೨೦೧೫ರ ದೀಪಾವಳಿ ಕಥಾಸ್ಪರ್ಧೆಗೆ ಬರೆದ ಕಥೆಯಿದು. ಬರೆದದ್ದು "ವಿಜಯವಾಣಿ" ಪತ್ರಿಕೆಗೆ. ಬಹುಮಾನ ಬರುತ್ತದೆ ಎನ್ನುವ ನಂಬಿಕೆಯೇನೂ ನನ್ನಲ್ಲಿರಲಿಲ್ಲ. ಆದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನು ಅಲ್ಲವೇ? ಬರೆದು ಕಳುಹಿಸಿದ್ದಾದ ಮೇಲೆ ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಸಾಧ್ಯವಾಗಿರಲಿಲ್ಲ, ಕಾರಣ, ಎಷ್ಟು ಹುಡುಕಿದರೂ ನನ್ನ ಮಿಂಚಂಚೆಯಲ್ಲಿದ್ದುದು ಸಿಗಲೇ ಇಲ್ಲ. ಕಳುಹಿಸಿದ ನಂತರ ಅದರ ಪ್ರತಿಯೊಂದನ್ನು ನನ್ನ ಬಳಿ ಇಟ್ಟುಕೊಂಡಿದ್ದಿದ್ದರೆ ಈಗಾಗಲೇ ಇಲ್ಲಿ ಹಾಕುತ್ತಿದ್ದೆ. ಈವತ್ತು ಏನನ್ನೋ ಹುಡುಕುತ್ತಿರುವಾಗ ಅಕಸ್ಮಾತ್ತಾಗಿ ಇದು ನನ್ನ ಕಣ್ಣಿಗೆ ಬಿತ್ತು . ನೋಡಿ ಕೆಳಗಡೆ ಕಥೆಯಿದೆ ಹಾಕಿರುವೆ, ಓದಿಕೊಳ್ಳಿ.
ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ 2015
"ಕಪ್ಪುಮಚ್ಚೆ ಮತ್ತು ಪ್ರಾಣ"
ನನ್ನ ನಾಲಗೆಯಲ್ಲಿ ಕರಿಚುಕ್ಕಿಯಂತವು ಸುಮಾರಿದೆ. ಅದನ್ನು ನೋಡಿ ಅಂದು ಅಮ್ಮ ಹೇಳಿದ್ದಳು, " ಮಗಾ! ಇದು ಅಂತಿಂಥ ಚುಕ್ಕಿಗಳಲ್ವೋ, ಮಚ್ಚೆ! ನಾಗರಮಚ್ಚೆ! ಈ ಥರ ನಾಲಗೆ ಮೇಲೆ ಮಚ್ಚೆ ಬರೋದು ಅಪರೂಪದಲ್ಲಪರೂಪ. ನಿನಗೆ ಅದು ಬಂದಿದೆಯೆಂದರೆ, ಖಂಡಿತ ನಿನಗೆ ಒಳ್ಳೇದಾಗ್ತದೆ. ನೀನ್ಯಾವ ಮಾತಾಡಿದ್ರು ಇಂದಲ್ಲ ನಾಳೆ ನೆರವೇರ್ತದೆ , ನೆರವೇರಲೇಬೇಕು. ಇದು ನಿನ್ನ ಭವಿಷ್ಯ ಕಣೋ ಮಗಾ" ಅಂತ.
ಒಂದು ದಿನ ನಾನು ಮನೆಯ ಅಂಗಳದಲ್ಲಿ ಆಡುತ್ತಿರಬೇಕಾದರೆ ಎದುರು ಮನೆಯ ಸೋಮ ಬಂದು ನಮ್ಮಜೊತೆ ಸೇರಿಕೊಂಡ. ಅವನಿಗೆ ಮೊದಲಿಂದಲೂ ನಾನು, ನನ್ನದೆ ಮಾತು ಎಂಬ ಹಟವಿತ್ತು. ಇದಕ್ಕೂ ಮುನ್ನ ನಾವು ಗೆಳೆಯರೆಲ್ಲರು ಸೇರಿ ಅವನನ್ನು ನಮ್ಮ ಗುಂಪಿನಿಂದ ಹೊರಹಾಕಿದ್ವಿ. ನಾವು ಎಷ್ಟೇ ಸಾರಿ ಹೊರಹಾಕಿದ್ರು ಅವನು ಮತ್ತೆ ಮತ್ತೆ ಬಂದು ಅತ್ತಂತೆ ನಟಿಸಿ ನನ್ನ ಮನಗೆದ್ದುಬಿಡುತ್ತಿದ್ದ. ಆಗಿನ ಕಾಲಕ್ಕೆ ನಮ್ಮ ಗುಂಪಿಗೆ ನಾನೇ ರಾಜನಾದ್ದರಿಂದ ನನ್ನನ್ನು ಗೆದ್ದರೆ, ಮನವೊಲಿಸಿದರೆ ಮತ್ತೆ ಗುಂಪಿನಲ್ಲಿ ಸ್ಥಾನ ಪಡೆಯಬಹುಂದೆಂದು ಅವನ ಸುಲಭ ಲೆಕ್ಕಾಚಾರ. ನಾನೋ ಕಣ್ಣೀರಿಗೆ ಬೇಗನೆ ಕರಗುವ ಹೆಣ್ಣಪ್ಪಿ. ಅವನು ಬಂದು ನನ್ನತ್ತ ಕಣ್ಣೀರು ಸುರಿಸಿದರೆ ಸಾಕು ಸೋಮನನ್ನು ಗುಂಪಿಗೆ ಸೇರಿಸಿಕೊಳ್ಳುತ್ತಿದ್ದೆ. ಹೇಳಬೇಕೆಂದರೆ ಉಳಿದ ನಮ್ಮ ತಂಡದ ಸದಸ್ಯರಿಗೆ ಇದು ಹಿಡಿಸುತ್ತಿರಲಿಲ್ಲ. ಮೇಲಾಗಿ ಅವನನ್ನು ಕಂಡರೆ ಇತರರು ದುಷ್ಟ ದುರುಳ ಎಂದು ಭಾವಿಸಿದ್ದರು. ಅವನು ಮೇಲ್ನೋಟಕ್ಕೆ ಹಾಗೇ ಕಂಡರು ನಾನು ಮಾತ್ರ ಅವನನ್ನು ಹಾಗೆ ನೋಡಲು ಸಾಧ್ಯವೇ ಆಗಲಿಲ್ಲ. ಆದರೆ ಒಂದು ದಿನ ಆ ಪ್ರಸಂಗ ನನ್ನ ಮನಸ್ಸು ತನ್ನ ನಿರ್ಧಾರವನ್ನು ಬದಲಿಸಿ ಸೋಮ ಒಬ್ಬ ದುಷ್ಟದುರುಳ ಎನ್ನುವಂತೆ ಮಾಡಿದ ಘಟನೆಯೊಂದು ನಡೆಯಿತು. ಅವತ್ತು ಸೋಮ ನನ್ನನ್ನು ಆಟಕ್ಕೆ ಸೇರಿಸ್ಕೊಳ್ರೋ ಅಂತ ಬಂದ. ನಾನು ಸುಮ್ಮನೆ ತಂಡದ ಉಳಿದ ಗೆಳೆಯರ ಬಳಿ ನೋಡಿದೆ. ಅವರಿಗಿಷ್ಟವಿಲ್ಲದಿದ್ದರು ನನ್ನ ಮಾತಿಗೆ ಬೆಲೆಕೊಟ್ಟು ಸೇರಿಸಿಕೊಂಡರು.
