ಲಕ್ಷಕ್ಕೆ ನೂರೆಂಬತ್ತು ಚಿಲ್ಲರೆ..
~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~
ಸಂಖ್ಯೆಗಳ ಬಗ್ಗೆ ಸ್ವಲ್ಪ ಮಾತಾಡೋಣ..
ಸುಮಾರು ಹದಿನೈದಿಪ್ಪತ್ತು ವರ್ಷಗಳ ಹಿಂದಿನ ಮಾತು. ಅದು ಬಹಳಷ್ಟು ಜನರಿಗೆ ಈಗಲೂ ನೆನಪಿರಬಹುದು. ಅದು ಬಂದದ್ದೇ ಬಂದದ್ದು ಎಲ್ಲರೂ ಅಬಾಲವೃದ್ಧರಾಗಿ ಅದರೆಡೆ ಆಕರ್ಷಿತರಾದರು. ಕಾಲೇಜ್ ಹುಡುಗನ ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ ತಾನು ಇಷ್ಟಪಡುತ್ತಿದ್ದ ಹುಡುಗಿಯ ಹೆಸರೋ, ತನ್ನ ಫೇವರಿಟ್ ಹೀರೋ/ಹೀರೋಯಿನ್ ಹೆಸರೋ ಇರುತ್ತಿದ್ದಲ್ಲಿ ಇದ್ದಕ್ಕಿದ್ದಂತೆ ಅಲ್ಲೆಲ್ಲಾ ಬಂದು ಸ್ಥಾಪಿತವಾದದ್ದು 10/10 ಇಲ್ಲವೇ 12/12 ಚೌಕಾಕಾರವುಳ್ಳ ಮನೆಗಳು. ಅದರಲ್ಲಿ ತಮ್ಮ ಇಚ್ಚಾನುಸಾರ ಬರೆದಿದ್ದ ಅಂಕಿಗಳು. ಈಗ ಗಂಟೆಗೆ ಮೊದಲು ಆ ನಂಬರ್ ಹೊಡೆದಿತ್ತು, ಈ ಕಾಂಬಿನೇಷನ್ ನಂಬರ್ ಬಂದಿತ್ತು, ನಾವು ಮುಂದೆ ಇನ್ನೊಂದು ರೀತಿ ಸಂಖ್ಯೆ ಟ್ರೈ ಮಾಡೋಣ, ನೋಡು ಈಗಿರೋದು ಮೂರು ದಿನಗಳ ರಿಸಲ್ಟ್, ನೆಕ್ಸ್ಟ್ ಇದೇ ನಂಬರ್ ಆಡಿದರೆ ಪಕ್ಕಾ ದುಡ್ಡು ಮಗಾ!!... ಈಗ ನೆನಪಿಗೆ ಬಂತಾ? ಬರಲಿಲ್ಲವೆಂದರೆ ಬಿಡಿ, ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಅದು ಮತ್ತೇನು ಅಲ್ಲ.. ಪ್ಲೇವಿನ್!
ಗಂಟೆಗೊಮ್ಮೆ ಆಡಬಹುದಾಗಿದ್ದ ಆ ಆಟ (ಅದು ಜೂಜು) ಅದೆಷ್ಟು ಸನ್ಮಾನ್ಯರನ್ನು, ಸಾಮಾನ್ಯರನ್ನೂ ಆವರಿಸಿತ್ತೆಂದರೆ, ನೆಚ್ಚಿನ ನಟ ಬೀದಿಗೆ ಬಂದರೆ ಅಭಿಮಾನಿಗಳು ಆತನನ್ನು ಎಷ್ಟು ಆವರಿಸುತ್ತಾರೋ, ಅಷ್ಟು. ಪಾನಿಪುರಿ ಮಾಡೋನು ಕೋಟ್ಯಾಧಿಪತಿಯಾದ, ದನಕಾಯೋನು (ದುನಿಯಾ ವಿಜಿ ಅಲ್ಲ) ಕುಬೇರನಾದ ಎನ್ನುವ ಹಲವು ರೋಚಕತೆಗೆ ಒಳಗಾಗಿ ಯುವ ಸಮೂಹವೇ ಸಂಮೋಹನಾಸ್ತ್ರಕ್ಕೆ ಒಳಗಾದಂತೆ ಪ್ಲೇವಿನ್ ಆಟ ಆಡಿತು. ಅದನ್ನು ಆಡಿ ಗೆದ್ದವರೆಷ್ಟೋ ಕಳಕೊಂಡವರೂ ಅದಕ್ಕೆ ನಾಲ್ಕು ಪಟ್ಟು ಹೆಚ್ಚು. ಇದ್ಯಾಕೋ ಸರಿ ಬರಲ್ಲ ರೀ..ಮತ್ತೇನಾದರೂ ಹೇಳಿ ಅಂತೀರೇನೋ?
