ಸತ್ಯಕಾಮರ "ತಂತ್ರಯೋನಿ" - ಬರಹ ೨
ಇದಕ್ಕೂ ಮುಂಚೆ ಹಾಕಿದ್ದ ಮೊದಲ ಭಾಗದ ಲಿಂಕ್ ಇಲ್ಲಿದೆ ನೋಡಿ
👇
ಭಾಗ 2
"ಮಾತು ಮತ್ತು ಮೌನ - ಯಾವುದು ಎಷ್ಟಿರಬೇಕು? "
ಮೌನ ಅರ್ಥವಾಗಬೇಕಾದರೆ ಮೊದಲು ಮಾತಿನ ವ್ಯರ್ಥತೆ ಅರಿವಾಗಬೇಕು. ಮಾತು ಅರ್ಥವತ್ತಾಗಿದ್ದರೆ, ತನ್ನ ಶಕ್ತಿಯನ್ನು ಉಳಿಸಿಕೊಂಡಿದ್ದರೆ ಮೌನದ ಅಗತ್ಯವೇ ಇರುತ್ತಿರಲಿಲ್ಲವೇನೋ? ಮೌನಕ್ಕೆ ಮಾತನ್ನು ಹೆರುವ ತವಕ, ಮಾತಿಗೋ ಮೌನದ ಗರ್ಭ ಸೀಳುವ ಪುಳಕ. ಮೌನವು ಅಂತರಂಗದ ಅಗತ್ಯ, ಮಾತು ಬಹಿರಂಗದ ಕರ್ತವ್ಯ. ಮಾತು ಮತ್ತು ಮೌನದ ನಡುವೆ ಅಂತರ ತಿಳಿದವನು ಮಾತ್ರ ನಿಜವಾದ ಜ್ಞಾನಿಯಾಗಬಲ್ಲ. ತಾಂತ್ರಿಕನಾಗುವುದೆಂದರೆ ಜ್ಞಾನಿಯಾಗುವುದು ಎಂದರ್ಥ. ಮಾತಿನಿಂದ ತನ್ನ ಶಕ್ತಿ ಸವೆಯುವುದು ಆತನ ಅರಿವಿಗೆ ಬರಬೇಕು. ಬರೀ ಮಾತಿನಿಂದ ಮೋಡಿಗೊಳಪಡಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಆತನಿಂದ ಆಗಬಾರದು. ಅದಾಗಬಾರದೆಂದರೆ ಇರುವ ದಾರಿ ಮೌನ. ಮೌನವೆಂದರೆ ಮಾತನ್ನು ಹತ್ತಿಕ್ಕುವುದಲ್ಲ, ಮಾತನ್ನು ಸರಿಯಾಗಿ ಬೆಳೆಯುವಂತೆ ಮಾಡಲು ಕಲ್ಪಿಸುವ ಅವಕಾಶ. ತಾಂತ್ರಿಕ ಇದನ್ನು ಗಮನಿಸಬೇಕು. ಮಾತುಗಳು ತಾಂತ್ರಿಕನ ಮೌನ ಕೋಟೆಯೊಳಗೆ ಬೆಳೆಯಬೇಕು. ಇಲ್ಲದಿದ್ದರೆ ನಡೆಗೂ ನುಡಿಗೂ ವ್ಯತ್ಯಾಸ ಬರುವುದು ಆಗಲೇ. ಮೌನ ಬಯಲು, ಮಾತು ಅದರಲ್ಲಿ ಕಟ್ಟಿದ ಮನೆ.
"ಜ್ಞಾನ ಎಂದರೆ ಏನು?"
