ಛತ್ರಿ ಬಾಯ್!
ಬೆಳಗ್ಗಿನಿಂದ ವಿಪರೀತ ಕೆಲಸ, ಎಷ್ಟು ಮಾಡಿದರು ಮುಗಿಯಲೊಲ್ಲದು. ಬಾಸ್ ಬೇರೆ ಯಾಕೊ ಗರಂ ಆಗಿದ್ದರು. ಕೆಲಸದಲ್ಲಿ ಮುಳುಗಿದ್ದ ನಾನು ಕತ್ತೆತ್ತಿ ನೋಡಿದೆ , ಘಂಟೆ ಐದೂವರೆ ಆಗುತ್ತಾ ಬಂದಿತ್ತು ; ಮನೆಗೆ ಹೊರಡುವ ಸಮಯ ಅದು. ಆಗಲೆ ಸಹೋದ್ಯೊಗಿಗಳು ಒಬ್ಬೊಬ್ಬರಾಗಿ ಹೊರಡಲು ಅನುವಾಗಿತ್ತಿದ್ದರು, ಆದರೆ ನಾನು ಮಾತ್ರ ಬಾಸ್ ಹೇಳಿದ್ದ ರಿಪೋರ್ಟ್ ರೆಡಿ ಮಾಡಿಯೇ ಹೋಗಬೇಕಾಗಿತ್ತು. ಸರಿ ಇನ್ನೇನು ಮಾಡೋಕಾಗುತ್ತೆ , ಕೆಲಸ ಮಾಡುತ್ತಾ ಕುಳಿತೆ. ಆರು ಘಂಟೆಯ ನಂತರ ಇಡೀ ಆಫೀಸ್ ಖಾಲಿ ಖಾಲಿ . ಆಚೆಕಡೆ ಸೆಕ್ಯೂರಿಟಿ ಬಿಟ್ಟರೆ ಬೇರೆ ಯಾರು ಇರಲಿಲ್ಲ . ಕಂಪ್ಯೂಟರಿನ ಕೀ ಬೋರ್ಡಿನ ಸದ್ದು ಇಡೀ ಆಫೀಸಿನ ಮೂಲೆ ಮೂಲೆಗು ಕೇಳಿಸುವಷ್ಟು ಜೋರಾಗಿತ್ತು , ಅಷ್ಟು ವೇಗವಾಗಿ ಕೆಲಸ ಮಾಡುತ್ತಿದ್ದೆ . ಅಂತೂ ಘಂಟೆ ಎಂಟಾಗುವಷ್ಟರಲ್ಲಿ ಕೆಲಸ ಮುಗಿದಿತ್ತು . ಇನ್ನೇನು ರಿಪೋರ್ಟ್ ಕಳಿಸಿ, ಸಿಸ್ಟಮ್ ಆಫ್ ಮಾಡುವುದರಲ್ಲಿದ್ದೆ , ಅದೆಲ್ಲಿತ್ತೋ ಗೊತ್ತಿಲ್ಲ ಮಳೆ ! ಬಂತು ಬಂತು ಬಂತು, ಕುಂಭದ್ರೋಣ ಮಳೆಯಂತೆ ಬಂತು. ಮೊದಲೇ ಇದು ಮುಂಬೈನ ಮಳೆ, ಬಂದರೆ ದಿನಗಟ್ಟಲೆ ಬಂದು ಅವಾಂತರ ಸೃಷ್ಟಿಸದೆ ಹೋಗುವುದಿಲ್ಲ . ಇದೆಲ್ಲಿಂದ ವಕ್ಕರಿಸಿತು ಈ ಮಳೆಯೆಂದು ಶಪಿಸುತ್ತಾ ಮಳೆ ನಿಲ್ಲುವವರೆಗು ಕಾಯೋದು ಬಿಟ್ಟರೆ ನನಗೆ ಬೇರೆ ಗತ್ಯಂತರವಿರಲಿಲ್ಲ. ಎಂಟೂ ಮುಕ್ಕಾಲಾಗಿತ್ತು , ಅಲ್ಲಿವರೆಗೂ ಜೋರಾಗಿ ನಿಲ್ಲದೇ ಬರುತ್ತಿದ್ದ ಮಳೆ ಇದ್ದಕ್ಕಿದ್ದಂತೆ ನಿಂತು ಹೋಯ್ತು . ಸದ್ಯ ಬಚಾವಾದೆ ಎಂದುಕೊಂಡು ಆಫೀಸಿನಿಂದ ಹೊರಬಿದ್ದೆ .
