ಒಡಲಾಳ ..
ಅದೊಂದು ಸುವಿಶಾಲ ರೈಲ್ವೇ ನಿಲ್ದಾಣ. ಅಲ್ಲಿ ನೂರಾರು ರೈಲು ಬರುತ್ತವೆ ಹೊಗೊತ್ತವೆ. ಇಳಿಯಬೇಕಾದವರು ಇಳಿಯುತ್ತಾರೆ, ಹತ್ತಬೇಕಾದವರು ಹತ್ತುತ್ತಾರೆ. ಹತ್ತುವವರಿಗೂ ಇಳಿಯುವವರಿಗೂ ಲೆಕ್ಕ ಇಟ್ಟವರಿಲ್ಲ. ಒಬ್ಬರಿಗೊಬ್ಬರು ಪರಿಚಯವಿಲ್ಲ, ಇರಬೇಕಾದ ಅವಶ್ಯಕತೆ ಏನಿಲ್ಲ. ಪರಿಚಯದವರು ಸಿಕ್ಕಾರೆ ಮಾತಾಡಿಸುವಂತೆ ಯಾರನ್ನು ಮಾತಾಡಿಸುವ ಪ್ರಮೇಯವಿಲ್ಲ. ಎಲ್ಲೆಲ್ಲಿಂದಲೊ ಜನ ಬರುತ್ತಾರೆ ಹೋಗುತ್ತಾರೆ, ನಿಲ್ದಾಣ ಯಾರನ್ನು ಬರಬೇಡ ಅನ್ನುವುದಿಲ್ಲ, ಬಂದರೆ ಹೋಗೆನ್ನುವುದಿಲ್ಲ. ಹಾಗೆ ತಟಸ್ಥವಾಗಿ ಯಾರು ಬಂದರೂ ಬರಬೇಡ ಎನ್ನುವ ಜಾಗದಲ್ಲಿ ಇದೂ ಒಂದು. ರಾತ್ರಿಯಾದರೆ ಇಲ್ಲಿ ಇನ್ನೊಂದು ಲೋಕ ತೆರೆದುಕೊಳ್ಳುತ್ತದೆ. ವಿಟ ಪುರುಷರು ಸ್ತ್ರೀಯರು ಇಲ್ಲಿ ಹಬ್ಬಿರುವ ವಿಶಾಲವಾದ ಕತ್ತಲ ಸಾಮ್ರ್ಯಾಜ್ಯದೊಳಗೆ ಜಮಾವಣೆಯಾಗುತ್ತರೆ. ಕತ್ತಲಸಾಮ್ರಾಜ್ಯಿಪತಿಗಳು!! ಅದರ ಇನ್ನೊಂದು ಮಗ್ಗುಲಲ್ಲಿ ಕುಂಟರು, ಕುರುಡರು, ಆಶ್ರಯವಿಲ್ಲದೆ ಬರಗೆಟ್ಟವರು, ಸಮಾಜ ವಿಮುಖಿಗಳು, ಮಂಗಳಮುಖಿಯರು, ನೈಟ್ ಬೀಟ್ ಹೊಡೆಯೋ ಪೋಲೀಸ್, ಕಳ್ಳರು ಖದೀಮರು, ಭಿಕ್ಷುಕರು, ನಿರುದ್ಯೋಗಿಗಳು, ಮಕ್ಕಳಿಂದ ಹೊರದೂಡಲ್ಪಟ್ಟ ತಂದೆತಾಯಿಯರು.... ಪಟ್ಟಿ ಸಾಗುತ್ತಾ ಹೋಗುತ್ತದೆ. ಇವರೆಲ್ಲ ಸೇರಿದರೆ ಅದೇ ಒಂದು ಲೋಕ. ನಮ್ಮ ನಾಗರೀಕ ಸಮಾಜಕ್ಕಿಂತ ವಿಭಿನ್ನವೇನಲ್ಲ ಅವರ ಈ ಜಗತ್ತು. ಎಲ್ಲಾರು ಮಾಡುವುದು ಹೊಟ್ಟೆಗಾಗಿ. ಎಲ್ಲರನ್ನು ನಿಯಂತ್ರಿಸೋರು ಯಾರು? ಅವರವರ ಸಮಯ ಸಂಧರ್ಭ ಅಷ್ಟೆ. ಇದನ್ನೆಲ್ಲ ಹೇಳುತ್ತಿರುವ ನಾನು ಯಾರು ಎಂದು ಯೋಚಿಸಿದಿರಾ?
