ಬೆಂಗ್ಳೂರಲ್ಲಿ ಬಾಡ್ಗೇ ಮನೆ.. ಯಪ್ಪಾ! ಉಸ್ಸಪ್ಪಾ!!
================================
================================
ಅಮಿತ್ ತನ್ನ ಎಂಜನಿಯರಿಂಗ್ ಓದುತ್ತಿರುವಾಗಲೇ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಕೆಲಸ ಗಿಟ್ಟಿಸಿಕೊಂಡ. ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ವೇರ್ ಕಂಪನಿಯಲ್ಲಿ ತಿಂಗಳಿಗೆ ಮೂವತ್ತು ಸಾವಿರ ಸಂಬಳ. ಆದರೆ ಒಂದೇ ಕಂಡೀಷನ್ ಅಂದರೆ ಎರಡು ವರ್ಷ ಕಂಪನಿ ಜೊತೆ ಅಗ್ರಿಮೆಂಟ್. ಮನೆಯಲ್ಲಿ ಅಪ್ಪಅಮ್ಮ ಎಲ್ಲರಿಗೂ ಸಿಹಿ ಹಂಚಿದರು. ಸ್ನೇಹಿತರೆಲ್ಲರೂ ಅಭಿನಂದಿಸಿದರು. ಅಮಿತ್ ನ ಖುಷಿ ಅಮಿತವಾಗಿತ್ತು. ತನ್ನ ಗೆಳತಿಯನ್ನು ಕಾಫೀ ಡೇ ಗೆ ಕರೆದುಕೊಂಡು ಹೋಗಿ ಕೋಲ್ಡ್ ಕಾಫಿ ಕುಡಿದು ಅವಳ ಕರಗುವ ಕಣ್ಣಲ್ಲಿ ಚಿತ್ರವಾಗುತ್ತಾ, ಕೆನ್ನೆಯ ಮೇಲೆ ಹರಿದ ಭಾಷ್ಪಕ್ಕೆ ಬಾಯ್ ಹೇಳಿ ಬೆಂಗಳೂರಿಗೆ ಗಂಟುಮೂಟೆ ಕಟ್ಟಿದ್ದ.
ಲಕ್ನೋದಿಂದ ರಾತ್ರಿ ರೈಲು ಹತ್ತಿ ತನ್ನ ಹೊಸ ಲೋಕದ ಬಗ್ಗೆ ಕನಸು ಕಾಣುತ್ತಾ ನಿದ್ರೆಗೆ ಜಾರಿದ. ಬೆಳಗು ಹರಿಯುವ ಹೊತ್ತಿಗೆ ಸಿಟಿ ರೈಲ್ವೇ ನಿಲ್ದಾಣದಲ್ಲಿ ರೈಲು ತನ್ನ ಕೊನೆಯ ಸೀಳಿಡುತ್ತಿತ್ತು. ಥಟ್ಟನೆ ಎಚ್ಚರಗೊಂಡವನು ಕೈಯ್ಯಲ್ಲಿ ಕಣ್ಣೊರೆಸುತ್ತಾ ರೈಲಿಳಿದ. ಅಲ್ಲಿದ್ದ ಡಾರ್ಮೆಂಟರಿಯಲ್ಲಿ ಬೆಳಗಿನ ಕಾರ್ಯ ಮುಗಿಸಿ ಆಟೋ ನಿಲ್ದಾಣಕ್ಕೆ ಬಂದು ತನ್ನ ಕಂಪೆನಿಯತ್ತ ಹೊರಟ. ಕಂಪನಿಯಲ್ಲಿ ಆ ದಿನ ರಿಪೋರ್ಟಿಂಗ್ ಆಗಿ, ಇಂಡಕ್ಷನ್ ಮುಗಿಸಿ, ತಾನು ಕೆಲಸ ಮಾಡುವ ವಿಭಾಗದ ಇತರರ ಪರಿಚಯವಾಗಿ ಸಂಜೆಯಾಗಿ ದಿನಗಳೆದು ಕಂಪನಿಯಿಂದ ಹೊರಗೆ ಹೆಜ್ಜೆ ಇಟ್ಟವನಿಗೆ ಧುತ್ತೆಂದು ಎದುರಾದದ್ದು ನಿರ್ಗತಿಕ ಭಾವನೆ! ಎಲ್ಲಿಗೆ ಹೋಗಬೇಕು? ಯಾವ ಮನೆಯಲ್ಲಿ ಇರಬೇಕು? ಬಾಡಿಗೆ ಎಷ್ಟು? ಯಾವ ಏರಿಯಾ? ಇಲ್ಲಿನ ಊಟ ತಿಂಡಿ, ಭಾಷೆ, ರೀತಿ ರಿವಾಜು.. ಮುಂತಾದವು ಭೂತಾಕಾರ ತಾಳಿದವು.