ಅವತ್ತು ನಾವು ಆಡುತ್ತಿದ್ದುದು ಕಳ್ಳಪೋಲಿಸ್ ಆಟ. ಅದರಲ್ಲಿ ನಾನು ಸೇರಿ ನಾಲ್ಕು ಜನ ಕಳ್ಳರು ಮತ್ತು ನಮ್ಮನ್ನೆಲ್ಲ ಹಿಡಿಯುವ ಒಬ್ಬೇ ಒಬ್ಬ ಪೋಲಿಸ್ ಆಗಿ ಸೋಮನು ಎಂದು ನಿಶ್ಚಯವಾಯ್ತು. ಆಟ ಮುಂದುವರೆಯಿತು. ಕಳ್ಳರೆಲ್ಲ ಒಬ್ಬೊಬ್ಬರಾಗಿ ಸಿಗುತ್ತಾ ಬಂದಿದ್ದರು, ನಾನು ಮಾತ್ರ ಸಿಕ್ಕಿರಲಿಲ್ಲ. ಸರಿ ಅವನು ನನ್ನ ಬೆನ್ನಟ್ಟಿದ. ಅವನಿಗಿಂತಲು ಸಣ್ಣಗೆ ಚೂಟಿಯಾಗಿದ್ದ ನಾನು ನಮ್ಮ ಮನೆ ಮುಂದಿನ ಅಂಗಳವನ್ನೆಲ್ಲ ಅವನಿಗೆ ಸುತ್ತಿಸಿ ಗಿರಗಿಟ್ಲೆಯಾಡಿಸಿದ್ದೆ. ಅವನು ಸಾಕಾಗಿದ್ದ, ಜೊತೆಗೆ ನಾನೂ. ಅವನು ನನ್ನಿಂದ ದೂರ ನಿಂತುಕೊಂಡೇ ಏದುಸಿರೆಳೆದುಕೊಳ್ಳತೊಡಗಿದ. ಇದನ್ನು ಕಂಡ ನಾನು ಸೋಮ ವಿರಮಿಸಿಕೊಳ್ಳುತ್ತಿರಬೇಕು ಅಂತ ಅಂದುಕೊಂಡು ಪಕ್ಕದಲ್ಲಿದ್ದ ಬೇಲಿಯ ಮೇಲೆ ಒಂದ ಮಾಡಲು ಮುಂದಾದೆನು. ಅದವನಿಗೆ ಕಂತ್ರಿ ಬುದ್ದಿ ತೋರಿಸುವ ಸಮಯಯಾಗಿತ್ತು. ಮೆಲ್ಲಗೆ ಹೆಜ್ಜೆ ಸಪ್ಪಳವಾಗದಂತೆ ಓಡಿಬಂದು ನಾನು ಹತ್ತಿರಾಗುತ್ತಲೇ ತನ್ನ ಓಟ ಹೆಚ್ಚಿಸಿಕೊಂಡು ನನ್ನ ಮೇಲೆ ಬಿದ್ದ ನೋಡಿ! ನನಗೇನಾಗಿದೆಯೆಂದು ತಿಳಿವ ಮುನ್ನ ಹಾಕಿದ್ದ ಬೇಲಿ ಮೇಲೆ ಮುರಕೊಂಡು ಬಿದ್ದು ಪಕ್ಕದ ರಸ್ತೆಗೆ ಹಾರಿ ಬಿದ್ದಿದ್ದೆ. ನನ್ನ ಮೈಕೈಯಲ್ಲೆಲ್ಲ ರಕ್ತ, ತರಚು ಗಾಯವಾಗಿದ್ದು ತಕ್ಷಣ ನನ್ನ ಗಮನಕ್ಕೆ ಬರತೊಡಗಿತು. ಅದನ್ನು ಕಂಡ ನನ್ನ ಸ್ನೇಹಿತರು ಅಲ್ಲಿಂದ ನಮಗೂ ಇದೇ ಗತಿಯಾದರೇನೆಂದು ಕಾಲ್ಕಿತ್ತರು. ನಾನಿನ್ನು ಅಲ್ಲೆ ರಸ್ತೆ ಮೇಲೆ ಬಿದ್ದಿದ್ದೆ. ಬಹುಶಃ ಅಮ್ಮ ಒಳಗಿದ್ದುದರಿಂದ ಆಕೆಗಿದು ತಿಳಿಯಲಿಲ್ಲ ಅನ್ಸುತ್ತೆ. ನಾನಿದ್ದ ಸ್ಥಿತಿ ನೋಡಿ ಕನಿಕರಿಸಿ ಬಂದು ಸಹಾಯ ಮಾಡದೆ, ಮಾಡಿದ ತಪ್ಪಿಗೆ ಬೇಸರಿಸಿಕೊಳ್ಳದೆ ಅವನು ಶುರು ಮಾಡಿದ ನೋಡಿ ಆ ಕೇಕೆ! ಅದೆಲ್ಲಿತ್ತೋ ಆ ರಾಕ್ಷಸ ನಗುವಿನ ಕೇಕೆ! ನನ್ನತ್ತ ನೋಡಿ ಒಂದೇ ಸಮನೆ ನಗಲು ಶುರು ಮಾಡಿದ. ಆ ನಗು ಹೇಗಿತ್ತೆಂದರೆ ನನ್ನ ಇಡೀ ಇರುವಿಕೆಯನ್ನೇ ಪ್ರಶ್ನಿಸಿ ನೋಡಿ ನಗುವಂತಿತ್ತು. ಮನುಷ್ಯ ಪ್ರಗ್ನೆ ಕಳೆದುಕೊಳ್ಳುವುದು ಬಹುಶಃ ತನ್ನ ಅಸ್ತಿತ್ವಕ್ಕೆ ಮತ್ತು ಜೀವನ ನಡೆಸಲು ಬೇಕಾದ ಮರ್ಯಾದೆ ಕಳೆದುಕೊಂಡಾಗ ಮಾತ್ರ ಅಂತ ನನಗನ್ನಿಸುತ್ತೆ. ಸೋಮನ ಆ ನಗುವನ್ನು ನೋಡಿ ಅದೆಲ್ಲಿತ್ತೋ ಅತಿ ಉಗ್ರಾತಿಯುಗ್ರ ಕೋಪ, "ನೀನು ಸುಟ್ಟು ಬೂದಿ ಆಗೋಗ!" ಅಂದೆ. ಹಾಗೇಕಂದೆ ಇವತ್ತು ನೆನೆದರೆ ನಿಜಕ್ಕು ಗೊತ್ತಿಲ್ಲ ಅಂತಲೇ ಹೇಳುತ್ತೀನಿ. ಸೋಮನಿಗೆ ಅದೇನು ಅನ್ನಿಸಲಿಲ್ಲವೋ ಏನೊ ಹಿಂದಿರುಗಿ ನೋಡದೆ ಅದೇ ಅಟ್ಟಹಾಸ ಕೇಕೆ ಹಾಕುತ್ತಾ ಅಲ್ಲಿಂದ ಹೊರಟುಹೋದ.
ಇದಾದ ಮಾರನೆ ದಿನ ಬೆಳಗ್ಗೆ ಮನೆಯ ಮುಂದೆ ಜನರು ಜೋರಾಗಿ ಎಂದಿನಂತಲ್ಲದೆ ಮಾತಾಡಿಕೊಂಡು ಹೋಗುತ್ತಿದ್ದುದು ಒಳಗೆ ನೆನ್ನೆಯಾದ ತರಚು ಗಾಯಗಳಿಗೆ ಅಮ್ಮ ಮಾಡಿದ ಇಲಾಜಿನಿಂದ ಮಲಗಿ ವಿರಮಿಸಿಕೊಳ್ಳುತ್ತಿದ್ದ ನನಗೆ ಕೇಳಿಸಿ ಅದೇನೆಂದು ನಿಧಾನವಾಗಿ ಎದ್ದು ಬಂದು ಅಮ್ಮನನ್ನು ಏನೆಂದು ಕೇಳಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಒಕ್ಕಲಿಗೆಂದು ಸೋಮನ ತಂದೆತಾಯಿ ಪಕ್ಕದೂರಿಗೆ ಹೋಗಿದ್ದರಿಂದ ಮನೆಯಲ್ಲಿ ಅಜ್ಜಿಯ ಜೊತೆ ಇರುವುದು ಊರವರಿಗೆಲ್ಲ ತಿಳಿದದ್ದೇ ಆಗಿತ್ತು. ನೆನ್ನೆ ನಮ್ಮನೆಯಿಂದ ಹೋದ ಸೋಮ ಅಜ್ಜಿ ಮಾಡಿಟ್ಟ ಅಂಬಲಿ ಕುಡಿದು ತನ್ನ ಪಾಡಿಗೆ ಹೋಗಿ ಮನೆಯ ಒಳ ವರಾಂಡದಲ್ಲಿ ಮಲಗಿದ್ದನಂತೆ. ಒಂದುಹೊತ್ತಿನಲ್ಲಿ ಅಜ್ಜಿ ಕೂಗುತ್ತಿದ್ದ ಸದ್ದು ಕೇಳಿ ಕಣ್ಣ್ ಬಿಟ್ಟು ನೋಡಿದರೆ ಮನೆಯೆಲ್ಲಿದ್ದ ನಗನಾಣ್ಯ ದೋಚಿದ ನಂತರ ಕಳ್ಳರು ಮನೆಗೆಲ್ಲಾ ಬೆಂಕಿಯಿಟ್ಟಿದ್ದಾರೆ! ಭಾರೀ ನಿದ್ರೆಯಲ್ಲಿದ್ದ ಸೋಮನಿಗೆ ಇದರ ಪರಿವೆಯೇ ಇಲ್ಲದೆ ಬೆಂಕಿ ಬಿದ್ದ ಎಷ್ಟೋ ಹೊತ್ತಾದ ಬಳಿಕ ನೋಡಿದ್ದಾನೆ, ತಪ್ಪಿಸಿಕೊಂಡು ಹೋಗಲೂ ಆಸ್ಪದವಿಲ್ಲದಂತೆ ಬೆಂಕಿ ಮನೆಯೆಲ್ಲಾ ಆವರಿಸಿದೆ! ಸೋಮ ಕೊನೆಗೂ ಅದರಿಂದ ಹೊರಬರಲಾರದೆ ಬೆಂಕಿಯಲ್ಲಿ ಸುಟ್ಟು ಬೂದಿಯಾದ - ನೆನ್ನೆ ನಾನು ಹೇಳಿದ ಮಾತಿನಂತೆ.
