Thursday, September 7, 2017

೨೦೧೫ರ ದೀಪಾವಳಿ ಕಥಾಸ್ಪರ್ಧೆಗೆ ಬರೆದ ಮತ್ತೊಂದು ಕಥೆಯಿದು. ಬರೆದದ್ದು "ಕನ್ನಡಪ್ರಭ " ಪತ್ರಿಕೆಗೆ.  ಓದಿಕೊಳ್ಳಿ . ವಿಶೇಷವೆಂದರೆ ಬರೆದುಕಳುಹಿಸಿದವನು ಕಥೆಗೆ ಹೆಸರನ್ನೇ ಕೊಟ್ಟಿರಲಿಲ್ಲ!!!

ಈಗಾದರೂ ಹೆಸರಿನ ಅವಶ್ಯಕತೆ ನನಗೆ ಕಾಣುವುದಿಲ್ಲವಾದ್ದರಿಂದ ಹೆಸರನ್ನು ಪುನಃ ಇಡುವ ಗೊಡವೆಗೆ ಹೋಗಿಲ್ಲ. 

ಕನ್ನಡಪ್ರಭ ದೀಪಾವಳಿ ಕಥಾ ಸ್ಪರ್ಧೆ 2015

      
 "ಆ ನನ್ನ್ಮಗಾ ಕರೆದ ಅಂತ ನಾವಲ್ಲಿಗೆ ಹೋಗ್ಬಾರ್ದಿತ್ತು ಕಣೋ. ನೋಡಿದ್ಯಲ್ಲ ತಮಾಷೆಗೆ ಮಾಡಿದ ಜೋಕನ್ನ  ಸೀರಿಯಸ್ಸಾಗಿ ತಗೊಂಡು ಹೇಗೆಲ್ಲಾ ಅವಮಾನ ಮಾಡಿ ಕಳಿಸ್ದ ಅಂತ. ಅವ್ನೊಬ್ಬ  ಕಚ್ಡಾ ಕಿತ್ತೋದ್ ನನ್ಮಗ...."
    
ಹಾಗಂತ  ನನ್ನಲ್ಲೇ ನಾನು ಎಷ್ಟು ಬೈದುಕೊಂಡರು ನನಗೆ ಬಂದಿದ್ದ ಕೋಪ ಕಡಿಮೆಯಾಗುವ ಯಾವುದೇ ಮುನ್ಸೂಚನೆ ಕಾಣಲಿಲ್ಲ. ಜೊತೆಗೆ ನನ್ನ ಸ್ನೇಹಿತ ಪ್ರಾಣಿ ಇದ್ದ. ಅವನಿಗೇನು ಹೇಳಬೇಕೋ ತಿಳಿಯದೆ ನನ್ನ ಜೊತೆ ಹೆಜ್ಜೆಹಾಕುತ್ತಿದ್ದ. ನಾವು ನಮ್ಮ ಮನೆಗೆ ವಾಪಾಸ್ ಬರಲು ಬಸ್ಸ್ ಸ್ಟಾಂಡಿಗೆ ಬರುತ್ತಿದ್ದೆವು. ಇಬ್ಬರಲ್ಲು ಕೋಪ ಮನೆಮಾಡಿತ್ತು.
     
ಬಸ್ಸ್ ಸ್ಟಾಂಡ್ ಅದೆಲ್ಲಿ ಸತ್ತು ಬಿದ್ದಿದೆಯೋ ಗೊತ್ತಿಲ್ಲ. ಎಷ್ಟು ನಡೆದರೂ ಸಿಗುತ್ತಿಲ್ಲ. ಹೆಜ್ಜೆಮೇಲೆ ಹೆಜ್ಜೆ ಹಾಕಿ ನಮ್ಮ ಕಾಲುಗಳು ಊಳಿಡಲು ಶುರುವಾಯಿತು. ಜೊತೆಗೆ ಹಸಿವು ಬೇರೆ, ಹೊಟ್ಟೆಹೋಗಿ ಬೆನ್ನಿಗೆ ಕಚ್ಚಿಕೊಂಡಿತ್ತು. ಎತ್ತ ನೋಡಿದರು ಒಂದೇ ಒಂದು ಹೋಟೆಲಾಗಲಿ ಕೊನೆಗೆ ಟೀ ಅಂಗಡಿಯಾಗಲಿ ಕಾಣುತ್ತಿಲ್ಲ. ಇದ್ದ ಒಂದೆರೆಡು ಗೂಡಂಗಡಿಗಳು ಬಾಗಿಲು ಮುಚ್ಚಿವೆ.
      
ನಾವು ನಡೆದುಬರುತ್ತಿದ್ದ ಹಾದಿಯಲ್ಲಿ ವಿದ್ಯುತ್ ಕಂಬಗಳಾಗಲಿ, ಅದರಲ್ಲಿರಬೇಕಾಗಿದ್ದ ದೀಪವಾಗಲಿ ಇಲ್ಲದೆ ರಸ್ತೆ ಪೂರ ಕತ್ತಲು ಕವಿದು ಸಂಜೆಯಾಗಿದ್ದರಿಂದ ಜೀರ್ಜಿಂಬೆಗಳು ಗುಯಗುಯ್ಯ್ಗುಡುವ ಸದ್ದು. ಎಲ್ಲೋ ಮಿಂಚುಹುಳ ರೆಕ್ಕೆಬಡಿದು ನಮಗೆ ದಾರಿ ತಪ್ಪದಂತೆ ಬೆಳಕು ಹರಿಸಿ ನಾವು ದಾರಿ ಬಿಟ್ಟು ಅಡ್ಡದಾರಿ ಹಿಡಿದಿಲ್ಲ ಎಂದು ಸಾಬೀತುಪಡಿಸುತ್ತಿತ್ತು. ರೆಕ್ಕೆ ಹುಳಗಳು ಪಟ್ಪಟ್ ಎಂದು ರೆಕ್ಕೆ ಬಡಿಯುತ್ತ ಆಗಾಗ ನಮಗೆ ತೊಂದರೆ ಕೊಡುತ್ತಿದ್ದುದು ಬಿಟ್ಟರೆ ಅಲ್ಲಿದ್ದ ಅಗಣ್ಯ ಪ್ರಕೃತಿಯಿಂದಾಗಲಿ, ಪ್ರಾಣಿಪಕ್ಷಿಕ್ರಿಮಿಕೀಟಾದಿಯಿಂದಾಗಲಿ, ಎದೆಯಲ್ಲಿ ನಡುಕ ಹುಟ್ಟೀಸುವ ಕಾವಳದಿಂದಾಗಲಿ ನಮಗ್ಯಾವ ತೊಂದರೆಯೂ ಕಂಡುಬರಲಿಲ್ಲ ಎಂಬುದೇ ನಮಗಿದ್ದ ಏಕೈಕ ಸಮಾಧಾನ.
     
ರಸ್ತೆಯೇನೋ ಅಲ್ಲಲ್ಲಿ ಸಣ್ಣಸಣ್ಣ ಹಳ್ಳ ಗುಂಡಿಯಿಂದ ಕೂಡಿದ್ದರು ಚೆನ್ನಾಗಿಯೇ ಇತ್ತು. ರಸ್ತೆ ಬಿಟ್ಟು ಕೆಳಗಿಳಿಯುವ ಧೈರ್ಯ ನಾವು ಮಾಡಲಿಲ್ಲವಾದ್ದರಿಂದ, ಜೊತೆಗೆ ಅದೆಷ್ಟೋ ಕಿಲೋಮೀಟರ್ ನಡೆದಂತನಿಸಿ ನಮಗೆ ಹಸಿವಿನ ಜೊತೆಗೆ ನೀರಡಿಕೆಯು ಶುರುವಾಗಿ ಇನ್ನೇನು ನಡೆಯಲು ಸಾಧ್ಯವಿಲ್ಲ ಆದದ್ದಾಗಲಿ ಇಲ್ಲೇ ಕುಳಿತು ಬಿಡುವ ಎಂದು ಅಂದುಕೊಳ್ಳುವಷ್ಟರಲ್ಲಿ, ದೂರದಲ್ಲೆಲ್ಲೊ ಒಂದು ಸಣ್ಣ ದೊಂದಿ ಹೊತ್ತಿ ಉರಿಯುತ್ತಿರುವುದು ಕಾಣಿಸಿತು. ಬದುಕಿತು ಬಡಜೀವ ಎಂದುಕೊಂಡು ಅವಡುಗಚ್ಚಿ ಅಲ್ಲಿಗೆ ಹೆಜ್ಜೆ ಹಾಕತೊಡಗಿದೆವು.
     
ಅದೊಂದು ಸಣ್ಣಾತಿಸಣ್ಣ ಗುಡಿಸಲೆಂದು ತಿಳಿಯಲು ಮುಂದೆ ನೇತಾಕಿದ್ದ ಸಣ್ಣ ದೊಂದಿಯ ಬೆಳಕು ನಮಗೆ ಸಹಾಯ ಮಾಡಿತು. ಒಣಗಿದ ತೆಂಗಿನಗರಿ ಹೊದಿಸಿ ಎಂಟತ್ತು ಗಳುವನ್ನು ಅಡ್ಡ ಉದ್ದ ಕೂರಿಸಿ ಕಟ್ಟಿದ್ದ ಚಿಕ್ಕ ಗುಡಿಸಲದು. ಕಟ್ಟಿ ಸುಮಾರು ವರ್ಷಗಳಾಗಿದ್ದಿರಬಹುದು. ಅದೆಷ್ಟು ಬಿರುಬಿಸಿಲು ಗಾಳಿಮಳೆಗೆ ತಲೆಯೊಡ್ಡಿನಿಂತಿದೆಯೋ ಎಂದು ಆ ಗುಡಿಸಲು ನೋಡಿದ ತಕ್ಷಣ ನನ್ನ ಅನುಭವಕ್ಕೆ ಬಂತು.
     
ಕತ್ತಲಲ್ಲಿ ದೈವದಂತೆ ಕಂಡ ಆ ಗುಡಿಸಲ ಬಳಿಗೇನೊ ನಾವು ಬಂದಾಗಿತ್ತು. ಆದರೆ ನಮಗಿದ್ದ ಪ್ರಶ್ನೆ ಈ ಕಗ್ಗತ್ತಲ ಕಾಡಲ್ಲಿ ಅದೂ ರೋಡಿಂದ ಇಷ್ಟೊಂದು ಒಳಗೆ ಯಾರು ಕಟ್ಟಿದ್ದಾರೆ ಈ ಗುಡಿಸಲನ್ನ? ಬಹುಶಃ ಇದು ಮನುಷ್ಯಮಾತ್ರರು  ಕಟ್ಟಿರುವಹಾಗೆ ಕಾಣುತ್ತಿಲ್ಲ. ಹಾಗಾದರೆ ಉರಿಯುತ್ತಿರುವ ದೊಂದಿ ಹಚ್ಚಿಟ್ಟವರು ಯಾರು? ಅಸಲಿಗೆ ಒಳಗಡೆ ಯಾರಾದರು ಇದ್ದಾರ? ಈ ತರಹೇವಾರಿ ಅನುಮಾನ ನಮಗೆ ಬರತೊಡಗಿವು. ಆದದ್ದಾಗಲಿ ನೋಡೇಬಿಡೋಣ ಎಂದು ಇಬ್ಬರು ನಿರ್ಧರಿಸಿ ಗುಡಿಸಲಿಗೆ ಗರಿಯಿಂದ ನೇಯ್ದಿದ್ದ ತಳ್ಳುಬಾಗಿಲ ಮುಂದೆ ನಿಂತು "ಯಾರಾದರು ಇದ್ದೀರಾ?" ಎಂದು ಕೇಳಿದೆವು.
     
ನಮಗೆ ಮರುತ್ತರ ಬರಲಿಲ್ಲ. ಪ್ರಾಣಿ ಮತ್ತೊಂದು ಸಾರಿ ಕೂಗಲು ಬಾಯ್ದೆರೆದ. ಅಷ್ಟರಲ್ಲಿ ಒಳಗಿಂದ ಏನೊ ತಟಕ್ಕಂತ ಬಿದ್ದಂತೆ ಸದ್ದಾಯಿತು. ಸದ್ಯ ಮನುಷ್ಯರಲ್ಲದಿದ್ದರು ಯಾವುದಾದರು ಪ್ರಾಣಿಪಕ್ಷಿಯಾದರು ಇದ್ದೀತೆಂದು ನಮಗೆ ಮನವರಿಕೆಯಾಯ್ತು. ಪ್ರಾಣಿ ಕೂಗಲು ಮೂರನೆ ಬಾರಿ ಬಾಯ್ದೆರೆದು ಕೇಳಿದ " ಯಾರಾದ್ರು ಇದ್ದೀರೋ?" ಎರಡುಮೂರು ನಿಮಿಷ ಕಳೆದರು ನಮಗೆ ಮರುತ್ತರ ಸಿಗಲಿಲ್ಲ


ನಮ್ಮ ತಾಳ್ಮೆಗೂ ಒಂದು ಮಿತಿ ಬೇಡವೇ, ಅದೂ ಇಂತ ಹೊತ್ತಿನಲ್ಲಿ? ಅಲ್ಲಿವರೆಗು ಮರೆತಂತಿದ್ದ ಕೋಪ ಮತ್ತೆ ನೆನಪಾದಂತಾಗಿ ಪ್ರಾಣಿ ಮತ್ತೊಮ್ಮೆ ಬಾಯ್ತೆರೆಯಿತು. "ಏ ನನ್ನ್ ಮಕ್ಕುಳ್ರ ಎಷ್ಟೋ ಕೂಗೋದು? ಯಾರದ್ರು ಇದ್ದೀರೊ ಅಥ್ವಾ ಸತ್ತು ದೆವ್ವವಾಗಿ ನಮ್ಮನ್ನು ಕಾಡ್ಸೋಕೆ ಅಂತ ಇಲ್ಲಿ ದೊಂದಿ ಕಟ್ಟಿದ್ದೀರೋ ಬೊಗುಳ್ರೊ" ಎಂದು ಸಿಟ್ಟಿನಲ್ಲಿ ತಾಳ್ಮೆ ಕಳಕೊಂಡವನಂತೆ ಕೇಳಿದ. ನನಗೆ ಅವನು ಈ ಮಾತಿನಮಧ್ಯೆ ದೆವ್ವ ಪಿಚಾಚಿಯಂದಿದ್ದು ನನಗೆ ಸರಿಕಾಣಲಿಲ್ಲ. ಓದಿ ವಿದ್ಯಾವಂತರಾದ ನಾವೇ ಹೀಗೆ ಮೂಡನಂಬಿಕೆ ಬಗ್ಗೆ ಅಪ್ಪಿತಪ್ಪಿಯೂ ಅದರ ಇರುವಿಕೆ ಬಗ್ಗೆ ಮಾತಾಡಿದರೆ ಹೇಗೆ ಎಂಬುದೇ ನನ್ನ ಆಕ್ಷೇಪಣೆಗೆ ಕಾರಣ. ಹಾಗಂತ ನಾನವನಿಗೆ ಹೇಳಲಿಲ್ಲ.
     
ಯಾರ ಸುಳಿವು ನಮಗಲ್ಲಿ ಕಾಣದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಅಲ್ಲಿಂದ ಹೊರಡೋಣವೆಂದು ನಾವು ನಿಶ್ಚಯಿಸಿ ನಮ್ಮ ಅದೇ ಹಸಿವು ಬಾಯಾರಿಕೆ ಸಂಕಟ ನೆನಪಿಗೆ ಬಂದು ದುಃಖಿಸುತ್ತ ಕಾಲ್ತೆಗೆಯುವ ಹೊತ್ತಿಗೆ ನಮಗೆ ಒಳಗಿಂದ ಕ್ಷೀಣ ಧನಿಯೊಂದು " ಯಾರದು?" ಎಂದದ್ದು ಕೇಳಿಸಿತು. ಅಂತೂ ಒಳಗಡೆ ಯಾರೋ ಇದ್ದಾರೆ ಎಂದನಿಸಿ ನಮಗೆ ಖುಷಿಯಾಗಿ ತಳ್ಳು ಬಾಗಿಲು ಮುಂದಕ್ಕೆ ನೂಕಿ ಒಳಗಡೆ ತಲೆಯಾಡಿಸಿದ್ದಷ್ಟೇ, ಅದೆಲ್ಲಿತ್ತೋ ಆ ಪಾಟಿ ಹೊಗೆ! ಕ್ಷಣದಲ್ಲಿ ಕಣ್ಣೆಲ್ಲಾ ಹೊಗೆ ತುಂಬಿ ಕಣ್ಣು ಖಾರವಾಗಿ ಕಣ್ಣೀರು ದಳದಳ ಎಂದು ಒಸರಿಸತೊಡಗಿತು. ನಮಗೀಗ ಏನೆಂದರೆ ಏನು ಕಾಣುತ್ತಿಲ್ಲ. ಇದೆಲ್ಲಿಬಂದು ಸಿಕ್ಕಿ ಬಿದ್ದೆ ಮತ್ತು ನಮಗ್ಯಾರು ಮರುತ್ತರ ಕೊಟ್ಟಿದ್ದು ಎಂದು ಒಟ್ಟೊಟ್ಟಿಗೆ ಯೋಚಿಸಲು ನನಗೇ ಕ್ಷಣಕಾಲ ದಿಗಿಲು ಜೊತೆಗೆ ಕೈಕಾಲು ಕಂಪನವಾದಂತಾಯ್ತು. ಅಷ್ಟರಲ್ಲಿ ಪ್ರಾಣಿ ಮಾಡಿದ ಒಳ್ಳೇ ಕೆಲಸವೆಂದರೆ, ಸ್ವಲ್ಪವೇ ತೆರೆದಿದ್ದ ತಳ್ಳುಬಾಗಿಲನ್ನು ಎರಡು ಹೆಜ್ಜೆ ಹಿಂದೆ ಹೋಗಿ ಪೂರ್ತಿ ತೆರೆದುಬಿಟ್ಟ. ಒಂದೈದು ನಿಮಿಷ ಕಳೆದಂತೆ ಅಲ್ಲಿದ್ದ ಹೊಗೆ ಚೂರುಚೂರೆ ಮರೆಯಾಗಿ ಗುಡಿಸಿಲೊಣಗಣ ಚಿತ್ರ ನಮಗೆ ಅರೆಬರೆಯಾಗಿ ಕಾಣತೊಡಗಿತು.
     
ಅಲ್ಲಾರೋ ಇರಬೇಕಲ್ಲ ಮೂಲೇಲಿ ಎಂದು ಇಬ್ಬರಿಗು ಅನ್ನಿಸತೊಡಗಿತು. ನಮ್ಮ ಮುಖದ ಭಾವನೆಗಳು ಬದಲಾಗಿ ಒಬ್ಬರ ಮುಖ ಒಬ್ಬರು ನೋಡುತ್ತ ಇರುವಾಗ ನಮಗೆ ಅಲ್ಲಿನ ಚಿತ್ರಣ ಇನ್ನು ಸ್ಪಷ್ಟವಾದಂತೆ ಅಲ್ಲಿ ಯಾರೋ ನಮ್ಮಿಬ್ಬರನ್ನು ಹೊರತುಪಡಿಸಿ ಇನ್ನ್ಯಾರೋ ಇದ್ದಾರೆ ಎನ್ನುವ ನಮ್ಮ ಅನುಮಾನ ಬಲವಾಗುತ್ತ ಬಂದು ನೋಡಿದರೆ ಅಲ್ಲಿ ಒಂದು ಮೂಲೆಯಲ್ಲಿ ಒಂದು ಮುಪ್ಪಾನುಮುಪ್ಪ ಮುದುಕಿ ನಿಂತು ತದೇಕ ಚಿತ್ತದಿಂದ ಬಿಟ್ಟಕಣ್ಣು ಬಿಟ್ಟಂತೆ ನಮ್ಮನ್ನೇ ನೋಡುತ್ತಿದ್ದಾಳೆ! ಪ್ರಾಣಿ ಆಗಲೆ ಹೇಳಿದ್ದ ದೆವ್ವ ಪಿಚಾಚಿ ಮಾತು ನಿಜವೆನ್ನಿಸತೊಡಗಿ ನನ್ನ ಸೈದ್ದಾಂತಿಕ ನಿಲುವಿನಲ್ಲಿ ಬದಲಾವಣೆ ಬರತೊಡಗಿರುವಾಗ, ಅಲ್ಲಿ ಮೂಲೇಲಿ ನಿಂತಿದ್ದ ಆ ಶರೀರದಿಂದ ಮತ್ತೊಮ್ಮೆ ಕ್ಷೀಣ ಧನಿ ಗಂಟಲೊಡೆಯಿತು.  "ಯಾರದು?" ಮನುಷ್ಯ ಮಾತ್ರರಾದವರು ಮಾತ್ರ ಕೇಳಬಹುದಾಗಿದ್ದ ಪ್ರಶ್ನೆ ಅದಾಗಿತ್ತು.  ಆಗ ಪ್ರಾಣಿ ಹೇಳಿತು
     
"ನಾವು"
     
" ನಾವೆಂದರೆ"
     
"ನಾವೆಂದರೆ ನಾವೇ!"
     
"ಅದೇ ನೀವೆಂದರೆ ಯಾರು?"
    
"ದಾರಿ ತಪ್ಪಿಬಂದವರು"
     
" ಓ! ನೀವಾ? ಹಾಗಿದ್ದರೆ ಧೈರ್ಯವಾಗಿ ಒಳಗೆ ಬನ್ನಿ"
     
"ನಾವೀಗಾಗಲೆ ಒಳಗಡೆಯೇ ಇರೋದು"
     
" ಹೌದಾ! ನಂಗೆ ಅಷ್ಟಾಗಿ ಕಣ್ಣು ಕಾಣಲ್ಲ್ರಪ್ಪ, ಬನ್ನಿ ಒಳಗೆ ನಿಸ್ಸಂಕೋಚವಾಗಿ"
     
ನಿಸ್ಸಂಕೋಚವಾ? ನಮಗಾ? ಅದೂ ಸತ್ತುಬದುಕೆದ್ದು ಬಂದಂತಿರುವ ಈ ಅಜ್ಜಿಯ ಮುಂದೆ? ನೋಚಾನ್ಸ್! ನಮ್ಮ ಪ್ರತಿಷ್ಟೆ ನಮಗೆ ಹಾಗೆ ಹೇಳಿತು. ಈಗಾಗಲೆ ಹೊಗೆ ಗುಡಿಸಲಿಂದ ಹೆಚ್ಚೂಕಡಿಮೆ ಇಲ್ಲವಾದ್ದರಿಂದ ಮತ್ತು ಕಣ್ಣುರಿ ಕಡಿಮೆಯಾಗಿ ಕಣ್ಣುಗಳು ಅಲ್ಲಿ ಹಚ್ಚಿದ್ದ ಲಾಂದ್ರದ ಬೆಳಕಿಗೆ ಒಗ್ಗಿಕೊಳ್ಳಲು ಗುಡಿಸಲಿನ ಒಳ ಚಿತ್ರಣ ಅತಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿತು. ಅದೊಂದು ಚಚ್ಚೌಕಾರದ ಹತ್ತರಿಂದ ಹದಿನೈಡಿ ಇರಬಹುದಾದ ಗುಡಿಸಲು. ಅಲ್ಲಿ ಮೂಲೆಯಲ್ಲಿ ಸುತ್ತಿಟ್ಟಿರುವ ಚಾಪೆ ಮುದುಡಿ ಮಲಗಿತ್ತು. ಇನ್ನೊಂದು ಮೂಲೆಯಲ್ಲಿ , ಮೂರುಕಲ್ಲಿನ ಒಲೆಯಮೇಲೆ ಹಸೀ ಸೌದೆಯಿಂದ ಮಡಕೆಯಲ್ಲಿ ಅಜ್ಜಿ ಬೇಯಿಸುತ್ತಿದ್ದ ಅಂಬಲಿ ಥರದ್ದೇನೊ ಕೊತಕೊತ ಸದ್ದು ಮಾಡುತ್ತಿತ್ತು.  ಅದರ ಪಕ್ಕದಲ್ಲಿ ಒಂದೆರೆಡು ಬಣ್ಣಗೆಟ್ಟ ಡಬ್ಬಗಳು, ಒಂದು ಬೆಂಕಿಪಟ್ಣ, ಎಣಿಸಿಬಿಸಾಡಬಹುದಾದಷ್ಟು ಒಂದೆರೆಡು ತಟ್ಟೆ ಲೋಟ ಅಷ್ಟೇ! ಇನ್ನು ಆ ಗುಡಿಸಲಲ್ಲಿ ಏನೆಂದರೆ ಏನೂ ಇರಲಿಲ್ಲ ; ಕೊನೆಪಕ್ಷ ಉಸಿರಾಡಲು  ಒಂದೇಒಂದು ಕಿಟಕಿಯೂ ಕೂಡ. ನಮಗೆ ಗುಡಿಸಲು ಒಂಥರ ನಿಗೂಡತೆಯ ಕೇಂದಬಿಂದುವಾಗು ಭಾಸವಾಗತೊಡಗಿತು.
    
"ಅಸೀ ಸೌದೆ ಅಲ್ವಾ ಅದ್ಕೇ ನಿಮ್ಗೆ ಕಣ್ಣುರಿ ಅತ್ಗೊಂಡಿದ್ದು " ನಮ್ಮ ಕಣ್ಣುರಿಗೆ ಕಾರಣ ಹುಡುಕಿ ಹೇಳುವವಳಂತೆ ಹೇಳಿತು ಅಜ್ಜಿ. ಸರಿ ಬಿಡು ಅಜ್ಜಿ ನೀನು ಡಾಕ್ಟರಾಗಿರಬೇಕಾದವಳು ತಪ್ಪಿ ಇಲ್ಲಿದ್ದೀಯ ಅಂತ ಅಜ್ಜಿ ಮುದುಡಿ ಮಲಗಿದ್ದ ಚಾಪೆಯನ್ನು ಹಾಸಿ ಬಂದು ಕೂರೆನ್ನುವಂತೆ ಸಂಜ್ನೆ ಮಾಡಿದಕ್ಕೆ ನಾವು ಬಂದು ಕುಳಿತೆವು. ತಳ್ಳುಬಾಗಿಲು ತೆರೆದಿದ್ದರಿಂದ ಈಗ ಅಷ್ಟಾಗಿ ಹೊಗೆಯಾಡುತ್ತಿರಲಿಲ್ಲ.
     
ಇದಾದ ನಂತರ ಅಜ್ಜಿ ಎಷ್ಟೊತಾದರು ಮಾತಾಡಲಿಲ್ಲ. ನಾವು ಏನು ಕೇಳಿದರು ಉತ್ತರ ಕೊಡುತ್ತಿರಲಿಲ್ಲ , ಸುಮ್ಮನೆ ನಮ್ಮ ಕಡೆ ನೋಡಿ ಮತ್ತೆ ನೋಟ ಒಲೆ ಮೇಲೆ ಬೀಸುತ್ತಿದ್ದರು. ನಮಗೂ ಬೇಜಾರಾಗ ಹತ್ತಿತು. ಸದ್ಯ ಅಷ್ಟಾದರು ನೆಮ್ಮದಿಯಾಗಿ ಇರುವಂತೆ ಮಾಡಿದ್ದು, ನಾವು ಒಳಗಡೆ ಬಂದು ಕುಳಿತಾಗ ಅಜ್ಜಿ ನಮಗೆ ನೀರಿನ ಗಡಿಗೆ ತೋರಿಸಿ ಒಂದು ಸಿಲ್ವಾರ್ ಲೋಟವನ್ನ ತಾನಿದ್ದಲ್ಲಿಂದಲೇ ನಮ್ಮ ಬಳಿ ನೂಕಿದರು. ಅದು ಬಂದು ನಮ್ಮ ಬಳಿ ಬಿದ್ದದ್ದೇ ತಡ, ರೇಜಿಗೆ ಬಿದ್ದವರಂತೆ ನೀರನ್ನು ಗಟಗಟ ಕುಡಿದೆವು. ನಂತರ ನಮ್ಮ ಗಂಟಲಿಗೆ ಬ್ರೇಕ್ ಬಿದ್ದಂತಾಗಿ ಸುಮ್ಮನೆ ಕುಳಿತಿರಲು, ಆಗೊಮ್ಮೆ ಈಗೊಮ್ಮೆ ನಾವು ಬಾಯ್ದೆರೆದು ಅಜ್ಜಿಯನ್ನು ಮಾತಾಡಿಸ ಹೋದರೆ ಈ ಅಜ್ಜಿ ನಮ್ಮ ಕಡೆ ಗಮನವೇ ಕೊಡುತ್ತಿಲ್ಲ! ನಮಗೆ ಗುಡಿಸಲ ಜೊತೆಗೆ ಅಜ್ಜಿಯ ವರ್ತನೆ ಕಂಡು ನಿಗೂಡತೆ ಹೆಚ್ಚಾಗುತ್ತಾ ಹೋಯ್ತು.
     
" ಸರಿ ಮಕ್ಳೇ, ಊಟಕ್ಕ್ ಬನ್ನಿ " ಅಂತು ಅಜ್ಜಿ.
     
ನಾವು ಮರುಮಾತಾಡದೆ ಚಕ್ಕೆಂದೆದ್ದು ಕೈಕೂಡ ತೊಳೆಯದೆ ಅಜ್ಜಿಯ ಮಾತು ನೆರವೇರಿಸುವಂತೆ ಅಜ್ಜಿ ಕೊಟ್ಟ ಸಿಲ್ವಾರ್ ತಟ್ಟೆಯ ಮುಂದೆ ಕೂತಿದ್ದೆವು. ಅಜ್ಜಿ ಅದೇನು ಬಡಿಸಿದರೊ ನಾವೇನು ತಿಂದೆವೊ ಒಂದು ನಮಗಂತು ಗೊತ್ತಿಲ್ಲ. ಹಸಿದಿದ್ದ ಹೊಟ್ಟೆ ತುಂಬಿಸುವುದೊಂದೇ ನಮಗಾಗ ಗೊತ್ತಿತ್ತು. ಊಟವೆಲ್ಲ ಸಾಂಗೋಪಂಗವಾಗಿ ನಡೆದ ಮೇಲೆ ನಮಗೆ ಹೋಗಿದ್ದ ಜೀವ ಮತ್ತೆ ಬಂದಂತಾಗಿ ಕೆಲವೇ ನಿಮಿಷಗಳ ಹಿಂದಿದ್ದ ಕೋಪತಾಪವೆಲ್ಲ ಕರಗಿ ನೀರಾಗಿಹೋಗಿತ್ತು. ಮನಸು ಸಮಾಧಾನದ ಅಲೆಯಲ್ಲಿ ತೇಲಾಡುವಂತಾಗುತ್ತಿರಲು ಅಜ್ಜಿ ಕೂಡ ಎರಡು ತುತ್ತು ಊಟ ಮುಗಿಸಿ ನಮ್ಮ ಮುಂದೆ ಬಂದು ಒಂದು ಮೂಲೆಯಲ್ಲಿ ಕುಳಿತು,
     
"ದಾರಿತಪ್ಪಿ ಬಂದ ಮಕ್ಳೇ ಅದೇನು ಹೇಳಿ ನಿಮ್ಮ ಕಥ್ಯಾ! ನೀವ್ಯಾವಾಗಾದ್ರಿ ದಾರಿತಪ್ಪ್ದೋರು ಹಾಂ?" ಅಜ್ಜಿ ಮಾತಾಡೊ ಮೂಡಿಗೆ ಬಿದ್ದಂತೆ ಕಾಣಿಸಿತು. ಅಜ್ಜಿಗೂ ಕೂಡ ಮಾತಾಡಲು ಯಾರು ಇಲ್ಲವೆಂದು ಅನ್ನಿಸಿ ನಾವು ಮಾತಾಡಲು ಶುರುವಿಟ್ಟೆವು.
     
