೨೦೧೫ರ ದೀಪಾವಳಿ ಕಥಾಸ್ಪರ್ಧೆಗೆ ಬರೆದ ಮತ್ತೊಂದು ಕಥೆಯಿದು. ಬರೆದದ್ದು "ಕನ್ನಡಪ್ರಭ " ಪತ್ರಿಕೆಗೆ. ಓದಿಕೊಳ್ಳಿ . ವಿಶೇಷವೆಂದರೆ ಬರೆದುಕಳುಹಿಸಿದವನು ಕಥೆಗೆ ಹೆಸರನ್ನೇ ಕೊಟ್ಟಿರಲಿಲ್ಲ!!!
ಈಗಾದರೂ ಹೆಸರಿನ ಅವಶ್ಯಕತೆ ನನಗೆ ಕಾಣುವುದಿಲ್ಲವಾದ್ದರಿಂದ ಹೆಸರನ್ನು ಪುನಃ ಇಡುವ ಗೊಡವೆಗೆ ಹೋಗಿಲ್ಲ.
ಈಗಾದರೂ ಹೆಸರಿನ ಅವಶ್ಯಕತೆ ನನಗೆ ಕಾಣುವುದಿಲ್ಲವಾದ್ದರಿಂದ ಹೆಸರನ್ನು ಪುನಃ ಇಡುವ ಗೊಡವೆಗೆ ಹೋಗಿಲ್ಲ.
ಕನ್ನಡಪ್ರಭ ದೀಪಾವಳಿ ಕಥಾ ಸ್ಪರ್ಧೆ 2015
"ಆ ನನ್ನ್ಮಗಾ ಕರೆದ ಅಂತ ನಾವಲ್ಲಿಗೆ ಹೋಗ್ಬಾರ್ದಿತ್ತು ಕಣೋ. ನೋಡಿದ್ಯಲ್ಲ ತಮಾಷೆಗೆ ಮಾಡಿದ ಜೋಕನ್ನ ಸೀರಿಯಸ್ಸಾಗಿ ತಗೊಂಡು ಹೇಗೆಲ್ಲಾ ಅವಮಾನ ಮಾಡಿ ಕಳಿಸ್ದ ಅಂತ. ಅವ್ನೊಬ್ಬ ಕಚ್ಡಾ ಕಿತ್ತೋದ್ ನನ್ಮಗ...."
ಹಾಗಂತ ನನ್ನಲ್ಲೇ ನಾನು ಎಷ್ಟು ಬೈದುಕೊಂಡರು ನನಗೆ ಬಂದಿದ್ದ ಕೋಪ ಕಡಿಮೆಯಾಗುವ ಯಾವುದೇ ಮುನ್ಸೂಚನೆ ಕಾಣಲಿಲ್ಲ. ಜೊತೆಗೆ ನನ್ನ ಸ್ನೇಹಿತ ಪ್ರಾಣಿ ಇದ್ದ. ಅವನಿಗೇನು ಹೇಳಬೇಕೋ ತಿಳಿಯದೆ ನನ್ನ ಜೊತೆ ಹೆಜ್ಜೆಹಾಕುತ್ತಿದ್ದ. ನಾವು ನಮ್ಮ ಮನೆಗೆ ವಾಪಾಸ್ ಬರಲು ಬಸ್ಸ್ ಸ್ಟಾಂಡಿಗೆ ಬರುತ್ತಿದ್ದೆವು. ಇಬ್ಬರಲ್ಲು ಕೋಪ ಮನೆಮಾಡಿತ್ತು.
ಬಸ್ಸ್ ಸ್ಟಾಂಡ್ ಅದೆಲ್ಲಿ ಸತ್ತು ಬಿದ್ದಿದೆಯೋ ಗೊತ್ತಿಲ್ಲ. ಎಷ್ಟು ನಡೆದರೂ ಸಿಗುತ್ತಿಲ್ಲ. ಹೆಜ್ಜೆಮೇಲೆ ಹೆಜ್ಜೆ ಹಾಕಿ ನಮ್ಮ ಕಾಲುಗಳು ಊಳಿಡಲು ಶುರುವಾಯಿತು. ಜೊತೆಗೆ ಹಸಿವು ಬೇರೆ, ಹೊಟ್ಟೆಹೋಗಿ ಬೆನ್ನಿಗೆ ಕಚ್ಚಿಕೊಂಡಿತ್ತು. ಎತ್ತ ನೋಡಿದರು ಒಂದೇ ಒಂದು ಹೋಟೆಲಾಗಲಿ ಕೊನೆಗೆ ಟೀ ಅಂಗಡಿಯಾಗಲಿ ಕಾಣುತ್ತಿಲ್ಲ. ಇದ್ದ ಒಂದೆರೆಡು ಗೂಡಂಗಡಿಗಳು ಬಾಗಿಲು ಮುಚ್ಚಿವೆ.
ನಾವು ನಡೆದುಬರುತ್ತಿದ್ದ ಹಾದಿಯಲ್ಲಿ ವಿದ್ಯುತ್ ಕಂಬಗಳಾಗಲಿ, ಅದರಲ್ಲಿರಬೇಕಾಗಿದ್ದ ದೀಪವಾಗಲಿ ಇಲ್ಲದೆ ರಸ್ತೆ ಪೂರ ಕತ್ತಲು ಕವಿದು ಸಂಜೆಯಾಗಿದ್ದರಿಂದ ಜೀರ್ಜಿಂಬೆಗಳು ಗುಯಗುಯ್ಯ್ಗುಡುವ ಸದ್ದು. ಎಲ್ಲೋ ಮಿಂಚುಹುಳ ರೆಕ್ಕೆಬಡಿದು ನಮಗೆ ದಾರಿ ತಪ್ಪದಂತೆ ಬೆಳಕು ಹರಿಸಿ ನಾವು ದಾರಿ ಬಿಟ್ಟು ಅಡ್ಡದಾರಿ ಹಿಡಿದಿಲ್ಲ ಎಂದು ಸಾಬೀತುಪಡಿಸುತ್ತಿತ್ತು. ರೆಕ್ಕೆ ಹುಳಗಳು ಪಟ್ಪಟ್ ಎಂದು ರೆಕ್ಕೆ ಬಡಿಯುತ್ತ ಆಗಾಗ ನಮಗೆ ತೊಂದರೆ ಕೊಡುತ್ತಿದ್ದುದು ಬಿಟ್ಟರೆ ಅಲ್ಲಿದ್ದ ಅಗಣ್ಯ ಪ್ರಕೃತಿಯಿಂದಾಗಲಿ, ಪ್ರಾಣಿಪಕ್ಷಿಕ್ರಿಮಿಕೀಟಾದಿಯಿಂದಾ ಗಲಿ, ಎದೆಯಲ್ಲಿ ನಡುಕ ಹುಟ್ಟೀಸುವ ಕಾವಳದಿಂದಾಗಲಿ ನಮಗ್ಯಾವ ತೊಂದರೆಯೂ ಕಂಡುಬರಲಿಲ್ಲ ಎಂಬುದೇ ನಮಗಿದ್ದ ಏಕೈಕ ಸಮಾಧಾನ.
ರಸ್ತೆಯೇನೋ ಅಲ್ಲಲ್ಲಿ ಸಣ್ಣಸಣ್ಣ ಹಳ್ಳ ಗುಂಡಿಯಿಂದ ಕೂಡಿದ್ದರು ಚೆನ್ನಾಗಿಯೇ ಇತ್ತು. ರಸ್ತೆ ಬಿಟ್ಟು ಕೆಳಗಿಳಿಯುವ ಧೈರ್ಯ ನಾವು ಮಾಡಲಿಲ್ಲವಾದ್ದರಿಂದ, ಜೊತೆಗೆ ಅದೆಷ್ಟೋ ಕಿಲೋಮೀಟರ್ ನಡೆದಂತನಿಸಿ ನಮಗೆ ಹಸಿವಿನ ಜೊತೆಗೆ ನೀರಡಿಕೆಯು ಶುರುವಾಗಿ ಇನ್ನೇನು ನಡೆಯಲು ಸಾಧ್ಯವಿಲ್ಲ ಆದದ್ದಾಗಲಿ ಇಲ್ಲೇ ಕುಳಿತು ಬಿಡುವ ಎಂದು ಅಂದುಕೊಳ್ಳುವಷ್ಟರಲ್ಲಿ, ದೂರದಲ್ಲೆಲ್ಲೊ ಒಂದು ಸಣ್ಣ ದೊಂದಿ ಹೊತ್ತಿ ಉರಿಯುತ್ತಿರುವುದು ಕಾಣಿಸಿತು. ಬದುಕಿತು ಬಡಜೀವ ಎಂದುಕೊಂಡು ಅವಡುಗಚ್ಚಿ ಅಲ್ಲಿಗೆ ಹೆಜ್ಜೆ ಹಾಕತೊಡಗಿದೆವು.