ಜ್ಞಾನ ಎಂದರೆ ಒಂದು ಬಗೆಯ ಇಂದ್ರಿಯಾನುಭವದ ಮೂಲಕ ಪಡೆಯುವ ಸತ್ಯದರ್ಶನ. ಅದು ಬೆಳಕು. ಅಲ್ಲಿ ಕತ್ತಲಿಲ್ಲ. ಕತ್ತಲಿನಲ್ಲಿ ಜ್ಞಾನ ಅರಳುವುದೂ ಇಲ್ಲ. ಜ್ಞಾನವನ್ನು ಅರಿಯಬೇಕಾದರೆ ಮಾತನ್ನೂ ಮೀರಬೇಕು, ಅನುಭವಗಳನ್ನೂ ದಾಟಬೇಕು. ಒಬ್ಬ ವ್ಯಕ್ತಿ ತನಗೆ ಜ್ಞಾನವಿದೆ ಅಥವಾ ಇಲ್ಲ ಎಂಬುದನ್ನು ನಿರ್ಣಯಿಸಲು ಇರಬೇಕಾದುದು ಸ್ವತಂತ್ರ ಮತ್ತು ನಿರ್ಭಯತೆ. ಜ್ಞಾನದ ಮೂಲಗಳೇ ಇವು. ಯಾರಲ್ಲಿ ಸ್ವತಂತ್ರ ಮತ್ತು ನಿರ್ಭಯತೆ ಇರುತ್ತದೋ ಆತನಿಗೆ ಜ್ಞಾನದ ಪರಿಚಯವಾಗುತ್ತದೆ. ಅಲ್ಪಜ್ಞಾನದ ಉಪಯೋಗವೇ ಅಜ್ಞಾನ. ತಾಂತ್ರಿಕನು ಒಂದೆರೆಡು ಮೆಟ್ಟಿಲು ಏರಿ ಜ್ಞಾನಿಯಾದೆ ಎನ್ನಬಾರದು. ಜ್ಞಾನಕ್ಕೆ ಕೊನೆಯಿಲ್ಲ, ಅಜ್ಞಾನಕ್ಕೆ ತುಂಬ ತಪ್ಪು ಹೆಜ್ಜೆ ಇಡಬೇಕಿಲ್ಲ. ತಿಳಿದಷ್ಟೂ ಜ್ಞಾನವೇ, ಮೊಗೆದಷ್ಟೂ ಅನುಭವವೇ. ಜ್ಞಾನ ಅದು ಕ್ಷಿತಿಜ. ಅರೆಬೆಂದ ಮನಸ್ಸಿನಿಂದ ಸ್ಥಾನಪಲ್ಲಟ, ಅಜ್ಞಾನ ಆವಾಹನೆಯಾದಂತೆಯೇ ಸರಿ. ಜ್ಞಾನ ಸಂಪಾದಿಸಲು ಎಲ್ಲಿಗೂ ಹೋಗಬೇಕಿಲ್ಲ. ಹೋದರೆ ಸಿಗುತ್ತದೆ ಎಂದರೆ ಅದು ಜ್ಞಾನವೂ ಆಗಿರುವುದಿಲ್ಲ. ಅದು ನಮ್ಮೊಳಗಿರುವ ಸುಪ್ತಚೇತನ. ಅದನ್ನು ನಾವೇ ಸ್ವಪ್ರಯತ್ನದಿಂದ ಅರಿಯಬೇಕು. ತಾಂತ್ರಿಕನು ಇದನ್ನು ಮನಗಾಣಬೇಕು. ಜ್ಞಾನ ಸಂಪಾದನೆಯ ಅನುಕೂಲ ಮಾರ್ಗಗಳು ಜಪ ತಪ ಮತ್ತು ಯೋಗ.