" ಅಜ್ಜೀ, ನಾವು ದಾರಿತಪ್ಪಿದ ಮಕ್ಕಳಲ್ಲ. ನಮಗೂ ಅಪ್ಪ ಅಮ್ಮ ಎಲ್ಲಾ ಇದ್ದಾರೆ. ನಾವು ಬಲ್ಲಾಳಪುರದಿಂದ ನಮ್ಮ ಮತ್ತೊಬ್ಬ ಸ್ನೇಹಿತನ ಆಹ್ವಾನದ ಮೇರೆಗೆ ಅವನ ಹಳ್ಳಿಯಲ್ಲಿ ನಡೆಯುತ್ತಿರೊ ಜಾತ್ರೆಗೆ ಬಂದಿದ್ದೆವು. ಎಲ್ಲಾ ಚೆನ್ನಾಗಿತ್ತು ಆದರೆ ಕೊನೆಗೆ ಏನೋ ಮನಸ್ತಾಪವಾಗಿ ಅಲ್ಲಿಂದ ಹೇಗಿದ್ದೆವೋ ಹಾಗೆ ವಾಪಾಸ್ ಊರಿಗ್ ಹೊರಟು ಬಂದೆವು. ಅಲ್ಲಿ ಜಾತ್ರೆಯಾದ್ದರಿಂದ ಯಾರೂ ಅಂಗಡಿಯಾಗಲಿ ಹೋಟೆಲ್ ಆಗಲಿ ತೆರೆದಿರಲಿಲ್ಲ.  ಬೆಳಗ್ಗೆ ತಿಂಡಿ ತಿಂದು ಮನೆಬಿಟ್ಟಿದ್ದಷ್ಟೆ, ಅದಾದಮೇಲೆ ನೀವೀಗ ಬಡಿಸಿದ್ದೇ.  ಊರಿಗೆ ಹೋಗೋಣವೆಂದರೆ ಹಾಳಾದ್ದು ಬಸ್ಸೂ ಇಲ್ಲ. ನಡೆದು ನಡೆದು ಕೊನೆಗೆ ನಾವಿಲ್ಲಿ ಬಂದು ಸೇರಿದೆವು" ಎಂದು ಒಂದೇ ಉಸಿರಿನಲ್ಲಿ ನಡೆದದ್ದೆಲ್ಲವನ್ನು ಹೇಳಿದೆವು.
     
" ಅದ್ಸರಿ ಯಾವ್ ಅಳ್ಳೀಗ್ ನೀವ್ ಬಂದಿದ್ದು?"
     
" ಇಲ್ಲೇ ಪಕ್ಕದಲ್ಲಿರೊ ರಾಯರಗುಟ್ಟೆಗೆ"
     
" ಲೋ ಮಕ್ಳಾ! ರಾಯರಗುಟ್ಟೆಗು ನೀವಿಗ ಇಲ್ಲಿ ಬಂದಿರೋದ್ಕು ಎಷ್ಟು ದೂರ ಐತೆ ಗೊತ್ತಾ?"
     
" ಎಷ್ಟು?"
     
" ಅನ್ನೆಲ್ಡು ಮೈಲು ಕಣ್ರಪ್ಪ"!
     
" ಏನು ಹನ್ನೆರೆಡು ಮೈಲೀನಾ??!!"
     
" ಊಂ ಕಣ್ರುಲಾ! ನಿಮ್ಮ್ ಮಾರೆ ನೋಡ್ಕ್ಯಂಡೇ ಅನ್ಕೊಂಡೇ ಇವ್ರ್ಯಾರೋ ಬೋದೂರ್ದಿಂದ ಬಂದವ್ರಂತ. ಅದ್ಕೇ ನೀವಾಗ್ಲೆ ಏನ್ ಕೇಳುದ್ರು ನಾನೇನು ಏಳ್ದಂಗ್ ಸುಮ್ಕಿರದು, ಪಾಪ ಮೊದ್ಲೇ ಸುಸ್ತಾಗಿರ್ತೀರ ನಾನ್ಯಾಕೆ ಮಾತ್ಗೆ ಮಾತು ಬೆಳ್ಸೀ ನಿಮ್ಗಿನ್ನೂ ಸುಸ್ತ್ ಮಾಡೊದೂಂತ ಸುಮ್ನಿದ್ದೆ ಕಣ್ರಪ್ಪೊ"
     
ಹಾಗಿದ್ದರೆ ನಾವು ಹನ್ನೆರೆಡು ಮೈಲಿ ನಡೆದುಬಂದಿದ್ದೀವಾ? ನಡೆದರೆಲ್ಲಿ ಸೊಂಟ ಬೀಳುವುದೊ ಎಂಬ ನಾವು ಇಷ್ಟು ದೂರ ನಡೆದುಬರಲು ಹೇಗೆ ಸಾಧ್ಯವಾಯಿತು? ಚಿಂತೆಗೆ ಬಿದ್ದೆವು.
     
ಅಜ್ಜಿ ಕಾಲಿನ ಬಳಿ ಸಣ್ಣದೊಂದು ಕರಿಸೀಮೆ ತನ್ನ ಪಾಲಿಗೆ ಸಂದ ಆ ಹೊತ್ತಿನ ಚುಟುಕು ಬುತ್ತಿಯನ್ನು ಹೆಗಲಮೇಲೊತ್ತುಕೊಂಡು ಸಾಗುತ್ತಿತ್ತು. ಇದನ್ನು ಅಜ್ಜಿ ಬಹಳ ಕೂತೂಹಲದಿಂದ ನೋಡುವುದು ನಮ್ಮ ಗಮನಕ್ಕೆ ಬಂದು, "ಅದೇನಜ್ಜಿ ಆ ಸೀಮೆಯನ್ನು ಹಾಗೆ ದಿಟ್ಟಿಸುತ್ತಿದ್ದೀರಲ್ಲ" ಎಂದು ನಾನು ಪ್ರಶ್ನಿಸಿದೆ.
     
ಅಜ್ಜಿ ನಕ್ಕು ಹೇಳಿತು. " ಮಕ್ಳಾ! ಬಹ್ಶ ತನ್ನ್ ಅಳ್ವುಉಳ್ವಿನ ಪ್ರಸ್ನೆ ಬಂದ್ರೆ ಮನ್ಶಾ ಒಬ್ನೇ ಯಾಕೆ, ಇಡೀ ಪ್ರಾಣಿಪಕ್ಷಿಕ್ರಿಮಿಕೀಟ ಸಂಕ್ಲ ಎಲ್ಲ್ವೂ ಓರಾಟ ನಡ್ಸಿಯಾರೂ ತನ್ನ್ ತನ್ನ್ ಪಾಲಿನ ಅನ್ನಾನ ಉಟ್ಟುಸ್ಕೊಂಡ್ ತಿಂತವೆ ತಿಳ್ಕಾ. ಜೀವಯೈವಿದ್ಯೆ ಐತಲ್ಲ? ಅದ್ರಾಗ್ ತನ್ನ್ ಎಜ್ಜೆಗುರ್ತು ಮೂಡ್ದಂಗ್ ತನ್ನ್ ಪಾಡ್ಗದು ತಾನಿರ್ತದೆ. ಸುರುಷ್ಟಿ ಕೊಟ್ಟ ಬಾಳ್ನ ತಾನು ಪೂರ್ಣ ಬಾಳೋದ್ರಿಂದ ಸಾರ್ಥಕಥೆ ಕಡೆ ನಡೀತಾ ಓಗ್ತದೆ. ಅಂಗಾದ್ರೆ, ಮನ್ಶನ್ ಸಾರ್ಥ್ಕತೆ ಎಂಗೇ? ತನ್ನ್ ಜೀವಮಾನ್ದ ಎಜ್ಜೆಗುರ್ತು ಮೂಡ್ಸೋದ್ರಿಂದ್ಲಾ? ಸಾಧ್ನೆ ಸನ್ಮಾನಗ್ಳ ಪಟ್ಟಿತೆಗ್ದು ಪ್ರಚಾರ ಪಡ್ಸಿ ಮುಂದಿನ್ ಪೀಳ್ಗೆಗೆ ಮಂದಟ್ಟು ಮಾಡೋದ್ರಿಂದ್ಲಾ? ಆಸ್ತಿಅಂತಸ್ತು ಜೀವ್ನ ನಡ್ಸೋದ್ರಿಂದ್ಲಾ? ಮಹ್ಲುಕ್ವಾಟೆಕೊತ್ಲಗ್ಳ ಒಡ್ಯರಾಗೋದ್ರಿಂದ್ಲಾ? ತನ್ನ್ ನಂತ್ರಾನೂ ಜನ್ರು ನೆನ್ಯಂಗೆ ಮೈಲ್ಗಲ್ಲೇನಾದ್ರು ನೆಡೋದ್ರಿಂದ್ಲಾ? ಅಡ್ಡ್ ಪಲ್ಲಕ್ಕಿ ಗ್ವುರುಗಳ್ ತರ ಸಿಸ್ಯರ್ನ ಇಟ್ಟ್ಕೊಂಡು ತನ್ನ ತಾನು ಅರ್ಥೈಸೋದ್ರಿಂದ್ಲಾ? ಏಳ್ರಪ್ಪ ಎಂಗೆ ಮನ್ಶನ್ ಸಾರ್ಥಕಥೆ ಆಗೋದು?"
  
ಸಮಯ ಸರಿದು ತೆಗೆದಿಟ್ಟ ತಳ್ಳುಬಾಗಿಲಿನಿಂದ ಬೀಸುತ್ತಿದ್ದ ತಣ್ಣನೆಯ ಗಾಳಿಕೂಡ ಯಾಕೋ ಅಜ್ಜಿ ಕೇಳಿದ ಪ್ರಶ್ನೆಗಳಿಂದ ಬಿಸಿಯಾದಂತೆ ನಮಗನಿಸಿತು. ಯಾವ ಪ್ರಶ್ನೆಗಳಿಗೂ ನಮ್ಮಲ್ಲಿ ಉತ್ತರವಿರಲಿಲ್ಲ ಅಥವಾ ಅಜ್ಜಿ ಎತ್ತಿದ ಆ ಪ್ರಶ್ನೆಗಳಿಗೆ ಉತ್ತರ ಕೊಡುವ ಹಾಗು ಹುಡುಕುವ ಸಾಮರ್ಥ್ಯವಿರಲಿಲ್ಲ. ಈ ಅಜ್ಜಿ ಯಾಕೊ ನಮ್ಮಂತೆ ಸಾಮಾನ್ಯ ಅಂತ ನಮಗನ್ನಿಸಲಿಲ್ಲ.
     
" ಮಕ್ಳಾ ಯಾಕ್ರೋ ಇಂಗ್ ತಿಂದಂಗ್ ಮಾಡ್ಕೊಂಡ್ರಲ್ಲೋ ಮಾರೇನಾ? ಈ ಮುದ್ಕಿ ಇಂಗೇ ಏನೇನೋ ವದುರ್ತದೆ. ಯಾಕಂದ್ರೆ ನಂಗೂ ಯಾರ್ ಕೂಡ ಮಾತಾಡಿಯಾದ್ರು ಸಮಾ ಅಭ್ಯಾಸ್ವಿಲ್ಲ ನೋಡು? ಅದ್ಕೆ!"
     
" ಅಜ್ಜೀ, ನಿಮಗೆ ಅಭ್ಯಾಸವಿಲ್ಲ ಅಂತ ಯಾರು ಹೇಳಿದ್ದು? ನೀವು ನಮಗೆ ಕೇಳಿದ ಪ್ರಶ್ನೆಗಳು ಇಡೀ ಮಾನವಕುಲಕ್ಕೇ ಕೇಳಿದಂತಿತ್ತು" ಅಜ್ಜಿಯ ಮುಖವನ್ನು ನೋಡುತ್ತ ನಾನಂದೆ.
    
"ಅದೇನ್ ಮಾನ್ವಸಂಕುಲಾನೊ ಏನೋ? ಒಬ್ಬ್ರಿಗೊಬ್ರು ಬಡಿದಾಡ್ಕೊಂತವೆ ಕಾಲೆಳಿತವೆ ಮಾಡ್ಬಾರ್ದನ್ನೆಲ್ಲಾ ಮಾಡಿ ಕೊನ್ಗೆ ಏನು ಆಗಿಲ್ಲಾಂತ ಸುಮ್ನಿರ್ತವೆ, ನಂಗಂತು ನೋಡಿನೋಡಿ ಸಾಕಾಗೋಗದ್ಯಪ್ಪ. ಅಸ್ಲು ತನ್ನ್ ಪಾಡ್ಗೆ ತಾನಿರೊದಕ್ಕ್ ಆಗಂಗೇ ಇಲ್ಲ ನೋಡು ಈ ಮನ್ಶಸಂಕ್ಲಕ್ಕೆ. ಎದ್ರುಗಡೆ ಪಿರುತಿ ಮಾತಾಡಿ ಬೆನ್ನ್ ತಿರುಗ್ಸಿದ್ರೆ ಚೂರಿ ಆಕ್ತಾರೆ. ದುರಾಸೆಗ್ ಬಿದ್ದು ಅಪ್ಪ ಅಮ್ಮ ಅಣ್ಣತಂಗಿ ಬಂಧುಬಳ್ಗ ಎಲ್ಲದ್ರಿಂದ ದೂರಾಗಿ ದುಡ್ದಿನ್ ಕುದ್ರೆ ಅತ್ತಿ ಅದ್ರ್ ಮೇಲ್ ಸವಾರಿ ಮಾಡಿ ಕೊನ್ಗೆ ಸಂಬಂಧಗ್ಳು ಅರ್ಥ್ವಾಗಿ ಬರೋಷ್ಟ್ರಲ್ಲಿ ಇಡೀ ಜೀವ್ನಾನೆ ಮಗ್ಚಾಕೊಂಡಿರ್ತದೆ. ಮನ್ಶ ಮನ್ಶಂಗ್ ಬೆಲ್ ಕೊಡೋದ್ ಕಲ್ಯೋದ್ ಯಾವಾಗ? ಮನ್ಶ ಮನ್ಶನ್ ಮನ್ಶಂತೆ ನೋಡೋಕ್ ಯಾಕಾಗಲ್ಲ? ತಾನು ತನ್ನ್ ಎಂಡ್ತಿಮಕ್ಕ್ಳಷ್ಟೇ ಅನ್ನೋದ್ನ ಬಿಟ್ಟು ಎಲ್ಲ್ರೂ ಒಂದೇಂತ ನೋಡಕ್ಕಾಗಲ್ವಾ? ಅಲ್ಲ್ರಪ್ಪಾ ಇಡೀ ಭೂಮಂಡ್ಲದೊಳ್ಗೆ ಯಾವ್ದೇ ಪ್ರಾಣಿಪಕ್ಷಿಕ್ರಿಮಿಕೀಟಗ್ಳು ಇದು ನಂದೇ ಅದು ನಿಂದೇ, ನಂಗಿಷ್ಟು ಬರ್ಬೇಕು ನಿಂಗಿಷ್ಟು ಅಂತೇನಾದ್ರು ಗೆರೆ ಗೀಚ್ಕೊಂಡ್ರೆ ಮನ್ಶಾ ಅನ್ನೋ ಪರ್ಲ್ಕೋಕದ್ ಪ್ರಾಣಿ ನಿಂತಾಲ್ಲೇ ಜೀವ ತೆಕ್ಕೋಬೇಕು ತಿಳ್ಕಳಿ. ಅವ್ಕೆಲ್ಲಾ ಇರ್ದಿರೊ ಗೆರೆಗೀಚು, ನಂದು ನಂದೇ ಅನ್ನೋ ತಾರತಮ್ಯ ನಮ್ಗ್ಯಾಕೆ ಏಳಿ? ತಾ ಬೇರೆ ನೀ ಬೇರೇಂತ ಅವೇನಾದ್ರು ಬ್ಯಾದಭಾವ ಮಾಡೋದ್ ಎಲ್ಲಾರ ಕೇಳೀರಾ? ಇಲ್ಲ್ವಲ್ಲ? ಮತ್ತೆ ನಮ್ಗ್ಯಾಕೆ ನೀ ದೊಡ್ಡ್ವ ನೀ ಚಿಕ್ಕ್ವ ಅಂತ ಬೇರಿಂಗ್ಡ? ಯಪ್ಪೋ ಸರ್ಯಾಗ್ ಕೇಳ್ಸ್ಕೊಳಿ, ಅವ್ಕೇನಾದ್ರು ಮಾತು ಬಂದು ಮಾತಾಡಂಗಿದ್ದಿದ್ರೆ ನಾವೆಲ್ಲ ಅದ್ರ್ ಅಡಿಯಾಳಾಗಿರ್ತಿದ್ವಿ. ಇವತ್ತ್ ಇಷ್ಟೆಲ್ಲಾ ಎಗ್ರಾಡೋ ನಾವು ಆಗ ಅವ್ಗುಳ್ ಮುಂದೆ ನೀಚನಿಕೃಷ್ಟವಾಗ್ ಬಾಳ್ ನಡ್ಸಬೇಕಾಕ್ತಿತ್ತು."
     
ಈ ಎಲ್ಲಾ ಮಾತುಗಳಿಂದ ನಮಗೆ ಗೊತ್ತಿಲ್ಲದ ಲೋಕಕ್ಕೆ ಹೋಗಿ ವಾಪಾಸ್ ಬಂದಂತಿತ್ತು ಅಜ್ಜಿ ಮೇಲ್ಗಾಣಿಸಿದಂತೆ ಉಸಿರು ಬಿಗಿಹಿಡಿಯದಂತೆ ಹೇಳಬೇಕಾಗಿದ್ದೆಲ್ಲ ಹೇಳಿ ಮಾತು ನಿಲ್ಲಿಸಿದಾಗ!  ನಮ್ಮಿಬ್ಬರಿಗು ಅಜ್ಜಿಯ ಮಾತುಗಳು ಎಷ್ಟು ಅರ್ಥವಾಯಿತೊ ಇಲ್ಲವೊ ಗೊತ್ತಿಲ್ಲ. ಆದರೆ ನನಗೆ ಮನದಲ್ಲಿ ಎಂದೂ ಕಾಣದ ಜೀವಕಳೆ ಒಸರುವಂತಾಗುತ್ತಿತ್ತು.
     
ಪ್ರಕೃತಿ ಮೈದಳೆದು ನಿಂತು ಸೃಷ್ಟಿ ನಿಯಮದೊಂದಿಗೆ ಕಲೆತಾಗ ನಡೆವ ಸಹಜ ಪ್ರಕ್ರಿಯೆಯೆಂಬಂತೆ ಅಜ್ಜಿ ಮಾತಾಡಿತ್ತು. ಅಜ್ಜಿ ಹೇಳಿದ್ದರಲ್ಲಿ ಲವಲೇಷಮಾತ್ರವೂ ಅಸತ್ಯವಾದುದಾಗಲಿ, ಅಸಂಬದ್ದವಾಗಲಿ ಇರಲಿಲ್ಲ. ಯಾವುದೋ ದೈವವಾಣಿ ನಮ್ಮೆದುರು ತಾನೆ ಮೈದಳೆದು ನಿಂತು ನಮಗಂಟಿದ್ದ ಅಗ್ನಾನದ ತೆರೆಯನ್ನು ಸರಿಸಲು ಸರಿ ರಾತ್ರಿಯಲ್ಲಿ, ಹೆಸರು ಗೊತ್ತಿಲ್ಲದ ಕಾಡಿನಲ್ಲಿ,  ಕಾಲದ ಪರಿವೆಯನರಿತ ಅಜ್ಜಿಯ ರೂಪಾಂತರವಾದಂತೆ ಅನಿಸುತಮೊಬೈಲ್ ಸಿ ನಿಜ, ಇಲ್ಲಿ ಮನುಷ್ಯನು ಮನುಷ್ಯನನ್ನು ನೋಡುವ ರೀತಿ ಬದಲಾಗಬೇಕಿದೆ, ಎಲ್ಲರೂ ನನ್ನವರೆಂದು ಭಾವಿಸುವ ಮನಸುಗಳ ಅವಶ್ಯಕತೆಯಿದೆ, ನಮ್ಮನಮ್ಮ ನಡುವಿನ ಅಂತರ ಕಡಿಮೆಗೊಳಿಸಿ ಭಾವೈಕ್ಯತೆಯ ನದಿ ಹರಿಯಬೇಕಿದೆ, ಸಾಮರಸ್ಯದ ಬದಲಾವಣೆ ಎಂದಿಗಿಂತ ಹೆಚ್ಚಿಗೆ ಬರಬೇಕಿದೆ, ಇಡೀ ಮಾನವಸಂಕುಲ ಪ್ರಾಣಿಪಕ್ಷೀಕ್ರಿಮಿಕೀಟಗಳ ಭಾಂದವ್ಯದ ಬೆಸುಗೆ ಬೆಸೆಯಬೇಕಿದೆ. ಹೌದು ಅಜ್ಜಿ ಹೇಳಿದ್ದು ಎಷ್ಟೊಂದು ನಿಜವಲ್ಲವೆ?
     
ಇದನ್ನೇ ಯೋಚಿಸುತ್ತ ಇದ್ದ ನನಗೆ ಸಮಯ ಸರಿದುದರ ಪರಿವೆಯಿರಲಿಲ್ಲ. ನಾವು ಎಲ್ಲಿದ್ದೆವೊ ಅಲ್ಲೇ ಮಲಗಿ ನಿದ್ದೆ ಹೋಗಿದ್ದೆವು. ಬೆಳಗಿನ ಜಾವ ಕಣ್ಣು ಬಿಟ್ಟು ನೋಡಿದಾಗ ಸೂರ್ಯನುದಯಿಸುತ್ತಿದ್ದ. ಪ್ರಖರ ಬೆಳಕು ಗುಡಿಸಲೆಲ್ಲಾ ಹರಡುತ್ತಿತ್ತು. ನೋಡಿದರೆ ಪ್ರಾಣಿ ಹೆಸರಿಗೆ ತಕ್ಕಂತೆ ವಿರಾಜಮಾನನಾಗಿ ಮಲಗಿದ್ದಾನೆ, ಅತ್ತಕಡೆ ಅಜ್ಜಿ ಬಸವನ ಹುಳು ತರ ಸುಳಿದಿರುಗಿ ಮುದುಡಿದ್ದಾರೆ. ಅಜ್ಜಿ ತನ್ನಲ್ಲಿದ್ದ ಹರುಕು ಹೊದಿಕೆಯನ್ನು ನಮ್ಮಿಬ್ಬರಿಗೂ ಹೊದಿಸಿ ತಾನು ಒಲೆಯ ಹತ್ತಿರ ಮಲಗಿದೆ. ಬಡತನದಲ್ಲೂ ಶ್ರೀಮಂತಿಕೆ ಮೆರೆದ ಅಜ್ಜಿಯ ನೋಡುತ್ತಿದ್ದೆ , ಅವರು ಸಾಕ್ಷಾತ್ ಮಾನವಕುಲದ ಶ್ರೇಷ್ಟರಂತೆ ಕಾಣುತ್ತಿದ್ದರು. ಬಡತನದಲ್ಲೇ ಅಲ್ಲವೆ ಬ್ರಾತೃತ್ವದ ಮೂಲವಿರುವುದು?
     
ಅಜ್ಜಿಗೆ ಏನು ಹೇಳಬೇಕೊ ತಿಳಿಯದೆ ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ಇದೆಲ್ಲಾ ಯಾಕೆ ಮಗಾ! ಅಂತು, ನಾನು ಮಾಡಿದ್ದು ನೋಡಿ ಪ್ರಾಣಿಯೂ ಹಾಗೇ ಮಾಡಿದ. ಜೀವಕಳೆ ತುಂಬಿದ ಜೀವಕ್ಕೆ ದುಡ್ಡುಕೊಟ್ಟು ಅವಮಾನಿಸಿದಂತೆನಿಸಿ ಮತ್ತೊಮ್ಮೆ ಅಜ್ಜಿ ನಮಸ್ಕರಿಸಿ ನಾವಿಬ್ಬರು ಅಲ್ಲಿಂದ ಹೊರಬಿದ್ದೆವು.
.........
     
ನನ್ನಲ್ಲಿನ ಜೀವಕಳೆ ನೋಡಿ ನನ್ನ ಗೆಳೆಯರು ಕಾರಣ ಕೇಳಿದಾಗ ನಾನು ಏನನ್ನೂ ಮುಚ್ಚಿಡದೆ ನಡೆದದ್ದನ್ನೆಲ್ಲ ಹೇಳಿದೆ. ಇದನ್ನು ಕೇಳಿದ ನನ್ನ ಗೆಳೆಯರು ನಮಗೂ ಅಜ್ಜಿಯ ದರ್ಶನಭಾಗ್ಯ ಕರುಣಿಸೆಂದರು. ನನಗೆ ವಿಪರೀತ ಕೆಲಸಗಳಿದ್ದುದರಿಂದ ಮುಂದಿನ ಭಾನುವಾರ ಹೋಗೋಣವೆಂದು ಅವರನ್ನೆಲ್ಲ ಒಪ್ಪಿಸಿದೆ.
      
ಅಂದುಕೊಂಡಂತೆ ಭಾನುವಾರ ಬಂತು. ಗೆಳೆಯರೆಲ್ಲ ಅತ್ಯೋತ್ಸಾಹದಿಂದ ಜೊತೆಗೂಡಿ ನಿಂತರು ಅಜ್ಜಿಯ ಕಾಣಹೊರಡಲು. ರಾಯರಗುಟ್ಟೆಗೆ ಹೊರಡುವ ಬಸ್ಸನ್ನೇರಿ ಅದು ಸಿಗುವ ಮೊದಲೇ ಹನ್ನೆರೆಡು ಮೈಲಿ ಹಿಂದಿನ ಸ್ಟಾಪಿನಲ್ಲಿ ನಿಲ್ಲಿಸುವಂತೆ ಕಂಡಕ್ಟರಿಗೆ ಹೇಳಿದ್ದೆವು. ಅದೂ ಇದು ಮಾತಾಡುತ್ತ, ಅಜ್ಜಿಯ ಅಸಮಾನ್ಯತೆಯ ಬಗ್ಗೆ ಚರ್ಚೆಗಳಾಗುತ್ತ ಬಂದಿರಲು ಕಂಡಕ್ಟರ್ ನಾವು ಹೇಳಿದಂತೆ ರಾಯರಗುಟ್ಟೆಯ ಹನ್ನೆರೆಡು ಮೈಲಿ ಹಿಂದೆಯಿಳಿಸಿ ದೂಳೆಬ್ಬಿಸಿಕೊಂಡು ಹೊರಟುಹೋದ.
     
ನನಗೆ ಅಂಗೈಯ್ಯ ಗೆರೆಯಂತೆ ಚೆನ್ನಾಗಿ ನೆನಪಿದೆ. ಯಾಕೆಂದರೆ ಅಜ್ಜಿಯ ಗುಡಿಸಲಿಂದ ಹೊರಬಿದ್ದ ನಾನು ಆಗ ಸುತ್ತಮುತ್ತಲಿದ್ದ ಪರಿಸರವನ್ನು ಚೆನ್ನಾಗಿ ನೋಡಿ ಮನದಟ್ಟು ಮಾಡಿಕೊಂಡಿದ್ದೆ, ಈಗ ನಾವು ಅದೇ ಪರಿಸರದಲ್ಲಿ, ಅದೇ ಅಜ್ಜಿಯ ಗುಡಿಸಲಿದ್ದ ಜಾಗದಲ್ಲಿ ನಿಂತಿದ್ದೀವಿ. ಆದರೆ ಅಜ್ಜಿಯಾಗಲೀ ಗುಡಿಸಲಾಗಲೀ ಕಾಣಿಸುತ್ತಿಲ್ಲ! ಅರೇ! ಇದೇನಾಶ್ಚರ್ಯ! ಎಷ್ಟು ಮತ್ತೊಮ್ಮೆ ಮಗದೊಮ್ಮೆ ಮನನ ಮಾಡಿಕೊಂಡರೂ ನನ್ನ ನೆನಪಿನಾಳದ ಅನುಭವ ನಾವೀಗ ನಿಂತಿರುವ ಜಾಗವನ್ನಲ್ಲದೆ ಬೇರೆ ಜಾಗವನ್ನು ತೋರಲೊಲ್ಲದು. ನನ್ನ ಗೆಳೆಯರು ನನ್ನನ್ನು ನೋಡಿ ಅಪಹಾಸ್ಯ ಮಾಡತೊಡಗಿದರು, ಯಾವುದೋ ಭಕ್ತಿಪ್ರಧಾನ ಸಿನೆಮಾ ನೋಡಿ ಹೀಗಾಡುತ್ತಿದ್ದೀನಂತೆ. ಸಾಕ್ಷಿ ಹೇಳಿಸೋಣವೆಂದರೆ ಪ್ರಾಣಿ ಇವತ್ತು ನಮ್ಮ ಜೊತೆ ಬಂದಿಲ್ಲ, ಮೊಬೈಲ್ ಸಿಗ್ನಲ್ ಸಿಗುವ ಜಾಗವೇ ಇದು? ನನ್ನ ಸ್ನೇಹಿತರು ನನ್ನನ್ನಾಗಲೇ ತಲೆಕೆಟ್ಟವನಂತೆ ನೋಡಲಾರಂಭಿಸಿ ಆ ಜಾಗದಿಂದ ರಸ್ತೆ ಕಡೆ ಮುಖಮಾಡಿ ನಡೆಯಲಾರಂಭಿಸಿದ್ದರು.
     
ಎಲ್ಲರೂ ಹೊರಟುಹೋದ ಮೇಲೆ ನಾನಿನ್ನು ಅಲ್ಲೇ ನಿಂತಿದ್ದೆ. ದೂರದಲ್ಲೆಲ್ಲೋ ಟ್ರಿಣ್ ಟ್ರಿಣ್ ಸೈಕಲ್ಲಿನ ಬೆಲ್ಲಾಗುವ ಸದ್ದಾಯಿತು. ಅಲ್ಲಿಗೆ ಹೋಗಿ ನೋಡಿದರೆ, ಪಕ್ಕದ ಬದುವಿನ ತಿರುವಲ್ಲೊಬ್ಬ ಸೈಕಲ್ಲ್ ಹೊಡೆಯುತ್ತ ಬರುತ್ತಿದ್ದ. ಅವನನ್ನು ಅಜ್ಜಿಯ ಬಗ್ಗೆ, ಆಕೆಯ ಗುಡಿಸಲ ಬಗ್ಗೆ ಕೇಳಿದ್ದಕ್ಕೆ ನನ್ನನ್ನು ಪೂರ ಮೇಲಿಂದ ಕೆಳಕ್ಕೆ ಒಮ್ಮೆ ನೋಡಿ, ಇಲ್ಲಿ ಸುತ್ತಮುತ್ತ ಹನ್ನೆರೆಡು ಮೈಲಿಯೊಳಗೆ ಯಾವುದೇ ಗುಡಿಸಲಾಗಲಿ, ಅಜ್ಜಿಯಾಗಲಿ ಅಸಲು ನರಪಿಳ್ಳೆಯಾಗಲೀ ವಾಸಮಾಡುತ್ತಿಲ್ಲವೆಂದ. ಅವನು ಹೇಳಿದ್ದನ್ನು ಮತ್ತೆ ಪ್ರಶ್ನಿಸಿ ಕೇಳುವಂತೆಯಿರಲಿಲ್ಲ. ಅವನಿಗೆ ನಮಸ್ಕರಿಸಿದೆ. ಅವನು ಹೊರಡಲು ಅನುವಾದ. ಹೋದಹಾಗೆ ಹೋದವನು ಸ್ವಲ್ಪ ಮುಂದೆ ಹೋಗಿ ಕೇಳಿದ, " ನೀವ್ಯಾರು?"
     