****************************************************
ಬೆಂಗಳೂರಿನಂತಹ ಹಲವು ಮಹಾನಗರಗಳಲ್ಲಿ ಬಾಡಿಗೆಗೆ ಮನೆ ಹಿಡಿಯುವುದು ದುಸ್ಸಾಹಸವೇ ಸರಿ. ಉದ್ಯೋಗಕ್ಕೆಂದೋ, ಓದಲಿಕ್ಕೆಂದೋ ನಾನಾ ಭಾಗಗಳಿಂದ ಬರುವರು ಪಡುವ ಯಾತನೆ, ಅವರನ್ನು ಕಾಡುವ ಒಂಟಿತನ ಮತ್ತು ಅಪರಾಧೀ ಭಾವನೆಗಳಿಗೆ ಎಣೆಯಿಲ್ಲ. ಸಂತೆಯಲ್ಲಿ ಕೈತಪ್ಪಿ ಹೋದ ಮಗು ಸುತ್ತಲೂ ನೋಡಿ ತನ್ನಪ್ಪನನ್ನೋ, ಅಮ್ಮನನ್ನೋ ನೆನೆ ನೆನೆದು ದುಃಖಿಸುವ ಸ್ಥಾಯೀ ಭಾವ ಇರುತ್ತದಲ್ಲ? ವಲಸೆ ಬಂದವರ ಪಾಡು ಭಿನ್ನವೇನಲ್ಲ.
ಕಷ್ಟಪಟ್ಟು ಓದಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಕೆಲಸ ಅರಸುತ್ತಾ, ಭವಿಷ್ಯದ ಬಗ್ಗೆ ಹಲವು ಕನಸು ಕಾಣುತ್ತಾ ಮಹಾನಗರಕ್ಕೆ ವಲಸೆ ಬರುವ ವಿದ್ಯಾರ್ಥಿಗಳು, ಉದ್ಯೋಕಾಂಕ್ಷಿಗಳು ಇಂದು ಸಹಜವಾಗಿ ಎಲ್ಲೆಡೆ ಇರುತ್ತಾರೆ. ತಾವು ಹುಟ್ಟಿ ಬೆಳೆದ ಊರು, ತಂದೆ ತಾಯಿ, ಬಂಧುಬಳಗ, ಸ್ನೇಹಿತರು ಎಲ್ಲರನ್ನೂ ಬಿಟ್ಟು ಮಹಾನಗರವೆಂಬ ಕಿಷ್ಕಿಂಧೆಗೆ ಬಂದು ಬೀಳುವ ಅವರು ಒಂದೂರಿನವರಲ್ಲ, ಜಾತಿಯವರಲ್ಲ, ಹಳೆ ನೆಂಟಸ್ಥರಲ್ಲ.
ಈ ವಲಸಿಗರನ್ನು ಕಾಡುವ ಸಮಸ್ಯೆಗಳು ಒಂದೆರಡಲ್ಲ. ಮೊಟ್ಟಮೊದಲಿಗೆ ಅವರು ಎದುರಿಸುವ ಸಮಸ್ಯೆ ಮನೆ ಬಾಡಿಗೆಗೆ ಹಿಡಿವುದು. ಒಂದು ಕಾಲವಿತ್ತು, ಮನೆಯನ್ನು ಯಾರು ಯಾರಿಗೆ ಬೇಕಾದರೂ ಸುಲಭವಾಗಿ ಬಾಡಿಗೆಗೆ ಕೊಡುತ್ತಿದ್ದರು. ಮಾಹಿತಿ ಮತ್ತು ತಂತ್ರಜ್ಞಾನ ಮುಂದುವರಿದಂತೆ, ಕೈಗಾರಿಕಾ ಕ್ರಾಂತಿಯ ಹೊಸ ಹೊಸ ಆಯಾಮಗಳು, ವಿದೇಶಿ ಕಂಪನಿಗಳು ಕೊಡುವ ಯಥೇಚ್ಚ ಅವಕಾಶಗಳು ಇದೆಲ್ಲವೂ ಸೇರಿ ಬಾಡಿಗೆ ಮನೆ ಹಿಡಿಯುವುದನ್ನು ಇನ್ನಷ್ಟು ಜಟಿಲಗೊಳಿಸುತ್ತಿವೆ. ಸಂಕೀರ್ಣವಾದ ಹೊಸಹೊಸ ಸಮಸ್ಯೆಗಳು ಬಾಡಿಗೆದಾರರನ್ನಲ್ಲದೇ ಮನೆಯ ಮಾಲೀಕರನ್ನೂ ಮತ್ತಷ್ಟು ಅಸಂಕೀರ್ಣದೆಡೆ ಕರೆದೊಯ್ಯುತ್ತಿವೆ. ಈಗ ಮನೆ ಬಾಡಿಗೆ ಹಿಡಿಯುವುದು ಅಂದುಕೊಂಡಷ್ಟು ಸುಲಭವಲ್ಲ.