ಆಮೇಲೆ ಹೇಳುತ್ತೇನೆ.
ಮೊನ್ನೆ ದಿನ ಹೀಗಾಯ್ತು :
ವಯಸ್ಸಾದ ಹಿರಿಯ ದಂಪತಿಗಳು ಒಂದು ಫ್ಲಾಟ್ಪಾರಂನಲ್ಲಿ ಬಂದು ಕುಳಿತರು. ಕೈಯಲ್ಲೊಂದು ಚೀಲವಿತ್ತಷ್ಟೆ. ಅವರು ಕುಳಿತ ನಂತರ ಅದೆಷ್ಟೋ ರೈಲುಗಳು ಬಂದವು, ಹೋದವು. ಇವರು ಯಾವುದಕ್ಕೂ ಹತ್ತಲಿಲ್ಲ. ಸುಮ್ಮನೇ ಕುಳಿತಿದ್ದರು. ಮೊದಮೊದಲು ಇವರನ್ನು ನೋಡಿದವರು, ಯಾರೊ ಯಾತ್ರಿಕರಿರಬೇಕೆಂದುಕೊಂಡಿದ್ದರು. ಬೆಳಿಗ್ಗೆ ಬಂದ ಇವರು ರಾತ್ರಿಹೊತ್ತಿನವರೆಗೂ ಅಲ್ಲೇ ಕುಳಿತಿದ್ದರು. ಇವರನ್ನೇ ಗಮನಿಸುತ್ತಿದ್ದ ಒಬ್ಬ ಟೀ ಮಾರೊ ಹುಡುಗ ಕಡೆಗೆ ಕುತೂಹಲ ತಡೆಯಲಾಗದೆ ಅವರ ಬಳಿ ಹೋಗಿ, " ಅಜ್ಜೀ ನೀವೆಲ್ಲಿಗೆ ಹೋಗಬೇಕೆಂದು " ಕೇಳಿದನು. ಅಜ್ಜಿ ಉತ್ತರಿಸಲಿಲ್ಲ. ಅಜ್ಜನ ಕಡೆ ತಿರುಗಿ ಮತ್ತದೇ ಪ್ರಶ್ನೆಯನ್ನು ಕೇಳಿದನು. ಆಗ ಅಜ್ಜ ನಿಧಾನವಾಗಿ ತನ್ನ ಜೇಬಿಗೆ ಕೈ ಹಾಕಿ ಕಾಗದದ ತುಂಡೊಂದನ್ನು ತೆಗೆದು ಟೀ ಮಾರೊ ಹುಡುಗನ ಕೈಗಿತ್ತನು. ಅದನ್ನು ತೆಗೆದು ಓದಿದ ಹುಡುಗನ ಕಣ್ಣಲ್ಲಿ ನೀರು ಬೇಡವಂದರೂ ಬರತೊಡಗಿತು. ಆ ಚೀಟಿಯಲ್ಲಿ ಹೀಗೆ ಬರೆದಿತ್ತು :
" ಇವರು ನಮ್ಮ ತಂದೆತಾಯಿ. ಇವರನ್ನು ಯಾರಾದರು ನೋಡಿದರೆ ದಯಮಾಡಿ ಅನಾಥಾಶ್ರಮಕ್ಕೆ ಸೇರಿಸಿಬಿಡಿ "