ಅದೊಂದು ಸಣ್ಣಾತಿಸಣ್ಣ ಗುಡಿಸಲೆಂದು ತಿಳಿಯಲು ಮುಂದೆ ನೇತಾಕಿದ್ದ ಸಣ್ಣ ದೊಂದಿಯ ಬೆಳಕು ನಮಗೆ ಸಹಾಯ ಮಾಡಿತು. ಒಣಗಿದ ತೆಂಗಿನಗರಿ ಹೊದಿಸಿ ಎಂಟತ್ತು ಗಳುವನ್ನು ಅಡ್ಡ ಉದ್ದ ಕೂರಿಸಿ ಕಟ್ಟಿದ್ದ ಚಿಕ್ಕ ಗುಡಿಸಲದು. ಕಟ್ಟಿ ಸುಮಾರು ವರ್ಷಗಳಾಗಿದ್ದಿರಬಹುದು. ಅದೆಷ್ಟು ಬಿರುಬಿಸಿಲು ಗಾಳಿಮಳೆಗೆ ತಲೆಯೊಡ್ಡಿನಿಂತಿದೆಯೋ ಎಂದು ಆ ಗುಡಿಸಲು ನೋಡಿದ ತಕ್ಷಣ ನನ್ನ ಅನುಭವಕ್ಕೆ ಬಂತು.
ಕತ್ತಲಲ್ಲಿ ದೈವದಂತೆ ಕಂಡ ಆ ಗುಡಿಸಲ ಬಳಿಗೇನೊ ನಾವು ಬಂದಾಗಿತ್ತು. ಆದರೆ ನಮಗಿದ್ದ ಪ್ರಶ್ನೆ ಈ ಕಗ್ಗತ್ತಲ ಕಾಡಲ್ಲಿ ಅದೂ ರೋಡಿಂದ ಇಷ್ಟೊಂದು ಒಳಗೆ ಯಾರು ಕಟ್ಟಿದ್ದಾರೆ ಈ ಗುಡಿಸಲನ್ನ? ಬಹುಶಃ ಇದು ಮನುಷ್ಯಮಾತ್ರರು ಕಟ್ಟಿರುವಹಾಗೆ ಕಾಣುತ್ತಿಲ್ಲ. ಹಾಗಾದರೆ ಉರಿಯುತ್ತಿರುವ ದೊಂದಿ ಹಚ್ಚಿಟ್ಟವರು ಯಾರು? ಅಸಲಿಗೆ ಒಳಗಡೆ ಯಾರಾದರು ಇದ್ದಾರ? ಈ ತರಹೇವಾರಿ ಅನುಮಾನ ನಮಗೆ ಬರತೊಡಗಿವು. ಆದದ್ದಾಗಲಿ ನೋಡೇಬಿಡೋಣ ಎಂದು ಇಬ್ಬರು ನಿರ್ಧರಿಸಿ ಗುಡಿಸಲಿಗೆ ಗರಿಯಿಂದ ನೇಯ್ದಿದ್ದ ತಳ್ಳುಬಾಗಿಲ ಮುಂದೆ ನಿಂತು "ಯಾರಾದರು ಇದ್ದೀರಾ?" ಎಂದು ಕೇಳಿದೆವು.
ನಮಗೆ ಮರುತ್ತರ ಬರಲಿಲ್ಲ. ಪ್ರಾಣಿ ಮತ್ತೊಂದು ಸಾರಿ ಕೂಗಲು ಬಾಯ್ದೆರೆದ. ಅಷ್ಟರಲ್ಲಿ ಒಳಗಿಂದ ಏನೊ ತಟಕ್ಕಂತ ಬಿದ್ದಂತೆ ಸದ್ದಾಯಿತು. ಸದ್ಯ ಮನುಷ್ಯರಲ್ಲದಿದ್ದರು ಯಾವುದಾದರು ಪ್ರಾಣಿಪಕ್ಷಿಯಾದರು ಇದ್ದೀತೆಂದು ನಮಗೆ ಮನವರಿಕೆಯಾಯ್ತು. ಪ್ರಾಣಿ ಕೂಗಲು ಮೂರನೆ ಬಾರಿ ಬಾಯ್ದೆರೆದು ಕೇಳಿದ " ಯಾರಾದ್ರು ಇದ್ದೀರೋ?" ಎರಡುಮೂರು ನಿಮಿಷ ಕಳೆದರು ನಮಗೆ ಮರುತ್ತರ ಸಿಗಲಿಲ್ಲ
ನಮ್ಮ ತಾಳ್ಮೆಗೂ ಒಂದು ಮಿತಿ ಬೇಡವೇ, ಅದೂ ಇಂತ ಹೊತ್ತಿನಲ್ಲಿ? ಅಲ್ಲಿವರೆಗು ಮರೆತಂತಿದ್ದ ಕೋಪ ಮತ್ತೆ ನೆನಪಾದಂತಾಗಿ ಪ್ರಾಣಿ ಮತ್ತೊಮ್ಮೆ ಬಾಯ್ತೆರೆಯಿತು. "ಏ ನನ್ನ್ ಮಕ್ಕುಳ್ರ ಎಷ್ಟೋ ಕೂಗೋದು? ಯಾರದ್ರು ಇದ್ದೀರೊ ಅಥ್ವಾ ಸತ್ತು ದೆವ್ವವಾಗಿ ನಮ್ಮನ್ನು ಕಾಡ್ಸೋಕೆ ಅಂತ ಇಲ್ಲಿ ದೊಂದಿ ಕಟ್ಟಿದ್ದೀರೋ ಬೊಗುಳ್ರೊ" ಎಂದು ಸಿಟ್ಟಿನಲ್ಲಿ ತಾಳ್ಮೆ ಕಳಕೊಂಡವನಂತೆ ಕೇಳಿದ. ನನಗೆ ಅವನು ಈ ಮಾತಿನಮಧ್ಯೆ ದೆವ್ವ ಪಿಚಾಚಿಯಂದಿದ್ದು ನನಗೆ ಸರಿಕಾಣಲಿಲ್ಲ. ಓದಿ ವಿದ್ಯಾವಂತರಾದ ನಾವೇ ಹೀಗೆ ಮೂಡನಂಬಿಕೆ ಬಗ್ಗೆ ಅಪ್ಪಿತಪ್ಪಿಯೂ ಅದರ ಇರುವಿಕೆ ಬಗ್ಗೆ ಮಾತಾಡಿದರೆ ಹೇಗೆ ಎಂಬುದೇ ನನ್ನ ಆಕ್ಷೇಪಣೆಗೆ ಕಾರಣ. ಹಾಗಂತ ನಾನವನಿಗೆ ಹೇಳಲಿಲ್ಲ.
ಯಾರ ಸುಳಿವು ನಮಗಲ್ಲಿ ಕಾಣದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಅಲ್ಲಿಂದ ಹೊರಡೋಣವೆಂದು ನಾವು ನಿಶ್ಚಯಿಸಿ ನಮ್ಮ ಅದೇ ಹಸಿವು ಬಾಯಾರಿಕೆ ಸಂಕಟ ನೆನಪಿಗೆ ಬಂದು ದುಃಖಿಸುತ್ತ ಕಾಲ್ತೆಗೆಯುವ ಹೊತ್ತಿಗೆ ನಮಗೆ ಒಳಗಿಂದ ಕ್ಷೀಣ ಧನಿಯೊಂದು " ಯಾರದು?" ಎಂದದ್ದು ಕೇಳಿಸಿತು. ಅಂತೂ ಒಳಗಡೆ ಯಾರೋ ಇದ್ದಾರೆ ಎಂದನಿಸಿ ನಮಗೆ ಖುಷಿಯಾಗಿ ತಳ್ಳು ಬಾಗಿಲು ಮುಂದಕ್ಕೆ ನೂಕಿ ಒಳಗಡೆ ತಲೆಯಾಡಿಸಿದ್ದಷ್ಟೇ, ಅದೆಲ್ಲಿತ್ತೋ ಆ ಪಾಟಿ ಹೊಗೆ! ಕ್ಷಣದಲ್ಲಿ ಕಣ್ಣೆಲ್ಲಾ ಹೊಗೆ ತುಂಬಿ ಕಣ್ಣು ಖಾರವಾಗಿ ಕಣ್ಣೀರು ದಳದಳ ಎಂದು ಒಸರಿಸತೊಡಗಿತು. ನಮಗೀಗ ಏನೆಂದರೆ ಏನು ಕಾಣುತ್ತಿಲ್ಲ. ಇದೆಲ್ಲಿಬಂದು ಸಿಕ್ಕಿ ಬಿದ್ದೆ ಮತ್ತು ನಮಗ್ಯಾರು ಮರುತ್ತರ ಕೊಟ್ಟಿದ್ದು ಎಂದು ಒಟ್ಟೊಟ್ಟಿಗೆ ಯೋಚಿಸಲು ನನಗೇ ಕ್ಷಣಕಾಲ ದಿಗಿಲು ಜೊತೆಗೆ ಕೈಕಾಲು ಕಂಪನವಾದಂತಾಯ್ತು. ಅಷ್ಟರಲ್ಲಿ ಪ್ರಾಣಿ ಮಾಡಿದ ಒಳ್ಳೇ ಕೆಲಸವೆಂದರೆ, ಸ್ವಲ್ಪವೇ ತೆರೆದಿದ್ದ ತಳ್ಳುಬಾಗಿಲನ್ನು ಎರಡು ಹೆಜ್ಜೆ ಹಿಂದೆ ಹೋಗಿ ಪೂರ್ತಿ ತೆರೆದುಬಿಟ್ಟ. ಒಂದೈದು ನಿಮಿಷ ಕಳೆದಂತೆ ಅಲ್ಲಿದ್ದ ಹೊಗೆ ಚೂರುಚೂರೆ ಮರೆಯಾಗಿ ಗುಡಿಸಿಲೊಣಗಣ ಚಿತ್ರ ನಮಗೆ ಅರೆಬರೆಯಾಗಿ ಕಾಣತೊಡಗಿತು.