ಇದಲ್ಲದೆ ಇನ್ನೊಂದು ಘಟನೆ ನಡೆಯಿತು. ಊರಲ್ಲಿ ಕಳ್ಳಬಟ್ಟಿ ಕಾಯಿಸುತ್ತಿದ್ದ ಜಾನಿ ಅಬಕಾರಿ ದಳದವರು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲುಪಾಲಾಗಿ ಸುಮಾರು ಮೂರು ತಿಂಗಳಾದ ಮೇಲೆ ಬೇಲ್ ಮೇಲೆ ಹೊರಬಂದ. ಜಾನಿಗೆ ಬೇಲ್ ಕೊಟ್ಟು ಹೊರಕರೆತಂದವರು ಯಾರೋ ಆಗಿರದೆ ಸ್ವಂತ ನಮ್ಮ ಚಿಕ್ಕಪ್ಪನೇ ಆಗಿದ್ದರು. ನಮಗೆಲ್ಲ ಆಶ್ಚರ್ಯದ ಜೊತೆ ಅನುಮಾನವು ನನ್ನನ್ನು ಸೇರಿದಂತೆ ಅಪ್ಪನಿಗು ಕಾಣಿಸಲಾರಂಭಿಸಿತು. ಇದನ್ನೇ ಮುಂದಿಟ್ಟುಕೊಂಡು ಚಿಕ್ಕಪ್ಪನ ಜೊತೆ ಮಾತಿಗೆ ಮಾತುಂಟಾಗಿ ಅಪ್ಪ ಆತನನ್ನು ಮನೆಯಿಂದ ಹೊರಗಟ್ಟಿದರು. ಇದರ ಹಿಂದಿರುವ ಕುಮ್ಮಕ್ಕು ಅಮ್ಮನದೆಂದು ಚಿಕ್ಕಪ್ಪನ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯ್ತು. ಇಲ್ಲದಿದ್ದರೆ ಹುಟ್ಟಿದಾಗಿಂದಲು ಒಂದೇಟು, ಬಿಡಿ, ಒಂದೇ ಒಂದು ಜೋರು ಮಾತಾಡದ ಅಣ್ಣ ಹೀಗೆ ಇದ್ದಕ್ಕಿದ್ದಂತೆ ಮನೆಯಿಂದ ದೂರಾಕಲು ಅತ್ತಿಗೆಯಲ್ಲದೆ ಬೇರ್ಯಾರು ಕಾರಣರಲ್ಲವೆಂದು ತಿಳಿದುಕೊಂಡು ಮನೆಯಿಂದ ಹೊರಹೋಗಬೇಕಾದರೆ ಹೊರಹೋಗೆಂದು ಹೇಳಿದ ಅಪ್ಪನನ್ನು ಬಿಟ್ಟು ಅಮ್ಮನನ್ನ್ಯಾಕೆ ಆತ ದುರುದುರುಗುಟ್ಟಿ ನೋಡುತ್ತಿದ್ದ ಹೇಳಿ? ಆತ ನೋಡಿದ ನೋಟವೇನೊ ಸರಿಯಿರಲಿಲ್ಲವೆಂದು ನನಗನ್ನಿಸಿತು. ಅದೇ ಚಿಂತೆಯಲ್ಲಿ ಆ ರಾತ್ರಿ ಮಲಗಿದೆ, ಆಗ ನನಗೊಂದು ಕನಸು ಬಿತ್ತು.
ಅಲ್ಲಿ ಯಾರೋ ಅಪ್ಪನನ್ನು ಗುಂಪುಗೂಡಿ ಸುತ್ತುವರೆದಿದ್ದರು. ಅಪ್ಪನ ಕಾಲಕೆಳಗೆ ಅಮ್ಮ ಬಿದ್ದು ಅಳುತ್ತಿದ್ದಳು. ಅಲ್ಲಿದ್ದ ಯಾರೋ ಒಬ್ಬ ಅಪ್ಪನ ಕೈಗೆ ಒಂದು ಮಚ್ಚು ಕೊಟ್ಟು ಕಡಿ ಎನ್ನುತ್ತಾನೆ. ಅಪ್ಪ ಹಿಂದುಮುಂದು ನೋಡದೆ ಅಮ್ಮನ ತಲೆಯನ್ನು ಕಡಿದೇಬಿಡುತ್ತಾರೆ, ಒಂದೇ ಏಟಿಗೆ! ಅತ್ತಲಿಂದ ಉರುಳಿಬಂದ ಅಮ್ಮನ ತಲೆ ಅಲ್ಲಿ ನಿಂತು ನೋಡುತ್ತಿದ್ದ ನನ್ನ ಕಾಲ ಬಳಿ ಬಂದು ಬೀಳುತ್ತಲೆ ಆಗ ಕೇಳಿಸುತ್ತದೆ ಒಂದು ವಿಕಟಾಟ್ಟಹಾಸದ ನಗು. ಅಲ್ಲಿ ಚಿಕ್ಕಪ್ಪ ನಿಂತು ನಗುತ್ತಿರುತ್ತಾನೆ. ಆ ನಗುವಿನ ಆರ್ಭಟ ತಡೆಯಲಾರದ ನಾನು ತಲೆಗೆ ರೇಜಿಗೆಯೇರಿ ಅಪ್ಪನ ಕೈಲಿದ್ದ ಮಚ್ಚು ತೆಗೆದುಕೊಂಡು ಅಲ್ಲಿದ್ದ ಎಲ್ಲರನ್ನು ತರಗೆಲೆಗಳಂತೆ ಕೊಚ್ಚಿಬಿಸಾಡುತ್ತೇನೆ, ಅಪ್ಪನನ್ನು ಮೊದಲುಗೊಂಡು. ಈಗ ನನ್ನ ಸುತ್ತ ಯಾರೆಂದರೆ ಯಾರೂ ಇಲ್ಲದ ಶೂನ್ಯ ನಿರ್ಭಾವುಕ ಸ್ಥಿತಿ. ಗಾಳಿಯೂ ಕೂಡ ಸುಳಿಯದ ಸ್ತಬ್ದತೆ. ಉಸಿರೂ ಕೂಡ ಬಿಗಿಹಿಡಿದು ಬರುತ್ತಿದೆಯೇನೊ ಎಂಬ ಭಾವ. ಆಗ ಅಲ್ಲಿದ್ದಕ್ಕಿದ್ದಂತೆ ಯಾರೋ ಎದ್ದು ಬರುವ ಸದ್ದಾಗುತ್ತಿದೆ. ನೋಡಿದರೆ ಅಪ್ಪ ಕಡಿದಿದ್ದ ಅಮ್ಮನ ತಲೆ ಮತ್ತೆ ಆಕೆಯ ಹೆಗಲಮೇಲೇರಿ ಮೊದಲಿನಂತಾಗಿ ಆಕೆ ನನ್ನೆಡೆ ನಡೆದು ಬರುತ್ತಿದ್ದಾಳೆ! ನನಗೆ ಎಲ್ಲಿಲ್ಲದ ಭಯವಾಗತೊಡಗಿತು. ಹತ್ತಿರ ಬಂದು ಆಕೆ " ಮಗಾ!" ಎಂದಳಷ್ಟೇ. ನಾನು ಜೋರಾಗಿ ಕಿರುಚುತ್ತ " ಅಮ್ಮಾ!" ಎಂದೆದ್ದೆ. ಸುತ್ತಲು ಕವಿದಿರುವ ಕಾವಳದಲ್ಲಿ ಮೈಮರೆತು ನಿದ್ರೆ ಹೋಗುತ್ತಿರುವ ಅಪ್ಪ ಅಮ್ಮ ಅಸ್ಪಷ್ಟವಾಗಿ ಕಂಡರು. ಇದು ಕನಸೆಂದು ನನ್ನ ಅರಿವಿಗೆ ಬರಲು ಅದೆಷ್ಟೋ ಹೊತ್ತಾಯಿತು.
ಇದಾದ ಸುಮಾರು ದಿನಗಳ ನಂತರ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ನಾನು ನಮ್ಮ ಮನೆಯ ಮುಂದೆ ಯಾರೋ ಒಂದಷ್ಟು ಜನ ನಿಂತದ್ದು ಕಾಣಿಸಿತು. ಅದೇನೆಂದು ಬಂದು ನೋಡಿದ ನನಗೆ ಒಂದರೆ ಕ್ಷಣ ಕಾಲ ಸ್ತಂಭೀಭೂತವಾದಂತಾಗಿ ನನ್ನ ಕಣ್ಣುಗಳೆರಡನ್ನು ನಾನೇ ನಂಬದಾದೆ. ಕನಸಲ್ಲಿ ಅಂದು ಕಂಡ ಅದೇ ಮಚ್ಚನ್ನು ಅಮ್ಮ ಹಿಡಿದು ನಿಂತಿದ್ದಾಳೆ ತನ್ನ ಕಾಲ ಬಳಿ ಅಪ್ಪನ ತಲೆಯುರುಳಿಬಂದು ಬಿದ್ದಿದ್ದರು ಅದನ್ನು ಗಮನಿಸದೆ ಮೇಲಕ್ಕೆ ನೋಟ ಮಾಡಿ ತದೇಕಚಿತ್ತದಿಂದ ಶೂನ್ಯವನ್ನು ದಿಟ್ಟಿಸಿ ನೋಡುತ್ತ!! ಅಮ್ಮ ಮಚ್ಚಿನಿಂದ ಅಪ್ಪನ ತಲೆಯೊಡೆದುರುಳಿಸಿದ್ದಳು! ಅದೇ ಕನಸಲ್ಲಿ ಕಂಡಂತೆ ಈಗಲು ನಾನು ಕೂಗಿ ಹೇಳಿದ್ದಿಷ್ಟೇ "ಅಮ್ಮಾ!".
ತಲೆತಿರುಗಿ ಬಂದುಬಿದ್ದಿದ್ದ ನನ್ನನು ಉಪಚರಿಸಿ ಮೇಲೆಬ್ಬಿಸಲಾಗಿ ಕಂಡ ವೃತ್ತಾಂತವೆಂದರೆ ಇದನ್ನು ತಾನೆ ಮಾಡಿದ್ದೆಂದು ಅಮ್ಮನೇ ಒಪ್ಪಿಕೊಂಡ ನಂತರ ಪೋಲೀಸರು ಅಮ್ಮನ ಕೈಗೆ ಕೋಳ ತೊಡಿಸಿ ಎಳೆದೊಯ್ಯುತ್ತಿದ್ದರು.