ಇದಕ್ಕೂ ಮುನ್ನ ಇಡೀ ಭಾರತಾದ್ಯಂತ ತನ್ನ ಅಖಂಡತ್ವವನ್ನು ಆವರಿಸಿ ತನ್ನ ಬಾಹುಭುಜಬಲ ಪರಾಕ್ರಮವನ್ನು ಸಾರಿದ್ದ ಇನ್ನೊಂದು ಸಂಖ್ಯೆಗಳ ಆಟವೆಂದರೆ ಅದು ಲಾಟರಿ. ಅದನ್ನು ಆಡದಿದ್ದವನೇ ನಾಲಾಯಕ್ಕ್ ಎನ್ನುವ ಮನೋಭಾವ ಇತ್ತು, ಆಡಿದರೆ ಕೆಟ್ಟವನಾಗುವೆನೇನೋ ಎನ್ನುವ ಆತಂಕವೂ ಇತ್ತು. ತನ್ನ ತನುಮನಧನಕನಕಾಧಿಯನ್ನು ಸರ್ವಥಃ ಧಾರೆಯೆರೆದವರಿದ್ದರು ಈ ಲಾಟರಿಗೆ. ಮನೆ, ಮಠ, ಆಸ್ತಿ, ಪಾಸ್ತಿ ಇದೆಲ್ಲದರ ಜೊತೆ ಬಡತನ, ನಿರ್ಗತಿಕತೆ, ಅವಮಾನ, ಹೆಂಗಳೆಯರ ಕಣ್ಣೀರು ಯಥೇಚ್ಛವಾಗಿ ಲಾಟರಿಯಿಂದ ಬಂದ ಕೊಡುಗೆಗಳು. ಕೊನೆಗೊಮ್ಮೆ ಬರುಬರುತ್ತಾ ಒಂದೊಂದೇ ಸರ್ಕಾರಗಳು ಅದನ್ನು ನಿಷೇಧಿಸುತ್ತಾ ಬಂದು ಕೆಲವೇ ರಾಜ್ಯಗಳಲ್ಲಿ ಅದೀಗ ಉಸಿರಾಡುತ್ತಿದೆ. ನಮಗೆ ಗೊತ್ತಿಲ್ಲದ ಹಲವು ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ತ್ರಿಪುರಾ, ಮಣಿಪುರ, ಮೇಘಾಲಯ ಮುಂತಾದ ಹೆಸರಿಗಳೂ ಪರಿಚಿತವಾದದ್ದೇ ಈ ಸಂಖ್ಯೆ ಆಟವಾದ ಲಾಟರಿಯಲ್ಲಿ! (ಅದಕ್ಕೋಸ್ಕರ ಈ ಆಟಕ್ಕೆ ನಾನು ಕೃತಜ್ಞ).