ಅಲ್ಲಾರೋ ಇರಬೇಕಲ್ಲ ಮೂಲೇಲಿ ಎಂದು ಇಬ್ಬರಿಗು ಅನ್ನಿಸತೊಡಗಿತು. ನಮ್ಮ ಮುಖದ ಭಾವನೆಗಳು ಬದಲಾಗಿ ಒಬ್ಬರ ಮುಖ ಒಬ್ಬರು ನೋಡುತ್ತ ಇರುವಾಗ ನಮಗೆ ಅಲ್ಲಿನ ಚಿತ್ರಣ ಇನ್ನು ಸ್ಪಷ್ಟವಾದಂತೆ ಅಲ್ಲಿ ಯಾರೋ ನಮ್ಮಿಬ್ಬರನ್ನು ಹೊರತುಪಡಿಸಿ ಇನ್ನ್ಯಾರೋ ಇದ್ದಾರೆ ಎನ್ನುವ ನಮ್ಮ ಅನುಮಾನ ಬಲವಾಗುತ್ತ ಬಂದು ನೋಡಿದರೆ ಅಲ್ಲಿ ಒಂದು ಮೂಲೆಯಲ್ಲಿ ಒಂದು ಮುಪ್ಪಾನುಮುಪ್ಪ ಮುದುಕಿ ನಿಂತು ತದೇಕ ಚಿತ್ತದಿಂದ ಬಿಟ್ಟಕಣ್ಣು ಬಿಟ್ಟಂತೆ ನಮ್ಮನ್ನೇ ನೋಡುತ್ತಿದ್ದಾಳೆ! ಪ್ರಾಣಿ ಆಗಲೆ ಹೇಳಿದ್ದ ದೆವ್ವ ಪಿಚಾಚಿ ಮಾತು ನಿಜವೆನ್ನಿಸತೊಡಗಿ ನನ್ನ ಸೈದ್ದಾಂತಿಕ ನಿಲುವಿನಲ್ಲಿ ಬದಲಾವಣೆ ಬರತೊಡಗಿರುವಾಗ, ಅಲ್ಲಿ ಮೂಲೇಲಿ ನಿಂತಿದ್ದ ಆ ಶರೀರದಿಂದ ಮತ್ತೊಮ್ಮೆ ಕ್ಷೀಣ ಧನಿ ಗಂಟಲೊಡೆಯಿತು. "ಯಾರದು?" ಮನುಷ್ಯ ಮಾತ್ರರಾದವರು ಮಾತ್ರ ಕೇಳಬಹುದಾಗಿದ್ದ ಪ್ರಶ್ನೆ ಅದಾಗಿತ್ತು. ಆಗ ಪ್ರಾಣಿ ಹೇಳಿತು
"ನಾವು"
" ನಾವೆಂದರೆ"
"ನಾವೆಂದರೆ ನಾವೇ!"
"ಅದೇ ನೀವೆಂದರೆ ಯಾರು?"
"ದಾರಿ ತಪ್ಪಿಬಂದವರು"
" ಓ! ನೀವಾ? ಹಾಗಿದ್ದರೆ ಧೈರ್ಯವಾಗಿ ಒಳಗೆ ಬನ್ನಿ"
"ನಾವೀಗಾಗಲೆ ಒಳಗಡೆಯೇ ಇರೋದು"
" ಹೌದಾ! ನಂಗೆ ಅಷ್ಟಾಗಿ ಕಣ್ಣು ಕಾಣಲ್ಲ್ರಪ್ಪ, ಬನ್ನಿ ಒಳಗೆ ನಿಸ್ಸಂಕೋಚವಾಗಿ"
ನಿಸ್ಸಂಕೋಚವಾ? ನಮಗಾ? ಅದೂ ಸತ್ತುಬದುಕೆದ್ದು ಬಂದಂತಿರುವ ಈ ಅಜ್ಜಿಯ ಮುಂದೆ? ನೋಚಾನ್ಸ್! ನಮ್ಮ ಪ್ರತಿಷ್ಟೆ ನಮಗೆ ಹಾಗೆ ಹೇಳಿತು. ಈಗಾಗಲೆ ಹೊಗೆ ಗುಡಿಸಲಿಂದ ಹೆಚ್ಚೂಕಡಿಮೆ ಇಲ್ಲವಾದ್ದರಿಂದ ಮತ್ತು ಕಣ್ಣುರಿ ಕಡಿಮೆಯಾಗಿ ಕಣ್ಣುಗಳು ಅಲ್ಲಿ ಹಚ್ಚಿದ್ದ ಲಾಂದ್ರದ ಬೆಳಕಿಗೆ ಒಗ್ಗಿಕೊಳ್ಳಲು ಗುಡಿಸಲಿನ ಒಳ ಚಿತ್ರಣ ಅತಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿತು. ಅದೊಂದು ಚಚ್ಚೌಕಾರದ ಹತ್ತರಿಂದ ಹದಿನೈಡಿ ಇರಬಹುದಾದ ಗುಡಿಸಲು. ಅಲ್ಲಿ ಮೂಲೆಯಲ್ಲಿ ಸುತ್ತಿಟ್ಟಿರುವ ಚಾಪೆ ಮುದುಡಿ ಮಲಗಿತ್ತು. ಇನ್ನೊಂದು ಮೂಲೆಯಲ್ಲಿ , ಮೂರುಕಲ್ಲಿನ ಒಲೆಯಮೇಲೆ ಹಸೀ ಸೌದೆಯಿಂದ ಮಡಕೆಯಲ್ಲಿ ಅಜ್ಜಿ ಬೇಯಿಸುತ್ತಿದ್ದ ಅಂಬಲಿ ಥರದ್ದೇನೊ ಕೊತಕೊತ ಸದ್ದು ಮಾಡುತ್ತಿತ್ತು. ಅದರ ಪಕ್ಕದಲ್ಲಿ ಒಂದೆರೆಡು ಬಣ್ಣಗೆಟ್ಟ ಡಬ್ಬಗಳು, ಒಂದು ಬೆಂಕಿಪಟ್ಣ, ಎಣಿಸಿಬಿಸಾಡಬಹುದಾದಷ್ಟು ಒಂದೆರೆಡು ತಟ್ಟೆ ಲೋಟ ಅಷ್ಟೇ! ಇನ್ನು ಆ ಗುಡಿಸಲಲ್ಲಿ ಏನೆಂದರೆ ಏನೂ ಇರಲಿಲ್ಲ ; ಕೊನೆಪಕ್ಷ ಉಸಿರಾಡಲು ಒಂದೇಒಂದು ಕಿಟಕಿಯೂ ಕೂಡ. ನಮಗೆ ಗುಡಿಸಲು ಒಂಥರ ನಿಗೂಡತೆಯ ಕೇಂದಬಿಂದುವಾಗು ಭಾಸವಾಗತೊಡಗಿತು.
"ಅಸೀ ಸೌದೆ ಅಲ್ವಾ ಅದ್ಕೇ ನಿಮ್ಗೆ ಕಣ್ಣುರಿ ಅತ್ಗೊಂಡಿದ್ದು " ನಮ್ಮ ಕಣ್ಣುರಿಗೆ ಕಾರಣ ಹುಡುಕಿ ಹೇಳುವವಳಂತೆ ಹೇಳಿತು ಅಜ್ಜಿ. ಸರಿ ಬಿಡು ಅಜ್ಜಿ ನೀನು ಡಾಕ್ಟರಾಗಿರಬೇಕಾದವಳು ತಪ್ಪಿ ಇಲ್ಲಿದ್ದೀಯ ಅಂತ ಅಜ್ಜಿ ಮುದುಡಿ ಮಲಗಿದ್ದ ಚಾಪೆಯನ್ನು ಹಾಸಿ ಬಂದು ಕೂರೆನ್ನುವಂತೆ ಸಂಜ್ನೆ ಮಾಡಿದಕ್ಕೆ ನಾವು ಬಂದು ಕುಳಿತೆವು. ತಳ್ಳುಬಾಗಿಲು ತೆರೆದಿದ್ದರಿಂದ ಈಗ ಅಷ್ಟಾಗಿ ಹೊಗೆಯಾಡುತ್ತಿರಲಿಲ್ಲ.
