Tuesday, January 23, 2018

ಸತ್ಯಕಾಮರ "ತಂತ್ರಯೋನಿ" - ಬರಹ ೧ 

ಈ ಮಾಟ, ಮಂತ್ರ, ವಶೀಕರಣ, ಸ್ಥಂಬನ, ಪ್ರಚೋದನೆ, ಕ್ಷುದ್ರತೆ, ತಂತ್ರ ಇನ್ನೂ ಹಲವು ಸಂಗತಿಗಳ ಬಗ್ಗೆ ನಮಗೆ ಗೊತ್ತಿರುವ ರೋಚಕ ಕಥೆಗಳು, ರೋಮಾಂಚನಗೊಳಿಸೋ ಅದರ ಕಲ್ಪನೆಗಳು, ಭಯ ಹುಟ್ಟಿಸೋ ತಾಂತ್ರಿಕರ ಆಚಾರ ವಿಚಾರ, ಅವರ ನಡೆನುಡಿ ಪದ್ಧತಿ, ಅಗೋಚರ ಜೀವನ.. ಎಲ್ಲವೂ ಬೆರಗು ಮೂಡಿಸುವಂತದ್ದೇ ಆಗಿದೆ. ಸಾಮಾನ್ಯ ಜನರಲ್ಲಿ ತಂತ್ರದ ಬಗ್ಗೆ, ತಾಂತ್ರಿಕರ ಬಗ್ಗೆ ನಂಬಿಕೆಗಿಂತ ಅಪನಂಬಿಕೆಗಳೇ ಹೆಚ್ಚು. ಅನುಭವಕ್ಕೆ ಬಾರದ, ತಿಳುವಳಿಕೆಗೆ ಎಟುಕದ ಈ ತಂತ್ರದ ಬಗ್ಗೆ ಜನರಲ್ಲಿ ಅನುಮಾನಗಳಿವೆ. ತಾಂತ್ರಿಕನನ್ನು ನೋಡುವ ರೀತಿಯೇ ಬೇರಿದೆ. ತಂತ್ರ ಕೂಡ ನಮ್ಮ ನಡುವೆ ನಡೆಯುವ ಸಾಮಾನ್ಯ ಸಂಗತಿಯಲ್ಲವೇನು? ಕೇವಲ ವೇದಪುರಾಣಗಳಿಗೆ ಶಾಸ್ತ್ರ ಮನ್ನಣೆ ನೀಡಿ, ವೇದಕಾಲದಿಂದಲೂ ಅದರ ಒಂದು ಭಾಗವಾಗಿರುವ, ಸಮಸ್ತವನ್ನೂ ತನ್ನೊಳಗೆ ಅಡಗಿಸಿಕೊಂಡಿರುವ ತಂತ್ರಕ್ಕೇಕೆ ಅಮಾನ್ಯತೆ? ಇಷ್ಟಕ್ಕೂ ತಂತ್ರ ಎಂದರೇನು? ತಾಂತ್ರಿಕರು ಯಾರು? ತಾಂತ್ರಿಕ ಲೋಕ ಹೇಗಿರುತ್ತದೆ? ಹೇಗಿರಬೇಕು? ಹೀಗೆ ಹತ್ತು ಹಲವು ನಮಗೆ ತಿಳಿಯದ ತಂತ್ರಲೋಕದ ಬಗ್ಗೆ ಪರಿಚಯ ಮಾಡಿಕೊಡುವ ಕೃತಿಯೇ ಸತ್ಯಕಾಮರು ಬರೆದ "ತಂತ್ರಯೋನಿ".