ಹೌದು ನಾನ್ಯಾರು? ನಾನೇಕೆ ಕಾಣದ ದಟ್ಟಡವಿಯಲ್ಲಿ ಹಲವು ಜನುಮಗಳಿಂದ ಪರಿಚಯಳಂತಿರುವ ಅಜ್ಜಿಯನ್ನು ಹುಡುಕುತ್ತಿದ್ದೀನಿ? ಅಸಲಿಗೆ ಪರಿಚಯವಿರುವುದೇ ಆದಲ್ಲಿ ನಾನೇಕೆ ಆಕೆಯನ್ನು ಹುಡುಕಬೇಕು, ಪರಿಚಯವಿದ್ದವರಿಗೆ ಪರಿಚಯಸ್ಥರು ಎಲ್ಲಿರುವರೆಂದು ತಿಳಿಯದೇ? ಹಾಗಾದರೆ ಅಜ್ಜಿ ಎಲ್ಲಿದ್ದಾರೆ? ಈಗಂತೂ ಆ ಜಾಗದಲ್ಲಿಲ್ಲ. ಹುಡುಕುವುದು ಎಲ್ಲಿ? ಮತ್ತೆ ಅದೇ ಜಾಗಕ್ಕೆ ಬಂದು ಅಲ್ಲಿನ ಆ ಕ್ಷಣದ ಗತಿಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಇಲ್ಲಿ ಅಜ್ಜಿಯಿದ್ದದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತೀರ್ಮಾನಿಸುವಷ್ಟರಲ್ಲಿ, ಜೋರಾಗಿ ಬೀಸಿ ಬಂದ ಗಾಳಿ ಆ ದಿನ ಅಜ್ಜಿ ಗುಡಿಸಲಲ್ಲಿ ನಾವಿದ್ದಾಗ ಬೀಸಿದ ಗಾಳಿಯಂತೆಯೇ ಬೀಸಿ ಅದು ನೆನಪಾಗಲು ಅಲ್ಲೇ ಗಾಳಿಯಲ್ಲಿದ್ದ ತರಗೆಲೆಗಳ ಮಧ್ಯೆ ನನ್ಮ ಅಂತಃಶಕ್ತಿಯನ್ನೇ ಅಲ್ಲೋಲ ಕಲ್ಲೋಲಗೊಳಿಸುವಂತೆ ಕಂಡಿದ್ದು ನಾವಂದು ಅಜ್ಜಿಯ ಮನೆ ಮುಂದೆ ಮೊದಲು ನೋಡಿ ಇದೊಂದು ಗುಡಿಸಲೆಂದು ಗುರುತಿಸಿ ಸಹಾಯ ಮಾಡಿದ್ದ ಅದೇ ದೊಂದಿ!
     
ನನಗಷ್ಟು ಸಾಕಿತ್ತು ಅಜ್ಜಿವ ಇರುವಿಕೆಯನ್ನು ಬಿಂಬಿಸಲು! ಇದಕ್ಕಿಂತ ಸಾಕ್ಷಿ ನನಗೆ ನನ್ನ ಇಡೀ ಜೀವಮಾನ ಹುಡುಕಿದರೂ ಸಿಗುತ್ತಿರಲಿಲ್ಲ. ಅಲ್ಲೇ ತರಗೆಲೆಗಳ ಮಧ್ಯೆ ಬಿದ್ದಿದ್ದ ಆ  ದೊಂದಿಯನ್ನು ಎತ್ತಿಕೊಂಡು ಅಪ್ಯಾಯಮಾನ ತುಂಬಿದ ಕಂಗಳಲ್ಲಿ  ನೋಡಿದೆ. ನನಗೆ ಹಿಂದೆ ನಡೆದದ್ದೆಲ್ಲವು ಈಗ ಕಣ್ಣ್ಮುಂದೆ ನಡೆದಂತಿತ್ತು. ಅದರ ಮಧುರ ಸ್ಮೃತಿಪಲ್ಲಟದಲ್ಲಿ ಮುಳುಗಿದ್ದ ನನ್ನನ್ನು ಹಿಂದಕ್ಕೆ ಎಳೆತಂದಿದ್ದು ನನ್ನ ಸ್ನೇಹಿತರ ಅಶರೀರ ವಾಣಿ, ಅವರು ನನ್ನನ್ನು ಕೂಗಿ ಕರೆಯುತ್ತಿದ್ದರು "ಬಾರೋ ಟೈಮಾಯ್ತು" ಅಂತ.
     
ಅರಿವಿನ ಗುರುವಾದ ಅಜ್ಜಿಗೆ ಮನದಲ್ಲೇ ನಮಸ್ಕರಿಸಿ ಅಲ್ಲಿಂದ ಹೊರಬಿದ್ದೆ. ರಸ್ತೆಯ ಹತ್ತತ್ತಿರ ಬರುತ್ತಿದ್ದವನು ಒಮ್ಮೆ ಹಿಂದೆ ತಿರುಗಿ ನೋಡಿದೆ, ಅಲ್ಲಿ ಅಜ್ಜಿ ನಿಂತು ನನ್ನತ್ತ ಕೈಬೀಸುವುದು ಕಾಣಿಸಿತು. ನಾನು ಮನೆ ದಾರಿ ಹಿಡಿದೆ.
   
                                                                   - ಮುಗಿಯಿತು -

ಮೋಹನ್ ಕುಮಾರ್ ಡಿ ಎನ್
ನಂ. 21/160, ಹೇಮಾವತಿಪೇಟೆ,
ದೊಡ್ಡಬಳ್ಳಾಪುರ - 561203,
ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕರ್ನಾಟಕ.
ಮೊಬೈಲ್ - 90359 62665
೨೦೧೫ರ ದೀಪಾವಳಿ ಕಥಾಸ್ಪರ್ಧೆಗೆ ಬರೆದ ಕಥೆಯಿದು. ಬರೆದದ್ದು "ವಿಜಯವಾಣಿ" ಪತ್ರಿಕೆಗೆ. ಬಹುಮಾನ ಬರುತ್ತದೆ ಎನ್ನುವ ನಂಬಿಕೆಯೇನೂ ನನ್ನಲ್ಲಿರಲಿಲ್ಲ. ಆದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನು ಅಲ್ಲವೇ? ಬರೆದು ಕಳುಹಿಸಿದ್ದಾದ ಮೇಲೆ ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಸಾಧ್ಯವಾಗಿರಲಿಲ್ಲ, ಕಾರಣ, ಎಷ್ಟು ಹುಡುಕಿದರೂ ನನ್ನ ಮಿಂಚಂಚೆಯಲ್ಲಿದ್ದುದು ಸಿಗಲೇ ಇಲ್ಲ. ಕಳುಹಿಸಿದ ನಂತರ ಅದರ ಪ್ರತಿಯೊಂದನ್ನು ನನ್ನ ಬಳಿ ಇಟ್ಟುಕೊಂಡಿದ್ದಿದ್ದರೆ ಈಗಾಗಲೇ ಇಲ್ಲಿ ಹಾಕುತ್ತಿದ್ದೆ. ಈವತ್ತು ಏನನ್ನೋ ಹುಡುಕುತ್ತಿರುವಾಗ ಅಕಸ್ಮಾತ್ತಾಗಿ ಇದು ನನ್ನ ಕಣ್ಣಿಗೆ ಬಿತ್ತು . ನೋಡಿ ಕೆಳಗಡೆ ಕಥೆಯಿದೆ ಹಾಕಿರುವೆ, ಓದಿಕೊಳ್ಳಿ. 

ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ 2015

"ಕಪ್ಪುಮಚ್ಚೆ ಮತ್ತು ಪ್ರಾಣ"

ನನ್ನ ನಾಲಗೆಯಲ್ಲಿ ಕರಿಚುಕ್ಕಿಯಂತವು ಸುಮಾರಿದೆ. ಅದನ್ನು ನೋಡಿ ಅಂದು ಅಮ್ಮ ಹೇಳಿದ್ದಳು, " ಮಗಾ! ಇದು ಅಂತಿಂಥ ಚುಕ್ಕಿಗಳಲ್ವೋ, ಮಚ್ಚೆ! ನಾಗರಮಚ್ಚೆ! ಈ ಥರ ನಾಲಗೆ ಮೇಲೆ ಮಚ್ಚೆ ಬರೋದು ಅಪರೂಪದಲ್ಲಪರೂಪ. ನಿನಗೆ ಅದು ಬಂದಿದೆಯೆಂದರೆ, ಖಂಡಿತ ನಿನಗೆ ಒಳ್ಳೇದಾಗ್ತದೆ. ನೀನ್ಯಾವ ಮಾತಾಡಿದ್ರು ಇಂದಲ್ಲ ನಾಳೆ ನೆರವೇರ್ತದೆ , ನೆರವೇರಲೇಬೇಕು. ಇದು ನಿನ್ನ ಭವಿಷ್ಯ ಕಣೋ ಮಗಾ" ಅಂತ.

ಒಂದು ದಿನ ನಾನು ಮನೆಯ ಅಂಗಳದಲ್ಲಿ ಆಡುತ್ತಿರಬೇಕಾದರೆ ಎದುರು ಮನೆಯ ಸೋಮ ಬಂದು ನಮ್ಮಜೊತೆ ಸೇರಿಕೊಂಡ. ಅವನಿಗೆ ಮೊದಲಿಂದಲೂ ನಾನು, ನನ್ನದೆ ಮಾತು ಎಂಬ ಹಟವಿತ್ತು. ಇದಕ್ಕೂ ಮುನ್ನ ನಾವು ಗೆಳೆಯರೆಲ್ಲರು ಸೇರಿ ಅವನನ್ನು ನಮ್ಮ ಗುಂಪಿನಿಂದ ಹೊರಹಾಕಿದ್ವಿ. ನಾವು ಎಷ್ಟೇ ಸಾರಿ ಹೊರಹಾಕಿದ್ರು ಅವನು ಮತ್ತೆ ಮತ್ತೆ ಬಂದು ಅತ್ತಂತೆ ನಟಿಸಿ ನನ್ನ ಮನಗೆದ್ದುಬಿಡುತ್ತಿದ್ದ. ಆಗಿನ ಕಾಲಕ್ಕೆ ನಮ್ಮ ಗುಂಪಿಗೆ ನಾನೇ ರಾಜನಾದ್ದರಿಂದ ನನ್ನನ್ನು ಗೆದ್ದರೆ, ಮನವೊಲಿಸಿದರೆ ಮತ್ತೆ ಗುಂಪಿನಲ್ಲಿ ಸ್ಥಾನ ಪಡೆಯಬಹುಂದೆಂದು ಅವನ ಸುಲಭ ಲೆಕ್ಕಾಚಾರ. ನಾನೋ ಕಣ್ಣೀರಿಗೆ ಬೇಗನೆ ಕರಗುವ ಹೆಣ್ಣಪ್ಪಿ. ಅವನು ಬಂದು ನನ್ನತ್ತ ಕಣ್ಣೀರು ಸುರಿಸಿದರೆ ಸಾಕು ಸೋಮನನ್ನು ಗುಂಪಿಗೆ ಸೇರಿಸಿಕೊಳ್ಳುತ್ತಿದ್ದೆ. ಹೇಳಬೇಕೆಂದರೆ ಉಳಿದ ನಮ್ಮ ತಂಡದ ಸದಸ್ಯರಿಗೆ ಇದು ಹಿಡಿಸುತ್ತಿರಲಿಲ್ಲ. ಮೇಲಾಗಿ ಅವನನ್ನು ಕಂಡರೆ ಇತರರು ದುಷ್ಟ ದುರುಳ ಎಂದು ಭಾವಿಸಿದ್ದರು. ಅವನು ಮೇಲ್ನೋಟಕ್ಕೆ ಹಾಗೇ ಕಂಡರು ನಾನು ಮಾತ್ರ ಅವನನ್ನು ಹಾಗೆ ನೋಡಲು ಸಾಧ್ಯವೇ ಆಗಲಿಲ್ಲ. ಆದರೆ ಒಂದು ದಿನ ಆ ಪ್ರಸಂಗ ನನ್ನ ಮನಸ್ಸು ತನ್ನ ನಿರ್ಧಾರವನ್ನು ಬದಲಿಸಿ ಸೋಮ ಒಬ್ಬ ದುಷ್ಟದುರುಳ ಎನ್ನುವಂತೆ ಮಾಡಿದ ಘಟನೆಯೊಂದು ನಡೆಯಿತು. ಅವತ್ತು ಸೋಮ ನನ್ನನ್ನು ಆಟಕ್ಕೆ ಸೇರಿಸ್ಕೊಳ್ರೋ ಅಂತ ಬಂದ. ನಾನು ಸುಮ್ಮನೆ ತಂಡದ ಉಳಿದ ಗೆಳೆಯರ ಬಳಿ ನೋಡಿದೆ. ಅವರಿಗಿಷ್ಟವಿಲ್ಲದಿದ್ದರು ನನ್ನ ಮಾತಿಗೆ ಬೆಲೆಕೊಟ್ಟು ಸೇರಿಸಿಕೊಂಡರು.

ಅವತ್ತು ನಾವು ಆಡುತ್ತಿದ್ದುದು ಕಳ್ಳಪೋಲಿಸ್ ಆಟ. ಅದರಲ್ಲಿ ನಾನು ಸೇರಿ ನಾಲ್ಕು ಜನ ಕಳ್ಳರು ಮತ್ತು ನಮ್ಮನ್ನೆಲ್ಲ ಹಿಡಿಯುವ ಒಬ್ಬೇ ಒಬ್ಬ ಪೋಲಿಸ್ ಆಗಿ ಸೋಮನು ಎಂದು ನಿಶ್ಚಯವಾಯ್ತು. ಆಟ ಮುಂದುವರೆಯಿತು. ಕಳ್ಳರೆಲ್ಲ ಒಬ್ಬೊಬ್ಬರಾಗಿ ಸಿಗುತ್ತಾ ಬಂದಿದ್ದರು, ನಾನು ಮಾತ್ರ ಸಿಕ್ಕಿರಲಿಲ್ಲ. ಸರಿ ಅವನು ನನ್ನ ಬೆನ್ನಟ್ಟಿದ. ಅವನಿಗಿಂತಲು ಸಣ್ಣಗೆ ಚೂಟಿಯಾಗಿದ್ದ ನಾನು ನಮ್ಮ ಮನೆ ಮುಂದಿನ ಅಂಗಳವನ್ನೆಲ್ಲ ಅವನಿಗೆ ಸುತ್ತಿಸಿ ಗಿರಗಿಟ್ಲೆಯಾಡಿಸಿದ್ದೆ. ಅವನು ಸಾಕಾಗಿದ್ದ, ಜೊತೆಗೆ ನಾನೂ. ಅವನು ನನ್ನಿಂದ ದೂರ ನಿಂತುಕೊಂಡೇ ಏದುಸಿರೆಳೆದುಕೊಳ್ಳತೊಡಗಿದ. ಇದನ್ನು ಕಂಡ ನಾನು ಸೋಮ ವಿರಮಿಸಿಕೊಳ್ಳುತ್ತಿರಬೇಕು ಅಂತ ಅಂದುಕೊಂಡು ಪಕ್ಕದಲ್ಲಿದ್ದ ಬೇಲಿಯ ಮೇಲೆ ಒಂದ ಮಾಡಲು ಮುಂದಾದೆನು. ಅದವನಿಗೆ ಕಂತ್ರಿ ಬುದ್ದಿ ತೋರಿಸುವ ಸಮಯಯಾಗಿತ್ತು. ಮೆಲ್ಲಗೆ ಹೆಜ್ಜೆ ಸಪ್ಪಳವಾಗದಂತೆ ಓಡಿಬಂದು ನಾನು ಹತ್ತಿರಾಗುತ್ತಲೇ ತನ್ನ ಓಟ ಹೆಚ್ಚಿಸಿಕೊಂಡು ನನ್ನ ಮೇಲೆ ಬಿದ್ದ ನೋಡಿ! ನನಗೇನಾಗಿದೆಯೆಂದು ತಿಳಿವ ಮುನ್ನ ಹಾಕಿದ್ದ ಬೇಲಿ ಮೇಲೆ ಮುರಕೊಂಡು ಬಿದ್ದು ಪಕ್ಕದ ರಸ್ತೆಗೆ ಹಾರಿ ಬಿದ್ದಿದ್ದೆ. ನನ್ನ ಮೈಕೈಯಲ್ಲೆಲ್ಲ ರಕ್ತ, ತರಚು ಗಾಯವಾಗಿದ್ದು ತಕ್ಷಣ ನನ್ನ ಗಮನಕ್ಕೆ ಬರತೊಡಗಿತು. ಅದನ್ನು ಕಂಡ ನನ್ನ ಸ್ನೇಹಿತರು ಅಲ್ಲಿಂದ ನಮಗೂ ಇದೇ ಗತಿಯಾದರೇನೆಂದು ಕಾಲ್ಕಿತ್ತರು. ನಾನಿನ್ನು ಅಲ್ಲೆ ರಸ್ತೆ ಮೇಲೆ ಬಿದ್ದಿದ್ದೆ. ಬಹುಶಃ ಅಮ್ಮ ಒಳಗಿದ್ದುದರಿಂದ ಆಕೆಗಿದು ತಿಳಿಯಲಿಲ್ಲ ಅನ್ಸುತ್ತೆ. ನಾನಿದ್ದ ಸ್ಥಿತಿ ನೋಡಿ ಕನಿಕರಿಸಿ ಬಂದು ಸಹಾಯ ಮಾಡದೆ, ಮಾಡಿದ ತಪ್ಪಿಗೆ ಬೇಸರಿಸಿಕೊಳ್ಳದೆ ಅವನು ಶುರು ಮಾಡಿದ ನೋಡಿ ಆ ಕೇಕೆ! ಅದೆಲ್ಲಿತ್ತೋ ಆ ರಾಕ್ಷಸ ನಗುವಿನ ಕೇಕೆ! ನನ್ನತ್ತ ನೋಡಿ ಒಂದೇ ಸಮನೆ ನಗಲು ಶುರು ಮಾಡಿದ. ಆ ನಗು ಹೇಗಿತ್ತೆಂದರೆ ನನ್ನ ಇಡೀ ಇರುವಿಕೆಯನ್ನೇ ಪ್ರಶ್ನಿಸಿ ನೋಡಿ ನಗುವಂತಿತ್ತು. ಮನುಷ್ಯ ಪ್ರಗ್ನೆ ಕಳೆದುಕೊಳ್ಳುವುದು ಬಹುಶಃ ತನ್ನ ಅಸ್ತಿತ್ವಕ್ಕೆ ಮತ್ತು ಜೀವನ ನಡೆಸಲು ಬೇಕಾದ ಮರ್ಯಾದೆ ಕಳೆದುಕೊಂಡಾಗ ಮಾತ್ರ ಅಂತ ನನಗನ್ನಿಸುತ್ತೆ. ಸೋಮನ ಆ ನಗುವನ್ನು ನೋಡಿ ಅದೆಲ್ಲಿತ್ತೋ  ಅತಿ ಉಗ್ರಾತಿಯುಗ್ರ ಕೋಪ, "ನೀನು ಸುಟ್ಟು ಬೂದಿ ಆಗೋಗ!" ಅಂದೆ. ಹಾಗೇಕಂದೆ ಇವತ್ತು ನೆನೆದರೆ ನಿಜಕ್ಕು ಗೊತ್ತಿಲ್ಲ ಅಂತಲೇ ಹೇಳುತ್ತೀನಿ. ಸೋಮನಿಗೆ ಅದೇನು ಅನ್ನಿಸಲಿಲ್ಲವೋ ಏನೊ ಹಿಂದಿರುಗಿ ನೋಡದೆ ಅದೇ ಅಟ್ಟಹಾಸ ಕೇಕೆ ಹಾಕುತ್ತಾ ಅಲ್ಲಿಂದ ಹೊರಟುಹೋದ.

ಇದಾದ ಮಾರನೆ ದಿನ ಬೆಳಗ್ಗೆ ಮನೆಯ ಮುಂದೆ ಜನರು ಜೋರಾಗಿ ಎಂದಿನಂತಲ್ಲದೆ ಮಾತಾಡಿಕೊಂಡು ಹೋಗುತ್ತಿದ್ದುದು ಒಳಗೆ ನೆನ್ನೆಯಾದ ತರಚು ಗಾಯಗಳಿಗೆ ಅಮ್ಮ ಮಾಡಿದ ಇಲಾಜಿನಿಂದ ಮಲಗಿ ವಿರಮಿಸಿಕೊಳ್ಳುತ್ತಿದ್ದ ನನಗೆ ಕೇಳಿಸಿ ಅದೇನೆಂದು ನಿಧಾನವಾಗಿ ಎದ್ದು ಬಂದು ಅಮ್ಮನನ್ನು ಏನೆಂದು ಕೇಳಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಒಕ್ಕಲಿಗೆಂದು ಸೋಮನ ತಂದೆತಾಯಿ ಪಕ್ಕದೂರಿಗೆ ಹೋಗಿದ್ದರಿಂದ ಮನೆಯಲ್ಲಿ ಅಜ್ಜಿಯ ಜೊತೆ  ಇರುವುದು  ಊರವರಿಗೆಲ್ಲ ತಿಳಿದದ್ದೇ ಆಗಿತ್ತು. ನೆನ್ನೆ ನಮ್ಮನೆಯಿಂದ ಹೋದ ಸೋಮ ಅಜ್ಜಿ ಮಾಡಿಟ್ಟ ಅಂಬಲಿ ಕುಡಿದು ತನ್ನ ಪಾಡಿಗೆ ಹೋಗಿ  ಮನೆಯ ಒಳ ವರಾಂಡದಲ್ಲಿ ಮಲಗಿದ್ದನಂತೆ. ಒಂದುಹೊತ್ತಿನಲ್ಲಿ ಅಜ್ಜಿ ಕೂಗುತ್ತಿದ್ದ ಸದ್ದು ಕೇಳಿ ಕಣ್ಣ್ ಬಿಟ್ಟು ನೋಡಿದರೆ ಮನೆಯೆಲ್ಲಿದ್ದ ನಗನಾಣ್ಯ ದೋಚಿದ ನಂತರ  ಕಳ್ಳರು  ಮನೆಗೆಲ್ಲಾ  ಬೆಂಕಿಯಿಟ್ಟಿದ್ದಾರೆ! ಭಾರೀ ನಿದ್ರೆಯಲ್ಲಿದ್ದ ಸೋಮನಿಗೆ ಇದರ ಪರಿವೆಯೇ ಇಲ್ಲದೆ ಬೆಂಕಿ ಬಿದ್ದ ಎಷ್ಟೋ ಹೊತ್ತಾದ ಬಳಿಕ ನೋಡಿದ್ದಾನೆ, ತಪ್ಪಿಸಿಕೊಂಡು ಹೋಗಲೂ ಆಸ್ಪದವಿಲ್ಲದಂತೆ ಬೆಂಕಿ ಮನೆಯೆಲ್ಲಾ ಆವರಿಸಿದೆ! ಸೋಮ ಕೊನೆಗೂ ಅದರಿಂದ ಹೊರಬರಲಾರದೆ ಬೆಂಕಿಯಲ್ಲಿ ಸುಟ್ಟು ಬೂದಿಯಾದ - ನೆನ್ನೆ ನಾನು ಹೇಳಿದ ಮಾತಿನಂತೆ.

ಇದಲ್ಲದೆ ಇನ್ನೊಂದು ಘಟನೆ ನಡೆಯಿತು. ಊರಲ್ಲಿ ಕಳ್ಳಬಟ್ಟಿ ಕಾಯಿಸುತ್ತಿದ್ದ ಜಾನಿ ಅಬಕಾರಿ ದಳದವರು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲುಪಾಲಾಗಿ ಸುಮಾರು ಮೂರು ತಿಂಗಳಾದ ಮೇಲೆ ಬೇಲ್ ಮೇಲೆ ಹೊರಬಂದ. ಜಾನಿಗೆ ಬೇಲ್ ಕೊಟ್ಟು ಹೊರಕರೆತಂದವರು ಯಾರೋ ಆಗಿರದೆ ಸ್ವಂತ ನಮ್ಮ ಚಿಕ್ಕಪ್ಪನೇ ಆಗಿದ್ದರು. ನಮಗೆಲ್ಲ ಆಶ್ಚರ್ಯದ ಜೊತೆ ಅನುಮಾನವು ನನ್ನನ್ನು ಸೇರಿದಂತೆ ಅಪ್ಪನಿಗು ಕಾಣಿಸಲಾರಂಭಿಸಿತು. ಇದನ್ನೇ ಮುಂದಿಟ್ಟುಕೊಂಡು ಚಿಕ್ಕಪ್ಪನ ಜೊತೆ ಮಾತಿಗೆ ಮಾತುಂಟಾಗಿ ಅಪ್ಪ  ಆತನನ್ನು ಮನೆಯಿಂದ ಹೊರಗಟ್ಟಿದರು. ಇದರ ಹಿಂದಿರುವ ಕುಮ್ಮಕ್ಕು ಅಮ್ಮನದೆಂದು ಚಿಕ್ಕಪ್ಪನ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯ್ತು. ಇಲ್ಲದಿದ್ದರೆ ಹುಟ್ಟಿದಾಗಿಂದಲು ಒಂದೇಟು, ಬಿಡಿ, ಒಂದೇ ಒಂದು ಜೋರು ಮಾತಾಡದ ಅಣ್ಣ ಹೀಗೆ ಇದ್ದಕ್ಕಿದ್ದಂತೆ ಮನೆಯಿಂದ ದೂರಾಕಲು ಅತ್ತಿಗೆಯಲ್ಲದೆ ಬೇರ್ಯಾರು ಕಾರಣರಲ್ಲವೆಂದು ತಿಳಿದುಕೊಂಡು ಮನೆಯಿಂದ ಹೊರಹೋಗಬೇಕಾದರೆ ಹೊರಹೋಗೆಂದು ಹೇಳಿದ ಅಪ್ಪನನ್ನು ಬಿಟ್ಟು ಅಮ್ಮನನ್ನ್ಯಾಕೆ ಆತ ದುರುದುರುಗುಟ್ಟಿ ನೋಡುತ್ತಿದ್ದ ಹೇಳಿ? ಆತ ನೋಡಿದ ನೋಟವೇನೊ ಸರಿಯಿರಲಿಲ್ಲವೆಂದು ನನಗನ್ನಿಸಿತು. ಅದೇ ಚಿಂತೆಯಲ್ಲಿ ಆ ರಾತ್ರಿ ಮಲಗಿದೆ, ಆಗ ನನಗೊಂದು ಕನಸು ಬಿತ್ತು.

ಅಲ್ಲಿ ಯಾರೋ ಅಪ್ಪನನ್ನು ಗುಂಪುಗೂಡಿ ಸುತ್ತುವರೆದಿದ್ದರು. ಅಪ್ಪನ ಕಾಲಕೆಳಗೆ ಅಮ್ಮ ಬಿದ್ದು ಅಳುತ್ತಿದ್ದಳು. ಅಲ್ಲಿದ್ದ ಯಾರೋ ಒಬ್ಬ ಅಪ್ಪನ ಕೈಗೆ ಒಂದು ಮಚ್ಚು ಕೊಟ್ಟು ಕಡಿ ಎನ್ನುತ್ತಾನೆ. ಅಪ್ಪ ಹಿಂದುಮುಂದು ನೋಡದೆ ಅಮ್ಮನ ತಲೆಯನ್ನು ಕಡಿದೇಬಿಡುತ್ತಾರೆ, ಒಂದೇ ಏಟಿಗೆ! ಅತ್ತಲಿಂದ ಉರುಳಿಬಂದ ಅಮ್ಮನ ತಲೆ ಅಲ್ಲಿ ನಿಂತು ನೋಡುತ್ತಿದ್ದ ನನ್ನ ಕಾಲ ಬಳಿ ಬಂದು ಬೀಳುತ್ತಲೆ ಆಗ ಕೇಳಿಸುತ್ತದೆ ಒಂದು ವಿಕಟಾಟ್ಟಹಾಸದ ನಗು. ಅಲ್ಲಿ ಚಿಕ್ಕಪ್ಪ ನಿಂತು ನಗುತ್ತಿರುತ್ತಾನೆ. ಆ ನಗುವಿನ ಆರ್ಭಟ ತಡೆಯಲಾರದ ನಾನು ತಲೆಗೆ ರೇಜಿಗೆಯೇರಿ ಅಪ್ಪನ ಕೈಲಿದ್ದ ಮಚ್ಚು ತೆಗೆದುಕೊಂಡು ಅಲ್ಲಿದ್ದ ಎಲ್ಲರನ್ನು ತರಗೆಲೆಗಳಂತೆ ಕೊಚ್ಚಿಬಿಸಾಡುತ್ತೇನೆ, ಅಪ್ಪನನ್ನು ಮೊದಲುಗೊಂಡು. ಈಗ ನನ್ನ ಸುತ್ತ ಯಾರೆಂದರೆ ಯಾರೂ ಇಲ್ಲದ ಶೂನ್ಯ ನಿರ್ಭಾವುಕ ಸ್ಥಿತಿ. ಗಾಳಿಯೂ ಕೂಡ ಸುಳಿಯದ ಸ್ತಬ್ದತೆ. ಉಸಿರೂ ಕೂಡ ಬಿಗಿಹಿಡಿದು ಬರುತ್ತಿದೆಯೇನೊ ಎಂಬ ಭಾವ. ಆಗ ಅಲ್ಲಿದ್ದಕ್ಕಿದ್ದಂತೆ ಯಾರೋ ಎದ್ದು ಬರುವ ಸದ್ದಾಗುತ್ತಿದೆ. ನೋಡಿದರೆ ಅಪ್ಪ ಕಡಿದಿದ್ದ ಅಮ್ಮನ ತಲೆ ಮತ್ತೆ ಆಕೆಯ ಹೆಗಲಮೇಲೇರಿ ಮೊದಲಿನಂತಾಗಿ ಆಕೆ ನನ್ನೆಡೆ ನಡೆದು ಬರುತ್ತಿದ್ದಾಳೆ! ನನಗೆ ಎಲ್ಲಿಲ್ಲದ ಭಯವಾಗತೊಡಗಿತು. ಹತ್ತಿರ ಬಂದು ಆಕೆ " ಮಗಾ!" ಎಂದಳಷ್ಟೇ. ನಾನು ಜೋರಾಗಿ ಕಿರುಚುತ್ತ " ಅಮ್ಮಾ!" ಎಂದೆದ್ದೆ.  ಸುತ್ತಲು ಕವಿದಿರುವ ಕಾವಳದಲ್ಲಿ ಮೈಮರೆತು ನಿದ್ರೆ ಹೋಗುತ್ತಿರುವ ಅಪ್ಪ ಅಮ್ಮ ಅಸ್ಪಷ್ಟವಾಗಿ ಕಂಡರು. ಇದು ಕನಸೆಂದು ನನ್ನ ಅರಿವಿಗೆ ಬರಲು ಅದೆಷ್ಟೋ ಹೊತ್ತಾಯಿತು.

ಇದಾದ ಸುಮಾರು ದಿನಗಳ ನಂತರ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ನಾನು ನಮ್ಮ ಮನೆಯ ಮುಂದೆ ಯಾರೋ ಒಂದಷ್ಟು ಜನ ನಿಂತದ್ದು ಕಾಣಿಸಿತು. ಅದೇನೆಂದು ಬಂದು ನೋಡಿದ ನನಗೆ ಒಂದರೆ ಕ್ಷಣ ಕಾಲ ಸ್ತಂಭೀಭೂತವಾದಂತಾಗಿ ನನ್ನ ಕಣ್ಣುಗಳೆರಡನ್ನು ನಾನೇ ನಂಬದಾದೆ. ಕನಸಲ್ಲಿ ಅಂದು ಕಂಡ ಅದೇ ಮಚ್ಚನ್ನು ಅಮ್ಮ ಹಿಡಿದು ನಿಂತಿದ್ದಾಳೆ ತನ್ನ ಕಾಲ ಬಳಿ ಅಪ್ಪನ ತಲೆಯುರುಳಿಬಂದು ಬಿದ್ದಿದ್ದರು ಅದನ್ನು ಗಮನಿಸದೆ ಮೇಲಕ್ಕೆ ನೋಟ ಮಾಡಿ ತದೇಕಚಿತ್ತದಿಂದ ಶೂನ್ಯವನ್ನು ದಿಟ್ಟಿಸಿ ನೋಡುತ್ತ!! ಅಮ್ಮ ಮಚ್ಚಿನಿಂದ ಅಪ್ಪನ ತಲೆಯೊಡೆದುರುಳಿಸಿದ್ದಳು! ಅದೇ ಕನಸಲ್ಲಿ ಕಂಡಂತೆ ಈಗಲು ನಾನು ಕೂಗಿ ಹೇಳಿದ್ದಿಷ್ಟೇ "ಅಮ್ಮಾ!".
ತಲೆತಿರುಗಿ ಬಂದುಬಿದ್ದಿದ್ದ ನನ್ನನು ಉಪಚರಿಸಿ ಮೇಲೆಬ್ಬಿಸಲಾಗಿ ಕಂಡ ವೃತ್ತಾಂತವೆಂದರೆ ಇದನ್ನು ತಾನೆ ಮಾಡಿದ್ದೆಂದು ಅಮ್ಮನೇ ಒಪ್ಪಿಕೊಂಡ ನಂತರ ಪೋಲೀಸರು ಅಮ್ಮನ ಕೈಗೆ ಕೋಳ ತೊಡಿಸಿ ಎಳೆದೊಯ್ಯುತ್ತಿದ್ದರು.

----------------------------------------------------------------------------------------------------------------------------------------------------

ನನಗೆ ಎಚ್ಚರ ಬರುವಷ್ಟರಲ್ಲಿ ಅಪ್ಪನ ವಿಧಿವಿಧಾನಗಳೆಲ್ಲ ಮುಗಿದು ಎರಡು ದಿನವಾಗಿ ಚಿಕ್ಕಪ್ಪನ ಮನೆಯಲ್ಲಿದ್ದೆ. ನಡೆದದ್ದೆಲ್ಲವನ್ನು ಚಿಕ್ಕಪ್ಪ ಸಾಧ್ಯಂತವಾಗಿ ಹೇಳಿದರು. ಒಮ್ಮೆ ಹಾಗೇ ಅವರನ್ನು ನೋಡಿದೆ, ಯಾಕೋ ಕಣ್ಣಲ್ಲಿ ನೀರಾಡಿ ಭೋರ್ಗರೆದು ಜಲಪಾತದಂತಾಗಿ ಬರಲು ಸಿಕ್ಕ ಅವರ ಹೆಗಲಿಗೆ ತಲೆಯಿಟ್ಟೆ ; ನನ್ನ ಅಪ್ಪನ ಹೆಗಲ ಮೇಲೆಯೇ ತಲೆಯಿಟ್ಟಂತಾಯ್ತು. ಅಂದಿನಿಂದ ಚಿಕ್ಕಪ್ಪನೇ ನನ್ನ ತಂದೆತಾಯಿಗೂ ಮೀರಿದ ಸರ್ವಸ್ವವಾಗಿ ನೋಡಿಕೊಂಡು ಬೆಳೆಸಿ ಓದಿಸಿ ದೊಡ್ಡವನನ್ನಾಗಿ ಮಾಡಿದ್ದಾರೆ, ಜೊತೆಗೆ ಮದುವೆಯನ್ನು. ಕೊನೆವರೆಗೂ ಮದುವೆಯಾಗದೆ ಉಳಿದಿದ್ದ ಅವರು ನನ್ನ ಮಗಳನ್ನೆತ್ತಿ ಎರಡು ವರ್ಷ ಆಡಿಸಿ ಕೊನೆಯುಸಿರೆಳೆದರು. ಅವಳನ್ನು ನೋಡಿದರೆ ಚಿಕ್ಕಪ್ಪನೇ ಕಣ್ಣ್ಮುಂದೆ ಬಂದಂಗಾಗುತ್ತದೆ.
ಬೆಳೆದು ದೊಡ್ಡವನಾದ ನಂತರ ನನ್ನ ನಾಲಗೆ ಮೇಲಿರುವ ಕಪ್ಪುಮಚ್ಚೆ ಕುರಿತು ಬಹಳಷ್ಟು ಸಲ ಯೋಚಿಸಿದ್ದೇನೆ - ಇದೇ ನಿನ್ನ ಭವಿಷ್ಯ, ನೀನೇನು ಹೇಳಿದರು ನಡೆಯುತ್ತೆ , ನಿಜವಾಗುತ್ತೆ ಅಂತ ಅಮ್ಮ ಅದೆಂದೋ ಹೇಳಿದ್ದರ ಬಗ್ಗೆ. ನೆನೆಸಿಕೊಂಡರೆ ಹೌದು ನಿಜವಿರಲೂಬಹುದು ಅನಿಸುತ್ತದೆ, ಮರುಕ್ಷಣವೆ ಇದೆಲ್ಲಾ ನಡೆಯುವಂಥದ್ದಾ ಎಂದೆನಿಸಿ ಸುಮ್ಮನಾಗುತ್ತೇನೆ. ಆದರೆ ನನ್ನ ಜೀವನದಲ್ಲಿ ನಡೆದಿರೋ ಇಲ್ಲಿಯತನಕದ ಎಲ್ಲಾ ವಿದ್ಯಮಾನಗಳಿಗು, ನಾನಿರುವ ಸಂದರ್ಭಕ್ಕೂ ತಾಳೆಹಾಕಿ ನೋಡಿದರೆ, ಅಮ್ಮ ಅಂದು ಹೇಳಿದ್ದು ಬಹುಶಃ ನಿಜವಿರಲೂಬಹುದೆಂದೂ ಹಲವಾರು ಬಾರಿ ಅನ್ನಿಸುವುದುಂಟು. ಇಲ್ಲದಿದ್ದರೆ  ನಾನು " ಅಮ್ಮಾ!" ಎಂದು ಎರಡೆರಡು ಬಾರಿ  ಕೂಗಿದ ಭಾವವು  ಅಪ್ಪ ಅಮ್ಮನ ತಲೆಕಡಿದಾಗ ನನಗಾದ ನೋವಿನಂತೆ, ಅಮ್ಮನೂ ಅಪ್ಪನ ತಲೆಕಡಿದಾಗ ಆದ ನೋವಿಗು ಭಾವವೊಂದೆಯೆಂತೆನಿಸುವಂತೆ ನನಗನ್ನಿಸಿದ್ದು ಸುಳ್ಳಾಗಬೇಕಿತ್ತಲ್ಲವೆ? ಆದರೆ ಹಾಗಾಗಿಲ್ಲ. ಕನಸಲ್ಲಿ ಅಮ್ಮಾ ಎಂದು ಕೂಗಿದಾಗ ಆಕೆಯ ತಲೆಕಡೆದ ಅಪ್ಪ ಸಾಯಲಿ ಅಂತ, ಹಾಗೆ ನಿಜದಲ್ಲಿ ಅಪ್ಪನ ತಲೆಕಡಿದ ಅಮ್ಮ ಸತ್ತೇಹೋಗಲಿ ಅಂತ ಅಂದು ಅನ್ನಿಸಿದ್ದರಲ್ಲಿ ಲವಲೇಷಮಾತ್ರವೂ ಬೇಧವಿಲ್ಲ. ಹೀಗೆ ನನ್ನ ಜೀವನ ಪ್ರಯಾಣದಲ್ಲಿ ಬೇಕ್ಕಾದಷ್ಟು ಸಲ ನನಗೆ ಈ ತರ ಅನುಭವಗಳಾಗಿವೆ. ಅದರಲ್ಲಿ ಇದು ಮುಖ್ಯವಾದುದು.

ಆದರೆ ಒಂದೊಂದು ಸಲ ನನಗೆ ನಾನೇ ವಾದಕ್ಕೆ ಗೊಂದಲಕ್ಕೆ ಬಿದ್ದು , ನಾನು ಹೇಳಿದ್ದರಿಂದ ಸೋಮ ಸತ್ತನೊ ಅಥವ ಕಳ್ಳರಿಟ್ಟ ಬೆಂಕಿಗೆ ಸತ್ತನೊ? ಹೇಳದಿದ್ದರೆ ಅವನು ಸಾಯುತ್ತಿರಲಿಲ್ಲವೆ? ನನ್ನ ನಾಲಗೆಯಲ್ಲಿರುವ ಕಪ್ಪುಮಚ್ಚೆಯಿಂದ ಸತ್ತನೆ? ನಾನು ಹೇಳಿದ್ದೆಲ್ಲ ಭವಿಷ್ಯ ನಡೆಯುವುದರಿಂದ ಸತ್ತನೆ? ಹಾಗಾದರೆ ಅಮ್ಮ ಹೇಳಿದ್ದು ನಿಜವೇ? ನಾಲಗೆಯಲ್ಲಿ ಕಪ್ಪುಮಚ್ಚೆಯಿದ್ದರೆ ನುಡಿದದ್ದೆಲ್ಲಾ ನಿಜವಾಗುತ್ತಾ? ಅಥವ ಅವನಿಗಿದ್ದ ದುಷ್ಟದುರುಳತನದಿಂದ ಸತ್ತನೊ? ಹೀಗೆ ಮುಂದುವರಿಯುವ ವಾದ ಗೊಂದಲುಗಳು ಇನ್ನಷ್ಟು ವ್ಯಾಪಿಸಿ, ಅಕಸ್ಮಾತ್ ಅಪ್ಪನು ಅಮ್ಮನು ಒಬ್ಬರೊಬ್ಬರ ತಲೆಕಡಿಯದೆ ಇದ್ದಿದ್ದರೆ, ಆ ಜಾಗದಲ್ಲಿ ಪಾತ್ರಧಾರಿಗಳು ಬೇರೆಯವರಾಗಿ ಅವರು ಹೀಗೆ ಮಾಡಿದ್ದಿದ್ದರೆ ನನ್ನ ಅಪ್ಪ ಅಮ್ಮ ಇಬ್ಬರೂ ಇಂದು ನನ್ನ ಜೊತೆಯಲ್ಲಿರುತ್ತಿದ್ದರು. ಆದದ್ದು ಬೇರೆಯವರಿಗೆ ತಾನೆ,  ಅಪ್ಪಾ ಅಂತಲೋ ಅಮ್ಮಾ ಅಂತಲೋ ಕೂಗಿಕೊಂಡು ತಪ್ಪು ಮಾಡಿದವರ ಮೇಲೆ ನೀವು ಸತ್ತೇಹೋಗಬೇಕೂಂತ  ಅವರಿಗೆ ಶಪಿಸುತ್ತಿದ್ದೆನಾ? ನನಗು ಅವರಿಗು ಏನು ಸಂಬಂಧ? ಅವರ್ಯಾರೂ ನನ್ನವರಲ್ಲವಲ್ಲ?  ಹಾಗೆ ಬೇರೆಯವರಾಗಿದ್ದರು ಅಥವಾ ನನ್ನ ಅಪ್ಪ ಅಮ್ಮನೇ ಆಗಿದ್ದರೂ ಅವರು ಹಾಗೆ ಮಾಡಲು ಕಾರಣವೇನಿದ್ದವೊ? ಸಮಯ ಸಂದರ್ಭಗಳೇಗೆ ಆಡಿಸಿದ್ದವೊ? ಯಾರ ಕೈಗೊಂಬೆಗಳಾಗಿ ಯಾರ್ಯಾರು ಯಾರನಾಡಿಸುತ್ತಿದ್ದರೊ? ಅಂತಲೂ ಅನ್ನಿಸಿ,  ಮತ್ತೆ ಮನಸು ಗೊಂದಲದ ಗೂಡಾಗಿ, ಯಾರೂ ಯಾರನ್ನಾದರು ಏಕೆ ಕೊಲ್ಲಬೇಕು? ಯಾವ ತಪ್ಪಿಗಾಗಿ ಈ ಶಿಕ್ಷೆ? ಎಂಥದ್ದೇ ತಪ್ಪಾಗಿರಲಿ ಕೊಲ್ಲುವುದಾದರು ಯಾತಕೆ? ಕೊಲ್ಲುವುದರಿಂದ ಅವರಿಗಾದ ಅನ್ಯಾಯವಾಗಲಿ, ಅಥವ ಕೊಲೆಯಾದವ ಮಾಡಿದ ತಪ್ಪಿಗಾಗಲಿ ಇವರು ಕೊಂದು ನ್ಯಾಯ ಒದಗಿಸಿದಂತಾಗುತ್ತದೆಯೆ? ಹಾಗಾದರೆ ಸೋಮನ ಸಾವಿಗಾಗಲಿ, ಅಪ್ಪನ ಸಾವಿಗಾಗಲಿ ನಾನು ಕಾರಣವೇ? ನನ್ನ ಮಾತಿಂದಾದಂಥವೇ? ಕೊನೆಗೆ ಅಮ್ಮ ಜೈಲುಪಾಲಾಗಲೂ ನನ್ನ ಮಾತೇ ಆಕೆಗೆ ಮುಳುವಾಯಿತೆ? ಎಂದೆಲ್ಲಾ ಉತ್ತರವಿಲ್ಲದ ನೂರಾರು ಪ್ರಶ್ನೆಗಳು, ಅಲೌಕಿಕ ಆಲೋಚನೆಗಳು ಲೌಕಿಕ ವಸ್ತುಸ್ಥಿತಿಯಾಗಿ ಬಹಳಷ್ಟು ಕಂಡು ಎಂದರೆ, ಬರಿ ಮಾತಿನಲ್ಲಿ ಮುಗಿಸಿಹೇಳಲಾರಲಾಗದಷ್ಟು ಆಳವಾಗಿ ನನ್ನಲ್ಲಿ ಬೇರೂರಿ ಮನೆಮಾಡಿವೆ. ಯಾರು ಕ್ಷಮಿಸಲಾಗದ ತಪ್ಪು ಯಾರು ಯಾರಿಗೇ ಮಾಡಿದ್ದರು, ಒಬ್ಬರು ಇನ್ನೊಬ್ಬರನ್ನು ಕೊಂದು ಪ್ರಾಣ ತೆಗೆದರೆ ಮನುಷ್ಯತ್ವಕ್ಕೆ ಬೆಲೆಯೆಲ್ಲಿ? ಮಾನವತೆಯ ಮಾತೆಲ್ಲಿ? ಪ್ರಾಣಕ್ಕಿರುವ ಬೆಲೆ ಯಕಶ್ಚಿತ್ ಯಾರ ಕೋಪಕ್ಕೊ, ಸೇಡಿಗೊ, ಜಿದ್ದಿಗೊ, ಹಗೆತನಕ್ಕೊ, ಮೋಸಕ್ಕೊ ಬಲಿಯಾಗುವುದಿದ್ದರೆ ಈ ಪ್ರಾಣವೆಂಬ ಪ್ರಾಣವಾದರು ಏಕೆ ಬೇಕು?  ನನ್ನ ಪ್ರಶ್ನಾ ಸರಣಿ ತುಂಡಾಗದ ಸರಪಳಿಯಂತೆ , ಅದು ಮುಗಿಯುವುದೇ ಇಲ್ಲ.
ಕೊನೆಗೆ ನನಗೆ ಅನ್ನಿಸಿದ್ದಿದು : ಇಲ್ಲಿ ಯಾರನ್ನು ಯಾರೂ ನಿಯಂತ್ರಿಸುವುದಾಗಲಿ, ಮೋಸ ಕೊಲೆಯಂಥ ಪಾತಕಗಳನ್ನೆಸಗುವುದಾಗಲಿ, ಅಷ್ಟೇಕೆ, ಬೆಳೆದು ನಿಂತ ಹುಲುಗಡ್ಡಿಯನ್ನಾದರು ಅಲುಗಾಡಿಸುವುದಾಗಲಿ ಕನಿಷ್ಟ ಕೂಡ ಸಾದ್ಯವಿಲ್ಲ ! ಅದರಪಾಡಿಗದು ಸೃಷ್ಟಿನಿಯಮವೇನಿದೆಯೋ ಅದರಂತೆ ನಡೆಯುತ್ತದೆ. ವಿಶ್ವಮಾನವ ಕವಿವಾಣಿ ನೆನಪಾಗಿ ಹೇಳಿದ್ದು ನಿಜವೆನಿಸುತ್ತದೆ : " ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ..."


----------------------------------------------------------------------------------------------------------------------------------------------------

ಇಲ್ಲಿಗೆ ನನ್ನ ಜೀವನದ ಕೊನೆಯ ಯಾನಕ್ಕೆ ಬಂದು ನಿಂತಿದ್ದೇನೆ. ನನಗೀಗ ಸರಿಯಾಗಿ ಮಾತಾಡಲು ಆಗದುದಕ್ಕೆ ಕಾರಣ ನನ್ನ ಗಂಟಲು. ಗಂಟಲು ಕ್ಯಾನ್ಸರ್ ನನ್ನ ಪೂರ್ಣ ಧನಿಯನ್ನು ನುಂಗಿಹಾಕಿದೆ. ಪಾಪ! ಅದು ಬಂತು ಅಷ್ಟೇ, ತಪ್ಪು ಅದರದೇನು ಇಲ್ಲ .  ಪ್ರಶ್ನೆಗಳು, ಸಂದಿಗ್ದತೆಗಳು ಕೇವಲ ನನ್ನ ಮನದಲ್ಲಷ್ಟೇ ಇರದೆ, ನನ್ನ ಹೆಂಡತಿ ಮಕ್ಕಳು, ಬಂಧುಬಳಗ, ನೆಂಟರಿಷ್ಟರು, ಸ್ನೇಹಿತರು, ಸಹೋದ್ಯೋಗಿಗಳು, ಬೀದಿಬದಿ ವ್ಯಾಪಾರಿ, ಭಿಕ್ಷುಕ, ಮುದುಕ, ಕೊನೆಗೆ ಅಪರಿಚಿತರೂ ಸೇರಿದಂತೆ ಎಲ್ಲರಿಗೂ ಅಖಂಡ ಜೀವನ ಪರ್ಯಂತ  ಮೇಲ್ಗಾಣಿಸಿದ ಪ್ರಶ್ನೆಗಳಿಗೆ ಉತ್ತರ  ಕೇಳಿ..ಕೇಳಿ..ಕೇಳೀ...ನನ್ನ ಗಂಟಲು ನನಗೆ ಕೈಕೊಟ್ಟಿತೆಂದು ನನ್ನ ಅನಿಸಿಕೆ. ಆದರೆ ನನ್ನ ಹೆಂಡತಿ ಮಗ ಬೇರೇನೋ ಕಾರಣ ಹೇಳುತ್ತಿದ್ದಾರೆ. ನನಗಂಟಿದ ಈ ಖಾಯಿಲೆಯಲ್ಲೂ ಈ ಉತ್ತರವಿಲ್ಲದ ಪ್ರಶ್ನೆಗಳು ಸಂದಿಗ್ದತೆಗಳು ನನ್ನ ಜೊತೆಯಾಗಿ ಬರಲು ರೆಡಿಯಾದಂತಿದೆ. ಬರಲಿಬಿಡಿ ನನ್ನ ಸಾವಿನ ಜೊತೆ ಬೇಕಾದರು ಅದನ್ನು ಕರೆದೊಯ್ಯಲು ನಾನು ಸಿದ್ದನಿದ್ದೀನಿ.
        
                                                             
                                                                    - ಮುಗಿಯಿತು -

ಮೋಹನ್ ಕುಮಾರ್ ಡಿ ಎನ್
ನಂ. 21/160, ಹೇಮಾವತಿಪೇಟೆ,
ದೊಡ್ಡಬಳ್ಳಾಪುರ - 561203,
ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕರ್ನಾಟಕ.
ಮೊಬೈಲ್ - 90359 62665
" ನ ಭೂತೋ ನ ಭವಿಷ್ಯತ್ ನ ವರ್ತಮಾನಾ.."

ಈ ಕೃತಿಯ ಹಿಂದೆ ಸರಿಸುಮಾರು ಇಪ್ಪತ್ತು ವರ್ಷಗಳ ಪರಿಶ್ರಮವಿದೆ. ಕೃತಿಗೆ ಒಂದು ಆಯಾಮ ಕೊಡಬೇಕೆಂದರೆ ಹಲವಾರು ಬಗೆಯ ಓಡಾಟ, ಸಂಶೋಧನೆ, ನಿರಂತರ ಓದು, ವಿಷಯದ ಬಗ್ಗೆ ಸ್ಥೂಲ ಅಧ್ಯಯನ, ಕಥೆಯನ್ನು ನಡೆಸುವ ದಿಕ್ಕು, ಪಾತ್ರಗಳು ತಮ್ಮನ್ನು ತಾವು ತೆರೆದುಕೊಳ್ಳುತ್ತಾ ಓದುಗರನ್ನು ತನ್ನೊಳಗೆ ಎಳೆದು ತರುವ ಹಾಗೆ ಬರೆಯುವಿಕೆ... ಹೀಗೆ ಹಲವಾರು ಅಂಶಗಳು ಕೂಡಿದರೆ ಒಂದೆರೆಡು ಆಯಾಮ ನೀಡುವಂತಹ ಕೃತಿ ರಚನೆ ಬರಹಗಾರನಿಗೆ ಸಾಧ್ಯವಾಗುತ್ತದೆ.

ಆದರೆ ಒಂದೇ ಕೃತಿಯಲ್ಲಿ ಐತಿಹಾಸಿಕ, ಚಾರಿತ್ರಿಕ ಮತ್ತು ಸಾಮಾಜಿಕ ಆಯಾಮವನ್ನು ತರುವುದು ಅಷ್ಟು ಸುಲಭ ಸಾಧ್ಯವಲ್ಲ. ಘಟನೆಗಳನ್ನು ಪೋಣಿಸುವಾಗ ಬಹಳ ಎಚ್ಚರದಿಂದ ಬರೆಯಬೇಕು. ಅದರಲ್ಲಿ ಅನುಸಾರವಿರಬೇಕು, ಒಂದಕ್ಕೊಂದು ಹೊಂದುವಂತಿರಬೇಕು, ಎಲ್ಲೂ ಘಟನೆಗಳ ಅದಲು ಬದಲಾವಣೆ ಇರಕೂಡದು, ಓದುಗರನ್ನು ಸೂಜಿಗಲ್ಲಿನಂತೆ ಹಿಡಿದು ಎಲ್ಲೂ ಬೇಸರವಾಗದಂತೆ ಬರೆಯಬಲ್ಲ ಚಾಕಚಕ್ಯತೆ ಇರಬೇಕು. ಆ ಅನುಭಾವಕ್ಕೆ ನಮ್ಮನ್ನು ಈಡು ಮಾಡುವುದು ಬರಹಗಾರನ ಒಟ್ಟೂ ಪರಿಶ್ರಮ, ವಿಷಯ ಪಾಂಡಿತ್ಯ, ಹೇಳಹೊರಟಿರುವ ವಿಷಯದಲ್ಲಿ ತಾನು ಸಾಧಿಸಿರುವ ಪ್ರಬುದ್ದತೆಯ ಮೇಲೆ ಅವಲಂಬಿಸಿರುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬರಹಗಾರನ ಕಲ್ಪನಾಶಕ್ತಿ ಮತ್ತದರ ವಿಸ್ತೀರ್ಣತೆ ವಿಶಾಲವಾಗಿರಬೇಕು. ಬಹುಶಃ ಇದಕ್ಕೇ ಹೇಳುತ್ತಾರೆ, ಜ್ಞಾನಕ್ಕಿಂತ ಕಲ್ಪನೆ ದೊಡ್ಡದು ಎಂದು. ನೀವು ಈ ಕಾದಂಬರಿಯನ್ನು ಪೂರ್ಣವಾಗಿ ಓದುವ ಮೊದಲೇ ಈ ವಿಷಯ ನಿಮ್ಮ ಗಮನಕ್ಕೆ ಬರುತ್ತದೆ, ಓದುತ್ತಾ ಓದುತ್ತಾ ಹೋದಂತೆ ಮೊದಲಿಗಿಂತ ಹೆಚ್ಚು ಕಲ್ಪನಾಲೋಕದ ವಿಲಾಸದಲ್ಲಿ ನಿಮ್ಮನ್ನು ತೂರಿ ಓದುವ ಹೊಸ ತೆರನಾದ ಅನುಭವ ನಿಮ್ಮಲ್ಲಿ ತೆರೆದುಕೊಂಡು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

ಹೀಗೆ ತನ್ನದೆನ್ನುವ ಎಲ್ಲವನ್ನೂ ಅಮೃತಧಾರೆ ಎರಕಹೊಯ್ದು ಸವಿ ಉಣಬಡಿಸಿರುವ ಮಹಾನ್ ಕಾದಂಬರಿಯೇ ಕುಂ. ವೀ. ಅವರ ಮಹದ್ಗ್ರುತಿ "ಅರಮನೆ".


ಇದನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೆ, ಅರ್ಥಮಾಡಿಕೊಂಡು ಅರಗಿಸುಕೊಳ್ಳುವುದಕ್ಕೆ ನಿಶ್ಚಲ ಶಾಂತಿ ಮತ್ತು ಅಪಾರ ತಾಳ್ಮೆ ಬೇಕು. ಏಕೆಂದರೆ ಎಲ್ಲ ಕಥೆ ಕಾದಂಬರಿಯಂತೆ ಇದು ನಮ್ಮನ್ನು ಓದಿಸಿಕೊಂಡು ಹೋಗುವುದಿಲ್ಲ. ಆತುರಕ್ಕೆ ಬಿದ್ದು ಓದಿದರೆ ಅರ್ಥವೇ ಆಗುವುದಿಲ್ಲ. ಒಂದೇ ಪಟ್ಟಿಗೆ ಹಿಡಿತಕ್ಕೆ ಸಿಗುವುದಿಲ್ಲ. ಕಬ್ಬಿಣದ ಕಡಲೆ ಎನಿಸಿದರೂ ಓದುವವನ ಶಾಂತಿ ತಾಳ್ಮೆಗಳು ಈ ಕಾದಂಬರಿಯನ್ನು ಓದುವ ಪರೀಕ್ಷೆಗೊಳಪಟ್ಟು ಅದರಲ್ಲಿ ಗೆದ್ದರೆ (ಕಡೇ ಪಕ್ಷ ಆರಂಭಿಕ ಪುಟಗಳಷ್ಟಾದರೂ) ಇದು ನಿಮ್ಮನ್ನು ಮುಂದೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಆರಂಭಿಕ ಹದವನ್ನಷ್ಟೇ ನಾವು ಸಾಧಿಸಬೇಕಿರುವುದು.


ಏಕೆಂದರೆ ಇದು..