ಇದಾದ ನಂತರ ಅಜ್ಜಿ ಎಷ್ಟೊತಾದರು ಮಾತಾಡಲಿಲ್ಲ. ನಾವು ಏನು ಕೇಳಿದರು ಉತ್ತರ ಕೊಡುತ್ತಿರಲಿಲ್ಲ , ಸುಮ್ಮನೆ ನಮ್ಮ ಕಡೆ ನೋಡಿ ಮತ್ತೆ ನೋಟ ಒಲೆ ಮೇಲೆ ಬೀಸುತ್ತಿದ್ದರು. ನಮಗೂ ಬೇಜಾರಾಗ ಹತ್ತಿತು. ಸದ್ಯ ಅಷ್ಟಾದರು ನೆಮ್ಮದಿಯಾಗಿ ಇರುವಂತೆ ಮಾಡಿದ್ದು, ನಾವು ಒಳಗಡೆ ಬಂದು ಕುಳಿತಾಗ ಅಜ್ಜಿ ನಮಗೆ ನೀರಿನ ಗಡಿಗೆ ತೋರಿಸಿ ಒಂದು ಸಿಲ್ವಾರ್ ಲೋಟವನ್ನ ತಾನಿದ್ದಲ್ಲಿಂದಲೇ ನಮ್ಮ ಬಳಿ ನೂಕಿದರು. ಅದು ಬಂದು ನಮ್ಮ ಬಳಿ ಬಿದ್ದದ್ದೇ ತಡ, ರೇಜಿಗೆ ಬಿದ್ದವರಂತೆ ನೀರನ್ನು ಗಟಗಟ ಕುಡಿದೆವು. ನಂತರ ನಮ್ಮ ಗಂಟಲಿಗೆ ಬ್ರೇಕ್ ಬಿದ್ದಂತಾಗಿ ಸುಮ್ಮನೆ ಕುಳಿತಿರಲು, ಆಗೊಮ್ಮೆ ಈಗೊಮ್ಮೆ ನಾವು ಬಾಯ್ದೆರೆದು ಅಜ್ಜಿಯನ್ನು ಮಾತಾಡಿಸ ಹೋದರೆ ಈ ಅಜ್ಜಿ ನಮ್ಮ ಕಡೆ ಗಮನವೇ ಕೊಡುತ್ತಿಲ್ಲ! ನಮಗೆ ಗುಡಿಸಲ ಜೊತೆಗೆ ಅಜ್ಜಿಯ ವರ್ತನೆ ಕಂಡು ನಿಗೂಡತೆ ಹೆಚ್ಚಾಗುತ್ತಾ ಹೋಯ್ತು.
" ಸರಿ ಮಕ್ಳೇ, ಊಟಕ್ಕ್ ಬನ್ನಿ " ಅಂತು ಅಜ್ಜಿ.
ನಾವು ಮರುಮಾತಾಡದೆ ಚಕ್ಕೆಂದೆದ್ದು ಕೈಕೂಡ ತೊಳೆಯದೆ ಅಜ್ಜಿಯ ಮಾತು ನೆರವೇರಿಸುವಂತೆ ಅಜ್ಜಿ ಕೊಟ್ಟ ಸಿಲ್ವಾರ್ ತಟ್ಟೆಯ ಮುಂದೆ ಕೂತಿದ್ದೆವು. ಅಜ್ಜಿ ಅದೇನು ಬಡಿಸಿದರೊ ನಾವೇನು ತಿಂದೆವೊ ಒಂದು ನಮಗಂತು ಗೊತ್ತಿಲ್ಲ. ಹಸಿದಿದ್ದ ಹೊಟ್ಟೆ ತುಂಬಿಸುವುದೊಂದೇ ನಮಗಾಗ ಗೊತ್ತಿತ್ತು. ಊಟವೆಲ್ಲ ಸಾಂಗೋಪಂಗವಾಗಿ ನಡೆದ ಮೇಲೆ ನಮಗೆ ಹೋಗಿದ್ದ ಜೀವ ಮತ್ತೆ ಬಂದಂತಾಗಿ ಕೆಲವೇ ನಿಮಿಷಗಳ ಹಿಂದಿದ್ದ ಕೋಪತಾಪವೆಲ್ಲ ಕರಗಿ ನೀರಾಗಿಹೋಗಿತ್ತು. ಮನಸು ಸಮಾಧಾನದ ಅಲೆಯಲ್ಲಿ ತೇಲಾಡುವಂತಾಗುತ್ತಿರಲು ಅಜ್ಜಿ ಕೂಡ ಎರಡು ತುತ್ತು ಊಟ ಮುಗಿಸಿ ನಮ್ಮ ಮುಂದೆ ಬಂದು ಒಂದು ಮೂಲೆಯಲ್ಲಿ ಕುಳಿತು,
"ದಾರಿತಪ್ಪಿ ಬಂದ ಮಕ್ಳೇ ಅದೇನು ಹೇಳಿ ನಿಮ್ಮ ಕಥ್ಯಾ! ನೀವ್ಯಾವಾಗಾದ್ರಿ ದಾರಿತಪ್ಪ್ದೋರು ಹಾಂ?" ಅಜ್ಜಿ ಮಾತಾಡೊ ಮೂಡಿಗೆ ಬಿದ್ದಂತೆ ಕಾಣಿಸಿತು. ಅಜ್ಜಿಗೂ ಕೂಡ ಮಾತಾಡಲು ಯಾರು ಇಲ್ಲವೆಂದು ಅನ್ನಿಸಿ ನಾವು ಮಾತಾಡಲು ಶುರುವಿಟ್ಟೆವು.
" ಅಜ್ಜೀ, ನಾವು ದಾರಿತಪ್ಪಿದ ಮಕ್ಕಳಲ್ಲ. ನಮಗೂ ಅಪ್ಪ ಅಮ್ಮ ಎಲ್ಲಾ ಇದ್ದಾರೆ. ನಾವು ಬಲ್ಲಾಳಪುರದಿಂದ ನಮ್ಮ ಮತ್ತೊಬ್ಬ ಸ್ನೇಹಿತನ ಆಹ್ವಾನದ ಮೇರೆಗೆ ಅವನ ಹಳ್ಳಿಯಲ್ಲಿ ನಡೆಯುತ್ತಿರೊ ಜಾತ್ರೆಗೆ ಬಂದಿದ್ದೆವು. ಎಲ್ಲಾ ಚೆನ್ನಾಗಿತ್ತು ಆದರೆ ಕೊನೆಗೆ ಏನೋ ಮನಸ್ತಾಪವಾಗಿ ಅಲ್ಲಿಂದ ಹೇಗಿದ್ದೆವೋ ಹಾಗೆ ವಾಪಾಸ್ ಊರಿಗ್ ಹೊರಟು ಬಂದೆವು. ಅಲ್ಲಿ ಜಾತ್ರೆಯಾದ್ದರಿಂದ ಯಾರೂ ಅಂಗಡಿಯಾಗಲಿ ಹೋಟೆಲ್ ಆಗಲಿ ತೆರೆದಿರಲಿಲ್ಲ. ಬೆಳಗ್ಗೆ ತಿಂಡಿ ತಿಂದು ಮನೆಬಿಟ್ಟಿದ್ದಷ್ಟೆ, ಅದಾದಮೇಲೆ ನೀವೀಗ ಬಡಿಸಿದ್ದೇ. ಊರಿಗೆ ಹೋಗೋಣವೆಂದರೆ ಹಾಳಾದ್ದು ಬಸ್ಸೂ ಇಲ್ಲ. ನಡೆದು ನಡೆದು ಕೊನೆಗೆ ನಾವಿಲ್ಲಿ ಬಂದು ಸೇರಿದೆವು" ಎಂದು ಒಂದೇ ಉಸಿರಿನಲ್ಲಿ ನಡೆದದ್ದೆಲ್ಲವನ್ನು ಹೇಳಿದೆವು.
" ಅದ್ಸರಿ ಯಾವ್ ಅಳ್ಳೀಗ್ ನೀವ್ ಬಂದಿದ್ದು?"
" ಇಲ್ಲೇ ಪಕ್ಕದಲ್ಲಿರೊ ರಾಯರಗುಟ್ಟೆಗೆ"
" ಲೋ ಮಕ್ಳಾ! ರಾಯರಗುಟ್ಟೆಗು ನೀವಿಗ ಇಲ್ಲಿ ಬಂದಿರೋದ್ಕು ಎಷ್ಟು ದೂರ ಐತೆ ಗೊತ್ತಾ?"