ಹೆಸರೇ ಸೂಚಿಸುವಂತೆ ಇದು ತಂತ್ರಕ್ಕೆ ಸಂಬಂಧಿಸಿದ್ದು. ಬರೆದ ಎಲ್ಲವನ್ನೂ ಹೇಗೆ ಹೇಳಲಾಗುವುದಿಲ್ಲವೋ ಹಾಗೆ ಇದನ್ನು ಒಂದು ನಿಟ್ಟಿನಲ್ಲಿ ಹಿಡಿದಿಡಲಾಗುವುದಿಲ್ಲ. ಇದರ ಬಗ್ಗೆ ಬಹಳ ವಿಸ್ತ್ರುತವಾಗಿ ಚರ್ಚಿಸಿದ್ದಾರೆ ಸತ್ಯಕಾಮರು. ಓರೆ ಹಚ್ಚಿ ತಮ್ಮ ಅನುಭವವನ್ನು ಧಾರೆ ಎರೆದು ಅಕ್ಷರ ರೂಪಕ್ಕಿಳಿಸಿದ್ದಾರೆ. ಅದನ್ನು "ಹೀಗೇ", "ಇಷ್ಟೇ" ಎಂದು ಫಾರ್ಮಾನು ಹೊರಡಿಸಲು "ನಮಗೆ" ಅನುಭವ ಸಾಲದು. ಆದರೂ ಕೈಗೆಟುಕಿದ್ದಷ್ಟು, ಬುದ್ದಿ ತಲೆಯೊಳಗೆ ಹೊಕ್ಕಷ್ಟು ಅವರದೇ ಅಧ್ಯಾಯಗಳನ್ನಿಲ್ಲಿ, ಅವರದೇ ಮಾತುಗಳಲ್ಲಿ ಸಂಕ್ಷಿಪ್ತವಾಗಿ ಹೇಳುವ ಪ್ರಯತ್ನ ಮಾಡಿರುವೆ. ಇದರಲ್ಲಿ ಮೂಲ ಕೃತಿಗೂ ನನ್ನ ಅಭಿಪ್ರಾಯಕ್ಕೂ ಅಭಾಸವುಂಟಾದಲ್ಲಿ ಅದರ ನೇರ ಹೊಣೆ ನನ್ನದೇ. ಪ್ರಸ್ತುತಪಡಿಸುವ ಇಲ್ಲವೇ, ನಾನು ಪರಿಭಾವಿಸಿದ ರೀತಿ ದೋಷವುಳ್ಳದ್ದೆಂದು ಅಂಗೀಕರಿಸುವೆ. ಇದರ ವ್ಯಾಪ್ತಿ ದೊಡ್ಡದು. ಆದ್ದರಿಂದ ಈ ಪ್ರಯತ್ನ ಎರಡು ಮೂರು ಭಾಗಗಳಾಗಿ ಬರುತ್ತದೆ.


"ತಂತ್ರ ಎಂದರೆ ಏನು?"
ತಂತ್ರವೆಂದರೆ ಏನೂ ಅಲ್ಲ, ಬೇರೆಲ್ಲೋ ಅಡಗಿರುವುದಲ್ಲ. ಪ್ರತಿ ಅಣುರೇಣುವಲ್ಲೂ ಸುಪ್ತವಾಗಿ ಅಡಗಿ ಕುಳಿತಿರುವ ಸಾಧನ. ಮಗು ಅತ್ತಾಗ ತಾಯಿ ಮೊಲೆಯೂಡಿಸುವುದು, ಅರಳುವ ಹೂವಿನಲ್ಲಿ ಜೇನು ತುಂಬಿ ಕಣ್ಣ್ಮನ ತಣಿಸುವುದು, ಸೂರ್ಯಚಂದ್ರರ ಆಗಮನ ನಿರ್ಗಮನ, ಸೃಷ್ಟಿಯ ನಿರಂತತೆ, ಪ್ರಕೃತಿಯ ಚೆಲುವು, ಸಾಗರದ ಭೋರ್ಗರೆತ..