ಬಾದಿಗೆದಾರರು ತಾವು ವಾಸಿಸುವ ಮನೆಯ ಬಗ್ಗೆ ಹೀಗೇ ಇರಬೇಕು, ಇರಬಾರದು ಎಂದು ಎಷ್ಟು ಪರ್ಟಿಕ್ಯುಲರ್ ಆಗಿರುತ್ತಾರೋ ಅಷ್ಟೇ ನಿಖರವಾಗಿ ಮನೆ ಮಾಲೀಕರೂ ಬಾಡಿಗೆದಾರನ ಹಿನ್ನೆಲೆ, ಎಲ್ಲಿಂದ ಬಂದಿದ್ದಾನೆ, ಮನೆ ಬಾಡಿಗೆ ಪಡೆಯುವ ಉದ್ದೇಶ, ಬಂದವರು ವಿದ್ಯಾರ್ಥಿಯೋ, ಉದ್ಯೋಗಾರ್ಥಿಯೋ, ಒಬ್ಬಂಟಿಗನೋ ಸಂಸಾರಸ್ಥನೋ, ಗಂಡಸೋ ಹೆಂಗಸೋ, ಬಾಡಿಗೆ, ಅಡ್ವಾನ್ಸ್, ಅಗ್ರಿಮೆಂಟ್ ಹೀಗೆ ಹಲವು ಸಂಗತಿಗಳಲ್ಲಿ ಅಷ್ಟೇ ನಿಖರವಾಗಿದ್ದಾರೆ.
ಹಳ್ಳಿ ಮತ್ತು ಪಟ್ಟಣಗಳಿಂದ ಬರುವ ಹಲವು ಜನರಿಗಿರುವ ಮೂಲಭೂತ ಕಲ್ಪನೆಯೆಂದರೆ, ಮಹಾನಗರದಲ್ಲೂ ಬಾಡಿಗೆ ಮನೆ ನಮ್ಮಲ್ಲಿ ಸಿಗುವಷ್ಟೇ ಸುಲಭ ಎನ್ನುವುದು. ಆದರೆ ಮಹಾನಗರದಲ್ಲಿ ಈವತ್ತಿನ ಪರಿಸ್ಥಿತಿಯಲ್ಲಿ ಬಾಡಿಗೆ ಮನೆ ಹಿಡಿಯುವುದೆಂದರೆ ಬರಿಗೈಯ್ಯಲ್ಲಿ ಬೆಟ್ಟಗುಟ್ಟಿ ಪುಡಿ ಮಾಡಿದಂತೆ. Basically, ಇಲ್ಲಿನವರ್ಯಾರದೂ ಪರಿಚಯ ಇವರಿಗೆ ಇರುವುದಿಲ್ಲವಾದ್ದರಿಂದ ನಿರ್ವಾಹವಿಲ್ಲದೇ ಬ್ರೋಕರ್ ಬಳಿ ಹೋಗುತ್ತಾರೆ. ಅವನಿಗೆ ಕೊಡುವ ಕಮೀಷನ್ ಹಣವೇ ದುಪ್ಪಟ್ಟು. ಅಷ್ಟು ಹಣ ತೆತ್ತು ಹೇಗೋ ಮಾಡಿ ಕೊನೆಗೊಂದು ಬಾಡಿಗೆ ಮನೆ ಹಿಡಿದರೆನ್ನಿ, ಹತ್ತು ಹಲವು ಸಮಸ್ಯೆಗಳು ಇವರಿಗೆ ಹೊಸದಾಗಿ ತಲೆದೋರುತ್ತವೆ. ಪುರುಷರದೇ ಒಂಥರ ಸಮಸ್ಯೆಯಾದರೆ ಮಹಿಳೆಯರದೇ ಇನ್ನೊಂಥರ ಸಮಸ್ಯೆಗಳಿರುತ್ತವೆ.