" ಎಷ್ಟು?"
" ಅನ್ನೆಲ್ಡು ಮೈಲು ಕಣ್ರಪ್ಪ"!
" ಏನು ಹನ್ನೆರೆಡು ಮೈಲೀನಾ??!!"
" ಊಂ ಕಣ್ರುಲಾ! ನಿಮ್ಮ್ ಮಾರೆ ನೋಡ್ಕ್ಯಂಡೇ ಅನ್ಕೊಂಡೇ ಇವ್ರ್ಯಾರೋ ಬೋದೂರ್ದಿಂದ ಬಂದವ್ರಂತ. ಅದ್ಕೇ ನೀವಾಗ್ಲೆ ಏನ್ ಕೇಳುದ್ರು ನಾನೇನು ಏಳ್ದಂಗ್ ಸುಮ್ಕಿರದು, ಪಾಪ ಮೊದ್ಲೇ ಸುಸ್ತಾಗಿರ್ತೀರ ನಾನ್ಯಾಕೆ ಮಾತ್ಗೆ ಮಾತು ಬೆಳ್ಸೀ ನಿಮ್ಗಿನ್ನೂ ಸುಸ್ತ್ ಮಾಡೊದೂಂತ ಸುಮ್ನಿದ್ದೆ ಕಣ್ರಪ್ಪೊ"
ಹಾಗಿದ್ದರೆ ನಾವು ಹನ್ನೆರೆಡು ಮೈಲಿ ನಡೆದುಬಂದಿದ್ದೀವಾ? ನಡೆದರೆಲ್ಲಿ ಸೊಂಟ ಬೀಳುವುದೊ ಎಂಬ ನಾವು ಇಷ್ಟು ದೂರ ನಡೆದುಬರಲು ಹೇಗೆ ಸಾಧ್ಯವಾಯಿತು? ಚಿಂತೆಗೆ ಬಿದ್ದೆವು.
ಅಜ್ಜಿ ಕಾಲಿನ ಬಳಿ ಸಣ್ಣದೊಂದು ಕರಿಸೀಮೆ ತನ್ನ ಪಾಲಿಗೆ ಸಂದ ಆ ಹೊತ್ತಿನ ಚುಟುಕು ಬುತ್ತಿಯನ್ನು ಹೆಗಲಮೇಲೊತ್ತುಕೊಂಡು ಸಾಗುತ್ತಿತ್ತು. ಇದನ್ನು ಅಜ್ಜಿ ಬಹಳ ಕೂತೂಹಲದಿಂದ ನೋಡುವುದು ನಮ್ಮ ಗಮನಕ್ಕೆ ಬಂದು, "ಅದೇನಜ್ಜಿ ಆ ಸೀಮೆಯನ್ನು ಹಾಗೆ ದಿಟ್ಟಿಸುತ್ತಿದ್ದೀರಲ್ಲ" ಎಂದು ನಾನು ಪ್ರಶ್ನಿಸಿದೆ.
ಅಜ್ಜಿ ನಕ್ಕು ಹೇಳಿತು. " ಮಕ್ಳಾ! ಬಹ್ಶ ತನ್ನ್ ಅಳ್ವುಉಳ್ವಿನ ಪ್ರಸ್ನೆ ಬಂದ್ರೆ ಮನ್ಶಾ ಒಬ್ನೇ ಯಾಕೆ, ಇಡೀ ಪ್ರಾಣಿಪಕ್ಷಿಕ್ರಿಮಿಕೀಟ ಸಂಕ್ಲ ಎಲ್ಲ್ವೂ ಓರಾಟ ನಡ್ಸಿಯಾರೂ ತನ್ನ್ ತನ್ನ್ ಪಾಲಿನ ಅನ್ನಾನ ಉಟ್ಟುಸ್ಕೊಂಡ್ ತಿಂತವೆ ತಿಳ್ಕಾ. ಜೀವಯೈವಿದ್ಯೆ ಐತಲ್ಲ? ಅದ್ರಾಗ್ ತನ್ನ್ ಎಜ್ಜೆಗುರ್ತು ಮೂಡ್ದಂಗ್ ತನ್ನ್ ಪಾಡ್ಗದು ತಾನಿರ್ತದೆ. ಸುರುಷ್ಟಿ ಕೊಟ್ಟ ಬಾಳ್ನ ತಾನು ಪೂರ್ಣ ಬಾಳೋದ್ರಿಂದ ಸಾರ್ಥಕಥೆ ಕಡೆ ನಡೀತಾ ಓಗ್ತದೆ. ಅಂಗಾದ್ರೆ, ಮನ್ಶನ್ ಸಾರ್ಥ್ಕತೆ ಎಂಗೇ? ತನ್ನ್ ಜೀವಮಾನ್ದ ಎಜ್ಜೆಗುರ್ತು ಮೂಡ್ಸೋದ್ರಿಂದ್ಲಾ? ಸಾಧ್ನೆ ಸನ್ಮಾನಗ್ಳ ಪಟ್ಟಿತೆಗ್ದು ಪ್ರಚಾರ ಪಡ್ಸಿ ಮುಂದಿನ್ ಪೀಳ್ಗೆಗೆ ಮಂದಟ್ಟು ಮಾಡೋದ್ರಿಂದ್ಲಾ? ಆಸ್ತಿಅಂತಸ್ತು ಜೀವ್ನ ನಡ್ಸೋದ್ರಿಂದ್ಲಾ? ಮಹ್ಲುಕ್ವಾಟೆಕೊತ್ಲಗ್ಳ ಒಡ್ಯರಾಗೋದ್ರಿಂದ್ಲಾ? ತನ್ನ್ ನಂತ್ರಾನೂ ಜನ್ರು ನೆನ್ಯಂಗೆ ಮೈಲ್ಗಲ್ಲೇನಾದ್ರು ನೆಡೋದ್ರಿಂದ್ಲಾ? ಅಡ್ಡ್ ಪಲ್ಲಕ್ಕಿ ಗ್ವುರುಗಳ್ ತರ ಸಿಸ್ಯರ್ನ ಇಟ್ಟ್ಕೊಂಡು ತನ್ನ ತಾನು ಅರ್ಥೈಸೋದ್ರಿಂದ್ಲಾ? ಏಳ್ರಪ್ಪ ಎಂಗೆ ಮನ್ಶನ್ ಸಾರ್ಥಕಥೆ ಆಗೋದು?"
ಸಮಯ ಸರಿದು ತೆಗೆದಿಟ್ಟ ತಳ್ಳುಬಾಗಿಲಿನಿಂದ ಬೀಸುತ್ತಿದ್ದ ತಣ್ಣನೆಯ ಗಾಳಿಕೂಡ ಯಾಕೋ ಅಜ್ಜಿ ಕೇಳಿದ ಪ್ರಶ್ನೆಗಳಿಂದ ಬಿಸಿಯಾದಂತೆ ನಮಗನಿಸಿತು. ಯಾವ ಪ್ರಶ್ನೆಗಳಿಗೂ ನಮ್ಮಲ್ಲಿ ಉತ್ತರವಿರಲಿಲ್ಲ ಅಥವಾ ಅಜ್ಜಿ ಎತ್ತಿದ ಆ ಪ್ರಶ್ನೆಗಳಿಗೆ ಉತ್ತರ ಕೊಡುವ ಹಾಗು ಹುಡುಕುವ ಸಾಮರ್ಥ್ಯವಿರಲಿಲ್ಲ. ಈ ಅಜ್ಜಿ ಯಾಕೊ ನಮ್ಮಂತೆ ಸಾಮಾನ್ಯ ಅಂತ ನಮಗನ್ನಿಸಲಿಲ್ಲ.
" ಮಕ್ಳಾ ಯಾಕ್ರೋ ಇಂಗ್ ತಿಂದಂಗ್ ಮಾಡ್ಕೊಂಡ್ರಲ್ಲೋ ಮಾರೇನಾ? ಈ ಮುದ್ಕಿ ಇಂಗೇ ಏನೇನೋ ವದುರ್ತದೆ. ಯಾಕಂದ್ರೆ ನಂಗೂ ಯಾರ್ ಕೂಡ ಮಾತಾಡಿಯಾದ್ರು ಸಮಾ ಅಭ್ಯಾಸ್ವಿಲ್ಲ ನೋಡು? ಅದ್ಕೆ!"
" ಅಜ್ಜೀ, ನಿಮಗೆ ಅಭ್ಯಾಸವಿಲ್ಲ ಅಂತ ಯಾರು ಹೇಳಿದ್ದು? ನೀವು ನಮಗೆ ಕೇಳಿದ ಪ್ರಶ್ನೆಗಳು ಇಡೀ ಮಾನವಕುಲಕ್ಕೇ ಕೇಳಿದಂತಿತ್ತು" ಅಜ್ಜಿಯ ಮುಖವನ್ನು ನೋಡುತ್ತ ನಾನಂದೆ.