ಬಸ್ ನಿಲ್ದಾಣಕ್ಕೆ ಬಂದು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ , ನಾನು ದಿನಾ ಹೋಗುತ್ತಿದ್ದ ಟ್ರೈನ್ ಅದಾಗಲೆ ಹೊರಟುಹೋಗಿತ್ತು . ಎಷ್ಟೊತ್ತಾದರು ಒಂದು ಬಸ್ಸು ಬರಲಿಲ್ಲ , ಬಿದ್ದ ಮಳೆಗೆ ಆಟೋ ಕೂಡ ಬರುವ ಸುಳಿವಿರಲಿಲ್ಲ. ಸುಮ್ಮನೆ ಹಾಗೆ ಕಾಯುತ್ತಾ ನಿಂತಿದ್ದವಳು ಎದುರುಗಡೆಯಿದ್ದ ರೈಲ್ವೇ ಟ್ರ್ಯಾಕಿನ ಪಕ್ಕದಲ್ಲಿದ್ದ ಗುಡಿಸಿಲ ಕಡೆ ಕಣ್ಣಾಡಿಸಿದೆ. ಅಲ್ಲಿ ನಿರಾಶ್ರಿತರು, ನಿರ್ಗತಿಕರು, ಮುಖ್ಯವಾಹಿನಿಯಿಂದ ದೂರ ಉಳಿದವರು ಹೀಗೆ ನಾನ ನಮೂನೆಯ ವರ್ಗದವರು ಇರುವುದು ಕಂಡು ಬಂತು. ಅತ್ತಕಡೆಯಿಂದ ನನ್ನ ನೋಟ ಗುಡಿಸಲಿಗೆ ಅಂಟುಕೊಂಡಂತಿದ್ದ ಪಕ್ಕದಲ್ಲಿದ್ದ ಬ್ರಿಡ್ಜ್ ಮೇಲೆ ಬಿತ್ತು , ಆ ಬ್ರಿಡ್ಜಿನ ಕೆಳಗಡೆಯೇ ಗುಡಿಸಲುಗಳಿದ್ದಿದು . ಇನ್ನೇನು ಅಲ್ಲಿಂದ ನೋಟ ಬೇರೆ ಕಡೆ ತಿರುಗುವುದರಲ್ಲಿತ್ತು , ಛಕ್ಕನೆ ಅಲ್ಲೇ ನಿಂತಂತಾಗಿ ನೋಡಿದೆ : ಬ್ರಿಡ್ಜಿನ ಕಂಬಕ್ಕೆ ಗುಡಿಸಲಿನ ಕೊನೇ ಸಾಲಿನ ಪಕ್ಕದಲ್ಲಿ ಒಂದು ಕಲ್ಲಿಗೊರಗಿ ಒಬ್ಬ ಚಿಕ್ಕ ಹುಡುಗ ಕೊಡೆ ಹಿಡಿದುಕೊಂಡು ನಿಂತಿದ್ದ . ಆ ಕೊಡೆ ಅವನಿಗಿಂತಲೂ ದೊಡ್ಡದಾಗಿತ್ತು , ಸುಮಾರು ಐದಾರು ಜನ ಒಟ್ಟಿಗೇ ನಿಲ್ಲಬಹುದಿತ್ತು. ಬೇಡವೆಂದುಕೊಂಡರು ತಾನಾಗೇ ನನ್ನ ಕಾಲುಗಳು ಹೆಜ್ಜೆ ಹಾಕತೊಡಗಿತು.
ಹುಡುಗ ಸುಮಾರು ಎಂಟರಿಂದ ಹತ್ತು ವರ್ಷದವನಿರಬಹುದು. ಅವನು ಧರಿಸಿದ್ದ ಬಟ್ಟೆ ಅಲ್ಲಲ್ಲಿ ಹರಿಸಿತ್ತು , ಕಾಲಲ್ಲಿ ಚಪ್ಪಲಿಯಿರಲಿಲ್ಲ . ನಾನು ಅವನ ಬಳಿ ಹೋಗುವುದನ್ನು ಗಮನಿಸಿ , " ಅಕ್ಕಾ ಬನ್ನಿ " ಎಂದು ನನ್ನತ್ತ ಕೊಡೆ ಹಿಡಿದ. ಕುತೂಹಲಕ್ಕೆ ಅವನ ಬಗ್ಗೆ ವಿಚಾರಿಸಿದೆ. ಅವನು ನಗುನಗುತ್ತಲೇ ತನ್ನ ಬಗ್ಗೆ ಹೇಳತೊಡಗಿದ.
" ಅಕ್ಕ ನನ್ನ ಹೆಸರು ಮೋಟು ಅಂತ. ನನಗೆ ಅಪ್ಪ ಇಲ್ಲ , ಅಮ್ಮ ದಿನಗೂಲಿ ಕೆಲಸಕ್ಕೆ ಹೋಗುತ್ತಾಳೆ ; ಕನ್ಸ್ಟ್ರಕ್ಶನ್ ಕಂಪನಿಯಲ್ಲಿ. ಅಲ್ಲಿ ಮಳೆ ಬಂದಾಗ ಕೆಲಸದವರಿಗೆಂದು ಒಂದೊಂದು ದೊಡ್ಡ ದೊಡ್ಡ ಕೊಡೆ ಕೊಡುತ್ತಾರೆ , ಅದೇ ಕೊಡೆ ಈಗ ನನ್ನ ಬಳಿಯಿರುವುದು. ಹೀಗೆ ಪ್ರತಿ ಬಾರಿ ಮಳೆ ಬಂದಾಗ ನಾನಿಲ್ಲಿ ಅಮ್ಮನ ಮನವೊಲಿಸಿ ಕೊಡೆ ತೆಗೆದುಕೊಂಡು ಇಲ್ಲಿ ಬಂದು ನಿಲ್ಲುತ್ತೇನೆ . ಯಾಕೆಂದರೆ ಮಳೆ ಯಾವಾಗ ಬರುವುದೋ ಗೊತ್ತಿಲ್ಲ , ಹೀಗಾಗಿ ಎಲ್ಲರು ಕೊಡೆ ತಂದಿರುವುದಿಲ್ಲ. ನಾನಾಗ ಅವರ ಬಳಿ ಹೋಗಿ , ಅವರೆಲ್ಲಿವರೆಗು ಬಯಸುತಾರೋ ಅಲ್ಲಿವರೆಗು ಕೊಡೆ ಹಿಡಿದುಕೊಂಡು ಹೋಗಿ ಬಿಟ್ಟು ಬರುತ್ತೇನೆ. ಆಗ ಅವರೆಷ್ಟು ಕೊಡುತ್ತಾರೋ ಅಷ್ಟೇ ಹಣವನ್ನು ತೆಗೆದುಕೊಳ್ಳುವೆ . ಕೊಟ್ಟರೆ ಉಂಟು , ಇಲ್ಲದಿದ್ದರೆ ಇಲ್ಲ . ನಾನಾಗಿಯೇ ಯಾರನ್ನು ಇಷ್ಟೇ ಕೊಡಿ ಅಂತ ಕೇಳಿಲ್ಲ , ಕೇಳುವುದೂ ಇಲ್ಲ . ಅವರು ಖುಷಿಯಾಗಿ ಹೋದರೆ ಸಾಕು "
ಅವನು ಮಾತು ಮುಗಿಸಿದ , ಆದರೆ ಆ ನಗು ಮಾತ್ರ ಹಾಗೆ ಇತ್ತು.