ಚುನಾವಣೆಯಲ್ಲಿ ಸಂಖ್ಯೆಗಳು ವಹಿಸುವ ಪಾತ್ರವಂತೂ ಎಲ್ಲರಿಗೂ ತಿಳಿದದ್ದೇ. ಹೆಚ್ಚು ಬಹುಮತದಿಂದ ಚುನಾವಣೆ ಗೆದ್ದೇ ಎನ್ನುವುದಕ್ಕಿಂತಲೂ ಒಂದೋ ಎರಡೋ ಮತಗಳಿಂದ ಸೋತೆ ಎಂದಾಗ ಅಂಕಿಗಳ ಮಹತ್ವ ಹೆಚ್ಚು ತಿಳಿಯುತ್ತದೆ.
ಭವಿಷ್ಯ ನುಡಿಯುವ ನ್ಯೂಮರಾಲಜಿಸ್ಟ್ಗಳು ನಂಬಿರುವುದು ಅಂಕಿಗಳನ್ನು. ಅಂಕಿಗಳೊಂದಿಗೇ ಅವರ ಜೀವನ ಯಾನ ಪ್ರಯಾಣ. ಅಂಕಿಗಳೇ ಅವರ ಜೀವನ ನಿರ್ವಹಿಸುವುದಕ್ಕೆ ಆಧಾರ.
ಇಸ್ಪೀಟಾಕ್ಕೆ, ಮಟ್ಕಾಕ್ಕೆ ಮೂಲ ಅಂಕಿಗಳೇ. ಬ್ಯಾಕಿಂಗ್, ಅಕೌಂಟಿಂಗ್, ಐಟಿ ಬಿಟಿ, ಸೈನ್ಸ್, ಸ್ಪೇಸ್, ಫಾರಿನ್ ಎಕ್ಸ್ಚೇಂಜ್, ಸ್ಟಾಕ್ ಎಕ್ಸ್ಚೇಂಜ್, ಬ್ಯಾಟಿಂಗ್, ರನ್ನಿಂಗ್, ವಿನ್ನಿಂಗ್, ಮ್ಯಾತ್ಸ್, ಸೌರಮಂಡಲ...ಹೀಗೆ ಅಡಿಯಿಂದ ಮುಡಿವರೆಗು, ಮೇಲಿಂದ ಕೆಳಗಿನವರೆಗು, ಪೂರ್ವದಿಂದ ಪಶ್ಚಿಮ ಉತ್ತರದಿಂದ ದಕ್ಷಿಣದವರೆಗೂ ಪ್ರತಿಯೊಬ್ಬನ ಜೀವನದಲ್ಲಿ ಹಾಸುಹೊಕ್ಕಾಗಿರೋದು ಸಂಖ್ಯೆಗಳು. ಸಂಖ್ಯೆಗಳು ಇಲ್ಲದೇ ಜೀವನವುಂಟೆ? ಸಂಖ್ಯೆಗಳು ನಮ್ಮ ನರನಾಡಿಯಲ್ಲಿ ಬೆರೆತಿರುವ ಪರಿ ಹೇಗೆಂದರೆ, ರಾಜ್-ಭಾರತಿ, ವಿಷ್ಣು-ಸುಹಾಸಿನಿ ಜೋಡಿಯಂತೆ. ಆ ಜೋಡಿಯನ್ನು ಬೇರ್ಪಡಿಸಿ ನೋಡಲು ಹೇಗೆ ಕಷ್ಟವೋ ಹಾಗೆ ಸಂಖ್ಯೆಯಿಲ್ಲದ ನಮ್ಮ ಜೀವನವನ್ನು ಊಹಿಸಿಕೊಳ್ಳಲೂ ಅಸಾಧ್ಯ. ಹೀಗೆ ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ, ಏಳಿಗೂ ಬೀಳಿಗೂ, ಉದ್ಧಾರಕ್ಕೂ ಹಾಳಾಗಲಿಕ್ಕೂ ಬೇಕಾಗೋರೋ ಈ ಸಂಖ್ಯೆ ಕುರಿತು ಒಂದು ಇಂಟರೆಸ್ಟಿಂಗ್ ವಿಷಯ ಹೇಳೋಣ ಅಂತ. ಇಷ್ಟುದ್ದ ಪೀಠಿಕೆ ಹಾಕಿದ್ದೇ ಇದನ್ನ ಹೇಳೋಣ ಅಂತ ರೀ..