"ಅದೇನ್ ಮಾನ್ವಸಂಕುಲಾನೊ ಏನೋ? ಒಬ್ಬ್ರಿಗೊಬ್ರು ಬಡಿದಾಡ್ಕೊಂತವೆ ಕಾಲೆಳಿತವೆ ಮಾಡ್ಬಾರ್ದನ್ನೆಲ್ಲಾ ಮಾಡಿ ಕೊನ್ಗೆ ಏನು ಆಗಿಲ್ಲಾಂತ ಸುಮ್ನಿರ್ತವೆ, ನಂಗಂತು ನೋಡಿನೋಡಿ ಸಾಕಾಗೋಗದ್ಯಪ್ಪ. ಅಸ್ಲು ತನ್ನ್ ಪಾಡ್ಗೆ ತಾನಿರೊದಕ್ಕ್ ಆಗಂಗೇ ಇಲ್ಲ ನೋಡು ಈ ಮನ್ಶಸಂಕ್ಲಕ್ಕೆ. ಎದ್ರುಗಡೆ ಪಿರುತಿ ಮಾತಾಡಿ ಬೆನ್ನ್ ತಿರುಗ್ಸಿದ್ರೆ ಚೂರಿ ಆಕ್ತಾರೆ. ದುರಾಸೆಗ್ ಬಿದ್ದು ಅಪ್ಪ ಅಮ್ಮ ಅಣ್ಣತಂಗಿ ಬಂಧುಬಳ್ಗ ಎಲ್ಲದ್ರಿಂದ ದೂರಾಗಿ ದುಡ್ದಿನ್ ಕುದ್ರೆ ಅತ್ತಿ ಅದ್ರ್ ಮೇಲ್ ಸವಾರಿ ಮಾಡಿ ಕೊನ್ಗೆ ಸಂಬಂಧಗ್ಳು ಅರ್ಥ್ವಾಗಿ ಬರೋಷ್ಟ್ರಲ್ಲಿ ಇಡೀ ಜೀವ್ನಾನೆ ಮಗ್ಚಾಕೊಂಡಿರ್ತದೆ. ಮನ್ಶ ಮನ್ಶಂಗ್ ಬೆಲ್ ಕೊಡೋದ್ ಕಲ್ಯೋದ್ ಯಾವಾಗ? ಮನ್ಶ ಮನ್ಶನ್ ಮನ್ಶಂತೆ ನೋಡೋಕ್ ಯಾಕಾಗಲ್ಲ? ತಾನು ತನ್ನ್ ಎಂಡ್ತಿಮಕ್ಕ್ಳಷ್ಟೇ ಅನ್ನೋದ್ನ ಬಿಟ್ಟು ಎಲ್ಲ್ರೂ ಒಂದೇಂತ ನೋಡಕ್ಕಾಗಲ್ವಾ? ಅಲ್ಲ್ರಪ್ಪಾ ಇಡೀ ಭೂಮಂಡ್ಲದೊಳ್ಗೆ ಯಾವ್ದೇ ಪ್ರಾಣಿಪಕ್ಷಿಕ್ರಿಮಿಕೀಟಗ್ಳು ಇದು ನಂದೇ ಅದು ನಿಂದೇ, ನಂಗಿಷ್ಟು ಬರ್ಬೇಕು ನಿಂಗಿಷ್ಟು ಅಂತೇನಾದ್ರು ಗೆರೆ ಗೀಚ್ಕೊಂಡ್ರೆ ಮನ್ಶಾ ಅನ್ನೋ ಪರ್ಲ್ಕೋಕದ್ ಪ್ರಾಣಿ ನಿಂತಾಲ್ಲೇ ಜೀವ ತೆಕ್ಕೋಬೇಕು ತಿಳ್ಕಳಿ. ಅವ್ಕೆಲ್ಲಾ ಇರ್ದಿರೊ ಗೆರೆಗೀಚು, ನಂದು ನಂದೇ ಅನ್ನೋ ತಾರತಮ್ಯ ನಮ್ಗ್ಯಾಕೆ ಏಳಿ? ತಾ ಬೇರೆ ನೀ ಬೇರೇಂತ ಅವೇನಾದ್ರು ಬ್ಯಾದಭಾವ ಮಾಡೋದ್ ಎಲ್ಲಾರ ಕೇಳೀರಾ? ಇಲ್ಲ್ವಲ್ಲ? ಮತ್ತೆ ನಮ್ಗ್ಯಾಕೆ ನೀ ದೊಡ್ಡ್ವ ನೀ ಚಿಕ್ಕ್ವ ಅಂತ ಬೇರಿಂಗ್ಡ? ಯಪ್ಪೋ ಸರ್ಯಾಗ್ ಕೇಳ್ಸ್ಕೊಳಿ, ಅವ್ಕೇನಾದ್ರು ಮಾತು ಬಂದು ಮಾತಾಡಂಗಿದ್ದಿದ್ರೆ ನಾವೆಲ್ಲ ಅದ್ರ್ ಅಡಿಯಾಳಾಗಿರ್ತಿದ್ವಿ. ಇವತ್ತ್ ಇಷ್ಟೆಲ್ಲಾ ಎಗ್ರಾಡೋ ನಾವು ಆಗ ಅವ್ಗುಳ್ ಮುಂದೆ ನೀಚನಿಕೃಷ್ಟವಾಗ್ ಬಾಳ್ ನಡ್ಸಬೇಕಾಕ್ತಿತ್ತು."
ಈ ಎಲ್ಲಾ ಮಾತುಗಳಿಂದ ನಮಗೆ ಗೊತ್ತಿಲ್ಲದ ಲೋಕಕ್ಕೆ ಹೋಗಿ ವಾಪಾಸ್ ಬಂದಂತಿತ್ತು ಅಜ್ಜಿ ಮೇಲ್ಗಾಣಿಸಿದಂತೆ ಉಸಿರು ಬಿಗಿಹಿಡಿಯದಂತೆ ಹೇಳಬೇಕಾಗಿದ್ದೆಲ್ಲ ಹೇಳಿ ಮಾತು ನಿಲ್ಲಿಸಿದಾಗ! ನಮ್ಮಿಬ್ಬರಿಗು ಅಜ್ಜಿಯ ಮಾತುಗಳು ಎಷ್ಟು ಅರ್ಥವಾಯಿತೊ ಇಲ್ಲವೊ ಗೊತ್ತಿಲ್ಲ. ಆದರೆ ನನಗೆ ಮನದಲ್ಲಿ ಎಂದೂ ಕಾಣದ ಜೀವಕಳೆ ಒಸರುವಂತಾಗುತ್ತಿತ್ತು.
ಪ್ರಕೃತಿ ಮೈದಳೆದು ನಿಂತು ಸೃಷ್ಟಿ ನಿಯಮದೊಂದಿಗೆ ಕಲೆತಾಗ ನಡೆವ ಸಹಜ ಪ್ರಕ್ರಿಯೆಯೆಂಬಂತೆ ಅಜ್ಜಿ ಮಾತಾಡಿತ್ತು. ಅಜ್ಜಿ ಹೇಳಿದ್ದರಲ್ಲಿ ಲವಲೇಷಮಾತ್ರವೂ ಅಸತ್ಯವಾದುದಾಗಲಿ, ಅಸಂಬದ್ದವಾಗಲಿ ಇರಲಿಲ್ಲ. ಯಾವುದೋ ದೈವವಾಣಿ ನಮ್ಮೆದುರು ತಾನೆ ಮೈದಳೆದು ನಿಂತು ನಮಗಂಟಿದ್ದ ಅಗ್ನಾನದ ತೆರೆಯನ್ನು ಸರಿಸಲು ಸರಿ ರಾತ್ರಿಯಲ್ಲಿ, ಹೆಸರು ಗೊತ್ತಿಲ್ಲದ ಕಾಡಿನಲ್ಲಿ, ಕಾಲದ ಪರಿವೆಯನರಿತ ಅಜ್ಜಿಯ ರೂಪಾಂತರವಾದಂತೆ ಅನಿಸುತಮೊಬೈಲ್ ಸಿ ನಿಜ, ಇಲ್ಲಿ ಮನುಷ್ಯನು ಮನುಷ್ಯನನ್ನು ನೋಡುವ ರೀತಿ ಬದಲಾಗಬೇಕಿದೆ, ಎಲ್ಲರೂ ನನ್ನವರೆಂದು ಭಾವಿಸುವ ಮನಸುಗಳ ಅವಶ್ಯಕತೆಯಿದೆ, ನಮ್ಮನಮ್ಮ ನಡುವಿನ ಅಂತರ ಕಡಿಮೆಗೊಳಿಸಿ ಭಾವೈಕ್ಯತೆಯ ನದಿ ಹರಿಯಬೇಕಿದೆ, ಸಾಮರಸ್ಯದ ಬದಲಾವಣೆ ಎಂದಿಗಿಂತ ಹೆಚ್ಚಿಗೆ ಬರಬೇಕಿದೆ, ಇಡೀ ಮಾನವಸಂಕುಲ ಪ್ರಾಣಿಪಕ್ಷೀಕ್ರಿಮಿಕೀಟಗಳ ಭಾಂದವ್ಯದ ಬೆಸುಗೆ ಬೆಸೆಯಬೇಕಿದೆ. ಹೌದು ಅಜ್ಜಿ ಹೇಳಿದ್ದು ಎಷ್ಟೊಂದು ನಿಜವಲ್ಲವೆ?