ಒಂದೆರೆಡು ಪಾತ್ರವಲ್ಲ, ಒಂದೆರೆಡು ವ್ಯಕ್ತಿಗಳ ಜೀವನವಲ್ಲ, ಒಂದೆರೆಡು ಘಟನೆಯಲ್ಲ, ಒಂದೆರೆಡು ಹಿನ್ನೆಲೆಯಲ್ಲ, ಒಂದೆರೆಡು ಕಥೆಯಲ್ಲ, ಒಂದೆರೆಡು ಉಪಕಥೆಯಲ್ಲ, ಒಂದೆರೆಡು ಸನ್ನಿವೇಶವಲ್ಲ, ಒಂದೆರೆಡು ಜಾಗವಲ್ಲ, ಒಂದೆರೆಡು ಕಾಲಘಟ್ಟವಲ್ಲ, ಒಂದೆರೆಡು ನಂಬಿಕೆಯಲ್ಲ, ಒಂದೆರೆಡು ಕುರುಡು ನಂಬಿಕೆಯಲ್ಲ, ಒಂದೆರೆಡು ಆಚಾರ ವಿಚಾರವಲ್ಲ, ಒಂದೆರೆಡು ರೀತಿ ರಿವಾಜುವಲ್ಲ, ಒಂದೆರೆಡು ನಡೆನುಡಿಯಲ್ಲ, ಒಂದೆರೆಡು ಕಿರುಪರಿಚಯವಲ್ಲ, ಒಂದೆರೆಡು ಧೀರ್ಘ ಪರಿಚಯವಲ್ಲ, ಒಂದೆರೆಡು ವಿಷಯಗಳ ಪರಾಮರ್ಶೆಯಲ್ಲ, ಒಂದೆರೆಡು ನೋಟಗಳ ವಿಮರ್ಶೆಯಲ್ಲ, ಒಂದೆರೆಡು ಅವಾಸ್ತವಿಕತೆಯ ಸಂಘರ್ಷವಲ್ಲ, ಒಂದೆರೆಡು ವಾಸ್ತವಿಕದ ವಿಡಂಬನೆಯಲ್ಲ, ಒಂದೆರೆಡು ರಾಜಮನೆತಗಳ ಅಧಿಕಾರಿಶಾಹಿತ್ವವಲ್ಲ, ಒಂದೆರೆಡು ಪಾಳೇಪಟ್ಟುಗಾರರ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಕರುಣಜನಕ ಕಥೆಯಲ್ಲ, ಒಂದೆರೆಡು ಸಾಂಮಂತ ಮಾಂಡಲೀಕರ ಆಡಳಿತವಲ್ಲ, ಒಂದೆರೆಡು ಹೆಂಗಸರ ದೌರ್ಜನ್ಯದ ಆಲಾಪನೆಯಲ್ಲ, ಒಂದೆರೆಡು ಗಂಡಸರ ಕೆಲಸಕ್ಕೆ ಬಾರದ ಬರುವ ಹೆಳವನಕಟ್ಟೆ ಪುರಾಣವಲ್ಲ, ಒಂದೆರೆಡು ತಂದೆತಾಯಿಗಳ ಅಣ್ಣತಮ್ಮಅಕ್ಕರ ಸವಿ ಬಾಂಧವ್ಯವಲ್ಲ, ಒಂದೆರೆಡು ಸಂಬಂಧಿ, ಸ್ನೇಹಿತರ ನಯವಂಚಕತೆಯಲ್ಲ, ಒಂದೆರೆಡು ಜೋಡಿ ಪ್ರೇಮಿಗಳ ಗುಪ್ತ ಗುಪ್ತ ಸರಸವಲ್ಲ, ಒಂದೆರೆಡು ಜೊತೆ ಗಂಡಹೆಂಡಿರ ಮನೋದೈಹಿಕ ವಿಕಸನೆಯಲ್ಲ, ಒಂದೆರೆಡು ಕೋಮುಗಳ ಗಲಭೆಯಲ್ಲ, ಒಂದೆರೆಡು ವಿದ್ಯೆಯುಳ್ಳವರ ಅಪರೂಪದ ವಿವರಣೆಯಲ್ಲ, ಒಂದೆರೆಡು ವಿಫಲ ದಂಡಯಾತ್ರೆಗಳ ವಿವರಗಳಲ್ಲ, ಒಂದೆರೆಡು ಸಾಮ್ರಾಜ್ಯ ವಿಸ್ತರಣೆಯ ಹಪಹಪಿತನವಲ್ಲ, ಒಂದೆರೆಡು ವಸಾಹತು ಶಾಹಿಗಳ ಆರಂಭವಲ್ಲ, ಒಂದೆರೆಡು ಸಂಸ್ಕೃತಿಗಳ ಪುನರ್ಮಿನಲವಲ್ಲ, ಒಂದೆರೆಡು ಅಸಾಂಸ್ಕೃತಿಕ ನೆಲೆಗಳ ವೈಭವೀಕರಣವಲ್ಲ, ಒಂದೆರೆಡು ಹೊಸ-ಹಳೆಯದರ ನಡುವಿನ ವೈರತ್ವವಲ್ಲ, ಒಂದೆರೆಡು ಅಂತರಂಗ ಬಹಿರಂಗಗಳ ನಯ ನಾಜೂಕಲ್ಲ, ಒಂದೆರೆಡು ಅರಮನೆಗಳ ವರ್ಣನೆಯಲ್ಲ, ಒಂದೆರೆಡು ಅರಮನೆಗಳ ಹೀನ ಸ್ಥಿತಿಗೆ ಕಾರಣ ಒಂದೆರಡಲ್ಲ, ಒಂದೆರೆಡು ಅಧಿಕಾರ ಉಂಡು ಮೆರೆದವರ ದೈನೇಸಿ ಸ್ಥಿತಿಯಲ್ಲ, ಒಂದೆರೆಡು ಅದೇ ಅಧಿಕಾರಕ್ಕಾಗಿ ಆಳುವವರ ಕಂಬನಿಯಲ್ಲ, ಒಂದೆರೆಡು ಸಿಂಹಾಸನಕ್ಕಾಗಿ ತಲೆಗಳುರುಳಿಸಿದ ಕಟುಕರ ನಿರ್ದಯತೆಯಲ್ಲ, ಒಂದೆರೆಡು ಸಂಸ್ಥಾನಗಳ ಅರಾಜಕತೆಯಲ್ಲ, ಒಂದೆರೆಡು ಗ್ರಾಮಗಳ ಜನರ ಅಭದ್ರ ಜೀವನದ ಕನಸುಗಳಲ್ಲ, ಒಂದೆರೆಡು ಕನಸು ಕಂಡವರ ಅವಿರತ ಕಾರ್ಯಸಿದ್ದಿ ಯಶೋಗಾಥೆಯಲ್ಲ, ಒಂದೆರೆಡು ಜನಾನುರಾಗಿ ಕೆಲಸ ಮಾಡಿದ ನಿಷ್ಠಾವಂತರ ನರಳುವಿಕೆಯಲ್ಲ, ಒಂದೆರೆಡು ಬಾರಿ ಗಳ ಇರಿಯುವ ಮಂದಿಯ ಕ್ರೂರತ್ವವಲ್ಲ, ಒಂದೆರೆಡು ತಣ್ಣನೆಯ ಕ್ರೌರ್ಯದ ಪರಮಾವಧಿಯಲ್ಲ, ಒಂದೆರೆಡು ಸೇಡುಗಳ ಬೆನ್ನತ್ತುವಿಕೆಯಲ್ಲ, ಒಂದೆರೆಡು ಔದಾರ್ಯದ ಉದಾಹರಣೆಯ ವಿವರಣೆಯಲ್ಲ, ಒಂದೆರೆಡು ಕಟುತ್ವದ ಕರುಳು ಹಿಂಡುವಿಕೆಯಲ್ಲ, ಒಂದೆರೆಡು ದೇಶಭಕ್ತಿಯ ಸೂಫಿ ಗಾಯನವಲ್ಲ,
ಒಂದೆರೆಡು ಜನಮನ್ನಣೆಯ ತಾರಕ ಸಂಗೀತವಲ್ಲ, ಒಂದೆರೆಡು ಅಧಿಕಾರಶಾಹಿಗಳ ಬಿಸಿರಕ್ತ ಕುಡಿಯುವಿಕೆಯ ವಿಕೃತವಲ್ಲ, ಒಂದೆರೆಡು ಅಧಿಕಾರಗಳ ನಿಷ್ಠ ಸೇವೆ ಉಂಡ ನಾಡ ಸುಕೃತವಲ್ಲ, ಒಂದೆರೆಡು ಅಧಿಕಾರತ್ವದ ಹಪಹಪಿ ಗರಿಷ್ಠ ಮಟ್ಟ ತಲುಪಿದರ ಸಂಕೇತವಲ್ಲ, ಒಂದೆರೆಡು ಕಿರಾತಕರ ಒಡಲೊಳಗಿನ ನಿರ್ಭಾಗ್ಯ ನಿಟ್ಟುಸಿರಲ್ಲ, ಒಂದೆರೆಡು ಯುದ್ಧದಾಹಿ ಪಡೆಯ ಅಗೋಚರ ಆಗುಂತುಕತನವಲ್ಲ, ಒಂದೆರೆಡು ರಕ್ತಪಿಪಾಸುಗಳ ಭಯಂಕರ ರಣೋತ್ಸಾಹವಲ್ಲ, ಒಂದೆರೆಡು ಶಾಂತಾವಧೂತರ ರಣರಹಿತ ಸಮಾಜ ನಿರ್ಮಾಣದ ಏಗುವಿಕೆಯಲ್ಲ, ಒಂದೆರೆಡು ಕಲುಷಿತ ಮನಸುಗಳ ಒಡೆದು ಆಳುವ ಹಾಳು ಮಾಡುವ ಕುತಂತ್ರವಲ್ಲ, ಒಂದೆರೆಡು ಅಮಾಯಕ ಜನರ ಮೇಲಾಗುವ ಆಕ್ರಮಣವಲ್ಲ, ಒಂದೆರೆಡು ಮುಗ್ದ ಮನಸ್ಸುಗಳ ಮೇಲಾಗುವ ಅತ್ಯಾಚಾರವಲ್ಲ, ಒಂದೆರೆಡು ಸವಿಗನಸುಗಳ ಕಗ್ಗೊಲೆಯಲ್ಲ, ಒಂದೆರೆಡು ಮನಸ್ಸುಗಳ ಪರಸ್ಪರ ವಿರೋಧಾಭಾಸವಲ್ಲ, ಒಂದೆರೆಡು ಕನಸ್ಸುಗಳ ಬೆಸೆಯುವಿಕೆಯಲ್ಲ, ಒಂದೆರೆಡು ಊರುಗಳ ನಿಟ್ಟುಸಿರಲ್ಲ, ಒಂದೆರೆಡು ಭಟ್ಟಂಗಿಗಳ ದೊಂಬರಾಟವಲ್ಲ, ಒಂದೆರೆಡು ಬುಡಕಟ್ಟುಗಳ ಕಳೆಗುಂದಿದ ಕಲಾಹೀನತೆಯಲ್ಲ, ಒಂದೆರೆಡು ಜಾನಪದ ಗೀಗೀಪದ ಡೋಲು ಕಂಸಾಳೆ ಕುಣಿತಗಾರರ ಜೀವನೋತ್ಸಾಹವಲ್ಲ, ಒಂದೆರೆಡು ತಲೆಮಾರಿನ ಕಾಗಕ್ಕ ಗುಬ್ಬಕ್ಕಗಳ ವ್ಯಸನತೆ ವ್ಯಾಕುಲತೆಯಲ್ಲ, ಒಂದೆರೆಡು ಯುವಜನಾಂಗದ ಸಾವಿರ ಕನಸ್ಸುಗಳ ಸುಂದರ ಹೂಮಾಲೆಯಲ್ಲ, ಒಂದೆರೆಡು ಸೌಂದರ್ಯೋಪಾಸನೆಯ ಹಲವು ನಮೂನೆಗಳಲ್ಲ, ಒಂದೆರೆಡು ಭಗ್ನ ಪ್ರೇಮಿಗಳ ಒಡೆದ ಹೃದಯದ ಆರ್ತನಾದವಲ್ಲ, ಒಂದೆರೆಡು ಪುರಾಣಗಳ ಬಂಡಾರವಲ್ಲ, ಒಂದೆರೆಡು ಕಲಾವಿದರ ಸಂಗಮವಲ್ಲ, ಒಂದೆರೆಡು ಶಾಸ್ತ್ರಾರಚನೆಗಳ ಸಮ್ಮಿಲನವಲ್ಲ, ಒಂದೆರೆಡು ಕೋಮುಗಳ ತಾರ್ಕಿಕ ಅಂತ್ಯವಲ್ಲ, ಒಂದೆರೆಡು ಕ್ರೌರ್ಯ ಹುಟ್ಟುವ ಸಾಯುವ ಸಾಯಿಸುವ ಅಮೂರ್ತ ಘಳಿಗೆಗಳಲ್ಲ, ಒಂದೆರೆಡು ಗುಂಪುಗಳ ಅಸಹಾಯಕತೆಯಲ್ಲ, ಒಂದೆರೆಡು ಮನೆತನಗಳ ಕಟ್ಟೆಪುರಾಣವಲ್ಲ, ಒಂದೆರೆಡು ಜಾತಿ ಮತಗಳ ಕಲಸೊಮೇಗರವಲ್ಲ, ಒಂದೆರೆಡು ಅಂತಸ್ತಿನ ಪ್ರತಿಷ್ಠತೆಯಲ್ಲ, ಒಂದೆರೆಡು ಸಾಮಾನ್ಯ ಸಂಗತಿಗಳಲ್ಲ, ಒಂದೆರೆಡು ಅಸಾಮಾನ್ಯ ಸಂಗತಿಗಳಲ್ಲ, ಒಂದೆರೆಡು ಹಿನ್ನೆಲೆಯಲ್ಲ, ಒಂದೆರೆಡು ಮುನ್ನೆಲೆಯಲ್ಲ, ಒಂದೆರೆಡು ವಿದ್ಯಾಮಾನಗಳಲ್ಲ, ಒಂದೆರೆಡು ಸವಿಸ್ತಾರವಲ್ಲ, ಒಂದೆರೆಡು ಸಂಕುಚಿತವಲ್ಲ, ಒಂದೆರೆಡು ಜನಜೀವನವಲ್ಲ, ಒಂದೆರೆಡು ಲೌಕಿಕವಲ್ಲ, ಒಂದೆರೆಡು ಅಲೌಕಿಕವಲ್ಲ, ಒಂದೆರೆಡು ನಿಟುಕದಿರುವ ಭೂತಮಾನವಲ್ಲ, ಒಂದೆರೆಡು ಕೈಗೂಡದಿರುವ ವರ್ತಮಾನದ ವರ್ತನೆಯಲ್ಲ, ಒಂದೆರೆಡು ಭವಿಷ್ಯತ್ ದೈವೀಕತೆಯಲ್ಲ.... ನ ಭೂತೋ ನ ಭವಿಷ್ಯತ್ ನ ವರ್ತಮಾನಾ..

"ಅರಮನೆ" ಈ ಮೇಲ್ಗಾಣಿಸಿದ ಎಲ್ಲದರ ಅನೂಹ್ಯ ಸಂಮ್ಮಿಶ್ರಣ. ಈ ಕಾದಂಬರಿಯ ಕಥಾವಸ್ತು ನಡೆಯುವುದು ಸ್ವಾತಂತ್ರ್ಯಪೂರ್ವದಲ್ಲಿ. ಸುಮಾರು 567 ಪುಟಗಳಷ್ಟಿರುವ ಬೃಹತ್ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕುಂ ವೀ ಅವರ ಹೊಸ ಭಾಷಾ ಪಾಂಡಿತ್ಯಕ್ಕೆ ಮನಸೋಲುವಿರಿ. ನಮ್ಮ ಹಿಂದಿನ ಜನಾಂಗದ ಸಮಗ್ರ ದರ್ಶನದ ಜೊತೆ, ಸ್ವಾತಂತ್ರ್ಯ ಪೂರ್ವೇತಿಹಾಸ, ವಸಾಹತುಶಾಹಿ, ಅಪರೂಪ ಮತ್ತು ಅನುಕರಿಸಲಾಧ್ಯವಾದ ಅವರ ಜೀವನ ಶೈಲಿ, ಮಾನವನ ಮೂಲಭೂತ ನಡಾವಳಿಗಳ ಸ್ಥೂಲ ಪರಿಚಯವಾಗುವುದರ ಜೊತೆ ಜ್ಞಾನಕ್ಕಿಂತ ಕಲ್ಪನೆ ದೊಡ್ಡದು ಎನ್ನುವುದರ ಸಾರ್ವಕಾಲಿಕ ಸತ್ಯದರ್ಶನವಾಗುತ್ತದೆ. ಇದರ ಕೂಲಂಕುಷ ಕಥೆ, ಕಥಾ ವಸ್ತು ಹೇಳುವುದು ಯಾರ ಕೈಯ್ಯಿಂದಲೂ ಸಾಧ್ಯವಿಲ್ಲ. ಮತ್ತೊಮ್ಮೆ ಕೂತರೂ ಸ್ವತಃ ಕುಂ ವೀ ಅವರಿಂದಲೂ! ಹಾಗಿದೆ ಕಾದಂಬರಿ. ಇದನ್ನು ಓದುವವರೆಗೂ ನಾನು ನಾನಾಗಿರಲಿಲ್ಲ ಅಂತಷ್ಟೇ ಹೇಳಬಯಸುತ್ತೇನೆ. ಅದರೊಳಗಿನ ನಶೆ ನನ್ನನ್ನು ಎಂದು ಬಿಡುತ್ತದೋ ಕಾಣೆ. ವಿವರಿಸಲಾಗದ ವಿಪ್ಲವದಲ್ಲಿ ನನ್ನ ಮನಸ್ಸು ಸಮಾಧಿಯಾಗಿದೆ.

ಕುಂ. ವಿ. ನನ್ನೊಳಗೆ ಆವರಿಸಿದ್ದಾಗಿದೆ.

ಎರಡು ಸಾಲು ಹೆಚ್ಚಿಗೆ ಬರೆದೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ



https://www.facebook.com/groups/nanobbapustakapremi/permalink/1519301061470679/

Tuesday, August 29, 2017

"ತೆಂಕನಿಡಿಯೂರಿನ ಕುಳುವಾರಿಗಳು" 



ಒಂದೂರಿನ ಒಂದಿಷ್ಟು ಜನರ ಕುರಿತು..


ಅತ್ಯಂತ ಸಮಗ್ರ ದೃಷ್ಟಿ ಚಿತ್ತಕೋನ ಇರುವರು ಮಾತ್ರ ತನ್ನ ಸುತ್ತಮುತ್ತಲ ಪರಿಸರದ ಬಗ್ಗೆ ಆದ್ಯಂತವಾಗಿ ಬರೆಯಲು ಸಾಧ್ಯವಾದೀತು, ಇಲ್ಲದೆ ಹೋದರೆ ಓದುವವರಿಗದು ಅಪಥ್ಯವಾಗುವುದು ಮಾತ್ರವಲ್ಲದೇ ಲೇಖಕನ ದೃಷ್ಟಿಕೋನದ ಬಗ್ಗೆ ಅನುಮಾನ ಮತ್ತು ಅಪಸ್ವರ ಬರುವುದು ನಿಸ್ಸಂಶಯ. ಏನು ಮತ್ತು ಎಷ್ಟು ಅಂತ ನಮ್ಮ ಸುತ್ತಮುತ್ತಲ ಪರಿಸರ, ಅದರ ಚಿತ್ರಣ, ಜನರ ಜೀವನ, ಅವರ ದಿನಚರಿ ಬಗ್ಗೆ ಬರೆಯಲು ಸಾಧ್ಯ ಹೇಳಿ? ಇದು ನಾವು ತಿಳಿದಂತೆ ಅಷ್ಟು ಸುಲಭ ಸಾಧ್ಯವಲ್ಲ. ಈಗಾಗಲೇ ಈ ವಿಷಯ...ವನ್ನು ಕನ್ನಡದ ಹೆಚ್ಚು ಕಡಿಮೆ ಎಲ್ಲಾ ಸಾಹಿತಿಯೂ, ಲೇಖಕರು ಆದಷ್ಟು ತಮ್ಮ ಕೃತಿಗಳಲ್ಲಿ ಬರೆದದ್ದಾಗಿದೆ. ಒಂದು ಕಥೆಯೋ, ಕಾದಂಬರಿಯೋ, ನೀಳ್ಗವಿತೆಯೋ ಅಥವಾ ಹಲವು ಪ್ರಾಕಾರದ ಸಾಹಿತ್ಯ ರೂಪಕಗಳಲ್ಲಿ ಬರೆಯುವುದು ಕೇವಲ ತನ್ನ ಶಕ್ತಿಸಾಮರ್ಥ್ಯದಿಂದ ಮತ್ತು ದ್ಯೋತಕಶಕ್ತಿಯಾದ ತನ್ನ ಆಲೋಚನಾಲಹರಿಯಿಂದ ಮಾತ್ರ ಸಾಧ್ಯ. ಮತ್ತು ಈ ಪ್ರಾಕಾರಗಳಲ್ಲಿ ಲೇಖಕನ ಆಲೋಚನೆಗಳಿಗನುಗುಣವಾಗಿ ಕಥೆಯ ಹಂದರ ಮತ್ತು ಪಾತ್ರಗಳ ಏರಿಳಿತವಾಗುತ್ತದೆ. ಆದರೆ ತನ್ನ ಸುತ್ತಮುತ್ತಣ ಜೀವಂತ ವ್ಯಕ್ತಿಚಿತ್ರಣ, ಅಲ್ಲಿ ನಡೆಯುವ ನೈಜ್ಯ ಘಟನೆ ಕುರಿತು ಬರೆಯುವುದು ಎಂದರೆ ಎಂಥಹವರಿಗೂ ಹದಿನಾರಿಂಚಿನ ಗುಂಡಿಗೆ ಬೇಕಾಗುತ್ತದೆ! ಈ ರೀತಿ ಇದ್ದದ್ದನ್ನು ಇದ್ದ ಹಾಗೆ ಹೇಳಿ, ತನ್ನ ಅನುಭವಕ್ಕೆ ಬಂದ ವ್ಯಕ್ತಿಗಳನ್ನು, ಅವರ ವ್ಯಕ್ತಿತ್ವವನ್ನು ಅಕ್ಷರರೂಪಕ್ಕಿಳಿಸಿದ ಕೀರ್ತಿ ನಮಗೆ ತಿಳಿದಂತೆ ಕುವೆಂಪು, ಕಾರಂತ, ಲಂಕೇಶ್, ತೇಜಸ್ವಿಯಂತ ಕೆಲವೇ ಕೆಲವು ನಿಷ್ಠುರವಾದಿಗಳಿಗಿತ್ತಾದರೂ ಆ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಲೇಖಕರೆಂದರೆ ವ್ಯಾಸರಾವ್ ನಿಂಜೂರ್! 

ಯಾವುದೇ ಪೂರ್ವಾಗ್ರಹಪೀಡಿತನಾಗದೆ, ಮುಲಾಜಿಗೆ ಬೀಳದೆ ತಾನು ಹುಟ್ಟಿ ಬೆಳೆದ ಊರಾದ ತೆಂಕನಿಡಿಯೂರಿನ ಜನರ ಜೀವಂತ ಚಿತ್ರಣವನ್ನು ನಿರ್ಭಿಡೆಯಿಂದ ಚಿತ್ರಿಸಿಕೊಡುವುದಲ್ಲದೇ, ಹಲವು ವಿಶೇಷ ವ್ಯಕ್ತಿಗಳ ನೈಜ್ಯ ಪರಿಚಯ ಮತ್ತವರ ಸಂಪೂರ್ಣ ವ್ಯಕ್ತಿತ್ವವನ್ನು ಎಳೆಎಳೆಯಾಗಿ ತೆರೆದಿಡುತ್ತಾ ಹೋಗುತ್ತಾರೆ. ಓದುತ್ತಾಹೋದಂತೆ ಓದುಗನಿಗೆ ಎಲ್ಲೂ ಕೃತ್ರಿಮವಾಗಲೀ, ಸ್ವಜನಪಕ್ಷಪಾತವಾಗಲಿ, ಭಿಡೆಗೆ ಬಿದ್ದಂತೆ ಅನಿಸದೆ ಪಾತ್ರಗಳನ್ನು ಸಮತೋಲಿಸಿ ಸಂಭಾಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ವಾಸ್ತವ ಚಿತ್ರಣ ಕಟ್ಟಿಕೊಡುವ ಕಾದಂಬರಿಯೋ ಅಥವಾ ಕಾಲ್ಪನಿಕವೋ ಎಂದು ಓದುಗರು ಗೊಂದಲಕ್ಕೆ ಬಿದ್ದರೆ ಅದು ಓದುಗರ ಚ್ಯುತಿಯಾದೀತೆ ಹೊರತು ನಿಂಜೂರರ ಸಹಜ ಬರವಣಿಗೆಯ ಕುರಿತ ಆಕ್ಷೇಪವಾಗುವುದಿಲ್ಲ, ಅಷ್ಟು ಸೊಗಸಾಗಿ ನಿರೂಪಿಸಿದ್ದಾರೆ ಕಥಾನಕವನ್ನು. ನನಗೆ ತಿಳಿದಮಟ್ಟಿಗೆ, ಜೀವಂತ ವ್ಯಕ್ತಿ ಬಂದು ತನ್ನ ಪಾತ್ರವನ್ನು ನಿಮ್ಮ ಕಥೆಯಲ್ಲಿ ಕಟ್ಟಿಕೊಡುವಿರಾ? ಎಂದು ಒಬ್ಬ ಲೇಖಕನನ್ನು ಕೇಳಿ ಆತನಿಂದ ತನ್ನ ಬಗ್ಗೆ ಬರೆಸಿಕೊಂಡ ಏಕೈಕ ಕೃತಿ ಎಂದರೆ ಇದೇ ಇರಬೇಕು ಎನಿಸುತ್ತದೆ!

ಇಡೀ ಕಾದಂಬರಿಯ ಇನ್ನೊಂದು ಮಹತ್ವ ಅಂಶವೆಂದರೆ ಇದನ್ನು ತನ್ನ ಆಡು ಭಾಷೆಯಲ್ಲೇ ಬರೆದಿರುವುದು. ನಾವು ನೀವು ಅಷ್ಟಾಗಿ ಕೇಳಿರದ ಕರಾವಳಿ ಜನರ ಹಲವು ಹೊಸ ಪದಗಳು ಹದವಾಗಿ ಬೆಸೆದುಕೊಂಡು ಇಡೀ ಕಾದಂಬರಿಗೆ ಅವರ್ಣನೀಯ ಸೌಂದರ್ಯ ಕಲ್ಪಿಸಿಕೊಟ್ಟಿದೆ. ಓದುವಾಗ ಹೊಸಚೈತನ್ಯವಿತ್ತು, ಪದಗಳ ಪರಿಮಳ ಓದುಗನನ್ನು ಆವರಿಸದಿದ್ದರೆ ನೋಡಿ! ಮೂಲಭೂತವಾಗಿ ಬಯಲುಸೀಮೆಯ ಜನ ನಾವಾದ್ದರಿಂದ ಕರಾವಳಿಯ ಗ್ರಾಮ್ಯ ಸೊಗಡಿನ ಭಾಷೆ ನಮಗೆ ಸದಾ ಕೇಳಿ ಸಂಭ್ರಮಿಸುವಂತದ್ದೇ ಆಗಿರುತ್ತದೆ. ಎಲ್ಲಾ ಭಾಷೆಗೂ, ಅದರ ನುಡಿಗೂ (ಮಾತಾಡುವ ಅರ್ಥದಲ್ಲಿ) ಅದರದ್ದೇ ಆದ ಚಂದವಿರುತ್ತದೆ, ಲಯಬದ್ಧತೆಯಿರುತ್ತದೆ. ಆದರೆ ಮಲೆನಾಡು ಮತ್ತು ಕರಾವಳಿ ಜನರ ಭಾಷೆ ನಮಗೆ ಸದಾ ಕೌತುಕಾಸಕ್ತಿ ಬೆರೆತ ಬೆರಗು ಮೂಡಿಸುವುದು ಅತಿಶಯೋಕ್ತಿಯೇನಲ್ಲ. 

ಕಥೆಗೆ ಗಟ್ಟಿತನ ಬರುವುದು ತಾನು ಹುಟ್ಟಿಬೆಳೆದ ಊರಿನ ವಾಸ್ತವ ಚಿತ್ರಣಕ್ಕೆ ನಿಂಜೂರರು ದೂರದ ಮುಂಬೈನ ಚಿತ್ರಣವನ್ನು ತಂದಿರುವುದಲ್ಲದೆ ಅದರ ವಾಸ್ತವಿಕ ಚಿತ್ರಣ ಕಟ್ಟಿಕೊಟ್ಟಿರುವುದೇ ಆಗಿದೆ. ಒಂದು ಕಡೆ ತನ್ನೂರಿನ ಚಿತ್ರಣವನ್ನೀಯುತ್ತಾ ಸಾವಿರ ಕನಸ್ಸು ಕಟ್ಟಿಕೊಂಡು ಮುಂಬೈಗೆ ಹಾರುವ ಅಸಂಖ್ಯಾತ ಯುವಕರ ಜೀವನವನ್ನು ಅವರು ಅನುಭವಿಸುವ ಕಷ್ಟಕಾರ್ಪಣ್ಯವನ್ನು ತಲ್ಲಣ ತವಕ ತುಮುಲ ಅಭದ್ರತೆಯನ್ನು ಜೊತೆಜೊತೆಗೇ ಕಟ್ಟಿಕೊಡುವ ನಿಂಜೂರರ ನೈಪುಣ್ಯತೆಗೆ ಬೆಕ್ಕಸ ಬೆರಗಾಗಲೇ ಬೇಕು. ಕಥೆಯ ಓಘಕ್ಕೆ ಎರಡೂ ಚಿತ್ರಣವನ್ನು ಸಮಗ್ರವಾಗಿ ಸಮರ್ಪಕವಾಗಿ ನೇಯ್ದಿದ್ದಾರೆ. ಇದು ನಿಂಜೂರರು ಬಹುಕಾಲ ಮುಂಬೈನಲ್ಲಿ ಕೆಲಸ ಮಾಡಿದುದರ ಪರಿಣಾಮ. ಇತ್ತಕಡೆ ಕರುನಾಡಿಗೆ ಅತ್ತಕಡೆ ಮುಂಬೈ ಕನ್ನಡಿಗರಿಗೆ ಕೊಂಡಿಯಾಗಿ ಕೆಲಸ ಮಾಡಿದವರಲ್ಲಿ ಮತ್ತು ತನ್ನ ಬಹಳಷ್ಟು ಸಾಹಿತ್ಯಕೃಷಿಯಲ್ಲಿ ಮುಂಬೈ ಸಹ್ಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದವರಲ್ಲಿ ಇವರ ಪಾತ್ರ ದೊಡ್ಡದು. 

ಕುಳುವಾರಿಗಳನ್ನು ನಿಂಜೂರರು ನಿರ್ವಹಿಸಿರುವ ಬಗೆ ಅನನ್ಯವಾದುದು. ಹಾಂ! ಅಂದ ಹಾಗೆ ಕುಳುವಾರಿಗಳು ಎಂದರೆ ನಮ್ಮ ಕಡೆ "ಆಸಾಮಿಗಳು" ಎನ್ನುತ್ತೀವಲ್ಲ? ಆ ಅರ್ಥ ಬರುತ್ತದೆ. ಒಮ್ಮೆ ಓದಿ ನೋಡಿ.
ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 


https://www.facebook.com/photo.php?fbid=1434572199964294&set=gm.1504056852995100&type=3&theater


"ಮಲೆನಾಡಿನ ರೋಚಕ ಕಥೆಗಳು"
"ಅರಮನೆ ಗುಡ್ಡದ ಕರಾಳ ರಾತ್ರಿಗಳು" 
"ಪಶ್ಚಿಮ ಘಟ್ಟದ ತಪ್ಪಲಿನಲ್ಲಿ"
"ಜೇನು ಕಲ್ಲಿನ ರಹಸ್ಯ ಕಣಿವೆ"


ಹತ್ತು ಹಲವಾರು ಪ್ರಶ್ನೆಗಳು, ಉತ್ತರ : ನಾಲ್ಕೇ ಪುಸ್ತಕ! 