ನಮಗೆ ಗೊತ್ತಿಲ್ಲದೇ ನಮ್ಮ ಜೀವನದಲ್ಲಿ ಈ ಸಂಖ್ಯೆಗಳು ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ. ಆದರೆ ಅದು ನಮ್ಮ ಅರಿವಿಗೆ ಬರುವುದಿಲ್ಲ. ಅದು ಸಮಸ್ಯೆಯ ರೂಪತಾಳಿ ನಮ್ಮ ಮನೆ ಬಾಗಿಲಿಗೆ ಬರೋವರೆಗೂ ಸಂಖ್ಯೆ ನಮ್ಮ ಜೀವನದಲ್ಲಿ ವಹಿಸುವ ಪ್ರಾಮುಖ್ಯತೆ ತಿಳಿಯುವುದಿಲ್ಲ. ಅದ್ಕಕೊಂಡು ಉದಾಹರಣೆ ಕೆಳಗಿದೆ ನೋಡಿ.
ಅನುಪಾತ ಎಲ್ಲ ವಿಷಯಗಳಿಗೂ ಸಮತೋಲಿತವಾಗಿರಬೇಕೆನ್ನುವುದು ನಿರ್ವಿಧಿತ. ಅದು ಪ್ರೀತಿ ಪ್ರೇಮ, ಕಾಮ ವಿರಹ, ನೋವು ನಲುವು, ಏಳು ಬೀಳು, ಕಷ್ಟ ಸುಖ, ಬಿಕ್ಕಳಿಕೆ ತೇಕಳಿಕೆ ಎಲ್ಲಕ್ಕೂ ಅನ್ವಯಿಸುತ್ತದೆ. ನಾವು ದಿನ ನಿತ್ಯ ಬಳಸುವ ಸಂಖ್ಯೆಗೂ ಒಂದು ಸಮತೋಲಿತ ಅನುಪಾತ ಇದೆಯೆಂದರೆ ನಂಬುತ್ತೀರಾ? ಅದನ್ನೇ ಈಗ ನಾನು ಹೇಳಹೊರಟಿರೋದು. ಯಾವ ಸಂಗತಿಗಳಲ್ಲಿ ಸಮಾನಾಂತರ ಅಂಶಗಳಿಲ್ಲವೋ ಅದು ಕೆಲಸಕ್ಕೆ ಬರುವುದಿಲ್ಲ. ಇದರಿಂದಾಗಿ ಹಲವು ತೊಂದರೆಗಳು ಉದ್ಭವಿಸುತ್ತವೆ. ಊಟಕ್ಕೆ ಉಪ್ಪು, ಕಾಫಿಗೆ ಡಿಕಾಕ್ಷನ್, ಟೀಗೆ ಸಕ್ಕರೆ, ಸಾಹಿತ್ಯಕ್ಕೆ ಸಂಗೀತ, ಕಥೆಗೆ ಡೈರೆಕ್ಟರ್, ನಟನೆಗೆ ನಟ ಹೇಗೋ ಪೊಲೀಸ್ ಮತ್ತು ನಾಗರೀಕರಿಗೂ ಹಾಗೆ! ಇದೇನಪ್ಪಾ ಎಲ್ಲಿಯ ಬಾದರಾಯಣ ಸಂಬಂಧ ಪೊಲೀಸ್ ಮತ್ತು ನಾಗರೀಕರ ಸಮತೋಲಿತ ಅನುಪಾತಕ್ಕೆ ಅನ್ನುತ್ತೀರೇನೋ?