ಹೀಗೆ ಎಲ್ಲದರಲ್ಲೂ ಅಡಗಿ ಕುಳಿತಿರುವುದು ತಂತ್ರವಲ್ಲದೇ ಮತ್ತಿನ್ನೇನು? ನಮ್ಮ ಪ್ರತಿ ಆಲೋಚನೆಯಲ್ಲಿ, ಮಾಡುವ ಕೆಲಸದಲ್ಲಿ ಹೆಜ್ಜೆಹೆಜ್ಜೆಗು ಒಡಮೂಡುವುದು ತಂತ್ರವೇ. ಅದು ಅರಿವಿಗೆ ಬರುವ ಮುನ್ನ ಅಘೋಚರ, ಅನುಭವಕ್ಕೆ ಬಂದರೆ ದೇವರು, ಅನುಭವವನ್ನೂ೨ ಮೀರಿದ ತಿಳುವಳಿಕೆ ಅದು - ತಂತ್ರ. ನಡೆಯುವ ಕಾಲು ಎಡವಬಲ್ಲದೇ ಎನ್ನುವುದು ಆಲೋಚನೆಯಾದರೂ ಅದು ತಂತ್ರದ ಇನ್ನೊಂದು ಮಗ್ಗುಲೇ. ಮಾಡುವ ಕಾಯಕ ನಿಶ್ಚಿತವಾದರು ಅದನ್ನು ಮುನ್ನಡೆಸುವುದು ತಂತ್ರವೇ. ನಿರ್ಧಾರ ಪ್ರತಿಫಲಿಸಿದರು ಅದಕ್ಕೆ ಮನಸ್ಸಿನ ಒಡಂಬಡಿಕೆಯ ತಂತ್ರವೇ ಕಾರಣ. ತಂತ್ರವಿಲ್ಲದೆ ಲೋಕವಿಲ್ಲ, ಲೋಕದ ಎಲ್ಲರಿಗೂ ತಂತ್ರ ತಿಳಿಯುವುದಿಲ್ಲ. ಬೆಳಕಿಗೆ ಕತ್ತಲಿನಾಸರೆ ಹೇಗೋ, ಕತ್ತಲಿಗೂ ಬೆಳಕಿನಾಸರೆ. ತಂತ್ರ ಅದು ಪ್ರತಿಯೊಬ್ಬನಲ್ಲಿ ಹುಟ್ಟುತ್ತಲೇ ಸ್ಥಾಪಿತವಾಗಿರುವ ಬೆಳಕು, ಅದನ್ನು ತಿಳಿಯದ ಅಜ್ಞಾನವೇ ಕತ್ತಲು. ಅಜ್ಞಾನದಿಂದ ಅಜ್ಞಾನವನ್ನು ತೊಳೆದುಕೊಳ್ಳಲಾಗದು, ಅದಕ್ಕೆ ಜ್ಞಾನದ ದೀವಟಿಗೆ ಬೇಕು. ಅದುವೇ ತಂತ್ರ.


"ತಂತ್ರ ವಿಭಿನ್ನವೇನಲ್ಲ"
ತಂತ್ರವೆನ್ನುವುದು ನೀರಿನಂತೆ. ನೀರು ಎಲ್ಲ ಖಾಯಿಲೆಯನ್ನೂ ವಾಸಿ ಮಾಡುವ ಗುಣ ಉಳ್ಳದ್ದು. ಹಾಗಂತ ಕೆರೆಯ ಮಲಿನ ನೀರನ್ನು ಕುಡಿದು ಆರೋಗ್ಯ ಕಾಪಾಡಿಕೊಳ್ಳಲಾದೀತೆ? ಅದನ್ನು ಕೆಡುವಂತೆ ಮಾಡಿದವರು ನಾವು. ತಂತ್ರವೂ ಇದಕ್ಕಿಂತ ಭಿನ್ನವಾಗೇನಿಲ್ಲ. ನಮ್ಮಲ್ಲಿರುವ ಆಲಸ್ಯ, ಆಸೆಬುರುಕತನ ನೀರನ್ನು ಮಲಿನವಾಗಿಸಿದೆ, ಜೊತೆಗೆ ಅಜ್ಞಾನವೂ ಸೇರಿ ತಂತ್ರವನ್ನು. ಒಂದು ವ್ಯವಸ್ಥೆಯನ್ನು ಕಂಡುಕೊಂಡರೆ ಮಲಿನ ಶುದ್ದವಾಗುವುದು. ಆ ವ್ಯವಸ್ಥೆಯೇ ತಂತ್ರ. ತಂತ್ರ ಇರುವುದು ಮಾನವನ ಕುಲೋದ್ಧಾರಕ್ಕೆ. ಅನಗತ್ಯವಾಗಿ ಇದನ್ನು ಮೂಲೆಗುಂಪು ಮಾಡಲಾಗುತ್ತಿದೆ.