"ಯೋಗ ಮತ್ತು ಕಾಮ"
ಅಭ್ಯಾಸ ಎನ್ನುವುದು ಒಂದು ಗತಿ. ಒಂದು ನಿರಂತರ ಪ್ರಕ್ರಿಯೆ. ಈ ನಿರಂತರ ಪ್ರಕ್ರಿಯೆಯ ಒಂದು ಭಾಗವೇ ಯೋಗ ಮತ್ತು ಕಾಮ. ಯೋಗದ ನಿರ್ವಾಹಕ ಶಕ್ತಿಯೇ ಕಾಮವಾಗಿದೆ. ಕಾಮವು ಇಂದ್ರಿಯಾಧೀನ ಪ್ರಕ್ರಿಯೆಯಲ್ಲ, ಇಂದ್ರಿಯಾದೀತ ಸಂಚಲನೆ. ಯೋಗವೆಂದರೆ ಇನ್ನೇನೂ ಅಲ್ಲ, ಮನಸ್ಸಿಗೆ ಕಾಲ - ದೇಶವನ್ನು ಮೀರುವ ವೇಗವನ್ನು ತರುವುದೇ ಆಗಿದೆ. ಕಾಮವು ಇಂದ್ರಿಯವನ್ನು ದಾಟದೆ ಮನಸ್ಸಿಗೆ ಕಾಲ ದೇಶವನ್ನು ಮೀರುವ ಯೋಗ ಬರುವುದಿಲ್ಲ. ಯೋಗ ಕಾಮವನ್ನು ಇಂದ್ರಿಯದ ಆಚೆಗೆ ಒಯ್ಯಲು ಸಾಧ್ಯವಾದರೆ ಮಾತ್ರ ಅದು ವಿಸ್ತಾರವನ್ನು ಪಡೆಯುತ್ತದೆ. ಇಂದ್ರಿಯಗಳಿಂದ ಕಾಮವನ್ನು ಮುಕ್ತ ಮಾಡುವುದೇ ಯೋಗವಾಗುತ್ತದೆ. ಹೇಗೆ ಯೋಗ ಒಬ್ಬ ವ್ಯಕ್ತಿಯನ್ನು ಸಧೃಢನನ್ನಾಗಿಸುವುದೋ ಹಾಗೆ ಕಾಮವೂ ಒಬ್ಬನನ್ನು ಬಲಿಷ್ಠನನ್ನಾಗಿಸುತ್ತದೆ. ಒಂದೇ ನಾಣ್ಯದ ಎರಡು ಮುಖದಂತೆ ಇವು. ಇಂದ್ರಿಯವನ್ನು ತಡೆದು ಕಾಮವನ್ನು ಒತ್ತರಿಸಿ ಯೋಗಿಯಾಗಿ ಸಾಧಿಸಬೇಕಾದುದು ಏನೂ ಇಲ್ಲ. ಭೋಗಿಯಾಗಿದ್ದುಕೊಂಡೇ ಯೋಗಿಯಾಗಬಹುದು. ಆದರೆ ಯೋಗ ಮತ್ತು ಕಾಮದ ಬಳಕೆಯ ಪರಿಮಾಣ ಮತ್ತು ಅದರ ಬಳಕೆ ಸ್ಪಷ್ಟವಾಗಿ ತಾಂತ್ರಿಕನಿಗೆ ತಿಳಿದಿರಬೇಕು.
"ಮದ್ಯದ ಇತಿ ಮಿತಿ, ಮಾನಿನಿಯ ಸ್ಥಿತಿಗತಿ"
ಬದುಕಿಗೆ ನೀತಿಯ ಕೋಟೆ ಕಟ್ಟಿ ಅದರ ಮೌಲ್ಯಗಳನ್ನು ರಕ್ಷಿಸುವ ಕೆಲಸ ಹಿಂದಿನಿಂದಲೂ ನಡೆದು ಬಂದಿದೆ. ಮದ್ಯವನ್ನು ಕೆಟ್ಟದೆಂದು ಕರೆಯುವುದು ಮದ್ಯವನ್ನು ಮುಂದಿಟ್ಟುಕೊಂಡೇ ಎನ್ನುವುದು ಎಲ್ಲ ಬಲ್ಲವರ ವಿಚಾರ. ಮಧ್ಯದಿಂದ ಮದ. ಇಷ್ಟಕ್ಕೂ ಮದವೆಂದರೆ ಸುಖ ಎನ್ನುವ ಅರ್ಥ ಬರುತ್ತದೆ. ಬದುಕಿನ ಅರ್ಹತೆಗೆ ಮದವೆಂದು ಹೆಸರು. ಬದುಕನ್ನು