್ಲಿ ಭೇಟಿಯಾಗಿ, ಮಾಹಿತಿ ನೀಡಿ, ಧೈರ್ಯ ತುಂಬುವ ಕೆಲಸ ಮಾಡಿರುತ್ತಾರೆ. ತನ್ನ ಪರವಾಗಿಯೂ ನಿಲ್ಲುವ ಜೀವವಿದೆ ಎಂದು ನಾಗಪ್ಪನಿಗೆ ಆಶ್ಚರ್ಯ ಬೆರೆತ ಸಂತೋಷವಾಗುತ್ತದೆ. ಕೊನೆಗೆ ವಿಚಾರಣೆ ಆರಂಭವಾಗಲು ತನ್ನ ವಾದವನ್ನು ಮಂಡಿಸಿ ತಾನು ನಿರಪರಾಧಿ ಎಂದು ಸಾಬೀತು ಪಡಿಸಲು ಹೊರಟ ನಾಗಪ್ಪನಿಗೆ ಮುಂದೇನು ಕಾದಿತ್ತು? ತಾನು ಅದರಲ್ಲಿ ಗೆದ್ದನೇ? ಕೆಲಸಕ್ಕೆ ಮರಳಿ ವಾಪಸ್ ಆದನೇ? ಆತನ ನಿಲುವುಗಳೇನಾಗಿತ್ತು? ನಿರ್ಧಾರಗಳೇನಿತ್ತು? ಈಗಿರುವ ಮ್ಯಾನೇಜರ್ ಪೋಸ್ಟ್ ಗಿಂತಲೂ ಉತ್ತಮ ಅವಕಾಶ ಬಂದಾಗ ನಾಗಪ್ಪ ಏನು ಮಾಡಿದ? ತನ್ನೆದೆ ಅಂತರಾಳದಲ್ಲಿ ಪ್ರೀತಿಸುತ್ತಿದ್ದ ಹುಡುಗಿಗೆ ಆತನು ಅದನ್ನು ನಿವೇದಿಸಿಕೊಂಡನೇ? ತನ್ನನ್ನು ಶಿಕಾರಿ ಮಾಡುತ್ತಿದ್ದವರು ಯಾರು? ಅವರನ್ನು ಬಲಿ ಹಾಕಿದನೇ? ಅಥವಾ ತಾನೇ ಅವರಿಗೆ ಶಿಕಾರಿಯಾಗಿಬಿಟ್ಟನೇ? ಯಾರು ಯಾರಿಗೆ ಶಿಕಾರಿ? ಅವರೇ ಎಬ್ಬಿಸಿದ ಕ್ಷೋಭೆಗೋ ಇಲ್ಲವೆ ನನ್ನಲ್ಲೇ ಇರುವ ದ್ವಂಧ್ವಕ್ಕೋ? ಅವರ ಅಸಲಿಯತ್ತು ಏನು? ಅದನ್ನು ಹೊರಗೆಡವಿದನೇ?......ಕ್ಷಮಿಸಿ, ಅದನ್ನು ನೀವು ಕಾದಂಬರಿ ಓದಿಯೇ ತಿಳಿಯಬೇಕು.