"ತಂತ್ರದ ಕೆಲಸ"
ತಂತ್ರದ ಬಗ್ಗೆ ತಿಳುವಳಿಕೆಗಿಂತ ತಪ್ಪು ಗ್ರಹಿಕೆಯೇ ಹೆಚ್ಚು. ತಂತಕ್ಕೂ ಕೆಲವು ವಾರಸುದಾರರು ಹುಟ್ಟಿದರು. ಈ ಅನಿಷ್ಟದಿಂದಲೇ ತಂತ್ರ ತನ್ನ ಐಶ್ವರ್ಯವನ್ನು ಕಳೆದುಕೊಂಡು ಹಗರಣದ ವಸ್ತುವಾಯಿತು. ಯಾವುದು ಬದುಕನ್ನು ಬೆಳೆಯುವಂತೆ ಮಾಡುತ್ತದೋ ಅದು ಬೆಳಕಿಗೆ ಸಮಾನ. ತಂತ್ರ ಬೆಳಕನ್ನು ದೋರುವ ದಾರಿಯಷ್ಟೇ, ಮತ್ತೇನಲ್ಲ. ತಂತ್ರವನ್ನು ಒಂದು ಮಾರ್ಗ ಎಂದವರುಂಟು. ಇದು ಅತಂತ್ರ ಎಂದೂ ಅಂದಿದ್ದಾರೆ. ಆದರೆ ಬದುಕೆಲ್ಲವೂ ತಂತ್ರ. ತಂತ್ರದ ಸಂದೇಶ ಸಾಮಾಜಿಕತೆ ಅಲ್ಲ, "ತನಗಾಗಿ ಎಲ್ಲವನ್ನೂ ತೊರೆ", ಇದು ತಂತ್ರದ ಪ್ರಕ್ರಿಯೆ. ಆದರೆ ತಾಂತ್ರಿಕರು ತಮ್ಮ ಉನ್ನತಿಗಾಗಿ ಹೊಲಸುಗೆಟ್ಟು ಅದನ್ನು ಜಗತ್ತಿನ ಕಣ್ಣಿಗೆ ಕಲ್ಮಷಗೊಳಿಸಿದರು. ಸರಿಯಾದ ದಾರಿ ಇದ್ದರೂ ಅದನ್ನು ತಪ್ಪಿಸುವವರೂ ಇದ್ದಾರೆ. ತಪ್ಪು ದಾರಿ ತುಳಿದವರನ್ನು ಸರಿ ದಾರಿಗೆ ಒಯ್ಯುವುದೇ ತಂತ್ರದ ಕೆಲಸ.