ಓದಿ ಕಣ್ಣಲ್ಲಿ ನೀರು ತುಂಬಿಕೊಂಡ ಟೀ ಮಾರೊ ಹುಡುಗ "ಇದರಲ್ಲೇನು ಬರೆದಿದೆ ಗೊತ್ತಾ" ಎಂದು ಕೇಳುತ್ತಾನೆ. ಆಗ ಅಜ್ಜ "ನೋಡಪ್ಪ ನನ್ನ ದೊಡ್ಡ ಮಗನ ಮನೆಯಲ್ಲಿ ನಾನಿದ್ದೆ, ಚಿಕ್ಕ ಮಗನ ಮನೆಯಲ್ಲಿ ಇವಳಿದ್ದಳು. ಚಿಕ್ಕವನು ಬಂದು ನನ್ನನ್ನು ಹಾಗು ದೊಡ್ಡವನು ಬಂದು ಇವಳನ್ನ ತಮ್ಮ ತಮ್ಮ ಮನೆಗೆ ಕರಕೊಂಡು ಹೋಗೋದಾಗಿ ಹೇಳಿ ರೈಲ್ವೇ ಸ್ಟೇಷನ್ನಿಗೆ ಬರುವಂತೆ ನನಗೆ ಚಿಕ್ಕವ, ಇವಳಿಗೆ ದೊಡ್ಡವ ಹೇಳಿದ್ದರು. ಇಲ್ಲಿ ಬಂದು ನೋಡಿದರೆ ಯಾರು ಬಂದಿಲ್ಲ ನಮ್ಮನ್ನ ಕರೆದೊಯ್ಯಲು" ಅಂತ ಅಜ್ಜ ಮಾತು ಮುಗಿಸಿದ.
ಹುಡುಗನಿಗೆ ಅವರ ಕಥೆ ಕೇಳಿ ಏನುತ್ತರಿಸಬೇಕೋ ತಿಳಿಯಲಿಲ್ಲ. ಒಂದು ನಿರ್ಧಾರಕ್ಕೆ ಬಂದವನೆ ಅವರನ್ನ ತನ್ನ ಜೊತೆಯಲ್ಲಿ ಕರೆದುಕೊಂಡು ಹೊರಟುಹೋದನು, ಅನಾಥನಾಗಿರುವ ತನ್ನ ಪಾಲಿಗೆ ದೇವರು ಕೊಟ್ಟ ತಂದೆತಾಯಿಯೆಂದು ತಿಳಿದು.
ಇದೇ ನಡೆದದ್ದು ಮೊನ್ನೆ.
ಈಗ ಆ ಅಜ್ಜಅಜ್ಜಿ, ಟೀ ಮಾರೋ ಹುಡುಗ ಎಲ್ಲಿದ್ದಾರೋ ಗೊತ್ತಿಲ್ಲ. ಹುಡುಗ ಮುಂಚೆ ಬಂದಂತೆ ಟೀ ಮಾರಲು ಇಲ್ಲಿಗೆ ಬರುತ್ತಿಲ್ಲ. ಅವರೆಲ್ಲೇ ಇದ್ದರು ಸುಖವಾಗಿರಲಿ, ಅಷ್ಟೇ ನನ್ನ ಆಸೆ.
ಓಹ್! ನಾನ್ಯಾರೆಂದು ನಿಮಗೆ ಹೇಳುತ್ತೇನೆ ಎಂದಿದ್ದನಲ್ಲವೇ?
ಅದು ನಾನೇ ಕಣ್ರೀ, ನಿಮ್ಮಂತ ನೂರಾರು ಸಾವಿರಾರು ಲಕ್ಷಾಂತರ ಪ್ರಯಾಣಿಕನನ್ನು ಹೊತ್ತು ಹತ್ತಾರು ವರ್ಷದಿಂದ ಬಂದಿರುವ ನಿಲ್ದಾಣ...!!! ನಿಮ್ಮ ಪ್ರೀತಿಯ ನಿಲ್ದಾಣ!!!
ನನ್ನ ಒಡಲೊಳಗೆ ಇಂಥ ಕಥೆಗಳು ಅದಿನ್ನೆಷ್ಟಿವೆಯೋ!!!
.............................. ....
ಮೋಹನ್ ಕುಮಾರ್ ಡಿ ಎನ್
No comments:
Post a Comment