ಸುಮಾರು ಇನ್ನೂರು ಚಿಲ್ಲರೆ ಪುಟದವರೆಗೂ ಭಾವನೆಗಳ ಲೋಕದಲ್ಲಿ, ಸ್ವಗತದಲ್ಲಿ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಗುವ ಕಾದಂಬರಿ ಕೊನೆಯ ಐವತ್ತು ಅರವತ್ತು ಪುಟಗಳಲ್ಲಿ ಇದ್ದಕ್ಕಿದ್ದಂತೆ ತನ್ನ ವೇಗ ಹೆಚ್ಚಿಸಿಕೊಳ್ಳುತ್ತದೆ. ಪ್ರತಿ ಪದವೂ, ಸಾಲುಗಳು, ಪುಟಗಳು ನಾಗಪ್ಪನ ಮನಸ್ಸಿನ ಉದ್ವೇಗಕ್ಕಿಂತ ಹೆಚ್ವಿನ ಕುತೂಹಲ ಬೆರೆತ ರಭಸದೊಂದಿಗೆ ಸಾಗುತ್ತದೆ. ಕೊನೆಗೂ ಓದಿ ಮುಗಿಸಿದಾಗ ನಾಗಪ್ಪನಿಗೆ ಹೇಗೆ ಬಿಡುವು ಸಿಕ್ಕೀತೋ ಹಾಗೆ ನಿರುಮ್ಮಳ ಭಾವ ಓದುಗನನ್ನು ಆವರಿಸುತ್ತದೆ. ಎಲ್ಲೋ ಒಂದು ಕಡೆ ನಾಗಪ್ಪನ ನಿಲುವು ತಟಸ್ಥವೆನಿಸಿದರೂ, ಅದನ್ನೂ ಮೀರಿ ತನ್ನ ಬದುಕಿನ ಹಂಬಲವಾಗಿದ್ದ, ತನ್ನೊಳಗೆ ಅಡಗಿ ಕುಳಿತಿದ್ದ ಅತ್ಯಂತ ಮಹತ್ತರ ನಿರ್ಧಾರವನ್ನು ಪ್ರಕಟಿಸಿದಾಗ, ಆತ ಆ ಗಮ್ಯದೆಡೆ ನಡೆಯ ಹೊರಟಾಗ, ನಾಗಪ್ಪನ ಆ ಕ್ಷಣದ ಮನಸ್ಸಿನಂತೆಯೇ ನಮ್ಮ ಮನಸ್ಸೂ ಆತ ತೆಗೆದುಕೊಂಡ ನಿರ್ಧಾರಕ್ಕೆ ಅಷ್ಟೇ ತಟಸ್ಥವಾಗಿ ಸಮ್ಮತಿಸುತ್ತದೆ. ನಿರ್ಲಿಪ್ತತೆ ಹೇಗೆ ನಾಗಪ್ಪನನ್ನು ಕಾಡಿತ್ತೋ ಅದರಿಂದ ಇಬ್ಬರಿಗೂ ಬಿಡುಗಡೆ ಸಿಗುತ್ತದೆ.

ಯಶವಂತ ಚಿತ್ತಾಲರು ತಮ್ಮ ಲೇಖನಿಯನ್ನು ಅರಳಿಸಿರುವ ಬಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಅಭೂತಪೂರ್ವವಾದುದು. ಏಕೆಂದರೆ 1970ರ ದಶಕದಲ್ಲೇ ಇಂತಹ ಕಾದಂಬರಿಯನ್ನು ಸೃಷ್ಟಿಸಿದ್ದಾರೆ. ಈಗಿನಂತೆ ಕಾರ್ಪೋರೇಟ್ ಕಂಪನಿಗಳ ಹಣೆಬರಹ, ಅದರ ತಿಕ್ಕಲುತನ ಅಷ್ಟಾಗಿ ಇಲ್ಲದಿರುವಾಗಲೇ ಚಿತ್ತಾಲರು ಎಲ್ಲವನ್ನೂ ಸಮಗ್ರವಾಗಿಸಿ ಇಂತಹದೊಂದು ಕಾದಂಬರಿ ಬರೆದಿದ್ದಾರೆ ಎಂದರೆ ಅವರ ಸಾಹಿತ್ಯ ದೃಷ್ಟಿಕೋನ ಹೇಗಿತ್ತೆಂಬುದನ್ನು ಊಹಿಸಬಹುದು.

ಇಲ್ಲಿ ಬಳಸಿರುವ ಭಾಷಾಪ್ರಯೋಗ ಸುಲಭವಾಗಿ ಅರ್ಥವಾಗುವಂತೆ ಇದ್ದರೂ, ಇತರೆ ಕಾದಂಬರಿಯಲ್ಲಿರುವಂತೆ ಕಥಾ ವಿಸ್ತೀರ್ಣದಲ್ಲಿ ಹಲವು ಪಾತ್ರಗಳು ಇರದೇ ಇರುವುದರಿಂದ ಮತ್ತು ಭಾಗಶಃ ಪ್ರತಿ ಪುಟದಲ್ಲೂ ನಾಗಪ್ಪನ ಸ್ವಗತವೇ, ಆತನ ಅನಿಸಿಕೆಗಳೇ, ಅಂತರಂಗವೇ ರಾರಾಜಿಸಿರುವುದರಿಂದ, ದಯವಿಟ್ಟು, ಒಂದೇ ಗುಕ್ಕಿನಲ್ಲಿ ಇದನ್ನು ಓದ ಬೇಡಿ. ಒಂದು ಏಟಿಗೆ, ಪಟ್ಟಿಗೆ ಸಿಗುವ ಕಾದಂಬರಿಯಲ್ಲ ಇದು. ಅನುಕೂಲಕ್ಕೆ ತಕ್ಕಂತೆ ವಿರಾಮವಾಗಿ ಓದಿದರೆ ಕಾದಂಬರಿಯನ್ನು ಅಸ್ವಾದಿಸುತ್ತಾ ಓದಬಹುದು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ.




No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...