"ತಂತ್ರದಲ್ಲಿ ಗುರುಶಿಷ್ಯರು"
ತಂತ್ರದ ಹಾದಿಯಲ್ಲಿ ಗುರುವಿನ ಪಾತ್ರವೆಂದರೆ, ಗುರು ದೊಡ್ಡವ. ದೊಡ್ಡವನಾದವನಿಗೆ ದೊಡ್ಡದನ್ನು ಮಾಡಬೇಕೆಂದರೆ ತನ್ನ ದೊಡ್ಡತನವನ್ನು ಸಜ್ಜನನಿಗೆ ಧಾರೆ ಎರೆಯುವುದು. ಹಾಗಾದರೆ ಸಜ್ಜನ ಯಾರು? ಯಾರು ದೊಡ್ಡದನ್ನು ಒಪ್ಪಿಕೊಳ್ಳಲು ಸಿದ್ಧರಿರುತ್ತಾರೋ ಅವರು ಅರ್ಥಾತ್ ಶಿಷ್ಯ. ಎಲ್ಲರನ್ನೂ ಶಿಷ್ಯರೆಂದು ಸ್ವೀಕರಿಸಲಾಗುವುದೇ? ಗುರುಪಾದ ಕಂಡಾಗ ತಲೆ ಬಗ್ಗಿಸುವನು ಶಿಷ್ಯನಾಗಬಲ್ಲ. ಗುರುವಿಗೆ ಶಿಷ್ಯನಿಂದ ಸೋಲೆಂಬುದು ಇಲ್ಲ. ಆ ಸೋಲನ್ನು ಗುರು ಸಾರ್ಥಕ್ಯವೆಂದು ಅನುಭವಿಸುತ್ತಾನೆ. ತಂತ್ರದಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದು. ಗುರುವಿಲ್ಲದೆ ಅರಿವಿಲ್ಲ ಎಂಬುದು ಸತ್ಯ.


"ದೀಕ್ಷೆ"
ದೀಕ್ಷೆಯಿಲ್ಲದೆ ಜೀವನದಲ್ಲಿ ಹೊಸ ಬೆಳಕು, ಹೊಸ ಶಕ್ತಿ, ಹೊಸ ಬದುಕು ಇಲ್ಲ. ದೀಕ್ಷೆಯಾಗದೆ ಬದುಕಿಲ್ಲ, ಮುಖ್ಯವಾಗಿ ತಾಂತ್ರಿಕನಾಗ ಬಯಸುವನಿಗೆ. ದೀಕ್ಷೆಯೇನೆಂದರೆ ಅ‌ದೇನೋ ಸಾಧನೆ ಮಾಡಿದವನಿಗೆ ಗುರುವು ಮೆಚ್ಚಿ ಪುರಸ್ಕರಿಸುವ ಸಾಧು ಕೆಲಸವಲ್ಲ. ಗುರುವನ್ನು ಮೆಚ್ಚಿಸಿದವದೆಲ್ಲಾ ದೀಕ್ಷೆ ಪಡೆಯಲು ಆಗುವುದಿಲ್ಲ. ದೀಕ್ಷೆ ನೀಡಲು ಮತ್ತು ಪಡೆಯಲು ಶಿಷ್ಯನಿಗೆ ಹೇಗೆ ಅರ್ಹತೆಯಿರಬೇಕೋ ಹಾಗೆ ಅದನ್ನು ನೀಡುವ ಗುರುವಿಗೂ ಇರಬೇಕು. ಸುಮ್ಮನೆ ತಲೆ ಮೇಲೆ ಕೈಯಿಟ್ಟು ಮಂತ್ರ ಮಣಮಣಿಸುವುದಲ್ಲ ದೀಕ್ಷೆ. ಅದೊಂದು ತಪಸ್ಸು. ಪಾತ್ರನಿಗೆ
ಮಾತ್ರ ಸಲ್ಲಬೇಕಾದ ಶ್ರೇಯಸ್ಸು. ಅಪಾತ್ರನಿಗೆ ದೀಕ್ಷೆ ಸಲ್ಲದು. ದೀಕ್ಷೆಯಲ್ಲಿ ಮೂರು ವಿಧ : ಶಾಂಭವಿ, ಶಾಕ್ತೀ ಮತ್ತು ಮಾಂತ್ರೀ. ದೀಕ್ಷೆಯನ್ನೇನೋ ಗುರು ಕೊಡುತ್ತಾನೆ. ಆದರೆ ನಂತರದ ಬೆಳವಣಿಗೆ ಇಲ್ಲವೇ ಅವಸಾನ ಅದು ದೀಕ್ಷೆ ಪಡೆದವನ ಕೈಯ್ಯಲ್ಲಿದೆ, ಅವನ ನಡೆ ನುಡಿಯಲ್ಲಿದೆ, ಬದುಕುವ ರೀತಿಯಲ್ಲಿದೆ, ತಂತ್ರವನ್ನು ಬಳಸುವ ರೀತಿಯಲ್ಲಿದೆ, ಮುಖ್ಯವಾಗಿ ಧರ್ಮ ಕಾರ್ಯಕ್ಕಾಗಿ.