ಸುಮ್ಮನೆ ಕೆಳಗಿನ ಫ್ಯಾಕ್ಟ್ಸ್ ಮತ್ತು ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿ. ನೂರಾಮುವತ್ತು ಕೋಟಿ ಜನರಿರುವ ಭಾರತದಲ್ಲಿ ಹದಿನೈದುವರೆ ಸಾವಿರ ಪೊಲೀಸ್ ಠಾಣೆಗಳಿವೆ. ಹೆಚ್ಚುತ್ತಿರುವ ಕ್ರೈಮ್ ರೇಟಿಗೆ ಹೋಲಿಸಿದರೆ ಕನಿಷ್ಠ ಒಂದು ಲಕ್ಷ ಠಾಣೆಗಳಿರಬೇಕಿತ್ತು. ಸೋ ಇಲ್ಲಿ ಇಂಬ್ಯಾಲೆನ್ಸ್. ಯಾವುದೇ ದೇಶವಾದರೂ ಅಲ್ಲಿನ ಸರ್ಕಾರ ಅಲ್ಲಿರುವ ತನ್ನ ನಾಗರೀಕ ಅನುಪಾತದ ಮೇಲೆ ಪೋಲೀಸ್ ಠಾಣೆ ಇಷ್ಟೇ ಇರಬೇಕು, ಸಿಬ್ಬಂದಿಗಳು ಇಷ್ಟಿರಬೇಕು, ಅವರಿಗೆ ಇಂತಿಂಥ ಸೌಲಭಗಳಿರಬೇಕು, ಶಸ್ತ್ರಾಸ್ತ್ರಗಳಿರಬೇಕು ಎಂದು ತೀರ್ಮಾನಿಸುತ್ತದೆ. ಆದರೆ ನಮ್ಮಲ್ಲಿ ಹೇಗಿದೆ ಎಂದರೆ, ಬ್ಯುರೋ ಆಫ್ ಪೊಲೀಸ್ ರೀಸರ್ಚ್ ಅಂಡ್ ರೆಕಾರ್ಡ್ಸ್ ತಿಳಿಸಿರುವ ಪ್ರಕಾರ ಒಂದು ಲಕ್ಷಕ್ಕೆ ನೂರಾ ಎಂಭತ್ತು ಜನ ಪೊಲೀಸರಿದ್ದಾರೆ. This leeds to big imbalance. ಇರುವ ಹದಿನೈದುವರೆ ಸಾವಿರ ಚಿಲ್ಲರೆ ಠಾಣೆಗಳಲ್ಲಿ ಐನೂರು ಚಿಲ್ಲರೆ ಮಹಿಳಾ ಠಾಣೆಗಳಿವೆ. ಅದರಲ್ಲಿ ಸಮರ್ಪಕ ಸಿಬ್ಬಂದಿಗಳ ಕೊರತೆಯಿದೆ. ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯಕ್ಕೆ ಹೋಲಿಸಿದ್ದಲ್ಲಿ ಈ ಮಹಿಳಾ ಠಾಣೆ, ಉಹುಂ, ಏನೂ ಸಾಲದು. ಇದು imbalance ಅಲ್ಲದೆ ಇನ್ನೇನು?