----------------------------------------------------------------------------------------------------------------------------------------------------
ನನಗೆ ಎಚ್ಚರ ಬರುವಷ್ಟರಲ್ಲಿ ಅಪ್ಪನ ವಿಧಿವಿಧಾನಗಳೆಲ್ಲ ಮುಗಿದು ಎರಡು ದಿನವಾಗಿ ಚಿಕ್ಕಪ್ಪನ ಮನೆಯಲ್ಲಿದ್ದೆ. ನಡೆದದ್ದೆಲ್ಲವನ್ನು ಚಿಕ್ಕಪ್ಪ ಸಾಧ್ಯಂತವಾಗಿ ಹೇಳಿದರು. ಒಮ್ಮೆ ಹಾಗೇ ಅವರನ್ನು ನೋಡಿದೆ, ಯಾಕೋ ಕಣ್ಣಲ್ಲಿ ನೀರಾಡಿ ಭೋರ್ಗರೆದು ಜಲಪಾತದಂತಾಗಿ ಬರಲು ಸಿಕ್ಕ ಅವರ ಹೆಗಲಿಗೆ ತಲೆಯಿಟ್ಟೆ ; ನನ್ನ ಅಪ್ಪನ ಹೆಗಲ ಮೇಲೆಯೇ ತಲೆಯಿಟ್ಟಂತಾಯ್ತು. ಅಂದಿನಿಂದ ಚಿಕ್ಕಪ್ಪನೇ ನನ್ನ ತಂದೆತಾಯಿಗೂ ಮೀರಿದ ಸರ್ವಸ್ವವಾಗಿ ನೋಡಿಕೊಂಡು ಬೆಳೆಸಿ ಓದಿಸಿ ದೊಡ್ಡವನನ್ನಾಗಿ ಮಾಡಿದ್ದಾರೆ, ಜೊತೆಗೆ ಮದುವೆಯನ್ನು. ಕೊನೆವರೆಗೂ ಮದುವೆಯಾಗದೆ ಉಳಿದಿದ್ದ ಅವರು ನನ್ನ ಮಗಳನ್ನೆತ್ತಿ ಎರಡು ವರ್ಷ ಆಡಿಸಿ ಕೊನೆಯುಸಿರೆಳೆದರು. ಅವಳನ್ನು ನೋಡಿದರೆ ಚಿಕ್ಕಪ್ಪನೇ ಕಣ್ಣ್ಮುಂದೆ ಬಂದಂಗಾಗುತ್ತದೆ.
ಬೆಳೆದು ದೊಡ್ಡವನಾದ ನಂತರ ನನ್ನ ನಾಲಗೆ ಮೇಲಿರುವ ಕಪ್ಪುಮಚ್ಚೆ ಕುರಿತು ಬಹಳಷ್ಟು ಸಲ ಯೋಚಿಸಿದ್ದೇನೆ - ಇದೇ ನಿನ್ನ ಭವಿಷ್ಯ, ನೀನೇನು ಹೇಳಿದರು ನಡೆಯುತ್ತೆ , ನಿಜವಾಗುತ್ತೆ ಅಂತ ಅಮ್ಮ ಅದೆಂದೋ ಹೇಳಿದ್ದರ ಬಗ್ಗೆ. ನೆನೆಸಿಕೊಂಡರೆ ಹೌದು ನಿಜವಿರಲೂಬಹುದು ಅನಿಸುತ್ತದೆ, ಮರುಕ್ಷಣವೆ ಇದೆಲ್ಲಾ ನಡೆಯುವಂಥದ್ದಾ ಎಂದೆನಿಸಿ ಸುಮ್ಮನಾಗುತ್ತೇನೆ. ಆದರೆ ನನ್ನ ಜೀವನದಲ್ಲಿ ನಡೆದಿರೋ ಇಲ್ಲಿಯತನಕದ ಎಲ್ಲಾ ವಿದ್ಯಮಾನಗಳಿಗು, ನಾನಿರುವ ಸಂದರ್ಭಕ್ಕೂ ತಾಳೆಹಾಕಿ ನೋಡಿದರೆ, ಅಮ್ಮ ಅಂದು ಹೇಳಿದ್ದು ಬಹುಶಃ ನಿಜವಿರಲೂಬಹುದೆಂದೂ ಹಲವಾರು ಬಾರಿ ಅನ್ನಿಸುವುದುಂಟು. ಇಲ್ಲದಿದ್ದರೆ ನಾನು " ಅಮ್ಮಾ!" ಎಂದು ಎರಡೆರಡು ಬಾರಿ ಕೂಗಿದ ಭಾವವು ಅಪ್ಪ ಅಮ್ಮನ ತಲೆಕಡಿದಾಗ ನನಗಾದ ನೋವಿನಂತೆ, ಅಮ್ಮನೂ ಅಪ್ಪನ ತಲೆಕಡಿದಾಗ ಆದ ನೋವಿಗು ಭಾವವೊಂದೆಯೆಂತೆನಿಸುವಂತೆ ನನಗನ್ನಿಸಿದ್ದು ಸುಳ್ಳಾಗಬೇಕಿತ್ತಲ್ಲವೆ? ಆದರೆ ಹಾಗಾಗಿಲ್ಲ. ಕನಸಲ್ಲಿ ಅಮ್ಮಾ ಎಂದು ಕೂಗಿದಾಗ ಆಕೆಯ ತಲೆಕಡೆದ ಅಪ್ಪ ಸಾಯಲಿ ಅಂತ, ಹಾಗೆ ನಿಜದಲ್ಲಿ ಅಪ್ಪನ ತಲೆಕಡಿದ ಅಮ್ಮ ಸತ್ತೇಹೋಗಲಿ ಅಂತ ಅಂದು ಅನ್ನಿಸಿದ್ದರಲ್ಲಿ ಲವಲೇಷಮಾತ್ರವೂ ಬೇಧವಿಲ್ಲ. ಹೀಗೆ ನನ್ನ ಜೀವನ ಪ್ರಯಾಣದಲ್ಲಿ ಬೇಕ್ಕಾದಷ್ಟು ಸಲ ನನಗೆ ಈ ತರ ಅನುಭವಗಳಾಗಿವೆ. ಅದರಲ್ಲಿ ಇದು ಮುಖ್ಯವಾದುದು.