"ಮಂತ್ರ"
ತಂತ್ರದಲ್ಲಿ ಮುಖ್ಯವಾದ ಇನ್ನೊಂದು ಸಂಗತಿಯೆಂದರೆ ಮಂತ್ರ. ಅದು ನಾವು ತಿಳಿದಂತೆ ಅಷ್ಟು ಸುಲಭವಲ್ಲ. ಅದರ ಬೇರುಗಳಡಿಯಲ್ಲಿಯೇ ವಿಶ್ವ ನಿರ್ಮಾಣವಾಗಿದೆ. ಮಂತ್ರವೆಂದರೆ ಬರೀ ಪದಗಳ ಸಮುಚ್ಚಯವಲ್ಲ. ಹಾಗೆ ಅದನ್ನು ಪರಿಭಾವಿಸಿದರೆ ಅದರಿಂದ ಯಾವ ಉಪಕಾರವೂ ಇಲ್ಲ. ಅದರ ಮೂಲ ದ್ರವ್ಯವನ್ನು ತಾಂತ್ರಿಕ ಗಮನಿಸಿದೇ ಹೋದರೆ ಮಂತ್ರಗಳು ವ್ಯರ್ಥ. ಕೇವಲ ಬರಹ ಮಂತ್ರ ಆಗುವುದಿಲ್ಲ. ಪ್ರಾಣವಾಯು ನಮ್ಮೊಳಗೆ ಇರುವಂತೆ ಮಂತ್ರವನ್ನು ಅರಿತು ಅನುಸರಿಸುವುದರಲ್ಲೂ ತಲ್ಲೀನತೆ ಬೇಕು, ಕೇವಲ ಮಣಮಣಿಕೆ ಮಂತ್ರವಲ್ಲಷ್ಟೇ. ಕೇವಲ ಶಬ್ದದ ತುಣುಕನ್ನು ಓದಿದರೆ ಶಬ್ದ ಪುನರಾವರ್ತನೆ ಆಗುವುದೇ ಹೊರತು, ಮಂತ್ರದ ಅನುರಣನೆಯಲ್ಲ. ಏಕೆಂದರೆ ಅಲ್ಲಿ ಮಂತ್ರದ ಬಗ್ಗೆ ಇರುವ ಶಕ್ತಿ ತಂತ್ರದ ಸಂಬಂಧ ಇರುವುದಿಲ್ಲ. ಮಂತ್ರವನ್ನು ಕೇವಲ ಮಂತ್ರವೆಂದಷ್ಟೇ ಭಾವಿಸದೇ ತಾಂತ್ರಿಕ ಲೋಕದ ಉನ್ನತ ಶಿಖರಕ್ಕೊಯ್ಯುವ ಮೆಟ್ಟಿಲೆಂದು ತಿಳಿದಾಗಲೇ ತಾಂತ್ರಿಕ ಬೆಳೆಯುತ್ತಾನೆ.