ನೆಸ್ಟ್ ಅವೇ ಕಂಪನಿ ನಡೆಸಿದ ಸರ್ವೆಯ ಪ್ರಕಾರ, ಹೊಸದಾಗಿ ಮಹಾನಗರಕ್ಕೆ ಹಲವು ಕಾರಣಾಂತರಗಳಿಂದ ವಲಸೆ ಬಂದವರು ಎದುರಿಸುವ ಮೊದಲ ತೊಂದರೆ ಬಾಡಿಗೆ ಮನೆಯದ್ದಾದರೆ ಎರಡನೆಯದ್ದು ಊಟೋಪಚಾರದ್ದು. ಇಲ್ಲಿನ ಊಟ, ರುಚಿ ಅವರಿಗೆ ಹೊಸದು. ಅದಕ್ಕೆ ಅಡ್ಜಸ್ಟ್ ಆಗಬೇಕು. ಬೆಂಗಳೂರಿಲ್ಲಿ ಮಾಂಸಹಾರಿಗಳಿಗೆ ಮನೆ ಬಾಡಿಗೆ ಹಿಡಿಯುವುದು ಕಷ್ಟವಾದರೆ ಮುಂಬೈ ಮತ್ತು ಹೈದರಾಬಾದ್ ನಗರದಲ್ಲಿ ಬ್ಯಾಚುಲರ್ಸ್ಗಳಿಗೆ ಮನೆ ಸಿಗೋದು ಅಷ್ಟೇ ಕಷ್ಟವಂತೆ.
ಆ ಸಂಸ್ಥೆಯ ಪ್ರಕಾರ 25 ವರ್ಷದೊಳಗಿನ ಯುವಕ ಯುವತಿಯರು ಎಷ್ಟು ಕಡಿಮೆ ಬಾಡಿಗೆಗೆ ಮನೆ ಸಿಗುವುದೋ ಎನ್ನುವ ಮನಸ್ಥಿತಿಯಲ್ಲಿದ್ದರೆ, ಅದರ ಮೇಲ್ಪಟ್ಟವರು ತಾವು ಕೆಲಸ ಮಾಡುವ ಕಂಪೆನಿಗೂ ಮತ್ತು ಮನೆಗೂ ಇರುವ ಅಂತರವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಪುರುಷರಾದರೆ ಎಷ್ಟು ದೂರವಾದರೂ ಪರವಾಗಿಲ್ಲ ಮನೆ ಬಾಡಿಗೆ ಕಡಿಮೆಯಿರಲಿ ಎಂದು ಬಯಸಿದರೆ, ಮಹಿಳೆಯರು ಬಾಡಿಗೆ ಜಾಸ್ತಿಯಿದ್ದರೂ ಸರಿ ಕಾರ್ಯಕ್ಷೇತ್ರ ಮತ್ತು ಮನೆ ಸನಿಹದಲ್ಲಿರಬೇಕೆಂದುಕೊಳ್ಳುತ್ತಾರೆ. ಇದು ಅವರು ಆದಷ್ಟು ಸುರಕ್ಷಿತವಾಗಿರಬೇಕೆಂಬುದನ್ನು ಸೂಚಿಸುತ್ತದೆ. ಯುವಕರು ಬ್ರೋಕರ್ಗಳಿಂದ ತೊಂದರೆ ಅನುಭವಿಸಿದರೆ, ಯುವತಿಯರು ಮನೆ ಮಾಲೀಕರಿಂದ ತೊಂದರೆಗೊಳಗಾಗುತ್ತಾರೆ. ಎಲ್ಲಾ ಮಹಾನಗರಗಳಿಗೆ ಹೋಲಿಸಿದರೆ ಪುಣೆಯಲ್ಲಿ ಮನೆ ಬಾಡಿಗೆ ಹಿಡಿಯುವುದು ಆದಷ್ಟು ಸುಲಭವಾಗಿದ್ದರೆ, ಹೈದರಾಬಾದ್ ನಗರ ಮಹಿಳೆಯರಿಗೆ ಸೆಫೇಸ್ಟ್ ಸಿಟಿ ಎಂದು ಹೆಸರಾಗಿದೆ.