1) ಮಲೆನಾಡು ಎಂದರೆ ಏನು? ಮತ್ತು ಅಲ್ಲಿನ ಜೀವನ ಹೇಗಿರುತ್ತದೆ? ಮಲೆನಾಡಿನ ಜೀವನವೆಂದರೆ ನಾವಂದುಕೊಂಡಷ್ಟು ಸುಲಭವಲ್ಲ. ಅಲ್ಲಿ ಪ್ರತಿಕ್ಷಣ, ಪ್ರತಿದಿನವೂ ಒಂದೊಂದು ತರಹ ಹೋರಾಟವೇ ಸರಿ. ಪ್ರತಿ ಬಾರಿಯೂ ವಿಭಿನ್ನವಾದ ಅನುಭವ ಕೊಡುವ ಮಲೆನಾಡಿಗರಿಗೆ ಅದು ದಿನ ನಿತ್ಯದ ಜಂಜಾಟ. ಅಲ್ಲಿ ಬೇರೆ ದಾರಿಯೇ ಇಲ್ಲ, ಬಂದದ್ದನ್ನು ಬಂದ ಹಾಗೆ ಸ್ವೀಕರಿಸಲೇಬೇಕು. ಅಲ್ಲಿನ ಜನ ವ್ಯವಸಾಯ ಮಾಡುವ ಪರಿ ಹೇಗೆ? ಪ್ರಕೃತಿಮಾತೆ ಮುನಿಸಿಕೊಂಡರೆ ಹಸುರಾಗಬೇಕ...ಿದ್ದ ಬಾಳು ಹೇಗೆ ಅಲ್ಲೋಲಕಲ್ಲೋಲವಾಗುತ್ತದೆ? ಕೃಷಿಯನ್ನು ನಂಬಿದ ರೈತರು ಕೊನೆಗೆ ಅದನ್ನು ಬಿಟ್ಟು ನಗರಗಳ ನಾಗಾಲೋಟದಲ್ಲಿ ಏಕೆ ಬಿದ್ದಿರುವರು, ಅದರಲ್ಲೂ ಮಲೆನಾಡಿಗರು? ಅಲ್ಲಿನ ಜನ ಮಳೆಗಾಲವನ್ನು ಸ್ವೀಕರಿಸುವ ರೀತಿ ಹೇಗಿರುತ್ತದೆ? ಅದಕ್ಕಾಗಿ ಅವರು ಮಾಡಿಕೊಳ್ಳುವ ಸಿದ್ಧತೆಗಳೇನು? ನಾವು ಮಳೆಯನ್ನು ನೋಡುವ ರೀತಿ ಮತ್ತು ಮಲೆನಾಡಿಗರು ಮಳೆಯನ್ನು ನೋಡುವ ಬಗೆ ಹೇಗೆ? ಇದೆಲ್ಲವನ್ನು ಮೀರಿ, ಮಾನವ ಸಂಬಂಧಗಳು ಇಲ್ಲಿರುವ ನಮಗಿಂತಲೂ ಅಲ್ಲಿ ವಿಭಿನ್ನವಾದುದೋ ಹೇಗೆ? ಅಥವಾ ನಮ್ಮೆಲ್ಲರಂತೆ ಅವರದೂ ಸಾಮಾನ್ಯವಾದ ಮಾನವ ಸಂಬಂಧಗಳೇನಾ? ಮಲೆನಾಡಿನ ಆ ವರ್ಣಿಸಲಸದಳ ಪ್ರಕೃತಿಯು ಹೇಗೆ ವರ್ಷಒಂಬತ್ತು ಕಾಲ ತನ್ನೊಳಗಡಗಿರುವ ಗುಟ್ಟನ್ನು ಬಿಟ್ಟುಕೊಡದೆ ಮಲೆನಾಡಿಗರನ್ನು ಆಡಿಸುವ ಪರಿ, ಇದರಿಂದ ಅಲ್ಲಿನವರು ಅನುಭವಿಸಬೇಕಾದ ಕಷ್ಟನಷ್ಟಗಳೇನು? ಸುಖಸಂತೋಷಗಳೇನು? ಪ್ರಕೃತಿಯ ಅವಿಭಾಜ್ಯ ಅಂಗವಾದ ಕಾಡು ಪ್ರಾಣಿಗಳು ಇವರಿಗೆ ವರವೋ ಶಾಪವೋ? ವರ್ಷದ ಹನ್ನೆರೆಡು ತಿಂಗಳು ಅಲ್ಲಿನ ಜನರ ದಿನಚರಿ ಹೇಗಿರುತ್ತದೆ? ಎನ್ನುವ ಇಂತಹ ಹತ್ತುಹಲವು ಪ್ರಶ್ನೆಗಳಿಗೆ ಉತ್ತರ ಸಿಗುವುದು "ಮಲೆನಾಡಿನ ರೋಚಕ ಕಥೆಗಳು" ಕೃತಿಯಲ್ಲಿ. 

2) ಮಳೆಗಾಲದಲ್ಲಿ ಮಲೆನಾಡ ಚಾರಣ ಹೇಗಿರುತ್ತದೆ? ನಾವು ಪ್ರಯಾಣಿಸು ವೇಳೆಯಲ್ಲಿ ವಾಹನದಿಂದ ಹಾಗೇ ಇಣುಕಿ ನೋಡುವಾಗ ನಮ್ಮ ಕಣ್ಣಿಗೆ ಬೀಳುವ ಕಾಡಿಗೂ ಅದರಾಚೆಯಿರುವ ಕಾಡಿಗೂ ಏನಾದರೂ ಸಂಭಂಧ ಅಥವಾ ಬದಲಾವಣೆಯಿದೆಯೇ? ಅಪರೂಪಕ್ಕೊಮ್ಮೆ ಪ್ರವಾಸಕ್ಕಾಗಿಯೋ, ಚಾರಣಕ್ಕಾಗಿಯೋ, ದಿನನಿತ್ಯದ ರಗಳೆಯಿಂದ, ಆಫೀಸಿನ ಕಿರಿಕಿರಿಯಿಂದ, ಟ್ರಾಫಿಕ್ಕಿನ ಘೋರ ಅನುಭವದಿಂದ ತಪ್ಪಿಸಿಕೊಂಡು, ಪ್ರಶಾಂತವಾದ, ಸದಾ ಹಸುರೆಲೆಯಿಂದ ತುಂಬಿ, ನೀರ್ಜರಿಯಿಂದ ಕಂಗೊಳಿಸುವ, ಬೆಟ್ಟಗುಡ್ಡಗಳಿಂದ ಕಣ್ಮನ ತಣಿಸುವ, ನಾವು ನೋಡಿರದ ಪ್ರಾಣಿಪಕ್ಷಿಗಳಿಂದ ಭಯಪಡಿಸುವ, ಹೆಜ್ಜೆಹೆಜ್ಜೆಗೂ ಕೌತುಕವನ್ನು ತನ್ನ ಮಡಿಲಲ್ಲಿ ಅಡಗಿಸಿಕೊಂಡಿರುವ ನಿತ್ಯನೂತನೆ ಮಲೆನಾಡಿಗೆ ಹೊರಡುವ ನಮಗೆ ಮಲೆನಾಡು ಪ್ರಕೃತಿ ನೀಡಿದ ಅನನ್ಯ ಕೊಡುಗೆಯೇ ಸರಿ. ಈ ಅಪರಿಮಿತ ಸೌಂದರ್ಯವನ್ನು ಸವಿಯಲು ಮಲೆನಾಡಿಗೆ ಹೋಗುವ ನಾವು ವಹಿಸಬೇಕಾದ ಎಚ್ಚರಿಕೆಗಳೇನು? ಕಾಡಲ್ಲಿ ದಾರಿತಪ್ಪಬಾರದು. ಅಕಸ್ಮಾತ್ ತಪ್ಪಿದರೆ ಅಲ್ಲಿಂದ ಹೊರಬರುವುದು ಹೇಗೆ? ಅಲ್ಲೇ ಸಿಗುವ ಆಹಾರವಾದರೂ ಏನು? ಎನ್ನುವ ಹಲವು ಕೌತುಕ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ಹಲವು ಕಾಲ್ಪನಿಕ ಪಾತ್ರಗಳೊಂದಿಗೆ "ಅರಮನೆಗುಡ್ಡ" ಚಾರಣಕ್ಕೆ ಹೊರಡುವ ಹೊಸದಾಗಿ ಮದುವೆ ಆದ ಎರಡು ನವಜೋಡಿಗಳು ಕಾಡಲ್ಲಿ ದಾರಿತಪ್ಪಿ ಪಡುವ ಪಾಡುಗಳೇನು? ಅಲ್ಲಿ ಅವರು ಎದುರಿಸುವ ಸಂಕಷ್ಟ ಹೇಗಿರುತ್ತದೆ? ತಾನು ಎಣಿಸಿದ್ದಕ್ಕಿಂತ ಪ್ರಕೃತಿ ಹೇಗೆ ತನ್ನ ಇನ್ನೊಂದು ಕ್ರೂರಮುಖ ತೋರಿಸುತ್ತದೆ? ಅಲ್ಲಿಂದ ಅವರು ಜೀವಂತ ಬದುಕಿ ಹೊರಬರಲು ಸಾಧ್ಯವಾಯಿತೇ? ಅಥವಾ ಆ ನಾಲ್ಕರಲ್ಲಿ ಯಾರಾದರೂ ಸತ್ತರೇ? ಇನ್ನುಳಿದವರ ಕಥೆಯೇನು? ಮೊಬೈಲು ಕೈಕೊಟ್ಟಾಗ ಏನಾಗುತ್ತದೆ? ಸೀಳುನಾಯಿಗಳು ಆಕ್ರಮಣ ಮಾಡಿದಾಗ ಯಾರು ಸಾಯುತ್ತಾರೆ? ಹೀಗೆ ಕಥೆಯನ್ನು ಅತ್ಯಂತ ರೋಚಕತೆಯೊಂದಿಗೆ ಪ್ರತಿಕ್ಷಣದ ಕುತೂಹಲದೊಂದಿಗೆ ಓದಿಸಿಕೊಂಡು ಹೋಗುವ ಪುಸ್ತಕ  "ಅರಮನೆ ಗುಡ್ಡದ ಕರಾಳ ರಾತ್ರಿಗಳು" ಪುಸ್ತಕದಲ್ಲಿ ಉತ್ತರ ದೊರೆಯುತ್ತದೆ.

3) ಮಲೆನಾಡಿನ ದಟ್ಟ ಅರಣ್ಯ ಪ್ರದೇಶದ ಒಳಗೆ ಅಥವಾ ಪಶ್ಚಿಮಘಟ್ಟದ ನಟ್ಟನಡುವೆ ವಿದ್ಯುತ್ ಉತ್ಪತ್ತಿಗಾಗಿ ಅಣೆಕಟ್ಟು ಕಟ್ಟಿದರೆ, ಅಲ್ಲಿ ಸುತ್ತಮುತ್ತ ಹಲವಾರು ತಲೆಮಾರಿನಿಂದ ವಾಸ ಮಾಡುತ್ತಿರುವ ಜನರ ಗತಿಯೇನು? ಒಂದು ಅಣೆಕಟ್ಟಿನಿಂದ ಜನರ ದಿನನಿತ್ಯದ ಸಂಗತಿ ಮೊದಲುಗೊಂಡು ಇಡೀ ಅವರ ಜೀವನದ ಮೇಲೆ ಅದು ಹೇಗೆ ಪರಿಣಾಮ ಬೀರಬಹುದು? ಅಲ್ಲಿನ ಅವಿದ್ಯಾವಂತ ಯುವಸಮೂಹ ಹೇಗೆ ದಾರಿ ತಪ್ಪುತ್ತದೆ? ಅಣೆಕಟ್ಟು ಕಟ್ಟುವ ನೆಪದಲ್ಲಿ ಅಲ್ಲಿನ ಮುಗ್ದ ಜನರಿಗೆ ತಿಳಿಯದೆಯೇ ತಲೆತಲಾಂತರದಿಂದಲೂ ತಾಯಿಯಂತೆ ಕಾಯುತ್ತಾ ಬಂದಿರುವ ಅರಣ್ಯ ಸಂಪತ್ತನ್ನು ಹೇಗೆಲ್ಲಾ ಕೊಳ್ಳೆಹೊಡೆಯುತ್ತಾರೆ? ಹುಟ್ಟಿದಾಗಿನಿಂದ ಸ್ವಂತ ಅಣ್ಣತಮ್ಮಂದಿರಂತೆ ಬಾಳುವೆ ನಡೆಸುತ್ತಾ ಬಂದಿರುವ ಅಲ್ಲಿನ ಜನ ಒಂದು ಅಣೆಕಟ್ಟಿನಿಂದ ಹೇಗೆಲ್ಲಾ ತಮ್ಮತಮ್ಮಲ್ಲೇ ಬಡಿದಾಡಿಕೊಂಡು ಒಬ್ಬರಮೇಲೊಬ್ಬರು ಶತ್ರುತ್ವ ಸಾಧಿಸುತ್ತಾರೆ? ಹಳ್ಳಿಯ ಅಮಾಯಕ ಜನರನ್ನು ಮುಗ್ದರನ್ನಾಗಿಸಿ ಅವರಿಗೆ ಆಮಿಷತೋರಿಸಿ ಹೇಗೆ ಸರಕಾರ, ಅಣೆಕಟ್ಟು ಕಟ್ಟಲು ಬಂದ ಪರವೂರಿನ ಜನ ಅವರಿಗೆ ಮೋಸ ಜೊತೆಗೆ ತಾರತಮ್ಯ ಮಾಡುತ್ತಾರೆ? ಇದೆಲ್ಲದರ ಜೊತೆ ಪ್ರಕೃತಿಯ ಜೊತೆ ನಮ್ಮ ಸಂಬಂಧ ಹೇಗಿರಬೇಕು? ಪ್ರಕೃತಿಮಾತೆ ಮುನಿದರೆ ಏನಾಗುತ್ತದೆ? ಎನ್ನುವ ಹತ್ತು ಹಲವು ಪ್ರಶ್ನೆಗಳಿಗೆ ಕಾಲ್ಪನಿಕ ಕಥೆಯೊಂದರ ಹದವನ್ನಿಟ್ಟುಕೊಂಡು ಸೊಗಸಾಗಿ ಎಲ್ಲೂ ಬೋರಾಗದಂತೆ ವಾಸ್ತವದಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಮತ್ತು ದಟ್ಟ ಪಶ್ಚಿಮಘಟ್ಟದ ಮೇಲೆ ನಮಗಿರಬೇಕಾದ ಕಾಳಜಿಯ ಸುತ್ತ ಹೇಳುವ ಕಾದಂಬರಿಯೇ "ಪಶ್ಚಿಮ ಘಟ್ಟದ ತಪ್ಪಲಿನಲ್ಲಿ".

4) ಮಲೆನಾಡಿನ ಸಂಪದ್ಭರಿತ ಮತ್ತು ಅಪರಿಮಿತ ಸಂಪತ್ತನ್ನು ಹೊರಪ್ರಪಂಚದಲ್ಲಿರುವ ನಮಗೆ ತಿಳಿಯದಂತೆ ಹೇಗೆಲ್ಲಾ ದೋಚಬಹುದು? ಅಲ್ಲಿ ಪುಂಡರು ಹೇಗೆ ಅರಣ್ಯವನ್ನು ಕೊಳ್ಳೆಹೊಡೆಯುತ್ತಿದ್ದಾರೆ? ಅದರಿಂದ ಮನುಷ್ಯಕುಲದ ಮೇಲೆ ಆಗುತ್ತಿರುವ ಭೀಕರ ಪರಿಣಾಮಗಳೇನು? ರಕ್ಷಕರೇ ಭಕ್ಷಕರಾದಾಗ ಮುಂದಿರುವ ದಾರಿ ಯಾವುದು? ತಪ್ಪೇ ಮಾಡದ ಸಾಮಾನ್ಯರು ಪುಂಡರ ಸಂಚಿಗೆ ಸಿಲುಕಿದಾಗ ಹೊರಬರಲು ದಾರಿ ಯಾವುದು? ತಾನು ಮಾಡಿದ ತಪ್ಪು ಕೊನೆಗೆ ತನಗೇ ಹೇಗೆ ಉರುಳಾದೀತು? ಎನ್ನುವುದರ ಜೊತೆಗೆ ಅಂದಿನಿಂದ ಇಂದಿನ ತನಕ ತನ್ನ ಕಬಂಧಬಾಹು ಚಾಚಿ ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತಿರುವ ಗಾಂಜಾ ಎನ್ನುವ ಮಾದಕ ವ್ಯಸನ ಹೇಗೆ ಇಡೀ ಸಮುದಾಯವನ್ನು, ದೇಶದ ಮುಂದಿನ ಭವಿಷ್ಯ ರೂಪಿಸುವ ಯುವಪೀಳಿಗೆಯನ್ನು ತಪ್ಪುದಾರಿಗೆಳೆಯುತ್ತಿದೆ? ಅದರಿಂದ ದೇಶದ ಮೇಲಾಗುತ್ತಿರುವ ಪರಿಣಾಮವೇನು? ಆ ದುಶ್ಚಟಕ್ಕೊಳಗಾದ ಆ ಮಕ್ಕಳ ಹೆತ್ತವರು ಪಡುವ ಯಾತನೆಗಳೇನು? ಅದರಿಂದ ಹರಡುತ್ತಿರುವ ಗುಣಪಡಿಸಲಾಗದ ಭೀಕರ ಮತ್ತೊಂದು ವ್ಯಾಧಿ ಏಡ್ಸ್ ಮಹಾಮಾರಿ ಹೇಗೆ ಹರಡುತ್ತಿದೆ? ಎನ್ನುವ ಸಾಮಾಜಿಕ ಕಳಕಳಿಯೊಂದಿಗೆ ಬಹು ಕುತೂಹಲಕಾರಿ ವಿಷಯವಾದ ಜೇನುಹುಳಗಳ ಬಗ್ಗೆ ಅಪರೂಪದ ವಿಷಯಗಳನ್ನು ತಿಳಿಸುತ್ತಾ, ಜೇನುಹುಳುಗಳ ಜೇನು ಸಂಗ್ರಹಣೆಯ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಬಂದಿರಲು ಅದಕ್ಕೆ ಕಾರಣ ಹುಡುಕುತ್ತಾ ಬರುವ ದೇಶದ ಪ್ರಖ್ಯಾತ ವಿಜ್ಞಾನಿ ಮತ್ತವನ ಸಂಗಡಿಗರು ಈ ವಿಷಯದ ಬಗ್ಗೆ ಮಲೆನಾಡಿನ ದಟ್ಟಾರಣ್ಯದಲ್ಲಿ ನೆಲೆಸಿರುವ ಅತ್ಯಂತ ಪ್ರಖ್ಯಾತಿ ಮತ್ತು ಕುಖ್ಯಾತಿ ಪಡೆದ "ಜೇನುಕಲ್ಲು ಗುಡ್ಡ"ದಲ್ಲಿ ಮಾಡಹೊರಡುವ ಸಂಶೋಧನೆ, ಜೇನುಹುಳುಗಳ ಬಗ್ಗೆ ವಿಜ್ಞಾನಿ ಹೇಳಿರುವ ಅತಿ ಕುತೂಹಲಕಾರಿ ಮಾಹಿತಿಗಳು, ಇದೆಲ್ಲದರ ಜೊತೆ ಅಷ್ಟು ಪರಿಚಯವಲ್ಲದ ಆದರೆ ಜನಸಾಮಾನ್ಯರಿಗೆ ತಿಳಿಯದ "ಟೈಗಾನ್" ಮತ್ತು "ಲೈಗಾನ್" ಎನ್ನುವ ತಳಿ ಪ್ರಾಣಿಯ ಬಗ್ಗೆ ಹೇಳಿರುವುದನ್ನು ಓದಿದಾಗ ಬೆಕ್ಕಸಬೆರಗಾಗುವುದು ಖಂಡಿತ. ಮೊಬೈಲ್ ತರಂಗಗಳಿಂದ ಅವುಗಳ ಸಂತತಿ ನಾಶ ಮತ್ತು ಜೇನಿನ ಸಂಗ್ರಹಣಾ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವ ವಿಜ್ಞಾನಿಯ ಗುಮಾನಿ, ಸಂಶೋಧನೆ ಮಾಡುತ್ತಿರುವಾಗ ಅಕಸ್ಮಾತ್ತಾಗಿ ಕಂಡ ಗಾಂಜಾ ಬೆಳೆ ಹೇಗೆ ಇಡೀ ಕಥೆಗೆ ತಿರುವು ತಂದು ವಿಜ್ಞಾನಿ ಅತ್ಯಂತ ರೋಚಕವಾಗಿ ಕೊಲೆಯಾಗಿ ಅದು ತನ್ನ ಶಿಷ್ಯೆಯೊಬ್ಬಳ ಮೇಲೆ ಬಂದು ಆಕೆ ಹೇಗೆ ಅದನ್ನು ಮೆಟ್ಟಿನಿಲ್ಲುತ್ತಾಳೋ ಅಥವಾ ಮಾಡದ ತಪ್ಪಿಗೆ ಶಿಕ್ಷೆಯಾಗುವುದೋ ಎನ್ನುವ ಕುತೂಹಲಕಾರಿ ವಿಷಯಗಳೊಂದಿಗೆ ಸಮಾಜಕ್ಕೆ ಬೇಕಾದ ಮಾರ್ಗದರ್ಶನ ಕೊಡುವ ಇನ್ನೊಂದು ಕೃತಿಯೇ "ಜೇನು ಕಲ್ಲಿನ ರಹಸ್ಯ ಕಣಿವೆ".

ಈ ಮೇಲಿನ ನಾಲ್ಕೂ ಕಾದಂಬರಿ ಬರೆದವರು ಗಿರಿಮನೆ ಶ್ಯಾಮರಾವ್. ಅವರು ಮಲೆನಾಡು ಸಕಲೇಶಪುರದಲ್ಲಿ ಹುಟ್ಟಿಬೆಳೆದು ಅಲ್ಲಿನ ರೀತಿರಿವಾಜುಗಳನ್ನು ಚೆನ್ನಾಗಿ ಅರಿತವರಾದ್ದರಿಂದ ಇಂತಹ ಅಮೂಲ್ಯ ಕೃತಿಯನ್ನು ಬರೆಯಲು ಸಾಧ್ಯವಾಗಿದೆ. ಮಲೆನಾಡಿನ ಬಗ್ಗೆ ಅಪರಿಮಿತ ಪ್ರೀತಿ ಮತ್ತು ಭಕ್ತಿಯಿದ್ದವರು ನಿಸ್ಸಂಶಯವಾಗಿ ಎಷ್ಟು ಬಾರಿ ಬೇಕಾದರೂ ಓದಬಹುದಾದ ಅಮೂಲ್ಯ ಸರಕುಗಳಿವು. ಈ ನಾಲ್ಕೂ ಕಾದಂಬರಿಗಳ ವಿಶೇಷತೆ ಎಂದರೆ ಎಲ್ಲೂ ಅನವಶ್ಯಕವಾಗಿ ಆತುರಕ್ಕೆ ಬಿದ್ದು ಹೇಳಬಾರದ್ದನ್ನು ಹೇಳಿಲ್ಲ,ಹೇಳುವುದನ್ನು ಅಚ್ಚುಕಟ್ಟಾಗಿ ಹೇಳುತ್ತಾ ಯಾವುದೇ ಉದ್ವೇಗವಿಲ್ಲದೆ ನಡೆಸುವ ಪಾತ್ರಗಳು ಮತ್ತು ಸನ್ನಿವೇಶಗಳು ಲೇಖಕರ ಚಾತುರ್ಯತೆಗೆ ಹಿಡಿದ ಕನ್ನಡಿ. ಇದನ್ನು ಓದುವಾಗ ಎಲ್ಲೋ ಒಂದು ಕಡೆ ಕಾಡು ಮತ್ತದರ ಬಗ್ಗೆ ಅನೂಹ್ಯವಾಗಿ ಬರೆದ ಇನ್ನೊಬ್ಬ ದೈತ್ಯ ತೇಜಸ್ವಿ ನೆನಪಾಗುತ್ತಾರಾದರೂ ಲೇಖಕರು ತನ್ನತನವನ್ನು ಬಿಟ್ಟುಕೊಡದೇ ಇರುವುದು ಎದ್ದು ಕಾಣುತ್ತದೆ.
ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 


https://www.facebook.com/photo.php?fbid=1432449896843191&set=gm.1501897836544335&type=3&theater

 "ಯೇಗ್ದಾಗೆಲ್ಲಾ ಐತೆ"



ನೀವು ಏನನ್ನು ನಂಬುವಿರಿ? ಕಣ್ಣಿಗೆ ಕಾಣುವುದನ್ನು ನಂಬುವಿರೋ ಅಥವಾ ಕಾಣದ್ದನ್ನು ನಂಬುವಿರೋ? ಅಥವಾ ಇದ್ಯಾವುದೂ ಅಲ್ಲದೇ ಎರಡನ್ನೂ ನಂಬುವಿರೋ? ಭೌತಿಕವಾಗಿ ಕಾಣುವುದನ್ನು ಪ್ರತ್ಯಕ್ಷ ಪ್ರಮಾಣಿಸಿ ನೋಡಿ ನಂಬುವುದು ಒಂದಾದರೆ, ತಮ್ಮ ಪಾರಮಾರ್ಥಿಕ ಅನುಭವಗಳ ಮೂಲಕ ನಮಗಾದ ವಿಸ್ಮಯವನ್ನು ನಂಬುವುದು ಇನ್ನೊಂದು. ಇಲ್ಲಿ ಪ್ರಾತ್ಯಕ್ಷಿಕೆಗಿಂತ ನಮ್ಮ ನಿಲುಕಿಗೆ ಎಟುಕದ ಅವರ್ಣನೀಯ ಅನುಭೂತಿಯೊಂದು ಮುಖ್ಯವಾಗಿರುತ್ತದೆ.


ನಮ್ಮ ನಿಲುವಿಗೆ ನಿಟುಕದ ಸಂಗತಿಗಳ ಕುರಿತು ತಮಗಾದ ಅನುಭವಗಳನ್ನು ಕುರಿತು ವಿವರಿಸ...ುವ ಪುಸ್ತಕದ ಬಗ್ಗೆಯೇ ನಾನೀಗ ಹೇಳಹೊರಟಿರುವುದು. ಇಲ್ಲಿ ನಡೆದ ಯಾವುದೇ ಸಂಗತಿಗಳಿಗೆ ಪುರಾವೆಯಾಗಲೀ ಪ್ರತ್ಯಕ್ಷ ಪ್ರಮಾಣಿಸುವ ಸಾಕ್ಷಿಗಳಾಗಲಿ ದೊರೆಯುವುದಿಲ್ಲ. ಇಲ್ಲಿ ಏನಿದ್ದರೂ ವ್ಯಕ್ತಿಗತ ಅನುಭವಗಳು ಮತ್ತು ನಂಬಿಕೆ ಮಾತ್ರವೇ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನ ನಂಬಿಕೆಯಿರುವರು ಹೌದೆಂದು ನಂಬಬಹುದು ಇಲ್ಲವೇ ಸಾಕ್ಷಿಬೇಕೆನ್ನುವರು ಇದೆಲ್ಲ ಕಟ್ಟುಕಥೆ ಎಂದು ನಂಬದೇ ಇರಬಹುದು. ಎಲ್ಲವೂ ಅವರವರ ತರ್ಕಕ್ಕೆ ಬಿಟ್ಟ ವಿಚಾರ. 

ವಿಜ್ಞಾನ ಎಷ್ಟೇ ಮುಂದುವರಿದರೂ, ತಂತ್ರಜ್ಞಾನ ಎಷ್ಟೇ ಮೇಲ್ಮಟ್ಟಕ್ಕೆ ಪ್ರಗತಿಯಾಗಿದ್ದರೂ ನಮ್ಮ ನಿಲುಕಿಗೆ ಎಟುಕದ ಹಲವು ಸಂಗತಿಗಳಿರುವುದು ಸತ್ಯ ತಾನೇ? ಆ ಎಟುಕದ ಹಲವು ಸಂಗತಿಗಳೇ ಈ ಅತೀತ ಅಥವಾ ಪ್ರಾತ್ಯಕ್ಷಿಕೆ ಒದಗಿಸಲಾಗದ ಸಂಗತಿಗಳೇಕಾಗಿರಬಾರದು? ಹೀಗೊಂದು ಸಾಲನ್ನು ಪುಸ್ತಕದ ಆರಂಭದಲ್ಲೇ ಹೇಳಿದ್ದಾರೆ. 

ಇದು ಶಾಸ್ತ್ರಿಗಳಿಗೆ, ಆ ಪರಿಸರದಲ್ಲಿದ್ದವರಿಗೆ ಮತ್ತು ಅವರ ಸಮಕಾಲೀನರುಗಳಿಗೆ ಆದ ಅನುಭವಗಳ ಕುರಿತಾದದ್ದು. ಮತ್ತು ಅದೆಲ್ಲ ಪವಾಡ ಮಾಡಿದ್ದು ಆ ಸ್ವಾಮಿಗಳು. ಈಗಿನ ಮುಂದುವರಿದ ಕಾಲಮಾನಕ್ಕೆ ಒಗ್ಗಿಕೊಳ್ಳಲಾರದ, ಅರಗಿಸಿಕೊಳ್ಳಲಾಗದ ಹಲವು ಮಹತ್ವ ಘಟಿಸಿದ ಸಂಗತಿಗಳಿವೆ ಇದರಲ್ಲಿ. ಸ್ವಾಮಿಗಳು ಯಾರು, ಎಲ್ಲಿಯವರು, ಎಲ್ಲಿಂದ ಬಂದರು, ವಯಸ್ಸೆಷ್ಟು, ಹಿನ್ನೆಲೆ ಏನು..ಇವೆಲ್ಲಾ ಇಲ್ಲಿ ನಗಣ್ಯ. ಅವರ ಪ್ರತೀ ನಡೆಯಲ್ಲಿ, ನುಡಿಯಲ್ಲಿ, ಸುಮ್ಮನೇ ಹಾಗೇ ಮಾಡಿದ ಪ್ರತಿಯೊಂದು ಕೆಲಸದಲ್ಲಿ ಪಾರಮಾರ್ಥಿಕ ಸತ್ಯದರ್ಶನ ಇದ್ದವೆಂಬುದಷ್ಟೇ ಸತ್ಯ. 

ಅದಕ್ಕೇ ಮೊದಲೇ ಕೇಳಿದ್ದು ನೀವು ಏನನ್ನು ನಂಬುವಿರಿ ಎಂದು. ಪ್ರತಿಯೊಂದನ್ನು ವೈಜ್ಞಾನಿಕವಾಗಿ ನೋಡುವ ದೃಷ್ಟಿಯುಳ್ಳವರಾಗಿದ್ದರೆ, ಕ್ಷಮಿಸಿ, ಇದು ನಿಮಗೆ ಅಷ್ಟಾಗಿ ಸಂಬಂಧಪಡದು. ಧಾರ್ಮಿಕ ಭಾವನೆಯುಳ್ಳವರಾಗಿದ್ದು ಅಂತಃದರ್ಶನದಲ್ಲೂ ಸತ್ಯವಿದೆ ಎಂದು ನಂಬುವಿರಾದರೆ, ಯೆಸ್, ಈ ಪುಸ್ತಕ ನಿಮ್ಮನ್ನು ಬಿಟ್ಟೂಬಿಡದೆ ಓದಿಸಿಕೊಂಡು ಹೋಗುತ್ತದೆ. ಹಾಗಾದರೆ ಆ ಪುಸ್ತಕದ ಹೆಸರೇನೆಂದು ಕೇಳಿದಿರಾ? ನಮ್ಮನ್ನು ವರ್ಣಿಸಲಾಗದ ಅನುಭವಗಳ ಲೋಕಕ್ಕೆ ಕರೆದೊಯ್ದು ಹಲವು ಚಕಿತಗೊಳಿಸುವ ವಿಸ್ಮಯಗಳ ಮೂಲಕ ತಮ್ಮ ಪ್ರಭಾವವನ್ನು ಬೀರಿ ಇದ್ದೂ ಇಲ್ಲದಂತೆ ಮಾಡಿದರೂ ಮಾಡದಂತೆ ಕಂಡರೂ ಕಾಣದಂತೆ ಸಿಕ್ಕರೂ ಸಿಗದಂತೆ ಜೋಗಿ ಜಂಗಮನಾದ ವ್ಯಕ್ತಿ ಎಂದರೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ತಮ್ಮ ಆಧ್ಯಾತ್ಮ ಗುರುಗಳು ಮುಕುಂದೂರು ಸ್ವಾಮಿಗಳ ಕುರಿತು ಬರೆದಿರುವ "ಯೇಗ್ದಾಗೆಲ್ಲಾ ಐತೆ" . ಇವತ್ತು ಮುಗಿಸಿದೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 


https://www.facebook.com/photo.php?fbid=1421089497979231&set=gm.1491035537630565&type=3&theater





"ನಮ್ಮ ಊರಿನ ರಸಿಕರು"


ಒಂದು ಹಳ್ಳಿ. ಅದರಲ್ಲಿ ನಡೆಯುವ ದಿನನಿತ್ಯದ ಸಾಮಾನ್ಯ ಘಟನೆಗಳು. ಅದನ್ನು ಕೇಳಿದಾಗ, "ಹೌದಲ್ಲಾ? ಇದು ನಮ್ಮಲ್ಲೂ ಹೀಗೆ ನಡೆದಿತ್ತು" ಎನ್ನಿಸುವುದುಂಟು. ಘಟನೆಗಳು ಸಾವಿರಾರು ಇರಬಹುದು, ಆದರೆ ಅದನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾದೀತೆ ಹೊರತು ಅದರ ಮೂಲ ಭಾವವಲ್ಲ. ಆ ಮೂಲ ಭಾವ ಕೆಡಿಸಿಕೊಳ್ಳದೆ ತನ್ನ ಮೌಲ್ಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಪ್ರಭಂಧ ಸಂಕಲನವೆಂದರೆ ಶ್ರೀಯುತ ಗೊರೂರು ರಾಮಸ್ವಾಮಿ ಆಯ್ಯಂಗಾರರ "ನಮ್ಮ ಊರಿನ ರಸಿಕರು".