ಕುತೂಹಲಕಾರಿ ಸಂಗತಿಯೇನೆಂದರೆ ಹಲವು ಠಾಣೆಗಳಲ್ಲಿ ವಾಹನಗಳೇ ಇಲ್ಲ, ವಯರ್ ಲೆಸ್ಸ್ ಲಭ್ಯತೆಯಿಲ್ಲ, ಹೆಸರಿಗಷ್ಟೇ ಠಾಣೆ, ಆದರೆ ಇರಬೇಕಾದ ಶಾಸ್ತ್ರಾಸ್ತ್ರಗಳೂ ಇಲ್ಲ, ಕನಿಷ್ಟ ಪಕ್ಷ ಸಿಂಗಲ್ ಲೋಡೆಡ್ ಗನ್ ಕೂಡ ಇಲ್ಲ ಎಂದರೆ ನಂಬಲೇಬೇಕು. ಅದೆಷ್ಟೋ ಠಾಣೆಗಳಲ್ಲಿ ಇರಬೇಕಾದ ಮೂಲಭೂತ ಸೌಲಭ್ಯಗಳಾದ ಶೌಚಾಲಯವೇ ಇಲ್ಲ! ಪರಸ್ಪರ ಸಂವಹನೆ ನಡೆಸಲು at least ಟೆಲಿಫೋನ್ ಕೂಡ ಇಲ್ಲ. ಇನ್ನು ಪೋಲೀಸ್ ಸಿಬ್ಬಂದಿಗಳಿಗೆ ವಸತಿ ಕೊಡುವ ಸರ್ಕಾರ ಪೋಲೀಸ್ ಕ್ವಾಟ್ರಸನ್ನೇ ಅಗತ್ಯವಿರುವಷ್ಟು ನಿರ್ಮಿಸಿಲ್ಲ. ಇಲ್ಲ ಇಲ್ಲ ಎನ್ನುವ ಹಲವು ಇಲ್ಲವುಗಳು ಈ ಅಸಮತೋಲಿತ ಅನುಪಾತಕ್ಕೆ ಕಾರಣ.
ನಮ್ಮ ನಡುವೆ ನಡೆಯುವ ಕ್ರೈಮ್ ಪ್ರಮಾಣ ಲೆಕ್ಕಕ್ಕೇ ಸಿಗುವುದಿಲ್ಲ. ಇನ್ನು ಮನೆ ಹೊರಗಡೆ ಏರಿಯಾಗಳಲ್ಲಿ, ಊರಿನಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ನಡೆಯುವ ಕ್ರೈಮ್ ಪ್ರಮಾಣ ಹೇಗೆ ಲೆಕ್ಕಕ್ಕೆ ಸಿಗಬೇಕು? ಅದನ್ನು ನಿಭಾಯಿಸುವ ಬಗೆ ಹೇಗೆ?
ಈ ಅಸಮತೋಲನದಿಂದ ಉಂಟಾಗುವ ಸಮಸ್ಯೆಗಳೆಂದರೆ, ಅಪರಾಧಗಳಾದಾಗ ಅದನ್ನು ಸಮರ್ಪಕವಾಗಿ ನಿರ್ವಹಿಸಲು ಆಗುವುದಿಲ್ಲ (ಅಣ್ಣಾ ಹಜಾರೆ ಸತ್ಯಾಗ್ರಹ ನೆನಪಿಸಿಕೊಳ್ಳಿ), ಒಬ್ಬನಿಗೇ ಅಂತ ಎಷ್ಟು ರಕ್ಷಣೆ ಕೊಡಲಾಗುತ್ತದೆ? ರಕ್ಷಣೆ ನಿಜವಾಗಿಯೂ ಬೇಕಾಗಿರುವನಿಗೆ ಸಮಯಕ್ಕೆ ಅದು ಸರಿಯಾಗಿ ಸಿಗದೇ ಹೋಗಬಹುದು (all most all ಎಲ್ಲಾ angry young man ಚಿತ್ರಗಳ ನಾಯಕರು ಪೋಲೀಸ್ ಠಾಣೆ ಮೆಟ್ಟಿಲೇರುವ ದೃಶ್ಯ ನೆನಪಿಸಿಕೊಳ್ಳಿ), ನ್ಯಾಯ ವಿಚಾರಣೆ ಮತ್ತು ನಿರ್ವಹಣೆ ತಡವಾಗುತ್ತದೆ. ನಿಷ್ಪಾಪಿಗಳು ತಾವು ಮಾಡದ ತಪ್ಪು ಹೊತ್ತು ಅವಮಾನದಿಂದ ದಿನಗಳೆಯಬೇಕು (ಅಣ್ಣಾವ್ರ ಅದ್ಭುತ ಚಿತ್ರ ಬಿಡುಗಡೆ), ಅತೀ ದೊಡ್ಡ ಗುಂಪುಗಾರಿಕೆ, ಕೋಮುವಾದಿ ಗಲಭೆಗಳಾದಾಗ ಜನರನ್ನು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಅಸಾಧ್ಯ. ಅಂತಹ ಸಮಯದಲ್ಲಿ ಜನರ ಪ್ರಾಣ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹರಣವಾಗುತ್ತದೆ (ಡೈನಾಮಿಕ್ ದೇವರಾಜ್ ಅಭಿನಯದ ಗೋಲೀಬಾರ್ ಚಿತ್ರ). ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರೆ ಹಲವು ಪೊಲೀಸ್ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳ ಮನೆಗೆಲಸ ಮಾಡಲೆಂದೋ, ರಾಜಕಾರಣಿಗಳ ಸಭೆಗೆ ಭದ್ರತೆ ಕೊಡಲೆಂದೋ ಹೋಗಿರುತ್ತಾರೆ. ಹೀಗಾದಾಗ ಯಾವುದೋ ಕಾರಣಗಳಿಗಾಗಿ (ಇಂಥದ್ದೇ ಎಂದು ಹೇಳಲು ಬರುವುದಿಲ್ಲ) ಸಾವುಗಳಾಗಿ ಗಲಾಟೆಗಳಾದರೆ ಶಾಂತಿ ಕಾಯುವುದು ಅಸಾಧ್ಯ (ಅಣ್ಣಾವ್ರು ಸತ್ತಾಗ ಪೊಲೀಸ್ ಅಧಿಕಾರಿಗಳು ಯಾವುದೋ ದೂರದೂರಿನಲ್ಲಿದ್ದರು, ಶಶಿಕುಮಾರನ ಪೋಲೀಸನ ಹೆಂಡ್ತಿ ಚಿತ್ರ ನೆನಪಿಸಿಕೊಳ್ಳಿ).
ಇದು ಮೇಲುನೋಟಕ್ಕೆ ಕಾಣಸಿಗುವ ತೊಂದರೆಗಳು. ಕಣ್ಣಿಗೆ ಕಾಣದ ಹಲವು ಸಮಸ್ಯೆಗಳು ನಮ್ಮ ಅರಿವಿಗೆ ಬರುವುದಿಲ್ಲ, ನಮ್ಮ ಬುಡಕ್ಕೆ ಕಾವು ಹತ್ತುವವರೆಗೂ ನಾವು ಪ್ರತಿಕ್ರಿಯಿಸುವುದಿಲ್ಲ. ಅವೆಂದರೆ, ಪೋಲೀಸರಿಗೂ ನಾಗರೀಕರಿಗೂ ಪರಸ್ಪರ ಸೌಹಾರ್ದತೆ ತಪ್ಪುವುದು. ಅಧಿಕಾರಿ ವರ್ಗಕ್ಕೂ ಪೊಲೀಸ್ ನವರಿಗೂ ವೃತ್ತಿ ವೈಷಮ್ಯ ತಲೆದೋರುತ್ತದೆ. ರಜೆಯೇ ಸಿಗದಷ್ಟು ಕೆಲಸದೊತ್ತಡ ಇರುವುದರಿಂದ ಪೋಲೀಸರು ಮಾನಸಿಕ ಹಿಂಸೆಗೆ ಗುರಿಯಾಗುತ್ತಾರೆ. ಆತ್ಮಹತ್ಯೆಗೂ ಪ್ರಯತ್ನಿಸಬಹುದು (ಬೆಂಗಳೂರಿನ ರಾಜಾನುಕುಂಟೆಯಲ್ಲಿ ಇದೇ ಕಾರಣಕ್ಕೆ ಒಬ್ಬ ಮೇಲಧಿಕಾರಿಯ ಕೊಲೆಯಾಯಿತು). ವಯ್ಯುಕ್ತಿಕ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ತಾವು ಮಾಡಬೇಕಾದ ಕೆಲಸಕ್ಕೂ ಮಾಡುವ ಕೆಲಸಕ್ಕೂ ಸಂಬಂಧ ಇರುವುದಿಲ್ಲ. ಇದೆಲ್ಲಾ ನೇರಾನೇರ ಪರಿಣಾಮ ಅನುಭವಿಸುವುದು ನಾವೇ - ನಾಗರೀಕರು.