ಅವನು ಹೇಳಿದ್ದು ಕೇಳಿ ನನ್ನ ಹೃದಯ ತುಂಬಿ ಬಂದು ಮನಸ್ಸು ಭಾರವಾಗಿ ಕಣ್ಣಾಲಿಗಳು ಬಯಸದೇ ಬಂದಿತ್ತು . ಈಗಿನ ಕಾಲದಲ್ಲಿ ಇನ್ನೊಬ್ಬರ ಹಿತ ಬಯಸುತ್ತಾ , ಏನನ್ನು ಅಪೇಕ್ಷೆಯಿಲ್ಲದೆ ಬದುಕುವವರಿದ್ದಾರಾ? ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ? ಅವನನ್ನು ಅಕ್ಕರೆಯಿಂದ ಬಾಚಿ ತಬ್ಬಿಕೊಂಡೆ , ಹುಡುಗ ಮುಗುಳುನಗುತ್ತಿದ್ದ . ಅವನ ಆ ನಗು, ಅಮಾಯಕತೆ , ನಿಷ್ಕಲ್ಮಷ ಮನಸ್ಸು ನನ್ನಲ್ಲಿ ಅಚ್ಚಳಿಯದ ಗುರುತು ಮೂಡುವಂತೆ ಮಾಡುತ್ತಿದ್ದವು . ಅವನಿಗೆ ಪ್ರೀತಿಯಿಂದ ನನ್ನಲ್ಲಿದ್ದ ಅಲ್ಪ ಮೊತ್ತ ಕೊಡಲು ಆತ , " ಅಕ್ಕಾ ಬೇಡ ! ನಾನು ಕೊಡೆ ಹಿಡಿದು ಬಿಟ್ಟು ಬಂದರೆ ಮಾತ್ರ ಕೊಟ್ಟಷ್ಟು ತೆಗೆದುಕೊಳ್ಳುತ್ತೀನಿ, ಸುಮ್ಮಸುಮ್ಮನೆ ಅಲ್ಲ " ಅಂದ. ಅಷ್ಟೊತ್ತು ಮಳೆ ನಿಲ್ಲಲ್ಲಿ ಎಂದುಕೊಂಡಿದ್ದವಳಿಗೆ ಮಳೆ ಮತ್ತೆ ಬರಬಾರದೇಕೆ ಅನಿಸತೊಡಗಿತು. ಎಷ್ಟು ಬಲವಂತ ಮಾಡಿದರೂ ಅವನು ಕೊನೆಗೂ ನನ್ನಿಂದ ಬಿಡಿಗಾಸೂ ಮುಟ್ಟಲಿಲ್ಲ .
ಅವನನ್ನು ಮತ್ತೊಮ್ಮೆ ಅಕ್ಕರೆಯ ಕಂಗಳಲ್ಲಿ ನೋಡುತ್ತಾ ಹಣೆಗೆ ಪ್ರೀತಿಯಿಂದ ಒಂದು ಮುತ್ತನಿಟ್ಟೆ. " ಅಕ್ಕಾ ! ನನಗೆ ಬರಬೇಕಾದ ಸಂಭಾವನೆ ಬಂದಾಯ್ತು " ಅಂದ .
ಇದೇ ಅಲ್ಲವೆ ಮನುಷ್ಯನು ಮನುಷ್ಯನಿಗೆ ತೋರಬೇಕಾದ ಮಾನವತೆ ?
ಏನಾದರು ಆಗು ಮೊದಲು ಮಾನವನಾಗು ಎಂಬ ಕವಿವಾಣಿ ನೆನಪಾಗಿ ಒಲ್ಲದ ಮನಸ್ಸಿನಿಂದ ಆ ದಿನ ಮನೆ ಸೇರಿದೆ.
ವಿ.ಸೂ. ಇದು ನಮ್ಮ ನಡುವೆ ನಡೆದ ಸತ್ಯಕಥೆ : ಪಕ್ಕದ ಮುಂಬೈನಲ್ಲಿ . ಯಾರೋ ತಮ್ಮ ಈ ಅನುಭವ ಬಹಳ ಯಾಂತ್ರಿಕವಾಗಿ ಹಂಚಿಕೊಂಡಿದ್ದರು . ನನ್ನಿಂದ ಇದನ್ನು ಚಿಕ್ಕ ಕಥೆ ರೂಪ ಕೊಟ್ಟು ಬರೆಯಲಾಗದೆ ಇರಲಿಲ್ಲ .
ಮೋಹನ್ ಕುಮಾರ್ ಡಿ ಎನ್.
No comments:
Post a Comment