ಇದನ್ನು ನೀವು ಪ್ರಬಂಧವೆನ್ನುವಿರೋ, ಲಲಿತಕಲಾ ಸಾಹಿ...ತ್ಯವೆನ್ನುವಿರೋ, ಕಥೆಯೆನ್ನುವಿರೋ, ಕಾದಂಬರಿಯೆನ್ನುವಿರೋ ಅಥವಾ ಅದೆಲ್ಲದರ ಸವಿಸಮ್ಮಿಶ್ರಣ ಎನ್ನುವಿರೋ ಅದು ನಿಮ್ಮ ಭಾವಸ್ವಾಮ್ಯಕ್ಕೆ ಬಿಟ್ಟ ವಿಚಾರ. ಓದಿದ ನಂತರ ಇದನ್ನು ಯಾವ ಮೂಲಕ್ಕೆ ಸೇರಿಸಬಹುದು ಎಂದು ಯೋಚಿಸುವುದು ನಿರರ್ಥಕ ಎನಿಸಿದೆ ನನಗೆ. ಯಾಕೆಂದರೆ ಈ ಮೊದಲೇ ಹೇಳಿದಂತೆ ಎಲ್ಲಾ ಭಾವವನ್ನು ಆಮೂಲಾಗ್ರವಾಗಿ ತನ್ನಲ್ಲಿ ಉಳಿಸಿಕೊಂಡು ಬಂದ ಯಾವುದೇ ಕೃತಿಯಾದರೂ ಓದುಗನಿಗೆ ಆ ಕ್ಷಣದ ಆತನ ಭಾವನೆಗೆ ಎಟುಕುವ ಮಾದರಿಯಾಗಿರುವಾಗ, ಆತನ ಆ ಸಂಧರ್ಭಕ್ಕೆ ತಕ್ಕಂತೆ ಅದು ಅವನೆದುರು ನರ್ತಿಸುವಾಗ ಯಾವ ಗುಂಪಿಗೆ ಹೇಗೆ ತಾನೇ ವಿಂಗಡಿಸಲು ಸಾಧ್ಯ ಹೇಳಿ? ಇದು ನನ್ನ ಅಭಿಮತ.

ನಾನು ಪದವಿಯಲ್ಲಿದ್ದಾಗ ರಸಿಕರು ನಮಗೆ ಪಠ್ಯವಾಗಿತ್ತು. ಆಗಿನ ಬುದ್ಧಿಮತ್ತೆಗೆ ತಕ್ಕಂತೆ ಅರ್ಥವೂ ಆಗಿತ್ತು. ಇಡೀ ಪುಸ್ತಕವನ್ನು ನಾನು ಒಂದು ವರ್ಷದಲ್ಲಿ ಓದಿ ಅರ್ಥಮಾಡಿಕೊಂಡಿದ್ದಕ್ಕಿಂತ, ಈಗ ಎರಡು ದಿನದಲ್ಲಿ ಓದಿ ಅನುಭವಿಸಿದ ಅನನ್ಯತೆ ಹೆಚ್ಚು. ಮಾತಿಗೆ ನಿಲುಕದ ಭಾವನೆ ಜೊತೆಗೆ ಹಿಂದಿನ ದಿನಗಳ ಆಹ್ಲಾದಕರ ನೆನಪುಗಳನ್ನೂ ಒಟ್ಟೊಟ್ಟಿಗೆ ತಂದ ರಸಿಕರ ಕರ್ತೃ ರಾಮಸ್ವಾಮಿಯವರಿಗೆ ಆಭಾರಿ.. ಆಭಾರಿ.. ಆಭಾರಿ.. 

ಅಂದಹಾಗೆ ರಸಿಕರನ್ನು ಒದದವರು ಖಂಡಿತ ಓದಿ. ಯಾರಿಗೆ ಗೊತ್ತು ಯಾವ ಸುನೀತಭಾವ ನಿಮ್ಮೆದೆಗೆ ಬಂದು ತಾಕುವುದೋ ಬಲ್ಲವರ್ಯಾರು? ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 

https://www.facebook.com/photo.php?fbid=1417953534959494&set=gm.1488138787920240&type=3&theater

"ನಾಕು ತಂತಿ"


ಉಫ್! ಒಂದು ದೀರ್ಘ ನಿಟ್ಟುಸಿರು. ಎದೆಯಹತ್ತಿ ತಕಧೀಮ್ ಕುಣಿಯುತ್ತಿದ್ದ ಭಾರಕ್ಕೀಗ ನಿರ್ಭಾರವಾದ ಸ್ಥಿತಿ. ಬಹು ದಿನಗಳ ಬಯಕೆಯ ಹೆಮ್ಮರ ಚಿಗುರೊಡೆದು ಬೆಳೆದು ಫಲಪುಷ್ಪ ಧರಿಸಿನಿಂತಾಗ ಉಂಟಾಗುವ ಸಂತೃಪ್ತಿ. ಕಾದು ಕಾದು ಸುಸ್ತಾಗಿ ಬಳಲಿ ಬೆಂಡಾದ ಮರುಭೂಮಿಯ ಹೂವೊಂದು ಒಯಾಸೀಸಿನ ಒರತೆ ಆಸರೆ ಸಿಕ್ಕಿ ನಿಲ್ಲುವಂತಾಯ್ತು.


ನನ್ನೊಳಗೆ ಒಡಮೂಡಿದ ಆ ಕಾತರತೆಗೆ ದಾಕ್ಷಿಣ್ಯವಿಲ್ಲದೆಯೇ ಫಲದೊರೆತಿದೆ. ಆದರೆ ಆ ಫಲ ಎಂತಹುದು ಎಂದು ಮುಂದೆ ಹೇಳಿರುವೆ. ಹೃದಯ ವಿಹ್ವಲತೆಯಿಂದ ನರಳಾಡಿ ಕೊನೆಗೆ ಬಿಡುಗಡೆಗೊಂದು ...ನಭೋಮಂಡಲದತ್ತ ಚಿಮ್ಮುವ ಹುಚ್ಚುಕುದುರೆಯಾಗಿದೆ. ಅದನ್ನು ಕಟ್ಟಿಹಾಕುವ ದುಃಸ್ಸಾಹಸಕ್ಕೆ ನಾನೆಂದೂ ಯತ್ನಿಸುವುದಿಲ್ಲ. 

ಹಾಂ! ಅಂದಹಾಗೆ ನನ್ನೊಳಗಡಗಿದ್ದ ಬಹು ದಿನದ ಬಯಕೆಯನ್ನೇನೋ ನಾ ಪೂರೈಸಿಕೊಂಡಿದ್ದಾಯಿತು. ಆದರೆ ಅದರಿಂದ ಸಾಕ್ಷಾತ್ಕಾರವಾಯಿತೇ? ಜೀವನದ ಅನುಭವವನ್ನು ಧಾರೆಯೆರೆದು ಬರೆದ ಕವಿಮನಸ್ಸಿನ ಅಂತರಾಳವನ್ನು ಅರ್ಥೈಸುವುದರಲ್ಲಿ ನಾನು ಸಫಲನಾದೆನೇ? ದೇಶದ ಅತ್ತ್ಯುನ್ನತ ಪ್ರಶಸ್ತಿಗೆ ಪಾತ್ರವಾದ ನುಡಿಮುತ್ತುಗಳಿಗೆ ನನ್ನನ್ನು ನಾನು ಯಾವುದೇ ಅಂಜಿಕೆಯಿಲ್ಲದೆ ತೆರೆದುಕೊಳ್ಳಲು ಸಾಧ್ಯವಾಯಿತೇ? ತಾಯಿ ಮುಂದೆ ನಿಂತ ನಗ್ನ ಮಗುವಿನಂತೆ ಅದರೆದುರು ನಾನು ನಿಲ್ಲಲಾಯಿತೇ? ಉತ್ತರ ನನಗೆ ಬಹು ಸ್ಪಷ್ಟವಿದೆ. 

ನನ್ನಂತಹ ಅರೆಪಾಮರನು ಹಿಮಾಲಯವನ್ನು ಹತ್ತುವ ಕನಸ್ಸನ್ನು ಕಾಣುವುದು ಬಹಳ ಸುಲಭ. ಆ ದುಃಸ್ಸಾಹಸ ಮಾಡಲು ಹೊರಡಲೂಬಹುದು. ಆದರೆ ಅದರಲ್ಲಿ ನಾಲ್ಕಿಂಚಿನ ಸಣ್ಣ ಏರಿಯನ್ನೂ ಹತ್ತಲು ಸಾಧ್ಯವಾಗಲಿಲ್ಲ. ಅಂಬಿಕಾತನಾಯ ದತ್ತನ ಮೇರು ಕೃತಿ ಹಿಮಾಲಯದಾಚೆಗೂ ಮೀರಿ ಬೆಳೆದು ನಿಂತಿರುವ ಶಿಖರವನ್ನು ಹತ್ತುವುದಿರಲಿ ಹತ್ತಿರಹೋಗಲೂ ಸಾಧ್ಯವಾಗಲಿಲ್ಲ. 

ನನಗಿರುವ ಜ್ಞಾನವನ್ನು ಬಳಸಿ ಆದಷ್ಟೂ ಅರ್ಥೈಸಲು ಯತ್ನಿಸಿ ಸೋತಿದ್ದೀನಿ, ಅಂದರೆ, ಕೃತಿಯ ಘನತೆಗೆ ಚ್ಯುತಿ ಬಂದಂತಾಗುವುದಿಲ್ಲವೆಂದೇ ಭಾವಿಸಬೇಕು. ಎಲ್ಲೋ ಒಂದೆರೆಡು ಸಾಲುಗಳು ಕೆಲವೊಂದು ಅರ್ಥಗಳನ್ನು ನೀಡಿತಾದರೂ, ಕವಿಯ ಅಂತಃಸತ್ವವನ್ನು ಸಂಪೂರ್ಣ ಗ್ರಹಿಸುವಲ್ಲಿ ಎಡವಿರುವೆ. ಅದಕ್ಕೆ ಕಾರಣ ನನ್ನ ಜ್ಞಾನದ ವಿಸ್ತೀರ್ಣತೆಯ ಕೊರತೆಯೇ ಹೊರತು ಬೇರೇನಲ್ಲ. 

ಇಲ್ಲಿಗೆ ನನ್ನ ಬಹುದಿನದ ಆಸೆಯ ಈಡೇರುವಿಕೆ ಮತ್ತದರ ಫಲವೇನೆಂದು ನೀವು ತಿಳಿದಾಯ್ತಲ್ಲವೇ? 

ಈ ಭಾವವೆಲ್ಲವೂ ನನಗೆ ಮೂಡಿದ್ದು ವರಕವಿ ಬೆಂದ್ರೆ ಅಜ್ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವನ ಸಂಕಲನ "ನಾಕು ತಂತಿ" ಓದಿಮುಗಿಸಿದಾಗ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 

https://www.facebook.com/photo.php?fbid=1419005828187598&set=gm.1489102764490509&type=3&theater
ಶ್ರೀಕೃಷ್ಣ ಆಲನಹಳ್ಳಿಯವರ "ಕಾಡು"

ಹೋದ ವಾರ ಶ್ರೀಕೃಷ್ಣ ಆಲನಹಳ್ಳಿಯವರ "ಕಾಡು" ಪುಸ್ತಕವನ್ನೋದಿದೆ. ಕಾದಂಬರಿಯ ವಿಸ್ತೀರ್ಣ ಚಿಕ್ಕದಾದರೂ, ಅದರಲ್ಲಿರುವ ಪಾತ್ರಗಳ ಆಳಗಲ, ಪ್ರತಿ ಪಾತ್ರಕ್ಕೂ ಇರುವ ಧೀರ್ಘ ಸಂಕೀರ್ಣತೆ, ಪ್ರತಿ ಮನೆಯಲ್ಲಿ ಕಾಣುವ ಮನಸುಗಳ ಅಂತರ, ನಡುವೆಯೇ ಇದ್ದೂ ಇಲ್ಲದಿರುವಿಕೆ, ಪಾತಿವ್ರತ್ಯದ ಹೇರಿಕೆ, ಒಳಗೆ ನಾಲ್ಕು ಗೋಡೆಗಳ ಮಧ್ಯೆಯೇ ನಲುಗುವ ಮುಗ್ದ ಮನಸ್ಸಿನ ಜಾನಕಿಯ ವೇದನೆ, ನೋವು, ಆಕೆಯ ದುಗುಡ-ದುಮ್ಮಾನ, ತನಗೆ ಮಕ್ಕಳಾಗದಿರುವಿಕೆ, ಸಹೋದರಿಯ ಮಗನನ್ನೇ ತಾನು ಹೆತ್ತ ಕೂಸಿಗಿಂತ ಹೆಚ್ಚಾಗಿ ಸಾಕುವ ಆಕೆಯ ಕಾಳಜಿ, ಅವನ ಮೇಲಿರುವ ಪ್ರೀತಿ, ಮಮತೆ, ವಿಶ್ವಾಸ, ಆದರಣೆ, ಗಂಡ ಚಂದ್ರೇಗೌಡನ ಚಾಪಲ್ಯತೆ, ಆತನ ನ್ಯಾಯ ...ಪಂಚಾಯ್ತಿಯ ತಿಕ್ಕಲಾಟಗಳು, ಊರ ರಾಜಕೀಯ ಮತ್ತದರ ಒಳಪಿತೂರಿ, ಬಾಲಕ ಕಿಟ್ಟುವಿನ ವಯೋ ಸಜಹ ಕುತೂಹಲ, ಸುತ್ತಮುತ್ತಲ ಪರಿಸರದಲ್ಲಿನ ಆಗುಹೋಗುವಿನ ಸೂಕ್ಷ್ಮಗ್ರಹಿಕೆ, ಕಾಡಿನ ಬಗ್ಗೆ ಇರುವ ವಿವರಣೆ..... ಹೀಗೆ ಕಾದಂಬರಿಯ ಆವರಣ ಬಹಳ ಸೊಗಸಾಗಿ ತೆರೆದುಕೊಳ್ಳುತ್ತಾ ಇದೊಂದು ಉತ್ತಮ ಕೃತಿಯಾಗಿ ನಿಲ್ಲುತ್ತದೆ. ಒಂದು ಓಘದಲ್ಲಿ ನಡೆಯುತ್ತಿರುವ ಕಾದಂಬರಿಯು ಅಂತಿಮ ಹಂತಕ್ಕೆ ಬರುತ್ತಿದ್ದಂತೆ ತನ್ನ ಮಗ್ಗಲು ಬದಲಿಸಿ ಇಡೀ ಕಥೆಗೆ ಯಾರೂ ಉಹಿಸಲಾಗದ ತಿರುವು ತಂದಿರುವುದು ಆಲನಹಳ್ಳಿಯವರ ಅದ್ಬುತ ತಂತ್ರಗಾರಿಕೆಯಲ್ಲೊಂದು. ಹೊಸದಾಗಿ ಓದಲು ಆರಂಭಿಸಿದವರು ಇದನ್ನು ಓದಿ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಬರಲಡ್ಡಿಯಿಲ್ಲ ಎನ್ನುವುದು ನನ್ನ ಭಾವನೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 
"ನನ್ನೊಡಲು ಮಾತಿಗಿಳಿದಾಗ.." 

ನನ್ನನ್ನು ಮಂದಿ  ಬಾ! ಬಾ! ಎಂದು ಕರೆಯುತ್ತಾರೆ. ನಾನು ಹೋಗುತ್ತಿನಿ. ಕೆಲವೊಮ್ಮೆ ಹೋಗದೆಯೂ ಇರಬಹುದು. ನಾನು ಹೋಗುವುದು ಬಿಡುವುದು ನನ್ನ ಕೈಲಿಲ್ಲ, ಕರೆಸಿಕೊಳ್ಳುವರ ಮನಸ್ಸಿನಲ್ಲಿದೆ. ಅವರು ಮಾಡುವ ಪ್ರತಿ ಕೆಲಸದಲ್ಲಿದೆ. ಅವರ ಆಲೋಚನಾ ಧಾಟಿಯಲ್ಲಿದೆ. ಅವರ ಮನಸ್ಸಿನ ಮಾತಿಗು ನಡೆಯುವ ದಾರಿಗು ವ್ಯತ್ಯಾಸ ಇಲ್ಲದಿದ್ದರೆ ನಾನು ಸರಾಗ ಸರಾಗ. ಎಲ್ಲಿ ತನ್ನದನ್ನು ತಾನು ನೋಡಿಕೊಳ್ಳುವ, ತನ್ನವರನ್ನು ಮಾತ್ರ ಸಂರಕ್ಷಿಸಿಕೊಳ್ಳುವ ಸಮೂಹವಿರುತ್ತದೋ ನಾನಲ್ಲಿಗೆ ಮನೆಮಗನಂತೆ ಹೋಗುವುದಿಲ್ಲ, ಬದಲಿಗೆ ಅಪರೂಪದ ಅಥಿತಿಯಾಗುವೆ.

ನನ್ನನ್ನು ಓಲೈಸಲು ನನ್ನ ಕುರಿತು ಜಪತಪ ಪೂಜೆಪುನಸ್ಕಾರ ಹೋಮಹವನಹವಿಸ್ಸು ಮಾಡಿರೆಂದು ನಾನು ಎಲ್ಲೂ ಯಾರಲ್ಲೂ ಹೇಳಿಲ್ಲ. ತನ್ನ ಕೆಡುಕಿನಿಂದ ತಾನು ಮಾಡಿದ ತಪ್ಪನ್ನು ಮುಚ್ಚಲಿಕ್ಕೆ ಮಂದಿ ಈ ಅನ್ಯಮಾರ್ಗ ತುಳಿಯುತ್ತಾರೆ. ಗೊಡ್ಡು ಸಂಪ್ರದಾಯಗಳ ಬೆನ್ನೇರಿ ಮೌಢ್ಯತೆಯ ಪರಮಾವಧಿ ತಲುಪುತ್ತಾರೆ. ತನ್ನೊಳಗಿನ ತಪ್ಪನ್ನು ತಾನು ಮುಚ್ಚಿಡಲಾಗದೆ ಏನೆಲ್ಲಾ ಮಾಡುತ್ತಾರೆ ಈ ಜನ!?
ನನಗಾಗಿ ಪ್ರಾರ್ಥಿಸುವುದೇನು? ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವುದೇನು? ಹವಿಸ್ಸು ಕೊಡುವುದೇನು?.. ಇನ್ನೂ ಹೀಗೆ ಹತ್ತು ಹಲವು ರೀತಿ ನನ್ನನ್ನು ಒಲಿಸಿಕೊಳ್ಳಲು ನೋಡುತ್ತಾರೆ ಈ ಮಂದಿ.

ಆದರೆ ನಿಮಗೊಂದು ಮಾತು ಹೇಳಬೇಕು. ಹಿಂದಿನ ಕಾಲದ ತಿಳಿವಳಿಕೆಯಿದ್ದ ಮಂದಿ ನನಗಾಗಿ ಹೀಗೆಲ್ಲಾ ಕೆಲಸಕ್ಕೆ ಬಾರದ ಪೂಜೆ ಹೋಮಹವನ ಮಣ್ಣುಮಸಿ ಇತ್ಯಾದಿ ಇತ್ಯಾದಿ ಮಾಡುತ್ತಲೇ  ಇರಲಿಲ್ಲ. ಅವರದೇನಿದ್ದರೂ ಅವರವರ ಕೆಲಸದಲ್ಲಿ, ಸುತ್ತಮುತ್ತಲ ಕಾಯಕ ಕೈಂಕರ್ಯಗಳಲ್ಲಿ ತೊಡಗಿರುತ್ತಿದ್ದರು. ಮಾಡುವ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತಲಿದ್ದರು. ಯಾವುದಕ್ಕೂ ಅಸೂಯೆ ದ್ವೇಷ ಮತ್ಸರವಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಸುತ್ತಮುತ್ತಲಿನ ಪರಿಸರ, ಪ್ರಾಣಿ, ಪಕ್ಷಿ, ಕುಂಟೆ, ನದಿ, ಜಲಪಾತಗಳ ಬಗ್ಗೆ ತಮ್ಮದೇ ಆದ ರೀತಿರಿವಾಜುಗಳನ್ನಿಟ್ಟುಕೊಂಡು ತಮ್ಮದೇ ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಬದುಕಿ ಬಾಳುತ್ತಿದ್ದರು. ಮಂದಿ ಹೀಗೆ ತಮ್ಮಪಾಡಿಗೆ ತಾವಾಯಿತು, ತಮ್ಮ ಮೂಲೋಕವಾಯಿತು ಎಂದು ಬಾಳುವೆ ಮಾಡುತ್ತಿರಲು ಹಠ ಮಾಡಿದರೆ ಸರಿಹೋಗುವುದಿಲ್ಲವೆಂದು ನಾನು ಸರಿಯಾದ ಸಮಯಕ್ಕೆ ಅಂದರೆ ಮಂದಿ ನನ್ನನ್ನು ಬರುವನು ಎಂದು ಎಣಿಸುವ ಕಾಲಕ್ಕೆ ತಕ್ಕಂತೆ ಹೋಗಿ ಅವರಿಗೆ ಸಾಕಾಗುವಷ್ಟೋ ಸಾಲದಿರುವಷ್ಟೋ ನನ್ನ ಕೈಲಾದ ಸೇವೆ ಮಾಡಿ ಬರುತ್ತಿದ್ದೆ. ನನ್ನ ಸೇವೆಯನ್ನು ಬಳಸಿಕೊಂಡ ಮಂದಿ ನನ್ನಿಂದ ಕೃತಾರ್ಥರಾಗುತ್ತಿದ್ದರು, ಅವರಿಗೆ ನನ್ನ ಕೈಲಾದ ಮಟ್ಟಿಗಿನ ಸೇವೆ ನೀಡಿದ್ದಕ್ಕೆ ನನಗೂ ಧನ್ಯತಾಭಾವವಿರುತ್ತಿತ್ತು.

ಒಂದೊಂದು ಸಲ ಏನಾಗುತ್ತಿತ್ತೆಂದರೆ, ಜನರ ಆಗಿನ ಪರಿಸ್ಥಿತಿ,  ಮನೋಭಾವನೆ, ಅವರು ನನ್ನ ಮೇಲೆ ತೋರಿಸುತ್ತಿದ್ದ ಆದರ ತಾತ್ಸಾರ, ಆದರೀಯಣೆ ನಿರಾಕರಣೆ, ಎದುರು ನೋಡುವಿಕೆ  ನೋಡದಿಲ್ಲದಿರುವಿಕೆ, ಕಾತರ ಬೇಸರ ಇತ್ಯಾದಿ ವಿಷಯಗಳಿಗನುಗುಣವಾಗಿ ನಾನು ನನ್ನ ಸೇವೆ ನೀಡುತಲಿದ್ದೆ. ಹೇಗೆಂದರೆ, ಮಂದಿ ನನ್ನನ್ನು ಚೆನ್ನಾಗಿ ಭಾವಿಸುವ ಮನಸ್ಸು ಹೊಂದಿ ತಮ್ಮ ಸುತ್ತಮುತ್ತಲಿನ ಪರಿಸರದ ಜೊತೆ ಅನ್ಯೋನ್ಯತೆ ಬೆಳೆಸಿಕೊಂಡಿದ್ದರೆ ನಾನು ಹೋದಾಗ ಎಲ್ಲರೂ ಮೆಚ್ಚಿವಂತಹ ಸೇವೆ ಕೊಡುತ್ತಿದ್ದೆ, ಇಲ್ಲದಿದ್ದರೆ ವ್ಯತಿರಿಕ್ತವಾದ ಸೇವೆ ನನ್ನಿಂದ ಬರುತ್ತಿತ್ತು. ಏನೇ ಆದರೂ ಮಂದಿ ಮೆಚ್ಚುವ ಸೇವೆ ಸದಾ ಮಾಡಬೇಕೆಂಬುದೇ ನನ್ನ ಪರಮೋಧ್ಯೇಯವಾಗಿತ್ತು, ಮತ್ತು ಈಗಲೂ ಅದು ಹಾಗೇ ಇದೆ.

ಮಂದಿಗೆ ಒಳ್ಳೆಯದನ್ನು ಮಾಡಿ ಹೆಸರು ಸಂಪಾದಿಸುವ ಉಮೇದು ಯಾರಿಗೆ ಇರಲ್ಲ ನೀವೇ ಹೇಳಿ? ಅದು ಎಲ್ಲರಲ್ಲೂ ವಯಸ್ಸಿನ ತಾರತಮ್ಯವಿಲ್ಲದೆ, ಜಾತಿಮತಗಳ ಭೇಧವಿಲ್ಲದೆ, ಬಡವ ಬಲ್ಲಿದನೆಂಬ ವಿಂಗಡಣೆಯಿಲ್ಲದೆ ಎಲ್ಲರನ್ನೂ ಆವರಿಸಿಕೊಳ್ಳುವ ಕಾಯಿಲೆ ತಾನೇ? ಅಲ್ಲವಾ ಮತ್ತೆ? ಈ ಕಾಯಿಲೆ ಹೇಗೆಂದರೆ, ನಿನ್ನ ಪಾತ್ರ ಇಂಥದೇ ಮಗಾ ಎಂದು ಹೇಳಿ ಯಾರದೋ ಗರ್ಭವನ್ನು  ಸೀಳಿಕೊಂಡು ಹೊರಬರುವಂತೆ ಮಾಡುವ ಆ ಭಗವಾನು ದೇವಾನುದೇವತೆಗಳನ್ನೂ ಬಿಟ್ಟಿಲ್ಲ ಎಂದರೆ ನೀವು ನಂಬಲೇಬೇಕು. ಅಷ್ಟಿಲ್ಲದಿದ್ದರೆ ದೇವರು ಅಷ್ಟೊಂದು ಅವತಾರಗಳನ್ನು ಎತ್ತುತ್ತಿದ್ದರಾ? ತನ್ನ ಪವಾಡ ತೋರಿಸಿ ದುಷ್ಟ ಸಂಹಾರ ಮಾಡುತ್ತಿದ್ದರಾ? ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಎಂಬ ಬಿರುದನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದ್ದರಾ? ಆ ದೇವರೂ ಕೂಡ ತನ್ನ ಇರುವಿಕೆಯನ್ನು ತೋರ್ಪಡಿಸಲು, ಅವತಾರಗಳನ್ನೆತ್ತಿದ್ದು ಅವತಾರವಲ್ಲದೇ, ಈ ಗುರಿತಿಸಿಕೊಳ್ಳಬೇಕು ಎನ್ನುವ ಕಾಯಿಲೆಯಲ್ಲದೇ ಮತ್ತಿನ್ನೇನು? ನೀವೇನಂತೀರಿ?

ಅದನ್ನು ನೀವು ಚಟವೆನ್ನಿ, ಕಾಯಿಲೆಯೆನ್ನಿ. ಅದು ನನ್ನನ್ನೂ ಬಿಟ್ಟಿಲ್ಲ ಮತ್ತೆ! ನನಗೂ ಮಂದಿಗೆ ನಾಲ್ಕಾಸು ಒಳ್ಳೆಯದನ್ನು ಮಾಡಿ ಶಬ್ಬಾಸ್ಗಿರಿ ಗಿಟ್ಟಿಸಿಕೊಳ್ಳಬೇಕೆನ್ನುವುದು ಮೊದಲಿನಿಂದಲೂ ಇದೆ. ಅದಕ್ಕಾಗಿ ನಾನು ಪಟ್ಟ ಪಾಡಿಗಳು ಒಂದಾ ಎರಡಾ? ನಾನು ನೀಡುವ ಸೇವೆಯಿಂದ ಒಳ್ಳೆಯದಾಗುತ್ತದೆ ಎಂದು ಮಂದಿಗೆ ಯಾವಾಗ ತಿಳಿಯಿತೋ, ಅಂದಿನಿಂದ ಇಂದಿನ ತನಕ ಅವರು ಕರೆದಲ್ಲಿಗೆ ನಾನು ಹೋಗಬೇಕು, ಕರೆವ ಸಮಯಕ್ಕೆ ಸರಿಯಾಗಿ ಹೋಗಬೇಕು, ಅವರು ಎಷ್ಟು ಬಯಸುತ್ತಾರೋ ಅಷ್ಟು ಸೇವೆ ನೀಡಬೇಕು. ಸ್ವಲ್ಪ ಜಾಸ್ತಿಯಾದರೂ ಕಷ್ಟ, ತುಸುವೇ ಹೆಚ್ಚಾದರೂ ಕಷ್ಟ. ಯಾಕಾದರೂ ಇವನು ಬಂದು ಹೀಗೆ ಮಾಡಿದ ಎಂದು ನನ್ನನ್ನೇ ಮೂದಲಿಸುತ್ತಾರೆ. ನನ್ನ ಕಷ್ಟ ಯಾರಿಗೆ ಹೇಳಿಕೊಳ್ಳಲಿ? ನನ್ನ ಮನಸನ್ನು ಅರ್ಥ ಮಾಡಿಕೊಂಡವರು ಯಾರಿದ್ದಾರೆ? ಒಳ್ಳೆಯದನ್ನು ಮಾಡಿದವನಿಗೆ  ಈ ಮಂದಿ ಗುಡಿಗೋಪುರಗಳನ್ನು ಕಟ್ಟುತ್ತಾರೆ, ಹಾಲುತುಪ್ಪಗಳಿಂದ ಅಭಿಷೇಕ ಮಾಡುತ್ತಾರೆ, ಮೂರ್ತಿ ನಿಲ್ಲಿಸುತ್ತಾರೆ, ಸುತ್ತಲೂ ನೆರೆದು ಭಜನೆ ಮಾಡುತ್ತಾರೆ, ಏರಿದವನ್ನು ಮತ್ತಷ್ಟು ಅಟ್ಟಕ್ಕೆ ಏರಿಸುತ್ತಾರೆ, ಸುತ್ತಲೂ ವಂದಿಮಾಗದಿರ ಗುಂಪು ಹುಟ್ಟಿಕೊಳ್ಳುತ್ತದೆ. ಈ ಮಂದಿಗೆ ಒಳ್ಳೆಯದನ್ನು ಮಾಡಿದವ ಸಾಕ್ಷಾತ್ತ್ ದೇವರೇ ಆಗಿಬಿಡುತ್ತಾನೆ. ಒಳ್ಳೆಯದನ್ನು ಮಾಡಿ ಒಳ್ಳೆಯವನು ಎನಿಸಿಕೊಳ್ಳುವುದು ತಪ್ಪಲ್ಲ ಬಿಡಿ. ಆದರೆ ಅವರು ಒಳ್ಳೆಯತನಕ್ಕೆ ವ್ಯಯಿಸುವ ದ್ರವ್ಯ ಮಾತ್ರ ಒಳ್ಳೆಯ ಮೂಲದ್ದಾಗಿದ್ದರೆ ಸಾಕು. ಆದರೆ ಈ ರೀತಿ ಒಳ್ಳೆಯ ಮಾರ್ಗದಲ್ಲಿ ದುಡಿದು, ಯಾರಿಗೂ ಅನ್ಯಾಯವಾಗದಂತೆ ಗಳಿಸಿದ ಸಂಪತ್ತನ್ನು ಹೆಸರು ಮಾಡಲಿಕ್ಕೆ ಎಷ್ಟು ಮಂದಿ ಬಳಸುತ್ತಾರೆ ಹೇಳಿ ನೋಡುವ? ಕೇವಲ ಬೆರಳೆಣಿಕೆ ಮಂದಿ ಮಾತ್ರ ಸಿಕ್ಕಾರು. ಎಲ್ಲಾದರೂ ಹುಡುಕಿ ನೋಡಿ, ನಾನು ನನ್ನನ್ನು ಅಟ್ಟಕ್ಕೇಸಿರಿ ಎಂದು ಮಂದಿಯನ್ನು ಕೇಳಿದ್ದುಂಟಾ ಎಂದು? ಒಂದೇ ಒಂದು ಸಾಕ್ಷ್ಯ ತೋರಿಸಿ ನನ್ನನ್ನು ಹೊತ್ತುಕೊಂಡು ಅಡ್ಡಪಲ್ಲಕ್ಕಿಯಲ್ಲಿ ಅಡ್ಡಾಡಿಸಿ ಎಂದು ಹೇಳಿದ್ದು? ನನ್ನ ಪುತ್ಥಳಿ ನಿರ್ಮಿಸಿ ಪೂಜೆ ಹೋಮಹವನ ಮಾಡಿ ಎಂದು ಕೇಳಿದ್ದು? ಉಹುಂ! ನಾನು ಇದ್ಯಾವುದನ್ನೂ ಕೇಳಿಲ್ಲ, ಕೇಳುವುದೂ ಇಲ್ಲ. ಏನೋ ನನ್ನಿಂದಾದ ಸೇವೆ ಮಾಡಿ ಗುರುತಿಸಿಕೊಳ್ಳುವ ಚಿಕ್ಕ ಹಪಹಪಿ ನನ್ನಲ್ಲಿದೆ ಎಂಬುದು ಬಿಟ್ಟರೆ ನನಗ್ಯಾವ ಮಹತ್ತರ ಆಸೆಯೂ ಇಲ್ಲ. ಮಂದಿಯ ನಿಷ್ಕಲ್ಮಶ ಸೇವೆ ಮಾಡಿ ಈಗಿರುವ ಮತ್ತು ಮುಂದಿನ ಜನಾಂಗವನ್ನೂ ಸೇರಿಸಿ ಅವರನ್ನು ಸದಾ ಕಾಲ ತಣ್ಣಗೆ ಕಾಯುವ ಹಂಬಲ ನನ್ನದು.

ಆದರೆ ಬಿಡುತ್ತಾರೆ ಅಂದುಕೊಂಡಿರಾ ಈ ಮಂದಿ ನನ್ನ ಪಾಲಿನ ಕೆಲಸ ನನ್ನ ಪಾಡಿಗೆ ನಾನು ಮಾಡಲು? ಉಹುಂ ಬಿಡುವುದಿಲ್ಲ! ನನ್ನ ಪಾಲಿನ ಕೆಲಸವನ್ನು ಮಾಡಲು ನನಗೆ ಅವರಾಗಿಯೇ ಅಡ್ಡಿ ಆತಂಕ ತರುತ್ತಾರೆ. ಸಂಪದ್ಭರಿತ ಅರಣ್ಯ ಮಟ್ಟಸವಾಗಿ ಕಡಿದು ಮೊದಲು ಅಲ್ಲಿರುವ ಅರಣ್ಯ ವಾಸಿಗಳಾದ ಪ್ರಾಣಿ ಪಕ್ಷಿ ಕ್ರಿಮಿ ಕೀಟ ಹುಳು ಹುಪ್ಪಟೆಯನ್ನು ನಾಶ ಮಾಡುವುದರ ಜೊತೆಗೆ ಅಮೂಲ್ಯವಾದ ಸಂಪತ್ತಿನ ಕೊಳ್ಳೆ ಹೊಡೆಯುತ್ತಾರೆ. ಉಳ್ಳವರ  ಪಾಲಿನ ಮತ್ತಷ್ಟು ಆಸೆ ಆಕಾಂಕ್ಷೆ ಪೂರೈಸುತ್ತಾರೆ ಅಷ್ಟೇ. ಪಾಪ! ಇರಲು ನೆತ್ತಿ ಮೇಲೆ ಸೂರಿಲ್ಲದ, ಒಂದೊತ್ತು ತಿನ್ನಲು ಅನ್ನವಿಲ್ಲದ  ಜನ ಇವರಿಗೆ ಕಾಣಿಸುವುದೇ ಇಲ್ಲ. ತಾಯಿ ಪ್ರಕೃತಿಯೇ ನಾಶವಾದರೆ ನನ್ನ ಪಾಲಿಗೆ ಅದು ಮರಣಶಾಸನವೇ ಸರಿ. ಪ್ರಕೃತಿಯನ್ನು ವಿನಾಶದಂಚಿಗೆ ತಳ್ಳುವ ಮೂಲಕ ಮಂದಿ ತಮ್ಮ ಮೇಲೆ ತಾವೇ ಕಲ್ಲುಚಪ್ಪಡಿ ಎಳೆದುಕೊಳ್ಳುತ್ತಾರೆ. ಮುಂದುವರಿದು, ಉಳಿದ ನದಿ ಕೆರೆ ಕುಂಟೆಗಳ ಜಾಗವನ್ನು ಒತ್ತುವರಿ ಮಾಡಿ ಕತ್ತೆತ್ತಿ ನೋಡಿದರೂ ಕಾಣದಷ್ಟೆತ್ತರದ ಮುಗಿಲು ಮಹಲುಗಳನ್ನು ನಿರ್ಮಿಸುತ್ತಾರೆ. ಮತ್ತೂ ಮುಂದುವರಿದು ಉಳಿದ ಸಂಪನ್ಮೂಲಗಳಾದ ಬೆಟ್ಟ ಬಂಡೆಯನ್ನು ಐಷಾರಾಮಿ ಕಾರುಗಳಲ್ಲಿ ಓಡಾಡುವ ದೊರೆಗಳಿಗೆ ತೊಂದರೆಯಾಗದಿರಲೆಂದು ರಸ್ತೆ ನಿರ್ಮಿಸುವುದಕ್ಕಾಗಿಯೋ, ತಮ್ಮ ತಮ್ಮ ಮನೆಗಳ ಒಪ್ಪ ಒರಣ ಮಾಡಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶನಕ್ಕಿಡುವ ಸಲುವಾಗಿ ತಾವು ಕಟ್ಟುವ ಹೊಸ ಮನೆಗೆ ನೆಲ ಹಾಸಲೆಂದೋ ಬಲಿ ಹಾಕುತ್ತಾ ಇನ್ನುಳಿದ್ಯಾವುದಿದೆ ಹಾಳು ಮಾಡಲು ಎಂದು ಹೊಸ ಪಂಥ ಯೋಚಿಸುತ್ತಾರೆ. ಎಲ್ಲೆಲ್ಲಿ ನೋಡಿದರೂ ಉಕ್ಕಿ ಹರಿದು ಚಿಮ್ಮುತ್ತಿದ್ದ ನೀರಿನ ಸೆಲೆಗೇ ಕಂದರ ಕೊರೆದು ಅದರ ನೆಲೆಯನ್ನೇ ಆರಿಹೋಗುವಂತೆ ಮಾಡುತ್ತಾರೆ. ಕೇವಲ ಹತ್ತಾರು ಅಡಿಗೆ ಸಿಗುತ್ತಿದ್ದ ಅಂತರ್ಜಲ ಈಗ ಸಾವಿರಾರು ಅಡಿ ಕೊರೆದರೂ ಸಿಗುತ್ತಿಲ್ಲವೆಂದರೆ ಈ ಮಂದಿಯ ಹಕೀಕತ್ತು ಎಂಥದ್ದಿರಬಹುದು ನೀವೇ ಯೋಚಿಸಿ.

ಇಷ್ಟಕ್ಕೇ ಸುಮ್ಮನಿದ್ದರಾ ಮಂದಿ? ಉಹುಂ! ನಾನು ಇರುವ ಜಾಗದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕಾದವರು, ಶ್ರೀಕೃಷ್ಣ ಕಟ್ಟಿಸಿದ ಗೋಮಾಳದಲ್ಲಿರಬೇಕಾದ ಜಾನುವಾರುಗಳನ್ನು ತಂದು ಅದು ತೃಪ್ತಿಪಟ್ಟು ಇವರಿಗೆ ನಾಲ್ಕು ಮಣ ಹೆಚ್ಚಿಗೆ ಹಾಲು ಕೊಡುವ ತನಕ, ಒಂದೇ ದಿನದಲ್ಲಿ ಗದ್ದೆಯ ಕೆಲಸವನ್ನು ಸಂಪೂರ್ಣವಾಗಿ ಮಾಡಿ ಮುಗಿಸುವ ಶಕ್ತಿ ಬರುವ ತನಕ ಅದಕ್ಕೆ ಸ್ನಾನ ಮಾಡಿಸಿ ನಾನಿರುವ ಜಾಗವನ್ನು ಕೊಳಕು ಮಾಡುತ್ತಾರೆ. ತಮ್ಮ ಕೊಳಕು ಬಟ್ಟೆಯನ್ನಲ್ಲದೆ, ಶೌಕವನ್ನೂ ನನ್ನಲ್ಲಿ ವಿಲೀನಗೊಳಿಸಿ ಕಲ್ಮಶ ಮತ್ತಷ್ಟು ಹೆಚ್ಚುವಂತೆ ಮಾಡುತ್ತಾರೆ. ತಮ್ಮ ಮನೆ ಪೂಜೆಹೋಮಗಳಲ್ಲಾದ, ದೇವರ ಪೂಜೆಯ ನಂತರ ಬಳಸಿ ಬಿಸಾಡುವ ಹೂ ಕಸ ಕಡ್ಡಿಯನ್ನು, ಬಾಳೆಲೆಯನ್ನು ತಂದು ನನ್ನ ಜಾಗದಲ್ಲಿ ಹಾಕಿ ಅದರಲ್ಲಿರುವ ಜಲಾಚರಗಳಿಗೆ ತೊಂದರೆ ತಂದೊಡ್ಡುತ್ತಾ, ಕಾರ್ಕಾನೆಗಳ ವಿಷಯುಕ್ತ ಮಾಲಿನವನ್ನು ನನ್ನೊಳಗೆ ಹರಿದುಬಿಡುತ್ತಾರೆ. ಇನ್ನು ನಾನೆಲ್ಲಿ ಉಳಿಯಬೇಕು? ನನಗೆ ಉಳಿಗಾಲವೆಲ್ಲಿ? ಈ ಮಂದಿ ಮಾಡುವ ಅನಾಚಾರಗಳೆಲ್ಲವನ್ನೂ  ಸಹಿಸಿಕೊಂಡು ನನಗೂ ಸಾಕಾಗಿ ಹೋಗಿದೆ. ಆದರೂ ಅವರ ಮೇಲಿರುವ ಸೇವೆ ಮಾಡುವ ಮನೋವೃತ್ತಿ ನನ್ನಲ್ಲಿ ಒಂಚೂರೂ ಕಡಿಮೆಯಾಗಿಲ್ಲವೆಂದರೆ ನೀವು ನಂಬಲೇಬೇಕು!

ಬರುಬರುತ್ತಾ ಪರಿಸ್ಥಿತಿ ಹೇಗಾಗಿದೆ ಎಂದರೆ ನಾನುಳಿದುಕೊಳ್ಳುವ ಜಾಗ ಕೆರೆಕುಂಟೆ ಬರಿದಾಗಿದ್ದರೆ ಅದನ್ನೂ ಬಿಡದ ಈ ಮಂದಿ, ಅದನ್ನು ಅಕ್ರಮವಾಗಿ ಅಭಿವೃದ್ಧಿಯ ಹೆಸರಿನಲ್ಲಿ ಭೂಪರಿವರ್ತನೆ ಮಾಡಲು ಮುಂದಾಗಿರುವುದು! ನಾನು ಬಂದಾಗ ಉಳಿಯಲು ಜಾಗವೇ ಇರದಿದ್ದರೆ ನಾನು ಇಲ್ಲಿಗೆ ಬಂದು ಮಂದಿಗೆ ಅನಂತ ಸೇವೆ ಮಾಡುವುದಾರೂ ಹೇಗೆ? ಹೋಗಲಿ ನಾನು ಬರುವುದಾದರೂ ಸಾಧ್ಯವಾದೀತೆ? ಚಿಂತೆ ಮಾಡಬೇಕಾದ ಮಂದಿ ನಿದ್ದೆಯಲ್ಲಿ ತೂಕಡಿಸುತ್ತಾ ಒಬ್ಬರ ಕಾಲನೊಬ್ಬರು ಎಳೆಯುತ್ತಾ ಕಾಲಹರಣ ಮಾಡುತಲಿದ್ದಾರೆ. ಯಾವುದು ಸ್ವಾಮಿ ಅಭಿವೃದ್ಧಿ? ತಾನಾಗೇ ಹುಟ್ಟಿ ಬೆಳೆದು ಹಲವು ದಶಕಗಳಿಂದ ತಂಪಾದ ಗಾಳಿ ನೆರಳು ನೀಡುವ ಮರಗಳನ್ನು ಕಡಿಯುವುದಾ? ಕಣ್ಣಿಗೆ ಕಾಣದಂತೆ ಒಳಗೊಳಗೇ ಅರಣ್ಯ ಕಡಿದು ನಾಶ ಮಾಡುವುದಾ? ಅದರಲ್ಲಿರುವ ಅಗಣಿತ ಸಂಪತ್ತನ್ನು ತನ್ನ ಉಳಿವಿಗೋಸ್ಕರ ಬಲಿ ಕೊಡುವುದಾ? ವನ್ಯ ಮೃಗಗಳನ್ನು ಪ್ರಾಣಿಪಕ್ಷಿಗಳನ್ನು ತನ್ನ ಬೇಟೆಯ ತೆವಲು ತೀರಿಸಿಕೊಳ್ಳಲು, ನಾಲಗೆಯ ಚಪಾಲವಾರಿಸಿಕೊಳ್ಳಲು ಕೊಲ್ಲುವುದಾ? ಹಿರಿಯರು ಮಾಡಿಟ್ಟ ಬಂಗಾರ ಬೆಳೆವ ಭೂತಾಯಿಯನ್ನು ಅನ್ಯರಿಗೆ ಮೂರು ಕಾಸಿಗೆ ಮಾರಿ ಪಟ್ಟಣ ಸೇರುವುದಾ? ನದಿಮೂಲವನ್ನು, ನದಿ ಪಾತ್ರವನ್ನು ಸವರುತ್ತಾ ತಾನು ತನ್ನ ಹೆಂಡಿರು ಮಕ್ಕಳಿರಲು ಬೆಚ್ಚಗಿನ ಮನೆ ಕಟ್ಟಿಸುವುದಾ? ಅನೈರ್ಮಲ್ಯೀಕಾರಣವಾಗುವ ವಿಷಯುಕ್ತ ರಾಸಾಯನಿಕವನ್ನು ಜಲದೊಡಲಿಗೆ ಹರಿದು ಬಿಡುವುದಾ? ಯಾವುದು ಸ್ವಾಮಿ ಅಭಿವೃದ್ಧಿ ಹಾಂ? ಒಂದು ತಿಳಿದುಕೊಳ್ಳಿ, ತಾನು ಯಾವುದನ್ನು ಮನುಷ್ಯ ಸೃಷ್ಟಿಸಲು ಸಾಧ್ಯವಿಲ್ಲವೋ ಅದನ್ನು ನಾಶ ಮಾಡಲು ಆತನಿಗೆ ಯಾವುದೇ ಹಕ್ಕಿಲ್ಲ!

ಹೋಗಲಿ ಬಿಡಿ. ಈಗ ಅವರ ಬಗ್ಗೆ, ಮಂದಿ ಮಾಡುವ ಅನಾಚಾರದ ಬಗ್ಗೆ ಎಷ್ಟು ಹೇಳಿದರೂ ತಾವು ಮಾಡುವ ಕೆಲಸವನ್ನೇ ಮಾಡುತ್ತಿರುತ್ತಾರೆ.

ಆದರೆ ನಾನೀಗ ಹೇಳಹೊರಟಿರುವುದು ಈ ಮೇಲ್ಕಾಣಿಸಿದ ಯಾವ ವಿಷಯವನ್ನೂ ಅಲ್ಲ. ನನ್ನ ಮನದಾಳದ ಮಾತುಗಳು, ನನ್ನ ಅಂತರಾಳದಲ್ಲಿ ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳು ಮತ್ತು ಅದಕ್ಕೆ ಯಾರಿಂದಲಾದರೂ ಉತ್ತರ ಸಿಗಬಹುದೇನೋ ಎನ್ನುವ ಕಾತರವಷ್ಟೇ.

ಮೊದಲೇ ಹೇಳಿದೆನ್ನೆಲ್ಲಾ ನಾನು ಮಂದಿಗೆ ಮಾಡುವ ಸೇವೆ ಅವರವರ ಭಾವಧರ್ಮಕ್ಕನುಗುಣವಾಗಿರುತ್ತದೆ ಎಂದು? ನೋಡಿ ಏನಾಗುತ್ತದೆ ಎಂದರೆ, ಈ ಮಂದಿ ನನ್ನನ್ನು ಸುಖಾಸುಮ್ಮನೆ ಮೂದಲಿಸುತ್ತಾರೆ. ವಿನಾಕಾರಣ ದ್ವೇಷಿಸುತ್ತಾರೆ. ನಾನು ಕಾರಣನಲ್ಲದ ಅವರ ಪರಿಸ್ಥಿಗೆ ನನ್ನನ್ನು ಹೊಣೆಗಾರನನ್ನಾಗಿ ಮಾಡುತ್ತಾರೆ. ಎಲ್ಲ ಘೋರವನ್ನೂ ನಾನೇ ಮಾಡಿದೆ, ನನ್ನಿಂದಲೇ ಆಯಿತು ಎಂದು ತಿಳಿಯುತ್ತಾರೆ. ಎಲ್ಲ ಅವರ ಕಷ್ಟಕ್ಕೂ ನನ್ನನ್ನು ಭಾದ್ಯೆತೆದಾರನನ್ನಾಗಿಸುತ್ತಾರೆ. ನನ್ನ ಸೇವೆಯಿಂದ ಕೆಲವೊಮ್ಮೆ ಸಂತೃಪ್ತಿಪಡುವ ಅದೇ ಜನ, ನನ್ನನ್ನು ಅಪರಾಧೀ ಕಟಕಟೆಯಲ್ಲಿ ನಿಲ್ಲಿಸುತ್ತಾರೆ. ನೀನು ಮಾಡಿರುವುದು ಸರಿಯಾ? ಎಂದು ನನ್ನನ್ನೇ ನ್ಯಾಯ ಕೇಳುತ್ತಾರೆ. ಅಲ್ಲಾ ಸ್ವಾಮಿ ನನಗೂ ಒಂದು ಮನಸ್ಸಿದೆ, ಅದರಲ್ಲಿ ಮಂದಿಗೆ ಒಳ್ಳೆಯದು ಮಾಡುವ ಆಲೋಚನೆಯಿದೆ, ನನ್ನ ಮಸ್ತಕಕ್ಕೂ ಭಾವನೆಗಳಿವೆ, ಒಳ್ಳೆಯದ್ಯಾವುದೂ ಕೆಟ್ಟದ್ಯಾವುದೂ ಎಂದು ನಿರ್ಧರಿಸುವ ಗುಣವಿದೆ ಎಂದಾಗಲೀ ಮಂದಿ ನನ್ನ ಕುರಿತು  ಏಕೆ ಆಲೋಚಿಸುವುದಿಲ್ಲ? ಏನೋ ಕೆಲವೇ ಕೆಲವು ಮಂದಿ ಯೋಚಿಸಿದರಾಯಿತೇ? ಎಲ್ಲರೂ ಇದರ ಬಗ್ಗೆ ಗಂಭೀರವಾಗಿ ಅವಲೋಕಿಸಿ ನಿರ್ಧಾರ ಕೈಗೊಳ್ಳಬಾರದೇಕೆ? ಯಾರೋ ಕೆಲವೇ  ಕೆಲವು ಮಂದಿಗಿರುವ ಭವಿಷ್ಯದ ಚಿಂತೆ, ಮುಂದಿನ ಪೀಳಿಗೆಗಾಗಿ ಮಿಕ್ಕುಳಿದ ಕಾಲ ಕಸದಂತಷ್ಟೇ ಇರುವ ಪರಿಸರ, ನದಿ, ಕಾಡು, ಗುಡ್ಡ, ಮೇಡು, ಪ್ರಾಣಿಪಕ್ಷಿ, ಹುಳುಹುಪ್ಪಟೆಗಳನ್ನು ಸಂರಕ್ಷಿಸಿ ಕಾಪಾಡಿ ಪೊರೆಯುವ ಮುಂದಾಲೋಚನೆಯೇಕಿಲ್ಲ? ಮೇಲೆ ಹೇಳಿದ ಹಾಗೆ ಮಂದಿ ಮಾಡಬಾರದ ಅನಾಚಾರಗಳನ್ನೆಲ್ಲಾ ಮಾಡಿದಾಗ ಆಗಾಗ್ಗೆ ನಾನು ಅವರ ಮೇಲೆ ಸ್ವಲ್ಪ ಮುನಿಯುವುದುಂಟು. ಹಾಗೆ ನಾನು ಮುನಿದು ನನ್ನ ಸೇವೆಯನ್ನು ವ್ಯತಿರಿಕ್ತವಾಗಿ ಕೊಡುವುದೂ ಉಂಟು. ಹಾಗಾದಾಗ, ಕೆರೆಕುಂಟೆ ನದಿ ಶರಧಿಯಲ್ಲಿ ಪ್ರವಾಹ ಉಂಟಾಗುತ್ತದೆ. ಜಲ ಪ್ರಳಯ ಜನ್ಮ ತಾಳುತ್ತದೆ. ನದಿ ಝರಿಗಳು ಭೋರ್ಗರೆದು ಧುಮ್ಮಿಕ್ಕುತ್ತವೆ. ಸಾಗರದಲೆಗಳು ತೀರಕೆ ಬಡಿದಪ್ಪಳಿಸುತ್ತವೆ. ಎಂದೂ ಶಾಂತವಾಗಿದ್ದ ಇವುಗಳನ್ನು ನೋಡಿದ್ದ ಮಂದಿ ಈ ಪರಿ ಮತಿಗೆಟ್ಟಂತಾಡುವ ಜಲಮೂಲಗಳನ್ನು ನೋಡಿ ನನ್ನನ್ನು ದೂಷಿಸತೊಡಗುತ್ತಾರೆ. ಇದರಲ್ಲಿ ನನ್ನ ತಪ್ಪೇನು? ಮಂದಿ ಮಾಡಿದ ಅನಾಚಾರ ಅಕ್ರಮಗಳನ್ನೆಲ್ಲಾ ಸಹಿಸಿಕೊಂಡು ಅವರವರು ಮಾಡಿದ ಕೆಲಸಕ್ಕೆ ತಕ್ಕಂತೆ ನನ್ನ ಸೇವೆ ಮಾಡುತ್ತಿರುವೆನೆಲ್ಲಾ ಅದು ತಪ್ಪೇನು? ಪ್ರಕೃತಿ ವಿಕೋಪಗಳಾದಾಗ ಮಂದಿ ದಿಕ್ಕಾಪಾಲಾಗುತ್ತಾರೆ. ಅದನ್ನು ನೋಡುವ ನನಗೆ ಎಷ್ಟು ಸಂಕಟವಾಗುತ್ತದೆ ಎಂದು ಯಾರಾದರೂ ಯೋಚಿಸಿದ್ದೀರೇನು? ಆಗುವ ನೋವು, ಆಸ್ತಿಪಾಸ್ತಿ ಮನೆಮಠ ನಾಶದ ಬಗ್ಗೆ ಮಂದಿ  ಯೋಚಿಸುವರೇ ವಿನಃ, ಇದು ಏಕಾಯಿತು? ಇದರಲ್ಲಿ ನನ್ನ ಪಾತ್ರವೇನು?  ಎಂದು ಮಾತ್ರ ಯೋಚಿಸುವುದಿಲ್ಲ. ಇದಕ್ಕೆ ಕಾರಣವೇನೆಂದು ಹುಡುಕುವ ಗೋಜಿಗೇ ಹೋಗುವುದಿಲ್ಲ. ಪುನಃ ಹೀಗೆ ಮತ್ತೆ ಆಗದಂತೆ ಮಾಡಬೇಕಾಗಿರುವುದೇನು? ಎಂದು ಚಿಂತಿಸುವುದೇ ಇಲ್ಲ. ಆಗುವ ಎಲ್ಲಾ ಅನಾಹುತಗಳಿಗೆ ನನ್ನನ್ನು ಕಾರಣೀಭೂತನನ್ನಾಗಿಸಿ ತಾವು ಮಾತ್ರ ಮುಗುಮ್ಮಾಗಿ ಉಳಿದುಬಿಡುತ್ತಾರೆ. ಮಂದಿಗೆ ತಾವು ಯಾವ ಕೆಲಸ ಮಾಡಬೇಕು? ಯಾವುದು ಮಾಡಬಾರದು? ಎನ್ನುವ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ತಿಳುವಳಿಕೆಯಿದೆ. ತಿಳಿದೂ ತಿಳಿದೂ ಹೀಗೆ ಮಾಡಬಾರದ್ದನ್ನೆಲ್ಲಾ ಮಾಡಿ ಕೊನೆಗೆ ನನ್ನ ವಿರುದ್ಧವೇ ತಿರುಗಿಬೀಳುತ್ತಾರಲ್ಲ ನನಗೆಷ್ಟು  ಮರ್ಮಾಘಾತವಾಗಿರಬೇಡ? ನನ್ನಲ್ಲೂ ಇರುವ ಹೃದಯ ಅದೆಷ್ಟು ನೊಂದಿರಬೇಡ? ಸಹಿಸಿ ಸಹಿಸಿ ಕೊನೆಗೆ ಈ ಅನಾಚಾರ ಅಕ್ರಮವನ್ನು ತಡೆಯಲಾಗದೆ ಮಂದಿಗೆ ಸ್ವಲ್ಪ ಚುರುಕು ಮುಟ್ಟಿಸಲು ಹೋದರೆ ನನಗೇ ಈ ಪರಿ ಪರಿಭ್ರಮಣೆಗೊಳಪಡಿಸುವ ಇವರ ಕುತಂತ್ರಕ್ಕೆ ನಾನೇನನ್ನಬೇಕು ನೀವೇ ಹೇಳಿ?

ಬಿಡಿ ನನ್ನ ಕಥೆಯನ್ನು ಹಂಚಿಕೊಳ್ಳಲು, ನನ್ನ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು, ಯಾರಿಗೂ ಪುರುಸೊತ್ತಿಲ್ಲ. ಮಂದಿ ತಾವು ಸಮಯದ ಹಿಂದೆ ಬಿದ್ದಿದ್ದಾರೆ. ಕಾಲನ ಕುದುರೆಯ ಸ್ಪರ್ಧೆಗೆ ಇಳಿದು ದುಡ್ಡು ಮಾಡುವುದೊಂದನ್ನೇ ತಮ್ಮ ಧ್ಯೇಯವನ್ನಾಗಿ ಪರಿಗಣಿಸಿ, ತಾವು ಚಿಕ್ಕಚಿಕ್ಕ ಸಂತೋಷಗಳನ್ನನುಭವಿಸದೇ, ಜೊತೆಯಲ್ಲಿರುವರಿಗೂ ಅದರ ಸವಿಯನ್ನುಣಬಡಿಸದೆ ಓಡುತ್ತಲೇ ಇದ್ದಾರೆ. ಅವರು ಓಡಲಿ ಬಿಡಿ. ಅವರಿಗೆ ನಾನು ಮತ್ತು  ನನ್ನ ಅಸ್ತಿತ್ವದ ಬಗ್ಗೆ ಪರಿವೆಯೇ ಇಲ್ಲ. ಇನ್ನು ಮಿಕ್ಕುಳಿದವರಲ್ಲಿ ನನ್ನ ಬಗ್ಗೆ ಚಿಂತಿಸಿ ಯೋಚಿಸುವವರಿಗೆ ಅಂದುಕೊಂಡಿದ್ದನ್ನು ಕಾರ್ಯಗತಕ್ಕೆ ತರಲು ಈ ಅನಾಗರೀಕ ಆರಾಜಕತೆಯಿಂದ ಕೂಡಿದ ಈ ಸಮಾಜ ಬಿಡುವುದಿಲ್ಲ. ಯಾವುದೋ ದೇವರದಯೆ, ನೀವಾದರೂ ಸಿಕ್ಕಿದಿರೆಲ್ಲಾ ನನ್ನ ಮಾತುಗಳನ್ನು, ನಾನು ಒಳಗೊಳಗೇ ಮನುಷ್ಯ ಭೂಮಿ ಮೇಲೆ ಜನುಮ ತಾಳಿದಾಗಿನಿಂದಲೂ ಅನುಭವಿಸಿಕೊಂಡು ಬರುತ್ತಿರುವ ವೇದನೆಯನ್ನು ಕೇಳಲು? ನನಗೆ ಅಷ್ಟು ಸಾಕು.

ಹಾಂ! ನಾನ್ಯಾರೆಂದು ನಿಮಗೆ ಹೇಳಲೇ ಇಲ್ಲವಲ್ಲವೇ? ನನ್ನನ್ನು "ಮಳೆ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
೧೮ ೦೮ ೨೦೧೭

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...