ಇದನ್ನೇ ಯೋಚಿಸುತ್ತ ಇದ್ದ ನನಗೆ ಸಮಯ ಸರಿದುದರ ಪರಿವೆಯಿರಲಿಲ್ಲ. ನಾವು ಎಲ್ಲಿದ್ದೆವೊ ಅಲ್ಲೇ ಮಲಗಿ ನಿದ್ದೆ ಹೋಗಿದ್ದೆವು. ಬೆಳಗಿನ ಜಾವ ಕಣ್ಣು ಬಿಟ್ಟು ನೋಡಿದಾಗ ಸೂರ್ಯನುದಯಿಸುತ್ತಿದ್ದ. ಪ್ರಖರ ಬೆಳಕು ಗುಡಿಸಲೆಲ್ಲಾ ಹರಡುತ್ತಿತ್ತು. ನೋಡಿದರೆ ಪ್ರಾಣಿ ಹೆಸರಿಗೆ ತಕ್ಕಂತೆ ವಿರಾಜಮಾನನಾಗಿ ಮಲಗಿದ್ದಾನೆ, ಅತ್ತಕಡೆ ಅಜ್ಜಿ ಬಸವನ ಹುಳು ತರ ಸುಳಿದಿರುಗಿ ಮುದುಡಿದ್ದಾರೆ. ಅಜ್ಜಿ ತನ್ನಲ್ಲಿದ್ದ ಹರುಕು ಹೊದಿಕೆಯನ್ನು ನಮ್ಮಿಬ್ಬರಿಗೂ ಹೊದಿಸಿ ತಾನು ಒಲೆಯ ಹತ್ತಿರ ಮಲಗಿದೆ. ಬಡತನದಲ್ಲೂ ಶ್ರೀಮಂತಿಕೆ ಮೆರೆದ ಅಜ್ಜಿಯ ನೋಡುತ್ತಿದ್ದೆ , ಅವರು ಸಾಕ್ಷಾತ್ ಮಾನವಕುಲದ ಶ್ರೇಷ್ಟರಂತೆ ಕಾಣುತ್ತಿದ್ದರು. ಬಡತನದಲ್ಲೇ ಅಲ್ಲವೆ ಬ್ರಾತೃತ್ವದ ಮೂಲವಿರುವುದು?
ಅಜ್ಜಿಗೆ ಏನು ಹೇಳಬೇಕೊ ತಿಳಿಯದೆ ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ಇದೆಲ್ಲಾ ಯಾಕೆ ಮಗಾ! ಅಂತು, ನಾನು ಮಾಡಿದ್ದು ನೋಡಿ ಪ್ರಾಣಿಯೂ ಹಾಗೇ ಮಾಡಿದ. ಜೀವಕಳೆ ತುಂಬಿದ ಜೀವಕ್ಕೆ ದುಡ್ಡುಕೊಟ್ಟು ಅವಮಾನಿಸಿದಂತೆನಿಸಿ ಮತ್ತೊಮ್ಮೆ ಅಜ್ಜಿ ನಮಸ್ಕರಿಸಿ ನಾವಿಬ್ಬರು ಅಲ್ಲಿಂದ ಹೊರಬಿದ್ದೆವು.
.........
ನನ್ನಲ್ಲಿನ ಜೀವಕಳೆ ನೋಡಿ ನನ್ನ ಗೆಳೆಯರು ಕಾರಣ ಕೇಳಿದಾಗ ನಾನು ಏನನ್ನೂ ಮುಚ್ಚಿಡದೆ ನಡೆದದ್ದನ್ನೆಲ್ಲ ಹೇಳಿದೆ. ಇದನ್ನು ಕೇಳಿದ ನನ್ನ ಗೆಳೆಯರು ನಮಗೂ ಅಜ್ಜಿಯ ದರ್ಶನಭಾಗ್ಯ ಕರುಣಿಸೆಂದರು. ನನಗೆ ವಿಪರೀತ ಕೆಲಸಗಳಿದ್ದುದರಿಂದ ಮುಂದಿನ ಭಾನುವಾರ ಹೋಗೋಣವೆಂದು ಅವರನ್ನೆಲ್ಲ ಒಪ್ಪಿಸಿದೆ.
ಅಂದುಕೊಂಡಂತೆ ಭಾನುವಾರ ಬಂತು. ಗೆಳೆಯರೆಲ್ಲ ಅತ್ಯೋತ್ಸಾಹದಿಂದ ಜೊತೆಗೂಡಿ ನಿಂತರು ಅಜ್ಜಿಯ ಕಾಣಹೊರಡಲು. ರಾಯರಗುಟ್ಟೆಗೆ ಹೊರಡುವ ಬಸ್ಸನ್ನೇರಿ ಅದು ಸಿಗುವ ಮೊದಲೇ ಹನ್ನೆರೆಡು ಮೈಲಿ ಹಿಂದಿನ ಸ್ಟಾಪಿನಲ್ಲಿ ನಿಲ್ಲಿಸುವಂತೆ ಕಂಡಕ್ಟರಿಗೆ ಹೇಳಿದ್ದೆವು. ಅದೂ ಇದು ಮಾತಾಡುತ್ತ, ಅಜ್ಜಿಯ ಅಸಮಾನ್ಯತೆಯ ಬಗ್ಗೆ ಚರ್ಚೆಗಳಾಗುತ್ತ ಬಂದಿರಲು ಕಂಡಕ್ಟರ್ ನಾವು ಹೇಳಿದಂತೆ ರಾಯರಗುಟ್ಟೆಯ ಹನ್ನೆರೆಡು ಮೈಲಿ ಹಿಂದೆಯಿಳಿಸಿ ದೂಳೆಬ್ಬಿಸಿಕೊಂಡು ಹೊರಟುಹೋದ.
ನನಗೆ ಅಂಗೈಯ್ಯ ಗೆರೆಯಂತೆ ಚೆನ್ನಾಗಿ ನೆನಪಿದೆ. ಯಾಕೆಂದರೆ ಅಜ್ಜಿಯ ಗುಡಿಸಲಿಂದ ಹೊರಬಿದ್ದ ನಾನು ಆಗ ಸುತ್ತಮುತ್ತಲಿದ್ದ ಪರಿಸರವನ್ನು ಚೆನ್ನಾಗಿ ನೋಡಿ ಮನದಟ್ಟು ಮಾಡಿಕೊಂಡಿದ್ದೆ, ಈಗ ನಾವು ಅದೇ ಪರಿಸರದಲ್ಲಿ, ಅದೇ ಅಜ್ಜಿಯ ಗುಡಿಸಲಿದ್ದ ಜಾಗದಲ್ಲಿ ನಿಂತಿದ್ದೀವಿ. ಆದರೆ ಅಜ್ಜಿಯಾಗಲೀ ಗುಡಿಸಲಾಗಲೀ ಕಾಣಿಸುತ್ತಿಲ್ಲ! ಅರೇ! ಇದೇನಾಶ್ಚರ್ಯ! ಎಷ್ಟು ಮತ್ತೊಮ್ಮೆ ಮಗದೊಮ್ಮೆ ಮನನ ಮಾಡಿಕೊಂಡರೂ ನನ್ನ ನೆನಪಿನಾಳದ ಅನುಭವ ನಾವೀಗ ನಿಂತಿರುವ ಜಾಗವನ್ನಲ್ಲದೆ ಬೇರೆ ಜಾಗವನ್ನು ತೋರಲೊಲ್ಲದು. ನನ್ನ ಗೆಳೆಯರು ನನ್ನನ್ನು ನೋಡಿ ಅಪಹಾಸ್ಯ ಮಾಡತೊಡಗಿದರು, ಯಾವುದೋ ಭಕ್ತಿಪ್ರಧಾನ ಸಿನೆಮಾ ನೋಡಿ ಹೀಗಾಡುತ್ತಿದ್ದೀನಂತೆ. ಸಾಕ್ಷಿ ಹೇಳಿಸೋಣವೆಂದರೆ ಪ್ರಾಣಿ ಇವತ್ತು ನಮ್ಮ ಜೊತೆ ಬಂದಿಲ್ಲ, ಮೊಬೈಲ್ ಸಿಗ್ನಲ್ ಸಿಗುವ ಜಾಗವೇ ಇದು? ನನ್ನ ಸ್ನೇಹಿತರು ನನ್ನನ್ನಾಗಲೇ ತಲೆಕೆಟ್ಟವನಂತೆ ನೋಡಲಾರಂಭಿಸಿ ಆ ಜಾಗದಿಂದ ರಸ್ತೆ ಕಡೆ ಮುಖಮಾಡಿ ನಡೆಯಲಾರಂಭಿಸಿದ್ದರು.