ಹಿಗ್ಗಿಸುವ ಸತ್ವಕ್ಕೆ ಮದ ಎನ್ನುವರು. ಅದು ಗಾಳಿಯಲ್ಲಿದೆ, ಬೆಳಕಿನಲ್ಲಿದೆ, ರಸ ನೀರಸದಲ್ಲಿದೆ, ವ್ಯಾಮೋಹ ವ್ಯಾಕುಲತೆ, ಸ್ನೇಹ ಪ್ರೀತಿ ಪ್ರೇಮ, ಮೋಸ ವಂಚನೆ.. ಎಲ್ಲದರಲ್ಲಿಯೂ ಇದೆ. ಅನುಭವಕ್ಕೆ ಬಂದಷ್ಟು ಮದ, ಅದು ಒಳ್ಳೆಯದಾಗಿರಬಹುದು ಯಾ ಕೆಟ್ಟದಾಗಿರಬಹುದು. ಅದಿಲ್ಲದ ಯಾವ ವಸ್ತುವೂ ಭೂಮಿ ಮೇಲಿಲ್ಲ. ಅದು ಬದುಕಿನ ಅಗತ್ಯ. ಮದವನ್ನು ಕೊಡುವುದೆಲ್ಲ ಮದ್ಯವಾಗಿದೆ. ಎಲ್ಲ ವಸ್ತುವಿನಲ್ಲೂ ಬದುಕನ್ನು ವಿಸ್ತರಿಸುವ ಸತ್ವವಿದೆ. ಆ ಸತ್ವವೇ ಮದ. ಕೇವಲ ಕುಡಿತದ ಮದವೊಂದೇ ಅಲ್ಲ ಬೇಕಾದುದು ತಾಂತ್ರಿಕನಿಗೆ. ಎಲ್ಲವನ್ನೂ ಮೀರಿದ ತಿಳುವಳಿಕೆ ಬೇಕಾಗುತ್ತದೆ. ತಿಳುವಳಿಕೆ ಎನ್ನುವುದು ತಾಂತ್ರಿಕನ ಅನುಭವಕ್ಕೆ ಬಿಟ್ಟ ಮದವಾಗಿರುತ್ತದೆ. ಯಾವುದಕ್ಕೆ ಎಷ್ಟು ಪ್ರಾಪ್ತಿಯೋ ಅಷ್ಟು. ಅಂದಮಾತ್ರಕ್ಕೆ ಕುಡಿದು ಮದವೇರಿರಿ ಎಂದರ್ಥವಲ್ಲ. ತಂತ್ರ ಸಾಧನೆಗೆ ಎಷ್ಟು ಮುಖ್ಯವೋ ಅಷ್ಟಿದ್ದರೆ ಸಾಕು. ಅದನ್ನು ಮೀರಿ ಸದಾ ಅದರಲ್ಲಿ ಮುಳುಗೇಳುವುದು ಸರಿಯಲ್ಲ.
"ಅನುಭವ ನೀಡುವ ಸಾಕ್ಷಾತ್ಕಾರ"
ಅನುಭವ ತುಂಬಾ ದೊಡ್ಡದು. ಜ್ಞಾನ ಸಮುದ್ರದಂತೆ, ಅನುಭವ ಅದರ ಒಂದು ಹನಿ. ಹನಿಗೆ ಹನಿ ಕೂಡಿದರೆ ಸಮುದ್ರವಾಗಲಿಕ್ಕಿಲ್ಲ. ಸಮುದ್ರದಲ್ಲಿ ಹನಿ ಹೇಗೆ ಇದ್ದೂ ಇಲ್ಲವೋ ಹಾಗೆ ಜ್ಞಾನದಲ್ಲಿ ಅನುಭವ ಇದ್ದೂ ಇಲ್ಲದಂತೆ ಇರುತ್ತದೆ. ಅನುಭವಕ್ಕೆ ಎರಡು ಮೈ. ಒಂದು ಇಂದ್ರಿಯದ ಮೂಲಕ ಹರಿದು ಬರುವುದು ಇನ್ನೊಂದು ಮನಸ್ಸಿಗೆ ಮುಟ್ಟಿ ಇಂದ್ರಿಯವನ್ನು ತಲುಪುವುದು. ಅನುಮಾನದಿಂದಲೂ ಅನುಭವ ಪಡೆಯಬಹುದು. ಅನುಮಾನ ಬದುಕನ್ನು ವಿಸ್ತರಿಸುತ್ತದೆ, ಅನುಭವ ಎತ್ತರಿಸುತ್ತದೆ. ಬೆಳೆಯುವ ಇಚ್ಚೆ ಯಾರಲ್ಲಿ ಸದಾ ಜಾಗೃತವಾಗಿರುತ್ತದೋ ಅವನಿಗೆ ಅನುಭವ ಆಗುವುದಿಲ್ಲ, ಅದು ಸಿದ್ಧಿಸುತ್ತದೆ. ಬೇಡಿ ಹೋದರೆ ಅದು ಅನುಭವವಲ್ಲ, ಕೇವಲ ವ್ಯರ್ಥ ಪ್ರಯತ್ನವಷ್ಟೇ. ಅನುಭವ ಎನ್ನುವುದು ದಿವ್ಯ ಸಾಕ್ಷಾತ್ತ್ಕಾರವೇ ಸರಿ. ಬೆಳೆಯುವ ಶಕ್ತಿ ಒಳಗಿಂದಲೂ ಉದಯಿಸಿ ಅದು ಹೊರಗಿನಿಂದಲೂ ಒಬ್ಬನನ್ನು ಅರಸಿ ಬಂದಾಗ ಅನುಭವವಾಗುತ್ತದೆ. ಅರಿವಿಗೆ ಬಂದಿದ್ದೆಲ್ಲಾ ಅನುಭವವಲ್ಲ. ಅದು ಕೇವಲ ಘಟನೆಗಳು. ಘಟನೆ ಅನುಭವವಲ್ಲ. ನಡೆಯುವ ಕಾಲಿಗೆ ತಲೆಯೊಂದು ಯಂತ್ರದಂತೆ ಅಗತ್ಯ. ತನ್ನ ಯಂತ್ರದ ಬಗ್ಗೆ ಸ್ಪಷ್ಟ ತಿಳುವಳಿಕೆ ತಾಂತ್ರಿಕನಿಗಿರಬೇಕು. ಆಗ ಅನುಭವ ಆತನಿಗೆ ಸಿದ್ಧಿಸುತ್ತದೆ. ಸಮತೋಲಿತ ಮನಸ್ಸು, ಸ್ವಚ್ಚ ಯೋಚನೆ, ಸಮಾಜದ ಹಿತ ಚಿಂತನೆಯ ಬಗ್ಗೆ ತಾಂತ್ರಿಕನಿಗಿರಬಹುದಾದ ಕಲ್ಪನೆಯೇ ಆತನಿಗೆ ಅನುಭವ ಸಾಕ್ಷಾತ್ತ್ಕಾರ ಘಟಿಸುವಂತೆ ಮಾಡುವ ಪ್ರಮುಖ ಅಂಶಗಳು.
ಈ ಎಲ್ಲಾ ಅರ್ಹತೆಗಳಿದ್ದ ಯಾರಾದರೂ ತಂತ್ರಲೋಕವನ್ನು ಪ್ರವೇಶಿಸಬಹುದು. ತಾಂತ್ರಿಕರಾಗಬಹುದು. ತಂತ್ರ ಅದು ಸಮಾಜದ ಒಳಿತಿಗಾಗಿಯೇ ಇರುವ ಅಸ್ತ್ರ. ಅದನ್ನು ಬಳಸುವ ರೀತಿ ಮತ್ತು ದಾರಿ ಮುಖ್ಯ ಅಷ್ಟೇ. ತಂತ್ರ ಬೇರೇನೂ ಅಲ್ಲ. ಅದೊಂದು ಅರ್ಹತೆ, ಸಂಯಮ, ಸಮರ್ಪಣೆಗಳ ಪರಿಪಾಕ. ನಡೆಯುವವ ಎಡವುತ್ತಾನೆ. ಅದನ್ನು ತಡೆದು ಬಲಿಷ್ಠನಾದವನು ನುಗ್ಗುತ್ತಾನೆ. ಇದೇ ತಂತ್ರ. ತಂತ್ರ ನಡೆಯುವವರ ದಾರಿಯೇ ಹೊರತು ಕಟ್ಟು ಕಥೆಯಲ್ಲ. ದೇವರು ತುಂಬಾ ಸವೆದು ಹೋದರು ಹೆಚ್ಚು ಚಲಾವಣೆಯಲ್ಲಿರುವ ನಾಣ್ಯ. ಇದಕ್ಕೆ ಎರಡು ಮೈ. ಒಂದು ಕಾಣುವುದು ಇನ್ನೊಂದು ಕಾಣದ್ದು. ಕಾಣುವುದು ಎಲ್ಲರೂ ಒಪ್ಪಿರುವ ಶಿಷ್ಟಾಚಾರವಾದರೆ ಕಾಣದ್ದು ತಂತ್ರ. ಒಂದು ಹೊರ ಮೈ, ಇನ್ನೊಂದು ಒಳ ಮೈ.