ಸಮೀಕ್ಷೆ ಏನೇ ತಿಳಿಸಿದರೂ, ಬಾಡಿಗೆದಾರರು ಪುರುಷರಾಗಲಿ ಮಹಿಳೆಯರಾಗಲಿ ನಾನಾ ಸಂಕಷ್ಟಗಳನ್ನು ಎದುರಿಸಲೇಬೇಕು. ಅದು ಭಾಷೆಗೆ ಸಂಬಂಧಿಸಿದ್ದಿರಬಹುದು, ಇಲ್ಲಿನ ಪ್ರಾಂತೀಯ ಆಚಾರ ವಿಚಾರಕ್ಕೆ ಸಂಬಂಧಿಸಿದ್ದಿರಬಹುದು, ಜಾತಿ ಬಣ್ಣ ನಿಂಧನೆಗಳಂತಹ ಹೀನ ಕೃತ್ಯವಿರಬಹುದು, ಇಲ್ಲಿನವರು ನಡೆಸುವ ದಬ್ಬಾಳಿಕೆ, ಹೊರಗಿನವರೆಂದು ಮಾಡುವ ಆಕ್ರಮಣ, ಅತ್ಯಾಚಾರವಿರಬಹುದು, ತಾವು ಒಬ್ಬಂಟಿಗರೆನ್ನುವ ನೋವು, ಸದಾ ಕಾಡುವ ಅನಾಥಪ್ರಜ್ಞೆ, ಕಾಡುವ ಮನೆಯವರ ನೆನಪುಗಳು, ಬಂಧುಬಳಗದವರ ಅಗಲಿಕೆ ಎಲ್ಲವೂ ಸೇರಿ ಅವರನ್ನು ಹೈರಾಣು ಮಾಡುವುದಂತೂ ಶತಃಸಿದ್ಧ.
ಯಾರೋ ಕೆಲವರಿರುತ್ತಾರೆ - ಎಲ್ಲವನ್ನೂ ಮೀರಿ ನಿಂತ ದುಷ್ಟರು. ಅಂತಹವರು ಮಾಡುವ ಕೆಲವು ಹೀನ ಕೃತ್ಯಗಳಿಂದ ಮುಂಬರುವ ಎಲ್ಲ ಬಾಡಿಗೆದಾರರನ್ನೂ ಮನೆಮಾಲೀಕರು ಹಸಿರುಗಣ್ಣಿಂದ ನೋಡುವಂತಾಗಿದೆ.
ಅಮಿತ್ ನಂತಹ ಹಲವು ಸಭ್ಯಸ್ಥ ಯುವಕ ಯುವತಿಯರು ಮಹಾನಗರಗಳಿಗೆ ಅಪರಿಮಿತವಾಗಿ ಹೊತ್ತು ತರುವ ಕನಸುಗಳು ಇಲ್ಲಿ ಬಾಡಿಗೆ ಮನೆ ಹಿಡಿದು, ಕೆಲಸದಲ್ಲಿ ಸೆಟ್ಲ್ ಆಗುವಷ್ಟರಲ್ಲಿ ಕಾಣದ ಹಲವು ಸಮಸ್ಯೆಗಳಿಗೆ ತುತ್ತಾಗಿ ಹಳ್ಳ ಹಿಡಿದಿರುತ್ತವೆ.
ಅಮಿತ್ ಗೆ ಇಲ್ಲಿ ಮನೆ ಬಾಡಿಗೆಗೆ ಸಿಕ್ಕು ತನ್ನ ಕನಸುಗಳಿಗೆ ರೆಕ್ಕೆಪುಕ್ಕ ಸಿಕ್ಕು ಹಾರಾಡಿದನೇ? ಅದು ನಿಮ್ಮ ಕಲ್ಪನೆ ಮತ್ತು ವಿವೇಚನೆಗೆ ಬಿಟ್ಟದ್ದು.
- ಎಂಕೆ.
No comments:
Post a Comment