ಆದರೆ ಒಂದೊಂದು ಸಲ ನನಗೆ ನಾನೇ ವಾದಕ್ಕೆ ಗೊಂದಲಕ್ಕೆ ಬಿದ್ದು , ನಾನು ಹೇಳಿದ್ದರಿಂದ ಸೋಮ ಸತ್ತನೊ ಅಥವ ಕಳ್ಳರಿಟ್ಟ ಬೆಂಕಿಗೆ ಸತ್ತನೊ? ಹೇಳದಿದ್ದರೆ ಅವನು ಸಾಯುತ್ತಿರಲಿಲ್ಲವೆ? ನನ್ನ ನಾಲಗೆಯಲ್ಲಿರುವ ಕಪ್ಪುಮಚ್ಚೆಯಿಂದ ಸತ್ತನೆ? ನಾನು ಹೇಳಿದ್ದೆಲ್ಲ ಭವಿಷ್ಯ ನಡೆಯುವುದರಿಂದ ಸತ್ತನೆ? ಹಾಗಾದರೆ ಅಮ್ಮ ಹೇಳಿದ್ದು ನಿಜವೇ? ನಾಲಗೆಯಲ್ಲಿ ಕಪ್ಪುಮಚ್ಚೆಯಿದ್ದರೆ ನುಡಿದದ್ದೆಲ್ಲಾ ನಿಜವಾಗುತ್ತಾ? ಅಥವ ಅವನಿಗಿದ್ದ ದುಷ್ಟದುರುಳತನದಿಂದ ಸತ್ತನೊ? ಹೀಗೆ ಮುಂದುವರಿಯುವ ವಾದ ಗೊಂದಲುಗಳು ಇನ್ನಷ್ಟು ವ್ಯಾಪಿಸಿ, ಅಕಸ್ಮಾತ್ ಅಪ್ಪನು ಅಮ್ಮನು ಒಬ್ಬರೊಬ್ಬರ ತಲೆಕಡಿಯದೆ ಇದ್ದಿದ್ದರೆ, ಆ ಜಾಗದಲ್ಲಿ ಪಾತ್ರಧಾರಿಗಳು ಬೇರೆಯವರಾಗಿ ಅವರು ಹೀಗೆ ಮಾಡಿದ್ದಿದ್ದರೆ ನನ್ನ ಅಪ್ಪ ಅಮ್ಮ ಇಬ್ಬರೂ ಇಂದು ನನ್ನ ಜೊತೆಯಲ್ಲಿರುತ್ತಿದ್ದರು. ಆದದ್ದು ಬೇರೆಯವರಿಗೆ ತಾನೆ, ಅಪ್ಪಾ ಅಂತಲೋ ಅಮ್ಮಾ ಅಂತಲೋ ಕೂಗಿಕೊಂಡು ತಪ್ಪು ಮಾಡಿದವರ ಮೇಲೆ ನೀವು ಸತ್ತೇಹೋಗಬೇಕೂಂತ ಅವರಿಗೆ ಶಪಿಸುತ್ತಿದ್ದೆನಾ? ನನಗು ಅವರಿಗು ಏನು ಸಂಬಂಧ? ಅವರ್ಯಾರೂ ನನ್ನವರಲ್ಲವಲ್ಲ? ಹಾಗೆ ಬೇರೆಯವರಾಗಿದ್ದರು ಅಥವಾ ನನ್ನ ಅಪ್ಪ ಅಮ್ಮನೇ ಆಗಿದ್ದರೂ ಅವರು ಹಾಗೆ ಮಾಡಲು ಕಾರಣವೇನಿದ್ದವೊ? ಸಮಯ ಸಂದರ್ಭಗಳೇಗೆ ಆಡಿಸಿದ್ದವೊ? ಯಾರ ಕೈಗೊಂಬೆಗಳಾಗಿ ಯಾರ್ಯಾರು ಯಾರನಾಡಿಸುತ್ತಿದ್ದರೊ? ಅಂತಲೂ ಅನ್ನಿಸಿ, ಮತ್ತೆ ಮನಸು ಗೊಂದಲದ ಗೂಡಾಗಿ, ಯಾರೂ ಯಾರನ್ನಾದರು ಏಕೆ ಕೊಲ್ಲಬೇಕು? ಯಾವ ತಪ್ಪಿಗಾಗಿ ಈ ಶಿಕ್ಷೆ? ಎಂಥದ್ದೇ ತಪ್ಪಾಗಿರಲಿ ಕೊಲ್ಲುವುದಾದರು ಯಾತಕೆ? ಕೊಲ್ಲುವುದರಿಂದ ಅವರಿಗಾದ ಅನ್ಯಾಯವಾಗಲಿ, ಅಥವ ಕೊಲೆಯಾದವ ಮಾಡಿದ ತಪ್ಪಿಗಾಗಲಿ ಇವರು ಕೊಂದು ನ್ಯಾಯ ಒದಗಿಸಿದಂತಾಗುತ್ತದೆಯೆ? ಹಾಗಾದರೆ ಸೋಮನ ಸಾವಿಗಾಗಲಿ, ಅಪ್ಪನ ಸಾವಿಗಾಗಲಿ ನಾನು ಕಾರಣವೇ? ನನ್ನ ಮಾತಿಂದಾದಂಥವೇ? ಕೊನೆಗೆ ಅಮ್ಮ ಜೈಲುಪಾಲಾಗಲೂ ನನ್ನ ಮಾತೇ ಆಕೆಗೆ ಮುಳುವಾಯಿತೆ? ಎಂದೆಲ್ಲಾ ಉತ್ತರವಿಲ್ಲದ ನೂರಾರು ಪ್ರಶ್ನೆಗಳು, ಅಲೌಕಿಕ ಆಲೋಚನೆಗಳು ಲೌಕಿಕ ವಸ್ತುಸ್ಥಿತಿಯಾಗಿ ಬಹಳಷ್ಟು ಕಂಡು ಎಂದರೆ, ಬರಿ ಮಾತಿನಲ್ಲಿ ಮುಗಿಸಿಹೇಳಲಾರಲಾಗದಷ್ಟು ಆಳವಾಗಿ ನನ್ನಲ್ಲಿ ಬೇರೂರಿ ಮನೆಮಾಡಿವೆ. ಯಾರು ಕ್ಷಮಿಸಲಾಗದ ತಪ್ಪು ಯಾರು ಯಾರಿಗೇ ಮಾಡಿದ್ದರು, ಒಬ್ಬರು ಇನ್ನೊಬ್ಬರನ್ನು ಕೊಂದು ಪ್ರಾಣ ತೆಗೆದರೆ ಮನುಷ್ಯತ್ವಕ್ಕೆ ಬೆಲೆಯೆಲ್ಲಿ? ಮಾನವತೆಯ ಮಾತೆಲ್ಲಿ? ಪ್ರಾಣಕ್ಕಿರುವ ಬೆಲೆ ಯಕಶ್ಚಿತ್ ಯಾರ ಕೋಪಕ್ಕೊ, ಸೇಡಿಗೊ, ಜಿದ್ದಿಗೊ, ಹಗೆತನಕ್ಕೊ, ಮೋಸಕ್ಕೊ ಬಲಿಯಾಗುವುದಿದ್ದರೆ ಈ ಪ್ರಾಣವೆಂಬ ಪ್ರಾಣವಾದರು ಏಕೆ ಬೇಕು? ನನ್ನ ಪ್ರಶ್ನಾ ಸರಣಿ ತುಂಡಾಗದ ಸರಪಳಿಯಂತೆ , ಅದು ಮುಗಿಯುವುದೇ ಇಲ್ಲ.