ಎಲ್ಲರೂ ಹೊರಟುಹೋದ ಮೇಲೆ ನಾನಿನ್ನು ಅಲ್ಲೇ ನಿಂತಿದ್ದೆ. ದೂರದಲ್ಲೆಲ್ಲೋ ಟ್ರಿಣ್ ಟ್ರಿಣ್ ಸೈಕಲ್ಲಿನ ಬೆಲ್ಲಾಗುವ ಸದ್ದಾಯಿತು. ಅಲ್ಲಿಗೆ ಹೋಗಿ ನೋಡಿದರೆ, ಪಕ್ಕದ ಬದುವಿನ ತಿರುವಲ್ಲೊಬ್ಬ ಸೈಕಲ್ಲ್ ಹೊಡೆಯುತ್ತ ಬರುತ್ತಿದ್ದ. ಅವನನ್ನು ಅಜ್ಜಿಯ ಬಗ್ಗೆ, ಆಕೆಯ ಗುಡಿಸಲ ಬಗ್ಗೆ ಕೇಳಿದ್ದಕ್ಕೆ ನನ್ನನ್ನು ಪೂರ ಮೇಲಿಂದ ಕೆಳಕ್ಕೆ ಒಮ್ಮೆ ನೋಡಿ, ಇಲ್ಲಿ ಸುತ್ತಮುತ್ತ ಹನ್ನೆರೆಡು ಮೈಲಿಯೊಳಗೆ ಯಾವುದೇ ಗುಡಿಸಲಾಗಲಿ, ಅಜ್ಜಿಯಾಗಲಿ ಅಸಲು ನರಪಿಳ್ಳೆಯಾಗಲೀ ವಾಸಮಾಡುತ್ತಿಲ್ಲವೆಂದ. ಅವನು ಹೇಳಿದ್ದನ್ನು ಮತ್ತೆ ಪ್ರಶ್ನಿಸಿ ಕೇಳುವಂತೆಯಿರಲಿಲ್ಲ. ಅವನಿಗೆ ನಮಸ್ಕರಿಸಿದೆ. ಅವನು ಹೊರಡಲು ಅನುವಾದ. ಹೋದಹಾಗೆ ಹೋದವನು ಸ್ವಲ್ಪ ಮುಂದೆ ಹೋಗಿ ಕೇಳಿದ, " ನೀವ್ಯಾರು?"
ಹೌದು ನಾನ್ಯಾರು? ನಾನೇಕೆ ಕಾಣದ ದಟ್ಟಡವಿಯಲ್ಲಿ ಹಲವು ಜನುಮಗಳಿಂದ ಪರಿಚಯಳಂತಿರುವ ಅಜ್ಜಿಯನ್ನು ಹುಡುಕುತ್ತಿದ್ದೀನಿ? ಅಸಲಿಗೆ ಪರಿಚಯವಿರುವುದೇ ಆದಲ್ಲಿ ನಾನೇಕೆ ಆಕೆಯನ್ನು ಹುಡುಕಬೇಕು, ಪರಿಚಯವಿದ್ದವರಿಗೆ ಪರಿಚಯಸ್ಥರು ಎಲ್ಲಿರುವರೆಂದು ತಿಳಿಯದೇ? ಹಾಗಾದರೆ ಅಜ್ಜಿ ಎಲ್ಲಿದ್ದಾರೆ? ಈಗಂತೂ ಆ ಜಾಗದಲ್ಲಿಲ್ಲ. ಹುಡುಕುವುದು ಎಲ್ಲಿ? ಮತ್ತೆ ಅದೇ ಜಾಗಕ್ಕೆ ಬಂದು ಅಲ್ಲಿನ ಆ ಕ್ಷಣದ ಗತಿಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಇಲ್ಲಿ ಅಜ್ಜಿಯಿದ್ದದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತೀರ್ಮಾನಿಸುವಷ್ಟರಲ್ಲಿ, ಜೋರಾಗಿ ಬೀಸಿ ಬಂದ ಗಾಳಿ ಆ ದಿನ ಅಜ್ಜಿ ಗುಡಿಸಲಲ್ಲಿ ನಾವಿದ್ದಾಗ ಬೀಸಿದ ಗಾಳಿಯಂತೆಯೇ ಬೀಸಿ ಅದು ನೆನಪಾಗಲು ಅಲ್ಲೇ ಗಾಳಿಯಲ್ಲಿದ್ದ ತರಗೆಲೆಗಳ ಮಧ್ಯೆ ನನ್ಮ ಅಂತಃಶಕ್ತಿಯನ್ನೇ ಅಲ್ಲೋಲ ಕಲ್ಲೋಲಗೊಳಿಸುವಂತೆ ಕಂಡಿದ್ದು ನಾವಂದು ಅಜ್ಜಿಯ ಮನೆ ಮುಂದೆ ಮೊದಲು ನೋಡಿ ಇದೊಂದು ಗುಡಿಸಲೆಂದು ಗುರುತಿಸಿ ಸಹಾಯ ಮಾಡಿದ್ದ ಅದೇ ದೊಂದಿ!
ನನಗಷ್ಟು ಸಾಕಿತ್ತು ಅಜ್ಜಿವ ಇರುವಿಕೆಯನ್ನು ಬಿಂಬಿಸಲು! ಇದಕ್ಕಿಂತ ಸಾಕ್ಷಿ ನನಗೆ ನನ್ನ ಇಡೀ ಜೀವಮಾನ ಹುಡುಕಿದರೂ ಸಿಗುತ್ತಿರಲಿಲ್ಲ. ಅಲ್ಲೇ ತರಗೆಲೆಗಳ ಮಧ್ಯೆ ಬಿದ್ದಿದ್ದ ಆ ದೊಂದಿಯನ್ನು ಎತ್ತಿಕೊಂಡು ಅಪ್ಯಾಯಮಾನ ತುಂಬಿದ ಕಂಗಳಲ್ಲಿ ನೋಡಿದೆ. ನನಗೆ ಹಿಂದೆ ನಡೆದದ್ದೆಲ್ಲವು ಈಗ ಕಣ್ಣ್ಮುಂದೆ ನಡೆದಂತಿತ್ತು. ಅದರ ಮಧುರ ಸ್ಮೃತಿಪಲ್ಲಟದಲ್ಲಿ ಮುಳುಗಿದ್ದ ನನ್ನನ್ನು ಹಿಂದಕ್ಕೆ ಎಳೆತಂದಿದ್ದು ನನ್ನ ಸ್ನೇಹಿತರ ಅಶರೀರ ವಾಣಿ, ಅವರು ನನ್ನನ್ನು ಕೂಗಿ ಕರೆಯುತ್ತಿದ್ದರು "ಬಾರೋ ಟೈಮಾಯ್ತು" ಅಂತ.
ಅರಿವಿನ ಗುರುವಾದ ಅಜ್ಜಿಗೆ ಮನದಲ್ಲೇ ನಮಸ್ಕರಿಸಿ ಅಲ್ಲಿಂದ ಹೊರಬಿದ್ದೆ. ರಸ್ತೆಯ ಹತ್ತತ್ತಿರ ಬರುತ್ತಿದ್ದವನು ಒಮ್ಮೆ ಹಿಂದೆ ತಿರುಗಿ ನೋಡಿದೆ, ಅಲ್ಲಿ ಅಜ್ಜಿ ನಿಂತು ನನ್ನತ್ತ ಕೈಬೀಸುವುದು ಕಾಣಿಸಿತು. ನಾನು ಮನೆ ದಾರಿ ಹಿಡಿದೆ.
- ಮುಗಿಯಿತು -
ಮೋಹನ್ ಕುಮಾರ್ ಡಿ ಎನ್
ನಂ. 21/160, ಹೇಮಾವತಿಪೇಟೆ,
ದೊಡ್ಡಬಳ್ಳಾಪುರ - 561203,
ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕರ್ನಾಟಕ.
ಮೊಬೈಲ್ - 90359 62665
ನಂ. 21/160, ಹೇಮಾವತಿಪೇಟೆ,
ದೊಡ್ಡಬಳ್ಳಾಪುರ - 561203,
ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕರ್ನಾಟಕ.
ಮೊಬೈಲ್ - 90359 62665
No comments:
Post a Comment