ತಂತ್ರದ ಬಗ್ಗೆ ಎಷ್ಟು ಒಳ್ಳೆಯ ಮಾತು ಇದೆಯೋ ಅಷ್ಟು ಕೆಟ್ಟ ಕಥೆಯೂ ಇದೆ. ತಂತ್ರ ಕಾಶ್ಮೀರ ಶೈವಾಗಮಗಳಿಂದ ಹುಟ್ಟಿ ಒಂದು ಕಾಲಕ್ಕೆ ತನ್ನ ಉನ್ನತ ಸ್ಥಾಯಿಯನ್ನು ಪಡೆದಿದ್ದ ಅದು ಐತಿಹಾಸಿಕ ಕಾರಣದಿಂದಾಗಿ ಹಿಂದೆ ಸರಿಯಿತು, ಸಮಾಜದ ಅವಜ್ಞೆಗೆ ಈಡಾಯಿತು, ತಂತ್ರ ವಿದ್ಯೆಯ ರಹಸ್ಯಮಯತೆಯಿಂದಾಗಿ ಹೆಚ್ಚು ಆಲಕ್ಷ್ಯಕ್ಕೊಳಪಟ್ಟಿತು. ಯಾವುದನ್ನು ತಿಳಿದುಕೊಂಡರೆ ಎಲ್ಲವನ್ನೂ ತಿಳಿದುಕೊಂಡಂತಾಗುವುದೋ ಅದರ ಮೂಲವಿರುವುದೇ ತಂತ್ರದಲ್ಲಿ. ಒಂದು ವರ್ಗದ ಕುತಂತ್ರಿಕರ ದುರಾಸೆಯ ಫಲವಾಗಿ ಅದು ನಮ್ಮಲ್ಲನೇಕರಲ್ಲಿ ಭಯದ ವಾತಾವರಣ ಮೂಡಿಸಿದೆ. ಹೀಗಾಗಿ ವೇದೋಪನಿಷತ್ತಿನಂತೆ ಇರಬೇಕಾದ ವಿದ್ಯೆ ಮೂಲೆಗುಂಪಾಗಿಯೂ ಮತ್ತು ರಹಸ್ಯಮಯವಾಗಿಯೂ ಆಯಿತು. ಹಾಗೆ ನೋಡಿದರೆ ತಂತ್ರದಲ್ಲಿ ರಹಸ್ಯವನ್ನುವುದು ಏನೂ ಇಲ್ಲ, ಮುಚ್ಚಿಡುವಂತದ್ದು ಇಲ್ಲವೇ ಇಲ್ಲ. ಮುಚ್ಚಿಡುವುದು ತಂತ್ರವಲ್ಲ. ತೆರೆಯುವುದಷ್ಟೇ ತಂತ್ರ.
ತಂತ್ರ ಬದುಕಿನ ಅಗತ್ಯ, ಅನಿವಾರ್ಯ. ಅದು ದೇಶದ ಸೊತ್ತಲ್ಲ. ಕಾಲದ ಅಧೀನವಲ್ಲ. ಅದಕ್ಕೆ ವರ್ಣದ ವ್ಯವಸ್ಥೆ ಇಲ್ಲ. ಅದು ಶಕ್ತಿ, ಬದುಕಿನ ಗತಿ.
ವಿ.ಸೂ. ಸತ್ಯಕಾಮರು ಇನ್ನೂ ಹಲವು ವಿಷಯಗಳ ಬಗ್ಗೆ, ತಂತ್ರ ಮತ್ತದರ ವಿಸ್ತೀರ್ಣವನ್ನು ಮೀರಿ ಆಧ್ಯಾತ್ಮಿಕವಾಗಿ ತಮ್ಮ ಈ ಕೃತಿಯಲ್ಲಿ ಬರೆದಿದ್ದಾರೆ. ಅದೆಲ್ಲಾ ಅಪ್ರಸ್ತುತ ಅಂತಲ್ಲ, ಆದರೆ ಅವಶ್ಯಕತೆ ಇಲ್ಲದ್ದರಿಂದ ಅದರ ಬಗ್ಗೆ ಇಲ್ಲಿ ಪ್ರಸ್ತುತ ಮಾಡಿಲ್ಲ.
ಮುಂದುವರೆಯುವುದು..

No comments:
Post a Comment