ಕೊನೆಗೆ ನನಗೆ ಅನ್ನಿಸಿದ್ದಿದು : ಇಲ್ಲಿ ಯಾರನ್ನು ಯಾರೂ ನಿಯಂತ್ರಿಸುವುದಾಗಲಿ, ಮೋಸ ಕೊಲೆಯಂಥ ಪಾತಕಗಳನ್ನೆಸಗುವುದಾಗಲಿ, ಅಷ್ಟೇಕೆ, ಬೆಳೆದು ನಿಂತ ಹುಲುಗಡ್ಡಿಯನ್ನಾದರು ಅಲುಗಾಡಿಸುವುದಾಗಲಿ ಕನಿಷ್ಟ ಕೂಡ ಸಾದ್ಯವಿಲ್ಲ ! ಅದರಪಾಡಿಗದು ಸೃಷ್ಟಿನಿಯಮವೇನಿದೆಯೋ ಅದರಂತೆ ನಡೆಯುತ್ತದೆ. ವಿಶ್ವಮಾನವ ಕವಿವಾಣಿ ನೆನಪಾಗಿ ಹೇಳಿದ್ದು ನಿಜವೆನಿಸುತ್ತದೆ : " ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ..."
----------------------------------------------------------------------------------------------------------------------------------------------------
ಇಲ್ಲಿಗೆ ನನ್ನ ಜೀವನದ ಕೊನೆಯ ಯಾನಕ್ಕೆ ಬಂದು ನಿಂತಿದ್ದೇನೆ. ನನಗೀಗ ಸರಿಯಾಗಿ ಮಾತಾಡಲು ಆಗದುದಕ್ಕೆ ಕಾರಣ ನನ್ನ ಗಂಟಲು. ಗಂಟಲು ಕ್ಯಾನ್ಸರ್ ನನ್ನ ಪೂರ್ಣ ಧನಿಯನ್ನು ನುಂಗಿಹಾಕಿದೆ. ಪಾಪ! ಅದು ಬಂತು ಅಷ್ಟೇ, ತಪ್ಪು ಅದರದೇನು ಇಲ್ಲ . ಪ್ರಶ್ನೆಗಳು, ಸಂದಿಗ್ದತೆಗಳು ಕೇವಲ ನನ್ನ ಮನದಲ್ಲಷ್ಟೇ ಇರದೆ, ನನ್ನ ಹೆಂಡತಿ ಮಕ್ಕಳು, ಬಂಧುಬಳಗ, ನೆಂಟರಿಷ್ಟರು, ಸ್ನೇಹಿತರು, ಸಹೋದ್ಯೋಗಿಗಳು, ಬೀದಿಬದಿ ವ್ಯಾಪಾರಿ, ಭಿಕ್ಷುಕ, ಮುದುಕ, ಕೊನೆಗೆ ಅಪರಿಚಿತರೂ ಸೇರಿದಂತೆ ಎಲ್ಲರಿಗೂ ಅಖಂಡ ಜೀವನ ಪರ್ಯಂತ ಮೇಲ್ಗಾಣಿಸಿದ ಪ್ರಶ್ನೆಗಳಿಗೆ ಉತ್ತರ ಕೇಳಿ..ಕೇಳಿ..ಕೇಳೀ...ನನ್ನ ಗಂಟಲು ನನಗೆ ಕೈಕೊಟ್ಟಿತೆಂದು ನನ್ನ ಅನಿಸಿಕೆ. ಆದರೆ ನನ್ನ ಹೆಂಡತಿ ಮಗ ಬೇರೇನೋ ಕಾರಣ ಹೇಳುತ್ತಿದ್ದಾರೆ. ನನಗಂಟಿದ ಈ ಖಾಯಿಲೆಯಲ್ಲೂ ಈ ಉತ್ತರವಿಲ್ಲದ ಪ್ರಶ್ನೆಗಳು ಸಂದಿಗ್ದತೆಗಳು ನನ್ನ ಜೊತೆಯಾಗಿ ಬರಲು ರೆಡಿಯಾದಂತಿದೆ. ಬರಲಿಬಿಡಿ ನನ್ನ ಸಾವಿನ ಜೊತೆ ಬೇಕಾದರು ಅದನ್ನು ಕರೆದೊಯ್ಯಲು ನಾನು ಸಿದ್ದನಿದ್ದೀನಿ.
- ಮುಗಿಯಿತು -
ಮೋಹನ್ ಕುಮಾರ್ ಡಿ ಎನ್
ನಂ. 21/160, ಹೇಮಾವತಿಪೇಟೆ,
ದೊಡ್ಡಬಳ್ಳಾಪುರ - 561203,
ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕರ್ನಾಟಕ.
ಮೊಬೈಲ್ - 90359 62665
ನಂ. 21/160, ಹೇಮಾವತಿಪೇಟೆ,
ದೊಡ್ಡಬಳ್ಳಾಪುರ - 561203,
ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕರ್ನಾಟಕ.
ಮೊಬೈಲ್ - 90359 62665
No comments:
Post a Comment