"ಜಪ"
ಇನ್ನು ಮಂತ್ರ ಶುದ್ಧವಾಗಿ ಕಲಿತ ನಂತರ ಅದರ ಬಳಕೆ ಬಗ್ಗೆ ತಿಳಿದಿರಲೇ ಬೇಕು. ಮಂತ್ರವು ಕರ್ತವ್ಯನಿಷ್ಠನಿಗೆ ಸಹಾಯಕವೇ ಹೊರತು ಸ್ವಅಭಿವೃದ್ಧಿಯ ಸಾಧನವಲ್ಲ. ಹಾಗಾದನ್ನು ಬಳಸಲೂ ಬಾರದು. ಮಂತ್ರ ಸಾಧನೆಯಲ್ಲಿ ಮೊದಲು ತಾಂತ್ರಿಕನು ತನ್ನನ್ನು ತಾನು ಮಂತ್ರಕ್ಕೆ ಒಪ್ಪಸಿಕೊಳ್ಳಬೇಕು. ಆತ್ಮನಿವೇದನೆ ಮತ್ತು ದುರ್ಬಲತೆಯನ್ನು ಕಳೆದುಕೊಳ್ಳಬೇಕು. ಮಂತ್ರ ಸಾಧನೆಗೆ ಹಲವು ಮಾರ್ಗಗಳಿವೆ, ಎಲ್ಲಕ್ಕಿಂತ ಮುಖ್ಯವಾಗಿ ಜಪ. ಜಪವೆಂದರೆ ಅದು ಮುಂದುವರಿದ ಮಂತ್ರದ ಒಂದು ಭಾಗ.


"ಧ್ಯಾನ"
ಮಂತ್ರವನ್ನೇನೋ ಜಪದ ಮೂಲಕ ಮಾಡಬಹುದು. ಆದರೆ ಮುಖ್ಯವಾಗಿ ಬೇಕಾದುದು ಏಕಾಗ್ರತೆ. ಜಪವೋ ತಪವೋ ಧ್ಯಾನವೋ ಮಾಡಲು ಏಕಾಗ್ರತೆ ಬೇಕಾಗುತ್ತದೆ. ತಾಂತ್ರಿಕನ ಮನಸ್ಸು ಸಾಮಾನ್ಯ ಮನುಷ್ಯನಿಗಿಂತ ವಿಭಿನ್ನವೇನಲ್ಲ. ಏಕಾಗ್ರತೆ ಕೈಕೊಡುತ್ತದೆ. ಅದು ಎಲ್ಲಿಯೋ ಅಡಗಿರುವ ಸೂಕ್ಷ ದೇಹಿ ಅಲ್ಲ, ಒಳಗಡೆಯೇ ಇರುತ್ತದೆ, ಹೆಕ್ಕಿ ತರಬೇಕಷ್ಟೇ. ಒಂದು ಪಕ್ಷ ಬಿಗಿಹಿಡಿದು ಧ್ಯಾನಕ್ಕೆ ಕುಳಿತಿರೆನ್ನಿ? ಇಲ್ಲ ಸಲ್ಲದ ಯೋಚನೆ ಕಾಲಿಗೆ ಗಂಟು ಬೀಳುತ್ತವೆ. ಧ್ಯಾನ ಮಾಡುವರು ಮೊದಲು ತಿಳಿಯಬೇಕಾದ ವಿಷಯ, ಧ್ಯಾನವೆಂದರೆ ಏನಾದರೂ ಮಾಡುವುದಲ್ಲ. ಏನೂ ಮಾಡದೇ ಇರುವುದು. ಮನಸ್ಸನ್ನು ಇದ್ದ ಹಾಗೆ ಇರಲು ಬಿಟ್ಟುಬಿಡುವುದು. ಧ್ಯಾನದ ಅಗತ್ಯತೆಯನ್ನು ಅರಿತರೆ ಅದನ್ನು ಮಾಡಲು ಬೇಕಾದ ಏಕಾಗ್ರತೆ ಲಭಿಸುತ್ತದೆ. ಇಲ್ಲದಿದ್ದರೆ ಇಲ್ಲ. ಇರುವುದರಿಂದ ಹೊರಬರಬೇಕು, ಪಡೆದುದನ್ನು ಬರಿದು ಮಾಡಿಕೊಳ್ಳಬೇಕು. ಆ ಮನೋಸ್ಥಿಗೆ ತಲುಪಿದಾಗ ಧ್ಯಾನ ತಾಂತ್ರಿಕನ ಕೈ ಹಿಡಿಯುತ್ತದೆ.