ಇದಕ್ಕೆ ಕಾರಣವೆಂದರೆ ಸಂಖ್ಯೆಯಾಧಾರಿತದಲ್ಲಿ ನಾಗರೀಕರಿಗೂ ಮತ್ತು ಪೊಲೀಸಿನವರಿಗೂ ಇರುವ ಲಭ್ಯ ಅಸಮತೋಲಿತದಿಂದ. ಇಷ್ಟನ್ನು ಓದಿಯೂ ನಿಮಗೆ ಹಾಗನ್ನಿಸುವುದಿಲ್ಲವೇ? ಅದಕ್ಕೇ ಹೇಳಿದ್ದು, ಸಂಖ್ಯೆಗಳು ನಮಗೆ ಗೊತ್ತಿದ್ದೂ ಹೇಗೆ ನಮ್ಮ ನಿತ್ಯ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೋ ಹಾಗೆ ಗೊತ್ತಿಲ್ಲದೆಯೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು. ಅದು ಅಗೋಚರವಾಗಿಯಾದರೂ ಇರಬಹುದು, ಇಷ್ಟು ನಾಗರೀಕರಿಗೆ ಇಷ್ಟು ಪೋಲೀಸ್ ನವರು ಇರಬೇಕೆನ್ನುವ ಅಸಮತೋಲಿತ ಸಂಖ್ಯೆಯಿಂದಾದರೂ ಇರಬಹುದು.
ಅದೇನೇಯಿರಲಿ, ಸಂಖ್ಯೆ ಈ ರೀತಿಯೂ ನಮ್ಮ ಜೀವನದಲ್ಲಿ ಪ್ರಭಾವ ಬೀರುತ್ತದೆ ಎನ್ನುವುದಂತೂ ಸತ್ಯ.
ಅದೇನೇಯಿರಲಿ, ಸಂಖ್ಯೆ ಈ ರೀತಿಯೂ ನಮ್ಮ ಜೀವನದಲ್ಲಿ ಪ್ರಭಾವ ಬೀರುತ್ತದೆ ಎನ್ನುವುದಂತೂ ಸತ್ಯ.
ಮತ್ತೊಮ್ಮೆ ಓದಿಕೊಳ್ಳಿ, ಒಂದು ಲಕ್ಷಕ್ಕೆ ನೂರಾ ಎಂಭತ್ತು ಅಂತ ಏಕೆ ಲೇಖನಕ್ಕೆ ಶೀರ್ಷಿಕೆ ಇಟ್ಟೆ ಅಂತ. ಅರ್ಥವಾದೀತು
.
[ಇಲ್ಲಿ ಇರುವ ನಾಗರೀಕರಿಗೂ ಮತ್ತು ಲಭ್ಯವಿರುವ ಪೋಲೀಸ್ ನವರಿಗೂ ಇರುವ ಅಸಮತೋಲನ ಮತ್ತು ಅಲಭ್ಯತೆಯ ಬಗ್ಗೆ ಫೋಕಸ್ ಮಾಡಲಾಗಿದೆಯೇ ಹೊರತು ಇದಕ್ಕೆ ಕಾರಣವೇನಿರಬಹುದು ಅಂತಲ್ಲ. ಸಂಖ್ಯೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ತಮ್ಮ ಬರಹಕ್ಕೆ ಸ್ಪೂರ್ತಿಯಾಗಬಹುದು. ನನಗೆ ಈ ರೀತಿಯಾಗಿದೆ, ಅಷ್ಟೇ]
- ಎಂಕೆ.
No comments:
Post a Comment