"ಉಪಾಸನೆ"
ತಾಂತ್ರಿಕನಾಗಬಯಸುವನು ಮೊದಲು ಉಪಾಸಕನಾಗಬೇಕು. ಹಾಗೆಂದರೇನು ಅಂತ ಕೇಳಿದರೆ ಉತ್ತರ : ಒಬ್ಬನು ತನಗಿಂತ ದೊಡ್ಡದಿದೆ ಎಂದು ನಂಬುತ್ತಾನೆ. ತಾನು ಯಾರನ್ನೂ ಚಿಕ್ಕವನನ್ನಾಗಿ ಮಾಡಲು ಬಿಡುವುದಿಲ್ಲ, ಜೊತೆಗಿರುವರನ್ನು ಮೇಲಕ್ಕೆತ್ತುವ ಕೆಲಸ ಮಾಡುವನು. ತನ್ನನ್ನು ಪೂರ್ತಿಯಾಗಿ ಕೊಟ್ಟುಕೊಳ್ಳದೆ ತಾನು ಪೂರ್ತಿಯಾಗುವುದಿಲ್ಲ. ಸಮರ್ಪಣೆ ಅವನ ಜೇವನ ಧೋರಣೆಯಾಗಿರುತ್ತದೆ. ತನ್ನ ಬೆಳವಣಿಗೆ ಯಾವುದೋ ಮಹಾ ಬೆಳವಣಿಗೆಯ ಒಂದು ಭಾಗ ಎಂದು ತಿಳಿದಿರುತ್ತಾನೆ. ತನ್ನ ದಾರಿ ಸಾಗಿದೆ ಎಂಬ ಅನುಭವ ಆತನನ್ನು ಕೆಡಿಸದು, ತನ್ನ ಬಲವೇನಿದ್ದರೂ ಅದು ದುರ್ಬಲರಿಗಾಗಿ. ತನ್ನ ಮುನ್ನಡೆ ತನಗೆ ತಿಳಿಯುತ್ತದೆ, ಅರಿವು ದಾರಿ ತೋರಿಸುತ್ತದೆ. ಇದನ್ನೆಲ್ಲಾ ಮಾಡುವುದು ತಾಂತ್ರಿಕೋಪಾಸನ ಮಾತೃಭೂಮಿಕೆಯಾಗಿರುತ್ತದೆ. ಉಪಾಸನೆಯ ಮೂಲ ಉದ್ದೇಶ ತ್ಯಾಗ ಮತ್ತು ಸಾಮೀಪ್ಯ. ತ್ಯಾಗದಿಂದ ಎಲ್ಲರ ಗೆಲ್ಲುವುದು, ಎಲ್ಲರ ಸಾಮೀಪ್ಯದಿಂದ ಒಂದಾಗುವುದು. ಅಷ್ಟೇ. ಬದುಕಿನಲ್ಲಿ ಸಹಜತೆಯನ್ನು ಅನುಭವಿಸಬೇಕು. ಶಾಸ್ತ್ರ ಮುಖ್ಯವಲ್ಲ. ತಾನು ಹಿಗ್ಗುವುದು, ಹಿಗ್ಗನ್ನು ಬಯಸಿದವರಿಗೆ ಅದನ್ನು ಹಂಚುವುದು ಉಪಾಸಕನ ಕರ್ತವ್ಯ.


ಮುಂದುವರೆಯುವುದು..




No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...